ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಲಕ್ಷ್ಮಿ ಕಂಡಂತೆ ಜರ್ಮನಿ ೪: ಮಂಜಿನಮನೆಗೆ ಎಷ್ಟೊಂದು ದಾರಿ

ಜಯಲಕ್ಷ್ಮಿ ಶೇಖರ್

(ಇಲ್ಲಿಯವರೆಗೆ)

ಮಂಜಿನಮನೆಗೆ ಎಷ್ಟೊಂದು ದಾರಿ
ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯ ತನಕ ಲ್ಯೂಸನರ್ ಮತ್ತು ಐಂಗೆಲ್ ಬರ್ಗ್ ನಡುವೆ, ಘಂಟೆಗೊಂದರಂತೆ ರೈಲುಗಳು ಓಡಾಡುತ್ತವೆ.ನಮ್ಮ ರೈಲು ಸುರಂಗಮಾರ್ಗಗಳನ್ನು ಹಾದು ಬೆಟ್ಟವೇರತೊಡಗಿತು. ದೂರದಲ್ಲಿ ಲ್ಯೂಸನರ್ ಸರೋವರ,ಹಿಂದಿನ ದಿನ ನಾವು ಸ್ಟಿಮರ್ ನಲ್ಲಿ ಕುಳಿತು ಕಂಡಿದ್ದ ಊರುಗಳು ಕಾಣಿಸುತ್ತಿದ್ದವು.ರೈಲಿನಲ್ಲಿ ಬೆಟ್ಟವೇರುವುದನ್ನು ನೋಡಲು ನನ್ನ ಕಣ್ಣುಗಳು ಕಿಟಿಕಿಗೆ ಒತ್ತಿಕೊಂಡಿದ್ದವು, ಹೀಟರ್ ಇದ್ದ ಕಾರಣ ಬಹಳ ಹಿತವಾಗಿತ್ತು.ಕಣ್ಣು ಕೆಳಗೆ ನೋಡುತ್ತಿತ್ತು,ಮನಸ್ಸು ಭಾವವಿಮಾನದಲ್ಲಿ ಹಾರುತ್ತಿತ್ತು, ಕೆಳಗೆ ಕಾಣಿಸುತ್ತಿದ್ದ ಘಾಟಿ ನಮ್ಮ ಸಂಪಾಜೆ ಮಡಿಕೇರಿ ಘಾಟಿಯನ್ನು ನೆನಪಿಸುತ್ತಿತ್ತು. ಮೇಲೇರುತ್ತಿದ್ದಂತೆಯೆ ರೋಚಕದೃಶ್ಯಕ್ಕೆ ಮೈ ಜುಮ್ಮೆಂದಿತು.ಆಲ್ಪ್ಸ್ ಪರ್ವತಶ್ರೇಣಿಗಳ ಬುಡದಲ್ಲಿರುವ ಐಂಗೆಲ್ಬಗರ್ ಗೆ ಲ್ಯೂಸನರ್ನಿಂದ 45 ನಿಮಿಷಗಳ ಪಯಣ. ಐಂಗೆಲ್ ಬಗರ್ ರೈಲ್ವೆಸ್ಟೇಶನ್ನಿನಲ್ಲಿಳಿದು ನೋಡಿದರೆ ಸ್ಟೇಶನ್ ಖಾಲಿ ಖಾಲಿ. ಕೌಂಟರ್ನೊಳಗಿದ್ದ ಓರ್ವ ವ್ಯಕ್ತಿಯನ್ನು ಮತ್ತು ಆಗಷ್ಟೇ ರೈಲಿನಿಂದಿಳಿದ ನಾವು ಕೆಲ ಪ್ರವಾಸಿಗರನ್ನು ಬಿಟ್ಟರೆ ಇನ್ಯಾರೂ ಇರಲಿಲ್ಲ. ಆ ವ್ಯಕ್ತಿಯಿಂದಲೇ ಕೇಬಲ್ ಕಾರಿನಲ್ಲಿ ಮೇಲೇರಲು ಟಿಕೆಟ್ ಪಡೆದೆವು. ಮಳೆ ಮತ್ತು ವಿಪರೀತ ಚಳಿಯ ಕಾರಣದಿಂದಾ (70 ವರ್ಷಗಳಲ್ಲಿ ಅಸಹಜವಾಗಿ ಇದು ಅತ್ಯಂತ ಚಳಿಯಿರುವ ಬೇಸಿಗೆಯಂತೆ) ಮಂಜಿನ ಗುಹೆಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆಲ್ಪ್ಸ್ ಪರ್ವತಶ್ರೇಣಿಗಳನ್ನು ನೋಡಿದೆ, ಬೆಟ್ಟ ಹತ್ತಬೇಕು ಎಂದು ಮನುಷ್ಯನಿಗೆ ಅನ್ನಿಸುವುದೇಕೆ? ?ಅದು ಅಲ್ಲಿರುವುದಕ್ಕೆ? ಎಂದು ದೊಡ್ಡಪ್ಪ ತೆನ್ಸಿಂಗರನ್ನು ಉದ್ಧರಿಸುತ್ತಿದ್ದದ್ದು ನೆನಪಿಗೆ ಬಂತು. ಇವುಗಳೆತ್ತರಕ್ಕೆ ಏರಲು ಸಾಧ್ಯವೆ……..ಹೀಗೆ ಯೋಚನೆಗಳು, ನಮ್ಮ ಹಿಮಾಲಯವನ್ನೇ ನೋಡಿರದ ನಾನು ಇಷ್ಟು ದೂರದಲ್ಲಿರುವ ಆಲ್ಪ್ಸ್ ನ್ನು ನೋಡುತ್ತಿದ್ದೇನೆ,ಆದರೆ ಆಲ್ಪ್ಸ್ ಹಿಮಾಲಯಕ್ಕೆ ಸಾಟಿಯೇ? ಹಿಮಾಲಯ ಎಂಬ ಹೆಸರು ಕೇಳಿದರೆ ಮೂಡುವ ಪೂಜ್ಯ, ಪುಳಕಿತಭಾವ ಇಲ್ಲಿ ಯಾಕೆ ಮೂಡುತ್ತಿಲ್ಲ? ಸೌಂದರ್ಯದ ಪರದೆಯ ಆಚೆ ಹಬ್ಬಿರುವ ಸತ್ಯ ಭಾವಗೋಚರವಾಗ್ತಾ ಇಲ್ವಲ್ಲ ಅನಿಸಿತು.
ಯೋಚನೆಗಳಲ್ಲಿ ಕಳೆದುಹೋಗುವಷ್ಟು ಸಮಯವಿರಲಿಲ್ಲ. ಟಿಟ್ಲಿಸ್ ಪರ್ವತದ ಬುಡಕ್ಕೆ ನಮ್ಮನ್ನು ಬಸ್ ನಲ್ಲಿ ಕರೆದೊಯ್ದರು. ಕೇಬಲ್ ಕಾರಿನಲ್ಲಿ 3 ಹಂತಗಳಲ್ಲಿ ಪಯಣಿಸಿದೆವು.ಮೊದಲು ಚಿಕ್ಕದಾಗಿ 4 ಜನರು ಮಾತ್ರವೇ ಕೂರಬಲ್ಲಂಥ ಕೇಬಲ್ ಕಾರು,ಇದರಲ್ಲಿ ಗೆರ್ ಶಿನ್ ಆಲ್ಪ್ಸ್ ತನಕ(1,262 ಮೀ),ನಂತರ 360* ಸುತ್ತುತ್ತಿದ್ದ ದೊಡ್ಡ ಕೇಬಲ್ ಕಾರಿನಲ್ಲಿ ಚೈನಾ ದೇಶದ ಪ್ರವಾಸಿಗರೊಂದಿಗೆ ಟ್ರಬ್ ಸೀ ತನಕ್(1,796 ಕಿ.ಮೀ),ಅಲ್ಲಿಂದ ಟಿಟ್ಲಿಸ್ ತನಕ(3,020 ಮೀಟರ್)ಪ0ುಣಿಸಿದೆವು.ಮೊದಲ ಹಂತದ ಪಯಣದಲ್ಲಿ ಕೆಳಗೆ ನೋಡುವಾಗ ರುದ್ರಭೀಕರ ಸೌಂದರ್ಯಕ್ಕೆ ಮಾರುಹೋದರೂ ಜೀವಭಯದಿಂದ ತತ್ತರಿಸುವಂತಾಯಿತು. ಕೆಳಗೆ ನೋಡ್ಬೇಡ ಎಂದು ಪತಿ ಹೇಳ್ತಾ ಇದ್ದರೂ ನೋಡದೇ ಇರಲಾಗಲಿಲ್ಲ. ಮಂಜುಗೆಡ್ಡೆಯಿಂದ ಮೈ ಮುಚ್ಚಿಕೊಂಡ ಕ್ರಿಸ್ಮಸ್ ಮರಗಳು,ಎತ್ತನೋಡಿದರೂ ಮಂಜುಗೆಡ್ಡೆಗಳ ಸಾಮ್ರಾಜ್ಯ, ಸೂರ್ಯಕಿರಣಗಳು ತಾಗಿದರೂ ಜಗ್ಗಲಾರೆವೆಂಬಂತೆ ಘನೀಕರಿಸಿ ನಿಂತ ಮಂಜಿನ ಸಾಮ್ರಾಜ್ಯದಲ್ಲಿ ಜೀವ-ದೇಹಗಳೆರಡೂ ಗಡಗಡ ನಡುಗಿದವು. ವಿಮಾನದಲ್ಲಿ ಪ್ರಯಾಣಿಸುವಾಗ ಕೆಳಗೆ ಕಾಣದಂತೆ ಮಾಡಿದ್ದಾರಲ್ಲ ಸಧ್ಯ ಅಂತ ಹೇಳಿಕೊಂಡೆ.ನಂತರದ 2 ಹಂತಗಳ ಪಯಣದಲ್ಲಿ ಹೊರಗೆಲ್ಲ ಮಂಜು ಕವಿದಿರುವುದು ಬಿಟ್ಟರೆ ಬೇರೇನೂ ಕಾಣುತ್ತಿರಲಿಲ್ಲವಾದ ಕಾರಣ ಭಯದ ನಡುಕ ನಿಂತಿತು.ಮೌಂಟ್ ಟಿಟ್ಲಿಸ್ನಲ್ಲಿಳಿದು ಒಂದು ಕಟ್ಟಡದ ಟೆರೇಸಿನಲ್ಲಿ ಬಂದು ನಿಂತೆವು. ಅಲ್ಲಿ ಚಳಿಯಿಂದ ಹಲ್ಲುಗಳು ಮೃದಂಗದ ಉರುಟುಗಳಂತೆ ನುಡಿಯುತ್ತಿದ್ದವು, ಮಾತು ಹೊರಡುವುದು ಕಷ್ಟವಿತ್ತು. ಬೆಂಗಳೂರಿನ ಸೆಕೆಯನ್ನು ಬಯ್ಯುತ್ತಿದ್ದೆನಲ್ಲ, ಅದೇ ಸ್ವರ್ಗ ಎನಿಸಿತು. ಸು.ರಂ.ಎಕ್ಕುಂಡಿಯವರ ಇಕ್ಕಳ ಪದ್ಯ ನೆನಪಾಯಿತು. ಅಲ್ಲಿಗೆ ಬಂದಿದ್ದ ಪ್ರವಾಸಿಗರಲ್ಲಿ ಅರ್ಧದಷ್ಟು ಮಂದಿ ಭಾರತೀಯರಾದರೆ ಉಳಿದರ್ಧ ಚೈನೀಯರು (ಬೀಳ್ಕೊಳ್ಳುವಾಗ ಇಂಡೋ ಚೀನಾ  ಭಾಯಿ ಭಾಯಿ  ಎಂದುಕೊಂಡೆವು) ನಮ್ಮ ಸಿನಿಮಾ ನಟರಾದ ಶಾರೂಕ್ ಖಾನ್ ಕಾಜೋಲರ ಪ್ರತಿಕೃತಿಗಳನ್ನು ನಿಲ್ಲಿಸಿದ್ದರು ಅಲ್ಲಿ. ಮಂಜುಗಡ್ಡೆಯ ತುಂಡುಗಳನ್ನು ಸ್ಟೈಲ್ ಆಗಿ ಹಿಡಿದು ಫೋಟೊ ಕ್ಕೆ ಪೋಸ್ ಕೊಟ್ಟೆವು, ನಂತರ ಕೈ ಕಾಲುಗಳಿಗೆ ಆವರಿಸಿದ ಬೇನೆಯಿಂದ ಬೇಕಿತ್ತಾ ಐಸ್ ಹಿಡಿಯುವ ಪೋಸ್ ಅಂತ ಅನಿಸಿತು,ಕೈಬೆರಳುಗಳು, ಕಾಲ್ಬೆರಳುಗಳು ನೋವಿನಿಂದ ಚಲನೆಯೆ ಇಲ್ಲದಂತೆ, ನೋವೇ ಇವುಗಳ ಸ್ಥಾಯೀ ಭಾವ ಎಂಬಂತಾಗಿದ್ದವು. ನಾವು ತೊಟ್ಟ ಕೈಗವಸು, ಬೆಚ್ಚಗಿನ ಬಟ್ಟೆಗಳು ದೈತ್ಯನಿಗೆ ತೊಡಿಸಿದ ಚಿಂದಿ ಎಂಬಂತಾಗಿದ್ದವು, ಆದರೂ ತಾಳಿಕೊಂಡು ಆ -7 ಡಿಗ್ರಿ ಚಳಿಯನ್ನು ಹೃತ್ಪೂರ್ವಕವಾಗಿ ಅನುಭವಿಸಿ ಹೊರಟೆವು. ಕೆಳಗೆ ಬೆಟ್ಟದ ಬುಡದಲ್ಲಿ  ಹೆಸರಿನ ವ್ಯಾನೊಂದರಲ್ಲಿ ನಮಗಾಗಿಯೆ ತಯಾರಿಸಲಾಗಿದೆ ಎಂದನಿಸುತಿದ್ದ ಬಿಸಿಬಿಸಿ ಇಡ್ಲಿ, ಚಟ್ನಿಯನ್ನು ಸವಿದಮೇಲೆ ಸ್ವಲ್ಪ ಹುರುಪು ಬಂದಂತಾಯಿತು. ಐಂಗೆಲ್ ಬಗರ್ ನಿಂದ ಲ್ಯೂಸನರ್ ಗೆ ಹಿಂದಿರುಗಿ ಹುತಾತ್ಮ ಯೋಧರ ಸ್ಮಾರಕವೆಂದು ನಿರ್ಮಿಸಲಾದ ಕಟ್ಟಡ ನೋಡಿದೆವು.ಅಲ್ಲಿ ಹೊರಗೆ ಕೆಲವು ಮಹಿಳೆಯರ ಗುಂಪು ರೇಷ್ಮೆ ಸೀರೆ ಉಟ್ಟು ಧಾವಿಸುತ್ತಿದ್ದರು,ಹಿಂದೆ ರೇಶ್ಮೆ ಲಂಗ ತೊಟ್ಟ ಪುಟ್ಟ ಮಕ್ಕಳಿದ್ದರು, ಬಹಳ ದಿನಗಳ ನಂತರ ನಮ್ಮ ಸಾಂಪ್ರದಾಯಿಕ ಉಡುಪನ್ನು ನೋಡಿ ಎಷ್ಟು ಸಂತೋಷವಾಯಿತೋ ಹೇಳಲರಿಯೆ.
ಸ್ಟುಟ್ ಗಾಟರ್ಗೆ ಮರಳುವ ರೈಲನ್ನೇರಿ ಕುಳಿತವರಿಗೆ ದಾರಿಯಲ್ಲಿ ಕೆಲವರು ಪ್ಯಾರಾಗ್ಲೈಡಿಂಗ್ ಕ್ರೀಡೆಯಲ್ಲಿ ತೊಡಾಗಿರುವುದನ್ನು ಕಂಡು ಅಬ್ಬಾ! ಎನಿಸಿತು.
 

17 ರಂದು ಬೆಳಿಗ್ಗೆ ಬಿಸಿಲು ಕಂಡು ಖುಷಿಯೆನಿಸಿತು. ಚಳಿಯ ಪೀಡನೆಯಿರದೆಂದು ಭಾವಿಸಿದೆ, ನನ್ನ ಭಾವನೆಗೆ ಅರ್ಥವಿಲ್ಲವೆಂದು ಹೊರ ಬಂದಾಗ ತಿಳಿಯಿತು.  ಇಂದು ಪ್ರಸಿಧ್ಧವಾದ ಟಿವಿ ಟವರ್ ಇರುವಲ್ಲಿಗೆ ಪತಿ ನಮ್ಮನ್ನು ಒಯ್ದರು . ಸ್ಟುಟ್ ಗಾಟರ್ನ ದಕ್ಷಿಣ ಭಾಗದಲ್ಲಿರುವ ಹೋವರ್ ಬಾಪ್ಸರ್  ಗುಡ್ಡದಲ್ಲಿ ಈ ಟಿವಿ ಟವರ್ ನ್ನು ಸ್ಥಾಪಿಸಲಾಗಿದೆ ಹಲವು ಎಫ್ ಎಂ ರೇಡಿಯೋ ಸ್ಟೇಶನ್ಗಳು ಇಲ್ಲಿಂದ ಪ್ರಸಾರ ಆಗುತ್ತಿತ್ತಂತೆ, ಈಗ ಡಿಜಿಟಲ್ ಸೇವೆಗಳು ಬಂದ ನಂತರ ಇವೆಲ್ಲ ಪಕ್ಕದ ಫೆನರ್ ಮೆಲ್ ಡೆ ಟಮರ್ ನಿಂದ ನಡೆಯುತ್ತಿವೆಯಂತೆ, ಈ ಟಿವಿ ಟವರ್ ಪ್ರಪಂಚದ ಮೊಟ್ಟ ಮೊದಲ ಟಿವಿ ಟವರ್ ಅಂತೆ. ಇದರ ಹೊರಭಾಗದಲ್ಲಿ ನಿಂತರೆ ಇಡೀ ಸ್ಟುಟ್ ಗಾಟರ್ನಗರವು ಕಾಣಿಸುತ್ತದೆ, ಬಹಳ ಚಂದದ ದೃಶ್ಯವದು. ಅಲ್ಲಿಸಾಕಷ್ಟು ಹೊತ್ತಿದ್ದೆವು. ಕೆಳಗೆ ಚಿಕ್ಕ ಪಾಕರ್ನಲ್ಲಿ ಮಕ್ಕಳು ಆಡಿಕೊಂಡರು, ಅಲ್ಲೇ ಪಕ್ಕದಲ್ಲಿ ದಟ್ಟವಾಗಿ ಬೆಳೆಸಿದ ಕಾಡಿತ್ತು. ಮನಸ್ಸು, ದೇಹ ದಣಿಯುವವರೆಗೂ ಆ ಕಾಡಿನಲ್ಲಿ ಓಡಾಡಿದೆವು. ಮತ್ತೆ ಸ್ಟುಟ್ ಗಾಟರ್ ಪುರಪ್ರವೇಶಿಸಿ ಕಟ್ಟಡಗಳ ಮಧ್ಯೆ, ಹಸಿರು ಕಂಡಲ್ಲೆಲ್ಲ ನೋಡಿ, ಕುಳಿತು, ತಣಿದು ಸಂಜೆ ಕೋಣೆಗೆ ಹಿಂತಿರುಗಿದೆವು.
ಮರುದಿನ ಬೆಳಿಗ್ಗೆ ಕೋಣೆ ಖಾಲಿ ಮಾಡಿ ಸ್ಟುಟ್ ಗಾಟರ್ ನಿಂದ ನಮ್ಮ ಸಂಬಂಧಿ ರಾಮಗೋಪಾಲ್-ವಂದನ ದಂಪತಿ ಮನೆಗೆ ಹೋಗುವುದೆಂದು ತೀರ್ಮಾನಿಸಿದ್ದೆವು. ಆದರೆ ಮರ್ಸಡಿಸ್ ಬೆಂಜ್ ಮ್ಯೂಸಿಯಂ ನೋಡೋಣ ಎಂದು ಪತಿದೇವರ ಅಭಿಪ್ರಾಯವಾಗಿತ್ತು, ಅದಕ್ಕೆ ಎದುರುಂಟೆ..!! ಬೃಹದಾಕಾರದ ಕಟ್ಟಡ ಅದು, ಮರ್ಸಡಿಸ್ ಬೆಂಜ್ ಕಾರುಗಳ ಉಗಮ, ವ್ಯಾಪ್ತಿ, ಅಗಾಧತೆಯನ್ನು ಬರವಣಿಗೆಗಳ ಮೂಲಕ, ನೈಜ ಮಾದರಿಗಳ ಮೂಲಕ ಕಲಾತ್ಮಕವಾಗಿ ಪ್ರದರ್ಶಿಸಿದ್ದರು. ಗೋಡೆಗಳ ಮೇಲೆ ಪ್ರಪಂಚದ ಪ್ರಮುಖ ಐತಿಹಾಸಿಕ ಕಾಲಘಟ್ಟಗಳನ್ನು ವಿವರಿಸುವ ಭಿತ್ತಿಚಿತ್ರಗಳನ್ನು ಅಂಟಿಸಿ,ಇಂಗ್ಲಿಷ್ ಭಾಷೆಯ ವಿವರಣೆಗಳನ್ನೂ ನೀಡಿದ್ದರು,ಅವರೆಲ್ಲ ಕಾರುಗಳ ಮಾದರಿಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರೆ ನನಗೆ ಈ ಚಿತ್ರಗಳನ್ನು ನೋಡಿ, ಓದುವುದೇ ಹೆಚ್ಚು ಆಸಕ್ತಿದಾಯಕವೆನಿಸಿತು.
ಮಧ್ಯಾಹ್ನ ಭಾರತೀಯ ತಿನಿಸುಗಳು ಸಿಕ್ಕುವ ರೆಸ್ಟುರಾಂಟಿನಲ್ಲಿ ಊಟ ಮುಗಿಸಿ ನಮ್ಮ ಸಾಮಾನು, ಸರಂಜಾಮುಗಳೊಂದಿಗೆ ಸ್ಟುಟ್ ಗಾಟರ್ಗೆ ವಿದಾಯ ಹೇಳಿ ಹೈಡೆಲ್ ಬರ್ಗ್  ರೈಲನ್ನೇರಿದೆವು. 40 ನಿಮಿಷಗಳ ಪ್ರಯಾಣವಾಗಿತ್ತದು. ಹೈಡೆಲ್ ಬರ್ಗ್ ನಮ್ಮ ಮೈಸೂರನ್ನು ನೆನಪಿಸುವ ಊರು. ಇಲ್ಲಿನ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ನಲ್ಲಿ ರಾಮ, ವಂದನರು ವಿಜ್ಞಾನಿಗಳಾಗಿ ಕೆಲಸ ಮಾಡುತ್ತಾರೆ.ಎತ್ತರ ಪ್ರದೇಶದಲ್ಲಿ ಇನ್ಸ್ಟಿಟ್ಯೂಟ್ ಗೆ ಹತ್ತಿರದಲ್ಲಿಯೆ ಅವರ ಮನೆಯಿದೆ. ಅಲ್ಲಿ ವಂದನ ನಮ್ಮನ್ನು ಕಾಯುತ್ತಿದ್ದಳು. ಅವರ ಮನೆಗೆ ಹೋದಾಗ ನಮ್ಮ ಮನೆಯನ್ನೇ ಬಂದು ಸೇರಿದಂತೆನಿಸಿತು. ಹೋದ ಕೂಡಲೇ ಅವಳು ನಮಗೆ ಪುಟ್ಟಪರ್ತಿಯಲ್ಲಿರುವ ಅವಳ ಮಾವ (ಪತಿಯ ತಂದೆ) ಮತ್ತು ಅಜ್ಜಿಯೊಂದಿಗೆ ಇಂಟರ್ ನೆಟ್ ಸಂಪರ್ಕ ಏರ್ಪಡಿಸಿದಳು. ಕ್ಯಾಮೆರಾ ಮೂಲಕ ಪರಸ್ಪರ ನೋಡಿಕೊಂಡು ಸಾಕಷ್ಟು ಹರಟಿದೆವು. ಆ ವೇಳೆಗೆ ರಾಮನೂ ಬಂದ, ಊರ ಸುದ್ದಿಗಳನ್ನೆಲ್ಲ ಹೇಳಿ, ಅವರದನ್ನೂ ಕೇಳಿ, ರುಚಿರುಚಿಯಾದ, ಬಿಸಿಬಿಸಿಯಾದ ಸಾರು, ಪಲ್ಯ ರಾಯತದ ಊಟವನ್ನು ಮಾಡಿ, ಅವರ ಉಪಚಾರದಲ್ಲಿ ಮಿಂದು ಮಲಗಿದೆವು. ಮರುದಿನದ ತಿಂಡಿಯ ಜವಾಬ್ದಾರಿಯನ್ನು ನಾನು ವಹಿಸಿದೆ. ರಾಮನಿಗೆ ಇತ್ತೀಚೆಗಷ್ಟೆ ಪಿ.ಎಚ್.ಡಿ.ದೊರಕಿತ್ತು, ಆತನ ಸಂಶೋಧನೆಯ ಕುರಿತು ಅವನು ಅಂದು ಭಾಷಣ ಮಾಡಬೇಕಿತ್ತು,ಬೇಗನೆ ಹೋದ, ವಂದನ ರಜೆಯಲ್ಲಿದ್ದಳು, ನಾವೆಲ್ಲರೂ ಮನೆಯಿಂದ ಒಟ್ಟಿಗೆ ಟ್ರಾಮ್ ನಲ್ಲಿ ಹೊರಟೆವು, ದಾರಿಯಲ್ಲಿ ನಾವಿಳಿಯಬೇಕಿದ್ದ ಸ್ಥಳವನ್ನು ಸೂಚಿಸಿ ಅವಳು ಮುಂದೆ ಹೋದಳು. ನಾವು ಹೈಡಲ್ ಬರ್ಗ್ ಪಟ್ಟಣದ ಬೀದಿಗಳಲ್ಲಿ ಉದ್ದಕ್ಕೆ ನಡೆಯತೊಡಗಿದೆವು. ಈಗ ಚಳಿ ನಮ್ಮ ಆಪ್ತಮಿತ್ರನಂತೆ, ನಿಡುಗಾಲದ ಬಂಧುವಿನಂತೆ ಎನಿಸಿತ್ತು. ನಡೆಯುತ್ತಾ ನೆಕರ್ ನದಿಯ ಬಳಿ ತಲುಪಿದೆವು. ಅಲ್ಲಿಗೆ ಹೈಡಲ್ಬಗರ್ ಕ್ಯಾಸಲ್ ಕಾಣಿಸುತ್ತಿತ್ತು.ಇಲ್ಲೂ ಹಸಿರಿನ ಮೆರವಣಿಗೆ.ಹಸಿರು ಉಳಿಸಿಕೊಂಡೇ ಎಷ್ಟು ಚೆನ್ನಾಗಿ ಪೇಟೆಯನ್ನು ಕಟ್ಟುತ್ತಾರೆ ಇವರು! ನದಿಯನ್ನು ಅವಲೋಕಿಸುತ್ತಾ ನಿಂತಿದ್ದೆವು,
ವಂದನ ನಮಗೆ ಫೋನ್ ಮಾಡಿ ತಾನು ಇಂಥಲ್ಲಿ ಕಾಯುತ್ತಿರುವುದಾಗಿ ಹೇಳಿದಳು. ಅವಳಿದ್ದ ಸ್ಥಳಕ್ಕೆ ನಡೆದು, ಅವಳನ್ನು ಕರೆದುಕೊಂಡು, ಆಕೆ ಹೇಳಿದ ಭಾರತೀಯ ಹೊಟೆಲ್ ನಲ್ಲಿ ಊಟ ಮಾಡಿದೆವು.ಮಕ್ಕಳಿಬ್ಬರೂ ಅವಳನ್ನು ಅಂಟಿಕೊಂಡರು. ಅವರನ್ನು ಅವಳೊಂದಿಗೆ ಮನೆಗೆ ಕಳಿಸಿ ನಾವಿಬ್ಬರೂ ಕ್ಯಾಸಲ್ ಕಡೆಗೆ ನಡೆದೆವು.ಮೇಲೆ ಹೋಗಲು ಕೇಬಲ್ ಕಾರಿನ ವ್ಯವಸ್ಥೆ, ರೈಲಿನ ವ್ಯವಸ್ಥೆ ಇದ್ದರೂ ಊಟ ಭಾರವಾಗಿತ್ತು ಎಂದು ನಾವು ಕಾಲ್ನಡಿಗೆಯಲ್ಲೇ ಮೇಲೇರಲಾರಂಭಿಸಿದೆವು, ಟಾರುಹಾದಿ ಕಡಿದಾಗಿತ್ತು. 17ನೆಯ ಶತಮಾನದ ಪಾಲಿಟೈನ್ ರಾಜರ ನಿವಾಸವಾಗಿತ್ತು ಆ ಕ್ಯಾಸಲ್, ಫ್ರೆಂಚರ ಧಾಳಿಗೆ ಮತ್ತು ಸಿಡಿಲಿನ ಹೊಡೆತಕ್ಕೆ ಸಿಲುಕಿ ಕ್ಯಾಸಲ್ ನ ಕೆಲಭಾಗ ನಾಶವಾಗಿದ್ದವು.ಮತ್ತು ಇದರ ಕೆಂಪು ಕಲ್ಲನ್ನು ಬೇರೆ ಕಟ್ಟಡಗಳ ರಚನೆಗೂ ಬಳಸಿಕೊಳ್ಳಲಾಗಿತ್ತು. ಆದರೂ ಅದರ ಕಲಾವಂತಿಕೆ,ಸೌಂದರ್ಯವನ್ನು ರಕ್ಷಿಸುವ ಕಡೆಗೆ ವಿಶೇಷ ಗಮನ ಹರಿಸಿ ಅದನ್ನು ಮತ್ತೆ ಕಟ್ಟಲಾಗಿದೆ ಎಂದು ರಾಮ ತಿಳಿಸಿದ.ಅಲ್ಲಿದ್ದ ಬೃಹದಾಕಾರದ ವೈನ್ ಬ್ಯಾರೆಲ್ ಗಳು ಮಾತ್ರ ಯಾವ ಧಾಳಿಯಲ್ಲೂ ನಾಶವಾಗದೆ ಉಳಿದಿದ್ದವು, ಈ ವೈನ್ ಬ್ಯಾರಲ್ ಗಳೇ ಇದರ ಪ್ರಮುಖ ಆಕರ್ಷಣೆಯೆನಿಸಿತು.ಅಲ್ಲಿನ ತೆರೆದ ಕಿಟಿಕಿಗಳಿಂದ ಹೈಡಲ್ ಬರ್ಗ್  ಕೆಂಪಗೆ ಭವ್ಯವಾಗಿ ಕಾಣಿಸುತ್ತಿತ್ತು. ಮಳೆಯಲ್ಲಿ ನೆನೆದುಕೊಂಡು, ಟ್ರಾಂ, ಬಸ್ಸುಗಳಲ್ಲಿ ಪಯಣಿಸಿ ಸಂಜೆ ಮನೆ ಸೇರಿದೆವು. ಮರುದಿನ 20, ವಾಪಸ್ ಹೊರಡುವ ದಿನ ಎಂದು ಬಹಳ ಖುಷಿ, ಸಂಭ್ರಮದಿಂದ ಬೆಳಗಾಗುವುದನ್ನೇ ಕಾಯುತ್ತಿದ್ದೆ. ಬೆಳಿಗ್ಗೆ 10.30ಕ್ಕೆ ರಾಮ ವಂದನರಿಂದ ಬೀಳ್ಕೊಂಡು ಹೈಡಲ್ ಬರ್ಗ್ ನಿಂದ ಫ್ರಾಂಕ್ ಫರ್ಟ್, ಫ್ರಾಂಕ್ ಫರ್ಟ್ ನಿಂದ ದುಬೈ,ದುಬೈನಿಂದ ಬೆಂಗಳೂರು,ಬೆಂಗಳೂರು ವಿಮಾನನಿಲ್ದಾಣದಿಂದ ಮನೆ ಸೇರಿದಾಗ 21 ರ ಬೆಳಿಗ್ಗೆ 11 ಘಂಟೆಯಾಗಿತ್ತು.
(ಮುಂದುವರಿಯುವುದು)

‍ಲೇಖಕರು G

13 October, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading