ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಲಕ್ಷ್ಮಿ ಕಂಡಂತೆ ಜರ್ಮನಿ ೩: ಮತ್ತೆ ಸ್ಟುಟ್ ಗಾರ್ಟ್

ಜಯಲಕ್ಷ್ಮಿ ಶೇಖರ್

ನಮಗೆ ಸ್ಯೂಟ್ ನ್ನು ಅಣಿಗೊಳಿಸಿ ನಾವು ಹಿಂದಿನ ದಿನ ಕೋಣೆಯಲ್ಲಿರಿಸಿ ಹೋದ ಸಾಮಾನುಗಳನ್ನು ತಾನೇ ಅಲ್ಲಿಗೆ ಸಾಗಿಸಿರುವುದಾಗಿ ಸ್ವಾಗತಕಾರಿಣಿಯು ತಿಳಿಸಿದಳು. ನಮ್ಮಲ್ಲಿರುವಂತೆ ಹೊಟೆಲ್ಗಳಲ್ಲಿ, ರೆಸ್ಟುರಾಂಟ್ಗಳಲ್ಲಿ ನೌಕರರನ್ನು ನಿರೀಕ್ಷಿಸುವುದು ಇಲ್ಲಿ ಸಾಧ್ಯವಿಲ್ಲ. ಮಾಲೀಕರೇ ಅಡಿಗೆಯಾತ, ಸ್ವಾಗತಕಾರ, ನೌಕರ…ಹೀಗೆ ಅನೇಕ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ, ಆದರೂ ನಮ್ಮ ಹೋಟೆಲ್ ನಲ್ಲಿ 3-4 ಸಹಾಯಕರಿದ್ದರು.ನಮಗೆ ನೀಡಲಾದ ಸ್ಯೂಟ್ ಸುಂದರವಾಗಿ ಅಚ್ಚುಕಟ್ಟಾಗಿತ್ತು. ಕೆಳಗೆ ಹಾಲ್ ಮತ್ತು ಅಡಿಗೆಮನೆ, ವಿಶಾಲವಾದ ಕಿಟಕಿಗಳು, ದುಂಡುಮೇಜು, ಕುರ್ಚಿಗಳು, ಫ್ರಿಜ್, 2 ಮಂಚಗಳು, ಅದರ ಮೇಲೆ ಕುಳಿತರೆ ಹುದುಗಿಸಿಕೊಳ್ಳುವ ಹಾಸಿಗೆಗಳು,ನೀಳವಾದ ಏಣಿಯನ್ನೇರಿ ಮೇಲೆ ಹೋದರೆ ಅಲ್ಲಿಯೂ ಒಂದು ಕೋಣೆ, 2 ಮಂಚಗಳು, ಅವುಗಳಿಗೆ ಉಗುರಿನಿಂದ ಮುಟ್ಟಿದರೆ ಉರಿಯುವ ಬೆಡ್ ಲ್ಯಾಂಪ್ ಗಳು,ಅಲ್ಲಿಗೆ ಹೊಂದಿಕೊಂಡಂತೆ ಸ್ನಾನ,ಶೌಚದ ಕೋಣೆಗಳು,ಕಿಟಕಿಯಿಂದ ಕಾಣುತ್ತಿದ್ದ ಸುಂದರ ಬೀದಿಗಳು,ಚಿಕ್ಕ-ದೊಡ್ಡ ಹಂಚಿನ ಮನೆಗಳು,—ಹಿಂದೆ ಓದಿ ಹೆಸರು ಮರೆತಿರುವ ಯುರೋಪಿಯನ್ ಕಥೆಯೊಂದರ ನೆನಪು, ಅದರಲ್ಲಿ ಬರುವ ಪುಟ್ಟ ಹುಡುಗಿಯ ನೆನಪು ಮಾಡಿಕೊಳ್ಳುತ್ತಾ ಇವನ್ನೆಲ್ಲ ವೀಕ್ಷಿಸಿದೆ.ಇವರೆಷ್ಟು ಚೆನ್ನಾಗಿ ಪ್ಲಾನ್ ಮಾಡುತ್ತಾರೆ, ಇವರಿಗೆ ಜೀವನದಲ್ಲಿ ಕೊರತೆ ಎಂಬುದಿಲ್ಲವೆ,ಇದ್ದರೆ ಯಾವ ಸ್ತರದ್ದು, ಒಂದೂ ಅರ್ಥವಾಗಲಿಲ್ಲ. ಇಲ್ಲಿನ ಜನರು ಕಪಟ, ಅಶಿಸ್ತು, ಕೊಟ್ಟ ಮಾತನ್ನು ಮುರಿಯುವಿಕೆ, ಬೇಜವಾಬ್ದಾರಿಗಳನ್ನು ಸಹಿಸರು, ಯಾವ ಕೆಲಸವನ್ನೇ ಆಗಲಿ, ಅದರಲ್ಲಿ ನೂರಕ್ಕೆ ನೂರರಷ್ಟು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂದು ಶೇಖರ್ ಹೇಳುತ್ತಾ ಹೋದರು.
ಮೇ.14, ಕೊರೆಯುವ ಚಳಿ ಸಾಲದೆಂದು ಬೆಳಿಗ್ಗೆಯಿಂದಲೇ ಹನಿಯುತ್ತಿದ್ದ ಮಳೆ, ನೆಂದುಕೊಂಡು ಪ್ರಾಣಿಸಂಗ್ರಹಾಲಯ ನೋಡಲು ಹೊರಟೆವು. ಇಲ್ಲಿನ ರೈಲುಗಳೀಗ ನಮಗೆ ಪರಿಚಿತವಾಗಿದ್ದವು.ಮಕ್ಕಳಿಗೆ Cannstatt,Mohringen,Feierbauch….ಇಂಥಾ ಹೆಸರುಗಳೆಲ್ಲ ಪರಿಚಿತವಾಗಿದ್ದವು, ನನಗೆ ಅಷ್ಟು ಬೇಗ ನಾಲಗೆ ಮಗುಚುತ್ತಿರಲಿಲ್ಲ. ವಿಲ್ಹೆಲ್ಮ ಪ್ರಾಣಿಸಂಗ್ರಹಾಲಯ ಮತ್ತು ಸಸ್ಯೋದ್ಯಾನ ಬಹಳ ವಿಶಾಲವಾಗಿತ್ತು. ನೋಡಲು ಕಡಿಮೆಯೆಂದರೂ 5 ಗಂಟೆ ಬೇಕಿತ್ತು. ಒಳಪ್ರವೇಶಿಸುತ್ತಿದ್ದಂತೆಯೇ ಟ್ಯುಲಿಪ್ ಹೂಗಳು, ಅವುಗಳಷ್ಟೇ ಸುಂದರವಾದ ಫ್ಲೆಮಿಂಗೋ ಹಕ್ಕಿಗಳು ಸ್ವಾಗತಿಸಿದುವು. ಎಷ್ಟು ವಿಧದ ಹಕ್ಕಿಗಳು, ಅದೇನು ಅದ್ಭುತವಾದ ವರ್ಣಸಂಯೋಜನೆ, ಕೆಂಪು, ನೀಲಿ, ಹಸಿರು ಮಿಶ್ರಿತ ಮೈಗೆ ಹಸಿರು, ಕೆಂಪು ಕೊಕ್ಕುಳ್ಳ ಗಿಳಿಯಂತಹ ಪಕ್ಷಿ, ಮೈಯಿಡೀ ಗುಲಾಬಿ ಬಣ್ಣದ ಹಕ್ಕಿ, ಮಣ್ಣಿನ ಬಣ್ಣದ ತುಪ್ಪಳದಂಥಾ ಮೈಯುಳ್ಳ ಹಕ್ಕಿ,ಇವೆಲ್ಲ ನಿಜವಾದ ಬಣ್ಣವೋ ಅಥವಾ ಸವರಿದ ಬಣ್ಣವೋ! ಬ್ಯೂಟಿಪಾರ್ಲರ್ ಗಳಿಗೆ ಹೋಗಿ ತಲೆಗೂದಲನ್ನು ನಾನಾವಿಧವಾದ ಬಣ್ಣಗಳಿಂದ ಅಲಂಕರಿಸಿಕೊಳ್ಳುವ ಹೆಂಗಸರನ್ನು ನೆನಪಿಸಿಕೊಂಡೆ. ಅವುಗಳ ಠೀವಿ, ನಡೆಯುವ ಗತ್ತು ನೋಡಿದಾಗ ಆ ಪಕ್ಷಿ ಸಂಕುಲದಲ್ಲಿ ಮಹಿಳಾ ಪ್ರಾಬಲ್ಯವೇ ಜಾಸ್ತಿಯೆನಿಸುತ್ತಿತ್ತು. ನೋಡಿದಷ್ಟೂ ಮುಗಿಯದ ಹಕ್ಕಿಗಳ ವೈವಿಧ್ಯವನ್ನಲ್ಲಿ ನೋಡಿದೆವು.ಅವುಗಳೆಲ್ಲ ಸ್ವಾಭಾವಿಕವಾಗಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದವು.
ಯಾವೊಬ್ಬ ಪ್ರವಾಸಿಯೂ ಅವುಗಳಿಗೆ ತೊಂದರೆಯನ್ನು ಕೊಡುತ್ತಿರಲಿಲ್ಲ. ಬಂಧನದಲ್ಲಿದ್ದರೂ ಸ್ವತಂತ್ರವಾಗಿರುವಂತೆ ತೋರುವ ಗೊರಿಲ್ಲಾಗಳು ಮತ್ತು ಅವುಗಳ ಕುಲಬಾಂಧವರು ಇದ್ದರು.ಅವುಗಳಿಗೆ ಲಾಗ ಹೊಡೆಯಲು ಉಯ್ಯಾಲೆ ಏರಲು ಮರಗಳೂ, ತಿನ್ನಲು ಕಾಳು, ಹಣ್ಣು,ತರಕಾರಿಗಳು, ತಬ್ಬಿಕೊಂಡು ಮುತ್ತಿಟ್ಟು, ಪ್ರೀತಿ ತೋರಲು ಮನುಕುಲದ ಮಹಿಳೆಯರು–ಏನುಂಟು, ಏನಿಲ್ಲ! ತಾವು ಬಂಧಿತರೆಂಬ ಅರಿವು ಇವುಗಳಿಗಿರಬಹುದೆ? ಕಾಡಿನಲ್ಲಿ ಬಿಟ್ಟರೆ ತಮ್ಮ ಮೂಲಪ್ರವೃತ್ತಿ ನೆನಪಾಗಬಲ್ಲುದೆ? ಜರ್ಮನ್ನರಿಗೆ ಆ ಪ್ರಾಣಿಗಳ ಮೇಲಿರುವ ಕಾಳಜಿ, ಅವುಗಳ ಬಗಿಗಿನ ಶ್ರಧ್ಧೆ, ಅವುಗಳ ವಾಸಸ್ಥಾನಗಳನ್ನು ಶುಭ್ರವಾಗಿಡುವುದರ ಬಗೆಗಿನ ನಿಷ್ಠೆ ಶ್ಲಾಘನೀಯ. ಪ್ರಾಣಿಗಳಲ್ಲೂ ವೈವಿಧ್ಯ,ಜಿರಾಫೆಗಳಿಂದ ಹಿಡಿದು ಮಂಗೋಲಿಯನ್ ಕುದುರೆಗಳ ತನಕವೂ ನೋಡಿದೆವು.
ನಮ್ಮ ದೇಶದಿಂದ ಕರೆದೊಯ್ದ ಆನೆಗಳೂ ಇದ್ದವು, ಅವುಗಳಲ್ಲಿ ಕೆಲವಕ್ಕೆ ಭಾರತೀಯ ಹೆಸರುಗಳೂ ಇದ್ದವು, ಗಣೇಶನ ಕತೆಯನ್ನು ಜರ್ಮನ್,ಇಂಗ್ಲಿಷ್ ಭಾಷೆಗಳಲ್ಲಿ ಮುದ್ರಿಸಿ ಅಂಟಿಸಿದ್ದರು.ಈ ಉಷ್ಣದೇಶದ ಪ್ರಾಣಿಗಳಿಗೆ ಶೀತಪ್ರದೇಶದಲ್ಲಿ ಬದುಕಲು ಕೃತಕವಾಗಿ ಬೆಚ್ಚಗಿನ ವಾತಾವರಣವನ್ನು ನಿರ್ಮಾಣ ಮಾಡಿದ್ದರು. ನೀರಾನೆ, ಘೇಂಡಾಮೃಗಗಳನ್ನೂ ನೋಡಿದೆವು, ಆದರೆ ನಮಗೆ ಹಿಮಕರಡಿ ಪ್ರಮುಖ ಆಕರ್ಷಣೆಯಾಗಿತ್ತು. ಜಿನುಗು ಮಳೆಯಿಂದ ತೊಂದರೆ ಇದ್ದರೂ ಅಲ್ಲಿನ ಪ್ರಶಾಂತ ವಾತಾವರಣ, ಹಸಿರಿನ ಸೊಬಗು, ಹಕ್ಕಿಗಳ ಕಲರವ ಆ ತೊಂದರೆಯನ್ನು ಮರೆಸಿತು. ಏರು-ತಗ್ಗುಗಳಿಂದ ಕೂಡಿದ ಆ ಪ್ರದೇಶದಲ್ಲಿ ನಡೆಯುವ ವ್ಯಾಯಾಮವೂ ಖುಷಿಯೆನಿಸುತ್ತಿತ್ತು. ಹಸಿರು ಮನೆಯಲ್ಲಿ ಸಸ್ಯಶಾಸ್ತ್ರದ ಅಧ್ಯಯನಕ್ಕೆ ಬೇಕಾದ ಗಿಡ ಮರಗಳನ್ನು ಸಂರಕ್ಷಿಸಿದ್ದರು. ಆದರೆ ನಾವು ಅತ್ತ ಹೋಗಲಿಲ್ಲ. ಪ್ರಾಣಿಗಳನ್ನು ನೋಡುವುದು ಕುತೂಹಲಕಾರಿಯಾದರೂ ಕಾಡಲ್ಲಿರಬೇಕಾದ ಇವು ನಮಗಾಗಿ ಇಲ್ಲಿವೆಯಲ್ಲ ಅಂತ ತಪ್ಪಿತಸ್ಥ ಭಾವನೆಯೂ ನಮ್ಮಲ್ಲಿತ್ತು.

ಸಾಕಷ್ಟು ಹೊತ್ತನ್ನು ಅಲ್ಲಿ ಕಳೆದು ಮನಸ್ಸಿಲ್ಲದ ಮನಸ್ಸಿನಿಂದ ಹೊರಗೆ ಸಿಟಿಯೊಳಗೆ ಬಂದು ಬರ್ಗರನ್ನು ತಿಂದು ಪೇಟೆ ಬೀದಿಗಳಲ್ಲಿ ಅಡ್ಡಾಡಿ ಪುರಾತನ ಕಟ್ಟಡಗಳನ್ನು, ಹಲವು ರೀತಿಯ ಜನರನ್ನು ವಿಸ್ಮಯದಿಂದ ನಿರುಕಿಸುತ್ತಿದ್ದೆವು. ಈ ನಡುವೆ ನಮ್ಮ ಮೈದಾ ದೋಸೆಯಂಥ ತಿಂಡಿ-ಕ್ರೇಪೆ-ಸಿಗುತ್ತೆ ಅಂದರು ಪತಿರಾಯರು. ಹಾದಿಬದಿಯಲ್ಲಿ ನಮ್ಮಲ್ಲಿ ಭೇಲ್ಪುರಿ,ಪಾನಿಪೂರಿಗಳನ್ನು ಮಾರುವಂತೆ ಆ ದೋಸೆ ಮತ್ತು ಇನ್ನೇನೋ ತಿನಿಸುಗಳನ್ನು ಮಾರುತ್ತಿದ್ದರು.ಆ ಮಹಿಳೆ ಹಿಟ್ಟನ್ನು ಹಂಚಿನಮೇಲೆ ಸುರಿದು,ತಿರುವಿ ಅದಕ್ಕೆ ಹುರಿದ ನೀರುಳ್ಳಿ ತುಂಡುಗಳನ್ನು ಹಾಕಿ,ಅದರ ಮೇಲೆ ಒಂದಿಷ್ಟು ಉಪ್ಪು,ಕಾಳುಮೆಣಸಿನ ಪುಡಿಯನ್ನು ಸುರಿದು ಕೈಗಿತ್ತಳು, ರುಚಿಯಾಗಿತ್ತು, ನಮ್ಮ ಹಿಂದಿದ್ದ ಮಹಿಳೆಗೆ ಅದೇ ರೀತಿ ದೋಸೆ ಎರೆದು ಹುರಿದ ನೀರುಳ್ಳಿಗೆ ಬದಲಾಗಿ ಮಾಂಸದ ತುಣುಕುಗಳು,ಬಾಳೇಹಣ್ಣಿನ ತುಂಡುಗಳನ್ನಿಟ್ಟು ಕೊಟ್ಟಳು……ತೀರಾ ಆಳಕ್ಕೆ ಇಳಿಯಬಾರದು!!
ಒಂದೆಡೆ ನೆಲದಲ್ಲಿ ಬೇರೆಬೇರೆ ದೇಶಗಳ ಪ್ರಮುಖ ನಗರಗಳು ಎಷ್ಟು ದೂರದಲ್ಲಿವೆ ಎಂದು ಸೂಚಿಸುವ ಚಿತ್ರಗಳನ್ನು ಬಿಡಿಸಿದ್ದರು.ನಮ್ಮ ಮುಂಬೈ ನಗರದ ಹೆಸರು ಅದು 6,000 ಕಿಮೀ ದೂರದಲ್ಲಿದೆ ಎಂದು ಚಿತ್ರಿಸಿರುವುದು ನೋಡಿ ಏನೋ ಖುಷಿಯಾಯಿತು. ಇನ್ನೊಂದೆಡೆ ಒಬ್ಬಾಕೆ ವಾದ್ಯ ನುಡಿಸುತ್ತಿದ್ದಳು,ಜನರು ಆಕೆಯ ಮುಂದಿನ ಡಬ್ಬಿಗೆ ಹಣ ಹಾಕುತ್ತಿದ್ದರು. ಅವಳನ್ನು ನೋಡಿದರೆ ಅಂದವಾಗಿ ಸಿಂಗರಿಸಿಕೊಂಡ ಕಾಲೇಜು ಹುಡುಗಿಯಂತಿದ್ದಳು. ಹೀಗೆ ಆ ನಗರದ ಕೆಲವು ಜೀವನಚಿತ್ರಗಳನ್ನು ನೋಡಿ ಸಂಜೆ ಹೊಟೆಲನ್ನು ಸೇರಿದೆವು. ನಮ್ಮ ಬಟ್ಟೆಗಳನ್ನು ಒಗೆದುಕೊಳ್ಳಲು ನೆಲಮಾಳಿಗೆಯಲ್ಲಿದ್ದ ವಾಶಿಂಗ್ ಮೆಶಿನ್ನನ್ನು ಹಿಂದಿನ ದಿನವೇ ಕಾದಿರಿಸಲಾಗಿತ್ತು,ಅದಕ್ಕೆ ಬಟ್ಟೆಗಳನ್ನು ತುಂಬಿಸಿ ತೆಗೆಯುವ ಹೊಣೆಯನ್ನೆಲ್ಲ ಪತಿಯೇ ಹೊತ್ತರು.

ಗಿರಿನಗರಿ ಸ್ವಿಟ್ಜರ್ ಲ್ಯಾಂಡ್

ಮೇ 15ಕ್ಕೆ ಬೆಳಿಗ್ಗೆ ಸ್ವಿಟ್ಜರ್ ಲ್ಯಾಂಡಿಗೆ ರೈಲಿನಲ್ಲಿ ಹೊರಟೆವು, ಸ್ಟುಟ್ ಗಾರ್ಟ್ ನಿಂದ ಸ್ವಿಟ್ಜರ್ ಲ್ಯಾಂಡಿನ ಜ್ಯೂರಿಕ್ ಗೆ (Zurich) ಸುಮಾರು 4 ಘಂಟೆಗಳ ಪ0ುಣ, ದಾರಿಯುದ್ದಕ್ಕೂ ನದಿಗಳು, ಉದ್ದಾನುದ್ದದ ಸುರಂಗ ಮಾರ್ಗಗಳು, ಚೆಂದಚೆಂದದ ಇಳೀಜಾರು ಹಂಚಿನ ಮನೆಗಳು, ಸ್ವಚ್ಚ, ಸುಂದರ ರಸ್ತೆಗಳು.ನೀರಿನ ಸಮಸ್ಯೆ, ವಿವಾದಗಳಂಥವು ಇವರನ್ನು ಕಾಡಲಾರವು.ಭೂತಾಯಿಗೆ ಎಷ್ಟೊಂದು ಮಗ್ಗುಲುಗಳು, ಎಷ್ಟು ವಿಸ್ತಾರ! ಜೀವನದ ಅನುಭವಗಳು,ಭೂಮಿಯ ಮಗ್ಗುಲುಗಳನ್ನು ಬೆಸೆಯುವ ರೂಪಕಕ್ಕೆ ಮನಸ್ಸನ್ನು ಮಥಿಸುತ್ತಾ ಮಥಿಸುತ್ತಾ ಪಕ್ಕದಲ್ಲಿ ಕಾಣುತ್ತಿದ್ದ ದೃಶ್ಯವೈಭವದಲ್ಲಿ ನನ್ನೆಲ್ಲಾ ಯೋಚನೆಗಳು ಸೇರಿಹೋದವು. ಜ್ಯೂರಿಕ್ನಲಿಳಿದು ನಮ್ಮ ಗುರಿಯಾದ ಊರು ಲ್ಯೂಸರ್ನ್ ಗೆ ಮಹಡಿರೈಲಿನಲ್ಲಿ 45 ನಿಮಿಷ ಪ್ರಯಾಣಿಸಿದೆವು.
ಯುರೋಪಿನ ಚಳಿ ಆ ವೇಳೆಗೆ ತಕ್ಕಮಟ್ಟಿಗೆ ಅಭ್ಯಾಸವಾಗಿದ್ದ ಕಾರಣ ಲ್ಯೂಸರ್ನನ ಚಳಿ ನನ್ನನ್ನು ಹೆದರಿಸಲಿಲ್ಲ, ಬೆದರಿಸಲಿಲ್ಲ, ಮೈ ಮುದುಡಿಸಿತಷ್ಟೆ. ಸ್ವಿಟ್ಜರ್ ಲ್ಯಾಂಡ್ ಆಲ್ಪ್ಸ್ ಪರ್ವತಗಳ ತವರು-ಶರ್ಟುಗಳ ಮೇಲೆ ಶರ್ಟುಗಳನ್ನು ಧರಿಸಿ,ಸ್ವೆಟರನ್ನೂ ಧರಿಸಿ ಮೇಲೆ ಜಾಕೆಟನ್ನು ತೊಟ್ಟಿದ್ದೆವು. ಚಳಿಯನ್ನು ಊಹಿಸುವಲ್ಲಿ ನನ್ನ ಗಂಡ ಎಡವಿದ್ದರು, ಹಾಗಾಗಿ ಥರ್ಮಲ್ ಉಡುಪನ್ನು ತಂದಿರಲಿಲ್ಲ.
ಲ್ಯೂಸರ್ನ್  ಸುಂದರ ಊರು, ಸ್ವಿಟ್ಜರ್ ಲ್ಯಾಂಡಿನಲ್ಲಿ ಬಹಳ ಪ್ರಸಿಧ್ದವಾದ ಊರು, ಲ್ಯೂಸರ್ನ್  ಸರೋವರದಿಂದಾಗಿ ಈ ಹೆಸರು, ಅಂತೆಯೇ  ಹೆಚ್ಚಿನ ಜನಸಂಖ್ಯೆ ಇರುವ ಊರು. ಟ್ಯಾಕ್ಸಿಯಲ್ಲಿ ನಾವಿಳಿದುಕೊಳ್ಳಬೇಕಿದ್ದ ಹೊಟೆಲನ್ನು ತಲುಪಿದೆವು.ಅಲ್ಲಿ ಕೋಣೆಯನ್ನು ಶುಚಿಗೊಳಿಸುತ್ತಿದ್ದ ಸುಂದರ ಮಹಿಳೆಯನ್ನು ನಮ್ಮ ಕೋಣೆಯ ಬಗ್ಗೆ ಕೇಳಲಾಗಿ, ; `sorry, I can’t speak English’ ಎಂದು ಹೇಳಿ ತಡವರಿಸಿಕೊಂಡು ವಿಶಿಷ್ಟ ಹಾವಭಾವಗಳೊಡನೆ ನಿಮ್ಮ ಕೋಣೆಯನ್ನು ಶುಚಿಗೊಳಿಸಲು ಸ್ವಲ್ಪ ಸಮಯ ಕೊಡಿ,ಲಗ್ಗೇಜನ್ನು ಆ ಕೋಣೆಯಲ್ಲಿರಿಸಿ ಊರುನೋಡಿ ಬನ್ನಿ? ಎಂದಳು. ಸಾಮಾನುಗಳನ್ನು ಕೋಣೆಯಲ್ಲಿಡಲು ಹೋದ ನಮಗೆ ಅಲ್ಲಿ ಶುಚಿಗೊಳಿಸಲೇನಿದೆ ಎಂದು ಅಚ್ಚರಿಯಾಯಿತು. ಮುದ್ದಾದ, ಪುಟ್ಟ ಕೋಣೆ, ಚೆನ್ನಮ್ಮ ಮತ್ತು ಮೂರುಕರಡಿಗಳ (Goldilocks and three bears) ಕತೆಯಲ್ಲಿ ಬರುವಂಥಾ ಮಂಚಗಳು,ಅಲ್ಲಿಂದ ಹೊರಬಂದು ಆ ಮಹಿಳೆಯಿಂದ ಬೀಳ್ಕೊಳ್ಳುವಾಗ ಪುಟಪುಟನೆ ಓಡಿ,ನಮಗೊಂದು ಛತ್ರಿಯನ್ನು ತಂದುಕೊಟ್ಟು ‘bad weather’ ಎಂದು
ತುಟಿಯುದ್ದ ಮಾಡಿದಳು. ಆಕೆಯ ಸೌಜನ್ಯಪೂರಿತ ವರ್ತನೆ ಬಹಳ ಹಿತವೆನಿಸಿತು.
ಬೆಟ್ಟಗಳ ನಡುವಿನ ಸುಂದರ ರಸ್ತೆಗಳಲ್ಲಿ ನಡೆಯುವುದು ಚೇತೋಹಾರಿಯಾಗಿತ್ತು. ವಿರಳ ಜನಸಂದಣಿಯ  ರಸ್ತೆಗಳು, ಜಿನುಗುಮಳೆ, ಕುಳಿರ್ಗಾಳಿಯನ್ನು ಸವಿಯುತ್ತಾ ಯಾವುದೋ ರಾಗವನ್ನು ಗುನುಗುತ್ತಾ ನಡೆದು, ದಾರಿಯಲ್ಲೆಲ್ಲೋ ಠಿದದಚಿ ತಿಂದು ಮತ್ತೆ ನಡೆದು ಲ್ಯೂಸರ್ನ್ ಸರೋವರದ ಬಳಿ ಬಂದೆವು, ಹಸಿರಿನ ವಿಜೃಂಭಣೆಯನ್ನು ನೋಡಿ ನಮ್ಮ ಪಂಪಾಸರೋವರವೂ ಹೀಗಿದ್ದಿರಬಹುದೆ ಎಂದು ಯೋಚಿಸಿದೆ.ಲ್ಯೂಸರ್ನ್  ಸರೋವರ ಸುಮಾರು 120 ಚದರ ಕಿಮೀ ನಷ್ಟಿರಬಹುದು ಎಂದು ಯಾರೋ ಹೇಳಿದರು.ಅಲ್ಲಿ ಸ್ಟೀಮರ್ ಗಳು ಸಿಧ್ಧವಾಗಿ ನಿಂತಿದ್ದುವು.ನೆಲದ ಮೇಲಿನ ಪ್ರಯಾಣ ಜಾಸ್ತಿ ಸಮಯ ತೆಗೆದುಕೊಳ್ಳುವುದರಿಂದ ಈ ಸರೋವರದ ಆಸುಪಾಸಿನ ಹಳ್ಳೀಯವರು ಸ್ಟೀಮರುಗಳಲ್ಲಿ ಪ್ರಯಾಣಿಸುತ್ತಾರೆ. ಲ್ಯೂಸರ್ನ್ ನಿಂದ ಆಲ್ಪ್ನಾಟ್ ಸ್ಟಡ್ ಗೆ ನಾವು ಹತ್ತಿದ ಸ್ಟಿಮರ್ ಹೊರಟಿತ್ತು.
ಆ ಊರನ್ನು ತಲುಪಿ ಮರಳಿ ಲ್ಯೂಸರ್ನ್ ಗೆ ಬರಲು ಒಟ್ಟು ಕಾಲಾವಧಿ ಮೂರು ಘಂಟೆ ಅಂದರು. 3 ಗಂಟೆ ಸುತ್ತಲಿನ ಹಸುರು ನೋಡುತ್ತಾ ಸರೋವರದಲ್ಲಿ ಪ್ರಯಾಣಿಸುವುದು ಆಕರ್ಷಣೀಯವೆನಿಸಿತು.ನಮ್ಮಂತೆ ಭಾರತೀಯ ಪ್ರವಾಸಿಗರೂ ಹಲವರಿದ್ದರು ಅಲ್ಲಿ.ಟಿಕೆಟ್ ಕೊಂಡು ಒಳಪ್ರವೇಶಿಸಿದೆವು. ಕುರ್ಚಿ,ಮೇಜುಗಳ ವ್ಯವಸ್ಥೆ,ತಿಂಡಿ ತೀರ್ಥದ ವ್ಯವಸ್ಠೆ ಎಲ್ಲವೂ ಇತ್ತು. ಸ್ಟೀಮರುಹೊರಡುವ ಮುನ್ನ ನಾವೆಲ್ಲ ಮೇಜುಗಳ ಸುತ್ತ ಕುಳಿತರೂ ಅದು ಹೊರಟಾಗ ನಾವೂ ಮೇಲೆದ್ದು ಹೊರಬಂದು ಸ್ಟೀಮರಿನ ಜಗುಲಿಯಲ್ಲಿ ಅಡ್ಡಾಡತೊಡಗಿದೆವು, ಮಳೆ ಹನಿಯುತ್ತಿದ್ದರೂ ಹೊರಗೆ ಕುಳಿತು ಪ್ರಕೃತಿಯ ಸೊಬಗು ಸವಿಯುವುದಕ್ಕೆ ತೊಂದರೆಯಾಗಲಿಲ್ಲ. ಆ ಸೌಂದರ್ಯ ನೋಡಿ ಉಂಟಾದ ಆನಂದವನ್ನು ಬಣ್ಣಿಸಲಾದರೂ ನಾನು ಕವಯತ್ರಿಯಾಗಬೇಕಿತ್ತು.
ದೂರದ ಬೆಟ್ಟದಲ್ಲಿ ಚಂದದ, ಪುಟ್ಟ ಪುಟ್ಟ ಮನೆಗಳು, ಹಿಂದೆ ಗುಡ್ಡವನ್ನು ಆವರಿಸಿರುವ ಮಂಜಿನ ಹೊದಿಕೆ, ಆ ಗುಡ್ಡದ ಆಚೆ ಮಂಜಿನ ಮನೆಯಿದೆಯೇ? ಇದೆ ಎಂದೆ ಮಗನ ಬಳಿ.ಲ್ಯುಸರ್ನ್  ಸರೋವರದ ಸುತ್ತ ಕಾಣುತ್ತಿದ್ದ ರೆಗಿ ಮತ್ತು ಪಿಲಾಟಸ್ ಬೆಟ್ಟಗಳನ್ನು ನೋಡುತ್ತಾ ನೋಡುತ್ತ 3 ಘಂಟೆಗಳು ಕಳೆದದ್ದೇ ತಿಳಿಯಲಿಲ್ಲ. ಮರುದಿನ ಬೆಳಿಗ್ಗೆ ಹೊಟೆಲನ್ನು ಖಾಲಿಮಾಡಿ, ಲಗ್ಗೇಜನ್ನು ರೈಲ್ವೆಸ್ಟೇಶನ್ನಿನ ಲಾಕರಿನೊಳಗಿರಿಸಿ ಮೌಂಟನ್ ಟೈನ್ ಹತ್ತಿ ಕುಳಿತೆವು, ಹೊಟೆಲ್ ನಿಂದ ಹೊರಡುವ ಮುನ್ನ ನಿನ್ನೆ ನಮಗೆ ಕೊಡೆ ಕೊಟ್ಟು, ಇಂದು ನಮಗೆ ಸೋಡಾ ನೀರು ಕುಡಿಯಲಾಗುವುದಿಲ್ಲವೆಂದು ಬಾಟಲಿಗೆ ಕುಡಿಯುವ ನೀರು ತುಂಬಿಸಿ ಕೊಟ್ಟ ಆ ಮಹಿಳೆಗೆ ಹಸ್ತಲಾಘವವನ್ನಿತ್ತು, ನಂತರ ಕೈ ಜೋಡಿಸಿ ಕೃತಜ್ಞತೆ ಸಲ್ಲಿಸಿದೆ.

‍ಲೇಖಕರು G

12 October, 2013

3 Comments

  1. Aravind

    ಆ ಸೌಂದರ್ಯ ನೋಡಿ ಉಂಟಾದ ಆನಂದವನ್ನು ಬಣ್ಣಿಸಲಾದರೂ ನಾನು ಕವಯತ್ರಿಯಾಗಬೇಕಿತ್ತು…. Madam, you are already a poet. You don’t need to become one. Your style of writing is simple yet interesting.

  2. Muralidhara.N.R

    ಎಷ್ಟು ವಿಧದ ಹಕ್ಕಿಗಳು, ಅದೇನು ಅದ್ಭುತವಾದ ವರ್ಣಸಂಯೋಜನೆ, ಕೆಂಪು, ನೀಲಿ, ಹಸಿರು ಮಿಶ್ರಿತ ಮೈಗೆ ಹಸಿರು, ಕೆಂಪು ಕೊಕ್ಕುಳ್ಳ ಗಿಳಿಯಂತಹ ಪಕ್ಷಿ, ಮೈಯಿಡೀ ಗುಲಾಬಿ ಬಣ್ಣದ ಹಕ್ಕಿ, ಮಣ್ಣಿನ ಬಣ್ಣದ ತುಪ್ಪಳದಂಥಾ ಮೈಯುಳ್ಳ ಹಕ್ಕಿ,ಇವೆಲ್ಲ ನಿಜವಾದ ಬಣ್ಣವೋ ಅಥವಾ ಸವರಿದ ಬಣ್ಣವೋ!
    ದೂರದ ಬೆಟ್ಟದಲ್ಲಿ ಚಂದದ, ಪುಟ್ಟ ಪುಟ್ಟ ಮನೆಗಳು, ಹಿಂದೆ ಗುಡ್ಡವನ್ನು ಆವರಿಸಿರುವ ಮಂಜಿನ ಹೊದಿಕೆ, ಆ ಗುಡ್ಡದ ಆಚೆ ಮಂಜಿನ ಮನೆಯಿದೆಯೇ? ಇದೆ ಎಂದೆ ಮಗನ ಬಳಿ.ಲ್ಯುಸರ್ನ್ ಸರೋವರದ ಸುತ್ತ ಕಾಣುತ್ತಿದ್ದ ರೆಗಿ ಮತ್ತು ಪಿಲಾಟಸ್ ಬೆಟ್ಟಗಳನ್ನು ನೋಡುತ್ತಾ ನೋಡುತ್ತ…
    ಏನು ಅಂದ
    ಎಂತಹ ಚಂದದ
    ಸಾಲುಗಳು
    ಮನವ ಹಗುರಾಗಿಸಿ
    ಅಲ್ಲೇ ತಿರುಗಾಡಿದ ಹಾಗೆ,
    ವರ್ಡ್ಸ್ವ ವರ್ತ್ ನ
    ಕವನ ಓದಿದ ಹಾಗೆ.
    ಮನವ ಮುದಗೊಳಿಸಿದ್ದಕ್ಕಾಗಿ
    ಧನ್ಯವಾದಗಳು

  3. ಅಪರ್ಣ ರಾವ್

    ತಂಪಾದ ದಾರಿಯಲ್ಲಿ ಹೀಗೆ ಪಕ್ಕದ ಓಣಿ ಯಲ್ಲಿ ಕರೆದೊಯ್ದಂತೆ ನಮ್ಮನ್ನೆಲ್ಲ ಸಲೀಸಾಗಿ ಸರಳವಾಗಿ ಡ್ರೀಮ್ನಲೋಲಿ ಸುತ್ತಾಡಿಸಿದ್ರಿ ಜಯಲಕ್ಷ್ಮಿ. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading