ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಪ್ರಸನ್ನ ಸಂತೆಕಡೂರು

‘ನೂರು ಸಿಂಹಾಸನಗಳು’ ಮಲಯಾಳಂ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದವಾಗಿರುವ ಒಂದು ಕಿರು ಕಾದಂಬರಿ. ಇದರ ಮೂಲ ಲೇಖಕರು ಜಯಮೋಹನ್ ಅವರು, ಇದು ಐ.ಎ.ಎಸ್. ಅಧಿಕಾರಿಯೊಬ್ಬರ ಆತ್ಮಕಥೆ.

ಇದನ್ನು ಕನ್ನಡಕ್ಕೆ ಅನುವಾದ ಮಾಡಿರುವವರು ಶಿವಮೊಗ್ಗದಲ್ಲಿ ನೆಲೆಸಿರುವ ಕೆ. ಪ್ರಭಾಕರನ್ ಅವರು. ಮಲಯಾಳಂ ಸಾಹಿತ್ಯ ಕನ್ನಡ ಸಾಹಿತ್ಯದಷ್ಟೇ ಬಹೂತೋಮುಖವಾಗಿ ಬೆಳೆದು ಬಹುದೂರ ವ್ಯಾಪಿಸಿದೆ.

ಒಮ್ಮೆ ತಿರುವಂತರಪುರದಲ್ಲಿ ಜರುಗುತ್ತಿದ್ದ ಸಾಹಿತ್ಯ ಸಮ್ಮೇಳನದಲ್ಲಿ ಅದರ ಆಯೋಜಕರು ಕೇರಳದ ದೊಡ್ಡ ಸಾಹಿತಿಯೊಬ್ಬರನ್ನು ಪರಿಚಯಿಸುತ್ತ ಇವರು ಲಿಯೋ ಟಾಲ್ ಸ್ಟಾಯ್ ಮಟ್ಟದ ಬಹುದೊಡ್ಡ ಲೇಖಕರು ಎಂದು ಪರಿಚಯಿಸಿ ನಿಮ್ಮ ಕನ್ನಡದಲ್ಲಿ ಈ ರೀತಿ ಲೇಖಕರು ಇದ್ದಾರೆಯೇ ಎಂಬ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದರಂತೆ.

ಅದೇ ವೇದಿಕೆಯಲ್ಲಿದ್ದ ಕನ್ನಡದ ಹೆಸರಾಂತ ಲೇಖಕ ಶಂಕರ ಮೊಕಾಶಿ ಪುಣೇಕರರು ನಮ್ಮಲ್ಲೂ ಲಿಯೋ ಟಾಲ್ ಸ್ಟಾಯ್ ಮಟ್ಟದ ಬಹುದೊಡ್ಡ ಲೇಖಕರು ಇದ್ದಾರೆ ಅವರ ಹೆಸರು ಬಿ. ಪುಟ್ಟಸ್ವಾಮಯ್ಯ ಎಂದು ತಿಳಿಸಿದರಂತೆ. ‘ಕ್ರಾಂತಿ ಕಲ್ಯಾಣ’ ಕಾದಂಬರಿ ಬರೆದ ಬಿ. ಪುಟ್ಟಸ್ವಾಮಯ್ಯನವರು ಸಾಹಿತ್ಯ ಅಕಾಡೆಮಿ ಮತ್ತು ನಾಟಕ ಅಕಾಡೆಮಿ ಎರಡರ ಪ್ರಶಸ್ತಿಯನ್ನು ಪಡೆದವರು.

ಗುಬ್ಬಿ ಕಂಪನಿಯ ಹಲವಾರು ಯಶಸ್ವಿ ನಾಟಕಗಳನ್ನು ಬರೆದವರು ಕೂಡ ಅವರೇ ಆಗಿದ್ದರು. ಜೊತೆಗೆ ಪ್ರಜಾವಾಣಿ ದಿನಪತ್ರಿಕೆಯ ಮೊದಲ ಸಂಪಾಕರಾಗಿದ್ದರು. 

ನಮ್ಮ ಕನ್ನಡದ ಆಲನಹಳ್ಳಿ ಶ್ರೀಕೃಷ್ಣರ ಕಾದಂಬರಿಗಳು, ಅನಂತಮೂರ್ತಿಯವರ ‘ಸಂಸ್ಕಾರ’, ಇತ್ತೀಚಿನ ವಿವೇಕ್ ಶಾನಭಾಗರ ‘ಘಾಚರ್ ಘೋಚರ್’ ಮಲಯಾಳಂ ಭಾಷೆಯಲ್ಲಿ ಬಹಳ ಪ್ರಸಿದ್ದಿ ಪಡೆದಿವೆ. ವೈಕಂ ಮಹಮದ್ ಬಷೀರ್, ಎಂ.ಟಿ. ವಾಸುದೇವ ನಾಯರ್, ಕಮಲಾ ದಾಸ್ ಕನ್ನಡದಲ್ಲಿಯೂ ತುಂಬಾ ಪ್ರಖ್ಯಾತರಾಗಿದ್ದಾರೆ.

ಕನ್ನಡದಲ್ಲಿ ಇಂದಿಗೂ ಅವರಿಗೆ ಅಪಾರವಾದ ಅಭಿಮಾನಿಗಳಿದ್ದಾರೆ. ಮಲಯಾಟ್ಟೂರು ರಾಮಕೃಷ್ಣನ್ ಅಯ್ಯರ್ ಎಂಬ ತಮಿಳು ಮೂಲದ ಐ.ಎ.ಎಸ್. ಅಧಿಕಾರಿಯಾಗಿದ್ದ ಮತ್ತು ಮಲಯಾಳಂ ಲೇಖಕರಾಗಿದ್ದ ಅವರ ಆತ್ಮಚರಿತ್ರೆಯಾಧಾರಿತ ಕಾದಂಬರಿ ‘ಬೇರುಗಳು’ ಕರ್ನಾಟಕದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪಠ್ಯ ಪುಸ್ತಕವಾಗಿತ್ತು.

ಇಷ್ಟೇ ಅಲ್ಲದೆ ಕನ್ನಡನಾಡಿನ ಭೂ ಭಾಗವೇ ಆಗಿದ್ದ ಕಾಸರಗೋಡು ಭಾಷಾವಾರು ಪ್ರಾಂತ್ಯ ವಿಂಗಡನೆಯ ವೇಳೆ ಕೇರಳ ರಾಜ್ಯಕ್ಕೆ ಸೇರಿಕೊಂಡಿದ್ದರೂ ಅಲ್ಲಿನ ಕಲೆ, ಸಾಹಿತ್ಯ ಇಂದಿಗೂ ಕನ್ನಡದ್ದೇ ಆಗಿದೆ.

ಅಖಂಡ ಕರ್ನಾಟಕದ ಮಹಾಲೇಖಕ ಮಹಾಕವಿ, ಹಿರಿಯ ಸಾಹಿತಿಯಾಗಿದ್ದ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿದ್ದ ಕಯ್ಯಾರ ಕಿಞ್ಞಣ್ಣ ರೈಯವರು ತಮ್ಮ ಬದುಕಿನ ಉದ್ದಕ್ಕೂ ಕಾಸರಗೋಡನ್ನು ಕರ್ನಾಟಕದ ಜೊತೆ ವಿಲೀನೀಕರಣ ಮಾಡಬೇಕೆಂದು ಅದರ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ, ನಿರಂತರವಾಗಿ ದುಡಿದವರು ಅಲ್ಲಿಯೇ ತಮ್ಮ ಕೊನೆ ಉಸಿರೆಳೆದರು.

ರಾಷ್ಟ್ರಕವಿ ಗೋವಿಂದ ಪೈಗಳು, ಕೆ.ವಿ. ತಿರುಮಲೇಶರು, ಸಾರಾ ಅಬೂಬಕ್ಕರರು ಇಂದಿನ ಕಾಸರಗೋಡು ಜಿಲ್ಲೆಯಲ್ಲಿಯೇ ಜನಿಸಿದವರು. ನಿರಂಜನರ ಹೆಸರಾಂತ ಕಾದಂಬರಿ “ಚಿರಸ್ಮರಣೆ” ಮತ್ತು ಭಾರತೀಸುತರ “ಎಡಕಲ್ಲು ಗುಡ್ಡದ ಮೇಲೆ” ಕಾದಂಬರಿಯಲ್ಲಿಯೂ ಕೂಡ ಕೇರಳ ಕರ್ನಾಟಕದ ಗಡಿಭಾಗಗಳು ಬರುತ್ತವೆ. 

ಇದೆ ಅಲ್ಲದೆ ಕೆಳದಿ ಅರಸರು ಕಟ್ಟಿಸಿರುವ ಕೋಟೆಗಳು, ದೇವಾಲಯಗಳು ಇಂದಿಗೂ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡತನವನ್ನು ಸಾರುತ್ತ ನಿಂತಿವೆ. ಕೆಳದಿ ಶಿವಪ್ಪ ನಾಯಕ ಕಟ್ಟಿಸಿದ ಬೇಕಲ್ ಕೋಟೆ ಇಂದಿಗೂ ಅಪಾರ ಮಟ್ಟದಲ್ಲಿ ಜನರನ್ನು ಆಕರ್ಷಿಸುತ್ತಿದೆ.

ಇದು ಏನೇ ಇದ್ದರೂ ಸಾಹಿತ್ಯಕ್ಕೆ ಭಾಷೆಯ ಹಂಗಿಲ್ಲ. ರಷ್ಯಾದ ಲಿಯೋ ಟಾಲ್ ಸ್ಟಾಯ್ ನಮ್ಮ ಮಹರ್ಷಿಗಳಲ್ಲಿ ಒಬ್ಬನು ಎಂದು ನಾವು ಹೇಳಬಹುದು.

ಆಂಗ್ಲ ಭಾಷೆಯ ನಾಟಕಗಾರ ವಿಲಿಯಂ ಷೇಕ್ಸ್‌ಪಿಯರ್ ನಮ್ಮ ಕನ್ನಡದ ನಾಟಕಗಾರನೇ ಎಂಬುವಷ್ಟರ ಮಟ್ಟಿಗೆ ಅವನ ನಾಟಕದ ಪಾತ್ರಗಳು ನಮಗೆ ಚಿರಪರಿಚಿತ. ರೋಮಿಯೊ ಜೂಲಿಯೆಟ್ ಷೇಕ್ಸ್‌ಪಿಯರ್ ಮಹಾಕವಿಯ ಅತಿ ಮಹತ್ವದ ನಾಟಕಗಳಲ್ಲಿ ಒಂದು ಎಂದು ಹೇಳಬಹುದು.

ರೋಮಿಯೊ ಜೂಲಿಯೆಟ್ ಹೆಸರು ಕೇಳಿದರೆ ನಮ್ಮಲ್ಲೇ ಯಾರೋ ಪ್ರೇಮಿಗಳ ಹೆಸರನ್ನು ಕೇಳಿದ ಹಾಗೆ ಆಗುತ್ತದೆ. ಸಾಹಿತ್ಯದ ಅಭಿಮಾನಿಗಳಿಗೆ ಜರ್ಮನ್ ಭಾಷೆಯ ಕಾಫ್ಕ, ಫ್ರೆಂಚ್ ಭಾಷೆಯ ಕಮೂ, ಅಮೇರಿಕಾದ ಹೆಮಿಂಗ್ವೇ,, ಜಪಾನಿ ಭಾಷೆಯ ಮುರಾಕಮಿ  ನಮ್ಮವರು ಎಂಬ ಭಾವ ಮೂಡುತ್ತದೆ.

ಆಗಾಗಿ ಸಾಹಿತ್ಯಕ್ಕೆ ಭಾಷೆಯ ಹಂಗಿಲ್ಲ. ಅದು ಪ್ರಾಂತ್ಯ ಪ್ರಾಂತ್ಯಗಳ ದೇಶ ದೇಶಗಳ ಗಡಿಯನ್ನು ದಾಟಿ ಓದುಗರನ್ನು ತಲುಪುತ್ತದೆ.

ಈ ಕಿರು ಕಾದಂಬರಿಯ ಮೂಲ ನಿರೂಪಕ ತೀರಾ ಬಡತನದಿಂದ ಬಂದು ಓದಿ ಸಾಧಿಸಿದವನು (ಒಬ್ಬ ಐ.ಎ.ಎಸ್. ಅಧಿಕಾರಿ). ಒಬ್ಬ ಶ್ರೀಮಂತ ಕುಟುಂಬದ ಅಥವಾ ಚೆನ್ನಾಗಿ ಓದಿಕೊಂಡ ಮೇಲ್ಜಾತಿಯ ಮನೆಯಿಂದ ಬಂದು ಐ.ಎ.ಎಸ್. ಮಾಡುವುದು, ಅಥವಾ ಒಳ್ಳೆಯ ಅಧಿಕಾರಿಯಾಗುವುದು, ಅಥವಾ ಬದುಕಿನಲ್ಲಿ ಉನ್ನತ ಸಾಧನೆ ಮಾಡುವುದು ಅಷ್ಟೇನೂ ಕಷ್ಟದ ಕೆಲಸವಲ್ಲ.

ಬದುಕಿನಲ್ಲಿ ಯಾವ ಬೆಂಬಲವೂ ಇಲ್ಲದೆ ವ್ಯಕ್ತಿ ತನ್ನ ವೈಯುಕ್ತಿಕ ಹೋರಾಟದ ಮೂಲಕ ಸಾಧನೆ ಮಾಡಿದರೆ ಅದು ಮಹಾ ಸಾಧನೆ ಎಂದು ಹೇಳಬಹುದು. ಅದರಲ್ಲೂ ಸಮಾಜದಿಂದ ತಿರಸ್ಕರಿಸಲ್ಪಟ್ಟ, ತೀರಾ ಕೆಳಮಟ್ಟದ, ಅವರನ್ನು ಮುಟ್ಟಿಸಿಕೊಳ್ಳುವುದೇ ಪಾಪ ಎಂದು ದೂಡಲ್ಪಟ್ಟ ಜಾತಿಯಿಂದ ಬಂದು ಸ್ವಪ್ರಯತ್ನದಿಂದ ಐ.ಎ.ಎಸ್. ಅಧಿಕಾರಿಯಾದರೆ ಅದು ನಿಜವಾದ ಸಾಧನೆ. ಅದು ಎಲ್ಲರೂ ಹೆಮ್ಮೆ ಪಡುವಂತದ್ದು.

ಸಮಾಜದಿಂದ ತುಳಿಯಲ್ಪಟ್ಟ ಅತೀಯಾಗಿ ಹಿಂದುಳಿದ ವರ್ಗದ ಭಿಕ್ಷುಕಿ ಮಹಿಳೆಯೊಬ್ಬಳಿಗೆ ಮಗುವಾಗಿ ಜನಿಸಿದ ಕಥಾನಾಯಕ ಸಮಾಜ ಸುಧಾರಕರಾಗಿದ್ದ ನಾರಾಯಣ ಗುರುಗಳು ಸ್ಥಾಪಿಸಿದ ಆಶ್ರಮವೊಂದರಲ್ಲಿ ಕಿರಿಯ ಗುರುಗಳೊಬ್ಬರ ಸಹಾಯದಿಂದ ವಿದ್ಯೆ ಕಲಿತು ಸಿವಿಲ್ ಸರ್ವೀಸ್‍ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಒಬ್ಬ ದೊಡ್ಡ ಐಎಎಸ್ ಅಧಿಕಾರಿಯ ದುರಂತ ಬದುಕಿನ ನೋವಿನ ವ್ಯಥೆಯ ಕಥೆಯನ್ನು ಈ ಕಾದಂಬರಿ ತುಂಬಾ ಚೆನ್ನಾಗಿ ಚಿತ್ರಿಸಿದೆ ಎಂದು ಹೇಳಬಹುದು.

ಇದು ಆತ್ಮ ಕತೆಯಾಗಿದ್ದರೂ ಈ ಕತೆಗೆ ನಿರೂಪಕರೂ ಮಾತ್ರ ಲೇಖಕ ಜಯಮೋಹನ್ ಅವರು ಎಂದು ಹೇಳಬಹುದು.

ಬಾಲ್ಯದ ಬಡತನದ ದಿನಗಳಲ್ಲಿ ಭಿಕ್ಷುಕಿ ತಾಯಿಯೊಂದಿಗೆ ಆಹಾರಕ್ಕಾಗಿ ತಿರುವನಂತಪುರದ ಮುಖ್ಯ ರಸ್ತೆಯ ಮನೆಯ ಹಿಂದಿನ ಚರಂಡಿ ಅಥವಾ ಶೌಚದ ಮನೆಯ ಮಲ ಮೂತ್ರಗಳನ್ನು ತಲೆಯ ಮೇಲೆ ಹೊತ್ತು ಸಾಗಿಸಲು ಭಂಗಿ ಜನರಿಗಾಗಿ ನಿರ್ಮಿಸಿದ  ರಸ್ತೆಯಲ್ಲಿ ಅಲೆದಾಡುತ್ತಾ ಹಸಿವು ತಾಳಲಾರದೆ ಅನ್ನ, ಅನ್ನ ಎಂದು ಬೊಬ್ಬಿಡುತ್ತ ಕಳೆದ ದಿನಗಳ ಬದುಕಿನ ನೋವಿನ ಚಿತ್ರಣದ ಜೊತೆಗೆ ಇಂದಿನ ಆಧುನಿಕ ಐ.ಎ.ಎಸ್. ಅಧಿಕಾರಿಯ ಐಷಾರಾಮಿ ದಿನಗಳನ್ನು ತುಲನೆ ಮಾಡುತ್ತ ತನ್ನ ಮತ್ತು ತನ್ನ ತಾಯಿಯ ಮತ್ತು ತನ್ನ ಜನರ ಬದುಕಿನ ನೋವಿನ ದಿನಗಳನ್ನು ನೆನಪಿಸಿಕೊಂಡು ಸಮಾಜ ಸೃಷ್ಟಿಸಿದ ಜಾತಿ ವ್ಯವಸ್ಥೆಯ ಬಗ್ಗೆ ಅಸಮಾಧಾನಗೊಂಡು ಕಥಾನಾಯಕ ನರಳುವ ಒಂದು ಹೃದಯಸ್ಪರ್ಶಿ ಚಿತ್ರಣ ಇಲ್ಲಿದೆ.

ದೊಡ್ಡ ಅಧಿಕಾರಿಯಾದರೂ ಜಾತಿ ವ್ಯವಸ್ಥೆ ಎಂಬ ವಿಷವೃಕ್ಷವನ್ನು ಕಡಿಯಲು ಒಂದು ಕುರ್ಚಿ ಸಾಲದು, ಆ ವಿಷವೃಕ್ಷಕ್ಕೆ ಕೋಟಿ ಬೇರುಗಳು ಮೂಡಿವೆ ಅವನ್ನು ಕಡಿಯಲು ಒಂದು ಸಿಂಹಾಸನ ಸಾಲದು ನೂರು ಸಿಂಹಾಸನಗಳೇಬೇಕೆಂದು ಸಾರುವ ಕಥನ ಇದಾಗಿದೆ.

ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಬೇಕು. ಮಲ ಮೂತ್ರಗಳನ್ನು ತಲೆಯ ಮೇಲೆ ಹೊತ್ತು ಸಾಗಿಸುತ್ತಿದ್ದ ಭಂಗಿ ಜನ ಅದೇ ರಸ್ತೆಯಲ್ಲಿ ಬಂದು ಅನ್ನಕ್ಕಾಗಿ ಭಿಕ್ಷೆ ಬೇಡಬೇಕಿತ್ತು. ಅವರೇನಾದರೂ ಮನೆಯ ಮುಂದಿನ ಮುಖ್ಯ ರಸ್ತೆಯಲ್ಲಿ ಬಂದರೆ ಅವರಿಗೆ ಕಲ್ಲಿನಿಂದ ಹೊಡೆದು ಓಡಿಸುತ್ತಿದ್ದ ದರಿದ್ರ ವ್ಯವಸ್ಥೆ ತಿರುವಾಂಕೂರು ಪ್ರಾಂತ್ಯದಲ್ಲಿ ಇತ್ತು.

ಇಲ್ಲಿ ಇನ್ನೊಂದು ವಿಷಯವನ್ನು ನಾವು ಗಮನಿಸಬೇಕು, ತಿರುವಾಂಕೂರು ಅರಸು ಮನೆತನಕ್ಕೆ ಸೇರಿದ್ದ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಜಗತ್ತಿನ ಅತ್ಯಂತ ಶ್ರೀಮಂತ ದೇವಸ್ಥಾನ. ಒಂದು ಪ್ರಾಂತ್ಯದ ಒಂದು ದೇವಸ್ಥಾನವೇ ಅಷ್ಟು ಸಿರಿತನದಿಂದ ಕೂಡಿರುವಾಗ ಎಲ್ಲಾ ದೇವಲಾಯಗಳು ಅರಮನೆಗಳು ಎಷ್ಟು ಶ್ರೀಮಂತವಾಗಿದ್ದವೂ ಎಂದು ನಾವೇ ಊಹಿಸಿಕೊಳ್ಳಬೇಕು.

ಇನ್ನೊಂದು ಕಡೆ ತಿರುವಾಂಕೂರು ಅರಸು ಮನೆತನಕ್ಕೆ ಸೇರಿದ್ದ ಹೆಸರಾಂತ ಚಿತ್ರಕಾರ ರಾಜಾ ರವಿವರ್ಮ ಅವರು ಕೂಡ ತಮ್ಮ ಚಿತ್ರಕಲೆಯಲ್ಲಿ ಎಲ್ಲಿಯೂ ಈ ಭಂಗಿ ಜನ ಅಥವಾ ಸಮಾಜದಲ್ಲಿ ತುಳಿಯಲ್ಪಟ್ಟ ಜನರ ಜೀವನವನ್ನು ಚಿತ್ರಿಸಿಲ್ಲ. ಅವರು ಮೊರೆಹೋಗಿದ್ದು ಪುರಾಣದ ಬಣ್ಣ ಬಣ್ಣದ ಪಾತ್ರಗಳಿಗೆ ಎಂದು ಹೇಳಬಹುದು. 

ಆ ಕಾರಣದಿಂದ ದಕ್ಷಿಣ ಕೇರಳದಲ್ಲಿ ಇತ್ತೀಚಿನ ದಿನಗಳವರೆಗೂ ಈ ಭಂಗಿ ಜನರ ಬದುಕು ಹೀಗೆ ಇತ್ತು. ಕಾದಂಬರಿಯಲ್ಲಿ ಬರುವ ತಾಯಿಯೂ ಕೂಡ ತನ್ನ ಮಗ ಐ.ಎ.ಎಸ್. ಅಧಿಕಾರಿಯಾಗಿದ್ದರೂ ಅದು ಅವಳಿಗೆ ಅರ್ಥವಾಗುವುದಿಲ್ಲ. ತನ್ನ ಸೊಸೆ ಯಾವುದೋ ವಶೀಕರಣ ಮಾಡಿ ತನ್ನ ಮಗನನ್ನ ಈ ಬಂಗಲೆಯಲ್ಲಿ ಕೂಡಿ ಹಾಕಿದ್ದಾಳೆ ಎಂದು ಭಾವಿಸುತ್ತಾಳೆ.

ಅವಳನ್ನು ಒಬ್ಬ ರಾಕ್ಷಸಿ ಅಂದುಕೊಳ್ಳುತ್ತಾಳೆ. ಕೆಟ್ಟ ಕೊಳಕು ಭಾಷೆಯಲ್ಲಿ ಬಯ್ಯುತ್ತಾಳೆ. ಮಗ ಸೊಸೆ ಒಳ್ಳೆಯ ವಸ್ತ್ರಗಳನ್ನು ಊಟವನ್ನು ಕೊಟ್ಟರೆ ಅದು ಅವಳ ಬದುಕಿಗೆ ಸರಿಹೊಂದುವುದಿಲ್ಲ. ಬದುಕನ್ನೆಲ್ಲಾ ಕೊಳಚೆಯಲ್ಲಿ ಕಳೆದವಳಿಗೆ ಈ ಆಧುನಿಕ ಬಂಗಲೆ ಸೆರೆಮನೆಯಾಗಿ ಕಾಣುತ್ತದೆ. ಒಳ್ಳೆಯ ತಟ್ಟೆಯಲ್ಲಿ ಕೊಟ್ಟ ಊಟ ಕೂಡ ರುಚಿಸುವುದಿಲ್ಲ.

ಮಗ ತನ್ನ ಕಚೇರಿಯ ಜೀಪಿನಲ್ಲಿ ಓಡಾಡುವಾಗ ರಸ್ತೆಯಲ್ಲಿ ಭಿಕ್ಷೆ ಬೇಡುವ ತನ್ನ ತಾಯಿಯನ್ನು ಕಂಡರೆ ಹೇಗಾಗಬಹುದು? ಒಂದು ಜಿಲ್ಲೆಯ ಜಿಲ್ಲಾಧಿಕಾರಿಯ ತಾಯಿ ಅದೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅನಾಥವಾಗಿ ಸಾಯುವ ಸ್ಥಿತಿ ಊಹಿಸಿಕೊಳ್ಳಲು ಸಾಧ್ಯವೇ? ಇದು ನಮ್ಮ ಕಾಲಘಟದಲ್ಲಿಯೇ ಬದುಕಿರುವ ಐ.ಎ.ಎಸ್. ಅಧಿಕಾರಿಯೊಬ್ಬರ ನೋವಿನ ಆತ್ಮಕಥೆ.

ಇದು ನಮ್ಮ ಆತ್ಮಸಾಕ್ಷಿಯನ್ನು ನಾವೇ ಅವಲೋಕನ ಮಾಡಿಕೊಳ್ಳುವಂತೆ ಮಾಡುವ ಕಾದಂಬರಿ. ಇಲ್ಲಿ ಕಥಾನಾಯಕ ಧರ್ಮಪಾಲ ದೊಡ್ಡ ಅಧಿಕಾರಿ ಆದರೆ ಅವನು ಕೆಳಜಾತಿಯವನು ಎಂಬ ಕಾರಣಕ್ಕಾಗಿ ಅವನ ಬದುಕಿನ ಮತ್ತು ಕಚೇರಿಯ ಎಲ್ಲಾ ಘಟನೆಗಳು ಬೇರೆಯವರಿಂದ ನಿರ್ದೇಶಿಸಲ್ಪಡುತ್ತವೆ.

ಹೆಚ್ಚು ಓದಿರುವ ಆಧುನಿಕ ಹೆಂಡತಿ ತನ್ನ ಗಂಡನ ಭಿಕ್ಷುಕಿ ತಾಯಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ? ಅದು ಭಿಕ್ಷುಕಿ ತಾಯಿ ಬದಲಾಗದಿದ್ದಾಗ? ಇದು ವೈಯುಕ್ತಿಕ ಬದುಕಿನ ವಿಪರ್ಯಾಸವಾದರೂ ಕೂಡ ಸಮಾಜದ ದುಷ್ಟತನವನ್ನು ಅಣಕಿಸುವ ವ್ಯಂಗ್ಯವಾಗಿಯೂ ಇಲ್ಲಿ ನಮಗೆ ಕಾಣುತ್ತದೆ.

ಈ ಎಲ್ಲಾ ಕಾರಣದಿಂದ ಇತ್ತೀಚೆಗೆ ಕೇರಳದ ಶ್ರೀಧನ್ಯ ಸುರೇಶ್ ಎಂಬ ಮೊತ್ತ ಮೊದಲ ಬಾರಿಗೆ ಗಿರಿಜನರ ಹುಡುಗಿಯೊಬ್ಬಳು ಐ.ಎ.ಎಸ್. ಪರೀಕ್ಷೆ ಪಾಸು ಮಾಡಿರುವುದು ಹೆಮ್ಮೆಯ ವಿಷಯ ಕೂಡ ಆಗಿದೆ.

ಐ.ಎ. ಎಸ್. ಅಧಿಕಾರಿಯೊಬ್ಬರ ಬದುಕಿನ ದುರಂತ ಕತೆಯನ್ನು ಅವರಿಂದಲೇ ಕೇಳಿ ಅದನ್ನು ಈ ಕಾದಂಬರಿಯನ್ನು ರೂಪ ಕೊಟ್ಟು ನಮ್ಮ ಮುಂದೆ ಇಟ್ಟಿರುವ ತಮಿಳು ಮತ್ತು ಮಲಯಾಳಂ ಎರಡು ಭಾಷೆಯಲ್ಲಿ ಹೆಸರಾಂತ ಲೇಖಕರಾಗಿರುವ ಶ್ರೀ ಜಯಮೋಹನ್ ಅವರಿಗೂ ಇದನ್ನು ಕನ್ನಡದ ಓದುಗರ ಮುಂದೆ ನೀಡಿರುವ ಅನುವಾದಕ ಶ್ರೀ ಕೆ. ಪ್ರಭಾಕರನ್ ಅವರಿಗೂ ಅವರ ಕಾರ್ಯವನ್ನು ಶ್ಲಾಘಿಸುತ್ತ ಅಭಿನಂದಿಸುತ್ತಿದ್ದೇನೆ.

20 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading