ಅಮಿತಾ ರವಿಕಿರಣ್
ಅದೇನು ನನಗೆ ಮೊದಲ ಕಾರ್ಯಕ್ರಮವಲ್ಲ , ಆದರೆ ನನ್ನ ಖುಷಿಗೆ ಕಾರಣವಿತ್ತು ಆ ಕಾರ್ಯಕ್ರಮದಲ್ಲಿ ಸಂಭಾವನೆ ಕೊಡುತ್ತಾರೆ ಎನ್ನುವ ವಿಷಯ ನನಗೆ ಗೊತ್ತಾಗಿತ್ತು ೧೦ ನೆ ತರಗತಿ ಓದುತ್ತಿದ್ದ ನನಗೆ ಆ ಹಣದಲ್ಲಿ ಏನೇನು ಮಾಡಬಹುದು ಅನ್ನುವ ಕನಸುಗಳೇ ಮನದ ತುಂಬಾ .. ಕಾರ್ಯಕ್ರಮ ಮುಗೀತು ಎಲ್ಲರು ಮೆಚ್ಚಿ ಹೊಗಳಿಕೆಯು ಆಯಿತು , ಇನ್ನು ಆ ಬಣ್ಣದ ಲಕೋಟೆ ಸಾಥಿ ಮಾಡಿದವರ ಕೈಗೆ ಬಂದು ಸೇರಿಯೂ ಆಯ್ತು, ಇನ್ನೇನು ನನ್ನ ಸರದಿ ಅನ್ನುವಾಗ ಗಾಜಿನ ಹಿಂದೆ ಕುಳಿತ ಒಂದು ಪುಟ್ಟ ಗುಬ್ಬಿಯಿರುವ ನೆನಪಿನ ಕಾಣಿಕೆ ಅನ್ನೋ ದೊಡ್ಡ ಅಕ್ಷರಗಳೊಂದಿಗೆ ಕೈಗಿತ್ತರು , ಬಂದ ಸಿಟ್ಟು ಅಷ್ತಿಷ್ಟಲ್ಲ.
ಮನೆಗೆ ಬಂದು ಅಮ್ಮನ ಹತ್ತಿರ ಅದೇ ಹೇಳುತ್ತಿದ್ದೆ ಆಗ ಬಂದ ಪಪ್ಪಾ ಹೇಳಿದ್ದು ” ಇಲ್ಲ ಬಿಡ ಬೇ.. ನಾನ ಹೇಳಿದ್ದೆ ನಮ್ಮ ಹುಡುಗೀಗ ರೊಕ್ಕದ ತಲಬ ಹಚ್ಚಬ್ಯಾಡ್ರಿ , ಇನ್ನು ಕಲಿಯೋದ ಬಹಳ ಐತಿ ..” ಇವರೇ ನನ್ನ ಪಪ್ಪಾ ಅವರ ಆಲೋಚನೆ ವಿಚಾರ ಎಲ್ಲವು ಭಿನ್ನ , ಸಂತನಾಗಬೇಕಿತ್ತು ತಪ್ಪಿ ಸಂಸಾರಿ ಆದ ಅನ್ನೋದು ನನ್ನೆಲ್ಲ ಬಂಧು ಬಂದವರು ಪಪ್ಪಾನ ಬಗ್ಗೆ ಹೇಳುವ ಮಾತು .

ಬೇರೆಯವರು ಹೆಣ್ಣುಮಕ್ಕಳಿಗೆ ಚಿನ್ನ ಮಾಡಿ ಭದ್ರತೆ ಮಾಡಿಡುವ ಸಂದರ್ಭದಲ್ಲಿ ಪಪ್ಪಾ ನಮಗೆ ಓದಿನ ಹುಚ್ಚು ಹತ್ತಿಸಿದ್ದ. ಏಳನೆ ಕ್ಲಾಸು ದಾಟುತ್ತಲೇ ಪಾಕೆಟ್ ಮನೀ ಕೊಡಲು ಶುರು ಮಾಡಿದ್ದ . ಕರೆಂಟು ಹೋದಾಗ ಅಂಗಳದಲ್ಲಿ ಚಾಪೆ ಹಾಸಿಕೊಂಡು ತೊಳಮೇಲೆ ಮಲಗಿಸಿಕೊಂಡು ಚಿಕ್ಕಿ ತಾರೆ , ವಿಶ್ವ , ಬ್ರಮ್ಹಾಂಡ ದ ಪರಿಕಲ್ಪನೆ ಕೊಟ್ಟಿದ್ದ ಪಪ್ಪಾ
ದೇವರೆಂದರೆ ಮೂರ್ತಿಯಲ್ಲ ಪ್ರಕೃತಿ ಎನ್ನುವ ಭಾವ ಬೆಳಗಿಸಿದ್ದ .
ಪಪ್ಪನ ಆಲೋಚನೆಗಳು ಪ್ರಸ್ತುತ ದಿನಮಾನಕೆ ಹೊಂದಿಕೆ ಆಗುವುದಿಲ್ಲ ಪ್ರೀತಿ ಮಮಕಾರ ನಂಬಿಕೆ ವಿಶ್ವಾಸ ಸಹಾಯ ಇವುಗಳಲ್ಲೇ ಖುಷಿ ಕಾಣುವಂತೆ ಅವ ರೂಪಿಸಿ ಕೊಟ್ಟಿದ್ದ ನನ್ನ ಮನಸ್ಸು ಈಗಿನ ತೋರಿಕೆಯ ಜಗತ್ತಿಗೆ ಎದುರುಗೊಂಡು ಎಷ್ಟೋ ಬಾರಿ ಜರ್ಜರ ಗೊಂಡಿದೆ . ಆದರೆ ನನಗೆ ಗೊತ್ತು ಒಳ್ಳೆಯದು ಯಾವಾಗಲು ಒಳ್ಳೆಯದೇ !!!!
ಪಪ್ಪನ ಬಗ್ಗೆ ಬರೆಯಲು ಕುಳಿತರೆ ಮುಗಿಯುವುದಿಲ್ಲ ಏಕೆಂದರೆ ನನ್ನ ಬದುಕು ಪಪ್ಪಾ . ದೇವರು ನಮಗೇ ಅಂತ ಕೊಟ್ಟ ಉಡುಗೊರೆ . ಇಂದು ನನ್ನ ಪಪ್ಪನ ಜನುಮದಿನ ಹಾಗೆಲ್ಲ ಹ್ಯಾಪಿ ಬರ್ತ್ ಡೇ ಅನ್ನೋದು ಅವನಿಗೆ ಇಷ್ಟ ವಾಗಲ್ಲ ಆದರೂ ಪಪ್ಪನಿಂದ ಸದ್ಯ್ಹದ ಮಟ್ಟಿಗೆ ಸಾವಿರಾರು ಮೈಲಿ ದೂರ ಇದ್ದೇನೆ ಹತ್ತಿರ ಇದ್ದಿದ್ದರೆ ಒಳ್ಳೆ ಪುಸ್ತಕ ಒಂದನ್ನು ಕೊಡುವ ರೂಡಿ …
ಈ ಬಾರಿ ಇಷ್ಟೇ ಹೇಳ್ತೇನೆ …
ಜನುಮದಿನದ ಶುಭಾಶಯ ಪಪ್ಪಾ .
ನಿನ್ನ
ಮಗಳು






kushi kodthu amitha .. esht preetiyiMda bardiddeeya …