ಜಗದೀಶ್ ಕೊಪ್ಪ
ಕಥೆಗಳಲ್ಲದೆ ತಮ್ಮ ಬಾಲ್ಯದ ನೆನಪುಗಳನ್ನು “ ಒಕ್ಕಲ ನೆನಪು” ಎಂಬ ಹೆಸರಿನಲ್ಲಿ ಪರಿಣಾಮಕಾರಿಯಾಗಿ ದಾಖಲಿಸಿ ಗ್ರಾಮೀಣ ಬದುಕಿನ ಸುಖ ಮತ್ತು ದುಃಖ ದುಮ್ಮಾನಗಳನ್ನು ಹಾಸ್ಯದ ಲೇಪನದೊಂದಿಗೆ ಕನ್ನಡಿಗರ ಮುಂದೆ ಇಟ್ಟಿರುವ ಕೇಶವ ರೆಡ್ಡಿ ಹಂದ್ರಾಳರು ಇದೀಗ ಅದರ ಮುಂದುವರಿದ ಭಾಗದಂತೆ “ ಮರೆತ ಭಾರತ” ಕೃತಿಯನ್ನು ನಮ್ಮ ಮುಂದೆ ಇಟ್ಟಿದ್ದಾರೆ.

ಇಂದಿನ ವರ್ತಮಾನದ ಆಧುನಿಕ ಜಗತ್ತಿನ ಹಲವರ ಪಾಲಿಗೆ ನನ್ನ ತಲೆಮಾರಿನ ಲೇಖಕರು ಗ್ರಾಮ ಭಾರತದ ಕುರಿತು ಮಾತನಾಡುವುದು ಸಿನಿಕತನವೆಂಬಂತೆ ತೋರುತ್ತಿದೆ. ಆದರೆ, ಗ್ರಾಮಭಾರತದ ಸಂಸ್ಕೃತಿಯೊಳಗೆ ಹುದುಗಿ ಹೋಗಿರುವ ತಾಯ್ತನದ ಬೇರಿನ ಪರಿಚಯವಿಲ್ಲದ ಹಾಗೂ ಮುಚ್ಚಿದ ಬಾಗಿಲ ಸಂಸ್ಕೃತಿಯೊಳಗೆ ಬೆಳೆದು ಬಂದಿರುವ ಎಂದಿಗೂ ಹೆತ್ತ ತಾಯಿಯ ಎದೆ ಹಾಲು ಕುಡಿಯದೆ, ಕೇವಲ “ಅಮುಲ್ ಬೇಬಿ ಪೌಡರ್ ನ ಹಾಲು ಕುಡಿದ ಅಮುಲ್ ಬೇಬಿಗಳು” ಮಾತ್ರ ಮಾತನಾಡಬಹುದಾದ ಮಾತುಗಳಿವು. ತಾಯಿಯ ಎದೆಹಾಲಿನೊಂದಿಗೆ, ನೆರೆಮನೆಯ ಸಾರು, ಮುದ್ದೆ ಅಷ್ಟೇ ಅಲ್ಲ, ನೀರು, ಬೆಂಕಿ, ಹೀಗೆ ಅವರ ಕಷ್ಟ ಸುಖಗಳನ್ನು ಸಹ ಹಂಚಿಕೊಂಡು ಬೆಳೆದ ಹಾಗೂ ಒಂದು ಸಮುದಾಯದ ನೋವನ್ನು ತನ್ನ ವೈಯಕ್ತಿಕ ನೋವೆಂದು ಪರಿಭಾವಿಸುವ ಗ್ರಾಮ ಸಂಸ್ಕøತಿಯಲ್ಲಿ ಬೆಳೆದು ಕಣ್ಣೆದುರು ಕಂಡವರ ನೋವಿಗೆ ಮುಲಾಮು ಆಗುವ ಅಥವಾ ಕಣ್ಣೀರಿಗೆ ಕರವಸ್ತ್ರವಾಗುವ ಹಂದ್ರಾಳರ ನಡೆಗಳಲ್ಲಾಗಲಿ ಅಥವಾ ನುಡಿಯಲ್ಲಿಯಾಗಲಿ ಯಾವುದೇ ಕೃತಿಮತೆಗಳಿಲ್ಲ ಏಕೆಂದರೆ, ಅವರು ಬೆನ್ನಿಗೆ ಕಟ್ಟಿಕೊಂಡು ಬೆಳೆದ ಗ್ರಾಮಭಾರತದ ಸಂಸ್ಕೃತಿ ಅವರ ಬದುಕಿನುದ್ದಕ್ಕೂ ಅವರ ಚಿಂತನೆಗಳ ಮೇಲೆ ಪ್ರಭಾವ ಬೀರಿರುವುದನ್ನು ಈ ಕೃತಿಯಲ್ಲದೆ ಅವರ ಎಲ್ಲಾ ಕೃತಿಗಳಲ್ಲು ನಾವು ಕಾಣಬಹುದು.
ಇಂದಿಗೂ ಕೂಡ ನಾಗರೀಕ ಜಗತ್ತಿಗೆ ಭಾರತದ ಹಳ್ಳಿಗಳ ಬಗ್ಗೆ ಒಂದು ರೀತಿಯ ಅಪನಂಬಿಕೆ ಮತ್ತು ಅನಾದರಗಳಿವೆ. ಅದೊಂದು ಮೌಡ್ಯ ಮತ್ತು ಅನಾಚಾರಗಳಿಂz ತುಂಬಿದ ಗೂಡು ಎಂಬ ಅಪಕ್ವ ಕಲ್ಪನೆಯಿದೆ. ಈ ದಿನಗಳಲ್ಲಿ ನಾವು ಕಾಣುತ್ತಿರುವ ಗ್ರಾಮಜಗತ್ತು ಜಾಗತೀಕರಣದ ಹೊಡೆತಕ್ಕೆ ನಲುಗಿ ವೃದ್ಧರ ಅನಾಥಶ್ರಮಗಳಂತೆ ಕಾಣುತ್ತಿರಬಹುದು ಆದರೆ, ಬದುಕಿನ ಲವಲವಿಕೆಯ ಮೂಲಧಾತುಗಳು, ಜೀವಪರ ತುಡಿತಗಳು, ಸಕಲೆಂಟು ಜೀವರಾಶಿಗಳಿಗೆ ಒಳಿತನ್ನು ಬಯಸುವ ಭಾವನೆಗಳು ಅದರ ಮಣ್ಣಿನಡಿ ಹೂತು ಹೋಗಿವೆ. ಇವುಗಳನ್ನು ನೋಡಲು ಹೊರಗಣ್ಣು ಸಾಲದು;ನಮ್ಮ ಒಳಗಣ್ಣನ್ನು ತೆರೆಯಬೇಕು. ಈ ಕಾರಣಕ್ಕಾಗಿ ನಮ್ಮ ದಾರ್ಶನಿಕ ಕವಿ ಕುವೆಂಪು ಅವರು ನಿರಂತರ ಆರು ದಶಕಗಳ ಕಾಲ ಮೈಸೂರಿನಲ್ಲಿ ನೆಲೆ ನಿಂತರೂ ಸಹ ಪ್ರತಿ ಕ್ಷಣ ತಾನು ಹುಟ್ಟಿ ಬೆಳೆದ ಮಲೆನಾಡನ್ನು ಧ್ಯಾನಿಸಿದರು.
‘ಹೋಗುವೆ ನಾ ಹೋಗುವೆ ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನರೂಢಿಗೆ
ಬೇಸರಾಗಿದೆ ಬಯಲು, ಹೋಗುವೆ ಕಣಿವೆಯ ಕಾಡಿಗೆ ;
ಹಸಿವು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ
ಎಂದು ಹಗಲಿರುಳು ಹಂಬಲಿಸಿದ್ದರು.
ಇಂತಹದ್ದೇ ಉತ್ಕಟ ಭಾವಗಳು ಗೆಳೆಯ ಕೇಶವರೆಡ್ಡಿ ಹಂದ್ರಾಳರ ಇಲ್ಲಿನ ಪ್ರತಿ ಲೇಖನದ ಪ್ರತಿ ಅಕ್ಷರಗಳಲ್ಲಿ ಎದ್ದು ಕಾಣುತ್ತವೆ. ಸರ್ಕಾರದ ಓರ್ವ ಹಿರಿಯ ಅಧಿಕಾರಿಯಾಗಿ ಕಳೆದ ಎರಡು ವರ್ಷಗಳಿಂದ ಶಿರಸಿಯ ಮಳೆ ಮತ್ತು ಹಸಿರು ಹಾಗೂ ನಿಸರ್ಗದ ವೈಭವದ ನಡುವೆ ಬದುಕುತ್ತಿರುವ ಹಂದ್ರಾಳ, ಶಿರಸಿಯ ಮಳೆಯ ಜೊತೆ ಬಯಲುಸೀಮೆಯ ವಿಶೇಷವಾಗಿ ತುಮಕೂರು ಜಿಲ್ಲೆಯ ಆಂಧ್ರಗಡಿಭಾಗದ ಮಧುಗಿರಿ ತಾಲ್ಲೂಕಿನ ತಮ್ಮ ಹಳ್ಳಿಯ ಮಳೆಯ ಅಭಾವದ ಬವಣೆಗಳನ್ನು ನೆನೆಯುತ್ತಾರೆ. ಬೇಸಿಗೆ ಬವಣೆಯ ದಿನಗಳು, ಕುಡಿಯಲು ನೀರಿಲ್ಲದೆ ಪರಿತಪಿಸುವ ದನಕರುಗಳು, ಬತ್ತಿ ಹೋದ ಕೆರೆಕುಂಟೆಗಳು, ಮಳೆಗಾಗಿ ಮಳೆರಾಯನನ್ನು ಪೂಜಿಸಿ ಪ್ರಾಥಿಸುವ ರೈತಾಪಿ ಜನರು ಎಲ್ಲರೂ ಅವರ ಸ್ಮೃತಿ ಪಟಲದ ಮೇಲೆ ಹಾದು ಹೋಗುತ್ತಾರೆ.
ಹಂದ್ರಾಳರ ಈ “ಮರೆತ ಭಾರತ” ಕೃತಿಯಲ್ಲಿ ಈವರೆಗೆ ಭಾರತದ ಅಕ್ಷರ ಜಗತ್ತಿನಲ್ಲಿ ದಾಖಲಾಗದೆ ಹಾಗೂ ನಾಗರೀಕ ಸಂಸ್ಕೃತಿಗೆ ಅಸ್ಪೃಶ್ಯರಂತೆ ಕಾಣುವ ಅನಕ್ಷರಸ್ಥ ಸಮುದಾಯದ ಪ್ರತಿನಿಧಿಗಳು ನಾಯಕರಾಗಿ ವಿಜೃಂಭಿಸಿದ್ದಾರೆ. ಹಳ್ಳಿ ಹಳ್ಳಿಗಳನ್ನು ಅಲೆಯುವ ಬಳೆಗಾರ, ನೀರಗಂಟಿ, ಕುರಿಕಾಯುವವ, ಆಲೆಮನೆಯ ಕೂಲಿಯಾಳು, ಸೂಲಗಿತ್ತಿ, ಕೃಷಿಕೂಲಿ ಕಾರ್ಮಿಕರಾದ ದಲಿತ ಹೆಣ್ಣು ಮಕ್ಕಳು, ಅವರ ಬೇಸಾಯದ ನಾಟಿ ಪದಗಳು, ಸೋಬಾನೆ ಪದಗಳು ಎಲ್ಲರೂ, ಎಲ್ಲವೂ ಇಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿವೆ ಮತ್ತು ಪಡೆದುಕೊಂಡಿದ್ದಾರೆ.
( ಗೆಳೆಯ ಕೇಶವರೆಡ್ಡಿಯವರ “ ಮರೆತ ಭಾರತ “ ಕೃತಿಗೆ ಬರೆದ ಪ್ರಸ್ತಾವನೆಯ ಮಾತುಗಳು)






Pustaka elli siguttade