ಇದು ಬಾಲ್ಯದ ಒಂದು ನೆನಪು…
ಡಾ.ಎನ್ ಜಗದೀಶ್ ಕೊಪ್ಪ
ನಿನ್ನೆ ಬೆಳಗಿನ ಜಾವ 5 -30 ರ ಸಮಯದಲ್ಲಿ ಧಾರವಾಡದ ರೈಲ್ವೆ ನಿಲ್ದಾಣದ ಕೊನೆಯ ಪ್ಲಾಟ್ ಪಾರಂ ನಲ್ಲಿ ನಾನು ಮತ್ತು ನನ್ನ ಪತ್ನಿ ಇಬ್ಬರೂ ವಾಕಿಂಗ್ ಮಾಡುತ್ತಿದ್ದೆವು. ರೈಲ್ವೆ ನಿಲ್ದಾಣದ ಹಿಂಬದಿಯಲ್ಲಿ ನಮ್ಮ ಮನೆಯಿದ್ದು, ಪ್ಲಾಟ್ ಪಾರಂ ಸುಮಾರು ಒಂದು ಕಿಲೋಮೀಟರ್ ಉದ್ದವಿರುವುದರಿಂದ ನಾಲ್ಕು ಬಾರಿ ಅದನ್ನು ಸುತ್ತಿ ಹಾಕಿಬರುತ್ತೇವೆ. ವಾಕ್ ಮಾಡುತ್ತಿದ್ದ ವೇಳೆ, ದೂರದಲ್ಲಿ ಮೀರಜ್ನಿಂದ ಬರುತ್ತಿದ್ದ ಪ್ಯಾಸಂಜರ್ ರೈಲು ಕಾಣಿಸಿತು. ಅದನ್ನು ನೋಡಿದ ಕೂಡಲೆ, ಬಾಲ್ಯದ ಘಟನೆಯೊಂದು ನೆನಪಾಯಿತು.
ಅದು 1966-67 ರ ಸಮಯ. ನನ್ನಪ್ಪ ಪ್ರತಿವರ್ಷ ಯುಗಾದಿ ಮತ್ತು ಮಹರ್ನವಮಿ ಹಬ್ಬದ ಸಂದರ್ಭದಲ್ಲಿ ಮನೆಯ ಮಂದಿಗೆ ಬಟ್ಟೆ ತರಲು ಬೆಂಗಳೂರಿಗೆ ಹೋಗುತ್ತಿದ್ದರು. ನನಗಾಗ ಹತ್ತು ಅಥವಾ ಹನ್ನೊಂದು ವರ್ಷ. ನಾನು ಕೂಡ ಅಪ್ಪನ ಜೊತೆ ಹೋಗುತ್ತಿದ್ದೆ. ಆ ದಿನಗಳಲ್ಲಿ ಮದ್ದೂರಿನಿಂದ ಬೆಳಿಗ್ಗೆ ಏಳು ಗಂಟೆ ಒಂದು ಪ್ಯಾಸೆಂಜರ್ ರೈಲು, ಬೆಂಗಳೂರಿಗೆ ಹೊರಡುತ್ತಿತ್ತು. ಮತ್ತೆ ಅದೇ ರೈಲು ಸಂಜೆ ಆರುಗಂಟೆಗೆ ಬೆಂಗಳೂರು ಬಿಟ್ಟು ರಾತ್ರಿ ಒಂಬತ್ತು ಗಂಟೆಗೆ ಮದ್ದೂರು ನಿಲ್ದಾಣ ತಲುಪುತ್ತಿತ್ತು. ಮದ್ದೂರಿನಲ್ಲಿ ರೈಲು ಹೊರಡುವ ಮುಂಚೆ ಇಂಜಿನ್ ಗೆ ಅಳವಡಿಸಲಾಗಿದ್ದ ಕೊಳವೆಯೊಂದರ ಮೂಲಕ ಬರುತ್ತಿದ್ದ ಬಿಸಿ ನೀರನ್ನು ಸಿಬ್ಬಂದಿ ಕುಟುಂಬದವರು ಬಿಂದಿಗೆ, ಬಕೇಟ್ ಮೂಲಕ ಸಂಗ್ರಹಿಸಿಕೊಂಡು ಸ್ನಾನಕ್ಕೆ ಉಪಯೋಗಿಸುತ್ತಿದ್ದರು. ನಾನು ಇಂಜಿನ್ ಹತ್ತಿರ ಹೋಗಿ, ಕುಕ್ಕರುಗಾಲಿನಲ್ಲಿ ಕುಳಿತು, ರೈಲಿನ ಇಂಜಿನ್, ಅದರ ಒಳಗೆ ಡ್ರೈವರ್ ಮುಂದೆ ಒಲೆಯಂತೆ ಇರುತ್ತಿದ್ದ ಕಿಂಡಿಯಲ್ಲಿ ನಿಗಿ ನಿಗಿ ಉರಿಯುತ್ತಿದ್ದ ಬೆಂಕಿ ಮತ್ತು ಅದರ ಕಬ್ಬಿಣದ ಗಾಲಿಗಳು ಹಳಿಗಳಿಗೆ ಅಂಟಿಕೊಂಡಂತೆ ಇರುತ್ತಿದ್ದ ಬಗೆಯನ್ನು ನೋಡಿ ವಿಸ್ಮಯಗೊಳ್ಳತ್ತಿದ್ದೆ.
1960 ರ ದಶಕದಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣ ಈಗಿನ 5 ಮತ್ತು 6 ನೇ ಪ್ಲಾಟ್ ಪಾರಂ ಇರುವ ಹಳೆಯ ಹೆಂಚಿನ ಕಟ್ಟಡದಲ್ಲಿತ್ತು. ಪೂರ್ವ ದಿಕ್ಕಿಗೆ ಇರುವ ಈಗಿನ 5 ನೇ ಪ್ಲಾಟ್ ಪಾರಂನಿಂದ ಮದ್ರಾಸ್ ಕಡೆ ಹೋಗುವ ರೈಲುಗಳು ಮತ್ತು ಪಶ್ಚಿಮ ದಿಕ್ಕಿಗೆ ಇರುವ 6 ನೇ ಪ್ಲಾಟ್ ಪಾರಂನಿಂದ ಮೈಸೂರು ಮತ್ತು ಹುಬ್ಬಳ್ಳಿ ಮಾರ್ಗವಾಗಿ ಬಾಂಬೆಗೆ ಹೋಗುವ ರೈಲುಗಳು ಓಡಾಡುತ್ತಿದ್ದವು.
ಬೆಂಗಳೂರಿಗೆ ಹೋಗಬೇಕೆಂದರೆ, ರೈಲಿನಲ್ಲಿ ಮಾತ್ರ ಹೋಗಬೇಕೆಂದು ಅಪ್ಪನಿಗೆ ಪೀಡಿಸುತ್ತಿದೆ. ಮದ್ದೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಹನ್ನೆರಡಾಣೆ ( 75 ಪೈಸೆ ) ಹಾಗೂ ಬಸ್ಸಿನಲ್ಲಿ ಒಂದು ರೂಪಾಯಿ ಇಪ್ಪತ್ತೈದು ಪೈಸೆ ಪ್ರ್ರಯಾಣ ದರವಿತ್ತು. ಬಸ್ಸಿನಲ್ಲಿ ಹೋದರೆ, ಕಲಾಸಿ ಪಾಳ್ಯಂ ನಲ್ಲಿ ಇಳಿಯಬೇಕಿತ್ತು. ಏಕೆಂದರೆ, ಮುಖ್ಯ ಬಸ್ ನಿಲ್ದಾಣ ಈಗಿನ ಗಡಿಯಾರ ಗೋಪುರ ವಿರುವ ಕಲಾಸಿಪಾಳ್ಯದ ಸಿಟಿ ಬಸ್ ನಿಲ್ದಾಣದ ಜಾಗದಲ್ಲಿತ್ತು. ರೈಲಿನಲ್ಲಿ ಹೋದರೆ, ನಮಗೆ ಚಿಕ್ಕಪೇಟೆ ಹತ್ತಿರವಾಗುತ್ತಿತ್ತು. ಜೊತೆಗೆ ಅಲ್ಲಿರುವ ಉಡುಪಿ ಕೃಷ್ಣ ಭವನದಲ್ಲಿ ಒಂದಾಣೆಗೆ( ಆರು ಪೈಸೆ) ಎರಡು ಇಡ್ಲಿ ಮತ್ತು ಸಾಂಬಾರ್ ಹಾಗೂ ಎರಡೂವರೆ ಆಣೆಗೆ ( 15 ಪೈಸೆ) ಗರಿ ಗರಿಯಾದ ಮಸಾಲೆ ದೋಸೆ ಸಿಗುತ್ತಿತ್ತು.
ನನ್ನೂರಿನಿಂದ ಬೆಳಿಗ್ಗೆ ಆರು ಗಂಟೆಗೆ ಹೊರಡುವ ಬಸ್ ಮೂಲಕ 12 ಮೈಲಿ ದೂರವಿದ್ದ ಮದ್ದೂರು ಪಟ್ಟಣಕ್ಕೆ ನಾನು ಅಪ್ಪ ತಲುಪುತ್ತಿದ್ದವು. ಮದ್ದೂರು- ಕೊಪ್ಪ ಮಾರ್ಗದಲ್ಲಿ ರೈಲ್ವೆ ನಿಲ್ದಾಣ ಬಳಿ ಇದ್ದುದರಿಂದ ಮದ್ದೂರಿಗೆ ಮುಂಚೆಯೆ ಸಿಗುವ ನಿಲ್ದಾಣದಲ್ಲಿ ಇಳಿದು ರೈಲನ್ನು ಏರುತ್ತಿದ್ದೆವು. ಆ ದಿನಗಳಲ್ಲಿ ಕಲ್ಲಿದ್ದಲು ಆಧಾರಿತ ಉಗಿಬಂಡಿಗಳು ಮಾತ್ರ ಚಾಲ್ತಿಯಲ್ಲಿದ್ದವು. ರೈಲು ಚಲಿಸುತ್ತಿದ್ದಂತೆ ಇಂಜಿನ್ ನಿಂದ ಬರುತ್ತಿದ್ದ ಹೊಗೆಯಲ್ಲಿ ಹಾರುತ್ತಿದ್ದ ಕಲ್ಲಿದ್ದಲ ಬೂದಿಯ ತುಣುಕುಗಳು ಪ್ರಯಾಣಿಕರ ಬೋಗಿಯೊಳಕ್ಕೆ ತುಂತುರು ಮಳೆ ಹನಿಯಂತೆ ಎರಚಿ ಪ್ರಯಾಣಿಕರ ಬಟ್ಟೆಗಳ ಮೇಲೆ ಬಂದು ಬಿಳುತ್ತಿದ್ದವು.
ನನಗೆ ಮಾತ್ರ ಇದರ ಪರಿವೆ ಇರುತ್ತಿರಲಿಲ್ಲ. ಕಿಟಕಿಗೆ ಮುಖಮಾಡಿ ರೈಲು ಚಲಿಸುತ್ತಿದ್ದಂತೆ , ಅದರ ಜೊತೆ ಹಿಮ್ಮುಖವಾಗಿ ಚಲಿಸುವಂತೆ ಭಾಸವಾಗುತ್ತಿದ್ದ ಗಿಡ ಮರಗಳನ್ನು ನೋಡುತ್ತಾ ಸಂಭ್ರಮ ಪಡುತ್ತಿದ್ದೆ. ಇಂತಹ ಸಮಯದಲ್ಲಿ ಬೂದಿಯ ಕಣವೊಂದು ಕಣ್ಣಿಗೆ ಬಿದ್ದೊಡನೆ ಕಿಟಾರನೆ ಕಿರುಚಿಕೊಂಡು ಬೋಗಿಯಲ್ಲಿ ದೊಡ್ಡದಾಗಿ ಅಳುತ್ತಾ ರಂಪ ಮಾಡುತ್ತಿದ್ದೆ. ಅಪ್ಪ ತನ್ನ ಹೆಗಲ ಮೇಲಿದ್ದ ಟವಲ್ಲಿನ ದಾರದ ಎಳೆಯಲ್ಲಿ ನನ್ನ ಕಣ್ಣಿಗೆ ಬಿದ್ದ ಬೂದಿಯ ಕಸವನ್ನು ತೆಗೆದು ಹಾಕಿ ಸಮಾಧಾನ ಪಡಿಸುತ್ತಿದ್ದ. ಅಷ್ಟರ ವೇಳೆಗೆ ನನ್ನ ಕಣ್ಣು ಕೆಂಡದಂತೆ ಕೆಂಪಾಗಿರುತ್ತಿತ್ತು. ಈ ಕಾರಣಕ್ಕಾಗಿ ನನಗೆ ರೈಲಿನ ಮೇಲೆ ಅಸಾಧ್ಯವಾದ ಸಿಟ್ಟು ಬರುತ್ತಿತ್ತು.
ರೈಲಿನ ಮೇಲೆ ಸೇಡು ತೀರಿಸಿಕೊಳ್ಳಲು ಕೊನೆಗೆ ನಾನೊಂದು ಉಪಾಯ ಮಾಡಿದೆ. ವಾಪಸ್ ಊರಿಗೆ ಹೋಗುವಾಗ ಮದ್ದೂರಿನಲ್ಲಿ ರೈಲಿನ ಮುಂದೆ ಹಳಿಗಳ ಮೇಲೆ ಒಂದು ಕಲ್ಲನ್ನು ಇಟ್ಟು, ರೈಲನ್ನು ಕೆಳಕ್ಕೆ ಬೀಳಿಸಬೇಕೆಂಬುದು ತೀರ್ಮಾನಿಸಿಕೊಂಡೆ.
ಒಂದು ಸಂಜೆ ಬೆಂಗಳೂರಿನಿಂದ ವಾಪಸ್ ಬರುವಾಗ, ಕತ್ತಲಲ್ಲಿ ಅಪ್ಪನಿಗೆ ಕಾಣದಂತೆ ರೈಲು ಇಂಜಿನ್ ಮುಂಭಾಗದಲ್ಲಿ ಹಳಿ ದಾಟುವಾಗ, ಹಳಿಯ ಮೇಲೆ ಕಲ್ಲೊಂದನ್ನು ಇರಿಸಿದೆ. ನಂತರ ರೈಲ್ವೆ ಗೇಟ್ ಬಳಿ ಬಂದು ಕೊಪ್ಪಕ್ಕೆ ಹೋಗುವ ತಡರಾತ್ರಿಯ ಬಸ್ ನಲ್ಲಿ ನಾನು ಅಪ್ಪ ಊರಿಗೆ ಸೇರಿಕೊಂಡೆವು.
ರಾತ್ರಿ ಊರಿಗೆ ಮನೆಗೆ ಬಂದು ಊಟ ಮಾಡಿ, ಅಮ್ಮನ ಪಕ್ಕ ( ಅಪ್ಪನ ತಾಯಿ) ಮಲಗಿದಾಗ ನನಗೆ ಚಿಂತೆ ಶುರುವಾಗತೊಡಗಿತು. ರೈಲು ಬಿದ್ದು ಹೋಗಿ, ಪೊಲೀಸರು ನನ್ನನ್ನು ಹಿಡಿದುಕೊಂಡು ಹೋದರೆ ಏನು ಮಾಡುವುದು? ಅಮ್ಮನನ್ನು ಮೆಲ್ಲಗೆ ಕೇಳಿದೆ. ಅಮ್ಮಾ ರೈಲು ಬಿದ್ದೋದ್ರೆ ಜನ ಸತ್ತೋಯ್ತರಾ? ಅಮ್ಮ,(ಅಜ್ಜಿ) ನನ್ನ ತಲೆ ಸವರುತ್ತಾ, ಮಗಾ ನಾನು ರೈಲೇ ನೋಡಿಲ್ಲ. ಹೆಂಗೆ ಹೇಳಲಿ? ಎನ್ನುವುದರ ಮೂಲಕ ನನ್ನ ಪ್ರಶ್ನೆಗೆ ತನ್ನೊಂದು ಪ್ರಶ್ನೆಯನ್ನು ತಗುಲಿ ಹಾಕಿಬಿಟ್ಟಳು. ಬೆಳಿಗ್ಗೆ ಪೇಪರ್ ನಲ್ಲಿ ಸುದ್ಧಿ ಬರುತ್ತೆ ನೋಡುಮಾ ಎಂದು ಕೊಂಡು ಅಂದು ಆ ರಾತ್ರಿ ಮಲಗಿಕೊಂಡೆ.
ಅದೇ ವರ್ಷ ಕನ್ನಡ ಪ್ರಭ ದಿನ ಪತ್ರಿಕೆ ಆರಂಭಗೊಂಡಿತ್ತು. ಅದರ ಬೆಲೆ ಎರಡಾಣೆ ( ಹನ್ನೆರೆಡು ಪೈಸೆ)ನಮ್ಮ ಮನೆಗೆ ಅಪ್ಪ ಪೇಪರ್ ಹಾಕಿಸುತ್ತಿದ್ದ. ಬೆಳಿಗ್ಗೆ ಐದು ಗಂಟೆಗೆ ಎದ್ದು ತೋಟಕ್ಕೆ ಹೋಗಿ ಬಂದ ನಂತರ, ಮನೆಯ ಜಗುಲಿ ಮೇಲಿನ ಮಂಚದ ಮೇಲೆ ಕುಳಿತು ಅಪ್ಪ ಪೇಪರ್ ಓದುತ್ತಿದ್ದ. ನಾನು ಅಪ್ಪ ಪೇಪರ್ ಓದುವಾಗಲೆಲ್ಲಾ, ‘ಮದ್ದೂರತ್ರ ರೈಲೇನಾದ್ರು ಬಿದ್ದೋಗಿದಿಯಾ ನೋಡು’ ಎನ್ನುತ್ತಿದ್ದೆ. ಅಪ್ಪ, ನನ್ನತ್ರ ತಿರುಗಿ ಹೋಗಲೈ, ರೈಲ್ ಯಾಕೆ ಬಿದ್ದೋದದು ಎನ್ನುತ್ತಿದ್ದ.
ನನಗೆ ಸಮಾಧಾನವಾಗುತ್ತಿರಲಿಲ್ಲ. ಸಂಜೆ ವೇಳೆ ನನ್ನ ಮನೆಯ ಸಮೀಪ ಇರುವ ಪೊಲೀಸ್ ಠಾಣೆಯ ಮುಂದೆ ಇದ್ದ ಬಸ್ ನಿಲ್ದಾಣಕ್ಕೆ ಹೋಗಿ ಮದ್ದೂರಿನಿಂದ ಬರುತ್ತಿದ್ದ ವೀರಭದ್ರೇಶ್ವರ ಬಸ್ ನ ಕಂಡಕ್ಟರ್ ಮತ್ತು ಕ್ಲೀನರ್ ಗಳನ್ನು ವಿಚಾರಿಸುತ್ತಿದ್ದೆ. ಕೊನೆಗೂ ಮದ್ದೂರು ರೈಲ್ವೆ ನಿಲ್ದಾಣದಲ್ಲಿ ರೈಲು ಬಿದ್ದು ಹೋದ ಸುದ್ಧಿ ನನಗೆ ತಲುಪಲೇ ಇಲ್ಲ.
ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ನನ್ನೂರಿನಲ್ಲಿ ಗ್ರಾಮದೇವತೆಯ ಹಬ್ಬ ನಡೆಯುತ್ತದೆ. ಬೆಂಗಳೂರು, ಮೈಸೂರು ಹೀಗೆ ಹೊರಗಡೆ ಇರುವ ನನ್ನ ಬಾಲ್ಯದ ಗೆಳೆಯರೆಲ್ಲಾ, ಆ ದಿನ ಊರಿನಲ್ಲಿರುವ ಬಾಲ್ಯದ ಸಹಪಾಠಿ ಗೆಳೆಯನ ಮನೆಯಲ್ಲಿ ರಾತ್ರಿಯಿಡಿ ಕುಳಿತು ಪಾರ್ಟಿ ಮಾಡುವುದು ವಾಡಿಕೆ. ಬೆಂಗಳೂರಿನಿಂದ ಬರುವ ನನ್ನ ಬಾಲ್ಯದ ಗೆಳೆಯರು ನನ್ನನ್ನು ನೋಡಿದ ಕೂಡಲೇ ಲೇ ಜಗಿ, ಈಗ ತಾನೆ ನೋಡಿಕೊಂಡು ಬಂದೊ ಕಣೊ, ಮದ್ದೂರಲ್ಲಿ ಯಾವ ರೈಲು ಬಿದ್ದೋಗಿರಲಿಲ್ಲ ಎಂದು ಚುಡಾಯಿಸುತ್ತಾರೆ. ಆವಾಗ ನಾನು, ಬನ್ರಲೇ, ಬಡ್ಡೆತ್ತವ, ಈ ದಿನ ಹೆಂಡತಿ ಮಕ್ಕಳ ಕಾಟ ಇಲ್ಲ ಮೊದ್ಲು ಮೂಗಿನ ಮಟ್ಟ ಕುಡಿಯುಮಾ, ಆ ಮೇಲೆ ಹೋಗಿ ಕಲ್ಲ್ ಇಟ್ಟ್ ಬರುಮಾ ಎಂದು ಅಪ್ಪಟ ಮಂಡ್ಯ ಬಾಷೆಯಲ್ಲಿ ರೇಗಿಸುತ್ತೇನೆ.
ಏಕೋ ಕಾಣೆ ಹಳೆಯ ಬಾಲ್ಯದ ನೆನಪುಗಳಿಗೆ ಮನಸ್ಸು ಜಾರಿದಾಗಲೆಲ್ಲಾ ಈ ದೇಹಕ್ಕೆ ಯಾಕಾದ್ರು ವಯಸ್ಸಾಗಿಬಿಟ್ಟಿತು? ಎಂದು ಸಂಕಟವಾಗುತ್ತದೆ.








🙂 🙂 hahaha
ಬಾಲ್ಯದ ಹುಡುಗಾಟದಾಟದ ನೆನಪು ವಯಸ್ಸು ದಾಟಿದಂತೆ ಹೊಚ್ಚ ಹೊಸದಾಗಿ ತೋರಿಸಿದಂತೆ – ಚೆನ್ನಾಗಿದೆ.
-ಅನಿಲ ತಾಳಿಕೋಟಿ