ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಛಾಯಾಪತಿಯವರ ನೆನಪು…

ರಂಜಿನಿ ಪ್ರಭು

ಸುಮಾರು ಒಂಭತ್ತು ವರುಷಗಳ ಹಿಂದೆ ತ.ಸು.ಶಾಮರಾಯರ “ಮೂರು ತಲೆಮಾರು” ಪುಸ್ತಕ ಓದಿ
ಅದೇ ಗುಂಗಿನಲ್ಲಿರುವಾಗಲೇ ಕವಿ ಎಚ್.ಎಸ್.ವಿ.ಯವರ ಮನೆಯ ಒಂದು ಕಾರ್ಯಕ್ರಮದಲ್ಲಿ ಶಾಮರಾಯರ ಮಗ ಛಾಯಾಪತಿಯವರ ಭೇಟಿಯಾಯಿತು. ಆ ಭೇಟಿಯ ಫಲಶ್ರುತಿ ನನ್ನ ಎರಡನೇ ಕವನಸಂಕಲನ “ಬಾನ ಜಗಲಿ” ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯಿಂದ ಪ್ರಕಟಗೊಳ್ಳುವ ಸುಯೋಗ. ಕಾರಣಾಂತರಗಳಿಂದ
ಕನಸಿನ ಮನೆ ಮಾರಿದ ನೋವಿನಲ್ಲಿದ್ದ ನಮಗೆ ಬಾನಜಗಲಿಯ ಹುಟ್ಟು ಕೊಟ್ಟ ಸಮಾಧಾನ ಅಷ್ಟಿಷ್ಟಲ್ಲ. ಶ್ರೀಯುತ ಛಾಯಾಪತಿಯವರೂ ಅವರ ಶ್ರೀಮತಿಯವರೂ ತೋರಿಸಿದ ಪ್ರೀತಿ ವಾತ್ಸಲ್ಯ ನಮ್ಮ ನಡುವೆ ಸುಂದರ ಭಾಂಧವ್ಯವನ್ನು ಬೆಸೆಯಿತು.

“ಪುಸ್ತಕ ಚೆನ್ನಾಗಿ ಬಂದಿದೆಯೇ ತಾಯಿ ಸಮಾಧಾನವಾಯಿತೇ” ಎಂದು ಛಾಯಾಪತಿಯವರು ಕೇಳಿದಾಗ ನನ್ನ ಕಣ್ಣು ತುಂಬಿಬಂದಿತ್ತು.

ವೆಂಕಣ್ಣಯ್ಯನವರ ಕುಟುಂಬ ಕನ್ನಡ ಸಾಹಿತ್ಯಾಸಕ್ತರಿಗೆ ಕಾಮಧೇನುವಿನಂತೆ. ಒಂಭತ್ತು ತಿಂಗಳ ಹಿಂದೆ ಪ್ರಭುವಿನ ಐದು ನಾಟಕಗಳನ್ನು ಪ್ರಕಟಿಸಿದ್ದರು ಮತ್ತು ಅದರ ಬಿಡುಗಡೆ ಕಾರ್ಯಕ್ರಮದ ಬಗ್ಗೆ ಒಂದು ಸುಂದರ ಕನಸನ್ನೂ ರೂಪಿಸಿಕೊಂಡಿದ್ದರು. ಆದರೆ ಎಡೆಬಿಡದ ಅನಾರೋಗ್ಯದಿಂದ ಅದು ಸಾಕಾರವಾಗಲಿಲ್ಲ.

ಮೂರುತಿಂಗಳ ಹಿಂದೆ ಕವಿ ವೆಂಕಟೇಶ ಮೂರ್ತಿಯವರ ಜೊತೆ ನಾನು ಪ್ರಭು ಮೈಸೂರಿನಲ್ಲಿ ಛಾಯಾಪತಿಯವರನ್ನು ಭೇಟಿಮಾಡಿ ಬಂದಿದ್ದೆವು. “ಬೇಗ ಹುಷಾರಾಗಿ. ಮತ್ತೊಮ್ಮೆ ಬರುತ್ತೇವೆ”ಎಂದು ಹೇಳಿ ಬಂದಿದ್ದೆವು. ಮತ್ತೊಂದು ಅಂತಹ ದಿನ ಬರಲೇ ಇಲ್ಲ..

ಅವರದು ಆತ್ಮೀಯತೆ ತುಂಬಿದ ತುಂಬು ಕುಟುಂಬ. ಆ ಕುಟುಂಬಕ್ಕೆ ಛಾಯಾಪತಿಯವರ ಅಗಲಿಕೆ ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಮೊನ್ನೆ ಶುಕ್ರವಾರ ನಡೆಯುತ್ತಿದ್ದ ವೈಕುಂಠ ಸಮಾರಾಧನೆಯಲ್ಲಿ
ಅವರ ಭಾವಚಿತ್ರದ ಎದುರು ಕುಳಿತಿದ್ದ ಅವರ ಶ್ರೀಮತಿ “ರಂಜನೀ ನೋಡಮ್ಮಾ ಅವರು ನನ್ನನ್ನೇ ನೋಡುತ್ತಿದ್ದಾರೆ”ಎಂದು ನನ್ನನ್ನು ಅಪ್ಪಿಕೊಂಡು ನುಡಿದ ಮಾತಿಗೆ ನಾನು ನಿರುತ್ತರಳಾಗಿದ್ದೆ.

‍ಲೇಖಕರು Admin

17 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading