
ಮನಶ್ಯಾಸ್ತ್ರದ ಬಗ್ಗೆ, ಮನಸ್ಸಿಗೆ ಸಂಬಂಧ ಪಟ್ಟ ವೈಪರಿತ್ಯಗಳ ಬಗ್ಗೆ ಬಂದ ಚಿತ್ರಗಳು ಕಡಿಮೆ. ಹಾಗೆ ಬಂದ ಕೆಲವೇ ಚಿತ್ರಗಳಲ್ಲಿ ಸಹ ಅವು ಅಥೆಂಟಿಕ್ ಆದರೆ ಅದು ಒಣ ಪಾಠವಾಗಿಬಿಡುತ್ತದೆ, ಅದನ್ನು ಹೆಚ್ಚು ರಮ್ಯವಾಗಿಸಿದರೆ ಅದರ ವಾಸ್ತವ ಅಳ್ಳಕವಾಗಿಬಿಡುತ್ತದೆ.
ಅದೆರಡನ್ನೂ ಸಂಭಾಳಿಸಿ ಸಮಪಾಕವಾಗಿಸಿದ್ದ ಚಿತ್ರ The Polor Boy.
Bipolor Disorder ಬಗ್ಗೆ ಬಂದ ಚಿತ್ರ ಅದು.
ಈ ಅಸ್ವಸ್ಥತೆ, ಅದರಿಂದ ಭಾದೆಗೊಳಪಟ್ಟವರನ್ನಷ್ಟೇ ಅಲ್ಲ, ಅವರನ್ನು ಪ್ರೀತಿಸುವವರನ್ನೂ ಹೇಗೆ ಘಾಸಿಗೊಳಿಸುತ್ತದೆ ಎನ್ನುವುದನ್ನು ಚಿತ್ರ ನಮ್ಮ ಮುಂದಿಡುತ್ತಾ ಹೋಗುತ್ತದೆ. ಆದರೆ ಈ ಕಥೆ ಹೇಳಲು ಚಿತ್ರದ ಕಥೆಗಾರ್ತಿ ಹಾಗು ನಿರ್ದೇಶಕಿ ಆಗಿರುವ Anu aun ಭಾಷೆಗಿಂತಾ ಹೆಚ್ಚಾಗಿ ಕ್ಯಾಮೆರಾವನ್ನು ಬಳಸಿಕೊಂಡಿದ್ದಾರೆ. ಪದಗಳಿಗಿಂತ ಹೆಚ್ಚಾಗಿ ಇಮೇಜ್ ಗಳ ಮೂಲಕ ಚಿತ್ರ ಬೆಳೆಯುತ್ತಾ ಹೋಗುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ಕ್ಯಾಮೆರಾ ತನ್ನ ಶೃತಿ, ಲಯಗಳನ್ನು ಹೊಂದಿಸಿಕೊಳ್ಳುತ್ತದೆ. ಹಾಗಾಗಿ ಈ ಚಿತ್ರ ಅಧ್ಯಯನದ ದೃಷ್ಟಿಯಿಂದಲೂ ಮಹತ್ವವಾದದ್ದಾಗಿದೆ.
ಚಿತ್ರ ಪ್ರಾರಂಭವಾದಾಗ ಟ್ರೇನಿನಿಂದ ಅವಸರವಸರವಾಗಿ ಹೊರಬಂದ ಯುವಕನೊಬ್ಬ ಓಡುತ್ತಾ ಹೋಗುತ್ತಾನೆ, ಅವನ ಹೆಗಲಲ್ಲಿ ನೇತುಬಿದ್ದ ಒಂದು ಚೀಲ, ಕೈಯಲ್ಲಿ ಕ್ಯಾಮೆರಾ. ಓಡುತ್ತಲೇ ಅವನು ಬೇರೆ ಬೇರೆ ಕೋನಗಳಿಂದ ಟ್ರೇನಿನ ಫೋಟೋ ತೆಗೆಯಲಾರಂಭಿಸುತ್ತಾನೆ. ಎತ್ತರದಿಂದ, ಕೊಂಬೆಯೊಂದರ ಮರೆಯಿಂದ, ಗಾಜಿನ ಮೇಲೆ ಬಿದ್ದ ಪ್ರತಿಫಲನದಿಂದ, ಟ್ರೇನಿನ ಒಳಗಿನಿಂದ, ಗಾಲಿಗಳ ಹತ್ತಿರದಿಂದ…..ಇಡೀ ಶಾಟ್ ಗಿರುವ ವೇಗ, ಅವನ ಧಾವಂತವನ್ನು ನಮ್ಮೊಳಗೂ ತುಂಬುತ್ತಾ ಹೋಗುತ್ತದೆ.
ಅವನು ಮಟ್ಟಿಯಾಸ್, ಕೊನೆಯ ವರ್ಷದ ಶಾಲಾ ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗ. ಅವನ ಗುರಿ ಬರ್ಲಿನ್ ನಲ್ಲಿರುವ ಆರ್ಟ್ ಅಕಾಡೆಮಿ ಸೇರುವುದು. ಅವರಿಗೆ ತೋರಿಸಲಿಕ್ಕೆಂದೇ ಆತ ಆ ಚಿತ್ರಗಳನ್ನು ತೆಗೆಯುತ್ತಿದ್ದಾನೆ. ಚಿತ್ರಗಳನ್ನು ಹಿಡಿದುಕೊಂಡು ಆ ಅಕಾಡಮಿಗೆ ಹೋಗುತ್ತಾನೆ. ಅವನ ಚಿತ್ರಗಳು ತಾಂತ್ರಿಕವಾಗಿ ಅದ್ಭುತವಾಗಿರುತ್ತವೆ. ಅಲ್ಲಿನ ಅಧ್ಯಾಪಕ ಹೇಳುವುದೂ ಅದನ್ನೇ, ’Your technical skills are perfect, but where is your soul? I don’t want craftsmen I want artists’ – ’ನಮಗೆ ಬೇಕಿರುವುದು ಕಸುಬುದಾರರಲ್ಲ, ಕಲಾವಿದರು’ ಈ ವಾಕ್ಯಕ್ಕೆ ಎಷ್ಟು ಆಯಾಮಗಳು!
ಆದರೆ ಹಾಗೆಂದು ಅವನನ್ನು ಅವರು ನಿರಾಕರಿಸುವುದೂ ಇಲ್ಲ, ಅವನಿಗೊಂದು ಹೊಸ ವಿಷಯ ಕೊಟ್ಟು, ಇಷ್ಟು ದಿನದೊಳಗೆ ಆ ವಿಷಯವನ್ನಿಟ್ಟುಕೊಂಡು ಚಿತ್ರಗಳನ್ನು ತೆಗೆದು ಕಳಿಸಲು ಹೇಳುತ್ತಾರೆ. ಅದು ಅವನಿಗೆ ಅವರು ಕೊಡುವ ಕಡೆಯ ಅವಕಾಶ. ಅವನಿಗೆ ಅವರು ಕೊಡುವ ವಿಷಯ ’Trap’. ಅವರಿಗೆ ಬೇಕಾಗಿರುವುದು ಅವನ ಚಿತ್ರಗಳಲ್ಲಿರುವ ಆತ್ಮ. ಆತ್ಮವನ್ನು ಹುಡುಕುವ
ಅವನ ಪಯಣ, ಅಲ್ಲಿ ಅವನಿಗೆ ಎದುರಾಗುವ trap, ಅದರಿಂದ ಆತ ಬಿಡಿಸಿಕೊಳ್ಳುವ ರೀತಿ ಚಿತ್ರದ ಕಥಾವಸ್ತು. ಆ ಪಯಣದಲ್ಲಿ ಆತ ಪ್ರೀತಿಯನ್ನು ಕಂಡುಕೊಳ್ಳುತ್ತಾನೆ, ತಪ್ಪು ಮಾಡುತ್ತಾನೆ, ಆ ತಪ್ಪನ್ನು ಮುಚ್ಚಿಕೊಳ್ಳಲು ಮತ್ತೊಂದು ತಪ್ಪು ಮಾಡುತ್ತಾನೆ. ಕಡೆಗೆ ತನ್ನ ಕ್ರಿಯೆಗಳಿಗೆ ತಾನು ಜವಾಬ್ದಾರನಾಗಬೇಕು ಎನ್ನುವುದನ್ನೂ ಅರಿಯುತ್ತಾನೆ.
ಹೊಸ ಚಿತ್ರಗಳಿಗೆ ವಸ್ತುವನ್ನು ಹುಡುಕುತ್ತಾ ಹೋಗುತ್ತಿರುವಾಗ ಬಸ್ಸಿನಲ್ಲಿ ಅವನೊಂದು ಹುಡುಗಿಯನ್ನು ನೋಡುತ್ತಾನೆ. ಆಗಷ್ಟೇ ಅವಳು ತನ್ನ ಗೆಳೆಯನಿಗೆ ಕೈಬೀಸಿ, ಬಸ್ ಹತ್ತಿದ್ದಾಳೆ. ಬಸ್ ಹೊರಟಿದೆ. ಬಸ್ ಗಾಜಿನಾಚೆ ಅವನು, ಈಚೆ ಇವಳು. ಮತ್ಯಾವಾಗ ಸಿಗುವೆ ಎಂದವನಿಗೆ ಈಚೆಯಿಂದ ಬಸ್ ಗಾಜಿನ ಮೇಲೆ ಅವಳು ತನ್ನ ಫೋನ್ ನಂಬರ್ ಬರೆಯುತ್ತಾಳೆ. ಅದೊಂದು ಅತ್ಯಂತ ಕಾವ್ಯಮಯವಾದ ಚೌಕಟ್ಟು. ಮಟ್ಟಿಯಾಸ್ ಅದನ್ನು ತನ್ನ ಕ್ಯಾಮೆರಾದಲ್ಲಿ ಬಂಧಿಸುತ್ತಾನೆ. ಆ ಹುಡುಗ trap ಆದ ಎಂದು ಅವನಿಗನ್ನಿಸಿರುತ್ತದೆ, ಆದರೆ ನಿಜಕ್ಕೂ ಅಲ್ಲಿ trap ಆದವನು ಮಟ್ಟಿಯಾಸ್. ಆ ಹುಡುಗಿ ಹನ್ನಾಳ ಪ್ರೀತಿಯಲ್ಲಿ ಅವನು ಕೊಚ್ಚಿ ಹೋಗುತ್ತಾನೆ.
ಆ ಹುಡುಗಿ ಹನ್ನಾ ಹಕ್ಕಿಯಂಥವಳು. ಒಮ್ಮೆ ಆಗಸದಲ್ಲಿ ಹಾರುತ್ತಾಳೆ, ಮತ್ತೊಮ್ಮೆ ನೆಲದಲ್ಲಿ ತೆವಳುತ್ತಾಳೆ. ಅವಳನ್ನು ಮನಸ್ಸಿನಿಂದ ಆಚೆ ನೂಕಲು ಇವನಿಗೆ ಸಾಧ್ಯವಾಗುವುದೇ ಇಲ್ಲ. ಅವಳ ಜೊತೆಯಲ್ಲಿರಬೇಕು ಎಂದರೆ ಅವಳ ಹಾಗಿರಬೇಕು ಎಂದುಕೊಂಡು ಅವಳ ಜೊತೆ ಜೊತೆಯಲ್ಲಿ ಹೆಜ್ಜೆ ಇಡುತ್ತಾ ಹೊರಟು ಬಿಡುತ್ತಾನೆ. ಆ ಹಾದಿ ತನ್ನನ್ನು ತನ್ನ ಗುರಿಯಿಂದ ದೂರ ಕೊಂಡೊಯ್ಯುತ್ತದೆ ಎನ್ನುವ ಸತ್ಯ ಅವನಿಗೆ ಕಾಣುವುದೇ ಇಲ್ಲ. ಅವನು, ಹನ್ನಾ ಮತ್ತು ಅವನ ಕ್ಯಾಮೆರಾ ಇದೇ ಅವನ ಪ್ರಪಂಚ.
ಹೀಗಿರುವಾಗ ಅಕಸ್ಮಾತ್ತಾಗಿ ಅವನಿಗೆ ಅವಳ ಆ ಎಲ್ಲಾ ಭಾವ ವೈಪರೀತ್ಯ ಸಹಜವಲ್ಲ, ಒಂದು ಮಾನಸಿಕ ಅಸ್ವಸ್ಥತೆಯ ಫಲ ಎಂದು ತಿಳಿಯುತ್ತದೆ.
ಅದುವರೆವಿಗೂ ಆತ Bipolar Disorder ಹೆಸರನ್ನೇ ಕೇಳಿರುವುದಿಲ್ಲ. ಆ ಹುಡುಗಿ ತನಗೆ ಆ ಸಮಸ್ಯೆ ಇದೆ ಎಂದು ಹೇಳಿದ ಮೇಲೆ ಅದರ ಬಗ್ಗೆ ಗೂಗಲ್ ಮಾಡುತ್ತಾನೆ. ಈ ನಡುವೆ ಆ ಹುಡುಗಿಯ ಜೊತೆ ಮಾಡಿದ ಒಂದು ಸಾಹಸದ ಪರಿಣಾಮ ಪೋಲೀಸರು ಅವನನ್ನು ಅರೆಸ್ಟ್ ಮಾಡಿರುತ್ತಾರೆ. ವಿದ್ಯಾರ್ಥಿ ಎಂದು ತಿಳಿದ ಮೇಲೆ ಬಿಟ್ಟು ಕಳಿಸಿರುತ್ತಾರೆ. ಶಾಲೆಯಲ್ಲಿ ಇದೇ ಕಾರಣಕ್ಕಾಗಿ ಅವನನ್ನು ಹೊರಗೆ ಹಾಕಬಹುದು ಅನ್ನಿಸಿದಾಗ ಶಾಲೆಯ ಮನಶ್ಯಾಸ್ತ್ರಜ್ಞೆಯ ಹತ್ತಿರ ತನಗೆ ಇದ್ದಕ್ಕಿದ್ದಂತೆ ಭಾವಗಳು ವಿಪರೀತ ಏರುಪೇರಾಗುವ ಸಮಸ್ಯೆ ಇದೆ, ತಾನು ಏನು ಮಾಡುವೆ ಎನ್ನುವುದರ ಮೇಲೆ ತನಗೆ ನಿಯಂತ್ರಣವೇ ಇಲ್ಲ ಎಂದು ಸುಳ್ಳು ಹೇಳುತ್ತಾನೆ.
ಆ ಸುಳ್ಳು ಸಧ್ಯಕ್ಕೆ ಅವನನ್ನು ಕಾಪಾಡುವುದಷ್ಟೇ ಅಲ್ಲ, ಮುಂದೆ ಇನ್ನೊಂದು ಸುಳ್ಳಿಗೂ ನಾಂದಿ ಆಗುತ್ತದೆ.
ಹನ್ನಾಳ ಕಾರಣಕ್ಕೆ ಸ್ನೇಹಿತನೊಂದಿಗೆ ಆದ ಒಂದು ಹೊಡೆದಾಟದಲ್ಲಿ ಸ್ನೇಹಿತ ಮಹಡಿಯ ಮೇಲಿನಿಂದ ಕೆಳಕ್ಕೆ ಬಿದ್ದುಬಿಡುತ್ತಾನೆ. ಆತನ ನರಮಂಡಲಕ್ಕೆ ಪೆಟ್ಟುಬಿದ್ದು ಆತನನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಮಟ್ಟಿಯಾಸ್ ನನ್ನು ಪೋಲೀಸರು ಅರೆಸ್ಟ್ ಮಾಡುತ್ತಾರೆ. ಜೈಲು ವಾಸವನ್ನು ತಪ್ಪಿಸಿಕೊಳ್ಳಲು ಅವನು ಗೆಳತಿಯ ಮಾನಸಿಕ ಅಸ್ವಸ್ಥತೆಯನ್ನು ಬಳಸಿಕೊಳ್ಳುತ್ತಾನೆ. ತನಗೂ Bipolar Disorder ಎಂದು ಹೇಳುತ್ತಾನೆ. ಜೈಲಿನ ಬದಲು ಅವನನ್ನು ಮಾನಸಿಕ ಆಸ್ಪತ್ರೆಗೆ ನಿಗಾ ವಹಿಸಲು ಸೇರಿಸಲಾಗುತ್ತದೆ.
ಅಲ್ಲಿ ಆತನ ಒದ್ದಾಟ, ಮಾನಸಿಕ ಅಸ್ವಸ್ಥತೆಯನ್ನು ತಪ್ಪಿಸಿಕೊಳ್ಳಲು ಅವನು ಪಡುವ ಹೆಣಗಾಟ, ಅವನ ಹತಾಶೆ, ಆಸ್ಪತ್ರೆಯ ಸಹರೋಗಿಯಿಂದ ಅವನ ಮೇಲೆ ನಡೆಯುವ ಹತ್ಯಾ ಪ್ರಯತ್ನ, ತನ್ನ ಜೀವದ ಕನಸಾದ ಬರ್ಲಿನ್ ಆರ್ಟ್ ಅಕಾಡೆಮಿಯನ್ನು ತಾನು ಕಳೆದುಕೊಂಡು ಬಿಡುವೆನೇನೋ ಎನ್ನುವ ಅವನ ನಿರಾಶೆ….ಮಟ್ಟಿಯಾಸ್ ಆಗಿ Roland Laos ಮನೋಜ್ಞವಾಗಿ ನಟಿಸಿದ್ದಾನೆ.
ನಿಯಮಿತವಾಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎನ್ನುವ ಶರತ್ತಿನ ಮೇಲೆ ಅವನ ಆಸ್ಪತ್ರೆ ವಾಸ ಮುಗಿಯುತ್ತದೆ. ಆದರೆ ಇನ್ನೊಂದೇ ಒಂದು ತಪ್ಪು ಹೆಜ್ಜೆ ಇರಿಸಿದರೂ ಅವನಿಗೆ ಜೀವನಪೂರ್ತಿ ಆಸ್ಪತ್ರೆ ವಾಸ ತಪ್ಪಿದ್ದಲ್ಲ. ದಾಖಲೆಗಳ ಪ್ರಕಾರ ಅವನೊಬ್ಬ ಮಾನಸಿಕ ಅಸ್ವಸ್ಥ. ಇದರ ಅರಿವು ಅವನಿಗೂ ಇದೆ. ಅವನು ತನ್ನ ಜವಾಬ್ದಾರಿಗಳಿಂದ ತಪ್ಪಿಸಿಕೊಂಡು ಓಡುವುದನ್ನು ನಿಲ್ಲಿಸುತ್ತಾನೆ.
ಮೊದಲು ಆಸ್ಪತ್ರೆಗೆ ಹೋಗಿ ಮಹಡಿಯಿಂದ ಬಿದ್ದ ಸ್ನೇಹಿತನನ್ನು ನೋಡುತ್ತಾನೆ. ಅವನ ಚಿಕಿತ್ಸೆಗೆಂದು ತನ್ನಲ್ಲಿದ್ದ ಎಲ್ಲಾ ಕ್ಯಾಮೆರಾಗಳನ್ನೂ ಮಾರಿ ಹಣ ಹೊಂದಿಸುತ್ತಾನೆ. ಶಾಲೆಗೆ ಮತ್ತೆ ಹೋಗಲು ಪ್ರಾರಂಭಿಸುತ್ತಾನೆ.
ಇವನು ಆಸ್ಪತ್ರೆಯಲ್ಲಿದ್ದಾಗಲೇ ಇವನ ಫೋಟೋಗಳನ್ನು ಹನ್ನಾ ಅಕಾಡೆಮಿಗೆ ಕಳಿಸಿರುತ್ತಾಳೆ. ಅವು ಮೆಚ್ಚಿಗೆಯಾಗಿ ಇವನಿಗೆ ಅಲ್ಲಿ ಸೀಟು ಸಿಕ್ಕಿರುತ್ತದೆ. ಇನ್ನು ಅವನು ಶಾಲೆಯ ಪರೀಕ್ಷೆ ಪಾಸು ಮಾಡುವುದಷ್ಟೇ ಉಳಿದಿದೆ.
ಅಷ್ಟರಲ್ಲಿ ಅವರಿಬ್ಬರ ಸಂಬಂಧದಲ್ಲಿ ದೊಡ್ಡ ಸ್ಥಿತ್ಯಂತರ ಆಗಿದೆ. ಮೊದಲು ಅವನಿಗೆ ಅವಳ ಮೇಲೆ ಆಕರ್ಷಣೆ ಮಾತ್ರ ಇರುತ್ತದೆ. ಅವಳ ಕಾಯಿಲೆಯ ಬಗ್ಗೆ ತಿಳಿದ ನಂತರ ಅವಳ ಬಗ್ಗೆ ಅವನ ನಡುವಳಿಕೆ ಬದಲಾಗಿದೆ. ಅವನು ಅವಳನ್ನು ಕಾಪಿಡುತ್ತಾ ಹೋಗುತ್ತಾನೆ. ಪ್ರೀತಿಯಲ್ಲಿ, ಸ್ನೇಹದಲ್ಲಿ ಆಸರೆ ಪಡೆಯುವವರು ಆಸರೆ ಕೊಡುವವರ ಮುಲಾಜಿನಲ್ಲಿರುತ್ತಾರೆ ಎಂದುಕೊಳ್ಳುತ್ತೇವೆ, ಆದರೆ ಅಲ್ಲಿ ಇನ್ನೊಂದೇ ಡೈನಾಮಿಕ್ಸ್ ಕೆಲಸ ಮಾಡುತ್ತಿರುತ್ತದೆ. ಯಾರಿಗೇ ಆಗಲಿ ನೀವು ಸಮಯ, ಸಹಾಯ, ನಿಮ್ಮ ಹೃದಯದ ಒಂದು ಭಾಗ ಕೊಡುತ್ತಾ ಹೋದಂತೆ ಆ ’ಕೊಡುವಿಕೆ’ಯಲ್ಲಿ ನೀವು ಟ್ರ್ಯಾಪ್ ಆಗುತ್ತಾ ಹೋಗುತ್ತೀರಿ. ಇದು ’ಪಡೆದು ಕೊಳ್ಳು’ವುದಕ್ಕಿಂತ ದೊಡ್ಡ ಟ್ರ್ಯಾಪ್. ಇದರಿಂದ ಬಿಡಿಸಿಕೊಳ್ಳುವುದು ಕಷ್ಟ.
ಅವಳಿಗೆ ಅವನು ಬೇಕು ಎನ್ನುವುದಕ್ಕಿಂತಾ ಅವಳಿಗೆ ತಾನು ಬೇಕೇ ಬೇಕು ಎಂದು ಅವನು ನಂಬುವ ನಂಬಿಕೆ ಅವನನ್ನು ಟ್ರ್ಯಾಪ್ ಮಾಡಿರುತ್ತದೆ. ಇದು ಅವನ ಆಸ್ಪತೆಗಿಂತಾ ದೊಡ್ಡ ಟ್ರಾಪ್, ಏಕೆಂದರೆ ಇದರ ಬಿಡುಗಡೆಯ ಕೀಲಿ ಬೇರ್ಯಾರ ಬಳಿಯೂ ಅಲ್ಲ, ಅವನ ಬಳಿಯೇ ಇರುತ್ತದೆ ಮತ್ತು ಅದು ಅವನಿಗೆ ಗೊತ್ತೇ ಇರುವುದಿಲ್ಲ.
ಅವನು ತನ್ನ ಅಸ್ವಸ್ಥತೆಯನ್ನು ತಾನು ಆರೋಪಿಸಿಕೊಂಡಿದ್ದಾನೆ ಎಂದು ಹನ್ನಾಳಿಗೆ ಗೊತ್ತಾದಾಗ ಅವಳಿಗೆ ಸಿಟ್ಟು ಉಕ್ಕುತ್ತದೆ. ’ನೀನು ನನ್ನನ್ನು ಬಳಸಿಕೊಂಡೆ’ ಎಂದು ಕೂಗಾಡುತ್ತಾಳೆ. ಮಟ್ಟಿಯಾಸ್ ಪರೀಕ್ಷೆಯ ಸಿದ್ಧತೆಯಲ್ಲಿ ತನ್ನನ್ನು ತಾನು ಮುಳುಗಿಸಿಕೊಳ್ಳುತ್ತಾನೆ. ತಾನು ನಿರ್ಲಕ್ಷಿತಳಾಗುತ್ತಿದ್ದೇನೆ ಎನ್ನುವುದನ್ನು ಅವಳಿಗೆ ತಡೆದುಕೊಳ್ಳಲಾಗುವುದಿಲ್ಲ. ಅವನ ಪರೀಕ್ಷೆಯ ಸಮಯಕ್ಕೆ ಸರಿಯಾಗಿ ತಾನು ಸೇತುವೆಯ ಮೇಲಿನಿಂದ ಬೀಳುತ್ತೇನೆ ಎಂದು ಮೆಸೇಜ್ ಕಳಿಸಿ ಮೊಬೈಲ್ ಆಫ್ ಮಾಡುತ್ತಾಳೆ. ಈಗ ಅವನೇನು ಮಾಡುತ್ತಾನೆ, ತನ್ನ ಬದುಕಿನ ಅತಿದೊಡ್ಡ ಟ್ರಾಪ್ ನಿಂದ ಅವನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆಯೆ? ಅದರಿಂದ ತಪ್ಪಿಸಿಕೊಂಡೂ ಅವನು ತನ್ನ ಜವಾಬ್ದಾರಿಯಿಂದ ವಿಮುಖನಾಗದೆ ಇರಲು ಸಾಧ್ಯವೆ ಎನ್ನುವುದು ಚಿತ್ರದ ಅಂತಿಮ ಘರ್ಷಣೆ ಮತ್ತು ಕ್ಲೈಮಾಕ್ಸ್.
ಹನ್ನಾಳಾಗಿ Jaanika Arum ನಟಿಸಿಲ್ಲ. ಆ ಪಾತ್ರವೇ ತಾನಾಗಿದ್ದಾಳೆ. ಅವಳ ಹಠಾತ್ ಖುಷಿ, ಮರುಕ್ಷಣವೇ ಮಹಾಕುಸಿತ, ಸಿಟ್ಟು, ಆವೇಗ, ಜವಾಬ್ದಾರಿಯೇ ಇಲ್ಲದ ನಡುವಳಿಕೆ, ಅಳು ಎಲ್ಲವೂ ಅತ್ಯಂತ ಸಹಜವಾಗಿ ಮೂಡಿಬಂದಿದೆ. ಒಂದು ಸನ್ನಿವೇಶದಲ್ಲಿ ಅವಳು ಅಭಿನಯ ಶಾಲೆಗೆ ಆಡಿಶನ್ ಕೊಡುತ್ತಿರುತ್ತಾಳೆ. ಅವರು ಅವಳ ನಟನೆಯಲ್ಲಿ ಸಹಜತೆ ಇಲ್ಲ ಎಂದು ಹೇಳಿ, ನಿನ್ನ ಜೀವನದ್ದೇ ಒಂದು ಘಟನೆ ಆರಿಸಿಕೊಂಡು ಅಭಿನಯಿಸು ಎಂದು ಹೇಳುತ್ತಾರೆ. ಅವಳು ಮಾತನಾಡಲು ಪ್ರಾರಂಭಿಸುತ್ತಾಳೆ,
’ಕೇವಲ ನಾವಿಬ್ಬರೇ ಇರುವಾಗಲೂ ನನ್ನ ನಿನ್ನ ನಡುವೆ ನಿನ್ನ ಕ್ಯಾಮೆರಾದ ಲೆನ್ಸ್ ಇದ್ದೇ ಇರುತ್ತದೆ. ಎಂದಾದರೂ ನನ್ನನ್ನು ನಿನ್ನ ಕಣ್ಣುಗಳಿಂದ ನೀನು ನೋಡಿರುವೆಯಾ? ನೀನು ನನ್ನನ್ನು ನೋಡುವಾಗಲೂ ನಿನ್ನ ಕಣ್ಣುಗಳಲ್ಲಿರುವುದು ನೀನು ತೆಗೆಯುವ ಮುಂದಿನ ಚಿತ್ರವೇ….’. ಅದುವರೆವಿಗೂ ಆ ವಿಷಯವ ಅವಳನ್ನು ಅಷ್ಟು ಬಾಧಿಸಿರಬಹುದು ಎನ್ನುವ ಅರಿವು ನಮಗೂ ಇರುವುದಿಲ್ಲ. ಇವಳಲ್ಲಿ ಯಾವುದೇ ಸಹಜ ಭಾವ ಸಾಧ್ಯವೇ ಇಲ್ಲ ಎನ್ನುವ ಅನ್ನಿಸಿಕೆ ಮೂಡಿಸಿದ್ದ ಅವಳು ನಮ್ಮನ್ನು ತನ್ನ ಮಾತುಗಳಿಂದ ಬೆಚ್ಚಿಬೀಳಿಸುತ್ತಾಳೆ.
ಆ ಪಾತ್ರಕ್ಕೆ ಅಗತ್ಯವಾದ ಚಡಪಡಿಕೆ, ಒಂದೆಡೆ ನಿಲ್ಲದ ಕೈಕಾಲುಗಳು, ನಿರಂತರ ಚಲನೆ, ಇದ್ದಕ್ಕಿದ್ದಂತೆ ಏರುವ ಕೀರಲು ದನಿ ಎಲ್ಲವೂ ಅವಳ ಪಾತ್ರವನ್ನು ಹೆಚ್ಚು ಹೆಚ್ಚು ಜೀವಂತವಾಗಿಸುತ್ತವೆ. ತುಂಡು ತುಂಡು ಶಾಟ್ ಗಳು, ಸಿದ್ಧಮಾದರಿಯನ್ನು ಮುರಿಯುವ ಫ್ರೇಂಗಳು. ಅವಳ ಮನೋಭಾವಕ್ಕೆ ಸರಿಯಾಗಿ ಚಲಿಸುವ ಚಿತ್ರ ನಮ್ಮನ್ನೂ ಭಾವನೆಗಳಲ್ಲಿ ರೋಲರ್ ಕೋಸ್ಟರ್ ಆಡಿಸುತ್ತದೆ.

‘Trap’ ವಸ್ತುವಿಗಾಗಿ ಅವನು ತೆಗೆಯುವ ಫೋಟೋಗಳನ್ನು ನೋಡಬೇಕು. ಶಾಲೆಯಲ್ಲಿ ತನಗಿಲ್ಲಿಂದ ಎಂದೂ ಬಿಡುಗಡೆಯಿಲ್ಲ ಎನ್ನುವ ಹತಾಶೆಯಲ್ಲಿ ಸ್ಕೇಲ್ ನಿಂದ ಉಗುರುಗಳ ಕೊಳೆ ತೆಗೆಯುತ್ತಿರುವ ಉಪಾಧ್ಯಾಯರು, ತನ್ನ ಅಸ್ವಸ್ಥತೆಯ ಬಂಧಿ ಆಗಿರುವ ಹನ್ನಾಳ ಚಿತ್ರಗಳು, ಇನ್ನಿಲ್ಲದ ಹತಾಶೆಯಿಂದ ಅವಳು ಕಡಲಿನ ನೀರನ್ನು ಎರಡೂ ಕೈಗಳಿಂದ ಅಪ್ಪಳಿಸುವ ದೃಶ್ಯ, ಮೃಗಾಲಯದ ಕರಡಿ….. ಎಲ್ಲವೂ ಮಾತನಾದುವ ಚಿತ್ರಗಳೆ.
ಆದರೆ ಅವನು trap ವಿಷಯಕ್ಕೆ ಇನ್ನಿಲ್ಲದಂತೆ ಹೊಂದುವಂತೆ ತೆಗೆದ ಚಿತ್ರ ಅವನದೆ! ಆಸ್ಪತ್ರೆಯಲ್ಲಿ ಬಂಧಿಯಾಗಿರುವಾಗ ಮಾಸಲು ಕನ್ನಡಿಯಲ್ಲಿ ಮೂಡಿರುವ ಸರಳುಗಳ ಚಿತ್ರದ ನಡುವೆ ಕಾಣುವ ಇವನ ಚಿತ್ರ ಅವನು ಎಷ್ಟು ಆಳವಾಗಿ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ತೋರಿಸುತ್ತದೆ.
ಮೊದಲೇ ಹೇಳಿದಂತೆ ಇದು ಸಂಭಾಷಣೆಗಳ ಚಿತ್ರವಲ್ಲ, ಛಾಯಾಗ್ರಾಹಕನೊಬ್ಬ ಬರೆದಂತಿರುವ ಕಾವ್ಯ.





ಚಿತ್ರ ನೋಡಿದಾಗಿಗಿಂತ ಈಗ ಹೆಚ್ಚು ಇಷ್ಟವಾಯ್ತು!
ನಿನ್ನ ಬರಹ ಅದ್ಭುತವಾಗಿದೆ ..
ಯಾರಿಗೇ ಆಗಲಿ ನೀವು ಸಮಯ, ಸಹಾಯ, ನಿಮ್ಮ ಹೃದಯದ ಒಂದು ಭಾಗ ಕೊಡುತ್ತಾ ಹೋದಂತೆ ಆ ’ಕೊಡುವಿಕೆ’ಯಲ್ಲಿ ನೀವು ಟ್ರ್ಯಾಪ್ ಆಗುತ್ತಾ ಹೋಗುತ್ತೀರಿ. ಇದು ’ಪಡೆದು ಕೊಳ್ಳು’ವುದಕ್ಕಿಂತ ದೊಡ್ಡ ಟ್ರ್ಯಾಪ್. ಇದರಿಂದ ಬಿಡಿಸಿಕೊಳ್ಳುವುದು ಕಷ್ಟ.
ಅವಳಿಗೆ ಅವನು ಬೇಕು ಎನ್ನುವುದಕ್ಕಿಂತಾ ಅವಳಿಗೆ ತಾನು ಬೇಕೇ ಬೇಕು ಎಂದು ಅವನು ನಂಬುವ ನಂಬಿಕೆ ಅವನನ್ನು ಟ್ರ್ಯಾಪ್ ಮಾಡಿರುತ್ತದೆ….
ಬದುಕಿಗೇ ಹೇಳಿದ ಎಚ್ಚರಿಕೆಯ ಮಾತಿನಂತಿದೆ
Thanks for this wonderful write up
ಹಾಗೆ ಕೊಡುತ್ತಾ ಹೋದಂತೆ ಪಡೆದವರಿಗಿಂತ ಹೆಚ್ಚು ಕೊಟ್ಟವರು ಸಂಬಂಧದ ಆಳಕ್ಕೆ ಇಳಿಯುತ್ತಾ ಹೋಗುವುದು ಈ ಚಿತ್ರ ನೋಡಿದಾಗ ನನಗೆ ಅನುಭವಕ್ಕೆ ಬಂತು. ಥ್ಯಾಂಕ್ಸ್ ಭಾರತಿ.
– ಸಂಧ್ಯಾರಾಣಿ
Sandhya I am trapped by you now… ಬಿಡುಗಡೇ ಬೇಡದ ಟ್ರಾಪ್ ಇದು ಬರಹದ್ದು. I was missing your columns these days…
ಹೃದಯದ ಒಂದು ಭಾಗ ಕೊಡುತ್ತಾ ಹೋದಂತೆ ಆ ’ಕೊಡುವಿಕೆ’ಯಲ್ಲಿ ನೀವು ಟ್ರ್ಯಾಪ್ ಆಗುತ್ತಾ ಹೋಗುತ್ತೀರಿ. ಇದು ’ಪಡೆದು ಕೊಳ್ಳು’ವುದಕ್ಕಿಂತ ದೊಡ್ಡ ಟ್ರ್ಯಾಪ್. ಇದರಿಂದ ಬಿಡಿಸಿಕೊಳ್ಳುವುದು ಕಷ್ಟ.
Wah wah for this.. Lovesszz
ಥ್ಯಾಂಕ್ಸ್ ಶಮಾ 🙂 I was missing writing too!
Seems interesting, Can we get to see the movie…Is it available on Netflix or some other source.. Nevertheless your VIEW/ Write-up is Outstanding …..
ಚಿತ್ರ ನೋಡಿ ಮಾಲಾ, ತುಂಬಾ ಒಳ್ಳೆಯ ಚಿತ್ರ ಇದು, ಹಲವಾರು ಪದರಗಳಿರುವ ಚಿತ್ರ.
Sandhya! ಎದ್ದು ನಿಂತು ಚಪ್ಪಾಳೇ ತಟ್ಟುತ್ತಿದೇನೆ!. I missed this film also dear. After reading your review, the picture picturised in front of me! Thank you dear! Hats off to you!
ಥ್ಯಾಂಕ್ಸ್ ಆಂಟಿ, ಬೈ ಚಾನ್ಸ್ ನೋಡಿದ ಚಿತ್ರ ಇದು. ನೋಡದಿದ್ದರೆ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೆ…
chitra nodale beku ennuva bayake aaguttide, padaglu eddu bhavagla kalakidante- Great Write-up.
ಥ್ಯಾಂಕ್ಯೂ ಸೋ ಮಚ್. ಚಿತ್ರ ನೋಡಿದಾಗ ನನಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿ ಬಂದಿದ್ದವು…
Manada kannu teresuva baraha. Great Write- up.
Nothing to say…
Very nice. Should see…i will…thanks.
ಕ್ಯಾಮೆರಾ ಬಗ್ಗೆ ನನಗೂ ಒಲವಿರುವುದರಿಂದ ಬರಹ ಓದಿಸಿದ ಸ್ಪೀಡ್ …ಕ್ಲಿಕ್ ಕ್ಲಿಕ್ ಎಂದಷ್ಟೇ ಸರಾಗ ಮತ್ತು ಗಾಢ. ಅಭಿನಂದನೆಗಳು ಮೇಡಂ