ಮುನ್ನುಡಿ
ಬರಗೂರು ರಾಮಚಂದ್ರಪ್ಪ
ಪ್ರಿಯ ಮಿತ್ರರಾದ ಚ.ಹ. ರಘುನಾಥ್ ಅವರು ತಮ್ಮ ಈ ಪುಸ್ತಕಕ್ಕೆ ನಾನು ಮುನ್ನುಡಿ ಬರೆಯಬೇಕೆಂದು ಅಪೇಕ್ಷಿಸಿದಾಗ ಕೂಡಲೇ ಆಗಲಿ ಎಂದೆ. ಅವರ ಪುಸ್ತಕಕ್ಕೆ ನನ್ನ ಮುನ್ನುಡಿಯ ಅಗತ್ಯವಿದೆಯೆಂದು ಅರ್ಥ ಮಾಡಿಕೊಳ್ಳಬೇಕಿಲ್ಲ. ನಿಜವೆಂದರೆ ಈಗಾಗಲೇ ತಮ್ಮ ಬರಹಗಳಿಂದ ಚಿರಪರಿಚಿತರಾಗಿರುವ ರಘುನಾಥ್ ಅವರಿಗೆ ಮುನ್ನುಡಿಯೆನ್ನುವುದು ಅನಿವಾರ್ಯವಲ್ಲ; ಅದರ ಹಂಗಿನ ಅಗತ್ಯವೂ ಇಲ್ಲ. ನಾನು ಕೂಡಲೇ ಒಪ್ಪಿದ ಕಾರಣವೆಂದರೆ ಅವರ ಲೇಖನಗಳನ್ನು ಒಟ್ಟಿಗೆ ಓದುವ ಒಂದು ಅವಕಾಶ ಸಿಕ್ಕಿದೆ ಎಂದು.
ಚ.ಹ. ರಘುನಾಥ್ ಅವರ ಬರಹಗಳಿಗಿರುವ ಲಲಿತ ಪ್ರಬಂಧದ ಗುಣವನ್ನು ನಾನು ಮೊದಲಿಂದಲೂ ಗಮನಿಸಿದ್ದೇನೆ. ಲಲಿತ ಪ್ರಬಂಧವೆನ್ನುವುದು ಗಂಭೀರ ವಿಷಯಗಳನ್ನೂ ಸುಲಲಿತ ವಿವರಗಳ ಮೂಲಕ ಮನಮುಟ್ಟಿಸುವ ಒಂದು ವಿಶಿಷ್ಟ ಪ್ರಕಾರ. ಕೆಲವೊಮ್ಮೆ ಲಘುಹಾಸದ ಲೇಪದಿಂದ ಹಸನ್ಮುಖಿ ಅಕ್ಷರಾನುಭವಕ್ಕೂ ಕಾರಣವಾಗುವ ಶೈಲಿ ಲಲಿತ ಪ್ರಬಂಧದ ಅಂತರ್ಗತ ಗುಣವಾಗಿದೆ. ಆದರೆ ಅದು ಹಾಸ್ಯ ಲೇಖನವಲ್ಲ.
ಇರಲಿ, ಅದು ಬೇರೆಯದೇ ಚರ್ಚೆ. ರಘುನಾಥ್ ಅವರ ಬರಹಗಳ ಶೈಲಿ-ಸ್ವರೂಪದ ವಿಶಿಷ್ಟ ಗುಣವೊಂದನ್ನು ತಿಳಿಸಲು ಅದನ್ನು ಪ್ರಸ್ತಾಪಿಸಿದೆ; ಅಷ್ಟೇ. ರಘುನಾಥ್ ಅವರ ವಿಶ್ಲೇಷಣಾ ವಿಧಾನದಲ್ಲಿ ಲಲಿತ ಪ್ರಬಂಧದ ಲಯವೊಂದು ಒಳನದಿಯಾಗಿ ಹರಿಯುವ ವಿಶಿಷ್ಟತೆಯಿದೆ. ಹೀಗಾಗಿ ಅವರ ವಿಮರ್ಶೆ-ವಿಶ್ಲೇಷಣೆಗಳು ಹುಬ್ಬುಗಟ್ಟಿಕೊಂಡ ತಲೆಭಾರದ ಬರಹಗಳಾಗುವುದಿಲ್ಲ. ತಲೆಭಾರದ ಸಂಗತಿಗಳನ್ನೂ ಹಗುರಗೊಳಿಸಿಕೊಂಡು ಲಘುತರವಾಗದ ಎಚ್ಚರ ಮತ್ತು ಒಳವಿವೇಕದಿಂದ ನಿರೂಪಿಸುವ ವಿಧಾನವೊಂದು ರಘುನಾಥ್ ಅವರಿಗೆ ಸಿದ್ಧಿಸಿದೆ. ಸಿನಿಮಾಕ್ಕೆ ಸಂಬಂಧಿಸಿದ ಈ ಸಂಕಲನವು ನನ್ನ ಮಾತಿಗೆ ಸಾಕಷ್ಟು ಸಾಕ್ಷಿ ಒದಗಿಸುತ್ತದೆ.
ರಘುನಾಥ್ ಅವರ ಸಿನಿಮಾ ಬರಹಗಳು ತುಳಿದ ಹಾದಿಯ ರೂಢಿಗತ ನಡಿಗೆಯ ಅಭ್ಯಾಸ ಮತ್ತು ಹವ್ಯಾಸದಿಂದ ದೂರ. ಪಕ್ಕಾ ವ್ಯಾಪಾರಿ ಸಿನಿಮಾ ವಸ್ತುವನ್ನೂ ಒಳನೋಟದ ಎಳೆಯೊಂದಕ್ಕಾದರೂ ಹೊಂದಿಸಲು ಸಾಧ್ಯವೆ ಎಂದು ಹಂಬಲಿಸುವ ತವಕವನ್ನು ಅವರ ಪುಟ್ಟ ಬರಹಗಳಲ್ಲೂ ಕಾಣಬಹುದು. ಇದೊಂದು ಸಕಾರಾತ್ಮಕ ದೃಷ್ಟಿಕೋನ. ಕೆಲವೊಮ್ಮೆ ಇಲ್ಲದ್ದನ್ನು ಕಾಣುವ ದೂರಾನ್ವಯಕ್ಕೂ ಇಂಥ ಹಂಬಲವು ಕಾರಣವಾಗುತ್ತದೆ. ಆದರೆ ಕುರುಡು ನಿರಾಕರಣೆಯ ಅಹಮ್ಮಿನಿಂದ ಪಾರು ಮಾಡುತ್ತದೆ. ಹೀಗಾಗಿ ರಘುನಾಥ್ ವಿಶ್ಲೇಷಣೆಗಳಲ್ಲಿ ವಸ್ತುಸ್ಥಿತಿಯ ಹುಡುಕಾಟವಿರುತ್ತದೆಯೇ ಹೊರತು ಬೇಕಿಲ್ಲದ ಬಡಿವಾರ ಕಾಣಿಸುವುದಿಲ್ಲ; ಭಿನ್ನಾಭಿಪ್ರಾಯಗಳನ್ನೂ ಮನವರಿಕೆಯ ಮಾತುಗಳ ಮೂಲಕವೇ ದೃಢವಾಗಿ ಮಂಡಿಸುವ ಮಾದರಿಯೊಂದು ಅವರ ಬರಹಗಳಲ್ಲಿ ಕಾಣಿಸುತ್ತದೆ. ಭಿನ್ನಾಭಿಪ್ರಾಯಗಳನ್ನು ಅವರ ಪ್ರಜ್ಞಾಪೂರ್ವಕ ಪೂರ್ವಗ್ರಹಗಳೆಂದು ತೀರ್ಮಾನಿಸಲಾಗುವುದಿಲ್ಲ. ಅವರು ನಂಬಿದ ವಿಚಾರ ವಿಧಾನಕ್ಕನುಗುಣವಾದ ಅಭಿಪ್ರಾಯವನ್ನು ತಿಳಿಸಿದ್ದಾರೆಂದು ತಿಳಿಯಬೇಕಾಗುತ್ತದೆ. ಯಾಕೆಂದರೆ ಅವರ ಒಟ್ಟು ಸಿನಿಮಾ ಬರವಣಿಗೆಯಲ್ಲಿ ಒಂದೇ ಮಾದರಿಯ ಸಿನಿಮಾಗಳ ವಕಾಲತ್ತನ್ನು ವಹಿಸಿದ್ದನ್ನು ನಾನು ಕಾಣೆ. ರಘುನಾಥ್, ವಿಮರ್ಶೆ ಹೆಸರಿನ ವಕೀಲರಾಗುವುದಿಲ್ಲ. ಕಣ್ಣೊಳಗೆ ಒಳನೋಟಗಳನ್ನು ಮೀಟುವ ವಿಶ್ಲೇಷಕರಾಗುತ್ತಾರೆ. ಹೀಗಾಗಿ ಅವರ ಬರಹಗಳು ತೋರಿಕೆಯನ್ನು ತೊರೆದ ಇರುವಿಕೆಯ ಚಹರೆಗಳಾಗುತ್ತವೆ. ಸಣ್ಣಸಂಗತಿಗಳಿಗೂ ಮುಖ ಚಹರೆಯನ್ನು ಒದಗಿಸುತ್ತವೆ.
ಈ ಸಂಕಲನದ ಮೊದಲ ಲೇಖನದಲ್ಲಿ ಪ್ರಸ್ತಾಪಿತವಾಗುವ ‘ಊಟ’ದ ಸಂಗತಿಯು ಯಾವ ಸಿನಿಮಾ ಮಂದಿಯೂ ಲೆಕ್ಕಿಸದ ಸಣ್ಣ ಸಂಗತಿ. ಆದರೆ ರಘುನಾಥ್ ಬರಹವು ನಮ್ಮ ಸಿನಿಮಾಗಳಲ್ಲಿರುವ ಊಟದ ಪ್ರಸಂಗಗಳ ಸಣ್ಣ ಸಂಗತಿಯನ್ನು ‘ಎಂದೂ ಮುಗಿಯದ ಊಟ’ವೆಂಬ ಶೀರ್ಷಿಕೆಯಲ್ಲೇ ದೊಡ್ಡದಾಗಿ ಬಿಂಬಿಸುತ್ತದೆ. ಅದು ಶೀರ್ಷಿಕೆಯಲ್ಲಷ್ಟೇ ದೊಡ್ಡದಾಗದೆ ಲೇಖನದ ಪ್ರತಿ ಪ್ರಸಂಗಗಳ ಮೂಲಕ ದೊಡ್ಡದಾಗಿ ಬೆಳೆಯುತ್ತದೆ. ‘ಮಾಯಾಬಜಾರ್’ ಚಿತ್ರದ ಘಟೋತ್ಕಚನ ‘ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು’ ಎಂಬ ಹಾಡಿನಿಂದ ಆರಂಭಿಸಿ, ‘ಸತ್ಯ ಹರಿಶ್ಚಂದ್ರ’ ಚಿತ್ರದ ‘ಶ್ರಾದ್ಧದೂಟ ಸುಮ್ಮನೆ, ನೆನಸಿಕೊಂಡ್ರೆ ಜುಮ್ಮನೆ’ ಹಾಡನ್ನು ಹಾದು ‘ಬೂತಯ್ಯನ ಮಗ ಅಯ್ಯು’ ಚಿತ್ರದ ಹೋಟೆಲ್ ಪ್ರಸಂಗವನ್ನು ದಾಖಲಿಸುತ್ತದೆ. ವಿಶೇಷವಾಗಿ ‘ಬೇಡರ ಕಣ್ಣಪ್ಪ’ ಚಿತ್ರದ ‘ಶಿವಪ್ಪ ಕಾಯೊ ತಂದೆ ಮೂರು ಲೋಕ ಸ್ವಾಮಿ ದೇವಾ | ಹಸಿವೆಯನ್ನು ತಾಳಲಾರೆ ಕಾಪಾಡೆಯಾ’ ಎಂಬ ಹಾಡಿನ ಸಂದರ್ಭವನ್ನು ರಘುನಾಥ್ ವಿಶ್ಲೇಷಿಸುವ ರೀತಿಯು ಒಳನೋಟದ ಅನನ್ಯ ಮಾದರಿಯಾಗಿದೆ. ಇದು ‘ಹಸಿದ ದೀನರ ಪಾಲಿಗೆ ಪ್ರಾರ್ಥನಾಗೀತೆ’ ಎಂಬ ಅವರ ವ್ಯಾಖ್ಯಾನ ಮತ್ತು ಅದನ್ನು ಸಮಕಾಲೀನ ಸಂದರ್ಭಕ್ಕೆ ತಂದು ತೋರುವ ಕಾಣ್ಕೆ, ಕಳಕಳಿಯ ಕಣ್ಣೋಟವಾಗಿದೆ. ಈ ಲೇಖನವು ಇಡೀ ಕೃತಿಯ ವಸ್ತು ನಿರ್ವಹಣಾ ವಿಧಾನದ ದಿಕ್ಸೂಚಿಯಂತಿದೆ.
‘ಕನಕಮಂತ್ರವ ಜಪಿಸಿರೋ’ ಎಂಬ ಲೇಖನವು ರಘುನಾಥ್ ಅವರ ಪ್ರಬುದ್ಧ ನೋಟಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಕನ್ನಡದ ನೂರಾ ಒಂದನೇ ಸಿನಿಮಾವಾದ ‘ಭಕ್ತ ಕನಕದಾಸ’ದ ಪ್ರಸ್ತಾಪದಿಂದ ಪ್ರಾರಂಭಿಸಿ, ‘ಸತ್ಯ ಹರಿಶ್ಚಂದ್ರ’ ಚಿತ್ರದ ‘ಕುಲದಲ್ಲಿ ಕೀಳ್ಯಾವುದೋ’ ಎಂದು ಹಾಡನ್ನು ಹಾದು ‘ಸನಾದಿ ಅಪ್ಪಣ್ಣ’ನನ್ನು ಒಳಗೊಂಡು ‘ಚೋಮನ ದುಡಿ’ಗೆ ಬಂದು, ಅಂದಿನಿಂದ ಇಂದಿನವರೆಗಿನ ಅನೇಕ ಕನ್ನಡ ಚಿತ್ರಗಳ ವಸ್ತು ಮತ್ತು ಹಾಡುಗಳ ವಿವರಣೆ, ವಿಶ್ಲೇಷಣೆಗಳ ಮೂಲಕ ಕೊಳಕು ಜಾತಿಪದ್ಧತಿಗೆ ಪ್ರತಿರೋಧ ಒಡ್ಡುವ ಒಳಹರಿವಿನಿಂದ ಈ ಲೇಖನ ವಿಶಿಷ್ಟವೆನ್ನಿಸುತ್ತದೆ. ತಾವು ಹೇಳುವ ಎಲ್ಲ ಮಾತುಗಳನ್ನೂ ಚಿತ್ರಗಳ ವಸ್ತುವಿವರಗಳ ಮೂಲಕವೇ ಸರಳವಾಗಿ ಕಟ್ಟಿಕೊಡುವ ಸಮರ್ಥ ಶೈಲಿಯನ್ನು ಈ ಲೇಖನ ಒಳಗೊಂಡಿದ್ದು, ಸಿನಿಮಾ ಮತ್ತು ಸಮಾಜವನ್ನು ಒಟ್ಟಿಗೇ ಪರಿಶೀಲಿಸಲಾಗಿದೆ.
‘ರಾಜಕಾರಣ: ಅಲ್ಲೊಂದು ಮಿಂಚು, ಇಲ್ಲೊಂದು ಮುಗುಳು’ ಎಂಬ ಲೇಖನವು ರಘುನಾಥ್ ಅವರ ಗಂಭೀರ ನೋಟ, ನಿರೂಪಣೆಗಳ ಮತ್ತೊಂದು ಮಾದರಿ. ೧೯೪೭ರಲ್ಲಿ ಬಂದ ‘ಮಹಾತ್ಮ ಕಬೀರ’ ಚಿತ್ರದ ಹುಟ್ಟಿನ ವಿವರಗಳಿಂದ ಆರಂಭವಾಗುವ ಲೇಖನವು ‘ಕೋಮುದಳ್ಳುರಿಗೆ ಸಿನಿಮಾ ಮೂಲಕ ಉತ್ತರವನ್ನು ಯಾಕೆ ಹುಡುಕಬಾರದು?’ ಎಂದು ಆರ್. ನಾಗೇಂದ್ರರಾಯರ ಮನದಲ್ಲಿ ಮೂಡಿದ ಪ್ರಶ್ನೆಯನ್ನು ಪ್ರಸ್ತಾಪಿಸುತ್ತದೆ. ಕನ್ನಡ ಸಿನಿಮಾವೊಂದು ಅಂದು ಕೋಮುದಳ್ಳುರಿಗೆ ಉತ್ತರವಾಗಿ ಸೌಹಾರ್ದ ಸಂಕೇತವಾದ ಮಹಾತ್ಮ ಕಬೀರರನ್ನು ಎದುರಾಗಿಸಿದ್ದು ದೊಡ್ಡ ಸಾಂಸ್ಕೃತಿಕ ಸಂಗತಿಯೇ ಸರಿ. ಅದು ಅಂದಿನದಷ್ಟೇ ಅಲ್ಲ, ಇಂದಿನ ಸನ್ನಿವೇಶವನ್ನೂ ಎದುರಿಗಿಡುತ್ತದೆ. ಕನ್ನಡದಲ್ಲಿ ಬಂದಿರುವ ರಾಜಕಾರಣ ಕೇಂದ್ರಿತ ಸಿನಿಮಾಗಳನ್ನು ರಘುನಾಥ್ ವಸ್ತುನಿಷ್ಠವಾಗಿ ವಿಶ್ಲೇಷಿಸುವ ವಿಧಾನದಲ್ಲೇ ‘ನೈಜ ರಾಜಕೀಯ ಸಿನಿಮಾ’ದ ಸ್ವರೂಪವನ್ನು ಸಾದರಪಡಿಸುತ್ತಾರೆ. ವ್ಯಾಪಾರಿ ಮಾದರಿ ಮತ್ತು ಪರ್ಯಾಯ ಮಾದರಿಗಳ ಮುಖ್ಯ ಚಿತ್ರಗಳನ್ನು ವಿಶ್ಲೇಷಣೆಗೆ ಒಡ್ಡುವ ಮೂಲಕ ರಾಜಕೀಯ ವಸ್ತುವಿನ ವ್ಯಾಪ್ತಿ ಮತ್ತು ಮಿತಿಗಳನ್ನು ಮುಂದಿಡುತ್ತಾರೆ.
‘ಜನಪ್ರಿಯತೆ-ಜನಪರತೆ: ಕೆಲವು ಟಿಪ್ಪಣಿಗಳು’ ಎಂಬ ಲೇಖನವು ಸಮಕಾಲೀನ ಪ್ರಜ್ಞಾ ಪರಂಪರೆಗೆ ಸೇರಿದ ವ್ಯಾಖ್ಯಾನವನ್ನು ಒಳಗೊಂಡಿದೆ. ಜನಪ್ರಿಯ ಮತ್ತು ಜನಪರ – ಎರಡೂ ಒಂದಾಗುವುದು ಕಷ್ಟಸಾಧ್ಯದ ಕ್ರಿಯೆ. ನನ್ನ ದೃಷ್ಟಿಯಲ್ಲಿ ಕಲಾತ್ಮಕವೆಂದು ಕರೆಸಿಕೊಂಡ ಚಿತ್ರಗಳಿಗಿಂತ ‘ಜನಪ್ರಿಯ’ವೆಂಬ ಚಿತ್ರಗಳು ಹೆಚ್ಚು ಜನಪರ ವಸ್ತುಗಳನ್ನು ಒಳಗೊಂಡಿವೆ. ನಿರೂಪಣೆಯಲ್ಲಿ ನಿರೀಕ್ಷಿತ ಆಳಕ್ಕಿಂತ ಅಗಲವೇ ಹೆಚ್ಚಾಗಿ ಕಾಣುವ ಜನಪ್ರಿಯ ಚಿತ್ರಗಳು ಜನಮಾನಸದ ‘ಸಮೂಹ ಒಪ್ಪಿತ’ ಸಂಗತಿಗಳತ್ತ ಗಮನಹರಿಸಿದರೆ ಕಲಾತ್ಮಕವೆಂಬ ಚಿತ್ರವಲಯದಲ್ಲಿ ಕೆಲವು ಸಾಮಾಜಿಕ ಜನಪರ ವಸ್ತುವನ್ನು ಒಳಗೊಂಡಿದ್ದರೂ ನವ್ಯಸಾಹಿತ್ಯದಂತೆ ವ್ಯಕ್ತಿನಿಷ್ಠ ನೋಟದ ಚಿತ್ರಗಳೇ ಮಾಧ್ಯಮ ಮತ್ತು ಪ್ರಶಸ್ತಿ ವಲಯದಲ್ಲಿ ‘ಜನಪ್ರಿಯ’ವಾದವು. ಅದೇನೇ ಇರಲಿ, ರಘುನಾಥ್ ತಮ್ಮ ವಿಶ್ಲೇಷಣೆಯ ಕಕ್ಷೆಗೆ ಎಲ್ಲ ಮಾದರಿಯ ಚಿತ್ರಗಳನ್ನೂ ಪರಿಗಣಿಸುತ್ತಾರೆ. ಒಳ್ಳೆಯ ಸಿನಿಮಾಗಳನ್ನು ಅರ್ಥ ಮಾಡಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸುತ್ತಾರೆ. ‘ಚೌಕಟ್ಟುಗಳನ್ನು ಮೀರುವುದೇ ಎಲ್ಲ ಕಾಲದ ಒಳ್ಳೆಯ ಕಲೆಯ ಪ್ರಮುಖ ಲಕ್ಷಣ’ ಎಂದು ಪ್ರತಿಪಾದಿಸುವ ರಘುನಾಥ್, ‘ಒಳ್ಳೆಯ ಸಿನಿಮಾ ಕುರಿತು ನಿರ್ದಿಷ್ಟ ಚೌಕಟ್ಟೊಂದನ್ನು ಕಲ್ಪಿಸಿಕೊಳ್ಳಲು ಹೊರಡುವುದು ವ್ಯರ್ಥ ಕಸರತ್ತೂ ಆಗಬಹುದು’ ಎಂದು ಭಾವಿಸಿದರೂ ‘ಒಳ್ಳೆಯ ಸಿನಿಮಾವನ್ನು ಅರ್ಥ ಮಾಡಿಕೊಳ್ಳುವ ಸಾಧ್ಯತೆಗಳ ಹುಡುಕಾಟ ಅನಿವಾರ್ಯ’ ಎಂದು ತೀರ್ಮಾನಿಸುತ್ತಾರೆ. ಇನ್ನೊಮ್ಮೆ ‘ನೋಡುಗನನ್ನು ಯಾವ ಚಿತ್ರ ಹಿಡಿದಿಟ್ಟುಕೊಳ್ಳುವುದೋ ಅದು ಒಂದು ಒಳ್ಳೆಯ ಸಿನಿಮಾ ಎಂದು ಸರಳವಾಗಿ ಹೇಳಬಹುದು’ ಎನ್ನುತ್ತಾರೆ. ಇಲ್ಲಿ ‘ಸರಳವಾಗಿ’ ಎಂಬ ಪದಪ್ರಯೋಗವನ್ನು ಗಮನಿಸಬೇಕು. ನೋಡುಗನನ್ನು ಹಿಡಿದಿಟ್ಟುಕೊಳ್ಳುವ ಸಿನಿಮಾಗಳೆಲ್ಲವೂ ಪರಿಪೂರ್ಣ ಒಳ್ಳೆಯ ಸಿನಿಮಾಗಳೆಂದು ತೀರ್ಮಾನಿಸಲಾಗದೆಂಬ ಸೂಚನೆಯನ್ನು ‘ಸರಳವಾಗಿ ಹೇಳಬಹುದು’ ಎಂಬ ಮಾತು ಕೊಡುತ್ತದೆಯೆಂಬುದು ನನ್ನ ಗ್ರಹಿಕೆ. ಕಡೆಗೆ ಇವರು ಹೇಳುವ ಮಾತು ಎಲ್ಲರ ಮನಸ್ಸಿಗೂ ಬರಬೇಕು. ಆ ಮಾತು ಹೀಗಿದೆ: ‘ಜನಪ್ರಿಯತೆ ಮತ್ತು ಜನಪರತೆ ಒಟ್ಟೊಟ್ಟಿಗೆ ಸಾಗಬೇಕಾಗಿದೆ. ಇನ್ನೂ ಕೆಲವೊಮ್ಮೆ ಆಶಯಗಳು ಅತ್ಯುತ್ತಮವಾಗಿರುತ್ತವೆ. ಕಥೆ ಮಾತ್ರ ದುರ್ಬಲವಾಗಿರುತ್ತದೆ. ಹೀಗಾದಾಗ ಕೂಡ ಸಿನಿಮಾ ಸೊರಗುತ್ತದೆ.’
‘ಹಳೆಯ ನೋಟ! ಕಡೆಯ ಆಟ?’ – ಮತ್ತೊಂದು ವಸ್ತುವಿಶೇಷದ ಲೇಖನ. ಇದು ನಮ್ಮ ಚಿತ್ರಮಂದಿರಗಳ ಚರಿತ್ರೆಯನ್ನು ಬಿಚ್ಚಿಡುತ್ತದೆ. ಬೆಂಗಳೂರಿನ ಮೆಜೆಸ್ಟಿಕ್ ವಲಯದಲ್ಲಿದ್ದ ಥಿಯೇಟರ್ಗಳು ಬರಬರುತ್ತ ಇಲ್ಲವಾಗಿ, ಮಾಯಾಬಜಾರ್ ಬಂದುಬಿಟ್ಟ ಇತಿಹಾಸದ ಪಕ್ಷಿನೋಟವನ್ನು ಈ ಲೇಖನದಲ್ಲಿ ಕಾಣಬಹುದು. ಚಿತ್ರಮಂದಿರದ ಅಸ್ತಿತ್ವ ಬದಲಾಗುತ್ತ ಬಂದ ಬಗೆಯನ್ನು ಈ ಬರಹದಲ್ಲಿ ಅರಿಯಬಹುದು. ಚಿತ್ರಗಳ ಒಳಗನ್ನು ಮಾತ್ರವಲ್ಲದೆ ಅವುಗಳು ಪ್ರದರ್ಶನಗೊಳ್ಳುವ ತಾಣಗಳ ಸ್ಥಿತ್ಯಂತರವನ್ನೂ ರಘುನಾಥ್ ಗಮನಿಸಿರುವುದು ಅವರ ಕಣ್ಣೋಟದ ವ್ಯಾಪ್ತಿಗೊಂದು ಉದಾಹರಣೆಯಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ವಾರ್ಷಿಕ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಆಯಾ ವರ್ಷದ ಅಧ್ಯಕ್ಷರು ತಮ್ಮ ಭಾಷಣಗಳಲ್ಲಿ ಮಾಡಿದ ಸಿನಿಮಾ ಪ್ರಸ್ತಾಪಗಳನ್ನು ‘ಮಂತ್ರ ಕಣಾ ಶಕ್ತಿ ಕಣಾ…’ ಲೇಖನವು ಒಳಗೊಂಡಿದೆ. ಅಷ್ಟಕ್ಕೇ ಸೀಮಿತವಾಗದೆ ಕನ್ನಡತನದ ಪ್ರಶ್ನೆಯನ್ನು ಹಾಕಿಕೊಂಡು ಉತ್ತರ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ‘ಸಾಹಿತ್ಯ ಕ್ಷೇತ್ರದೊಂದಿಗಿನ ಒಡನಾಟ ಸಿನಿಮಾಗಳಲ್ಲಿನ ಕನ್ನಡತನ ಮತ್ತಷ್ಟು ಪ್ರಖರಗೊಳ್ಳಲಿಕ್ಕೆ ಕಾರಣವಾಯಿತು’ ಎಂದು ಸರಿಯಾಗಿಯೇ ಭಾವಿಸುವ ರಘುನಾಥ್ ‘ಸಾಹಿತ್ಯಕೃತಿಗಳನ್ನು ಆಯ್ದುಕೊಳ್ಳುವುದೆಂದರೆ, ಅದು ಸಿನಿಮಾವೊಂದು ತನ್ನ ಭಾಷೆಯೊಂದಿಗೆ, ಸಂಸ್ಕೃತಿಯ ಜೊತೆ ಗುರ್ತಿಸಿಕೊಳ್ಳುವ ಪ್ರಯತ್ನವಷ್ಟೇ’ ಎಂದೂ ಸ್ಪಷ್ಟಪಡಿಸುತ್ತಾರೆ. ನಿಜ; ಈ ಪ್ರಾರಂಭಿಕ ಪ್ರಯತ್ನ ಯಶಸ್ವಿಯಾಗಬೇಕಾದರೆ ಒಳ್ಳೆಯ ಕೃತಿಯನ್ನು ಕಟ್ಟಿಕೊಡಬೇಕು. ‘ಕನ್ನಡ ಸಂಸ್ಕೃತಿ ಮತ್ತು ಸಿನಿಮಾ ಬಗ್ಗೆ ಮಾತನಾಡುವಾಗ’ ರಣಧೀರ ಕಂಠೀರವ, ಶ್ರೀಕೃಷ್ಣದೇವರಾಯ, ಮಯೂರ, ಇಮ್ಮಡಿ ಪುಲಿಕೇಶಿ, ಕಿತ್ತೂರು ಚೆನ್ನಮ್ಮ, ವೀರಸಂಕಲ್ಪ ಚಿತ್ರಗಳ ಮಹತ್ವ ದೊಡ್ಡದು ಎಂದು ಸರಿಯಾಗಿಯೇ ವಿಚಾರ ಮಂಡಿಸುವ ರಘುನಾಥ್, ‘ಚಾರಿತ್ರಿಕ ವ್ಯಕ್ತಿತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಸಿನಿಮಾ ಮಾಧ್ಯಮ, ಅದೇ ವ್ಯಕ್ತಿತ್ವಗಳನ್ನು ವ್ಯಾಪಾರಿ ಕಾರಣಕ್ಕೆ ತಮಗಿಷ್ಟ ಬಂದಂತೆ ಬಳಸಿಕೊಂಡಿರುವುದೂ ಇದೆ’ಯೆಂದು ಗುರುತಿಸಿ ‘ವೀರ ಮದಕರಿ, ಕೆಂಪೇಗೌಡ, ವಿಷ್ಣುವರ್ಧನ, ಬಾಹುಬಲಿ ಸಿನಿಮಾಗಳ ಶೀರ್ಷಿಕೆ ಹಾಗೂ ಕಥೆಗೆ ಇರುವ ವ್ಯತ್ಯಾಸವನ್ನು ನೋಡಿದರೆ, ಮೌಲ್ಯ ಎನ್ನುವುದಕ್ಕೆ ಚಿತ್ರೋದ್ಯಮದಲ್ಲಿ ಹಣ ಎನ್ನುವ ಅರ್ಥವಷ್ಟೇ ಇರುವಂತೆ ಕಾಣಿಸುತ್ತದೆ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ.
ಒಪ್ಪಬೇಕಾದ ಮಾತು. ‘ಕರ್ನಾಟಕ ಏಕೀಕರಣವನ್ನು ಭಾವನಾತ್ಮಕವಾಗಿ ಸಾಧ್ಯವಾಗಿಸಿದ್ದು ರಾಜ್ ಸಿನಿಮಾಗಳ ಇನ್ನೊಂದು ಸಾಧನೆ’ ಎಂಬ ಮಾತು ಅರ್ಥಪೂರ್ಣ ಹಾಗೂ ನಿರ್ಣಯಾತ್ಮಕ ನುಡಿ. ಆದರೆ ಗಿರೀಶ ಕಾಸರವಳ್ಳಿಯವರಂಥ ನಿರ್ದೇಶಕರು ‘ತಮ್ಮ ಸಿನಿಮಾಗಳ ಮೂಲಕ ಕನ್ನಡ ಸಂಸ್ಕೃತಿಯೊಂದಿಗಿನ ಸಂವಾದವನ್ನು ಜೀವಂತವಾಗಿ ಇಟ್ಟಿದ್ದಾರೆ’ ಎಂದು ಗೌರವಿಸುವ ರಘುನಾಥ್ ‘ಯೋಗರಾಜ್ ಭಟ್ ಅವರಂಥ ಈ ತಲೆಮಾರಿನ ಕೆಲವು ನಿರ್ದೇಶಕರ ಜನಪ್ರಿಯ ಸಿನಿಮಾಗಳಲ್ಲಿ ಕೂಡ ಕನ್ನಡದ ಹೊಸ ಸಾಧ್ಯತೆಯನ್ನು ಕಾಣಬಹುದು’ ಎಂದು ಅದೇ ಉಸಿರಲ್ಲಿ ಹೇಳುವುದು ಚರ್ಚಾಸ್ಪದ. ಈ ತಲೆಮಾರಿನಲ್ಲಿ ಕೆಲವರು ಕನ್ನಡದ ಹೊಸ ಸಾಧ್ಯತೆಗಳನ್ನು ಹುಡುಕುತ್ತಿರಬಹುದು. ಆದರೆ ಆ ಸಾಲಿಗೆ ಯೋಗರಾಜ ಭಟ್ ಹೇಗೆ ಸೇರುತ್ತಾರೆಂಬ ಸಂಗತಿಯು ಸಮರ್ಥನೆಯ ವಿವರಗಳನ್ನು ಅಪೇಕ್ಷಿಸುತ್ತದೆ. ‘ದೇವ್ರವ್ನೆ ನೀ ಕಾರ್ಡು ಹೊಡಿ’ ಎಂಬ ಲೇಖನದಲ್ಲೂ ರಘುನಾಥ ಯೋಗರಾಜ ಭಟ್ ಅವರ ಹಾಡಿಗೆ ಅತಿಯಾದ ಅರ್ಥಗೌರವ ಕೊಡುತ್ತಾರೆ ಎನ್ನಿಸುತ್ತದೆ.
ಈ ಲೇಖನದಲ್ಲಿ ಹೋಲಿಕೆಗೆಂದು ಕುಮಾರವ್ಯಾಸಾದಿಗಳನ್ನು ಕರೆತರುವ ಅಗತ್ಯವೂ ಇರಲಿಲ್ಲ. ರಘುನಾಥ್ ಅವರಲ್ಲಿ ಒಮ್ಮೊಮ್ಮೆ ಇಣುಕುವ ದೂರಾನ್ವಯದ ಒಳನೋಟದ ಪರಿಣಾಮವಿದು ಎಂದು ನಾನು ಭಾವಿಸುತ್ತೇನೆ. ಕನ್ನಡ ಚಿತ್ರರಂಗದ ಹೊಸ ತಲೆಮಾರಿನಲ್ಲಿ ಅವರಿಗೆ ಒಂದು ಸ್ಥಾನವಿದೆ. ಆದರೆ, ಒಳ್ಳೆಯ ಸಿನಿಮಾ ಹುಡುಕಾಟದ ರಘುನಾಥ್ ಅವರ ಒಳ್ಳೆಯತನವು ದೂರಾನ್ವಯದಲ್ಲಿ ವ್ಯಯವಾಗಬಾರದೆಂಬ ಪ್ರೀತಿಯ ಕಳಕಳಿ ನನ್ನದಾಗಿದೆ. ‘ದೇವ್ರವ್ನೆ ನೀ ಕಾರ್ಡು ಹೊಡಿ’ ಎಂದು ಈ ಲೇಖನ ‘ಯಕ್ಕಾ ರಾಜ ರಾಣಿ ನನ್ನ ಕೈಯೊಳಗೆ’ ಎಂಬ ಗಪದ್ಯದ ದೂರಾನ್ವಯದ ಅರ್ಥ ನಿರೂಪಣೆಯನ್ನು ಹೊರತುಪಡಿಸಿದರೆ ಉಳಿದ ವಿವರಗಳ ವ್ಯಾಪ್ತಿ ಮತ್ತು ಕಳಕಳಿ ಅರ್ಥಗ್ರಹಿಕೆಯ ಗೌರವವನ್ನು ಉಳಿಸಿಕೊಂಡಿದೆ. ಜೊತೆಗೆ ಜೂಜಾಟವನ್ನು ಸಿನಿಮಾ ಪ್ರಕ್ರಿಯೆಗೇ ಹೋಲಿಸುವ ಉಲ್ಲೇಖದಿಂದ ಇನ್ನೊಂದು ನೆಲೆಯನ್ನೂ ನೋಡುವಂತೆ ಮಾಡುತ್ತದೆ.
ಕಂಠೀರವ ಸ್ಟುಡಿಯೊ ಕುರಿತಂತೆ ‘ಚಂದನವನದ ಸಾಂಸ್ಕೃತಿಕ ರೂಪಕ ಕಂಠೀರವ’ ಎಂಬ ಲೇಖನವನ್ನು ಬರೆದಿರುವ ರಘುನಾಥ್, ಆ ನೆಪದಲ್ಲಿ ಕರ್ನಾಟಕದ ಸಿನಿಮಾ ಚಿತ್ರೀಕರಣ ಸ್ಟುಡಿಯೊಗಳ ಇತಿಹಾಸವನ್ನೇ ನಿರೂಪಿಸುತ್ತಾರೆ. ಕಂಠೀರವ ಕೇಂದ್ರಿತ ಬರಹವು ಕರ್ನಾಟಕದ ಸ್ಟುಡಿಯೊಗಳ ಪಕ್ಷಿನೋಟವಾಗುವಂತೆ ಮಾಡಿದ್ದಾರೆ. ಇದು ರಘುನಾಥ್ ಬರಹಗಳ ಒಂದು ವಿಶೇಷವೂ ಹೌದು. ಒಂದು ನಿರ್ದಿಷ್ಟ ನಿದರ್ಶನದಿಂದ ಆರಂಭಿಸಿ ಅದಕ್ಕೆ ಹೋಲುವ ಅನೇಕ ಅಂಶಗಳನ್ನು ಸಂಯೋಜಿಸುತ್ತ ‘ಪ್ರಬಂಧ’ವನ್ನು ರೂಪಿಸುವುದು ರಘುನಾಥ್ ಬರಹಗಳ ವಿನ್ಯಾಸವಾಗಿದೆ. ಕಂಠೀರವ ಸ್ಟುಡಿಯೊ ಕುರಿತ ಲೇಖನದಲ್ಲಿ ಡಾ. ರಾಜಕುಮಾರ್ ಅವರ ಪ್ರಸ್ತಾಪಕ್ಕೆ ಹೊರಳುತ್ತ ಇದೇ ವಿನ್ಯಾಸ ಮತ್ತಷ್ಟು ವಿಸ್ತಾರಗೊಂಡಿದೆ. ರಾಜಕುಮಾರ್ ಅವರ ಸಮಾಧಿಯಿರುವ ಸ್ಟುಡಿಯೋದ ಒಂದು ಭಾಗದಿಂದ ಇಡೀ ಆವರಣಕ್ಕೆ ಲಭ್ಯವಾದ ಪ್ರಸಿದ್ಧಿಯನ್ನು ಸಮರ್ಥವಾಗಿ ಪ್ರಸ್ತಾಪಿಸಲಾಗಿದೆ.
ನನಗೆ ಹೆಚ್ಚು ಇಷ್ಟವಾದ ಇನ್ನೊಂದು ಲೇಖನ ‘ನಿದ್ದಿ ಮಾಡೊ ದೇವರಂಥ ಗಾಂಧಿ…’. ಸಿನಿಮಾ ಮಾಧ್ಯಮವನ್ನು ಗಾಂಧೀಜಿಯವರು ಉಪೇಕ್ಷಿಸಿದರೂ ಸಿನಿಮಾಕ್ಕೆ ಮಾತ್ರ ಗಾಂಧಿಯವರ ಮಹತ್ವವನ್ನು ನಿರ್ಲಕ್ಷಿಸುವುದು ಸಾಧ್ಯವಾಗಲಿಲ್ಲವೆಂಬ ಹೇಳಿಕೆಯೊಂದಿಗೆ ಆರಂಭವಾಗುವ ಈ ಲೇಖನವು ಸಿನಿಮಾಕೃತಿಗಷ್ಟೇ ಸೀಮಿತವಾಗುವುದಿಲ್ಲ.
ಸಿನಿಮಾ ವಲಯದಲ್ಲಿರುವ ‘ಗಾಂಧಿ ಕ್ಲಾಸ್’ ಎಂಬ ಪರಿಭಾಷೆ, ಬೆಂಗಳೂರಿನ ಸಿನಿಮಾ ಚಟುವಟಿಕೆಗಳ ಕೇಂದ್ರವಾದ ‘ಗಾಂಧಿನಗರ’ ಮುಂತಾದ ವಿಷಯಗಳನ್ನು ಒಳಗೊಳ್ಳುತ್ತದೆ. ೧೯೭೪ರಲ್ಲಿ ತೆರೆಕಂಡ ಕೆ.ಎಂ. ಶಂಕರಪ್ಪನವರ ನಿರ್ದೇಶನದ ‘ಮಾಡಿ ಮಡಿದವರು’ ಚಿತ್ರವನ್ನು ರಘುನಾಥ್ ವ್ಯಾಖ್ಯಾನಿಸಿದ ರೀತಿಯಿಂದ ಆ ಚಿತ್ರಕ್ಕೆ ೪೪ ವರ್ಷಗಳ ನಂತರವಾದರೂ ನ್ಯಾಯ ಸಿಕ್ಕಿದಂತಾಗಿದೆ. ಆ ಚಿತ್ರ ಬಿಡುಗಡೆಯಾದಾಗ ‘ಪ್ರಜಾವಾಣಿ’ಯಲ್ಲಿ ‘ಮಾಡದೆ ಮಡಿದವರು’ ಎಂಬ ಶೀರ್ಷಿಕೆಯ ವಿಮರ್ಶೆ – ಅಲ್ಲ – ಟೀಕೆ ಪ್ರಕಟವಾಗಿತ್ತು. ಆಗ ಅದಕ್ಕೆ ಪ್ರತಿಯಾಗಿ ಕೆಲವು ಲೇಖಕರ ಅನಿಸಿಕೆಗಳನ್ನು ಸಂಗ್ರಹಿಸಿ ‘ಶೂದ್ರ’ ಪತ್ರಿಕೆ ಪ್ರಕಟಿಸಿತ್ತು.
ಈಗ ರಘುನಾಥ್ ಅವರು ಬರೆದದ್ದನ್ನು ಓದಲು ಶಂಕರಪ್ಪನವರೇ ಬದುಕಿಲ್ಲ! “ಸ್ವಾತಂತ್ರ್ಯ ಚಳವಳಿಯ ಕಥನವನ್ನು ಪ್ರಧಾನವಾಗಿ ಒಳಗೊಂಡ ಕನ್ನಡದ ಏಕೈಕ ಸಿನಿಮಾ ಎನ್ನುವುದು ‘ಮಾಡಿ ಮಡಿದವರು’ ಚಿತ್ರದ ವಿಶೇಷಗಳಲ್ಲೊಂದು’’ ಎಂಬ ರಘುನಾಥ್ ಮಾತು ಮುಖ್ಯವಾದುದು. ಅಲ್ಲದೆ ಈ ಸಿನಿಮಾದಲ್ಲಿ ಗಾಂಧೀಜಿ ನೇರವಾಗಿ ಕಾಣಿಸದಿದ್ದರೂ ಗಾಂಧಿ ಮಾತುಗಳನ್ನು ಅನುಷ್ಠಾನಗೊಳಿಸುವ ಕಾರ್ಯಕರ್ತರಲ್ಲಿ ಗಾಂಧಿ ಕಾಣಿಸುತ್ತಾರೆಂಬ ಕಾಣ್ಕೆ ಗಮನಾರ್ಹವಾದುದು. ರಘುನಾಥ್ ಅವರ ಸಕಾರಾತ್ಮಕ ಸಿನಿಮಾಶೋಧಕ್ಕೆ ಇದೊಂದು ಉದಾಹರಣೆಯಾಗಬಲ್ಲದು. ಮುಂದೆ ಗಿರೀಶ ಕಾಸರವಳ್ಳಿಯವರ ‘ಕೂರ್ಮಾವತಾರ’ವನ್ನು ವಿವರವಾಗಿ ವ್ಯಾಖ್ಯಾನಿಸುತ್ತಾರೆ. ನಂಜುಂಡೇಗೌಡರ ‘ನಾನು ಗಾಂಧಿ’ಯ ಪ್ರಸ್ತಾಪವನ್ನೂ ಮಾಡುತ್ತಾರೆ. ಈ ಮೂರು ಚಿತ್ರಗಳು ಮಾತ್ರವೇ ‘ಗಾಂಧಿಯನ್ನು ಪೂರ್ಣವಾಗಿ ಎದುರುಗೊಂಡಿರುವ’ ಚಿತ್ರಗಳೆಂದು ರಘುನಾಥ್ ಅಭಿಪ್ರಾಯಿಸಿ ಅನಾವರಣಗೊಳಿಸಿದ್ದಾರೆ. ಈ ಮೂರು ಚಿತ್ರಗಳಲ್ಲದೆ ಗಾಂಧೀಜಿ ಪ್ರಸ್ತಾಪದ ಕನ್ನಡದ ಬಹುಪಾಲು ಚಿತ್ರಗಳನ್ನು ಪರಿಶೀಲಿಸಿ ವ್ಯಾಪ್ತಿ ಮತ್ತು ಮಿತಿಗಳನ್ನು ಗುರುತಿಸಿರುವುದು ಈ ಲೇಖನದ ವಿಶೇಷ.
ರಘುನಾಥ್ ಎಂತೆಂಥ ಚಿಕ್ಕ ವಿಷಯಗಳನ್ನು ದೊಡ್ಡದಾಗಿ ಗಮನಿಸಿ ಸಮಗ್ರ ಚಿತ್ರ ನೀಡಲು ಪ್ರಯತ್ನಿಸುತ್ತಾರೆಂಬುದಕ್ಕೆ ಐಟಂ ಸಾಂಗ್ ಕುರಿತ ‘ಬಂತು ಬಂತು ಕರೆಂಟು ಬಂತು’ ಲೇಖನ ಸಾಕ್ಷಿಯಾಗಿದೆ. ಇಲ್ಲಿ ಐಟಂ ಸಾಂಗ್ ಸ್ಥಾನಮಾನದ ಚರಿತ್ರೆಯೇ ಇದೆ. ಐಟಂ ಸಾಂಗ್ಗಳಿಗೇ ಮೀಸಲಾದ ನಟಿಯರಿಂದ ಹಿಡಿದು ನಾಯಕ ನಟಿಯರೇ ಐಟಂ ಸಾಂಗ್ಗಳಿಗೆ ಕುಣಿಯುವ ಸ್ಥಿತ್ಯಂತರವನ್ನು ಸೋದಾಹರಣವಾಗಿ ನಿರೂಪಿಸಲಾಗಿದೆ.
ರೂಕ್ಷರೂಪದ ಐಟಂ ಸಾಂಗ್ಗಳಿಗೆ ಎದುರಾಳಿಯಂತಿರುವ ಸೂಕ್ಷ್ಮ ರೂಪದ ಪ್ರೇಮಗೀತೆಗಳ ಬಗ್ಗೆಯೂ ಈ ಸಂಕಲನದಲ್ಲಿ ಒಂದು ಲೇಖನವಿದೆ. ‘ಹೂವು ಹಾಸಿಗೆ ಚಂದ್ರಚಂದನ ಬಾಹು ಬಂಧನ ಚುಂಬನ’ ಎಂಬ ದೀರ್ಘ ಶೀರ್ಷಿಕೆಯ ಲೇಖನವಿದು. ಮೊದಲಿಗೆ ಲೇಖಕರು ಪ್ರೇಮಕಥನವನ್ನು ನೀಡಿ ಆನಂತರ ಪ್ರೇಮಗೀತಾಕಥನವನ್ನು ಪ್ರವೇಶಿಸುತ್ತಾರೆ. ಕನ್ನಡ ಸಾಹಿತ್ಯದ ಕವಿಗಳ ಸಾಲುಗಳನ್ನು ಉಲ್ಲೇಖಿಸಿ ಸಿನಿಮಾಗೀತೆಗಳಿಗೆ ಸಂಬಂಧ ಕಲ್ಪಿಸುತ್ತಾರೆ. ಬಲವಂತದ ಪ್ರೇಮಕಥನಗಳೂ ಜನಮನ್ನಣೆ ಗಳಿಸಿರುವುದಕ್ಕೆ ಒಳವಿಷಾದವೂ ಈ ಲೇಖನದ ಆರಂಭದಲ್ಲೇ ವ್ಯಕ್ತವಾಗಿದೆ.
‘ಒರಟು ಹುಡುಗರ ಕಥೆಗಳಿವು’ ಎನ್ನುವ ಲೇಖಕರ ನಿಜವಾದ ಆಸಕ್ತಿಯಿರುವುದು ಆರ್ದ್ರ, ಆಪ್ತ ಪ್ರೇಮಗೀತೆ ಮತ್ತು ಕಥನಗಳನ್ನು ಕುರಿತು. ‘ಜನಸಾಮಾನ್ಯರು ಕೂಡ ಸಾಂಪ್ರದಾಯಿಕ ಮದುವೆಯ ಚೌಕಟ್ಟಿನಾಚೆ ಯೋಚಿಸಲು ಸಿನಿಮಾದ ಕಥನಗಳು ಕೊಂಚವಾದರೂ ಪ್ರೇರಣೆ ಒದಗಿಸಿವೆ’ಯೆಂಬ ರಘುನಾಥ್ ನೋಟ ನಿಜವಾದುದು. ನನ್ನ ದೃಷ್ಟಿಯಲ್ಲಿ ಇಂತಹ ಆರೋಗ್ಯಕರ ಪ್ರೇರಣೆ ಒದಗಿಸುವಲ್ಲಿ ಮುಖ್ಯವಾಹಿನಿ ಚಿತ್ರಗಳ ಪಾತ್ರ ಪ್ರಮುಖವಾದುದು. ಹಾಗೆ ನೋಡಿದರೆ ಪ್ರಗತಿಪರ ವಿಚಾರಗಳನ್ನು – ಸೂಕ್ಷ್ಮವೊ ರೂಕ್ಷವೊ – ಯಾವುದೊ ರೀತಿಯಲ್ಲಾದರೂ ಹೆಚ್ಚು ಪ್ರಸ್ತುತಪಡಿಸಿದ ಪ್ರಶಂಸೆಯೂ ಮುಖ್ಯವಾಹಿನಿ ಚಿತ್ರಗಳಿಗೇ ಸಲ್ಲಬೇಕು.

ಇರಲಿ, ಈ ಲೇಖನದಲ್ಲಿ ರಘುನಾಥ್ ‘ರತ್ನಗಿರಿ ರಹಸ್ಯ’ ಚಿತ್ರದ ‘ಅಮರ ಮಧುರ ಪ್ರೇಮ’ ಗೀತೆಯನ್ನು ಪ್ರಮುಖವಾಗಿ ಪರಿಗಣಿಸಿದ್ದು ನನಗೆ ಸಂತೋಷ ತಂದಿದೆ. ನಾವು ಚಿಕ್ಕವರಿದ್ದಾಗ ನೋಡಿದ ಸಿನಿಮಾ ‘ರತ್ನಗಿರಿ ರಹಸ್ಯ.’ ಇಂದಿಗೂ ಈ ಚಿತ್ರದ ಪ್ರೇಮಗೀತೆಗಳು ಅಮರವಾಗಿವೆ ಎಂದರೆ ಅದು ಪ್ರೇಮದ ಅಮರತ್ವವೂ ಹೌದು, ಗೀತೆಯ ಆಪ್ತತೆಯೂ ಹೌದು. ದೂರದ ಬೆಟ್ಟ, ಸಾಕ್ಷಾತ್ಕಾರ, ಪ್ರೇಮಲೋಕ, ಮುಂಗಾರುಮಳೆ ಮುಂತಾದ ಚಿತ್ರಗಳ ಪ್ರೇಮಗೀತಾ ಕಥನವೂ ಈ ಲೇಖನದ ಭಾಗವಾಗಿದೆ, ವಿವರಣೆ ವಿಶ್ಲೇಷಣೆಗಳ ಪ್ರೇಮವೂ ತುಂಬಿಕೊಂಡಿದೆ.
ರಘುನಾಥ್ ಮಳೆಯ ಪ್ರಸ್ತಾಪದ ಗೀತೆ ಮತ್ತು ಕಥನಗಳನ್ನು ಸೇರಿಸಿ ‘ಮಳೆಯ ಹಾಡು ಮರೆಯಬಹುದೇ…’ ಎಂದು ಲೇಖನಿಸುತ್ತ ಮೊದಲಿಗೆ ಕರ್ನಾಟಕದಲ್ಲಿ ೧೯೬೧ರಲ್ಲಾದ ಮಳೆಯ ಅನಾಹುತವನ್ನು ಪ್ರಸ್ತಾಪಿಸುತ್ತಾರೆ. ಆಗ ಪ್ರವಾಹ ಪರಿಹಾರ ನಿಧಿಗಾಗಿ ‘ಪ್ರಜಾವಾಣಿ’ ಪತ್ರಿಕೆಯು ರಾಜಕುಮಾರ್ ನೇತೃತ್ವದಲ್ಲಿ ಕನ್ನಡ ಕಲಾವಿದರ ರಾಜ್ಯ ಪ್ರವಾಸವನ್ನು ವ್ಯವಸ್ಥೆ ಮಾಡಿತ್ತು. ಈ ಘಟನೆಯಿಂದ ಆರಂಭವಾದ ಲೇಖನವು ಲೇಖಕರಿಗೆ ಸಹಜವೆಂಬಂತೆ ಮೊದಲಿಗೆ ‘ಮುಂಗಾರುಮಳೆ’ಯತ್ತ ಹೊರಳುತ್ತದೆ. ವಾಸ್ತವವಾಗಿ ಕನ್ನಡ ಚಿತ್ರರಂಗದಲ್ಲಿ ಮಳೆಯ ಕಾರಣಕ್ಕಾಗಿ ಮೊದಲು ನೆನಪಿಸಿಕೊಳ್ಳಬೇಕಾದ ಚಿತ್ರ ಗಿರೀಶ ಕಾಸರವಳ್ಳಿಯವರ ‘ದ್ವೀಪ’. ಆನಂತರ ರಘುನಾಥ್ ‘ದ್ವೀಪ’ ಚಿತ್ರಕ್ಕೆ ವಿಶ್ಲೇಷಣೆಯ ನ್ಯಾಯ ಒದಗಿಸುತ್ತಾರೆ.
‘ಮುಂಗಾರುಮಳೆ’ಗೂ ಸಲ್ಲಬೇಕಾದ ಸ್ಥಾನ ಸಂದಿದೆ. ಆನಂತರ ‘ಮಳೆಗೀತೆ’ಗಳ ಉಲ್ಲೇಖಗಳಿವೆ. ನನಗಂತೂ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ನೋಡಿದ ‘ಮಕ್ಕಳ ರಾಜ್ಯ’ ಚಿತ್ರದ ‘ಮಳೆಯೇ ಸುರಿದು ಬಾ’ ಹಾಡು ಈಗಲೂ ನೆನಪಾಗುತ್ತದೆ. ಈ ಲೇಖನದಲ್ಲಿ ಲೇಖಕರು ಮಳೆಯ ಬಳಕೆಯ ವಿವಿಧ ಸಂದರ್ಭಗಳನ್ನೂ ನೆನೆಯುವುದು ಉಲ್ಲೇಖನೀಯ ಅಂಶವಾಗಿದೆ. ಇದೇ ರಘುನಾಥ್ ನೋಟದ ವಿಶೇಷ. ಅವರದು ಒಕ್ಕಣ್ಣ ನೋಟವಲ್ಲ. ಇರುವ ಎರಡೂ ಕಣ್ಣುಗಳನ್ನು ಎಲ್ಲ ಕಡೆ ಹಾಯಿಸುತ್ತಾರೆ.
ಮನುಷ್ಯರ ಮಣ್ಣಿನ ಸಂಬಂಧವು ಮಾತಿಗೆ ನಿಲುಕದ ಅನುಭವ ಪರಂಪರೆಯನ್ನು ಒಳಗೊಂಡಿದೆ. ಅದಕ್ಕನುಗುಣವಾಗಿ ಮಣ್ಣು ಕಾಣ್ಕೆಯ ವಿವಿಧ ಮಜಲುಗಳನ್ನು ರಘುನಾಥ್ ಹೀಗೆ ಹೇಳುತ್ತಾರೆ: ‘ನಮ್ಮ ಭಾವಕೋಶದಲ್ಲಿನ ಮಣ್ಣಿಗೆ ವಿವಿಧ ಮುಖಗಳು. ಭೂಮಿತಾಯಿಯ ಚೊಚ್ಚಿಲ ಮಗ ನೆಚ್ಚಿದ ಮಣ್ಣು, ಕನ್ನಡದ ಅನನ್ಯತೆಯನ್ನು, ನಾಡು ನುಡಿಯ ಅಗ್ಗಳಿಕೆಯನ್ನು ಸಾರುವ ಮಣ್ಣು, ಹುಟ್ಟಿಗೆ ಭೂಮಿಕೆಯಾಗುವ ಮಣ್ಣು, ಸಾವಿಗೆ ವೇದಿಕೆಯಾಗುವ ಮಣ್ಣು, ಮಣ್ಣನ್ನು ಹೊರತುಪಡಿಸಿದರೆ ನಮ್ಮ ಬದುಕೇ ಮಣ್ಣು ಎನ್ನುವಷ್ಟರಮಟ್ಟಿಗೆ ಮಣ್ಣು ಜೀವಜಾಲವನ್ನು ಆವರಿಸಿಕೊಂಡಿದೆ’ – ಈ ಮಾತುಗಳಲ್ಲಿರುವ ಅರ್ಥಕ್ಕೆ ಅನುಸಾರವಾಗಿ ಅರಸುವ ಗುಣಶಕ್ತಿಯಿಂದ ಲೇಖಕರು ಕನ್ನಡ ಸಿನಿಮಾಗಳಲ್ಲಿನ ಮಣ್ಣಿನ ಸಂಬಂಧವನ್ನು ‘ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು’ ಎಂಬ ಲೇಖನದಲ್ಲಿ ನಿರೂಪಿಸಿದ್ದಾರೆ. ಚಂದವಳ್ಳಿಯ ತೋಟ, ಚೋಮನದುಡಿ, ಬೆಟ್ಟದ ಜೀವ, ಭೂದಾನ, ಕನಸೆಂಬೊ ಕುದುರೆಯನೇರಿ, ಪುಟ್ಟಕ್ಕನ ಹೈವೇ, ಕಾಮನಬಿಲ್ಲು, ಪೀಪ್ಲಿ ಲೈವ್, ಮಣ್ಣಿನ ಮಗ, ಬಂಗಾರದ ಮನುಷ್ಯ – ಮುಂತಾದ ಚಿತ್ರಗಳ ವಸ್ತು ವಿಶ್ಲೇಷಣೆಯ ಮೂಲಕ ಮನುಷ್ಯ ಮತ್ತು ಮಣ್ಣಿನ (ಭೂಮಿಯ) ಸಂಬAಧದ ವಿವಿಧ ಆಯಾಮಗಳನ್ನು ಈ ಲೇಖನದಲ್ಲಿ ಚಿಂತನೆಗೆ ಒಳಪಡಿಸಲಾಗಿದೆ. ಇದೊಂದು ಅಪರೂಪದ ಲೇಖನ.
ಮಣ್ಣಿನ ಮಾನಸಿಕ ಮಹಿಮೆಯ ಹತ್ತಿರಕ್ಕೇ ಬರುವ ಇನ್ನೊಂದು ಪರಿಕಲ್ಪನೆ ‘ನಮ್ಮೂರು’. ಈ ನಮ್ಮೂರು ಎನ್ನುವುದು ಹುಟ್ಟಿದ ಊರು ಎಂಬರ್ಥದಿಂದ ಹಿಡಿದು ಪ್ರಾದೇಶಿಕ ಗುಣಲಕ್ಷಣಗಳ ವ್ಯಾಪ್ತಿಯನ್ನೂ ಪಡೆದುಕೊಳ್ಳಬಹುದು. ಈ ಅಂಶವನ್ನು ರಘುನಾಥ್ ‘ನೋಡು ಬಾ ನೋಡು ಬಾ ನಮ್ಮೂರ’ ಎಂಬ ಲೇಖನದಲ್ಲಿ ಚಿಂತನೆಗೆ ಒಳಪಡಿಸಿದ್ದಾರೆ. ಭಾಷೆಯನ್ನೂ ಒಳಗೊಂಡಂತೆ ಅದನ್ನು ಮೀರಿದ ಪರಿಸರ ಚಿತ್ರಣದಲ್ಲಿರುವ ‘ನಮ್ಮೂರ ಭಾವವಲಯವನ್ನು’ ವಿಚಾರಪೂರ್ಣವಾಗಿ ಹೊರತಂದಿದ್ದಾರೆ. ಕವಿರಾಜ ಮಾರ್ಗಕಾರನ ಪ್ರದೇಶಪ್ರೀತಿಯನ್ನು ಉಲ್ಲೇಖಿಸಿ ಪರಂಪರೆಯ ಹಾದಿಯನ್ನು ತೋರಿದ್ದಾರೆ. ನಮ್ಮ ಚಿತ್ರಗಳು ಹಳ್ಳಿ ಮತ್ತು ನಗರಗಳನ್ನು ಚಿತ್ರಿಸಿದ ರೀತಿಯನ್ನು ಚಿಂತನೆಗೊಡ್ಡಿದ್ದಾರೆ. “ಒಂದು ನಗರವನ್ನು ಹೇಗೆ ಚಿತ್ರಿಸಬಹುದು ಎಂಬುದಕ್ಕೆ ಎನ್. ಲಕ್ಷ್ಮೀನಾರಾಯಣ್ ನಿರ್ದೇಶನದ ‘ಮುಕ್ತಿ’ ಚಿತ್ರವನ್ನು ಗಮನಿಸಬಹುದು’’ ಎಂಬ ಮಾತಿನಿಂದ ಒಬ್ಬ ಸೃಜನಶೀಲ ನಿರ್ದೇಶಕರಿಗೆ ಗೌರವ ಸಲ್ಲಿಸಿದಂತಾಗಿದೆ.
ಮಾತಿನ ಮಂಪರು ಹಿಡಿಸುವ ಕೆಲವು ನಿರ್ದೇಶಕರ ಮಧ್ಯೆ ಎನ್. ಲಕ್ಷ್ಮೀನಾರಾಯಣ್ ಅವರ ಕೊಡುಗೆಗೆ ಚರ್ಚಾಧಾರಿತ ಗೌರವ ಸಂದಿಲ್ಲ. ರಘುನಾಥ್ ಇಲ್ಲಿ ‘ಮುಕ್ತಿ’ ಚಿತ್ರ ಮತ್ತು ಮತ್ತೊಂದು ಕಡೆ ‘ನಾಂದಿ’ ಬಗ್ಗೆ ಮಾತಾಡಿ ಮರ್ಯಾದೆ ತಂದಿದ್ದಾರೆ. ಒಟ್ಟಾರೆ ಈ ಲೇಖನವು ಭಾಷೆ, ಪರಿಸರಗಳನ್ನೊಳಗೊಂಡ ಕನ್ನಡತನವನ್ನು ತನ್ನ ಕೇಂದ್ರಕ್ಕೆ ತಂದುಕೊಂಡು ಗಮನಸೆಳೆಯುತ್ತದೆ.
‘ಜನರ ಭಾವಕೆ ಮಿಡಿವ ಬಿಂಬ ಮಿತ್ರ’ ಇನ್ನೊಂದು ಅಪರೂಪದ ಲೇಖನ. ವಿವಿಧ ರೀತಿಯ ಅಂಗವೈಕಲ್ಯಕ್ಕೆ ತುತ್ತಾದವರ ಕಥನವನ್ನು ಪೂರ್ಣವಾಗಿ ಅಥವಾ ಆಂಶಿಕವಾಗಿ ಒಳಗೊಂಡ ಸಿನಿಮಾಗಳ ವಿಶ್ಲೇಷಣೆಯನ್ನು ಈ ಲೇಖನವು ಒಳಗೊಂಡಿದೆ. ರಘುನಾಥ್ ಅವರ ಸೂಕ್ಷ್ಮ ಮನಸ್ಸಿನ ಒಳಗಣ್ಣ ನೋಟಕ್ಕೆ ಈ ಲೇಖನ ಒಂದು ಸಾಕ್ಷಿ. ಈ ರೀತಿಯ ವಸ್ತುವುಳ್ಳ ಸಿನಿಮಾ ಕಥನಗಳನ್ನು ಒಟ್ಟುಗೂಡಿಸಿ ವಿಶ್ಲೇಷಿಸುವ ನಿರ್ಣಯದಲ್ಲೇ ಸಾಮಾಜಿಕ ನೈತಿಕತೆಯಿದೆ. ಡಾ. ರಾಜಕುಮಾರ್ ಅವರ ನೇತ್ರದಾನ ಆಂದೋಲನ, ಲೋಕೇಶ್ ಅವರ ದೇಹದಾನದಿಂದ ಆರಂಭವಾಗುವ ಲೇಖನ, ಎನ್. ಲಕ್ಷ್ಮೀನಾರಾಯಣ್ ಅವರ ‘ನಾಂದಿ’ ಚಿತ್ರದತ್ತ ಹೊರಳುತ್ತದೆ. ಅದಕ್ಕೆ ಮುಂಚೆ ಸಿನಿಮಾದ ಸಾಮಾಜಿಕ ಪರಿಣಾಮಕ್ಕೆ ಸಾಕ್ಷಿಯಾಗಿ ಬಂಗಾರದ ಮನುಷ್ಯ, ಜೀವನಚೈತ್ರ, ತಮಸ್ಸು, ಸೀತಾರಾಂ ಧಾರಾವಾಹಿಗಳ ಉಲ್ಲೇಖವಿದೆ. ಆನಂತರ ಅಂಗವೈಕಲ್ಯರ ವಸ್ತುವುಳ್ಳ ಕೆಲವು ಸಿನಿಮಾಗಳ ದೃಷ್ಟಿಕೋನದ ವಿಶ್ಲೇಷಣೆಯಿದೆ. ಮಾನವೀಯ ಕಥನಗಳ ಕಥನ ಈ ಲೇಖನ.
ರಘುನಾಥ್ ಅವರು ಕನ್ನಡ ಚಿತ್ರಗಳ ಯಾವ ವಸ್ತುಪರಂಪರೆಯನ್ನು ಗಮನಿಸದೆೆ ಬಿಟ್ಟಿದ್ದಾರೆಂದು ಹುಡುಕುವುದೇ ಕಷ್ಟ. ಅವರ ಹುಡುಕಾಟದ ವ್ಯಾಪ್ತಿ ಅಷ್ಟು ವಿಶಾಲವಾದುದು. ‘ಸಾಲು ಸಾಲು ಸ್ತ್ರೀ ರೂಪಕಗಳು’ ಎಂಬ ಲೇಖನವು ಚಿತ್ರವಿಮರ್ಶೆಯ ಅಗತ್ಯವೊಂದನ್ನು ಪೂರೈಸಿದೆ. ಸ್ತ್ರೀಪ್ರಧಾನ ಚಿತ್ರವಾದ ‘ಸತಿ ಸುಲೋಚನಾ’ದಿಂದ ಪ್ರಾರಂಭವಾದ ಕನ್ನಡ ಸಿನಿಮಾದಲ್ಲಿ ಸ್ತ್ರೀ ಪರಂಪರೆಯ ಪ್ರಬಲಧಾರೆಯಿದೆ. ಅದು ಸ್ವಾಭಾವಿಕವಾಗಿ ವಿವಿಧ ರೂಪಗಳಲ್ಲಿ ಅಭಿವ್ಯಕ್ತಗೊಂಡಿದೆ. ಈ ರೂಪಗಳು ರೂಪಕವೂ ಆಗಬಹುದು, ಸಂಕೇತವೂ ಆಗಬಹುದು. ಏನೂ ಆಗದ ಬಣ್ಣದ ಗೊಂಬೆಯೂ ಆಗಬಹುದು. ರಂಜನಾ ಪ್ರಧಾನ ಚಿತ್ರಗಳಲ್ಲಿ ಬರುವ ಸ್ತ್ರೀ ಪಾತ್ರಗಳಲ್ಲಿರುವ ಗೃಹಿಣಿ ಧರ್ಮ, ಮಾತೃತ್ವ ಮತ್ತು ರತಿ ವರ್ಚಸ್ಸಿನ ಬಾಹ್ಯ ಚೆಲುವುಗಳನ್ನು ರಘುನಾಥ್ ವಿಂಗಡಿಸಿ ವಿವರಿಸುತ್ತಾರೆ. ಎಂ.ವಿ. ರಾಜಮ್ಮ, ಪಂಢರಿಬಾಯಿ ಪರಂಪರೆಯನ್ನು ಗೌರವಪೂರ್ವಕವಾಗಿ ವಿಶ್ಲೇಷಿಸುತ್ತಾರೆ. ಆನಂತರದ ಪೀಳಿಗೆಯ ಕಲಾವಿದೆಯರ ಪಾತ್ರವೈವಿಧ್ಯವನ್ನು ಸೋದಾಹರಣವಾಗಿ ಸಾದರಪಡಿಸಿದ್ದಾರೆ. ಇವತ್ತಿನ ಸಂದರ್ಭದಲ್ಲಿ ಸ್ತ್ರೀ ಪಾತ್ರ ಪೋಷಣೆಯಲ್ಲಿರುವ ಅಧಃಪತನದ ಹಾದಿಯನ್ನು ವಿಷಾದದಿಂದ ಗಮನಿಸಿದ್ದಾರೆ. ಈ ಕ್ಷಣದ ಚಿತ್ರಗಳಲ್ಲಿ ‘ಸವಾಲುಗಳಿಗೆ ತನ್ನನ್ನು ಒಡ್ಡಿಕೊಂಡಿರುವ ಹೆಣ್ಣು ಸಿನಿಮಾದಲ್ಲಿ ಇನ್ನಷ್ಟೇ ಕಾಣಬೇಕಾಗಿದೆ’ಯೆಂಬ ಲೇಖಕರ ಮಾತಿನಲ್ಲಿ ಬಹುಪಾಲು ಸತ್ಯಾಂಶವಿದೆ. ಅಪವಾದವೆಂಬಂತೆ ಸ್ತ್ರೀ ಪ್ರಧಾನ ಪಾತ್ರದ ಸಿನಿಮಾಗಳು ಬಂದರೂ ಅವು ಕಟುವಾಸ್ತವಕ್ಕೆ ಒಡ್ಡಿಕೊಂಡ ನೈಜಪಾತ್ರಗಳಾಗಿರುವುದೂ ಇಲ್ಲ ಎನ್ನುವಷ್ಟು ಕಡಿಮೆ. ಈ ಹಿನ್ನೆಲೆಯಲ್ಲಿ ಲೇಖಕರ ವಿಮರ್ಶೆ ಮತ್ತು ವಿಷಾದವನ್ನು ಅರ್ಥ ಮಾಡಿಕೊಳ್ಳಬೇಕು.
ಒಟ್ಟಾರೆ, ಚ.ಹ. ರಘುನಾಥ್ ಅವರು ಕನ್ನಡಕ್ಕೊಂದು ಉತ್ತಮ ಸಿನಿಮಾ ಕೃತಿಯನ್ನು ಕೊಟ್ಟಿದ್ದಾರೆ. ಅವರು ಅದೆಷ್ಟು ಸಿನಿಮಾಗಳನ್ನು ವೀಕ್ಷಿಸಿದ್ದಾರೆಂಬ ಸಾಕ್ಷಿ ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿದೆ. ಇದು ಕೇವಲ ಸಿನಿಮಾ ಸೀಮಿತ ಕೃತಿಯಾಗದೆ ಸಾಹಿತ್ಯದ ಹಿನ್ನೆಲೆಯನ್ನೂ ಪಡೆದುಕೊಂಡು ಪುಷ್ಟಿಗೊಂಡಿದೆ. ಪುರಾಣ ಕಥನಗಳು, ಸಾಮಾಜಿಕ ಸಂಕಟದ ಸಂಕಥನಗಳ ಹಿನ್ನೆಲೆಯನ್ನು ಒಳಗೊಂಡ ನೋಟದಿಂದ ಸಿನಿಮಾ ವಿಶ್ಲೇಷಣೆಗೆ ವಿಶಿಷ್ಟ ವ್ಯಾಪ್ತಿ ಒದಗಿದೆ. ಅಗತ್ಯವಿದ್ದಾಗ ಕನ್ನಡೇತರ ಚಿತ್ರಗಳನ್ನೂ ಚರ್ಚೆಗೆ ಒಳಪಡಿಸಿರುವುದು ಲೇಖನಗಳ ಶಕ್ತಿಯನ್ನು ಹಿಗ್ಗಿಸಿದೆ; ತೌಲನಿಕ ನೋಟದ ಆಯಾಮವೂ ಈ ಕೃತಿಯಲ್ಲಿದೆ. ಕೆಲವು ಚಿತ್ರಗಳ ವಿಶ್ಲೇಷಣೆ ದೀರ್ಘ, ಕೆಲವು ಸಂಕ್ಷಿಪ್ತವಾಗಿರುವುದು ಲೇಖಕರ ವಿಮರ್ಶೆಯ ಭಾಗವೂ ಆಗಿರಬಹುದು. ದೀರ್ಘ, ಸಂಕ್ಷಿಪ್ತ, ಆದ್ಯತೆ ಇತ್ಯಾದಿ ಚಿಕ್ಕಪುಟ್ಟ ಅಂಶಗಳ ಬಗ್ಗೆ ಯಾರಾದರೂ ಆಕ್ಷೇಪಿಸಬಹುದೇನೊ ಗೊತ್ತಿಲ್ಲ. ಆದರೆ ಇದು ಚಿತ್ರಪ್ರಪಂಚದ ಬಹುಪಾಲು ವಸ್ತುವಿಶೇಷಗಳನ್ನು ಬಹುಸಂಖ್ಯೆ ಸಿನಿಮಾಗಳನ್ನು ಉಲ್ಲೇಖಿಸಿ, ವಿವರಿಸಿ, ವಿಶ್ಲೇಷಿಸಿ ಕಟ್ಟಿಕೊಟ್ಟ ಕೊಡುಗೆ ಸಾಮಾನ್ಯವಾದುದಲ್ಲ. ಇನ್ನಷ್ಟು ಚರ್ಚೆ, ಚಿಂತನೆಗಳು ಯಾವಾಗಲೂ ಆಗಬೇಕು. ಅದಕ್ಕೆ ಭೂಮಿಕೆಯೊಂದು ಬೇಕಲ್ಲವೆ? ಅಂಥ ಭೂಮಿಕೆಯನ್ನು ಚ.ಹ. ರಘುನಾಥ್ ಒದಗಿಸಿದ್ದಾರೆ. ಇದು ಈ ಕೃತಿಯ ಮುಖ್ಯ ಮೌಲ್ಯವಾಗಿದೆ. ರಘುನಾಥ್ ಅವರ ಚಿತ್ರಭೂಮಿಯ ಬರಹ ಬೆಳೆಯುತ್ತಲೇ ಇರಲಿ – ಎಂಬುದು ನನ್ನ ಸ್ನೇಹಪೂರ್ವಕ ಹಾರೈಕೆ.






ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕ ಕೊಂಡಿರುವೆ. ಸದ್ಯಕ್ಕೆ ಒಂದೆರಡು ಬರಹಗಳನ್ನು ಓದುತ್ತಿರುವೆ. ರಘುನಾಥ್ ಸರ್ ಚಲನಚಿತ್ರಗಳನ್ನು ವಿಭಿನ್ನ ಆಯಾಮಗಳಲ್ಲಿ ವಿಶ್ಲೇಷಿಸುವ ಮೂಲಕ ಒಂದು ಚಿತ್ರವನ್ನು ಹೊಸದಾಗಿ ನೋಡುವ ಬಗೆಯನ್ನು ತಿಳಿಸಿಕೊಟ್ಟಿರುವರೆನಿಸಿದೆ. ಪುಸ್ತಕವನ್ನು ಸಮಗ್ರವಾಗಿ ಓದುವ ಕುತೂಹಲ ಹುಟ್ಟಿದೆ.
ಪುಸ್ತಕವನ್ನು ಓದಬೇಕೆನ್ನಿಸಿದೆ.