ಚೈತ್ರಾ ಅರ್ಜುನಪುರಿ ಹೊಸ ಕಥೆ- ಕಾಣದ ಸಾಕ್ಷಿ…

ಚೈತ್ರಾ ಅರ್ಜುನಪುರಿ 

ಈ ಫೋಟೋ ತೆಗೆಯುವ ಹುಚ್ಚು ನನಗೆ ಹಿಡಿದುಕೊಂಡಿದ್ದು ಯಾವಾಗ ಸರಿಯಾಗಿ ನೆನಪಿಲ್ಲ. ಅದರಲ್ಲೂ ಚಂದ್ರ, ನಕ್ಷತ್ರ, ಗ್ರಹಗಳ ಗುಂಗಿಗೆ ಬಿದ್ದ ಮೇಲೆ ಪ್ರತೀ ತಿಂಗಳು ವಾರಕ್ಕೆರಡು ಮೂರು ಸಲ ಗೆಳೆಯರ ಜೊತೆ ಮರಳುಗಾಡಿಗೆ ಹೋಗುವುದು ಮಾಮೂಲಿಯಾಗಿಬಿಟ್ಟಿದೆ.

‘ಇವತ್ತು ಮಿಲ್ಕಿವೇ ಚಿತ್ರಗಳ ಜೊತೆ ಒಂದಷ್ಟು ಟೈಮ್ ಲ್ಯಾಪ್ಸ್ ಸಹ ತೆಗಿಬೇಕು ಅಂದ್ಕೊಂಡಿದ್ದೀನಿ.’

‘ಓಹ್, ಹಾಗಿದ್ರೆ ಯಾವುದಾದ್ರೂ ಮೂಲೇಲಿ ಕೂತ್ರೆ ಇನ್ನು ನೀನು ನಮ್ಮ ಕಡೆಗೆ ಬರೋದು ಬೆಳಗ್ಗೆನೇ?’

‘ಏಯ್, ಹೋಗ್ರೋ. ಯಾವಾಗ್ಲೂ ನಿಮಗೆ ತಮಾಷೆನೇ. ಎಲ್ಲಾ ಅಕ್ಕ ಪಕ್ಕದಲ್ಲಿ ಕೂತ್ರೆ ಎಲ್ರ ಹತ್ರಾನೂ ಒಂದೇ ರೀತಿ ಫ್ರೇಮ್ಸ್ ಇರುತ್ತೆ ಅಷ್ಟೆ. ನೀವು ನಾಲ್ಕೂ ಜನ ಬೇಕಾದ್ರೆ ಒಟ್ಟಿಗೇ ಕೂತ್ಕೊಳ್ರಪ್ಪ, ನಾನು ಮಾರು ದೂರದಲ್ಲೇ ಕೂತ್ಕೊತೀನಿ.’

‘ಕತ್ತಲಲ್ಲಿ ಒಬ್ಳೆ ಕೂರೋಕೆ ಭಯ ಆಗಲ್ವೇನೇ ಅಂಬು ನಿನ್ಗೆ?’

‘ಲೋ, ಭಯ ಇರೋರು ಆಸ್ಟ್ರೋಫೋಟೋಗ್ರಫಿ ಎಲ್ಲಾ ಮಾಡ್ಬಾರ್ದು ಕಣೋ!’

‘ಅದೂ ನಿಜ ಅನ್ನು. ನಿನ್ನ ನೋಡಿದ್ರೆ ಭೂತ ಪಿಶಾಚಿಗಳೂ ಹೆದ್ರುಕೊಳ್ತವೆ, ಇನ್ನು ನಾಯಿ ನರಿಗಳು ಎಲ್ಲಿ ಹತ್ರ ಬರ್ತಾವೆ ಹೇಳು?’ ಗಿರೀಶನ ಮಾತಿಗೆ ಎಲ್ಲರೂ ನಕ್ಕರು. 

‘ಅಂಬುಜ, ಒಂದೊಳ್ಳೆ ಜಾಗ ಹುಡ್ಕಿದ್ದೀನಿ ಕಣೆ. ಇವತ್ತು ಅಲ್ಲಿಗೇ ಹೋಗೋಣ. ಒಂದು ಕುರಿ ಮಂದೆ ಇರೋ ಜಾಗ. ಕುರಿ ಕಾಯೋರ ಎರಡು ಡೇರೆಗಳೂ ಇವೆ. ಒಳ್ಳೆ ಡಿಫರೆಂಟ್ ಆಗಿರೋ ಕಂಪೋಸಿಷನ್ ಸಿಗುತ್ತೆ.’

‘ಅವರ ಮಾಲೀಕ ಒಪ್ಪುತ್ತಾನೇನೋ, ನವೀನ?’

‘ನಿನ್ನೆ ಸಂಜೆ ಬಂದಾಗ ಸುಡಾನಿಯೋ, ಅಫ್ಘಾನಿಯೋ ಒಂದಿಬ್ರು ಕುರಿ ಕಾಯೋರಿದ್ರು. ನಮ್ಮ ಮುದೀರ್ ಒಪ್ಪಿದ್ರೆ ಬಂದು ಧಾರಾಳವಾಗಿ ಫೋಟೋ ತೆಗಿರಿ ಅಂತ ಹೇಳಿದ್ರಪ್ಪ.’

‘ಅವನೆಲ್ಲಿ ಸಿಗ್ತಾನೋ ಈ ಹೊತ್ತಲ್ಲಿ, ನವೀ?’

‘ಪ್ರತಿ ದಿನ ಏಳು ಗಂಟೆಗೆ ಅವ್ರಿಗೆ ಊಟ ಕೊಡೋಕೆ ಬರ್ತಾನಂತೆ ಕಣೋ. ಅವ್ನು ಒಪ್ಪದಿದ್ರೆ ನಮ್ಮ ಮಾಮೂಲಿ ಜಾಗಕ್ಕೆ ಗಾಡಿ ತಿರುಗಿಸಿದ್ರಾಯ್ತು, ಏನಂತೀರಾ?’

ನವೀನನ ಮಾತಿಗೆ ಎಲ್ಲರೂ ತಲೆಯಾಡಿಸಿದೆವು. ನವೀನನ ಕಾರು ಅಲ್ ಖರಾರಾ ತಿರುವನ್ನು ಬಿಟ್ಟು ನಿರ್ಜನ ರಸ್ತೆಯಲ್ಲಿ ಅಲ್ ಥುರೈನಾ ಕಡೆಗೆ ನಾಗಾಲೋಟದಲ್ಲಿ ಸಾಗುತ್ತಿತ್ತು.      

ಚಿಕ್ಕಂದಿನಲ್ಲಿ ಸ್ಟುಡಿಯೋ ಇರುವವರ ಬಳಿ ಮಾತ್ರ ಇರುತ್ತಿದ್ದ ಕ್ಯಾಮರಾ ಎನ್ನುವ ಪುಟ್ಟ ಮಾಯಾ ಪೆಟ್ಟಿಗೆಯನ್ನು ಕಂಡು ಎಷ್ಟು ಅಚ್ಚರಿ ಪಡುತ್ತಿದ್ದೆನೋ, ಈಗಲೂ ಅದು ಸೆರೆ ಹಿಡಿಯುವ ಮಾಯಾ ಲೋಕವನ್ನು ಅಷ್ಟೇ ಬೆರಗುಗಣ್ಣುಗಳಿಂದ ನೋಡುತ್ತೇನೆ. 

ಮದುವೆ ಮುಂಜಿಗಳಲ್ಲಿ ಕುತ್ತಿಗೆಗೆ ಕ್ಯಾಮೆರಾ ನೇತು ಹಾಕಿಕೊಂಡು ಎಲ್ಲರ ಮುಂದೆಯೂ ಓಡಾಡುತ್ತಾ ಫೋಟೋ ತೆಗೆಯುವ ಫೋಟೋಗ್ರಾಫರ್ ಆಗ ನಮ್ಮ ಪಾಲಿಗೆ ಬೊಮ್ಮನಹಳ್ಳಿ ಕಿಂದರಿಜೋಗಿಗಿಂತಲೂ ಒಂದು ಕೈ ಹೆಚ್ಚೇ. ಅಣ್ಣ ನಮ್ಮದೊಂದು ಫೋಟೋ ತೆಗಿ ಎಂದು ಹಲ್ಲು ಗಿಂಜುತ್ತಾ ಅವರ ಹಿಂದೆ ಸುತ್ತುತ್ತಿದ್ದ ಬಾಲ ಸೈನ್ಯದಲ್ಲಿ ನಾನೂ ಒಬ್ಬಳಾಗಿದ್ದೆ ಎನ್ನುವುದನ್ನು ನೆನೆಸಿಕೊಂಡಾಗಲೆಲ್ಲಾ ನಗು ಬರುತ್ತದೆ. 

ಹತ್ತಿಪ್ಪತ್ತು ನಿಮಿಷವಾಗಿರಬೇಕು, ಕಾರು ದಡ ದಡ ಸದ್ದು ಮಾಡುತ್ತಾ ನನ್ನನ್ನು ವಾಸ್ತವಕ್ಕೆ ಕರೆ ತಂದಿತು. 

******

ರಸ್ತೆಯಿಲ್ಲದ, ಅಲ್ಲಲ್ಲಿ ಕುರುಚಲು ಗಿಡ-ಗಂಟೆ ಬೆಳೆದಿರುವ, ಪ್ರದೇಶದಲ್ಲಿ ಕಾರು ಉಬ್ಬು ತಗ್ಗುಗಳ ಮೇಲೆ ಹತ್ತಿಳಿಯುತ್ತಾ ಮೂರ್ನಾಲ್ಕು ಕಿಲೋಮೀಟರ್ ಹೋಗಿ ಒಂದೆಡೆ ನಿಂತಿತು. ಸುತ್ತಲೂ ಗವ್ವೆನ್ನುವ ಕತ್ತಲು, ಮೈಲುಗಳವರೆಗೂ ಯಾವುದೇ ಗಾಡಿಯ ಸುಳಿವಾಗಲಿ, ನರಪಿಳ್ಳೆಯ ಸದ್ದಾಗಲಿ ಇರಲಿಲ್ಲ.     

ಕಣ್ಣು ಇನ್ನೂ ಕತ್ತಲಿಗೆ ಹೊಂದಿ ಕೊಂಡಿರಲಿಲ್ಲ, ಅಷ್ಟರಲ್ಲಿ ಧೂಳೆಬ್ಬಿಸಿಕೊಂಡು ಲ್ಯಾಂಡ್ ಕ್ರೂಸರ್ ಒಂದು ಬಂದು ನಮ್ಮ ಕಾರಿನ ಪಕ್ಕದಲ್ಲಿ ನಿಂತಿತು. ನಾವು ಕಣ್ಣು ಹೊಸಕಿ ಕೊಂಡು ಅಲ್ಲೇ ನಿಂತೆವು. 

‘ಅಸ್ಸಲಾಂ ವಾಲೇಕುಂ.’

‘ವಾಲೇಕುಂ ಅಸ್ಸಲಾಂ,’ ಕಾರಿನಿಂದಿಳಿಯದೆಯೇ ನವೀನನಿಗೆ ಪ್ರತಿ ವಂದಿಸಿದ ಕುರಿ ಮಂದೆಯ ಕತಾರೀ ಮಾಲೀಕ ಕೇಳಿದ: ‘ಕೀಫಕ್?’

‘ತಮಾಮ್, ಶುಕ್ರನ್.’

ನಾವು ನಕ್ಷತ್ರಗಳ ಫೋಟೋ ತೆಗೆಯಲು ನೂರೈವತ್ತು ಕಿಲೋಮೀಟರ್ ದೂರದಿಂದ ಬಂದಿರುವುದನ್ನು ತಿಳಿದು ಅಚ್ಚರಿ ಪಟ್ಟ. ಅಲ್ಲಿಗೆ ಓಡಿ ಬಂದು ಕೈ ಕಟ್ಟಿ ನಿಂತ ಕುರಿ ಕಾಯುವವನಿಗೆ ಅರಬ್ಬಿಯಲ್ಲಿ ಏನೋ ಹೇಳಿ, ತಾನು ತಂದಿದ್ದ ಊಟ ಮತ್ತು ಚಹಾವನ್ನು ಕೊಟ್ಟ.    

‘ಮಾಸ್ಸಲಾಮಾ, ಎನ್ನುತ್ತಾ ನಮ್ಮೆಡೆಗೆ ಕೈ ಬೀಸಿದ. 

‘ಶುಕ್ರನ್,’ ಎಂದ ವಂದಿಸಿದ ನಾವು ಅವನು ಕ್ರೂಸರ್ ನಲ್ಲಿ ಧೂಳೆಬ್ಬಿಸಿಕೊಂಡು ಕಾರ್ಗತ್ತಲಲ್ಲಿ ಲೀನವಾಗುವುದನ್ನೇ ನೋಡುತ್ತಾ ಅಲ್ಲೇ ಒಂದೆರಡು ನಿಮಿಷ ನಿಂತೆವು. ಕುರಿ ಕಾಯುವವನು ಊಟದ ಬ್ಯಾಗನ್ನು ಹಿಡಿದು ತನ್ನ ಡೇರೆ ಸೇರಿಯಾಗಿತ್ತು. 

ಕತ್ತಲಿಗೆ ಕಣ್ಣುಗಳು ಹೊಂದಿಕೊಳ್ಳುತ್ತಿದ್ದ ಹಾಗೆಯೇ ಸುತ್ತಲೂ ಕಣ್ಣಾಡಿಸಿದೆ. ಒಂದೆಡೆ ಸುತ್ತಲೂ ಆಳೆತ್ತರದ ಜಾಲರಿ ಬೇಲಿ, ಅದರೊಳಗೆ ಮಲಗಿರುವ ದೊಡ್ಡ ಕುರಿ ಮಂದೆ, ಹೊರಗೆ ಒಣ ಹುಲ್ಲಿಗಾಗಿ ಕಟ್ಟಿರುವ ಒಂದು ಪುಟ್ಟ ರೂಮು, ಅದರ ಪಕ್ಕದಲ್ಲಿ ಕುರಿ ಕಾಯುವವರಿಗಾಗಿ ಎರಡು ಡೇರೆಗಳು, ಪಕ್ಕದಲ್ಲಿ ದೊಡ್ಡ ನೀರಿನ ಟ್ಯಾಂಕರ್, ಅನತಿ ದೂರದಲ್ಲಿ ಕುರುಚಲು ಪೊದೆಗಳು…  

ತಂದಿದ್ದ ಕುರ್ಚಿಗಳ ಮೇಲೆ ಕೂತು ಬ್ಯಾಗಿನಿಂದ ಕ್ಯಾಮೆರಾಗಳನ್ನು ತೆಗೆದು ಟ್ರೈಪಾಡುಗಳಿಗೆ ಹಾಕಲು ಶುರು ಮಾಡಿದೆವು.           

ಒಂದೆರಡು ತಾಸು ಕ್ಷೀರಪಥದ ಚಿತ್ರಗಳನ್ನು ವಿವಿಧ ಕಂಪೋಸಿಷನ್ ಗಳಲ್ಲಿ ತೆಗೆದಾದ ಮೇಲೆ ನವೀನ, ಗಿರೀಶ, ಚಂದ್ರು, ಸುಮ ಕೂತಿದ್ದ ಜಾಗಕ್ಕೆ ಬಂದೆ. ಎಲ್ಲರೂ ಹರಟೆ ಹೊಡೆಯುತ್ತಿದ್ದರು.

‘ಸ್ಟಾರ್ ಟ್ರೇಲ್ ತೆಗೆಯೊಲ್ವಾ ಇವತ್ತು?’

‘ಟೈಮರ್ ಹಾಕಿ ಬಿಡೋಣ ಅಂದ್ಕೊಂಡಿದ್ದೀವಿ. ನೀನೂ ಹಾಕಿ ಬಾ, ಇಲ್ಲೇ ಕೂತ್ಕೊ.’

‘ನಿಮಗೇನ್ರಪ್ಪ ಕ್ಯಾಮೆರಾದಲ್ಲೇ ಟೈಮ್ ಲ್ಯಾಪ್ಸ್ ತೆಗೀಬಹುದು, ನನ್ನ ಕ್ಯಾಮರಾದಲ್ಲಿ ಆಗೋಲ್ವೆ!’

‘ಇಂಟರ್ವೆಲೋ ಮೀಟರ್ ಸೆಟ್ ಮಾಡಿ ಬಾರೆ, ಅಂಬುಜ.’

‘ಇಲ್ಲ, ಗಿರಿ. ನಾನೂ ಎರಡೆರಡು ಸಲ ಬ್ಯಾಗ್ ಚೆಕ್ ಮಾಡ್ದೆ ಕಣೋ. ತರೋದೇ ಮರ್ತು ಬಿಟ್ಟಿದ್ದೀನಿ.’

‘ಈಗೇನು, ಸುಮ್ನೆ ಕೂರೋದಾ ಹಾಗಿದ್ರೆ ಅಥವಾ ಟೈಮರ್ ಹಾಕಿ ಹತ್ತು-ಹತ್ತು ತೆಗಿತಿಯೋ?’

‘ನಾನೂ ಅದೇ ಯೋಚ್ನೆ ಮಾಡ್ತಿದ್ದೀನಿ, ಚಂದ್ರು. ಪಕ್ಕದಲ್ಲೇ ಕೂತು ಕ್ಲಿಕ್ ಮಾಡೋದಾ ಅಂತ. ಅದೂ ಒಂದು ಪ್ರಯತ್ನ ನಡೆಸೇ ಬಿಡ್ತೀನಿ ಇವತ್ತು ಕಣ್ರೋ.’

‘ಸರಿ ನಮ್ಮ, ಕಣ್ಣಿಗೆ ಕಾಣಿಸೋ ಹಾಗೆ ಕೂತ್ಕೊ.’

‘ಆಯ್ತು ಬಿಡ್ರೋ, ನಾರ್ಥ್ ಪೋಲ್ ಆ ಡೇರೆಗಳ ಹಿಂಭಾಗದಲ್ಲಿ ಚೆನ್ನಾಗಿ ಕಾಣುತ್ತೆ. ಅದರೆದುರಿಗಿರುವ ಮರವನ್ನು ಫೋರ್ ಗ್ರೌಂಡ್ ಮಾಡ್ಕೊಂಡು ಟ್ರೇಲ್ಸ್ ತೆಗಿಯೋಣ ಅಂದ್ಕೊಂಡಿದ್ದೀನಿ.’

ಅವರೆಲ್ಲಾ ಅಕ್ಕ ಪಕ್ಕದಲ್ಲಿ ಕೂತು ಹರಟೆ ಹೊಡೆಯುತ್ತಾ ಕೂತರು. ನಾನು ಮೆಲ್ಲಗೆ ನನ್ನ ಕುರ್ಚಿ ಹಿಡಿದು ಕೊಂಡು ಡೇರೆಗಳ ಹಿಂಭಾಗಕ್ಕೆ ನಡೆದೆ. 

ನಾರ್ಥ್ ಪೋಲ್ ಗೆ ಕ್ಯಾಮೆರಾ ಫೋಕಸ್ ಮಾಡಿ ಟೈಮರ್ ಹಾಕಿ ಹತ್ತು ಫೋಟೋ ಹೊಡೆಯುವವರೆಗೂ ಶಟರ್ ಮೇಲೆ ಕೈ ಹಾಕದೆ ಹಾಗೇ ಆಗಸ ನೋಡುತ್ತಾ ಕೂತೆ. ನಾನೂರು ಐನೂರು ಚಿತ್ರಗಳನ್ನು ತೆಗೆಯುವವವರೆಗೂ ಕೂತಿದ್ದ ಜಾಗದಿಂದ ಮೇಲೇಳುವಂತಿರಲಿಲ್ಲ. 

ಪ್ಯಾಂಟಿನ ಜೇಬಿಗೆ ಕೈ ಹಾಕಿ ಗಂಡನಿಗೊಂದು ಮೆಸೇಜ್ ಹಾಕಿ ಊಟವಾಯಿತೇ, ಮಗ ಮಲಗಿದನೆ ಎನ್ನುವುದನ್ನು ವಿಚಾರಿಸಿಕೊಂಡೆ. ಫೋನನ್ನು ಮರಳಿ ಜೇಬಿಗಿರಿಸದೆ, ನನಗೆ ಪ್ರಿಯವಾದ ಎಪ್ಪತ್ತರ ದಶಕದ ಹಿಂದಿ ಚಿತ್ರ ಗೀತೆಗಳನ್ನು ಹಾಕಿ ಗುನುಗತೊಡಗಿದೆ. 

ಮನಸ್ಸು ಹಾಡುಗಳ ಮೇಲಿದ್ದರೂ, ಕಣ್ಣು ಆಗಸವನ್ನು ನೋಡುತ್ತಿದ್ದರೂ, ಕಿವಿಗಳು ಕ್ಯಾಮೆರಾ ಕ್ಲಿಕ್ಕಿಸುತ್ತಿದ್ದ ಪ್ರತಿಯೊಂದು ಫೋಟೋದ ಮೇಲೇ ನೆಟ್ಟಿದ್ದವು. ಒಂದಾದ ಮೇಲೊಂದು ಹಾಡುಗಳನ್ನು ರಫಿ, ಲತಾ, ಮುಖೇಶ್ ಹಾಡುತ್ತಲೇ ಹೋದರು.

******

‘ಅಸ್ಸಲಾಂ ವಾಲೇಕುಂ, ಮದಾಮ್’.

ಹಾಡು, ನಕ್ಷತ್ರಗಳ ಗುಂಗಿನಲ್ಲಿದ್ದ ನಾನು ದನಿ ಕೇಳಿ ಬೆಚ್ಚಿ ಬಿದ್ದೆ. ಸಾವರಿಸಿಕೊಂಡು ಪ್ರತಿವಂದಿಸಿದೆ: ‘ವಾಲೇಕುಂ ಅಸ್ಸಲಾಂ.’

‘ಹಿಂದೂಸ್ಥಾನದವರೇ ನೀವು? ಹಿಂದಿ ಹಾಡು ಕೇಳಿ ಬಂದೆ.’

ಅವನ ಉರ್ದು ಮಿಶ್ರಿತ ಹಿಂದಿ ಕೇಳಿ ಪಾಕಿಸ್ತಾನ ಇಲ್ಲವೇ ಇರಾನಿನವನಿರಬೇಕು ಅನಿಸಿತು.     

‘ಹೌದು, ಭಾರತದವಳು. ನನ್ನ ಹಾಡಿನಿಂದ ನಿಮ್ಮ ನಿದ್ರೆ ಹಾಳಾಯಿತೇನೋ?’

‘ಹಾಗೇನೂ ಇಲ್ಲ, ಮದಾಮ್. ಅವರಿಬ್ಬರೂ ನೋಡಿ ಹೇಗೆ ಗೊರಕೆ ಹೊಡೆಯುತ್ತಾ ಮಲಗಿದ್ದಾರೆ.’

ಅವನು ಬೆರಳು ಮಾಡಿ ತೋರಿಸಿದ ಡೇರೆಯತ್ತ ನೋಡಿದೆ. ಉಳಿದಿಬ್ಬರು ಕುರಿ ಕಾಯುವವರು ಊಟ ಮುಗಿಸಿ ಗಾಢ ನಿದ್ರೆಗೆ ಜಾರಿದ್ದರು. ವಯಸ್ಸಾದ ಈ ಮುದುಕನಿಗೆ ನಿದ್ರೆ ಬರುತ್ತಿಲ್ಲವೇ ಅನಿಸಿತು. 

ಅರೆ, ನನ್ನ ಕ್ಯಾಮೆರಾದ ಮುಂದೆ ಗರುಡ ಗಂಬದ ಹಾಗೆ ನಿಂತಿದ್ದಾನೆ. ಮರವನ್ನು ಫೋರ್ ಗ್ರೌಂಡ್ ಮಾಡಿಕೊಂಡು ಚಿತ್ರ ತೆಗೆಯುತ್ತಿದ್ದೇನೆ, ಇವನು ಅದರ ಮುಂದೆ ಬಂದಿದ್ದಾನಲ್ಲ ಅನಿಸಿ ಪಿಚ್ಚೆನಿಸಿತು. ಅವನಿರುವ ಚಿತ್ರ ಚೆನ್ನಾಗಿ ಬಂದಿದ್ದರೆ, ಎರಡು ವಿವಿಧ ಕಂಪೋಸಿಷನ್ ನಲ್ಲಿ ಸ್ಟಾರ್ ಟ್ರೇಲ್ಸ್ ಸಿಕ್ಕ ಹಾಗಾಗುತ್ತದೆ ಅನಿಸಿ ಖುಷಿಯೂ ಆಯಿತು.      

‘ಒಳ್ಳೆಯ ಹಿಂದಿ ಹಾಡುಗಳನ್ನು ಹಾಕಿದ್ದೀರಿ. ನನಗೆ ನಿಮ್ಮ ಹಿಂದಿ ಹಾಡುಗಳೆಂದರೆ ತುಂಬಾ ಇಷ್ಟ, ಅದರಲ್ಲೂ ರಫಿ ಜಾನ್ ಹಾಡುಗಳೆಂದರೆ ಪಂಚ ಪ್ರಾಣ. ಚಿಕ್ಕಂದಿನಿಂದಲೂ ಕಾಬೂಲಿನಲ್ಲಿ ಕೇಳಿಕೊಂಡು ಬೆಳೆದಿದ್ದೇನೆ ಈ ಹಾಡುಗಳನ್ನೆಲ್ಲಾ!’

‘ಅಫ್ಘಾನಿಸ್ಥಾನದಿಂದ ಬಂದಿದ್ದೀರಾ ನೀವು?’

‘ಹೌದು, ಮದಾಮ್.’

‘ಇಲ್ಲಿಗೆ ಬಂದು ಹತ್ತದಿನೈದು ವರ್ಷವಾಯಿತು, ಹೊಟ್ಟೆಪಾಡು…’ ಅವನು ನಿಟ್ಟುಸಿರು ಬಿಟ್ಟು ಪಕ್ಕಕ್ಕೆ ಸರಿದ.    

‘ಮತ್ತೆ, ನಮ್ಮೂರಿಗೆ ಹೋಗಬೇಕು ಅನ್ನೋ ಆಸೆ ತುಂಬಾ ಇದೆ, ಆದರೆ… ಹೋಗ್ಲಿ ಬಿಡಿ. ನೀವೇನು ಚಂದ್ರನ ಪಟ ತೆಗಿತಿದ್ದೀರಾ? ಚಂದ್ರನೂ ಇಲ್ವಲ್ಲ ಇವತ್ತು ಆಕಾಶದಲ್ಲಿ. ಏನು ತೆಗಿತಿದ್ದೀರಾ?’

ಅವನ ಮುಗ್ಧ ಪ್ರಶ್ನೆಗೆ ಉತ್ತರಿಸಲು ಬೆಳಗಿನವರೆಗೂ ಸಮಯವಿತ್ತು. ಆದರೆ ಅವನಿಗೆ ಅರ್ಥವಾಗುವ ಹಾಗೆ, ಒಬ್ಬ ಕುರಿ ಕಾಯುವವನಿಗೆ, ನಾನು ಹೇಳಬಲ್ಲೆನೋ ಇಲ್ಲವೋ ಅನುಮಾನವಾಯಿತು.

ಪ್ಲಾಸ್ಕಿನಲ್ಲಿದ್ದ ಚಹಾವನ್ನು ಒಂದು ಪ್ಲಾಸ್ಟಿಕ್ ಗ್ಲಾಸಿಗೆ ಸುರಿದು ಅವನತ್ತ ಕೈ ಚಾಚಿದೆ. ನಡು ಬಗ್ಗಿಸಿ, ಎರಡೂ ಕೈ ಚಾಚಿ ಚಹಾ ಗ್ಲಾಸ್ ತೆಗೆದು ಕೊಂಡವನು, ಬಗ್ಗಿದ ಬೆನ್ನನ್ನು ನೆಟ್ಟಗಾಗಿಸಿ, ಉಸಿರೆಳೆದು ಕೊಂಡು ಅಲ್ಲೇ ನೆಲದ ಮೇಲೆ ಕೂತ. ವಯಸ್ಸು ಅರವತ್ತೈದರ ಆಸುಪಾಸಿರಬಹುದು. ತಲೆಗೆ ಅಫ್ಘನ್ ಪಗಡಿ ಸುತ್ತಿದ, ಆರಡಿಗೂ ಹೆಚ್ಚಿರುವ ನೀಳ ಕಾಯದ ಮುದುಕ, ಮರಳುಗಾಡಿನಲ್ಲಿ ದಿನವೆಲ್ಲಾ ಕುರಿ ಕಾದು ಬಳಲಿ ಬೆಂಡಾಗಿರುವಂತೆನಿಸಿತು.  

‘ಶುಕ್ರನ್, ಮದಾಮ್ ಜಾನ್. ನನ್ನ ಹೆಸರು ಗುಲಾಂ ಫಾರೂಖ್. ನಮ್ಮೂರಿನ ಹೆಸರು ಶಾಕರ್ದಾರ, ಕಾಬೂಲಿನಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿದೆ,’ ಗ್ಲಾಸಿನಲ್ಲಿದ್ದ ಚಹಾ ಹೀರುತ್ತಾ ಹೇಳಿದ.  

ಮುದುಕನಿಗೆ ನಿದ್ರೆಯಿಲ್ಲ, ಮರಳುಗಾಡಿನಲ್ಲಿ ಹಿಂದಿ ಹಾಡುಗಳನ್ನು ಕೇಳಿ ಮಾತನಾಡುವ ಹುಮ್ಮಸ್ಸಿನಲ್ಲಿದ್ದಾನೆ ಅಂದುಕೊಂಡೆ. 

‘ನೀವು ಜನರ ಫೋಟೋಗಳನ್ನೂ ತೆಗಿತೀರಾ, ಮದಾಮ್ ಜಾನ್?’ ಅವನ ದನಿಯಲ್ಲಿದ್ದ ಕುತೂಹಲಕ್ಕೆ ನಗು ಬಂತು.

‘ಯಾಕೆ ಈ ಅನುಮಾನ ಬಂತು?’

‘ಕತ್ತಲಲ್ಲಿ ಕಾಡು-ಮೇಡು ಚಿತ್ರ ತೆಗಿಯೋಕೆ ಬಂದಿದ್ದಿರಲ್ಲ, ಮನುಷ್ಯರ ಚಿತ್ರಗಳನ್ನೂ ತೆಗಿತೀರಾ ಅಂತ ಕೇಳ್ದೆ ಅಷ್ಟೇ.’

ಅವನ ಮಾತಿಗೆ ನಕ್ಕು ಸುಮ್ಮನಾದೆ. 

‘ಮೊದಲಿನಿಂದಲೂ ಫೋಟೋ ತೆಗಿತೀರಾ, ಮದಾಮ್? ಇದೇ ಮೊದಲ ಸಲ ಇಲ್ಲಿಗೆ ಬಂದಿರುವುದು ಅನ್ಸುತ್ತೆ?’

ಬೇರೆಯವರಿಗಿಲ್ಲದ ಕುತೂಹಲ ಕುರಿ ಕಾಯುವವನಿಗಿರುವುದನ್ನು ಕಂಡು ಅಚ್ಚರಿಯಾಯಿತು.

‘ಚಿಕ್ಕಂದಿನಲ್ಲಿ ಆಸೆ ಹುಟ್ಟಿ ಮರೆಯಾಗಿತ್ತು. ಕತಾರಿಗೆ ಬಂದ ಮೇಲೆ ಆ ಆಸೆ ಮತ್ತೆ ಚಿಗುರಿ, ಮರವಾಗಿ ಈಗ ಹೂವು ಬಿಡುತ್ತಿದೆ,’ ನನಗೇ ಕೇಳಿಸದಷ್ಟು ಮೆಲುವಾಗಿ ಹೇಳಿದೆ. 

‘ಮದಾಮ್ ಜಾನ್, ಒಂದು ಸಿಗರೇಟ್ ಇದ್ರೆ ಕೊಡ್ತೀರಾ?’

ಎಲಾ ಇವನ, ನನ್ನನ್ನೇ ಸಿಗರೇಟು ಕೇಳ್ತಾನಲ್ಲ ಅಂದುಕೊಂಡೇ, ಹ್ಯಾಂಡ್ ಬ್ಯಾಗಿಗೆ ನಲ್ಲಿದ್ದ ಸಿಗರೇಟ್ ಒಂದನ್ನು ಕೈಗೆ ತೆಗೆದುಕೊಂಡು ಪ್ಯಾಕನ್ನು ಅವನ ಮುಂದೊಡ್ಡಿದೆ. ಅವನಿನ್ನೂ ನನ್ನ ಮುಖವನ್ನೇ ನೋಡುತ್ತಿರುವುದು ಗಮನಿಸಿ ಅವನತ್ತ ಲೈಟರ್ ಎಸೆದೆ. ತುಟಿಗೆ ಸಿಗರೇಟು ಸೋಕಿಸಿ, ಅದಕ್ಕೆ ಬೆಂಕಿ ತಾಕಿಸಿ, ಮುಂದುವರೆಸು ಎಂಬಂತೆ ನನ್ನನ್ನೇ ತದೇಕ ಚಿತ್ತದಿಂದ ನೋಡುತ್ತಾ ಕೂತ. ನಾನೊಂದು ಸಿಗರೇಟನ್ನು ಹೊತ್ತಿಸಿ, ನೆನಪಿನಂಗಳಕ್ಕೆ ಜಾರಿದೆ. 

******

‘ನನ್ನ ಮದುವೆಯಾದ ಹೊಸತು. ದೂರದ ಸಂಬಂಧಿಯೊಬ್ಬರ ಮದುವೆಗೆ ಹೋಗಿದ್ದೆವು. ಅಲ್ಲಿ ಹುಡುಗಿಯೊಬ್ಬಳು ಕುತ್ತಿಗೆಗೆ ಕ್ಯಾಮೆರಾ ಹಾಕಿಕೊಂಡು ಓಡಾಡುತ್ತಿದ್ದಳು. ಪಕ್ಕದಲ್ಲಿ ಕುಳಿತಿದ್ದ ಹೆಂಗಸರು ಅಸೂಯೆ ತುಂಬಿದ ತಿರಸ್ಕಾರದಲ್ಲಿ ಅವಳನ್ನು ಗಂಡುಬೀರಿಯೆಂದು ಆಡಿಕೊಳ್ಳುತ್ತಿದ್ದರು.’

‘ಅವಳ ಬಗ್ಗೆ ನೀವು ಏನೆಂದು ಕೊಂಡ್ರಿ, ಮದಾಮ್ ಜಾನ್?’ ಸಿಗರೇಟಿನ ಹೊಗೆಯ ಜೊತೆಗೆ ತನ್ನ ಪ್ರಶ್ನೆಯನ್ನೂ ಹೊರ ಹಾಕಿದ.

‘ನನ್ನ ಪಾಲಿಗೆ ಅವಳು ಯಾವ ಸಿನೆಮಾ ಸ್ಟಾರ್ ಗೂ ಕಡಿಮೆಯಿರಲಿಲ್ಲ.’

‘ಮಧುಬಾಲಾ ಥರನಾ? ನಮ್ಮಿಡೀ ಹಳ್ಳಿಯಲ್ಲಿ ಮಧುಬಾಲಾಗೆ ಮರುಳಾಗದೇ ಇರುವ ಒಬ್ಬ ಗಂಡಸೂ ಇರಲಿಲ್ಲ ನೋಡಿ. ಹರಾಮಿಲ್ಲದಿದ್ದರೆ, ಅವಳಿಗೊಂದು ತಾಜ್ ಮಹಲ್ ಥರದ ಮಸ್ಜಿದ್ ಕಟ್ಟಿಸಿ, ಅವಳ ಫೋಟೋಗೆ ಗಂಧದಕಡ್ಡಿ ಹಚ್ಚಿ ಪೂಜೆ ಮಾಡಿಬಿಡುತ್ತಿದ್ದೆವೇನೋ. ಚಿಕ್ಕವರಿಂದ ಹಿಡಿದು ಮುದುಕರವರೆಗೆ ಎಲ್ಲರೂ ಅವಳ ಕನಸು ಕಾಣುತ್ತಿದ್ದರು. ಅವಳ ಮೋಡಿಯೇ ಅಂಥಾದ್ದು…’ 

‘ಸೋಚಾ ಹೈ ಏಕ್ ದಿನ್ ಮೈ ಉಸ್ಸೆ ಮಿಲ್ ಕೆ, 

ಕಹ್ ಡಾಲೂ ಅಪನೇ ಸಬ್ ಹಾಲ್ ದಿಲ್ ಕೆ, 

ಔರ್ ಕರ್ ದೂ ಜೀವನ್ ಉಸ್ ಕೇ ಹವಾಲೇ…’ ಫೋನಿನಲ್ಲಿ ಲತಾ ಮಂಗೇಶ್ಕರ್ ಹಾಡುತ್ತಿದ್ದರೆ ಮುದುಕನ ಮೊಗದಲ್ಲಿ ಮಂದಹಾಸ ಮೂಡುತ್ತಿತ್ತು.

‘ರೇಖಾ ಹಾಡಲ್ಲವೇ ಇದು?’

ನಾನು ಹೌದು ಎನ್ನುವಂತೆ ತಲೆಯಾಡಿಸಿದೆ.

‘ಓ ಗುಮ್ ಹೈ ಕಿಸೀ ಕೇ ಪ್ಯಾರ್ ಮೇ, 

ದಿಲ್ ಸುಬಹ್ ಶಾಮ್, 

ಪರ್ ತುಮ್ಹೇ ಲಿಖ್ ನಹೀ ಪಾವೂ,

ಮೈ ಉಸ್ ಕಾ ನಾಮ್…’ ಸಿಗರೇಟನ್ನು ತುಟಿಯಂಚಿನಿಂದ ತೆಗೆಯದೇ ಮುದುಕ ಗುನುಗತೊಡಗಿದ. ಮುದುಕನ ವಿಚಾರ ಲಹರಿ ಸಿನಿಮಾ ಲೋಕದ ಕಡೆಗೆ ಹೊರಳಿದ್ದನ್ನು ಕಂಡು ಸಮಾಧಾನವಾಯಿತು.  

‘ಈಗಿನ ಕಾಲದ ಹುಡುಗರು ಸಲ್ಮಾನ್ ಖಾನ್ ಆರಾಧಕರು. ಅವನ ಹಾಗೆ ಮೈಕೈ ಬೆಳೆಸಿಕೊಂಡು ಹಿಂದಿ ಹಾಡು ಹಾಡುತ್ತಾ, ಕಾಬೂಲಿನ ಚಹಾ ಅಂಗಡಿಗಳಲ್ಲಿ ಖಹ್ವಾ ಕುಡಿಯುತ್ತಾ ಹರಟೆ ಹೊಡೆಯುತ್ತಿರುತ್ತಾರೆ. ಅವನ ಹೆಸರು ಕೇಳಿದರೆ ಸಾಕು ನಮ್ಮ ಅಫ್ಘನ್ ಹುಡುಗಿಯರು ಹಿಜಾಬ್ ನೊಳಗೇ ನಾಚಿ ನೀರಾಗುತ್ತಾರೆ. ತಮ್ಮನ್ನು ಮದುವೆಯಾಗುವವನು ಹಾಗಿರಬೇಕೆಂದು ಎಂದು ಕನಸು ಕಾಣುತ್ತಿರುತ್ತಾರೆ.’

ಅವನ ಮಾತಿಗೆ ನನಗೆ ನಗು ತಡೆದುಕೊಳ್ಳಲಾಗಲಿಲ್ಲ.

‘ಕಾಬೂಲಿನ ಹಲವು ಜಿಮ್ ಗಳಿಗೆ ಈ ಖಾನ್ ಗಳಲ್ಲದೆ ಇಬ್ರಾಹಿಂ ಜಾನ್ ನ ಫೋಟೋಗಳನ್ನೂ ಹಾಕಿರುತ್ತಾರೆ.’

‘ಯಾರವನು, ನಾನು ಹೆಸರೇ ಕೇಳಿಲ್ಲವಲ್ಲ?’

‘ಅರೆ, ಅಷ್ಟೊಂದು ಫೇಮಸ್ ನಟ ಅವನು. ಗೊತ್ತಿಲ್ಲ ಅಂತೀರಾ? ಅದೇ, ‘ಕಾಬೂಲ್ ಎಕ್ಸ್ಪ್ರೆಸ್’, ‘ಧೂಮ್’ನಲ್ಲಿ ನಟಿಸಿದ್ದಾನೆ ನೋಡಿ ಆ ಇಬ್ರಾಹಿಂ ಜಾನ್.’

‘ಓಹ್, ಜಾನ್ ಅಬ್ರಹಾಂ ಬಗ್ಗೆ ಹೇಳ್ತಿದ್ದೀರಾ?’

‘ಹೌದು, ಅದೇ ಇಬ್ರಾಹಿಂ ಜಾನ್. ನಮ್ಮ ಈಗಿನ ಹುಡುಗರಿಗೆ ಅವನ ಹಾಗೆ, ಸಲ್ಮಾನ್ ಖಾನ್ ಹಾಗೆ ದೇಹ ಬೇಕು ಎನ್ನುವ ಆಸೆ.’      

‘ನಿಮ್ಮ ಕಾಲದಲ್ಲೂ ಹಿಂದಿ ನಟ ನಟಿಯರನ್ನು ಆರಾಧಿಸುತ್ತಿದ್ದೆವು ಅಂತ ಹೇಳ್ತಿದ್ರಿ?’

‘ನಿಜ, ಮೇಡಂ. ನನಗಾಗ ಎಂಟೋ ಹತ್ತೋ ವಯಸ್ಸು. ನಮ್ಮ ಪಕ್ಕದೂರು ಪಘಮನ್ ನಲ್ಲಿ ‘ಒಬ್ಬ ಆಮ್ ಮಧುಬಾಲಾಳ ಸೌಂದರ್ಯಕ್ಕೆ ಎಷ್ಟು ಮಾರು ಹೋಗಿದ್ದ ಅಂದರೆ ಮದುವೆಯಾದರೆ ಅವಳನ್ನೇ ಎಂದು ತೀರ್ಮಾನಿಸಿಬಿಟ್ಟಿದ್ದ. ಒಂದು ದಿನ ಪಟ್ಟು ಹಿಡಿದು ತನ್ನ ಸೈಕಲ್ ಹತ್ತಿ ಕಾಬೂಲಿನಿಂದ ಬಾಂಬೆಗೆ ಹೊರಟೇ ಬಿಟ್ಟ. ಬಾಂಬೆ ತಲುಪಿದ ಮೇಲೆ ಎಲ್ಲ ಅಡೆತಡೆಗಳನ್ನೂ ಮೀರಿ ಮಧುಬಾಲಾಳನ್ನು ಭೇಟಿಯಾಗಿ ತನ್ನ ಪ್ರೇಮ ನಿವೇದನೆ ಮಾಡಿ, ಮದುವೆ ಪ್ರಸ್ತಾಪವನ್ನೂ ಮುಂದಿಟ್ಟ. ಆದರೆ ಅವಳು ಅವನ ಹುಚ್ಚಾಟವನ್ನು ತಳ್ಳಿ ಹಾಕಿದಳು. ಭಗ್ನ ಪ್ರೇಮಿಯಾಗಿ ಮರಳಿದ ಅವನು ಕಾಬೂಲಿನ ಸುತ್ತ ಮುತ್ತಲಿನ ಹತ್ತೂರುಗಳಲ್ಲಿ ಹೀರೊ ಆಗಿ ಬಿಟ್ಟ. ಅವನನ್ನು ಮದುವೆಯಾಗಲು ಸುತ್ತ ಮುತ್ತಲಿನ ಹುಡುಗಿಯರು ಸಾಲು ಸಾಲು ನಿಂತಿದ್ದರು.’

‘ನಿಜವಾಗಲೂ ಕಾಬೂಲಿನಿಂದ ಬಾಂಬೆಗೆ ಆ ಮನುಷ್ಯ ಬಂದಿದ್ನಾ?’ ನಾನು ಕಣ್ಣರಳಿಸಿ ಅವನತ್ತ ನೋಡಿದೆ.

ನಂಬಿದರೆ ನಂಬು, ಬಿಟ್ಟರೆ ಬಿಡು ಎನ್ನುವಂತೆ ಅವನು ಸಿಗರೇಟ್ ಹೊಗೆ ಬಿಡುತ್ತಾ ಕೂತಿದ್ದ. ಬಹುಶಃ ಅಫ್ಘನ್ ಮೂಲದ ಮಧುಬಾಲಾಲ ಸೌಂದರ್ಯವನ್ನು ಹೊಗಳಲೋ, ಅಥವಾ ಹಿಂದಿ ಚಿತ್ರಗಳ ಮೋಡಿಯ ಬಗ್ಗೆ, ಬಾಂಬೆ ಚಿತ್ರರಂಗದ ಮೇಲೆ ಅಫ್ಘನ್ ಮೂಲದವರ ಹಿಡಿತವಿರುವ ಬಗ್ಗೆ ಜನರಲ್ಲಿ ವಿಶ್ವಾಸ ಹುಟ್ಟಿಸಲೋ ಈ ಕಥೆ ಹುಟ್ಟಿ ಕೊಂಡಿರಬಹುದು ಅನಿಸಿತು. 

‘ಅಂಬು, ಆಲ್ ಓಕೆ?’ ನವೀನ ಅಲ್ಲಿಂದಲೇ ಕೂಗು ಹಾಕಿದ. 

‘ಯೆಸ್, ಯೆಸ್,’ ನಾನು ಕೂತಲ್ಲಿಂದ ಕದಲದೇ ಕೂಗಿದೆ.    

‘ಒಬ್ಬರೇ ಇಲ್ಲಿ ಕೂತಿದ್ದೀರಾ ಅಂತ ನಿಮ್ಮ ಗೆಳೆಯರಿಗೆ ಗಾಬರಿಯಿರಬೇಕು. ಅಷ್ಟಕ್ಕೂ ಈ ಸಲ್ಮಾನ್ ಖಾನ್, ಶಾರೂಖ್ ಖಾನ್, ಅಮೀರ್ ಖಾನ್ ಎಲ್ಲ ನಮ್ಮ ಮೂಲದವರೇ ಅಲ್ಲವೇ?’ ಅವನ ಪ್ರಶ್ನೆಗೆ ಕಿರುನಗೆ ಮಾತ್ರವೇ ನನ್ನ ಉತ್ತರವಾಗಿತ್ತು.

ಹಿಂದಿ ಚಿತ್ರಗಳೊಡನೆ ಅಫ್ಘನ್ನರ ಪ್ರೇಮ ಇಂದು ನಿನ್ನೆಯದಲ್ಲ. ತಾಲಿಬಾನ್ ಆಡಳಿತವನ್ನು ೨೦೦೧ರಲ್ಲಿ ಹೊರ ಹಾಕಿದಾಗ ಬಾಲಿವುಡ್ ಚಿತ್ರಗಳನ್ನು ತೋರಿಸುವ ಚಿತ್ರಮಂದಿರಗಳು ತುಂಬಿ ತುಳುಕಿದವು. ಮನೆ ಮನಗಳಲ್ಲಿ ಹಿಂದಿ ತಾರೆಗಳು ಮತ್ತೆ ಟಿವಿಯ ಪರದೆಯ ಮೇಲೆ ಕಾಣಿಸಿ ಕೊಂಡರು. ಟ್ರಕ್ ಗಟ್ಟಲೆ ಹಿಂದಿ ಚಲನಚಿತ್ರಗಳ ವಿಸಿಡಿಗಳು ಪಾಕಿಸ್ತಾನದ ಮೂಲಕ ಅಫ್ಘನ್ನರ ಕೈ ಸೇರಿ ಸಂತೋಷದ ಪುನರ್ಮಿಲನವಾಯಿತು.       

ನನ್ನ ಮನಸ್ಸನ್ನು ಓದಿದವನಂತೆ ಮುದುಕ ನಿಟ್ಟುಸಿರು ಬಿಟ್ಟ: ‘ವಿಚಿತ್ರವೆಂದರೆ, ನಮ್ಮ ಜೀವನವೂ ಹೆಚ್ಚೂ ಕಡಿಮೆ ನಿಮ್ಮ ಹಿಂದಿ ಸಿನಿಮಾಗಳಂತೆಯೇ. ಹೆಸರು ಬೇರೆ ಬೇರೆ ಅಷ್ಟೇ, ಎಲ್ಲರವೂ ಒಂದೇ ಕಥೆ.’

‘ಏನು ಹಾಗಂದ್ರೆ?’

‘ಮೊದಲಿಗೆ ಸ್ವಲ್ಪ ಆಸೆ, ಕನಸು, ರೋಮಾನ್ಸ್, ಕಂಡರೂ ಕಾಣದಂಥ ಸಣ್ಣ ಪುಟ್ಟ ಹಾಸ್ಯ ಇರುವ ಒಂದು ಸಿನಿಮಾ ಸೆಟ್ ಊಹಿಸಿ ಕೊಳ್ಳಿ. ಅದರಲ್ಲಿ ದೊಡ್ಡ ದುರಂತದೊಡನೆ ಬಂದ ಪ್ರತ್ಯೇಕತೆಯೆನ್ನುವ ಮಧ್ಯಂತರ, ಕೊನೆಗೆ ಪ್ರೇಮಿಗಳ ತಾತ್ಕಾಲಿಕ ಭರವಸೆ ಹಾಗೂ ಪುನರ್ಮಿಲನ. ತಾಲಿಬಾನ್ ಹೋದ ಮೇಲೆ ನಿಮ್ಮ ಮುಂಬೈ ಮತ್ತು ನಮ್ಮ ಕಾಬೂಲಿಗೆ ಆಗಿದ್ದು ಅದೇ ನೋಡಿ, ಪುನರ್ಮಿಲನ!’

ಅವನ ಹೋಲಿಕೆ ಕೇಳಿ ಅರೆಕ್ಷಣ ದಂಗಾದೆ. ನಿಜ, ಕುರಿ ಕಾಯುವ ಮುದುಕ ನೋಡಿದಷ್ಟು ಜಗತ್ತನ್ನು ನಾನು ನೋಡಿಲ್ಲ, ಅವನು ಜೀವನವನ್ನು ತಿಳಿದಷ್ಟು ನಾನು ಅರಿತಿಲ್ಲ ಅನಿಸಿತು!

‘ತಾಲಿಬಾನ್ ಆಡಳಿತವಿದ್ದಾಗ, ನಮ್ಮಲ್ಲಿ ಎಷ್ಟೋ ಕುಟುಂಬಗಳು ಮನೆಯಲ್ಲಿದ್ದುಕೊಂಡೇ ವಿಸಿಡಿಗಳಲ್ಲಿ ನೋಡಿರುವಷ್ಟು ಹಿಂದಿ ಸಿನಿಮಾಗಳನ್ನು ನೀವು ಭಾರತದವರೇ ನೋಡಿರುವುದಿಲ್ಲ.’

ಅವನ ಮಾತು ನಿಜ. ತಮ್ಮ ಬೀದಿಗಳಲ್ಲೇ ಹಿಂಸಾಚಾರ, ಕೊಲೆ ಮತ್ತು ಅತ್ಯಾಚಾರಗಳನ್ನು ನೈಜವಾಗಿ ಕಣ್ಣ ಮುಂದೆ ಕಂಡಿದ್ದರೂ ಅವೇ ತುಂಬಿರುವ ಹಿಂದಿ ಚಲನಚಿತ್ರಗಳು ಹೇಗೆ ಅಫ್ಘನ್ನರ ಮನಸೂರೆಗೊಂಡವು ಎನ್ನುವುದು ನಿಗೂಢ. ಕೊನೆಯಲ್ಲಿ ಹಿಂಸೆ, ಕ್ರೌರ್ಯಕ್ಕೆ ಹಿನ್ನಡೆಯಾಗಿ, ನಟ ನಟಿಯರು ಗೆದ್ದು ಒಂದಾಗುವುದು, ಪ್ರೇಮ ಜಯಿಸುವುದು ಅವರಿಗೆ ತಮ್ಮನ್ನು ತಾವು ಪರಿವರ್ತಿಸಿಕೊಳ್ಳುವಾಗ ನೋಡಬೇಕಾದ ಮಹತ್ವಾಕಾಂಕ್ಷೆಯ ಚಿತ್ರಗಳೆಂದು ಅನಿಸಿರಬಹುದೆಂದು ಮನಸ್ಸಿನಲ್ಲೇ ತರ್ಕಿಸಿದೆ. 

ಮಾತಿನ ನಡುವೆ ನನ್ನ ಕೈ ಬೆರಳು ತಂತಾನೇ ಕ್ಯಾಮೆರಾ ಶಟರ್ ಮೇಲೆ ಪ್ರತಿ ಹತ್ತು ಚಿತ್ರಗಳಾದ ಮೇಲೆ ಹೋಗುವುದು ನಿಂತಿರಲಿಲ್ಲ.

‘ಬೆಳಕಾಗಲಿ, ನಿಮ್ಮದೊಂದು ಚೆಂದದ ಫೋಟೋ ತೆಗಿತೀನಿ. ಮುಂದಿನ ಸಲ ಬರುವಾಗ ಪ್ರಿಂಟ್ ಹಾಕಿಸಿ ತಂದು ಕೊಡುತ್ತೇನೆ.’

‘ಲಾ, ಲಾ, ಮದಾಮ್,’ ಅವನು ಹಿಂಜರಿಯುತ್ತಲೇ ಹೇಳಿದ. 

‘ಭಾರತದ ಹೆಣ್ಣು ಮಗಳು ತೆಗೆದ ಚಿತ್ರ ಅಂತ ಊರಿಗೆ ಹೋದಾಗ ನಿಮ್ಮ ಹೆಂಡತಿ, ಮಕ್ಕಳಿಗೆ ತೋರಿಸಿ.’

‘ಐವ ಓಕೆ, ಮದಾಮ್, ಓಕೆ.’

ದೂರದಲ್ಲಿ ಎಲ್ಲೋ ಕೋಳಿ ಕೂಗಿದ ಸದ್ದಾಯಿತು. ಮಲಗಿದ್ದ ಕುರಿ-ಮೇಕೆಗಳು ‘ಮೆಹೆಹೆ ಮೆಹೆಹೆ’ ಸದ್ದು ಮಾಡತೊಡಗಿದವು. ನೆಲದ ಮೇಲೆ ಕೂತಿದ್ದ ಮುದುಕ ಏನೋ ನೆನಪಾದವನಂತೆ ಧಡಾರನೆ ಮೇಲೆದ್ದು ಡೇರೆಯೊಳಗೆ ಹೋದ. ಏನೋ ನೆನಪಾಗಿರಬೇಕು ಮತ್ತೆ ಬರುತ್ತಾನೆ ಅಂದುಕೊಂಡು ಸುಮ್ಮನಾದೆ.    

ಕತ್ತಲು ಸರಿದು ಬೆಳಕಾಗತೊಡಗಿತು. ಕ್ಯಾಮೆರಾ ಆರಿಸಿ, ಕುರ್ಚಿಯಿಂದ ಮೇಲೆದ್ದು ಆಕಳಿಸುತ್ತಾ ಒಮ್ಮೆ ಮೈ ಮುರಿದುಕೊಂಡೆ. ಫೋನಿನಲ್ಲಿ ಲತಾ ಹಾಡುಗಳು ಇನ್ನೂ ಬರುತ್ತಿದ್ದವು. ಡೇರೆ ಕಡೆಗೊಮ್ಮೆ ನೋಡಿ ಬಹುಶಃ ಮುದುಕನಿಗೆ ನಿದ್ರೆ ಹತ್ತಿರಬಹುದೆಂದುಕೊಂಡು ಗೆಳೆಯರು ಕೂತಿದ್ದ ಕಡೆಗೆ ಹೆಜ್ಜೆ ಹಾಕಿದೆ. 

‘ಏನು ಮಾರಾಯ್ತಿ, ಇಡೀ ರಾತ್ರಿ ಕುರಿಗಳಿಗೂ ನಿನ್ನ ಹಳೆ ಜಮಾನದ ಹಾಡು ಕೇಳಿಸಿದ್ದೀಯಲ್ಲ,’ ಚಂದ್ರು ರೇಗಿಸಿದ. 

‘ಬರೀ ಕುರಿಗಳಲ್ಲ ಕಣ್ರಪ್ಪ ಆ ಮುದುಕ ಕೂಡ ಅವನ ಕಥೆ ಹೇಳ್ತಾ, ಲತಾ ರಫಿ ಹಾಡು ಕೇಳ್ತಾ ಇಷ್ಟೊತ್ತು ನಂಜೊತೆ ಅಲ್ಲೇ ಕೂತಿದ್ದೆ.’

‘ಓಹ್, ಹಾಗಿದ್ರೆ ಕುರಿ ಕಾಯೋನಿಗೂ ನಿದ್ರೆ ಕೊಡ್ಲಿಲ್ವಾ ನಿನ್ನ ಆ ಕಿತ್ತೋಗಿರೋ ಹಳೆ ಹಾಡುಗಳು?’ ನವೀನ ಚುಡಾಯಿಸಿದ.

‘ಬಿಡ್ರೋ, ನವೀ, ಚಂದ್ರು. ಯಾಕ್ರೋ ಹಾಗೆ ಅವಳನ್ನ ಯಾವಾಗ್ಲೂ ಗೋಳು ಹುಯ್ಕೊಳ್ತೀರಾ,’ ಸುಮ ಅವರಿಬ್ಬರಿಗೂ ರೇಗಿದಳು.   

ಒಂದಷ್ಟು ಸೂರ್ಯೋದಯದ ಫೋಟೋಗಳನ್ನು ತೆಗೆದು ಮುಗಿಸುವಷ್ಟರಲ್ಲಿ ಡೇರೆಯಲ್ಲಿ ಮಲಗಿದ್ದ ಕುರಿ ಕಾಯುವ ಇಬ್ಬರು ಹೊರಗೆ ಬಂದರು. ಹತ್ತಿರದಲ್ಲಿದ್ದ ಮೂರು ಕಲ್ಲುಗಳ ಮೇಲೆ ಪಾತ್ರೆಯೊಂದನ್ನಿರಿಸಿ, ನೀರು, ಕಾಫಿ ಪುಡಿ ಹಾಕಿ ಕಹ್ವಾ ಕಾಯಿಸತೊಡಗಿದರು. ಸೂರ್ಯೋದಯದ ಹಿನ್ನೆಲೆಯಲ್ಲಿ ಅವರ ಒಂದಷ್ಟು ಸಿಲ್ವೆಟ್ ಗಳನ್ನು ತೆಗೆದ ಮೇಲೆ ಮುದುಕ ಇನ್ನೂ ಡೇರೆಯಿಂದ ಹೊರ ಬರಲಿಲ್ಲವಲ್ಲ ಅಂದುಕೊಂಡೆ. 

‘ಚಂದ್ರು, ಆ ಮುದುಕನನ್ನ ಏಳಿಸೋಕೆ ಹೇಳೋ. ಅವನ ಫೋಟೋ ತೆಗೆದು ಕೊಡ್ತೀನಿ ಅಂತ ಹೇಳಿದ್ದೆ.’

ಚಂದ್ರು, ಆ ಕುರಿ ಕಾಯುವವರ ಬಳಿ ಡೇರೆಯಲ್ಲಿರುವ ಮುದುಕನನ್ನು ಕರೆ ತರುವಂತೆ ಹೇಳಿದ. 

‘ಮುದೀರ್, ಯಾವ ಮುದುಕ? ಇಲ್ಲಿ ಇರೋದು ನಾವಿಬ್ರೇ.’

‘ಏನೇ, ಅಂಬು ಇದು? ಇಲ್ಲಿರೋದು ಇವರಿಬ್ರೇ ಅಂತಲ್ಲೇ? ಯಾವ ಮುದುಕನ ಬಗ್ಗೆ ಕೇಳ್ತಿದ್ದೀಯೆ?’

‘ಅದೇ ನಿಮ್ಮ ಜೊತೆಯಲ್ಲಿ ಇಲ್ಲಿ ಕುರಿ ಕಾಯುತ್ತಾನಲ್ಲ ಗುಲಾಂ ಫಾರೂಖ್, ಕಾಬೂಲಿನವನು…’ 

ಅವರಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಒಬ್ಬ ನಡುಗುತ್ತಾ ಹಣೆ ಮೇಲೆ ಬರುತ್ತಿದ್ದ ಬೆವರನ್ನೊರೆಸಿಕೊಂಡ. ನಮಗೆ ಅವರ ವರ್ತನೆ ವಿಚಿತ್ರವೆನಿಸಿತು. 

‘ಲೇ, ಅಂಬುಜ, ರಾತ್ರಿ ಹಾಡು ಕೇಳುತ್ತಾ ಯಾವುದಾದ್ರೂ ಕನ್ಸು ಕಂಡ್ಯೇನೆ?’ ಗಿರೀಶ ರೇಗಿಸಿದ. 

‘ಇಲ್ಲ ಕಣ್ರೋ, ಎಷ್ಟು ಹೊತ್ತು ಜೊತೇಲಿ ಕೂತು, ಕಾಫಿ ಕುಡಿತಾ, ಸಿಗರೇಟು ಸೇದಿ ಕೊಂಡು ಮಾತಾಡಿದ್ದೀವಿ.’ 

ನಾನು ಅವರನ್ನೆಲ್ಲಾ ನಾನು ಕೂತಿದ್ದ ಜಾಗಕ್ಕೆ ಕರೆದುಕೊಂಡು ಹೋದೆ.

‘ಇಲ್ಲೇ ನೋಡಿ ನಾವಿಬ್ರೂ ಕೂತಿದ್ದದ್ದು.’

ನಾನು ಕೂತಿದ್ದ ಸ್ಥಳದಲ್ಲಿ ನಾನು ಸೇದಿ ಬಿಸಾಡಿದ ಮೂರ್ನಾಲ್ಕು ಸಿಗರೇಟ್ ತುಂಡುಗಳು ಬಿದ್ದಿದ್ದವು. ಅವನು ಕುಳಿತಿದ್ದ ಜಾಗದಲ್ಲಿ ಐದಾರು ಸಿಗರೇಟ್ ತುಂಡು ಮತ್ತು ನಾನವನಿಗೆ ಕೊಟ್ಟಿದ್ದ ಲೈಟರ್, ಕಾಫಿ ಕುಡಿದು ಇಟ್ಟಿದ್ದ ಪ್ಲಾಸ್ಟಿಕ್ ಗ್ಲಾಸ್ ಕಂಡವು. 

‘ಸಾಕೆನ್ರೋ ಸಾಕ್ಷಿ?’

ಅವನಿರುವ ಫೋಟೋಗಳೂ ನಾಲ್ಕಾರು ಕ್ಯಾಮೆರಾದಲ್ಲಿರುವುದು ನೆನಪಾಗಿ ಟ್ರೇಲ್ಸ್ ತೆಗೆದ ಚಿತ್ರಗಳನ್ನು ಹುಡುಕತೊಡಗಿದೆ. ಅವನು ನಿಂತಿರುವ ಚಿತ್ರಗಳಲ್ಲಿದ್ದದ್ದು ಅಸ್ಪಷ್ಟ ಕಪ್ಪು ಛಾಯೆ ಮಾತ್ರ. 

‘ಮುದೀರ್, ಮದಾಮ್, ನೀವು ಹೇಳುತ್ತಿರುವ ಕಾಬೂಲಿನವನು ಇಲ್ಲಿ ಇದ್ದದ್ದು ನಿಜ. ಆದರೆ ಆರು ತಿಂಗಳ ಹಿಂದೆ ತುಂಬಾ ಜ್ವರ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುನ್ನವೇ ತೀರಿಕೊಂಡ.’

ಅವನು ಹೇಳಿದ ಮುಂದಿನ ಸಾಲುಗಳು ನನ್ನ ಕಿವಿಗೆ ಬೀಳಲಿಲ್ಲ, ಕಣ್ಣು ಬಿಟ್ಟಾಗ, ಸುಮಾ ತನ್ನ ತೊಡೆಯ ಮೇಲೆ ನನ್ನ ತಲೆ ಸವರುತ್ತಿದ್ದಳು, ನವೀನ ಕಾರನ್ನು ದೋಹಾ ಕಡೆಗೆ ದೌಡಾಯಿಸುತ್ತಿದ್ದ.   

ಮಿಲ್ಕಿವೇ – ಕ್ಷೀರಪಥ/ ಆಕಾಶಗಂಗೆ
ಮುದೀರ್ – ಮಾಲೀಕ
ಕೀಫಕ್ – ಹೇಗಿದ್ದೀರ?
ತಮಾಮ್ – ಚೆನ್ನಾಗಿದ್ದೀನಿ
ಶುಕ್ರನ್ – ಧನ್ಯವಾದ
ಮಾಸ್ಸಲಾಮಾ – ಗುಡ್ ಬೈ
ನಾರ್ಥ್ ಪೋಲ್ – ಉತ್ತರ ಧ್ರುವ
ಮದಾಮ್ – ಮೇಡಂ
ಜಾನ್ – ತಮಗೆ ಪ್ರಿಯವಾದ ವ್ಯಕ್ತಿಯನ್ನು ಸಂಬೋಧಿಸುವಾಗ ಆತ/ಆಕೆಯ ಹೆಸರಿನ ಜೊತೆಯಲ್ಲಿ ಅಫ್ಘನ್ನರು ಜಾನ್ ಸೇರಿಸಿ ಕರೆಯುತ್ತಾರೆ.
ಆಮ್ – ಅಂಕಲ್
ಲಾ – ಇಲ್ಲ
ಲಾ – ಬೇಡ
ಐವ – ಹೌದು
ಕಹ್ವಾ – ಅರಬರು ಕುಡಿಯುವ ಬ್ಲಾಕ್ ಕಾಫಿ
ಸಿಲ್ವೆಟ್ – ಕಪ್ಪು ನೆರಳಿನ ಚಿತ್ರ

‍ಲೇಖಕರು Admin

November 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: