ಚಿರಸ್ಮರಣೆ ಒಂದು ಚಿರನೂತನ ನೆನಪು
ಎನ್ ನಾರಾಯಣ ಸ್ವಾಮಿ
ಹೀಗೊಂದು ದಿನ ಪೇಸ್ ಬುಕ್ ತಿರುವುತ್ತಿದ್ದಾಗ ಜಿ. ಎನ್.ಮೋಹನ್‌ರವರ ಒಂದು ಲೇಖನ ನನ್ನ ಗಮನ ಸೆಳೆಯಿತು, ಅಂದರೆ ಸಾಮಾನ್ಯ ಸೆಳೆತವಲ್ಲ.
ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾವು ಯಾವ ಪರಿ ಹಳ್ಳಿಗಳ ಹೃದಯದಲ್ಲಿ ಹಾಸು ಹೊಕ್ಕಾಗಿತ್ತು ಎಂಬುದನ್ನು ಈ ಕಾದಂಬರಿ ಯಥಾವತ್ತಾಗಿ ಚಿತ್ರಿಸಿದೆ. ಸುಬಾಸ್ ಚಂದ್ರಬೋಸ್ ರವರ ಪ್ರಭಾವದಿಂದ ಬಹುತೇಕ ಯುವ ಪಡೆ ಕ್ರಾಂತಿಕಾರಿ ಮನೋಬಾವವನ್ನು ಬೆಳಿಸಿಕೊಂಡಿದ್ದ ಸಮಯದಲ್ಲಿ, ಕಯ್ಯೂರಿನಲ್ಲೂ ಯುವ ಪಡೆಯೊಂದು ಸ್ವಾತಂತ್ರ ದೀವಿಗೆಯೊಂದನ್ನು ಹಚ್ಚಬೇಕೆಂಬ ಹಂಬಲದೊಂದಿಗೆ ಊರಿನ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ತಯಾರಾಗುತ್ತದೆ. ಆ ಪಡೆಯೇ ಅಪ್ಪು, ಚಿರಕುಂಡ, ಕುಞಂಬು ಮತ್ತು ಅಬೂಬಕರ್. ಇಲ್ಲಿನ ಪಾತ್ರಗಳು ಮತ್ತು ಸನ್ನಿವೇಶಗಳನ್ನು ನಿರಂಜನರ ಪಕ್ವ ಲೇಖನಿ ಹರಿತವಾಗಿ, ನಿಖರವಾಗಿ, ಸ್ವಷ್ಟವಾಗಿ ನಮೂದಿಸಿದೆ.
ಕಥೆಯ ಹಂದರದೊಳಕ್ಕೆ ಬರೋಣ. ಕಯ್ಯೂರು ಎಂಬುದು ಕೇರಳದ ಒಂದು ಸಾಮಾನ್ಯ ಹಳ್ಳಿ. ಅದು ನಮ್ಮ ನಿಮ್ಮಂತಹ ಹಳ್ಳಿಗಳಂತೆ ಹಗಲು ದುಡಿದರೆ ರಾತ್ರಿ ಹೊಟ್ಟೆ, ಇಲ್ಲದಿದ್ದರೆ ತಣ್ಣೀರು ಬಟ್ಟೆ, ಎಂಬಷ್ಟರ ಮಟ್ಟಿಗೆ ಜೀವನ ಸಾಗುತ್ತಿರುತ್ತದೆ. ಈ ಊರಿನಲ್ಲೂ ಶೋಷಿಸಲೇ ಹುಟ್ಟಿರುವರೇನೋ ಎಂಬಂತಹ ಇಬ್ಬರು ಜಮೀನುದಾರರು ಬೇರೆ. ಇಷ್ಟಿದ್ದರೆ ಸಾಕಲ್ಲವೇ ಬ್ರಿಟೀಷರ ಪರವಾಗಿ ಕೆಲಸ ಮಾಡಲು ಮತ್ತು ಹಳ್ಳಿಗರ ರಕ್ತ ಹೀರಲು. ಈ ಇಬ್ಬರು ಜಮೀನ್ದಾರರಂತು, ಒಬ್ಬರಿಗೊಬ್ಬರನ್ನು ಕಂಡರೆ ಆಗದಷ್ಟು, ಆದರೆ ಸ್ವಂತ ಹಿತಾಸಕ್ತಿ ಬಂದಾಗ ಒಂದಾಗುವ ಜೋಭದ್ರಗೇಡಿಗಳು. ಅವರೇ ನಂಬಿಯಾರ್ ಮತ್ತು ನಂಬೂದರಿ. ಕಯ್ಯೂರಿಗೆ ಬ್ರಿಟೀಷರ ಪರಿಚಯವಾಗುವುದೇ ಈ ಘನಂದಾರಿ ದೇಶದ್ರೋಹಿಗಳಿಂದ.

ಹೀಗಿರಬೇಕಾದರೆ, ಊರಿನ ಮಾರ್ಗದರ್ಶಕರೂ ಆದ ಊರಿನ ಉಪಾದ್ಯಾಯರನ್ನು ನೋಡಲು ಹೋಗುವ ಬಾಲ್ಯ ಸ್ನೇಹಿತರಾದ ಅಪ್ಪು ಮತ್ತು ಚಿರಕುಂಡರವರು ಪಕ್ಕದ ಊರಿಗೆ ಪಂಡಿತರನ್ನು ಭೇಟಿ ಮಾಡಲು ಹೋಗುವುದರಿಂದ ಕಥೆ ಪ್ರಾರಂಭವಾಗುತದೆ. ಹೋಗುವ ದಾರಿಯಲ್ಲಿ ರಾಮಣ್ಣಿಯ ಹೋಟಲ್‌ನ ಒಬ್ಬ ಧಾಂಡಿಗ ಹೀಗೆ ಪಾತ್ರಗಳ ಪರಿಚಯವಾಗುತ್ತಾ ಹೋಗುತ್ತವೆ. ಪಂಡಿತರೆಂದರೆ ಭಯಂಕರತೆಯನ್ನು ನೆನಪು ಮಾಡಿಕೊಂಡು ಕಾಯುತ್ತಿದ್ದ ಗೆಳೆಯರಿಗೆ ನರಪೇತಲ ಪಂಡಿತರೊಬ್ಬರ ಪರಿಚಯ ಮಾಡಿ ಕೊಡಲಾಗುತ್ತದೆ. ಈ ಪಂಡಿತರೇ ಸ್ವಾತಂತ್ರ್ಯ ಹೋರಾಟ ಮಾಡುವ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಿಗಳು ಎಂಬುದನ್ನು ಮೇಷ್ಟ್ರು ಹೇಳುತ್ತಾರೆ.

ಈ ಬಾಲಕರಿಬ್ಬರ ತಂದೆ ತಾಯಿಗಳು ವಿದ್ಯಾವಂತರೇನಲ್ಲ. ಆದರೆ ಪರಕೀಯರ ದಾಸ್ಯ ಶೃಂಖಲೆಗಳಿಂದ ವಿಮುಕ್ತಿ ಪಡೆಯಲು ಮತ್ತು ಊರಿನ ಬ್ರಿಟೀಷರಾದ ಜಮೀನುದಾರರಿಗೆ ಬುದ್ದಿ ಕಲಿಸಲು ತಮ್ಮ ಮಕ್ಕಳಿಗೆ ಪ್ರೋತ್ಸಾಹ ಕೊಟ್ಟು ತಮಗೆ ಅರಿವಿಲ್ಲದಂತೆಯೇ ಸ್ವಾತಂತ್ರ ಗಂಗೆಯಲ್ಲಿ ಮುಳುಗಲು ತಯಾರಾಗುತ್ತಾರೆ. ತನ್ನ ಮಗ ಎಲ್ಲಿ ಪೋಲಿ ಅಲೆಯುತ್ತಾನೋ ಎಂಬ ಗುಮಾನಿಯೊಂದಿಗೆ ಅಪ್ಪುವಿನ ತಂದೆ ಚಢಪಡಿಸುತ್ತಿದ್ದರೆ, ಸ್ವತಃ ಜಮೀನು ಕಳೆದುಕೊಂಡಿದ್ದ ಚಿರಕುಂಡನ ತಂದೆ ತನ್ನ ಮಗ ಕ್ರಾಂತಿಕಾರಿಯಾಗಿ ಸ್ವಾತಂತ್ರ ದೀವಿಗೆ ಹತ್ತಿಸಲೆಂದೆ ಆಶಿಸುವುದರಲ್ಲಿ ಬೆಳಕು ಕಾಣಲು ಹಾತೊರೆಯುತ್ತಾನೆ.
ಕಯ್ಯೂರಿನಲ್ಲೇ ಜೀವನ ಸಾಗಿಸುವ ಬಡ ಮಹಿಳೆ ಬೂಬಮ್ಮನದು ವಿಚಿತ್ರ ಕಥೆ. ತನ್ನ ಮಗ ಅಬೂಬಕರ್ ದೂರದ ತಲ್ಲಚೇರಿಯಲ್ಲಿ ಬೀಡಿ ಕಟ್ಟಿ ಪುಡಿಕಾಸು ಸಂಪಾದಿಸುವ, ಯಾವಾಗಲೋ ಒಮ್ಮೆ ಊರಿಗೆ ಬರುವ ಮುಸ್ಲಿಂ ಬಾಲಕ. ಒಮ್ಮೆ ಊರಿಗೆ ಬಂದಿದ್ದಾಗ ಊರಿನಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಮರದ ಮೆರನಣಿಗೆಗೆ ಹೆಗಲು ಕೊಡಲು ಊರಿನಲ್ಲಿಯೇ ಉಳಿದು ಬಿಡುತ್ತಾನೆ. ಅದೇ ತರಹ ಎಲ್ಲಿಂದಲೋ ಬಂದು ಸೇರುವ ಕುಞಂಬು. ಮತ್ತು ಎಳೇ ಬಾಲಕನಾದ ಕುಟ್ಟಿ ಕೃಷ್ಣ, ಇವರೇ ಕಾದಂಬರಿಯಲ್ಲಿ ಕಾಣಿಸುವ ದೇಶಪ್ರೇಮಿ ಹುತಾತ್ಮರು.
ಈ ಬಾಲಕರ ಜೊತೆಗೆ ಇಡೀ ಊರೇ ನಿಂತು ಪರಕೀಯರ ದಬ್ಬಾಳಿಕೆ ಎದುರಿಸಲು ಸಿದ್ದವಾಗುತ್ತದೆ. ಊರಿನ ಇನ್ನೆಷ್ಟೋ ದೇಶಪ್ರೇಮಿಗಳೆಂದರೆ, ಇಂಪಾದ ಹಾಡುಗಾರನಾದ ಕಣ್ಣ. ವಿಧವೆಯಾದ ದೇವಕಿಯನ್ನೇ ಮದುವೆಯಾದ ಸುಧಾರಣವಾದಿ ಮುಂದೆ ದೇವಕಿಯ ತಂಗಿ ಜಾನಕಿಯನ್ನೆ ಅಪ್ಪುವಿಗೆ ಕೊಟ್ಟು ಮದುವೆ ಮಾಡುತ್ತಾನೆ. ಅಪ್ಪುವಿನ ಕೆಲಸಗಳಿಗೆ ಬೆಂಗಾವಲಾಗಿ ನಿಲ್ಲುತ್ತಾನೆ. ಕಡೆ ಬಾರಿ ಜಾನಕಿ ನೋಡಲು ಬಂದಾಗ ಅಪ್ಪು ಕೂಡ ನಾನು ಗಲ್ಲಿಗೇರಿದ ನಂತರ ಮರು ಮದುವೆ ಆಗುವಂತೆ ಜಾನಕಿಯನ್ನು ಪ್ರೇರೇಪಿಸುತ್ತಾನೆ. ಅಪಾರವಾದ ಕಾರ್ಯಚಟುವಟಿಕೆಗಳ ನಡುವೆಯೂ ಅಪ್ಪು ಮತ್ತು ಜಾನಕಿಗೆ ಮುದ್ದಾದ ಗಂಡು ಮಗುವೊಂದು ಜನಿಸುತ್ತದೆ. ಈ ಮದ್ಯೆ ಚಿರಕುಂಡ ಕೂಡ ಮದುವೆಯಾಗುತ್ತಾನೆ. ಈ ಇಬ್ಬರೂ ಯುವಕರು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡದಿದ್ದರೂ, ಮಾನವ ಸಹಜ ದೌರ್ಬಲ್ಯವಾದ ಹೆಣ್ಣಿನ ವ್ಯಾಮೋಹವನ್ನೇ ದೂರವಿರಿಸಿ, ಸ್ವಾತಂತ್ರ ದೀವಿಗೆಯನ್ನು ಉರಿಸಲು ಹಗಲೂ ರಾತ್ರಿ ಶ್ರಮಿಸುತ್ತಾರೆ ಎಂದರೆ ಬಿಡುಗಡೆಯ ಹಂಬಲ ಎಷ್ಟಿರಬೇಕೆಂದು ನೀವೇ ಊಹಿಸಿ.
ಏಕೆಂದರೆ ದೇಶಪ್ರೇಮವೆಂಬುವುದು, ಇಡೀ ಊರಿನ ಜನರನ್ನು ಕೊತಕೊತನೆ ಕುದಿಯುವ ಕೊಪ್ಪರಿಗೆಯಂತೆ ಆವರಿಸಿಕೊಳ್ಳುತ್ತದೆ. ಹೋರಾಟದ ಮೊದಲ ಹಂತವಾಗಿ ರೈತ ಸಂಘದ ಸ್ಥಾಪನೆಯಾಗುತ್ತದೆ. ಸ್ವಾತಂತ್ರ ಹೋರಾಟದ ಜೊತೆಗೆ ವಯಸ್ಕರ ಶಿಕ್ಷಣ. ಅನಿಷ್ಠ ಜಮೀನ್ದಾರಿ ಪದ್ದತಿಯ ವಿರುದ್ದ ಗುಟುರು, ದಿನ ಪತ್ರಿಕೆಗಳ ವಾಚನ ಮುಂತಾದ ಕಾರ್ಯಕ್ರಮಗಳ ನಿಯೋಜನೆ ಪ್ರಾರಂಬಿಸಲಾಗುತ್ತದೆ. ಅದರಂತೆ ಇಡೀ ಊರಿನ ಜನರ ಮನಸ್ಸನ್ನು ದೇಶದ ಪರಿಸ್ಥಿಯ ಕಡೆ ತಿರುಗಿಸಲಾಗುತ್ತದೆ. ಅಕ್ಕ ಪಕ್ಕದ ನೀಲೇಶ್ವರ ಮತ್ತು ಕಾಸರಗೋಡಿನಲ್ಲಿ ಕಾಣದ ಬ್ರಿಟೀಷರ ವಿರುದ್ದದ ಚಟುವಟಿಕೆಗಳು ಕಯ್ಯೂರಿನಲ್ಲಿ ನಡೆಯುವುದು. ಊರಿನಲ್ಲಿದ್ದ ಇಬ್ಬರೂ ಜಮೀನ್ದಾರರಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಠಿಸುತ್ತದೆ. ಜಮೀನ್ದಾರರು ಸಹ ತಮ್ಮ ಸಕಲ ತಂತ್ರ ಕುತಂತ್ರಗಳಿಂದ ಊರಿನ ಜನರನ್ನು ಬಗ್ಗು ಬಡಿಯಲು ವಿಫಲವಾಗುತ್ತಾರೆ. ಆದರೆ ದುರಾದೃಷ್ಟವೊಂದು ಪೋಲೀಸ್ ಸುಬ್ಬನ ರೂಪದಲ್ಲಿ ಕಯ್ಯೂರನ್ನು ಅಪ್ಪಳಿಸುತ್ತದೆ.
ಪೋಲೀಸ್ ಸುಬ್ಬಯ್ಯ ಹುಂಬ, ದುಡುಕು ಬುದ್ದಿಯವ. ಊರಿನ ಸಾಹುಕಾರರ ಸಾಕಿದ ನಾಯಿಯಂತೆ ವರ್ತಿಸುವ, ಮುಂದಾಲೋಚನೆ ಇಲ್ಲದವ ಆಗಿದ್ದರಿಂದ ಇಡೀ ಊರಿಗೆ ಊರೇ ಗಂಡಾಂತರಕ್ಕೆ ಸಿಕ್ಕಿ ಬೀಳುತ್ತದೆ. ಸಾಹುಕಾರರ ಚಿತಾವಣೆಯಿಂದ ಸದಾ ಕನಲುವ ಕಡಾಯಿಯಂತೆ ಅಲ್ಲಾಡುವ ಸುಬ್ಬಯ್ಯನಿಗೆ ಊರಿನಲ್ಲಿ ಪ್ರಭಾತ ಫೇರಿ ನಡೆಯುತ್ತಿರುವ ಸುದ್ದಿ ಬರುತ್ತದೆ, ತಡಮಾಡದೇ ಓಡುವ ಸುಬ್ಬಯ್ಯ ಸಕಲ ಪ್ರಯತ್ನಗಳ ನಂತರ ಮೆರವಣಿಗೆಯ ಮುಂದೆ ಬಂದು ನಿಲ್ಲುತ್ತಾನೆ ಮತ್ತು ಮೆರವಣಿಗೆಯಲ್ಲಿದ್ದ ಜನರನ್ನು ಚದರಿಸಲು ಹೂಂಕರಿಸುತ್ತಾನೆ. ಆದರೆ ಬಿಡುಗಡೆಯೆಂಬ ಬೆಳಕನ್ನೇ ತಮ್ಮ ಜೀವನದ ಪರಮ ದ್ಯೇಯವೆಂದು ಭಾವಿಸಿದ್ದ ಮಹಾ ಜನತೆಗೆ ಸುಬ್ಬಯ್ಯನೆಂಬ ನೊಣ ಯಾವ ಲೆಕ್ಕ? ಮಾತಿಗೆ ಮಾತು ಬೆಳೆಯುತ್ತದೆ. ಮುಂದೆ ಬಾಲಾಪರಾದಿ ಕಾರಣದಿಂದ ಗಲ್ಲಿನಿಂದ ಪಾರಾಗುವ ಕುಟ್ಟಿ ಕೃಷ್ಣ ಜೋರಾಗಿ ಸುಬ್ಬಯ್ಯನನ್ನು ನೂಕುತ್ತಾನೆ. ಕೆಲವು ಧರ್ಮದೇಟುಗಳು ಬೀಳುತ್ತವೆ. ಗಾಬರಿಯಾದ ಸುಬ್ಬಯ್ಯ ತೇಜಸ್ವಿನಿ ನದಿಗೆ ಹಾರುತ್ತಾನೆ. ಈಗಾಗಲೇ ಗಡಿ ಬಿಡಿಯಿಂದ ಕಂಗಾಲಾಗಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾಯುತ್ತಾನೆ.
ಇಂತಹ ಅವಕಾಶವನ್ನೇ ಎದುರು ನೋಡುತ್ತಿದ್ದ ಸಾಹುಕಾರರು ಬ್ರಿಟೀಷ್ ಸರ್ಕಾರಕ್ಕೆ ದೂರು ಕೊಡುತ್ತಾರೆ. ಫೌಜುದಾರನ ನೇತೃತ್ವದಲ್ಲಿ ಊರಿಗೆ ಬಂದಿಳಿಯುವ ಪಡೆ ಶಬ್ದಗಳಲ್ಲಿ ವರ್ಣಿಲಾಗದ ರೀತಿಯಲ್ಲಿ ಊರಿನ ಮೇಲೆ ದೌರ್ಜನ್ಯ ನಡೆಸುತ್ತದೆ. ಊರಬಿಟ್ಟು ಹೋಗಲಾಗದ ಹೆಂಗಸೊಬ್ಬಳನ್ನು ಹರಿದು ಮುಕ್ಕುತ್ತದೆ. ಊರಿನ 60 ಜನರ ಮೇಲೆ ಪಿರ್ಯಾದು ತಯಾರಾಗುತ್ತದೆ. ಅಪ್ಪು ಮತ್ತು ಅಬೂಬಕರ್ ತಪ್ಪಿಸಿಕೊಂಡು ಹೋಗುತ್ತಾರೆ. ಆದರೆ 60 ಜನರಲ್ಲಿ 58 ಜನರನ್ನು ಬಂಧಿಸಿದ ಪೋಲೀಸರು, ಅಪ್ಪು ಮತ್ತು ಅಬೂಬಕರ್ ದೊರೆಯದಿದ್ದುದರಿಂದ ಇನ್ನಷ್ಟು ಅನಾಹುತಗಳ್ನು ಸೃಷ್ಠಿಸುತ್ತಾರೆ. ಊರಿನ ಸರ್ವನಾಶವನ್ನು ತಪ್ಪಿಸಲು ಇಬ್ಬರು ಕ್ರಾಂತಿಕಾರಿಗಳಾದ ಅಪ್ಪು ಮತ್ತು ಅಬೂಬಕರ್ ಊರಿಗೆ ಬಂದು ಪೋಲಿಸರಿಗೆ ಶರಣಾಗತರಾಗುತ್ತಾರೆ. ಸೆರೆಸಿಕ್ಕಿದ 60 ಜನರನ್ನು ಮಂಗಳೂರಿಗೆ ಮುಂದಿನ ವಿಚಾರಣೆಗೆ ಕರೆದೊಯ್ಯಲಾಗುತ್ತದೆ. ಹೋರಾಟಗಾರರಿಗೆ ನೆರವಾಗಲು ಮತ್ತು ಈಗಾಗಲೇ ಕಯ್ಯೂರು ಪ್ರಕರಣ ದೇಶವ್ಯಾಪ್ತಿ ಪ್ರಸಾರವಾಗಿ ಕಯ್ಯೂರು ರಕ್ಷಣಾ ಸಮಿತಿ ಸಿದ್ಧವಾಗಿರುತ್ತದೆ. ಪ್ರಸಿದ್ದ ವಕೀಲರಾದ ಶ್ರೀಯುತ ರಾಜಾರಾವ್ ವಕೀಲರಾಗಿ ನೇಮಕವಾಗುತ್ತರೆ. ವಿಚಾರಣೆ ವಿವಿಧ ನ್ಯಾಯಾಲಯಗಳಲ್ಲಿ ಮುಂದುವರಿಯುತ್ತದೆ. ಪ್ರಸಿದ್ದ ವಕೀಲರಾದ ಪಿಳೈ ಎಂಬುವವರೂ ಬಂದು ಹೋರಾಟಗಾರರ ಪರವಾಗಿ ಉಚಿತವಾಗಿ ವಾದಿಸುತ್ತಾರೆ. ಏನಾದರೇನು ಪ್ರಯೋಜನ ಬ್ರಿಟೀಷರ ನ್ಯಾಯವೆಂದರೆ ಮಾರ್ಜಾಲ ನ್ಯಾಯವಲ್ಲವೆ?
ಪೂರ್ವಾಗ್ರಹಪೀಡಿತ ಪರದೇಶಿ ಪರಂಗಿಗಳಿಂದ ನ್ಯಾಯ ನಿರೀಕ್ಷಿಸಲ್ಲು ಸಾದ್ಯವೇ? ಪರಿಣಾಮ. ಅಪ್ಪು, ಚಿರಕುಂಡ, ಕುಞಂಬು ಮತ್ತು ಅಬೂಬಕರ, ಬಾಲಕ ಕುಟ್ಟಿ ಕೃಷ್ಣನಿಗೆ ಫಾಸಿ ಶಿಕ್ಷೆಯಾಗುತ್ತದೆ. ಆದರೆ ಗಲ್ಲಿಗೆ ಹಾಕುವ ಹಗ್ಗ ಕುಟ್ಟಿಕೃಷ್ಣನ ಕುತ್ತಿಗೆಗೆ ದೊಡ್ಡದಾದುದರಿಂದ (ನಿರಂಜನರ ಪ್ರಕಾರ) ಅವನನ್ನು ಗಲ್ಲು ಶಿಕ್ಷೆಯಿಂದ ವಿನಾಯಿತಿ ನೀಡಿ ದೂರದ ಭೆಜವಾಡ ಜೈಲಿಗೆ ಸಾಗಹಾಕುತ್ತಾರೆ. ಉಳಿದ ನಾಲ್ವರಿಗೆ ಬಲವಂತದ ಸಹಿ ಪಡೆದು ಪ್ರಾಣದಾನಕ್ಕೆ ಅರ್ಜಿ ಸಲ್ಲಿಸುತ್ತಾರೆ ಆದರೆ ಪಕ್ಷಪಾತಿ ಸರ್ಕಾರದಿಂದ ಏನು ನಿರೀಕ್ಷಿಸಲು ಸಾದ್ಯ? ಗಲ್ಲು ಶಿಕ್ಷೆ ಖಾಯಂ ಆಗುತ್ತದೆ. ನಾಲ್ಕು ಜನ ಹುತಾತ್ಮರಾಗುತ್ತಾರೆ. ಇದು ಕಾದಂಬರಿಯ ಸಂಕ್ಷಿಪ್ತ ನೋಟ.
ಈ ಮೇಲಿನ ಕಥಾನಕವನ್ನು ನಮ್ಮ ಮುಂದೆ ಚಿರಸ್ಮರಣೆಯ ರೂಪದಲ್ಲಿ ಸಾದರ ಪಡಿಸಿರುವುದು ನಿರಂಜನರ ಪಕ್ವ ಲೇಖನಿ. ಸನ್ನಿವೇಶಗಳನ್ನು ಮಲ್ಲಿಗೆ ಮೊಗ್ಗಿನಂತೆ ಪೋಣಿಸಿರುವ ನಿರಂಜನರ ಕಥಾಕೌಶಲ್ಯಕ್ಕೆ ಮಾರುಹೋಗಬೇಕಾಗುತ್ತದೆ. ಕಾದಂಬರಿಯ ಕಡೆಯವರೆಗೆ ಕುತೂಹಲವನ್ನು ಕಾಯ್ದುಕೊಂಡು ಹೋಗಿರುವ ಕೌತಕ ಕಥನ ಕಲೆ ನಿರಂಜನರಿಗೆ ಮಾತ್ರ ಸಿದ್ದಿಸುವ ತಂತ್ರ. ಎರಡನೇ ಮಹಾಯುದ್ದದ ಸಂದರ್ಭದಲ್ಲಿನ ಭಾರತದ ಹಳ್ಳಿಗಳಲ್ಲಿನ ಪರಿಸ್ಥಿತಿಯನ್ನು ಕಾದಂಬರಿ ಯಥಾವತ್ತಾಗಿ ಕಟ್ಟಿಕೊಡುತ್ತದೆ.
ಈ ಕಾದಂರಿಯಲ್ಲಿ ನಿರಂಜನರು ನಿರೂಪಿಸಿದ ಅಬೂಬಕರ್ ಪಾತ್ರವಂತೂ ಸದ್ಯದ ಪರಿಸ್ಥಿಯ ಭಾರತದ ನಕಲಿ ದೇಶ ಭಕ್ತರಿಗೊಂದು ಸವಾಲೇ ಎಂದರೆ ಸರಿಯಾದೀತು. ನೀವು ‘ಕಾಲಾಪಾನಿ’ ಚಲನ ಚಿತ್ರವನ್ನು ನೋಡಿರುವಿರಾದರೆ ಅದರಲ್ಲಿ ದೇಶಭಕ್ತರಿಗೆ ಕೊಡುವ ಘೋರ ಶಿಕ್ಷೆಗಳನ್ನು ನಿರಂಜನರು ತಮ್ಮ ಕಾದಂಬರಿಯಲ್ಲಿಯೇ ಪ್ರಸ್ತಾಪಿಸಿದ್ದಾರೆ. ಅದರಲ್ಲೂ ಮಲವನ್ನು ನಳಿಕೆಯ ಮುಖಾಂತರ ಬಾಯಿಗೆ ಹುಯ್ಯುವ ಅಮರೀಶ್ ಪುರಿಯವರ ಅಭಿನಯವನ್ನು ನೋಡಿದಿರಾದರೆ ಖಂಡಿತವಾಗಿ ಮೂರು ದಿನ ಊಟ ಬಿಡುವುದರಲ್ಲಿ ಅನುಮಾನವಿಲ್ಲ. ಈ ಶಿಕ್ಷೆಯೂ ಸಹ ನಿರಂಜನರ ಕಾದಂಬರಿ ಚಿರಸ್ಮರಣೆಯಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಇಂತಹ ಶಕ್ತಿಶಾಲಿ ಕಥಾನಕವೊಂದು ಮೂಡಿ ಬರಲು ಈ ಮೇಲ್ಕಂಡ ವಿಚಾರಣೆಯ ಪ್ರತಿಯೊಂದು ಹಂತದಲ್ಲಿ ನಿರಂಜನರು ಪತ್ರಕರ್ತರಾಗಿ ಕಣ್ಣಾರೆ ಕಂಡಿರುವುದು ಸಹ ಒಂದು ಧನಾತ್ಮಕ ಅಂಶವೆಂದೇ ಹೇಳಬಹುದು.
ನಾವು ಓದದೇ ಇದ್ದ ಈ ಕಥಾನಕವನ್ನು ನಿಧಾನವಾಗಿಯಾದರೂ ಸಹ ಓದಲು ಪ್ರೇರೇಪಿಸಿದ ಜಿ.ಎನ್.ಮೋಹನ್‌ರವರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು.






khanditha nanu odabeku
:)pustakavantoo wonderful, article kooda ishta aytu.
ಬಹುಷಃ ಓದಿದ ಎಲ್ಲರೆದೆಯಲ್ಲೂ ಚಿರಸ್ಥಾಯಿಯಾದ ಕಾದಂಬರಿ ಚಿರಸ್ಮರಣೆ. ಅಪರಿಚಿತ ಲೋಕಕ್ಕೆ ಚಿರಸ್ಮರಣೆ ತೆರೆದಿಟ್ಟ ಮೋಹನರಿಗೆ ಧನ್ಯವಾದಗಳು.
ನಿರಂಜನರು ಅರಂಭಿಸಿದ ಚಿರಸ್ಮರಣೆ ಮುಂದುವರಿದಿದೆ..
ಹೀಗೆ..
ಫೇಸ್ ಬುಕ್ ನಲ್ಲಿ..
ಲೇಖನಗಳಲ್ಲಿ..
ಮರುಓದುಗಳಲ್ಲಿ, ಟಿಪ್ಪಣಿಗಳಲ್ಲಿ..
thumbaa chennagi bandide ; pustaka – lekhana yeradoo chetohaari ! bahala hidisitu Mohan – GOOD !!!- narayana raichur
ಚಿರಸ್ಮರಣೆ ಓದಿದ ಯಾರಿಗಾದರೂ ನೆನೆ ಆ ದಿನವ ಓ ಭಾರತ ಭಾಂದವ ಎಂಬ ಕರೆ ನೆನಪಾಗುತ್ತದೆ.ನಾನೂ ಕೇರಳಕ್ಕೆ ಹಲವಾರು ಬಾರಿ ಹೋಗಿಬಂದರೂ, ಕಯ್ಯೂರಿಗೆ ಸನಿಹದಲ್ಲೇ ನಾಕಾರು ದಿನಗಳನ್ನು ಕಳೆದರೂ ಅಲ್ಲಿಗೆ ಭೇಟಿ ನೀಡಲಾಗದ ನೋವು ನನನ್ನು ಕಾಡುತ್ತಿದೆ. ಕಳೆದ ಏಪ್ರಿಲ್ ನಲ್ಲಿ ಕಣ್ಣೂರಿಗೆ ಹೋದಾಗಲೂ ಕೇರಳದ ಜನಪ್ರಿಯ ನಾಯಕ ಎಕೆಜಿ ಹುಟ್ಟಿದ ಊರಲ್ಲಿಯೇ ನಾವು ಉಳಿದುಕೊಂಡಿದ್ದರೂ ನಾನೂ ಒಂದು ದಿನ ತಡವಾಗಿ ನಮ್ಮ ಸಂಗಾತಿಗಳನ್ನು ಸೇರಿಕೊಂಡಿದ್ದರಿಂದ ಅವರ ಸಮಾಧಿ ಹಾಗೂ ಮನೆಗೂ ಭೇಟಿ ನೀಡುವ ಅವಕಾಶ ಕಳೆದುಕೊಂಡೆ.ಆದರೆ…ಕಳೆದ ಬಾರಿ ಕೋಝೀಕೋಡ್ ಗೆ ಮತ್ತು ಈ ಬಾರಿ ಕನ್ನೂರಿಗೆ ಹೋದಾಗ ಅಲ್ಲಿ ಸಂಘಟಕರು ಸಂಘಟಿಸಿದ್ದ ಇತಿಹಾಸ ಪ್ರದಶನವು ಇಡೀ ಕೇರಳದ ಸ್ವಾತಂತ್ರ ಚಳುವಳಿಯ ಹಾಗೂ ನಂತರ ಅಲ್ಲಿಯ ಜನ ಚಳುವಳಿಯಕ್ರಾಂತಿಕಾರಿ ಚರಿತ್ರೆಯನ್ನು ಮೈನವೀರೇಳಿಸುವಂತೆ ಮಾಡಿತು.ಕೋಝೀಕೋಡ್ ನ ಪ್ರದಶನಕ್ಕಂತೂ ಲಕ್ಷೋಪ ಲಕ್ಷ ಜನ ಕುಟುಂಬ ಸಹಿತ ಭೇಟಿ ನೀಡಿದರು.ಸಂಘಟಕರು ಜನರ ಒತ್ತಡಕ್ಕೆ ಮಣಿದು ಎರಡು ದಿನ ಅದನ್ನು ವಿಸ್ತರಿಸಬೇಕಾಯಿತು.ಇಪ್ಪತ್ತಮೂರು ವರುಷಗಳ ಹಿಂದೆ ತದೇಕ ಚಿತ್ತದಿಂದ ಒಂದೇ ಉಸಿರಿನಲ್ಲಿ ಓದಿ ಮುಗಿಸಿದ್ದ ಕಯ್ಯೂರಿನ ನೆನಪುಗಳು ಇನ್ನೂ ಹಸಿಹಸಿಯಾಗಿವೆ. ಅದಕ್ಕೆ ಮತ್ತೆ ಜೀವ ತುಂಬಿದ ಆತ್ಮೀಯ ಗೆಳೆಯರಾದ ಮೋಹನ್ ಗೆ ಧನ್ಯವಾದಗಳು. ಅಂದಹಾಗೆ ಇಂತಹುದೇ ಇತಿಹಾಸವುಳ್ಳ ಕೇರಳದ ಪುನ್ನಪ್ರಾವಯಲಾರ, ಬಂಗಾಳದ ಚಿತ್ತಗಾಂಗ್ ವೀರರು ಇತರೆ ಹೋರಾಟಗಳ ಕುರಿತ ಪುಸ್ತಕವನ್ನು ನವಕನಾಟಕ ಮತ್ತೇ ಪ್ರಕಟಸಿದೆ. ಎಷ್ಡು ಕೊಂಡರೂ ಸಾಲದು ಮತ್ತೆ ಕೊಂಡು ಕೊಂಡೆ.ಸಾಧ್ಯವಾದರೆ ಚಿರಸ್ಮರಣೆ ಜೊತೆ ಅದನ್ನು ಓದಿ ಓದಿ..ಮತ್ತೆ ನೆನೆದು ಕೋಳ್ಳೋಣ ಆ ದಿನವಾ…