ಬದುಕನ್ನು ಪ್ರತ್ಯೇಕಿಸಿ ನೋಡುವ ಹಾನಿಕಾರಕ ಯತ್ನದಲ್ಲಿದ್ದೇವೆ: ಕಾಸರವಳ್ಳಿ
ಬೆಳ್ತಂಗಡಿ: ನಮ್ಮ ಶಿಕ್ಷಣ ವ್ಯವಸ್ಥೆ ಉದ್ಯೋಗಕ್ಕಾಗಿ ಓದು ಎಂದಾಗಿದೆ. ಆದರೆ ಬದುಕು ವಿಶಾಲವಾಗಿದೆ. ಅದನ್ನು ಸಮಗ್ರವಾಗಿ ಗಮನಿಸಲೂ ಪ್ರಯತ್ನಿಸುವುದಿಲ್ಲ. ಜ್ಞಾನಕ್ಕೆ ಆಳದ ಜತೆಗೆ ವಿಸ್ತಾರ, ಹರವೂ ಇದೆ. ಅಂತೆಯೇ ಬದುಕೂ ಕೂಡಾ. ಆದರೆ ನಾವು ಬದುಕನ್ನು ಪ್ರತ್ಯೇಕಿಸಿ ನೋಡುವ ಹಾನಿಕಾರಕ ಯತ್ನದಲ್ಲಿದ್ದೇವೆ. ನಮ್ಮ ಬದುಕನ್ನು ತೆರೆದಿಡುವ ಪ್ರಯತ್ನ ನಡೆಯಬೇಕು ಎಂದು ಪದ್ಮಶ್ರೀ ಪುರಸ್ಕೃತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ.
ಅವರು ಶನಿವಾರ ಉಜಿರೆ ರುಡ್ಸೆಟ್ ಸಂಸ್ಥೆಯಲ್ಲಿ ಎಸ್ಡಿಎಂ ಕಾಲೇಜು ಹಾಗೂ ನೀನಾಸಂ ಪ್ರತಿಷ್ಠಾನ ಹೆಗ್ಗೋಡು ವತಿಯಿಂದ ನಡೆದ ಸಾಹಿತ್ಯ ಮತ್ತು ಚಲನಚಿತ್ರ ಅನುಸಂಧಾನ ಎಂಬ ಸಾಹಿತ್ಯ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.


ನಮ್ಮ ಜನ ಸಿನಿಮಾವನ್ನು ಸಂಸ್ಕೃತಿ ಒಂದು ಬಾಗ ಎಂದು ನೋಡಿಲ್ಲ. ವಿದೇಶಗಳಲ್ಲಿ ಇದ್ದಂತೆ ನಮ್ಮಲ್ಲೂ ಸಿನಿಮಾವನ್ನು ಸಹಪಠ್ಯ ಚಟುವಟಿಕೆಯಾಗಿ ಸೇರ್ಪಡೆ ಮಾಡಬೇಕು ಎಂದ ಅವರು ಸಿನಿಮಾ ಹೊರಗಿನ ತಲ್ಲಣವನ್ನು ಪ್ರತಿಫಲಿಸುತ್ತದೆ ಎಂದು ನೋಡಿಲ್ಲ. ಕೇಂದ್ರ ಸರಕಾರದ ಸಮಿತಿಗಳು ಸಿನಿಮಾವನ್ನು ಪಠ್ಯದ ಚಟುವಟಿಕೆಗೆ ಸೇರಿಸಲು ಶಿಫಾರಸ್ಸು ಮಾಡಿದ್ದರೂ ಜಾರಿಗೆ ಬಂದಿಲ್ಲ. ದೂರದರ್ಶನ ನಮ್ಮ ಅಭಿರುಚಿಯನ್ನು ಹೇಗೆ ಬೆಳೆಸುತ್ತದೆ ಅಥವಾ ನಾಶ ಮಾಡುತ್ತದೆ ಎಂಬ ಕುರಿತಾದರೂ ವಾರದಲ್ಲಿ ಒಂದು ತರಗತಿ ನಡೆಯಲಿ ಎಂದರು.
ಲೇಖಕ, ವಿಮರ್ಶಕ ಪ್ರೊ| ಟಿ. ಪಿ. ಅಶೋಕ್ ಅವರು ಮಾತನಾಡಿ, ಸಿನಿಮಾ ಸಂಸ್ಕೃತಿಯ ಪ್ರಧಾನ ರಂಗದಲ್ಲಿ ಅಳವಡಿಕೆಯಾಗಿ ವಿಮರ್ಷೆಗೆ ಒಳಪಡಲಿಲ್ಲ. ಇತರ ಕಲೆಗಳು ಕೂಡಾ ಮುಖ್ಯ ವಾಹಿನಿಯ ಶಿಕ್ಷಣದಿಂದ ಹೊರಗುಳಿದಿವೆ. ಚಲನಚಿತ್ರ ಭಾಷೆಯ ಎಲ್ಲ ಸ್ತರಗಳಲ್ಲಿ ಅಧ್ಯಯನ ನಡೆಯಬೇಕು ಎಂದರು.






:)ನನ್ನ ಕಾಲೇಜು ಕನ್ನಡ ಉಪನ್ಯಾಸಕರು, ಪ್ರಾ೦ಶುಪಾಲರು, ಕಾಸರವಲ್ಲಿ ಸರ್ ಎಲ್ಲರನ್ನೂ ಒ೦ದೇ ವೇದಿಕೆಯಲ್ಲಿ ನೋಡಲು ಖುಷಿಯಾಗಿದೆ