ಶ್ರೀನಿವಾಸ ಜೋಕಟ್ಟೆ
‘ಹಿಂಸೆಯ ಕಡಿವಾಣಕ್ಕೆ ಸಾಹಿತ್ಯ ಮತ್ತು ವಿಜ್ಞಾನ ಎರಡೂ ಅವಶ್ಯ’ ಎಂದು ಎಂಭತ್ತಾರಕ್ಕೆ ಕಾಲಿರಿಸಿದ್ದ ದಿನ ಮುಂಬಯಿಯ ಬಾಂದ್ರಾದ ಮನೆಯಲ್ಲೇ ಹುಟ್ಟುಹಬ್ಬದ ಶುಭಾಶಯ ಹೇಳಲು 03, ಆಗಸ್ಟ್ 2013ರಂದು ಹೋಗಿದ್ದ ಕರ್ನಾಟಕ ಸಂಘದ ನಮ್ಮ ಗೆಳೆಯರ ತಂಡಕ್ಕೆ ಕನ್ನಡದ ಹೆಸರಾಂತ ಸಾಹಿತಿ ಯಶವಂತ ಚಿತ್ತಾಲರು ಹೀಗೆ ಹೇಳಿದ್ದು ಇನ್ನೂ ಕಿವಿಯಲ್ಲಿ ಕೇಳಿಸುತ್ತಲೇ ಇದೆ. ಆಗಸ್ಟ್ 03ರಂದು (ಜನ್ಮದಿನಾಂಕ-03.08.1928) ಖ್ಯಾತ ಸಾಹಿತಿ ಯಶವಂತ ಚಿತ್ತಾಲರ ಹುಟ್ಟುಹಬ್ಬ. 1949ರಲ್ಲಿ ‘ಬೊಮ್ಮಿಯ ಹುಲ್ಲುಹೊರೆ’ ಮೊದಲ ಕಥೆಯಿಂದ ಹಿಡಿದು ಕೊನೆಯ ಕಾದಂಬರಿ ‘ದಿಗಂಬರ’ ತನಕ ಚಿತ್ತಾಲರ ಸಾಹಿತ್ಯ ಕೊಡುಗೆ ಅಪಾರ. ಮಾನವ ಸಮಾಜದಲ್ಲಿ ಪ್ರೀತಿಯನ್ನು ಸ್ಥಾಪಿಸುವುದು ಎಲ್ಲ ಸೃಷ್ಟಿಕಾರ್ಯಗಳ ಅಂತಿಮ ಗುರಿಯಾಗಿದೆ ಎಂದವರು ಚಿತ್ತಾಲರು. ಸಾಹಿತ್ಯ ಮನುಷ್ಯನ ಬಗ್ಗೆ ಇದೆ ಎಂಬ ನಂಬಿಕೆ ಚಿತ್ತಾಲರದ್ದಿತ್ತು.
1982ರಿಂದ 2014ರ ತನಕ ಈ ಮೂವತ್ತೆರಡು ವರ್ಷಗಳಲ್ಲಿ ಬಾಂದ್ರಾದ ಬ್ಯಾಂಡ್ಸ್ಟ್ಯಾಂಡ್ನಲ್ಲಿರುವ ಸಾಹಿತಿ ಯಶವಂತ ಚಿತ್ತಾಲರ ಮನೆಗೆ ನಾನು ನೂರಾರು ಬಾರಿ ಭೇಟಿ ನೀಡಿದ್ದೇನೆ. ನನ್ನ ಪ್ರಥಮ ಕಥಾ ಸಂಕಲನ (1984) ‘ಪರಾವಲಂಬಿ’ಗೆ ಮುನ್ನುಡಿಯನ್ನು ಬರೆದವರು ಚಿತ್ತಾಲರು. ಆವಾಗ “ಜೋಕಟ್ಟೆಯವರೇ, ಈಗ ನಿಮ್ಮದು ಕಥಾ ಸಂಕಲನ ತರುವ ವಯಸ್ಸಲ್ಲ. ಮುನ್ನುಡಿ ಬರೆದು ಕೊಡುವೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಕೃತಿ ತರಬೇಕಿಲ್ಲ” ಎಂದದ್ದೂ ಇದೆ. ಅವರು ‘ಪುರುಷೋತ್ತಮ’ ಕಾದಂಬರಿ ಬರೆಯುತ್ತಿದ್ದಾಗ ವಾರವಾರವೂ ಅವರ ಬಾಂದ್ರಾದ ಮನೆಗೆ ಸಂಜೆಹೊತ್ತು ಹೋಗಿ ಬರುತ್ತಿದ್ದೆ. ಬರೆದಷ್ಟು ಪುಟಗಳನ್ನು ನನಗೆ ಓದಿ ಹೇಳುತ್ತಿದ್ದರು ಚಿತ್ತಾಲರು. ಕಾದಂಬರಿ ಪ್ರಕಟವಾದಾಗ ‘ವಾರವಾರವೂ ಮನೆಗೆ ಬಂದು ಕಾದಂಬರಿಯ ಪ್ರಗತಿಯ ಬಗ್ಗೆ ವಿಚಾರಿಸಿ ಜೋಕಟ್ಟೆ ಪ್ರೋತ್ಸಾಹಿಸಿದರು’ ಎಂದು ಬರೆದೇ ಬಿಟ್ಟಿದ್ದರು.
‘ಪ್ರಾಣಿಗಳು ಆಹಾರಕ್ಕಾಗಿ ಮತ್ತೊಂದನ್ನು ಕೊಲ್ಲುತ್ತವೆ. ಆದರೆ ಮನುಷ್ಯ ಇಂದು ಕೊಲ್ಲುವ ಸುಖಕ್ಕಾಗಿಯೇ ಕೊಲ್ಲುತ್ತಿದ್ದಾನೆ. ಮನುಷ್ಯ ಇಂದು ಕಡು ಭ್ರಷ್ಟನಾಗಿದ್ದಾನೆ’ ಎಂದು ಕೊನೆಯ ದಿನಗಳಲ್ಲಿ ಚಿತ್ತಾಲರು ತೀವ್ರ ನೊಂದುಕೊಂಡು ಹೇಳುತ್ತಿದ್ದರು. ಕೊನೆಯ ದಿನಗಳಲ್ಲಿ ಚಿತ್ತಾಲರು ಯಾರೇ ಮನೆಗೆ ಬಂದರೂ ಅವರೆದುರು ತಾವು ‘ಮುದಿತನ’ ವಿಷಯದಲ್ಲಿ ಬರೆದ ಲ.ಬ.ಸಾ. ಓದುತ್ತಿದ್ದರು. ಮೊದಲೇ ‘ಮುದಿತನ’ ಇಷ್ಟು ಕಷ್ಟವಿದೆ ಎಂದು ಗೊತ್ತಿದ್ದರೆ ಅದರ ಉಸಾಬರಿಗೆ ಹೋಗುತ್ತಿರಲಿಲ್ಲ ಎನ್ನುವುದನ್ನು ಕಂಡಾಗ ಚಿತ್ತಾಲರು ಮುದಿತನಕ್ಕೆ ಭಯ ಪಟ್ಟಿದ್ದರೋ ಎನ್ನುವಂತಾಯಿತು.
ಬಾಂದ್ರಾದ ಬ್ಯಾಂಡ್ಸ್ಟ್ಯಾಂಡಿನ ಬಂಡೆಗಳ ಎದುರು ತನ್ನ ಮನೆಯಲ್ಲಿ ಕನ್ನಡದ ಹೆಮ್ಮೆಯ ಕಾದಂಬರಿಕಾರ ಯಶವಂತ ಚಿತ್ತಾಲರ ಜೊತೆ ಅವರ ಹೊಸ ಕಾದಂಬರಿ ‘ದಿಗಂಬರ’ದ ಕುರಿತು ಆ ದಿನ ಚರ್ಚಿಸುತ್ತಿದ್ದಾಗ ಒಂದು ಮಾತು ಹೇಳಿದ್ದರು- “ತನ್ನ ‘ದಿಗಂಬರ’ ಹೊಸ ಕಾದಂಬರಿಯ 39ರಷ್ಟು ಅಧ್ಯಾಯಗಳು ಮುಗಿದಿವೆ. ಇನ್ನೂ ಸುಮಾರು ಇಪ್ಪತ್ತು ಅಧ್ಯಾಯಗಳು ಬಾಕಿ ಇವೆ. ಮುಂದಿನ ಘಟನೆಗಳು ಹೊಳೆದ ತಕ್ಷಣ ತಾನು ಕಾದಂಬರಿ ಮುಂದುವರಿಸುವೆ. ಒಂದು ವೇಳೆ ಅದಕ್ಕಿಂತ ಮೊದಲು ನಾನಿಲ್ಲವಾದರೆ ಅರ್ಧ ಬರೆದ ಕಾದಂಬರಿ ಪ್ರಕಟ ಮಾಡಬಾರದು ಎಂದಿರುವೆ.”

ನಿಜ, ಚಿತ್ತಾಲರದು ಶಿಸ್ತು ಎಂದರೆ ಶಿಸ್ತು. 2013ರಲ್ಲಿ ಒಮ್ಮೆ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಜೊತೆಗೂ ನಾನೂ ಚಿತ್ತಾಲರ ಮನೆಗೆ ಹೋದದ್ದಿದೆ. ಅಲ್ಲಿ ಚಿತ್ತಾಲರು ಒಂದು ಆಕ್ಷೇಪ ಮಾಡಿದ್ದಿದೆ. -“ಜೋಕಟ್ಟೆಯವರು ಕೆಲವೊಮ್ಮೆ ಮಾತಾಡಿದ್ದನ್ನೆಲ್ಲ ಸಂದರ್ಶನದಲ್ಲಿ ಉಲ್ಲೇಖಿಸುತ್ತಾರೆ ಎಂದು. ಅಂದರೆ ಕೇಳಿದ ಪ್ರಶ್ನೆಗಳನ್ನು ಮಾತ್ರ ಬರೆಯಬೇಕು” ಉದಯವಾಣಿಗೆ 1990ರಲ್ಲಿ ಸಾಪ್ತಾಹಿಕಕ್ಕೆ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಸಂಪಾದಕರಾಗಿದ್ದಾಗ ಚಿತ್ತಾಲರ ಸಂದರ್ಶನ ಮಾಡಿದ್ದೆ. ಕಳುಹಿಸುವ ಮೊದಲು ತೋರಿಸಿದಾಗ ಒಂದು ಪ್ರಶ್ನೆ ಮತ್ತು ಅವರ ಉತ್ತರ ಕಟ್ ಮಾಡಿದ್ದರು. ಚಿತ್ತಾಲರ ಸಂದರ್ಶನ ನಾನು ನಾಲ್ಕೈದು ಬಾರಿ ಮಾಡಿದ್ದೆ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಅವು ಪ್ರಕಟವೂ ಆಗಿವೆ. ಅವರು ಎಷ್ಟು ಸ್ಪಷ್ಟವಾಗಿದ್ದರೆಂದರೆ, ಅವರ ಸಂದರ್ಶನ ಮಾಡಿ ಬರೆದ ನಂತರ ಅದನ್ನು ಅವರಿಗೆ ಓದಿ ಹೇಳಿದ ನಂತರವೇ ಪತ್ರಿಕೆಗೆ ಕಳುಹಿಸಬೇಕು. ಆರಂಭದಲ್ಲಿ ಒಂದೆರಡು ಸಲ ಮಾತ್ರ ನಾನು ಹೀಗೆ ಒಪ್ಪಿಕೊಂಡಿದ್ದೆ. ನಂತರದ ಸಂದರ್ಶನಗಳನ್ನು ಅವರಿಗೆ ತೋರಿಸದೆಯೇ ಕಳುಹಿಸಿದ್ದರಿಂದ ಅವರ ಸಿಟ್ಟನ್ನೂ ನನ್ನಲ್ಲಿ ತೋರ್ಪಡಿಸಿದ್ದರು!
2010ರ ಮೇ 4ರ ನಂತರ ಚಿತ್ತಾಲರು ತಮ್ಮ ಮನೆಯಿಂದ ಹೊರಗಡೆ ಹೋಗುವುದನ್ನು ನಿಲ್ಲಿಸಿದ್ದರು. ನನಗೆ ಪರಿಚಯವಾದ ಈ ಮೂವತ್ತೆರಡೂ ವರ್ಷಗಳಲ್ಲಿ ಚಿತ್ತಾಲರ ಜೊತೆ ಬ್ಯಾಂಡ್ಸ್ಟ್ಯಾಂಡ್ ಬೀಚ್ನಲ್ಲಿ ಸಂಜೆ ಹೊತ್ತು ಅದೆಷ್ಟೋ ಬಾರಿ ಸುತ್ತಾಡಿದ್ದೆ. ಅನೇಕ ಬಾರಿ ಜಯಂತ ಕಾಯ್ಕಿಣಿ ಅವರ ಜೊತೆನೂ ಹೋಗಿದ್ದೆ. ಚಿತ್ತಾಲರು ಗುಲ್ಬರ್ಗಕ್ಕೆ ಒಂದೆರಡು ಬಾರಿ ರಾತ್ರಿಯ ರೈಲಿನಲ್ಲಿ ಹೊರಟಾಗ ಬಾಂದ್ರಾದಿಂದ ವಿ.ಟಿ.ಸ್ಟೇಷನ್ ತನಕ ನನ್ನನ್ನೂ ಜೊತೆಗಿರಲು ಕರೆದಿದ್ದರು. ಆಮೇಲೆ ಎಷ್ಟೋ ವರ್ಷಗಳ ನಂತರ ಚಿತ್ತಾಲರು ಮಾತನಾಡುತ್ತಾ “ಜೋಕಟ್ಟೆಯವರೇ, ನಿಮ್ಮನ್ನು ವಿ.ಟಿ.ಸ್ಟೇಷನ್ ತನಕ ನಾನು ಗುಲ್ಬರ್ಗಕ್ಕೆ ರೈಲು ಹತ್ತಲು ಜೊತೆಗಿರಿ ಅಂದದ್ದು ಯಾಕೆ ಗೊತ್ತೆ? ನನ್ನ ಕೈಯಲ್ಲಿ ಹಣ ಇತ್ತು, ಮಗನ ಮನೆಗಾಗಿ ಸಾಲ ಪಡೆದಿದ್ದೆ. ಅದನ್ನು ಹಿಂತಿರುಗಿಸಲು ನಾನು ಹೋಗಿದ್ದುದು. ಒಬ್ಬನಿಗೇ ಹೋಗಲು ಭಯವಾಗಿ ನಿಮ್ಮನ್ನೂ ರೈಲ್ವೆ ಸ್ಟೇಷನ್ ತನಕ ಬರಹೇಳಿದ್ದುದು” ಎಂದು ಅಂದಿನ ಗುಟ್ಟು ಹೇಳಿದ್ದರು.
‘ಬೊಮ್ಮಿಯ ಹುಲ್ಲುಹೊರೆ’ ಕತೆಯಿಂದ ಆರಂಭಗೊಂಡ ಚಿತ್ತಾಲರ ಸಾಹಿತ್ಯ ಪಯಣ ‘ದಿಗಂಬರ’ದಲ್ಲಿ ನಿಂತು ಬಿಟ್ಟಿತು. ‘ಬೇರೆ ಇನ್ಯಾವ ಮಾಧ್ಯಮಕ್ಕೂ ದಕ್ಕದ ಸತ್ಯದ ಮಗ್ಗಲುಗಳನ್ನು ಗ್ರಹಿಸುವ ಮಾಧ್ಯಮ ಸಾಹಿತ್ಯ ಮಾತ್ರ’ ಎಂದು ಕೊನೆಯವರೆಗೂ ನಂಬಿದವರು ಚಿತ್ತಾಲರು.
2008ರ ಫೆಬ್ರವರಿಯಲ್ಲಿ ಮುಂಬಯಿಯಲ್ಲಿ ಜರಗಿದ ‘ಸುವರ್ಣ ಕರ್ನಾಟಕ ಮುಂಬಯಿ ಉತ್ಸವ’ದಲ್ಲಿ ಯಶವಂತ ಚಿತ್ತಾಲರಿಗೆ ‘ಪಂಪ ಪ್ರಶಸ್ತಿ’ ಪ್ರದಾನಿಸಿದ ದಿನ ಅವರನ್ನು ಬಾಂದ್ರಾದ ಮನೆಯಿಂದ ವಡಾಲ ಸಭಾಗೃಹ ತನಕ ಕರೆತರುವ ಜವಾಬ್ದಾರಿ ನನಗೆ ವಹಿಸಿದ್ದರು. ಅಲ್ಲಿ ಅವರು ಹೇಳಿದ ಮಾತು – “ನನ್ನ ಸೃಷ್ಟಿ ಕಾರ್ಯಕ್ಕೆ ಸ್ಪೂರ್ತಿ ಒದಗಿಸಿದ ಇನ್ನೊಂದು ಶಕ್ತಿಯೆಂದರೆ ನನ್ನ ಕರ್ಮಭೂಮಿಯಾದ ಮುಂಬಯಿ. ಕಳೆದ 60 ವರ್ಷಗಳಷ್ಟು ದೀರ್ಘಕಾಲ ಮುಂಬಯಿಯಲ್ಲಿದ್ದು ಬರೆಯುತ್ತ ಬಂದ ನನಗೆ ನನ್ನ ಬರವಣಿಗೆಯನ್ನು ಮುಂಬಯಿಯಿಂದ ಬೇರ್ಪಡಿಸಿ ನೋಡುವುದು ಅಸಾಧ್ಯವಾಗಿದೆ.”
ಚಿತ್ತಾಲರಿಗೆ ತೊಂಭತ್ತರ ದಶಕದಲ್ಲಿ ‘ಮಾಸ್ತಿ ಪ್ರಶಸ್ತಿ’ ದೊರೆತಾಗ ಮುಂಬಯಿ ದೈನಿಕ ‘ಕರ್ನಾಟಕ ಮಲ್ಲ’ದಲ್ಲಿ ನಾನು ಸುದ್ದಿ ಪ್ರಕಟಿಸಿದ್ದೆ. ಅದನ್ನು ಚಿತ್ತಾಲರೇ ನನಗೆ ಹೇಳಿದರು. ಆದರೆ ಮರುದಿನ ಚಿತ್ತಾಲರು ಮತ್ತೆ ನನಗೆ ಫೋನ್ ಮಾಡಿ –“ಇವತ್ತು ಒಳನಾಡಿನ ಪತ್ರಿಕೆಗಳಲ್ಲಿ ಸುದ್ದಿ ಬಂದಿಲ್ಲವಂತೆ. ನಿನ್ನೆ ಅವರು ಸುದ್ದಿಗೋಷ್ಠಿ ಮಾಡಿರಲಿಕ್ಕಿಲ್ಲ. ಇಲ್ಲಿ ಮೊದಲೇ ಬಂದದ್ದು ಯಾರಾದರೂ ಪ್ರಶ್ನಿಸಿದರೆ..? ಎಂಬ ಆತಂಕವನ್ನು ವ್ಯಕ್ತಪಡಿಸಿದಾಗ –‘ಇದು ಮುಂಬಯಿ ದೈನಿಕ. ಏನೂ ಆಗುವುದಿಲ್ಲ ಸರ್’ ಎಂದು ಸಮಾಧಾನಿಸಿದ್ದೆ. ಚಿತ್ತಾಲರ ಪರಿಚಯ ನನ್ನಂತವರಿಗೆ ಆದದ್ದು ಕಾಲೇಜ್ ದಿನಗಳಲ್ಲಿ. ಕವಿ ಹರಿಯಪ್ಪ ಪೇಜಾವರರು ತೋರಿಸಿದ ಚಿತ್ತಾಲರ ‘ಶಿಕಾರಿ’ ಕಾದಂಬರಿಯಿಂದ. ಅಂದಿನಿಂದ ಚಿತ್ತಾಲರು ಅವರ ಎಲ್ಲಾ ಕೃತಿಗಳನ್ನು ನನಗೆ ಕೊಡುತ್ತಿದ್ದರು. ಆಗಾಗ ಅವರ ಮನೆಗೆ ಹೋಗುತ್ತಿದ್ದಾಗಲೆಲ್ಲ ಒಳನಾಡಿನಿಂದ ಅಂಚೆಯಲ್ಲಿ ಬಂದ ಪುಸ್ತಕಗಳನ್ನು, ಪತ್ರಿಕೆಗಳನ್ನು ನನಗೆ ಬೇಕಿದ್ದರೆ ಒಯ್ಯಲು ಅನುಮತಿ ಕೊಡುತ್ತಿದ್ದರು. ಚಿತ್ತಾಲರಿಗೆ ಗಣ್ಯರಿಂದ ಬಂದ ಪತ್ರಗಳನ್ನು ನನಗೆ ಓದಲು ಕೊಡುತ್ತಿದ್ದರು.
ಒಂದು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಆಯ್ಕೆಗೆ ಚಿತ್ತಾಲರೂ ಓರ್ವ ತೀರ್ಪುಗಾರರಾಗಿದ್ದರು. ಆದರೆ ಆ ವರ್ಷ ಅವರು 9ನೇ ಸ್ಥಾನ ನೀಡಿದ ಕೃತಿಗೆ ಪ್ರಶಸ್ತಿ ಬಂದಿತ್ತು! ಅದು ಒಂದು ವಾರಪತ್ರಿಕೆಯಲ್ಲಿ ಲೇಖನದ ಜೊತೆ ಪ್ರಕಟವೂ ಆಯ್ತು. ಅದನ್ನು ಓದಿದ ಚಿತ್ತಾಲರು “ಅಲ್ಲ ಜೋಕಟ್ಟೆ, ನಾನು 9ನೇ ಸ್ಥಾನ ನೀಡಿದ್ದು ಹೊರಗಡೆ ಹೇಗೆ ಲೀಕ್ ಆಯ್ತು. ಆಶ್ಚರ್ಯ! ಎಲ್ಲಾ ಕಡೆ ಲೀಕ್ ಮಾಡುವವರು ಇದ್ದಾರೆ ಎಂದು ಬೇಸರ ಮಾಡಿದ್ದಿದೆ. ಕೊಲ್ಹಾಪುರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಹೆಸರಾಂತ ಕನ್ನಡ ಸಾಹಿತಿ ಶಾಂತಿನಾಥ ದೇಸಾಯಿ ತೀರಿಹೋದಾಗ ಲಂಕೇಶ್ ಪತ್ರಿಕೆಯಲ್ಲಿ ಲಂಕೇಶ್ ಅವರ ಬಗ್ಗೆ ಬರೆಯುತ್ತಿದ್ದಂತೆ ನಡುವೆ ಚಿತ್ತಾಲರು ತಮ್ಮ ಮದುವೆಯ ಮೊದಲ ದಿನದ ಕೆಲವು ಭಯವನ್ನು ಆ ಸಾಹಿತಿಯಲ್ಲಿ ಹೇಳಿದ್ದು ಕೂಡಾ ಪ್ರಕಟವಾಗಿತ್ತು. ಅದನ್ನು ಓದಿದ ಚಿತ್ತಾಲರಂತೂ ಬಹಳ ಹೊತ್ತು ಕಿರಿಕಿರಿಗೊಂಡಿದ್ದರು. “ಜೋಕಟ್ಟೆಯವರೇ, ಈ ಸಂಗತಿ ನಾನು ಶಾಂತಿನಾಥರಿಗೆ ಹೇಳಿದ್ದು ಹೌದು. ಆದರೆ ಲಂಕೇಶರಿಗೆ ಹೇಗೆ ತಿಳಿಯಿತು? ಅವರೇ ಹೇಳಿರಬೇಕು. ಎಂತಹ ಗೆಳೆಯನಲ್ಲೂ ಎಲ್ಲವನ್ನೂ ಹೇಳಬಾರದು” ಎಂದು ಗೊಣಗಿದ್ದೂ ಇದೆ.

ಚಿತ್ತಾಲರು ‘ಶಿಕಾರಿ’ ಬಗ್ಗೆ ಟೀಕೆಗಳನ್ನು ಸಹಿಸುತ್ತಿರಲಿಲ್ಲ. “ಶಿಕಾರಿ ಬಗ್ಗೆ ಯಾರೆಲ್ಲ ಏನು ಹೇಳಿದರೋ ಅದನ್ನೆಲ್ಲ ಕೇಳಿ ತಲೆ ಕೆಡಿಸಿಕೊಂಡಿದ್ದರೆ ಇಂದು ನಾನು ಇಷ್ಟೆಲ್ಲ ಬರೆಯುತ್ತಿರಲಿಲ್ಲ” ಎಂದು ಸ್ಪಷ್ಟ ನುಡಿ ಅವರು ನಮ್ಮಲ್ಲಿ ಹೇಳಿಕೊಂಡದ್ದಿದೆ. ಚಿತ್ತಾಲರಿಗೆ ತಮ್ಮ ‘ದಿಗಂಬರ’ ಕಾದಂಬರಿ ಮುಗಿಸಲು ಸಾಧ್ಯವಾಗಿಲ್ಲ, ಅವರ ಆರೋಗ್ಯ ಅವರಿಗೆ ಕೈಕೊಟ್ಟಿತು. “ಈ ಕಾದಂಬರಿ ನಾನು ಪೂರ್ಣಗೊಳಿದದಿದ್ದರೆ ಯಾರೂ ಪ್ರಕಟ ಮಾಡಬಾರದು” ಎಂದು ಚಿತ್ತಾಲರು ಹೇಳಿದ್ದರು. ಚಿತ್ತಾಲರಿಗೆ ನವ್ಯ ಸಾಹಿತ್ಯದ ಒಡನಾಟವಿದ್ದರೂ ಅವರು ಗುಂಪಿನ ಲೇಬಲ್ ಹಚ್ಚಿಕೊಳ್ಳಲು ಇಷ್ಟಪಟ್ಟಿರಲಿಲ್ಲ. ಅವರ ‘ಆಟ’ ಸಂಕಲನದಿಂದ ‘ನವ್ಯ’ ಲೇಖಕರು ಎಂದು ವಿಮರ್ಶಕರು ಹೇಳಿದ್ದಿದೆ. ‘ಕಾಮ’ವೇ ಪ್ರಧಾನ ಆಗಿದ್ದ ‘ನವ್ಯ’ ಸಾಹಿತ್ಯದಲ್ಲಿ ಚಿತ್ತಾಲರ ‘ಸಾವು’, ‘ವಿಷಯ’ ವಿಮರ್ಶೆಗೆ ಒಳಪಡಲಿಲ್ಲ ಆ ದಿನಗಳಲ್ಲಿ.
ಯಶವಂತ ಚಿತ್ತಾಲರು ತಮ್ಮನ್ನು ಖ್ಯಾತಕವಿ ಗಂಗಾಧರ ಚಿತ್ತಾಲರ ಕಿರಿಯ ಸಹೋದರ ಎನ್ನುವುದರಲ್ಲೇ ಹೆಚ್ಚು ಸಂತೋಷ ಪಡುತ್ತಿದ್ದರು. ಕೆಲವು ವರ್ಷದ ಹಿಂದೆ ಕನ್ನಡ ಪುಸ್ತಕ ಪ್ರಾಧಿಕಾರ ಗಂಗಾಧರ ಚಿತ್ತಾಲರ ಕುರಿತು ಪುಸ್ತಕ ತಂದಾಗ ಅದರಲ್ಲಿ ಲೋಪಗಳಿವೆ ಎಂದು ಆ ಇಡೀ ಕೃತಿಯನ್ನೇ ರಿಜೆಕ್ಟ್ ಮಾಡಿ ಮಾರುಕಟ್ಟೆಗೆ ಹಾಕಬಾರದು ಎಂದುಬಿಟ್ಟರು. ಚಿತ್ತಾಲರು ತಾವು ಕವನ ಬರೆದರೂ ‘ದಣಪೆಯಾಚೆಯ ಓಣಿ’ ಸಂಕಲನಕ್ಕೂ ‘ಲಬಸಾ’ಗಳ (ಲಯ ಬದ್ಧ ಸಾಲುಗಳು) ಸಂಗ್ರಹ ಅಂತಲೇ ಬರೆದಿದ್ದರು. ಒಂದು ಸಣ್ಣ ಅಂಚೆಕಾರ್ಡ್ನಲ್ಲಿ ಅವರ ಕೃತಿಗೆ ಯಾರೇ ಪ್ರತಿಕ್ರಿಯೆ ಬರೆದರೂ ಚಿತ್ತಾಲರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು.
1998ರ ಸುಮಾರಿಗೆ ಒಮ್ಮೆ ಚಿತ್ತಾಲರು ಫೋನ್ ಮಾಡಿ “ತಮ್ಮ ಗ್ಯಾರೇಜ್ನ ಕೊಠಡಿಯಲ್ಲಿ (ಕಾರು ಇರಿಸಿದ್ದ ಜಾಗ) ಕಪಾಟಿನ ಪುಸ್ತಕಗಳನ್ನು ಖಾಲಿ ಮಾಡುವವನಿದ್ದೇನೆ. ನಿಮಗೆ ಬೇಕಾದ ಪುಸ್ತಕಗಳನ್ನು ಒಯ್ಯಿರಿ. ನೀವು ಬಂದ ನಂತರ ಮಿತ್ರಾ ವೆಂಕಟ್ರಾಜ್ ಅವರಿಗೆ ಕೆಲವು ಕೊಡುತ್ತೇನೆ” ಎಂದಾಗ ಮರುದಿನವೇ ಹೋಗಿ, ರಿಕ್ಷಾದಲ್ಲಿ ಒಂದಷ್ಟು ನನಗೆ ಬೇಕಾದ ಪುಸ್ತಕಗಳನ್ನು ಜೆರಿಮೆರಿಯ ನನ್ನ ರೂಮಿಗೆ ತಂದಿದ್ದೆ. ಚಿತ್ತಾಲರು ‘ಪುರುಷೋತ್ತಮ’ ಕಾದಂಬರಿ ಬರೆದು ಮುಗಿಸಲು ಒಂದು ವರ್ಷ ಮೊದಲೇ ಸೇವಾ ನಿವೃತ್ತರಾಗಿದ್ದರು. ಅದರ ಬಿಡುಗಡೆ ಎಂ.ವಿ.ಕಾಮತ್ರಿಂದ ಆಗಿತ್ತು. ಅವರಿಗೆ ಆಹ್ವಾನ ನೀಡಲು ಖಾರ್ ಪಶ್ಚಿಮದಲ್ಲಿರುವ ಕಾಮತ್ ಮನೆಗೆ ನಾನೂ ಚಿತ್ತಾಲರು ರಿಕ್ಷಾದಲ್ಲಿ ಹೋಗಿ ಬಂದಿದ್ದೆವು. ನಾನು ವಾರವಾರವೂ ಚಿತ್ತಾಲರ ಮನೆಗೆ ಹೋಗಿ ‘ಪುರುಷೋತ್ತಮ’ದ ಬರೆದಷ್ಟು ಪುಟಗಳನ್ನು ಓದಿ ಚರ್ಚಿಸಿ ಬರುತ್ತಿದ್ದೆ. ‘ಪುರುಷೋತ್ತಮ’ ಪ್ರಕಟವಾದಾಗ ಚಿತ್ತಾಲರ ಮಾತಲ್ಲಿ ನನ್ನನ್ನು ಅದೇ ರೀತಿ ಉಲ್ಲೇಖಿಸಿದಾಗ ನನಗದು ಯುನಿವರ್ಸಿಟಿಯ ಸರ್ಟಿಫಿಕೇಟ್ ಸಿಕ್ಕಿದಷ್ಟು ಖುಷಿಯಾಗಿತ್ತು.
ನನ್ನ ವಿವಾಹ ಬೆಂಗಳೂರಿನಲ್ಲಿ ನಡೆದಾಗ ಚಿತ್ತಾಲರು ಟೆಲಿಗ್ರಾಂ ಕಳುಹಿಸಿ ಶುಭ ಹಾರೈಸಿದ್ದರು. ಟೆಲಿಗ್ರಾಂ ಸೇವೆ 2013ರಲ್ಲಿ ನಿಂತಾಗ ನನ್ನ ಲೇಖನದಲ್ಲಿ ನಾನು ಅದನ್ನೆಲ್ಲ ಉಲ್ಲೇಖಿಸಿ ಜೋಪಾನವಾಗಿರಿಸಿದ್ದನ್ನು ನೆನಪಿಸಿಕೊಂಡಿದ್ದೆ. ಅನಂತರ ನಾವಿಬ್ಬರೂ ದಂಪತಿ ಚಿತ್ತಾ¯ರ ಮನೆಗೆ ಹೋದಾಗ ನನ್ನ ಪತ್ನಿ ಜಯಲಕ್ಷ್ಮಿಗೆಂದು ಕೆಲವು ಕವನಗಳನ್ನು (ಲಯಬದ್ಧ ಸಾಲು) ಓದಿ ಹೇಳಿದರು. ನಂತರ ಪ್ರತಿಕ್ರಿಯೆ ಕೇಳಿದ್ದಲ್ಲದೆ ಅವಳಿಗಾಗಿ ಒಂದಿಷ್ಟು ಪುಸ್ತಕಗಳನ್ನೂ ನೀಡಿ, ನೀವು ಇನ್ನೊಮ್ಮೆ ಬರುವಾಗ ಓದಿಕೊಂಡು ನಿಮ್ಮ ಅಭಿಪ್ರಾಯ ತಿಳಿಸಬೇಕು ಎಂದಿದ್ದರು. ಅದನ್ನು ಅವಳು ಯಾವತ್ತೂ ನೆನಪಿಸಿಕೊಳ್ಳುತ್ತಿರುತ್ತಾಳೆ. ಒಮ್ಮೆ ಚಿತ್ತಾಲರು ಲಬಸಾ ಅಂತ ಇನ್ನು ಇದನ್ನು ಯಾರಾದರೂ ಬೂಸಾ ಹೇಳುವುದಿಲ್ಲವಲ್ಲ ಅಂತ ನಕ್ಕಿದ್ದೂ ಇದೆ.
ಚಿತ್ತಾಲರು ಸೇವಾ ನಿವೃತ್ತಿಯ ಮೊದಲು ಜೋಕಟ್ಟೆಯವರೇ, ನಿಮಗೆ ಉದ್ಯೋಗದ ಅವಶ್ಯಕತೆ ಇದ್ದರೆ ಹೇಳಬೇಕು. ನಾನು ಶೀಘ್ರವೇ ನಿವೃತ್ತಿಯಾಗಲಿದ್ದೇನೆ ಎಂದಿದ್ದರು. ಆದರೆ ನನ್ನ ಆಸಕ್ತಿ ಸದಾ ಬರವಣಿಗೆ, ಪುಸ್ತಕ ಹಾಗೂ ಪತ್ರಿಕೋದ್ಯಮದೆಡೆಗೆ ಇದ್ದುದರಿಂದ ನಾನು ಅವರ ಕಂಪೆನಿಯ ಕೆಲಸಕ್ಕೆ ಆಸಕ್ತಿ ತೋರಿಸಲಿಲ್ಲವೇನೋ. ಇನ್ನೊಂದೆಡೆ ಭಯ ಕೂಡಾ ಆಗಿತ್ತು.

“ನನ್ನ ಬರವಣಿಗೆಯನ್ನು ಮುಂಬಯಿಯಿಂದ ಬೇರ್ಪಡಿಸಿ ನೋಡುವುದು ಅಸಾಧ್ಯವಾಗಿದೆ” ಎಂದವರು ಚಿತ್ತಾಲರು. ಚಿತ್ತಾಲರ ಹಲವು ಪತ್ರಗಳು ನನ್ನಲ್ಲಿವೆ. 2015ರಲ್ಲಿ ಮೈಸೂರು ಅಸೋಸಿಯೇಷನ್ನಲ್ಲಿ ಜರಗಿದ ಯಶವಂತ ಚಿತ್ತಾಲರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ಚಿತ್ತಾಲರನ್ನು ‘ಅಶಾಂತ ಸಂತ’ ಎಂದಿದ್ದರು. ನಾನೂ ಅಲ್ಲಿ ಚಿತ್ತಾಲರ ಒಡನಾಟದ ನೆನಪುಗಳನ್ನು ಹಂಚಿಕೊಂಡಿದ್ದೆ. ಸಾಹಿತಿ ಜಯಂತ ಕಾಯ್ಕಿಣಿ ಹೇಳಿದಂತೆ “ಚಿತ್ತಾಲರು ತುಂಬಾ ವಾತ್ಸಲ್ಯ ತುಂಬಿದ ಮನುಷ್ಯ. ಅದಕ್ಕಾಗೇ ಅವರ ಪಾತ್ರಗಳಲ್ಲಿ ನಮಗೆ ಮಮತೆ ಕಾಣುತ್ತೆ. ವಾತ್ಸಲ್ಯ ಕಾಣುತ್ತೆ. ಅವರು ಸಾಗರ ಪ್ರತಿಭೆಯ ಲೇಖಕರು.”
ಒಮ್ಮೆ ಜಯಂತ ಕಾಯ್ಕಿಣಿ ಅವರ ಜೊತೆ ಚಿತ್ತಾಲರ ಮನೆಗೆ ಹೋಗಿದ್ದಾಗ, ಚಿತ್ತಾಲರ ಪುಸ್ತಕಗಳ ಕಪಾಟಿನ ಎದುರು ನಾನು ಕೂತಿದ್ದ ದೃಶ್ಯವನ್ನು ಜಯಂತ ಕಾಯ್ಕಿಣಿಯವರು ಸೆರೆ ಹಿಡಿದಿದ್ದರು. ಆ ಫೋಟೋವನ್ನು ನಾನು ನನ್ನ ಪ್ರಥಮ ಕವನ ಸಂಕಲನ ‘ಕ್ಷಮಿಸಿ, ಈ ಚಿತ್ರಕ್ಕೆ ಹೆಸರಿಲ್ಲ’ ಇದರ ಹಿಂಬದಿಯ ಪುಟದಲ್ಲಿ ಮುದ್ರಿಸಿದ್ದೆ. ಅದನ್ನು ನೋಡಿದ ಕೆಲವು ಸ್ನೇಹಿತರು “ನಿಮ್ಮ ಪುಸ್ತಕದ ಕಪಾಟನ್ನು ಒಮ್ಮೆ ನೋಡಬೇಕು” ಎನ್ನಲು ಶುರು ಮಾಡಿದರು. ಆನಂತರ ಅವರಲ್ಲಿ “ಆ ಕಪಾಟು ನನ್ನದಲ್ಲ, ಅದು ಯಶವಂತ ಚಿತ್ತಾಲರ ಪುಸ್ತಕಗಳ ಕಪಾಟು, ನಾನು ಕೂತದ್ದನ್ನು ಜಯಂತ ಕಾಯ್ಕಿಣಿಯವರು ಕ್ಲಿಕ್ಕಿಸಿದ್ದು ಅಷ್ಟೇ” ಎಂದು ಹೇಳಬೇಕಾಯಿತು.
ಚಿತ್ತಾಲರ ನಿಧನದ ನಂತರ ಮೂರು ವರ್ಷದ ಹಿಂದೆ ನಾವು ದಂಪತಿ ಚಿತ್ತಾಲರ ಬಾಂದ್ರಾ ಮನೆಗೆ ಹೋಗಿದ್ದೆವು. ಆವಾಗ ಅವರ ‘ದಿಗಂಬರ’ ಕಾದಂಬರಿಯ ಹಸ್ತಪ್ರತಿ ಕಾಣೆಯಾಗಿರುವ ಕುರಿತು ತಿಳಿದುಬಂತು. ಆ ಹಸ್ತಪ್ರತಿ ಸಿಕ್ಕಿದರೆ ತಿಳಿಸುವೆವು ಅಂದಿದ್ದರು. ಏನಾಯ್ತೋ ಗೊತ್ತಿಲ್ಲ. ಅವರ ಮನೆಯಲ್ಲಿ ಯಾರಿಗೂ ಕನ್ನಡ ಓದಲು ಮಾತಾಡಲು ಗೊತ್ತಿಲ್ಲ. (ಕೆಲಸದ ಹುಡುಗಿಗೆ ಗೊತ್ತಿತ್ತು ಕನ್ನಡ. ಚಿತ್ತಾಲರು ಅವಳ ಬಳಿ ಮಾತ್ರ ಕನ್ನಡ ಮಾತಾಡುತ್ತಿದ್ದರು.) ಚಿತ್ತಾಲರು ಬಾಂದ್ರಾದ ಲೀಲಾವತಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್ 22, 2014ರ ರಾತ್ರಿಗೆ ನಮ್ಮನ್ನು ಅಗಲಿದರು.
ಅವರದೇ ಒಂದು ಲಬಸಾದ ಕೆಲವು ಸಾಲು ಹೀಗಿವೆ:
ಬ್ಯಾಂಡ್ಸ್ಟ್ಯಾಂಡ್ ನ ಬಂಡೆಗಲ್ಲುಗಳು…
ಸಹಸ್ರಾರು ವರ್ಷಗಳ ಹಿಂದೆ ಎದ್ದು
ಬಂದುವಂತೆ/
ಭೂಗರ್ಭದ ಆಳದಿಂದ, ನಿಗಿನಿಗಿ
ಉರಿಯುವ ಕುಂಡದಿಂದ/
ಬರುವಾಗಲೇ ಬೆಂಕಿಯ ಉಂಡೆ
ಗಳಾಗಿ, ಹೊತ್ತು ಸಿಡಿಯುವ/
ಕೆಂಡಗಳಾಗಿ, ಮುಂದೆ ಬಹಳ
ಮುಂದೆ ಬಂಡೆಗಳಾಗಿ
ತಣ್ಣಗಾದುವಂತೆ…
‘ದಿಗಂಬರ’ನ ಶಿಲ್ಪವೊಂದರ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಕನ್ನಡ ಸಾಹಿತ್ಯಲೋಕಕ್ಕೆ ಆ ಕಾದಂಬರಿ ದಕ್ಕಲಿಲ್ಲ.






ಚಿತ್ತಾಲರ ಕುರಿತು ಓದುವುದೆಂದರೆ ಯಾವಾಗಲೂ ಖುಷಿ. ಈ ಲೇಖನ ಇಲ್ಲಿಯವರೆಗೆ ಓದಿರದ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದೆ. ಲೇಖಕರಿಗೆ ಧನ್ಯವಾದಗಳು.
ನಿಮಗೆ ಚಿತ್ತಾಲರ ಒಡನಾಟವಿತ್ತು ಎಂಬ ಕಾರಣಕ್ಕೆ ನಿಮ್ಮ ಮೇಲೆ ಅಸೂಯೆ ಆಗುತ್ತದೆ! ಪ್ರತಿಭಾವಂತರಾಗಿದ್ದರೂ ಲಾಬಿ ಮಾಡುವ ತಾಕತ್ತು ಉಮೇದು ಎರಡು ಇಲ್ಲದೆ ಅವರು ಮುಂಬಯಿಯಲ್ಲೇ ಉಳಿದು ಮೂಲೆ ಪಾಲಾದರು ಅನಿಸುತ್ತದೆ
ಚೆನ್ನಾಗಿ ಬರೆದಿದ್ದೀರಿ.