ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಾಯ್ ಚಾಯ್ ಇರಾನಿ ಚಾಯ್..

        

ವಿಜಯ್ ಹೂಗಾರ್ 

ಟೀ ಮಾಡೋದೂ ಒಂದು ಕಲೆ ಅಂತ ಅರಿವಾಗಿದ್ದು ಒಮ್ಮೆ ನಾನು ಮನೆಯಲ್ಲೇ ಇರಾನಿ ಚಾಯ್ ಮಾಡಬೇಕೆಂದು ಪಣ ತೊಟ್ಟಾಗ.

ಇದೆಲ್ಲ ಶುರುವಾದದ್ದು ಒಮ್ಮೆ ಆಫೀಸಿನ ಕೆಲಸಕ್ಕೆಂದು ಹೈದರಾಬಾದಿಗೆ ಹೋದಾಗ. ಅಲ್ಲಿಯ ಇರಾನಿ ಚಾಯ್ ತುಂಬಾ ಜನಪ್ರಿಯ ಅಂತ ಕೇಳಿದ್ದೆ. ಒಮ್ಮೆ ಕುಡಿದು ನೋಡಣ ಅಂತ ಆಫೀಸಿನವರ ಜೊತೆ ಹೋಗಿ ಕುಡಿದು ಬಂದೆ. ಹೋಟೆಲ್ಲು ಅಷ್ಟೇನೂ ನೀಟಾಗಿರಲ್ಲವಾದರೂ ಚಹಾ ಮಾತ್ರ ಅದ್ಭುತವಾಗಿತ್ತು. ಆಗ ತಲೆ ಸೇರಿಕೊಂಡಿರುವ ಹುಳುವೇ ಈ ಇರಾನಿ ಚಾಯ್.

ಮೊದಲು ಯು ಟ್ಯೂಬಿನಲ್ಲಿ ಅದರ ವಿಧಾನ, ಪರಿಕರಗಳು, ಮತ್ತು ಮಿಶ್ರಣದ ಪ್ರಮಾಣ ತಿಳಿದುಕೊಂಡೆ. ನಾವು ಮನೆಯಲ್ಲಿ ಮಾಡುವ ಸಾಧಾರಣ ಚಹಾಕ್ಕೆ ಬೇಕಾಗುವ ಪರಿಕರಣಗಳೇ ಇದ್ದವು ಜೊತೆಗೆ ಹಾಲಿನ ಕೆನೆ (ಮಿಲ್ಕ್ ಮೇಡ್) ಹೆಚ್ಚುವರಿಯಾಗಿತ್ತು. ಎಲ್ಲವೂ ಒಟ್ಟಿಗೆ ತರಿಸಿ ಸಿದ್ಧನಾದೆ. ಮೊದಲು ಒಂದೆಡೆ ಚಹಾಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸುವದಕ್ಕಿಡಬೇಕು. ನಾಲ್ಕು ಕಪ್ಪು ನೀರು ಒಂದೇ ಕಪ್ಪು ಆಗುವಷ್ಟು ಕುದಿಸಬೇಕು ಅದನ್ನ. ಮತ್ತೊಂದೆಡೆ ಹಾಲು ಕುದಿಸುವದಕ್ಕಿಡಬೇಕು ಐದು ಕಪ್ಪು ಹಾಲು ಎರೆಡು ಎರೆಡುವರೇ ಕಪ್ಪು ಆಗುವಷ್ಟು. ನಂತರ ಅದಕ್ಕೆ ಮಿಲ್ಕ್ ಮೇಡ್ ಹಾಕಿ ಮತ್ತೆ ಕುದಿಸಬೇಕು. ಸುಮಾರು ಮೂವತ್ತರಿಂದ ನಲವತ್ತು ನಿಮಿಷದ ಪ್ರಕ್ರಿಯೆ ಅದು. ಅದಾದ ನಂತರ ಚಹಾದ ಪುಡಿಯ ನೀರು (ಡಿಕಾಕ್ಷನ್) ಒಂದರಲ್ಲಿ ಸೋಸಿ ಹಾಲಿನ ಜೊತೆ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಕುದಿಯಲು ಬಿಡಬೇಕು. ಇಷ್ಟೇ.

ಇದರಲ್ಲಿ ಪ್ರಮಾಣ,ಕುದಿಸುವ ಸಮಯ ಸ್ವಲ್ಪ ಎಡವಟ್ಟಾದರೆ ಹೋಯಿತು. ಸಂಗೀತದಲ್ಲಿ ಅಪಶೃತಿಯಂತೆ..

ಕೊನೆಗೂ ಆ ಹೈದರಾಬಾದಿನ ಹೋಟೆಲ್ಲಿನ ಚಹಾದ ಬಣ್ಣ ಬಂದಿತ್ತು!! ಆದರೆ ರುಚಿ?? ಅಮ್ಮ ಮಾಡುವ ಸಾಧಾರಣ ಚಹದಂತೆ ಇತ್ತು. ತಂಗಿ ಇರಲಿ ಬಿಡಣ್ಣ ‘ಮುಂದಿನ ಸಾರಿ ನೋಡಿದರಾಯ್ತು ಅಂತ ಸಮಾಧಾನಿಸಿದಳು’.

ಈ ಒಂದು ಪ್ರಕ್ರಿಯೆ ಸುಮಾರು ದಿವಸ ನಡೆಯಿತು.

ಫೇಸ್ ಬುಕ್ಕಿನಲ್ಲಿ ಬರುವ ‘ನೆವರ್ ಗಿವಪ್’ ಜಾರ್ಗನ್ ಗಳು ನೆನಪಾಗಿ ಮತ್ತೆ ಮತ್ತೆ ಮಾಡಲು ಹೋದೆ. ಆದರೆ ಪರಿಣಾಮ ಮಾತ್ರ ಒಂದೇ ಆಗಿರುತ್ತಿತ್ತು. ಒಮ್ಮೊಮ್ಮೆ ಸಕ್ಕರೆ ಜಾಸ್ತಿಯಾದರೆ, ಇನ್ನೊಮ್ಮೆ ಕುದಿಸುವದು ಕಮ್ಮಿಯಾಗುತ್ತಿತ್ತು. ದಿನ ಸಾಯಂಕಾಲ ಆದರೆ ಸಾಕು ನಾನು ಮತ್ತು ತಂಗಿ ಆ ಇರಾನಿ ಚಾಯ್ ಜೊತೆಗೆ ಕುಸ್ತಿಗೆ ಬಿಳುತ್ತಿದ್ದೆವು. ಅದೇನೇ ಆಗಲಿ ಅಣ್ಣ ಈ ಕಲೆಯನ್ನ ಸಿದ್ಧಿ ಮಾಡಿಯೇ ತೀರಬೇಕು ಅಂತ ಹೇಳುತ್ತಿದ್ದಳು.

ಈ ಇರಾನಿ ಚಾಯ್ ಚರ್ಚೆ ಮನೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇತ್ತು. ಯು ಟ್ಯೂಬಿನ ಅಸಂಖ್ಯಾತ ವಿಡಿಯೋಗಳು ಮತ್ತು ಎಲ್ಲೋ ಹೆಕ್ಕಿ ತಂದ ಇಂಟರ್ನೆಟ್ಟಿನ ಲಿಂಕುಗಳ ವಹಿವಾಟು ಜೋರಾಗಿಯೇ ನಡೆಯತೊಡಗಿತು. ಆದರೆ ಯಾವುದೇ ಫಲ ಕಾಣಲೇ ಇಲ್ಲ. ಒಮ್ಮೆ ಬೆಂಗಳೂರಿನಲ್ಲಿ ಇರಾನಿ ಚಾಯ್ ಎಲ್ಲಿ ಸಿಗುತ್ತದೆ ಅಂತ ಹುಡುಕಿಕೊಂಡು ಅಲೆದಿದ್ದೆ. ಸಿಕ್ಕರೆ ರೆಸಿಪಿಯಾದರು ಕಲೆತು ಬರೋಣ ಅಂತ. ಅದು ಸಿಗಲಿಲ್ಲ. ಮನೆಯಲ್ಲಿ ನಡೆಯುವ ಅತೀವ ಸಂಚಲನಗಳನ್ನು ಗಮನಿಸಿ ಬೇಸತ್ತು ಅಪ್ಪ ಟೀ ಮಾಡುವ ಪಾತ್ರೆಯೇ ಎಲ್ಲೋ ಮುಚ್ಚಿಟ್ಟಿದ್ದರು. ಇನ್ನೊಮ್ಮೆ ಮನೆಯಲ್ಲಿ ಟೀ ಮಾಡುವ ಹಾಗಿಲ್ಲ ಅಂತ ಗದರಿಸಿದರು. ಆದರೂ ನನ್ನ ಮತ್ತು ತಂಗಿಯ ಪ್ರಯತ್ನಗಳು ನಿಲ್ಲಲಿಲ್ಲ. ಇಷ್ಟೆಲ್ಲಾ ವಿಫಲ ಪ್ರಯತ್ನವು ಇಬ್ಬರನ್ನು ತುಂಬಾ ಘಾಸಿ ಮಾಡಿತು. ಬರುಬರುತ್ತ ಆ ಕೈಗೆಟುಕದ ಕಲೆಯ ಬಗ್ಗೆ ಸಿಟ್ಟಿನ ಜೊತೆಗೆ ಸ್ವಲ್ಪ ದೈವಿಕ ಭಾವ ಬರತೊಡಗಿತು.

********

ಒಬ್ಬ ಕವಿ ಹೇಗೆ ತನ್ನ ಪದ್ಯದಲ್ಲಿ ಪದಗಳ ಹದವಾದ ಮಿಶ್ರಣ ಮಾಡುತ್ತಾನೆ.? ಒಬ್ಬ ಸಂಗೀತ ನಿರ್ದೇಶಕ ಹೇಗೆ ತನ್ನ ಎಲ್ಲಾ ಉಪಕರಣಗಳನ್ನು ಕುಶಲವಾಗಿ ಬಳಿಸಿ ಜೀವದ ತಂತು ಮೀಟುತ್ತಾನೆ.? ಒಬ್ಬ ಕಲೆಗಾರ ತನ್ನ ಬಣ್ಣಗಳನ್ನು ಅತ್ಯಂತ ಜಾಣತನದಿಂದ ಹೇಗೆ ಬಳಸಿಕೊಳ್ಳುತ್ತಾನೆ.? ಎಂದು ವಿಸ್ಮಯಪಡುವವರಿಗೆ ಚಹಾ ಮಾಡುವವನ ಪ್ರಕ್ರಿಯೆ ಕೂಡ ಹೀಗೆಯೇ ಇರುತ್ತದೆ ಎಂದು ಹೊಳೆದಿರುವದೇ ಇಲ್ಲ.

ನೀರು, ಹಾಲು, ಸಕ್ಕರೆ ಚಹಾ ಪುಡಿಯ ಚತುರ ಮಿಶ್ರಣವೇ ಒಂದು ಅದ್ಭುತ ಚಹಾಕ್ಕೆ ನಾಂದಿ ಹಾಡುತ್ತದೆ. ನಾವು ಚಹಾ ಇಷ್ಟವಾದ್ದಲ್ಲಿ, ‘ಚನ್ನಾಗಿದೆ’ ಎಂದು ಪಕ್ಕದಲ್ಲಿರುವ ಗೆಳೆಯನಿಗೆ ಹೇಳುತ್ತೇವೆ. ಆದರೆ ಆ ಅದ್ಭುತ ಚಹಾ ಮಾಡಿದ ಕಲೆಗಾರನಿಗೆ ‘ಚನ್ನಾಗಿದೆ’ ಹೇಳೋದು ತುಂಬಾ ವಿರಳ. ಚಹಾ ಮಾಡುವವನಿಗೆ ಸಿಗಬೇಕಾದ ಮನ್ನಣೆ ಸಿಗದೇ ಹೋದುದ್ದರಿಂದಲೇ ಇಂದು ಕೆಟ್ಟ ಚಹಾ ರಾರಾಜಿಸುತ್ತಿವೆ ಅನ್ನುವುದು ನನ್ನ ಸಣ್ಣ ಗುಮಾನಿ.

ಇರಲಿ,

ಒಬ್ಬ ಕಲೆಗಾರನ ಕೈಯಿಂದ ಅರಳುವ ಕಲೆ ಹೇಗೋ, ಟೀ ಮಾಡುವವನ ಸ್ಟೋವ್ ಇಂದ ಉಕ್ಕುವ ಟೀ ಕೂಡ ಹಾಗೆಯೇ ಎಂದು ನಂಬಿದವನು ನಾನು. ಆದರೆ ಟೀಗೆ ಕಲೆಯ ಸ್ಥಾನಮಾನ ಮಾತ್ರ ಸಿಕ್ಕಿಲ್ಲ ಅಷ್ಟೇ. ನಮ್ಮಲ್ಲಿ ಕಾವ್ಯಕ್ಕೆ ‘ಬೇಂದ್ರೆ ಕಾವ್ಯ ಪ್ರಶಸ್ತಿ’, ಕಥೆಗೆ ‘ಮಾಸ್ತಿ ಕಥಾ ಪ್ರಶಸ್ತಿ’ , ಸಂಗೀತಕ್ಕೆ ‘ಸಂಗೀತ ಚೂಡಾಮಣಿ ಪ್ರಶಸ್ತಿ’ ಇವೆವೋ ಹಾಗೆಯೇ ಚಹಾಕ್ಕೂ ಏನಾದ್ರು ಪ್ರಶಸ್ತಿ ಮಾಡಬೇಕು ಅನಿಸತೊಡಗಿತು.

ಉದಾಹರಣೆಗೆ : ಬಂಡಿ ಚಹಾ ಪ್ರಶಸ್ತಿ, ಗಟ್ಟಿ ಚಹಾ ಪ್ರಶಸ್ತಿ, ಶುಂಠಿ ಚಹಾ ಪ್ರಶಸ್ತಿ, ಚಿಂದಿ ಚಹಾ ಪ್ರಶಸ್ತಿ ( ‘ಚಿಂದಿ ಚಹಾ ಗುರು’ ಅಂತಾರಲ್ಲ ) ಇನ್ನೂ ಹಲವಾರು ಸಿಗಬಹುದು. ವರ್ಷ ಪೂರ್ತಿ ತುಂಬಾ ಅದ್ಭುತವಾಗಿ ಚಹಾ ಮಾಡಿದವನಿಗೆ ‘ವರ್ಷದ ಚಹಾ ವ್ಯಕ್ತಿ’ ಅಂತಲೂ ಘೋಷಿಸಬಹುದು.

**********

ನನ್ನ ಮದುವೆಗೂ ಮುಂಚೆ ಆದದ್ದು ಇದು.

ಆಫೀಸಿನಲ್ಲಿ ನಮ್ಮ ಪ್ರೋಜೆಕ್ಟಿನ ಟೆಕ್ ಸಪೋರ್ಟ್ ಗೆ ಅಂತ ಹೊಸದಾಗಿ ಸೇರಿಕೊಂಡಿರುವ ಹುಡುಗಿ ಆಕೆ.ನೋಡಲು ಸುಂದರವಾಗಿದ್ದಳು. ಶೃತಿ ಅವಳ ಹೆಸರು. ವಿಜಯನಗರದ ಬಸ್ಸಿಗೆ ಬರುತ್ತಿದ್ದಳು. ಪರಿಚಯ ಆಯ್ತು. ಮಾತು ಕಥೆ ವಾಟ್ಸಪ್ಪು ಎಲ್ಲವೂ ಆಯ್ತು. ಕೊನೆಗೊಂದು ದಿನ ಚಹಾಕ್ಕೆ ಕರೆದೆ. ಕೆಲಸದ ನೆಪ ಹೇಳಿ ತಪ್ಪಿಸಿಕೊಂಡಳು.

ಹೀಗೆ ನಾನು ದಿನಾಲೂ ಕೇಳುತ್ತ ಹೋದೆ. ಅವಳು ದಿನಾಲೂ ನಿರಾಕರಿಸುತ್ತಲೇ ಹೋದಳು. ಇದರ ಹಿಂದೆ ನನ್ನದೊಂದು ಸ್ವಾರ್ಥವಿತ್ತು. ಫೇಸ್ ಬುಕ್ಕಿನಲ್ಲಿ ‘ಜಾನಿ ಕ್ಯಾಶ್’ ಬರೆದ ಒಂದು ಜಾರ್ಗೆನ್ ಸಿಕ್ಕಿತು. “This Morning. Having Coffee. With her” – Johnny Cash (When asked his definition of paradise) ಅಂತ. ಇದನ್ನೂ ಮೂರ್ತೀಕರಿಸುವದಕ್ಕೆ ತುಂಬಾ ಆಸೆಯಾಗಿ ಬಿಟ್ಟಿತು. ಹೇಗೆ ಮಾಡೋದು ಅಂತ ಯೋಚಿಸುತ್ತಿರುವಾಗಲೇ ಶೃತಿ ಸಿಕ್ಕಿದ್ದಳು. ಪ್ರೀತಿ ಪ್ರೇಮ ಇಲ್ಲದ್ದಿದ್ದರು ಕೊನೆ ಪಕ್ಷ ಒಂದು ಚಹಾ ಅಥವಾ ಕಾಫಿಯಾದರು ಜೊತೆಯಾಗಿ ಸವೆಯಬೇಕೆನಿಸಿತು.

ಆದರೆ ಅವಳು ಒಂಚೂರು ಸಹಕರಿಸಲಿಲ್ಲ.ನಾನು ಕಥೆಗಾರ ಅಂತ ಬೇರೆ ಹೇಳಿ ಬಿಟ್ಟಿದ್ದೆ. ಇದನ್ನು ತಿಳಿದ ತಕ್ಷಣ ಇಬ್ಬರ ಸಂವಹನ ಅರ್ಧಕ್ಕೆ ಕಡಿಮೆಯಾಗಿತ್ತು. ಜೊತೆಗೆ ನಿನ್ನ ಮೇಲೆ ಕೂಡ ಕಥೆ ಬರೆಯಬೇಕೆಂದುಕೊಂಡಿದ್ದೇನೆ ಅಂತ ಹೇಳಿದ್ದಕ್ಕೆ ನಿಂತ ಜಾಗದಲ್ಲೇ ಎಲ್ಲಾ ಸಂಬಂಧಗಳು ಸ್ಥಗಿತಗೊಂಡು ಆಕೆಯ ವಾಟ್ಸಪ್ಪಿನ ಬ್ಲಾಕ್ ಲಿಸ್ಟಿಗೆ ಸೇರಿಕೊಂಡೆ. ಶೃತಿಯೊಟ್ಟಿಗಿನ ಚಹಾ ಅಪಶೃತಿಯಾಗಿ ಪರಿಣಮಿಸಿತು.ಕೊನೆಗೂ ಆ ಆಸೆ ನೆರವೇರಲೇ ಇಲ್ಲ.

ಮದುವೆ ಆಯ್ತು. ಹೆಂಡತಿಗೆ ಈ ಆಸೆ ಹೇಳಿದೆ. ಆಕೆ ‘ನಾನು ಚಹಾ ಮುಟ್ಟೋದೇ ಇಲ್ಲರೀ, ನನಗೆ ವಿಪರೀತ ಪಿತ್ತ’ ಎಂದು ಹೇಳಿ   ನನ್ನ ಎಲ್ಲಾ ಆಸೆಗೆ ರಸಭಂಗ ಮಾಡಿದಳು. ಕೊನೆಗೆ ಪಟ್ಟು ಬಿಡದ ನಾನು ಹನಿಮೂನಿಗೆ ಹೋದಾಗ ಬೈ ಟೂ ಚಹಾ ಹೇಳಿ, ಬಲವಂತವಾಗಿ ಹೆಂಡತಿಯ  ಕೈಯಲ್ಲೊಂದು ಕಪ್ಪು ಕೊಟ್ಟು. ಹ್ಹಿ ಹ್ಹಿ ಅಂತ ಪೋಸೊಂದು ಕೊಟ್ಟು ಸೆಲ್ಫಿ ತೆಗೆದುಕೊಂಡೆ. ವಾಟ್ಸಪ್ಪು ಮತ್ತು ಫೇಸ್ ಬುಕ್ಕಿಗೆ ಫೋಟೋ ಹಾಕಿ ‘ಜಾನಿ ಕ್ಯಾಶ’ ನ ಸ್ಟೇಟಸ್ಸು ಹಾಕಿಕೊಂಡೆ. ಸ್ವಲ್ಪ ಸಮಾಧಾನ ಆಯ್ತು.

ಬರಿ ಇದೇ ಆಯ್ತು ನಿಂದು ಅಂತ ಹೆಂಡತಿ ಸರಿ ಉಗಿದಿದ್ದಳು.

**********

ಟಿವಿಯಲ್ಲಿ ಬರುವ ರೆಡ್ ಲೇಬಲ್ ಚಹಾದ ಜಾಹಿರಾತು ನನಗೆ ತುಂಬಾ ಇಷ್ಟ. ಪಿಯೂಷ್ ಮಿಶ್ರಾ ಅಭಿನಯಿಸಿದ್ದು. “ಗಂಡ ಹೆಂಡತಿ ಮನೆಯ ಕೀಲಿ ಕೈ ಮರೆತು ಬಂದಿರ್ತಾರೆ. ಪಕ್ಕದ ಮುಸ್ಲಿಂ ಮನೆಯೊಡತಿ ತಮ್ಮ ಮನೆಯಲ್ಲಿ ವಿಶ್ರಾಂತಿಸಲು ಹೇಳುತ್ತಾಳೆ. ಮೊದಲು ಬೇಡ ಅಂತ ಹೇಳುತ್ತಾನೆ ಗಂಡ. ಚಹಾದ ವಾಸನೆಗೆ ಹೆಂಡತಿಯ ಮೊಣಕಾಲು ನೆಪ ಹೇಳಿ ಆ ಮುಸ್ಲಿಂ ಮಹಿಳೆಯ ಮನೆಗೆ ಹೋಗುತ್ತಾರೆ”. ಒಂದು ಮೂರು ನಿಮಿಷದ ಜಾಹಿರಾತಿನಲ್ಲಿ ಎಷ್ಟೆಲ್ಲಾ ಮಾನವೀಯ ಸಂಬಂಧಗಳ ಕೊಂಡಿ ಬೆಸೆದುಹೋಗುತ್ತದೆಯಲ್ಲ ಅಂತ ಅನಿಸಿತು.ಅದು ಚಹಾದ ನೆಪದಲ್ಲಿ. ಮನ ಮುಟ್ಟುವ ಜಾಹಿರಾತು ಅದು.

**********

ನಮ್ಮ ಅಜ್ಜಿ ತುಂಬಾ ಅದ್ಭುತವಾಗಿ ಚಹಾ ಮಾಡುವಳು. ಇರಾನಿ ಚಾಯ್ ಅಲ್ಲದೆ ಹೋದರು ಮಾಮೂಲಿ ಚಾಯ್ ತುಂಬಾ ಚೆನ್ನಾಗಿರುತ್ತಿತ್ತು.

ಹಳ್ಳಿಗೆ ಹೋದಾಗ ನಾಯಿ ಬನ್ನು ಮತ್ತು ಅಜ್ಜಿ ಮಾಡಿದ ಚಹಾಕ್ಕಾಗಿ ನಾನು ಮತ್ತು ನನ್ನ ತಂಗಿ ಮಾಡಿರುವ ಜಗಳ ಅಷ್ಟಿಷ್ಟಲ್ಲ. ಅಜ್ಜಿಯ ಚಹಾದ ರುಚಿ ಊರವರಿಗೆಲ್ಲ ಗೊತ್ತಿತ್ತು. ಅಂತೆಯೇ ಮನೆಗೆ ಬರುವ ಅತಿಥಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಬಂದವರೆಲ್ಲ ಚಹಾಕ್ಕಾಗಿಯೇ ಕಾಯುತ್ತಿದ್ದರು. ಒಮ್ಮೊಮ್ಮೆ ಚಹಾ ಮಾಡೋದೇ ಇಲ್ಲ ಅಂತ ಪಟ್ಟು ಹಿಡಿದು ಕುಳಿತರೆ. ಅತಿಥಿಯಲ್ಲೊಬ್ಬರು ‘ಕೂಡು ಕೂಡು, ಚಹಾ ಇಟ್ಟಾರ್ ಅನಸ್ತದ್’ ಅಂತ ಅವರೇ ಸ್ವಯಂ ಆಹ್ವಾನ ಮಾಡಿಕೊಳ್ಳುತ್ತಿದ್ದರು.

ಈ ಚಹಾಸುರರನ್ನು ಊರಿಂದಲೇ ಓಡಿಸಿಬಿಡ್ತೀನಿ ಅಂತ ಬೈದುಕೊಳ್ಳುತ್ತಲೇ ಚಹಾ ಮಾಡುತ್ತಿದ್ದಳು. ಇಷ್ಟೆಲ್ಲಾ ನೋಡಿ ನಮ್ಮಜ್ಜ ಭಾರಿ ಪ್ರಮಾಣದ ಮಜಾ ತೆಗೆದುಕೊಳ್ಳುತ್ತಿದ್ದ. ಅಜ್ಜಿಗೆ ಆಗಾಗ ಹೇಳುತ್ತಿದ್ದ ‘ನಾ ಸಾಯಾಕಿಂತ ಮೊದಲ, ನಿನ್ ಕೈಯಿಂದ ಮಾಡಿದ್ದ್ ಚಾ ಕುಡಿದು ಆಮ್ಯಾಗ್ ಸಾಯ್ಬೆಕ್ ನಾನು’ ಅಂತ ಹೇಳುತ್ತಿದ್ದ. ಇದನ್ನ ಹೇಳಿದ ದಿನದಿಂದ ಅಜ್ಜಿಗೆ ವಿಚಿತ್ರ ಭಯ ಆಗಲು ಶುರುವಾಯ್ತು. ಚಹಾ ಮಾಡಿ ಕೊಡುವಾಗೊಮ್ಮೆ ‘ಎಲ್ಲಿ ಇಷ್ಟು ಕುಡಿದ್ ಸತ್ ಗಿತ್ತಾನೋ’ ಅಂತ ಗುಮಾನಿಯಾಗತೊಡಗಿತು.

ಒಮ್ಮೊಮ್ಮೆ ‘ನಾ ಸಾಯಾ ಟೈಮ್ ನಾಗ ನನ್ನ ಬಾಯಗ್ ನೀರ ಬಿಡಬ್ಯಾಡ, ನೀ ಮಾಡಿದ್ ಒಂದು ಕಪ್ಪು ಚಹಾ ಬಿಡು’ ಅಂತಿದ್ದ. ಇವೆಲ್ಲ ನಮ್ಮ ಎಲ್ಲರ ಮುಂದೆ ನಿರರ್ಗಳವಾಗಿ ಯಾವುದೇ ನಾಚಿಕೆಯಿಲ್ಲದೆ ಹೇಳುತ್ತಿದ್ದ. ಈಗಿನ ಕಾಲದಲ್ಲಿ ಹೇಳುವ ‘I Love You, I Miss You, ನಿನ್ನ ಬಿಟ್ಟಿರಲಾರೆ’ ಎಂದು ಹೇಳುವ ನಮ್ಮ ವಾಕ್ಯಗಳು ಇವರ ಅದಮ್ಯ ಪ್ರೇಮದ ಮುಂದೆ ತುಂಬಾ ಬಾಲಿಶವಾಗಿ ಕಾಣುತ್ತಿದ್ದವು.

ಕೊನೆಗೊಂದು ಹಾಗೆ ಆಯಿತು. ಒಂದು ನಡು ರಾತ್ರಿ ಎದ್ದು ಅಜ್ಜಿಗೆ ಚಹಾ ಮಾಡು ಅಂತ ದಂಬಾಲು ಬಿದ್ದನು. ಶಪಿಸುತ್ತಲೇ ಅಜ್ಜಿ ಚಹಾ ಮಾಡಿ ಕೊಟ್ಟು ಮಲಗಿದ್ದಳು. ಚಹಾ ಕುಡಿದು ಅದು ಯಾವಾಗ ಪರವಶನಾದನೋ ಅನ್ನೋದು ಅಜ್ಜಿಗೆ ಗೊತ್ತಾಗಲೇ ಇಲ್ಲ.

**********

ಒಮ್ಮೆ ಆಫೀಸಿಗೆ ಚಕ್ಕರ್ ಹಾಕಿ ಊರಿನಿಂದ ಬಂದ ಗೆಳೆಯರನ್ನ ಬೀಳ್ಕೊಟ್ಟು ‘ಉಳಿದವರು ಕಂಡಂತೆ’ ಸಿನಿಮಾ ನೋಡಲು ಹೋಗಿದ್ದೆ. ಖಾಲಿ ಹೊಟ್ಟೆಯಲಿ ಹೋದ ನನಗೆ ಮತ್ತು ನನ್ನ ಹಸಿವಿಗೆ ಚಿತ್ರ ತಕ್ಕ ಮಟ್ಟಿಗೆ ರಂಜಿಸಿತು. ಚಿತ್ರ ಮುಗಿಸಿ ಹೊರಬಿದ್ದ ತಕ್ಷಣವೇ ತ್ರಿವೇಣಿ ಚಿತ್ರಮಂದಿರದ ಪಕ್ಕ ಇರುವ ಅಶೋಕ ಉಪಹಾರಕ್ಕೆ ಕಾಲಿಟ್ಟೆ. ಪರೋಟ ಆರ್ಡರ್ ಮಾಡಿದೆ. ನನ್ನ ಪಕ್ಕದಲ್ಲಿ ಒಬ್ಬ ಮುದುಕ ಬಂದು ಅದೆಲ್ಲಿಂದೋ ಜೋಡಿಸಿಟ್ಟ ಹಣ ತಂದು ನಡಗುವ ಕೈಯಲ್ಲಿ ಒಂದೊಂದೇ ಎಣಿಸಿ ಆತನೂ  ಪರೋಟ ಆರ್ಡರ್ ಮಾಡಿದ.

ಹೊರಗಡೆ ಜೋರು ಮಳೆ.ಕಿ ಟಕಿಯಿಂದ ಬರುವ ತಣ್ಣನೆಯ ಗಾಳಿ ಎಲ್ಲರ ಮೈ ಮುದುಡಿಕೊಂಡಿತ್ತು.

ಇಬ್ಬರಿಗೂ ಒಟ್ಟಿಗೆ ಬಂದ ಪರೋಟ ತಿನ್ನುವಾಗ ನನ್ನ ಹಸಿವಿಗೆ ತಂಗಾಳಿ ಸೋಕಿದಂತೆ ಶಾಂತವಾಗುತ್ತ ಬಂತು. ಆದರೆ ಆ ಮುದುಕ ತಿನ್ನುವ ವೇಗ ಅವನ ತನ್ಮಯತೆಯನ್ನ ಇನ್ನು ಆಳಕ್ಕೆ ತಳ್ಳುತ್ತಿತ್ತು. ಅವನ ಪ್ರತಿಯೊಂದು ತುತ್ತಿಗೂ ಹಸಿವಿನ ಬಿಸಿ ಅಂಟಿಕೊಂಡಿತ್ತು. ‘ತುತ್ತಿಗೊಂದು ಹೊಳಪು’ ಅವನ ಕಣ್ಣು ಹೇಳುತ್ತಿತ್ತು.

ನಾನು ಪರೋಟ ತಿಂದು ಚಹಾ ಹೀರಲು ಒಂದು ಟೀ ಆರ್ಡರ್ ಮಾಡಿದೆ. ಆತನ ತಿಂಡಿ ಮುಗಿಯಲು ನನ್ನ ಕೈಯಲ್ಲಿ ಟೀ ಲೋಟ ಹಿಡಿದು ನಿಂತಿದ್ದೆ.

ತಕ್ಷಣವೇ ನನ್ನೆಡೆಗೆ ನೋಡಿ “ಒಂದಕ್ಕೆ ಎಷ್ಟು?” ಅಂತ ಉಗುಳು ನುಂಗುತ್ತ ಕೇಳಿದ.

ನಾನು “ಹನ್ನೆರೆಡು ರುಪಾಯಿ” ಅಂತ ಹೇಳಿದೆ.

ಆತ ಕೇಳಿದ ಪ್ರಶ್ನೆಯಲ್ಲಿ, ಅವನ ಉಸಿರಲಿ ಉಸಿರು ಹಿಡಿದು ಕುಳಿತ ಚಹಾದ ಘಮಲಿತ್ತು. ಉಫ್ ಎಂದು ಊದಿ ಮೂಡುವ  ಅಲೆಗಳ ಜೊತೆ ಎದ್ದೇಳುವ ಹಬೆಯಿತ್ತು. ಕೊರೆಯುವ ಚಳಿಗೆ ಚಹಾದ ಮೊದಲ ಮುತ್ತಿಟ್ಟಾಗ ಝುಮ್ಮೆಂದು ಸರ್ವಾಂಗ ವ್ಯಾಪಿಸಿ ದೇಹದಲ್ಲಿ ಸಂಚಲನ ಮೂಡಿಸುವ ಸಾಂತ್ವನದ ನಡುಕವಿತ್ತು.

ನಾನು ಹನ್ನೆರೆಡು ರುಪಾಯಿ ಅಂತ ಹೇಳಿದ ತಕ್ಷಣ ನಿರಾಸೆಯಿಂದ ಕೆಳ ಮುಖ ಮಾಡಿ ಕೈಯಲ್ಲಿರುವ ಕೈಚೀಲ ಹಿಡಿದು ಅಲ್ಲಿಂದ ಹೊರಟು ಹೋದ.

‘ಬೈ- ಟು’ ಇನ್ವೈಟ್ ಮಾಡಬಹುದಿತ್ತು ಅಂತ ನನಗೆ ಒಂಥರಾ ಬೇಜಾರಾಯ್ತು.

ಟೀ ಕುಡಿಯಲು ಮನಸ್ಸಾಗಲಿಲ್ಲ. ಅರ್ಧಕ್ಕೆ ಬಿಟ್ಟು ಹೊರ ಬಂದೆ.

ಆ ಚಹಾದ ರುಚಿ ಅವನ ಹಿಂದೆಯೇ ಹೋಗಿತ್ತು.

ಕತ್ತಲೆಯ ಹಸಿವಲ್ಲಿ ಆ ಮುದುಕ ಕರಗಿಹೋಗಿದ್ದ.

‍ಲೇಖಕರು avadhi

2 March, 2017

3 Comments

  1. Dr. Prabhakar M. Nimbargi

    ಮುದುಕ ಮತ್ತು ಚಹ – ಮನ ಕಲಕುತ್ತದೆ.

  2. Sangeeta

    Sooperarticle ಬಹಳ ಇಷ್ಟವಾಯಿತಿ.
    ನಾನು ಶ್ರಮಜೀವಿಗಳ ಪಾನೀಯ ಚಹಾ ಅಂತ ಪ್ರಬಂಧ. ಬರೆದಿದ್ದೇನೆ.
    ಸಂಗೀತ ರವಿರಾಜ್

  3. Prasad

    Beautiful write-up… Enjoyed reading…
    – Prasad, Republic of Angola

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading