-ಸಾಮಂತ್ರಿ ಜ್ಯೋತಿ
ಕವಿತೆಯ ಪ್ರಶ್ನೆ..
ಮೊನ್ನೆ ಚಹಾಕಪ್ಪಿನೊಡನೆ ಹಾಜರಾದ ಕವಿತೆ ಕೇಳಿತು..
ನೀನು ಬರೆದಷ್ಟೂ ಬರೆಸಿಕೊಳುವ ನಾನು
ಯಾವ ನೋವಿಗೆ ಮುಲಾಮಾದೆ ಹೇಳು
ಹಿಡಿದ ಹಿರಿದ ಹರಿದ ಕಳೆದ ಕಳೇಬರಗಳ..
ಕನಿಷ್ಟ ಲೋಕಗಾಣದೆ ಒಣಗಿದ
ಅಸ್ತಿಪಂಜರಗಳ ಅಸ್ತಿತ್ವವನ್ನೂ
ತಣ್ಣಗೆ ನೋಡಿ ತಾವೇ ತಾವಾಗುವ
ಜನಗಳ ಆತ್ಮದ ಗಾಯವಾದರೂ ಆದೇನ??
ಎನ್ನುತ್ತದೆ..
ನಿನ್ನೆ ಬಾಲ್ಕಾನಿಯಲ್ಲಿ ತಣ್ಣನೆ ಗಾಳಿಯರಸಿ
ಜೊತೆನಿಂತ ಕವಿತೆ ಶುರುವಿಟ್ಟಿತು..
ನಿನ್ನಂಥೆ ಥೇಟ್ ನಿನ್ನಂತೆ ಬೆಚ್ಚಗೆ
ಸೂರಲ್ಲಿ ಸೂರೆಯಾದ ರಂಗುರಂಗಿನ ಮನಗಳು
ಗೆರೆಯಾಚೀಚೆಯೆಲ್ಲೋ ಬರೀ ಕೆಂಪನ್ನೆ ಬೇಡುವುದೇಕೆ?
ಬಿದ್ದ ಗಾಯಕ್ಕೂ ಮರುನಿರೀಕ್ಷೆ ಮಾಡದೆ
ಜೋಪಾನ ಮಾಡುವ ಮಕ್ಕಳ ತಂದೆ ತಾಯಂದಿರು
ನ್ಯೂಸ್ ಕಂಡು ಸುರಿಸುವ ಕಂಬನಿಗೆ ಕರ್ಚೀಫ್
ಆದರೂ ಆಗಬಲ್ಲೆನೇ??
ಎನ್ನುತ್ತದೆ..
ಇಂದು ಮುಂಜಾನೆ ವಾಕಿಂಗ್ ಗೆ ಕೈಹಿಡಿದ
ಕವಿತೆ ಪಿಸುಗುಡುತ್ತಾ ನಡೆಯಿತು..
ಎದ್ದು ಹೊಂಟಿರುವ ಬೆಳಗು ಮಧ್ಯಾಹ್ನಗಳ ನೋಡಿದೆಯ
ಸಂಜೆಗೆ ಕಾಯುವ ಕಾತರ ಕಳೆದದ್ದು
ಬೆಳವಣಿಗೆಯೇ ನಾಗರಿಕತೆಯೇ
ಮರೀಚಿಕೆಯ ಬೆನ್ನತ್ತಿದ ಕುದುರೆಯೇ
ಸೋ ಕಾಲ್ಡ್ ಪಾಶ್ಚಿಮಾತ್ಯತೆಯ ನೆರೆಯೆ?
ಹಿಟ್ಟನ್ನ ಮರೆಸಿ ನಿಂತ
ಘಮ್ಮೆನುವ ಮಲ್ಲಿಗೆಯ
ಕಾಣಿಸುವ ಕೇಳಿಸುವ ಘಮಿಸುವಂತೆ
ಮಾಡುವ ಭರದಲ್ಲಿ ಮರೆತ ಕರುಳಿನ ಕರೆಯೆ..??
ಕರೆಗೆ ಓಗೊಡುವ ದನಿಯಾದರೂ ಆದೇನೆ??
ಎನ್ನುತ್ತದೆ..
ನಾನಂತೂ ಉತ್ತರಿಸದೆ ಸೋತು ಕುಂತಿರುವೆ
ನಿಮ್ಮಲ್ಲಿ ಸಮಾಧಾನವಿದೆಯಾದರೆ
ವಿಮರ್ಶಿಸಿಕೊಳ್ಳಿ..
ಸಾರ್ಥ ಪರಮಾರ್ಥಗಳ ಸನ್ನಿಧಿಯಲ್ಲಿ
ಸಮಾಜದ ಸ್ವಾಸ್ಥ್ಯಕ್ಕಂಟಿದ ರೋಗಕ್ಕೆ
ಮದ್ದು ಮಾತಲ್ಲಿಲ್ಲ
ಅಂತರಾತ್ಮಗಳ ಕೊಳೆಯಳಿಸಿ
ಅಂತಃಕರಣಗಳ ಕೈಗೆ ಮನುಷ್ಯತ್ವದಾಯುಧ
ಕೊಟ್ಟು ನಿಂತರೆ ಬಹುಶಃ
ಯಗಾದಿಗಳ ಬೇವುಬೆಲ್ಲಕ್ಕೆ ಬದುಕು
ಸಂಕ್ರಾಂತಿಯ ಕಿಚ್ಚಿಗೆ ಕೆಡುಕು
ಪಂಚಮಿಯ ಜೋಕಾಲಿಗೆ ಸುಖದುಃಗಳು
ಅಂತರ್ಧಾನವಾಗಿ
ದೀಪಾವಳಿಯ ಬೆಳಕಿಗೆ ಜಗದೆರೆವುದೇನೋ??
ಎಂದು ಪ್ರಶ್ನಿಸಿ ಸುಮ್ಮನಾಗುವೆ ನಾನೂ..






ತುಂಬಾ ಚಂದದ ಕವಿತೆ
ಇಷ್ಟವಾಯಿತು.❤