‘ಆಹಾ..ಚಹಾ’ ಸರಣಿ
ಮತ್ತೇರಿಸುವ ಚಹಾ !!

ಸರೋಜಿನಿ ಪಡಸಲಗಿ
ಚಹವ ನೀ ಹೀರಿಲ್ಲ ರುಚಿಯ ಅರಿತಿಲ್ಲ
ಎನಬೇಡ ನೀನು
ಅದರಲಿರುವ ಗಮ್ಮತ್ತು ಹಿಕ್ಮತ್ತು
ನನಗ್ಗೊತ್ತು ತಿಳಿ ನೀನು
ಚಹವ ಹೀರದಿದ್ದರೇನು ಅದ ಸವಿಯದಿದ್ದರೇನು
ಅದರ ಮಹಿಮೆ ನಾ
ಅರಿಯೆ ಅಂದುಕೊಂಡೆಯೇನು
ಹೇಳಲಾ ಒಂದು ಗುಟ್ಟು ನಿನಗೆ
ನಗಲಾರೆ ನೀ ಅನ್ಕೊಂಬೆ ನಾನು
ಚಹವ ಹೀರಿದ ತುಟಿಯ
ಬಿಸಿಮುತ್ತು ಮತ್ತೇರಿಸದು ಏನು
ನನ್ನ ಪುಟ್ಟ ಮನದಲೊಂದು
ಸಣ್ಣ ಹುಚ್ಚು ಆಸೆ
ಸ್ಟೈಲಾಗಿ ಕಪ್ ಹಿಡಿದು
ಕಾಲ್ ಮೇಲೆ ಕಾಲ್ಹಾಕಿ
ನಾನು ನೀನು ಇದಿರು ಬದಿರಾಗಿ
ಕಣ್ಣಲೊಂದು ಇಣುಕ್ಹಾಕಿ
ಹಬೆ ಹಾಯ್ವ ಚಹ ಸೊರ್ರೆಂದು
ಹೀರಿದರೆ ಮನ ಹಾಡದೇ ಹುಚ್ಚಾಗಿ
ಜಗತುಂಬ ಚಹದ ಹಪಹಪ
ಅರಿಯದ ಹುಚ್ಚು ತಹತಹ
ಕಳಕೊಳ್ಳುವಿಯಲ್ಲೆ ಆ ಸ್ವರ್ಗಸುಖ
ಎನುತಿರಲು ನೀನು
ಹೊಗೆ ಹಾಯುವ ತಾಮ್ರವರ್ಣದ
ಈ ಧರೆಯ ಅಮೃತ
ನೀರೂರಿಸಿ ಬಾಯಲಿ ಮನ ಉಸಿರುತಿದೆ
ರುಚಿ ನೋಡಿ ಬಿಡಲೇ ಒಂದು ಬಾರಿ





ರುಚಿ ನೋಡದೇನೇ ಬರೆದ ಕವಿತೆಯಂತೆ! ಇನ್ನು ಚಹ ಹೀರಿ ಇನ್ನೆಷ್ಟು ಮತ್ತೇರುವದೋ! ಚೆನ್ನಾಗಿದೆ, ಕವಿತೆ.(ಚಹ ಇನ್ನೂ ರುಚಿ, ಆಹಾ!)
ಅದುವೇ ಚಹಾದ ಗಮ್ಮತ್ತು,ಹಿಕ್ಮತ್ತು ಶ್ರೀವತ್ಸ ದೇಸಾಯಿಯವರೇ ! ಚಹಾ ಕುಡಿದವರಾಡೋದನ್ನ ನೋಡಿದರೆ ಗೊತ್ತಾಗೋದಿಲ್ವೆ !!
ಹೇಗೆ ಕುಡಿಯಲಿ ಚಹಾ ನಿನ್ನ ಬಿಟ್ಟು…!?
ಬಂದವರಿಗೆಲ್ಲ ಸತ್ಕರಿಸಿ ಕುಳ್ಳಿರಿಸಿ
ಗಟ್ಟಿಹಾಲಿಗೇನೇ ಚಹದಪುಡಿ, ಸಕ್ಕರೆ ಬೆರೆಸಿ
ಜೊತೆಗೆ ಘಮಕ್ಕಿರಲೆಂದು ಒಂದೇ ಏಲಕ್ಕಿ
ಚೂರೇ ಹಸಿಶುಂಠಿ ಬೆರೆಸಿ
ಹದವಾಗಿ ಕುದಿಯುತ್ತಿರುವುದ ನೋಡುತ್ತಾ ಕುದಿಯುತ್ತಿದ್ದೇನೆ
ನಾನು ನೀನು ಇನ್ನೂ ಮುಖಾಮುಖಿ ಚಹಾ ಹೀರಿಲ್ಲ..
ಹೊಸಸ್ಟೈಲಿನ ಕಪ್ಪುಸಾಸರು
ಚೆಂದದ ಟ್ರೇ ಉಪಚರಿಸುವ ಪರಿಗೆ ಎಲ್ಲರೂ ಫಿದಾ
ನಗುನಗುತಾ ಎಲ್ಲರಿಗು ಚಹಾ ಕೊಟ್ಟು ನೋಡುತ್ತ ಇದ್ದೇನೆ
ನಾನು ನೀನು ಇನ್ನೂ ಚಹಾಕ್ಕಾಗಿ ಎದುರುಬದುರು ಕುಳಿತಿಲ್ಲ
ಕೊತಕೊತಿಸುತ್ತೇನೆ ನೆನಪಿನಲ್ಲಿ ಸದಾ
ನೀನು ಕರೆದಿದ್ದೀ- ಕಿವಿಯಲಿ ಮಗನ ಕೂಗಿತ್ತು
ಮತ್ತೆ ಕುಕ್ಕರ್ ಕರೆಯುತ್ತಿತ್ತು
ನಾನೂ ಕರೆದಿದ್ದೆ- ನೀನೆಲ್ಲೋ ವಿಮಾನದಲ್ಲಿದ್ದೆ
ಅಥವಾ ಗೆಳೆಯನೊಡನೆ ಗ್ಲಾಸು ಹಿಡಿದಿದ್ದೆ
ಗಂಟಲುಬ್ಬತ್ತದೆ- ಆಸೆಯ ಕಟ್ಟೆಗೆ ಮೌನದ ಚೌಕಟ್ಟು
ಹೇಳು ಹೇಗೆ ಕುಡಿಯಲಿ ಚಹಾ ನಿನ್ನ ಬಿಟ್ಟು..?!
ಸುಧಾ ಅವರೇ ಚಂದದ ಕಪ್ ಸಾಸರಿನಲ್ಲಿ ಘಮಘಮಿಸುವ ಚಹಾ ಇದಿರು ಬದಿರಾಗಿ ಕೂತು ಕಣ್ಣಲ್ಲಿ ಇಣುಕ್ಹಾಕಿ ಸವಿಯಾಗಿ ಹೀರುವ ನಿಮ್ಮಾಸೆಗೆ ನನ್ನ ಒತ್ತಾಸೆ.ಬಾರದಿಹನೇ ನಲ್ಲ ,ನಿನ್ನೊಡನೆ ಚಹ ಸವಿಯಲು ಹೇಳು ಗೆಳತಿ .