ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಪ್ರಭ ಕಠಾರಿ ಪತ್ತೇದಾರಿ ಕತೆ : ವೈದೇಹಿ ಏನಾದಳು?

ಚಂದ್ರಪ್ರಭ ಕಠಾರಿ

*

ಗಂಡುಗಲಿ ಏನಾಗಿರಬಹುದೆಂದು ತೋಚದೆ ಸಿಗರೇಟ್‌ ಸೇದುತ್ತ ಕೂತರು.

ತಡವಾಗಿ ಎದ್ದು, ಉಪಾಹಾರ ಅರೆಬರೆ ತಿಂದು ಆಫೀಸಿಗೆ ಹೊರಡಬೇಕು ಅನ್ನುವಷ್ಟರಲ್ಲಿ “ಸರ್…ಆದಷ್ಟು ಬೇಗ ಸ್ಟೇಷನ್ನಿಗೆ ಬನ್ನಿ. ವಿಷಯ ಅರ್ಜೆಂಟ್‌ ಇದೆ” ಎಂದು ಬನಶಂಕರಿ ಪೊಲೀಸ್‌ ಠಾಣೆಯ ಸರ್ಕಲ್‌ ಇನ್ಸ್‌ ಪೆಕ್ಟರ್‌ ಮೊಬೈಲಿಗೆ ಕರೆ ಮಾಡಿದ್ದರು.

ಕೇಂದ್ರ ‌ ಸಂಸ್ಥೆಯಲ್ಲಿ ಸಹ ತನಿಖಾಧಿಕಾರಿ ಹುದ್ದೆಯಿಂದ ನಿವೃತ್ತರಾದಾಗ, ಗಂಡುಗಲಿಯಲ್ಲಿದ್ದ ಪಾತಕಲೋಕದ ಸತ್ಯಾನ್ವೇಷಣೆಯ ವ್ಯಾಮೋಹ, ಮನೆಯಲ್ಲಿ ಕೂರಲು ಬಿಡದೆ ʼಸತ್ಯ ಶೋಧನ ಸಂಸ್ಥೆʼ ತೆರೆಯುವಂತೆ ಮಾಡಿತ್ತು. ಖಾಸಗಿ ಪತ್ತೇದಾರಿಕೆಯಾದರೂ, ಮಾಡಿದ ಸಾರ್ಥಕ ತನಿಖೆಗಳು ಅಲ್ಪಾವಧಿಯಲ್ಲೇ ಜನರ ಗೌರವ, ಮೆಚ್ಚುಗೆ ಗಳಿಸಿ ಪೊಲೀಸ್‌ ಡಿಪಾರ್ಟ್ ಮೆಂಟಿನ ಗಮನವನ್ನೂ ಸೆಳೆದಿತ್ತು. ಕ್ರಿಮಿನಲ್‌ ಕೇಸುಗಳ ಕಗ್ಗಂಟುಗಳು ಬಿಗಿಯಾದಾಗ ಗಂಡುಗಲಿಯ ನೆರವನ್ನು ಕೇಳುವುದು ಸಾಮಾನ್ಯವಾಗಿತ್ತು.

ಲ್ಯಾಪ್‌ ಟಾಪ್‌ ಬ್ಯಾಗನ್ನು ಮುಂದಿನ ಸೀಟಲ್ಲಿ ಇರಿಸಿ, ಕಾರಿನ ಹಿಂದಿನ ಸೀಟಲ್ಲಿ ಕುಳಿತ ಗಂಡುಗಲಿ ಡ್ರೈವರಿಗೆ “ಆಫೀಸಿಗೆ ಬೇಡ. ಸೀದಾ ಬನಶಂಕರಿ ಪೊಲೀಸ್‌ ಸ್ಟೇಷನ್ಗೆ ಹೋಗು” ಅನ್ನುವಷ್ಟರಲ್ಲಿ “ಗಂಡುಗಲಿ…ಎಲ್ಲಿದ್ದೀಯ?”ಎಂದು ಆಪ್ತಗೆಳೆಯ ಸೈಕ್ಯಾಟ್ರಿಷ್ಟ್‌ ಧನಂಜಯನ ಫೋನ್‌ ಬಂತು.

“ಏನ್‌ ಧನು…ಸೂರ್ಯ ಮುಳುಗಿದ ಮೇಲೆ ಫೋನ್‌ ಮಾಡೋನು ಬೆಳಗಿನ ಹೊತ್ತಲ್ಲೇ ಮಾಡ್ತಿದ್ದೀಯ? ಬೆಳಬೆಳಗ್ಗೆನೇ ಪಾರ್ಟಿ ಮಾಡೋ ಮೂಡಲ್ಲಿ ಇದ್ದಂಗಿದೆ!”

“ತಮಾಷೆ ಬೇಡ. ನನ್ನ ಬ್ಯುಸಿ ಕೆಲಸ ನಿಂಗೆ ತಿಳಿದದ್ದೇ. ಮ್ಯಾಟರ್‌ ಸೀರಿಯಸ್! ನಾನು ಸೀದಾ ಮನೆಗೇ ಬರ್ತೀದ್ದೇನೆ. ಇನ್ನರ್ಧ ಗಂಟೆ….ಎಲ್ಲೂ ಹೋಗ್ಬೇಡ”

ಸಲಹೆ ಕೇಳಲು ಯಾವತ್ತೂ ಮೇಸೇಜ್ ಹಾಕೋ ಸರ್ಕಲ್‌ ಇನ್ಸ್‌ ಪೆಕ್ಟರ್‌ ಇವತ್ತು ಅರ್ಜೆಂಟ್‌ ಕೆಲಸಾಂತ ಫೋನ್ ಮಾಡಿದ್ದಾರೆ. ಧನಂಜಯನ ಆತಂಕದ ಧ್ವನಿ ಕೇಳಿದರೆ ಏನೋ ಎಡವಟ್ಟಾಗಿದೆ ಅನಿಸುತ್ತಿದೆ. ಸ್ಟೇಷನ್ನಿಗೆ ಹೋಗುವುದೋ? ಮನೆಗೆ ವಾಪಸ್ಸಾಗುವುದೋ? ಗಂಡುಗಲಿ ಅಡಕತ್ತರಿಯಲ್ಲಿ ಸಿಕ್ಕರು.

ಎಷ್ಟೋ ಬಾರಿ ಎಮರ್ಜೆನ್ಸಿ‌ ಕೇಸು ಅಂತ ಬರಹೇಳಿ, ಇರೋ ಬರೋ ಬುದ್ದಿನೆಲ್ಲಾ ಖರ್ಚು ಮಾಡಿ ಪ್ರಕರಣವನ್ನು ಇಂಚಿಂಚಾಗಿ ಬಗೆದು ಇಲ್ಲಿದೆ ಇದರ ಅಸಲೀಯತ್ತು ಎಂದು ಸತ್ಯವನ್ನು ಹೆಕ್ಕಿದರೂ  ʼಆಯ್ತು ಸರ್. ‌ನಿಮ್ಮ ಲಾಜಿಕ್‌ ಸರಿ ಇದೆ ಅನ್ಸುತ್ತೆʼ ಅಂದು, ಒಂದು ಪಕ್ಕಾ ನಿರ್ಧಾರಕ್ಕೆ ತಟ್ಟನೆ ಬಾರದೆ – ಮೇಲಾಧಿಕಾರಿಗಳ, ರಾಜಕಾರಣಿಗಳ, ರಿಯಲ್‌ ಎಸ್ಟೇಟ್‌ ಶ್ರೀಮಂತರ ಮರ್ಜಿಗೆ ಒಳಗಾಗಿ, ಅವರ ಅಭಿಪ್ರಾಯಕ್ಕೆ ಕಾಯೋ ಎಡಬಿಡಂಗಿ ಪೊಲೀಸ್‌ ನವರ ಬುದ್ದಿ ಗೊತ್ತಿರೋದೆ. ಅಲ್ಲದೆ ಡಿಪಾರ್ಟ್ ಮೆಂಟಿಂದ ಸಿಗೋ ರೆಮ್ಯುನರೇಷನ್‌ ಅಷ್ಟರಲ್ಲೇ ಇದೆ. ಯಾವುದಕ್ಕೂ ಧನಂಜಯನನ್ನು ಭೇಟಿಯಾಗೋದೆ ಗಂಡುಗಲಿಗೆ ಸರಿಯೆನಿಸಿತು.   

ಕಾರನ್ನು ತಿರುಗಿಸಲು ಸೂಚಿಸಿ, ಮನೆಕಚೇರಿಗೆ ಬಂದ ಗಂಡುಗಲಿ ಡ್ರೈವರ್‌ ಗೆ ಕಾಫಿ ಮಾಡಲು ಹೇಳಿ ಸಿಗರೇಟ್‌ ಹಚ್ಚಿ ಯೋಚಿಸುತ್ತ ಕೂತರು.

ಯಾವತ್ತೂ ರೋಗಿಗಳನ್ನು ಹಗಲುರಾತ್ರಿ ಬಿಡುವಿಲ್ಲದೆ ಉಪಚರಿಸುತ್ತ ನರ್ಸಿಂಗ್‌ ಹೋಮಿನ ತನ್ನದೇ ಲೋಕದಲ್ಲಿ ಮುಳುಗಿರುವ ಧನಂಜಯನಿಗೆ, ಕೆಲಸ ಬಿಟ್ಟು ತನ್ನನ್ನು ಕಾಣುವ ಜರೂರು ಏಕೆ ಬಂತು?

“ವೈದೇಹಿ ನೆನಪಿದೇಯ?…”ಅಂದವನು ತಡೆದು, ಪೂರ್ತಿ ಹೇಳದೆ “ಎಲ್ಲಾ ಪೋನಲ್ಲಿ ಹೇಳೋಕ್ಕಾಗಲ್ಲ…ಅಲ್ಲೇ ಬಂದು ಮಾತಾಡ್ತೀನಿ” ಎಂದು ದಿಢೀರನೆ ಪೋನನ್ನು ಕಟ್‌ ಮಾಡಿದ್ದು ಏಕೆಂದು ಚಿಂತಿಸುತ್ತ ಕೂತರು. 

“ವೈದೇಹಿ…”

ಕಣ್ಮುಚ್ಚಿ, ತೋರುಬೆರಳಲ್ಲಿ ಹಣೆಯನ್ನು ಕುಟ್ಟುತ್ತ ಗಂಡುಗಲಿ ನೆನಪುಗಳನ್ನು ಕೆದಕುತ್ತ ಸ್ಮೃತಿಯ ಆಳಕ್ಕಿಳಿದರು.

ಕಣ್ಣು ಕೋರೈಸುವ ಮೂರ್ತಿಯೊಂದು ಪುಟಿದೆದ್ದು ಅವರ ಮುಂದೆ ಬಂದು ನಿಂತಿತು. ಗೊರ್ಜ್ಯಸ್! ಅಬ್ಬಾ…ಎಂಥಾ ಅಪ್ರತಿಮ ಸುಂದರಿ…ಹಾ…ವೈದೇಹಿ! ಜೀವನದಲ್ಲೇ ಇಂತಹ ದಿವ್ಯಾನುಭೂತಿ ಮೂಡುವ ಸೌಂದರ್ಯವನ್ನು ನೋಡೇ ಇಲ್ಲ!

ನೋಡು ನೋಡುತ್ತಿದ್ದಂತೆ ಮಿನುಗುವ ನಕ್ಷತ್ರದಂತಿದ್ದ ಅವಳ ಕಣ್ಣುಗಳ ಸುತ್ತ ಕಪ್ಪು ಆವರಿಸಿತು. ಫಳಫಳನೆ ಹೊಳೆಯುವ ಮುಖಕಾಂತಿ ನಂದಿ ಹೋಗಿ ನಿಸ್ತೇಜಗೊಂಡಿತು. ಯೌವನ ತುಂಬಿ ತುಳುಕಾಡುತ್ತಿದ್ದ ಆರೋಗ್ಯಪೂರ್ಣ ದೇಹ ಬಡಕಲಾಗಿ ಮುದುಡಿ ಹೋಯಿತು.

“ಅಯ್ಯೋ…ವೈದೇಹಿ!”

ಅರಿವಿಲ್ಲದೆ ಬಾಯಿಂದ ಹೊರಟ ಉದ್ಗಾರ! ಸಂಪೂರ್ಣ ಉರಿದ ಸಿಗರೇಟಿನ ಬಿಸಿ ಬೆರಳುಗಳಿಗೆ ತಾಗಿ ಗಂಡುಗಲಿ ಅದನ್ನು ಆಶ್ ಟ್ರೇಗೆ ತುರುಕಿ ನಿಟ್ಟುಸಿರು ಬಿಟ್ಟು ಆರಾಮ ಕುರ್ಚಿಗೆ ಒರಗಿದರು.

ಎಷ್ಟು ವರ್ಷಗಳ ಹಿಂದಿನ ಮಾತು? ಮರೆತೇ ಹೋಗಿತ್ತಲ್ಲ! ಕಾರಣ…ಕೇಸು ತನ್ನದಾಗಿರಲಿಲ್ಲ.

ಆವತ್ತು. ಕಪ್ಪು ಸುರಿಯುತ್ತಿದ್ದ ಸರಿರಾತ್ರಿ. ಇಂದಿರಾನಗರದಲ್ಲಿನ ಬಡವಾಣೆಯ ಗಂಡುಗಲಿಯ ಮನೆಯ ರೂಮೊಂದರಲ್ಲಿ ಮಾತ್ರ ಲೈಟು ಉರಿಯುತ್ತಿತ್ತು. ಮಗು ಅಪಹರಣದ ಕೇಸೊಂದನ್ನು ಅಭ್ಯಸಿಸುತ್ತ ಹಾಗೆ ನಿದ್ದೆಗೆ ಜಾರಿದ್ದ ಗಂಡುಗಲಿ ದಡಬಡ ಶಬ್ಧ ಕೇಳಿ ಬೆಚ್ಚಿಬಿದ್ದನು.

ಬೆಲ್‌ ಮಾಡದೇ ಬಾಗಿಲು ಬಡಿದದ್ದು ಯಾರು? ಎದ್ದು ಕೂತವನು, ಟೇಬಲ್ಲಿನ ಮೇಲಿದ್ದ ಗನ್ನನ್ನು ಕೈಲಿಡಿದು ಬಂದು ಮುಂಬಾಗಿಲಿನ ಮ್ಯಾಜಿಕ್‌ ಐನಲ್ಲಿ ನೋಡಿದರೆ ಹೊರಗೆ ಧನಂಜಯ ಗಾಬರಿಯಲ್ಲಿ ನಿಂತಿದ್ದ.

“ಏನ್‌ ಧನು…ಇಷ್ಟೊತ್ತಲ್ಲಿ! ಬೆಲ್‌ ಮಾಡೋದು ಅಲ್ವೇ? ಯಾವನೋ ಪುಡಿರೌಡಿ ಬಂದಿರಬೇಕು ಅಂದ್ಕೊಂಡೆ. ಅದಿರಲಿ…ಯಾಕಿಷ್ಟು ಟೆನ್ಶನಲ್ಲಿದ್ದೀಯ?”

“ಒಳಗೆ ನಡಿ…ಹೇಳ್ತೀನಿ”

ಮುಖದಲ್ಲಿ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತ ಸೋಫಾದಲ್ಲಿ ಕೂತ ಧನಂಜಯನಿಗೆ ಗಂಡುಗಲಿ ನೀರಿನ ಗ್ಲಾಸನ್ನು ಹಿಡಿದರು.

“ಗಂಡುಗಲಿ…ನಿನ್ನಿಂದ ಒಂದ್‌ ಸಹಾಯವಾಗ್ಬೇಕು”

“ಕೂಲ್‌ ಡೌನ್ ಧನು…ಮೊದ್ಲು ನೀರು ಕುಡಿ. ಸುಧಾರಿಸಿಕೊ. ಆಮೇಲೆ ನಿಧಾನವಾಗಿ ಹೇಳು”

ನೀರನ್ನು ಕುಡಿಯುತ್ತ “ನಿಧಾನ ಮಾಡಿದಷ್ಟು ತೊಂದರೆ ಜಾಸ್ತಿ ಆಗುತ್ತೆ. ಬೇಗ ನೀನೇ ಏನಾದ್ರು ಒಳ್ಳೇ ಡಿಸಿಷನ್‌ ತಗೋಬೇಕು” ಅನ್ನುವಾಗ ಕೈ ನಡುಕ ಹೆಚ್ಚಾಗಿ ಗಾಜಿನ ಗ್ಲಾಸ್‌ ಕೆಳಗೆ ಬೀಳೋವಾಗ ಗಂಡುಗಲಿ  ಅದನ್ನು ಹಿಡಿದರು.

“ನೋಡು ಧನು…ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇರುತ್ತೆ. ಆದ್ರೆ ತಾಳ್ಮೆ, ದೂರದೃಷ್ಟಿ ಇರೋದು ಮುಖ್ಯ ಅಂತ ನೀನೇ ಹೇಳ್ತೀರ್ತಿಯ. ಕೈಲಾಗಿದ್ದು ಮಾಡೋಣ. ಮೊದ್ಲು ಸಾವಧಾನವಾಗಿ ವಿಷ್ಯ ಏನೂಂತ ಹೇಳು”

“ಕೊಲೆ ಆಗಿದೆ…ನನ್‌ ಪೇಶೆಂಟ್ ವೈದೇಹಿ ಸ್ವಂತ ಗಂಡನನ್ನೇ ಮರ್ಡರ್‌ ಮಾಡಿದ್ದಾಳೆ!”

“ಓಹ್…ಗಾಡ್!‌ ಯಾವಾಗ? ಎಲ್ಲಿ? ಪೊಲೀಸ್ಗೆ ಇನ್‌ಫಾರ್ಮ್ ಮಾಡ್ದ?”

“ನರ್ಸಿಂಗ್‌ ಹೋಮ್ ನಲ್ಲಿರುವಾಗ ನಾನು ಯಾರ ಫೋನಿಗೂ ಉತ್ತರಿಸೋದಿಲ್ಲ. ಹೊರಗೆ ಬಂದು ಮಿಸ್‌ ಕಾಲ್‌ ನೋಡಿದಾಗ ವೈದೇಹಿ ಮನೆಗೆಲಸದ ರಾಜು ಕರೆ ಮಾಡಿದ್ದ. ತರಕಾರಿ ಖರೀದಿಸಿ ಅಡುಗೆಮನೆಯಲ್ಲಿಟ್ಟವನು ಮನೆಗೆ ಹೋಗುವ ಮುಂಚೆ ಹೇಳಿ ಹೋಗೋಣವೆಂದು ಕೂಗಿದರೆ ಗಂಡಹೆಂಡತಿ ಇಬ್ಬರೂ ಉತ್ತರಿಸಿಲ್ಲ. ರೂಮಿಗೆ ಹೋಗಿ ನೋಡಿದರೆ ಪ್ರೊಫೆಸರ್‌ ತಲೆಯಲ್ಲಿ ರಕ್ತ ಸೋರಿ ನೆಲದಲ್ಲಿ ಸತ್ತು ಬಿದ್ದಿದ್ದರಂತೆ! ವೈದೇಹಿ ವಾರ್ಡ್ ರೋಬಿನಲ್ಲಿ ಅವಿತು ಕುಳಿತು ಅಳುತ್ತಿದ್ದಳಂತೆ! ಏನು ಮಾಡಬೇಕೆಂದು ತೋಚದೆ ನನಗೆ ಕಾಲ್‌ ಮಾಡಿದ್ದಾನೆ. ವೈದೇಹಿ ಮೇಲೆ ಒಂದು ಕಣ್ಣಿಡಲು ಹೇಳಿ, ಸೀದಾ ನಿನ್ನಲ್ಲಿಗೆ ಬಂದಿದ್ದೇನೆ”

“ಛೇ…ನೀನಿಲ್ಲಿಗೆ ಬರಬಾರದಿತ್ತು. ವೈದೇಹಿ ಮನೆಗೋಗಿ ಅಲ್ಲಿಂದಲೇ ನನಗೆ ಕಾಲ್‌ ಮಾಡಬೇಕಿತ್ತು. ಕೆಲಸದವ ರಾಜು ಯಾಕೆ ಕೊಲೆ ಮಾಡಿರಬಾರದು? ಈಗವನು ತಪ್ಪಿಸಿಕೊಂಡಿದ್ದರೆ ಏನು ಮಾಡೋದು?”

“ರಾಜು ಕೊಲೆ ಮಾಡಲು ಕಾರಣಗಳಿಲ್ಲ. ಅಲ್ಲದೇ ಅವನು ಕ್ರೈಮ್‌ ಸೀನ್‌ ನಲ್ಲಿ ಇಲ್ಲ. ಈ ಪೊಲೀಸ್‌ ವಿಚಾರಣೆನೇ ನಂಗೆ ಭಯ ಆಗ್ತಿರೋದು. ಅದೇನೆ ಇರಲಿ…ರಾಜು ಕೊಲೆ ಮಾಡಿದ್ದರೆ ತನಿಖೇಲಿ ಗೊತ್ತಾಗುತ್ತೆ. ಆದರೆ, ವೈದೇಹಿ ಕೊಲೆ ಮಾಡಿದ್ದರೆ ಅವಳು ಮುಗ್ಧೆ…ಇನ್ನೊಸೆಂಟ್.‌ ಅವಳನ್ನ ಹೇಗಾದ್ರು ಮಾಡಿ ಬಚಾವ್‌ ಮಾಡ್ಬೇಕು”

“ಓಹ್…ಓ…ಒಬ್ಬ ರೆಪ್ಯೂಟೆಡ್‌ ಸೈಕ್ಯಾಟ್ರಿಷ್ಟ್‌ ಆಗಿ ಕೊಲೇನಾ ಮುಚ್ಚಾಕ್ಬೇಕು ಅಂತೀಯ!…ವಾಟ್‌ ಧನು?”

“ನೊ…ನೊ…ನಾನು ಹಾಗೆ ಹೇಳ್ತಿಲ್ಲ. ಪರ್ಸನಲ್‌ ಆಸಿಸ್ಟೆಂಟ್‌ ಆಗಿ ಪ್ರೊಫೆಸರ್‌ ಬಳಿ ಟ್ರಾನ್ಸ್ಸ್ಕ್ರೈಬರ್‌  ಕೆಲಸಕ್ಕೆಂದು ಸೇರಿದ ವೈದೇಹಿ ಅನಾಥೆಯಾಗಿ ಬೆಳೆದವಳು. ಪ್ರೊಫೆಸರ್‌, ಅವಳು ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದವರು. ದಿಕ್ಕೆಟ್ಟವಳಿಗೆ ಬಾಳು ಕೊಟ್ಟರು ಎಂಬ ಕಾರಣಕ್ಕೆ ವೈದೇಹಿ ತನ್ನ ಗಂಡನನ್ನು ತುಂಬಾ ಪ್ರೀತಿಸ್ತಾಳೆ. ಅವಳು ಕೊಲೆ ಮಾಡಲು ಕಾರಣಗಳಿಲ್ಲ. ಆದರೆ, ಈಗವಳ ಮನಸ್ಸು ಅವಳ ಕೈಲಿಲ್ಲ. ವೈದೇಹಿ ಸ್ಕಿಜೊಫ್ರೇನಿಯಾದಿಂದ ನರಳುತ್ತಿದ್ದಾಳೆ. ಇತ್ತೀಚಿಗೆ ಅವಳಿಗೆ ಮರೆವು ಬೇರೆ ಕಾಡ್ತಿದೆ. ಟ್ರಿಟ್‌ ಮೆಂಟ್‌ ಕೊಡ್ತಿರೊ ನನ್ನನ್ನೇ ಕೆಲವೊಮ್ಮೆ ನೀವ್ಯಾರು ಅಂತ ಕೇಳ್ತಾಳೆ! ಅದಕ್ಕಾಗಿ ನೀನೇ ಮುತುವರ್ಜಿ ವಹಿಸಿ ಪೊಲೀಸರಿಗೆ ಕನ್‌ವಿನ್ಸ್‌ ಮಾಡಿ, ಸಹಾಯವಾಗೋ ಹಾಗೆ ಎಫ್‌ ಐ ಆರ್‌ ಹಾಕಿಸಿ, ಎಫಿಶಿಯಂಟ್ ಲಾಯರ್‌ ನೇಮಿಸಿ ಅವಳು ಜೈಲಿಗೆ ಹೋಗೋದನ್ನು ತಪ್ಪಿಸಬೇಕು”     

“ಹ್ಞು…ಹ್ಞು”. ಗಂಡುಗಲಿ ನಕಾರಾತ್ಮವಾಗಿ ತಲೆಯಾಡಿಸುತ್ತ “ಧನು…ಈಗ ಮಾತಾಡ್ತಾ ಕೂರೋ ಸಮಯ ಅಲ್ಲ. ಮೊದಲು ಪೊಲೀಸರಿಗೆ ತಿಳಿಸೋಣ. ಆಮೇಲೆ ಕೂತು ವಿಚಾರ ಮಾಡೋಣ”ಎಂದವನು ಪೊಲೀಸರಿಗೆ ಕರೆ ಮಾಡಿದ.    

ಅವರಿಬ್ಬರು ವೈದೇಹಿಮನೆಗೆ ಬರೋ ಹೊತ್ತಿಗೆ‌ ಸಿಬ್ಬಂದಿ ಸಮೇತ ಪೊಲೀಸ್‌ ಇನ್ಸ್‌ ಪೆಕ್ಟರ್ ಸ್ಥಳದ ಮಹಜರು ನಡೆಸಿದ್ದರು. ಗಂಡುಗಲಿ ಕೂಡ ಪ್ರೊಫೆಸರ್‌ ಶವ ಸೇರಿದಂತೆ ಕೊಲೆ ನಡೆದ ಜಾಗ, ಸುತ್ತಮುತ್ತೆಲ್ಲ ತನ್ನ ಕ್ಷಕಿರಣದ ಕಣ್ಣಾಡಿಸಿದರು.ಘಟನೆ ನಡೆದು ಗಂಟೆಗಳಾದರೂ ವೈದೇಹಿ ಭಯಭೀತಳಾಗಿ ವಾರ್ಡ್‌ ರೋಬಿನ ಒಳಗೆ ಕೂತವಳು ಆಚೆಗೆ ಬಂದಿರಲಿಲ್ಲ. “ಹೆದರಿಕೊ ಬೇಡಿ. ಏನೂ ಆಗೋಲ್ಲ…ಈಚೆಗೆ ಬನ್ನಿ”ಎಂಬ ಧನಂಜಯನ ಸಾಂತ್ವನದ ಮಾತುಗಳಿಗೆ ನಡುಗುತ್ತಲೇ ಹೊರಗೆ ಬಂದಳು. ಅಸ್ತವ್ಯಸ್ತವಾದ ಸೀರೆ, ಕೆದರಿದ ಕೂದಲು, ಇಂಗಿದ ಕಣ್ಣುಗಳು, ಒಡೆದು ರಕ್ತಗಟ್ಟಿದ ತುಟಿ, ಹಲ್ಲೆಗೊಳಗಾದ ಮುಖಭಾವ – ಗಂಡುಗಲಿ ಒಮ್ಮೆಗೆ ವ್ಯಾಕುಲಗೊಂಡರು. ಆದರೆ, ಇಂತಹ ಬೀಭತ್ಸ ಸ್ಥಿತಿಯಲ್ಲೂ ವೈದೇಹಿಯ ಸೌಂದರ್ಯ ಚಕಿತಗೊಳಿಸಿತು. ಕೊಲೆಯಲ್ಲಿ ಗೆಳೆಯ ಧನಂಜಯನ ಪಾತ್ರ ಮಿಂಚಂತೆ ಮನದಲ್ಲಿ ಹೊಳೆದು ಮಾಯವಾಯಿತು.

ಎರಡು ಸಂಗತಿಗಳು ಗಂಡುಗಲಿಯ ಕುತೂಹಲ ಕೆರಳಿಸಿತು. ವೈದೇಹಿ ಮುಷ್ಟಿಯಲ್ಲಿ ಬಿಗಿ ಹಿಡಿದಿದ್ದ ಕಂಚಿನ ಬುದ್ಧನ ಮುಖಶಿಲ್ಪಕ್ಕೆ ಸೋರಿದ್ದ ರಕ್ತ ಹೆಪ್ಪುಗಟ್ಟಿತ್ತು. ಸ್ವಲ್ಪ ದೂರದಲ್ಲಿ ಬಿದ್ದಿದ್ದ ಗಾಂಧೀಜಿಯ ಮುಖಶಿಲ್ಪ ಮುಕ್ಕಾಗಿ ಹೋಗಿತ್ತು. ಜಗತ್ತಿಗೆ ಶಾಂತಿಯನ್ನು ಬೋಧಿಸಿದವರ ಎರಡು ಶಿಲ್ಪಗಳು ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗುತ್ತಿರುವುದು ಗಂಡುಗಲಿಗೆ ವಿಪರ್ಯಾಸವಾಗಿ ತೋರಿತು. ಹಾಗೆ ಪ್ರೊಫೆಸರ್‌ ಎಡಗೈಯಲ್ಲಿ ಆರು ಬೆರಳುಗಳಿರುವುದು ಗಂಡುಗಲಿಗೆ ಸೋಜಿಗವಾಗಿ ಕಂಡಿತು.   

ಗಂಡುಗಲಿ ಶಿಫಾರಸ್ಸು ಮಾಡಿದ ಖ್ಯಾತ ಕ್ರಿಮಿನಲ್‌ ಲಾಯರ್‌ ಹನುಮಂತರಾಯರು ವೈದೇಹಿಯ ಪರ ಡಿಫೆನ್ಸ್‌ ಆಗಿ ಸಮಂಜಸವಾಗಿ ಕೋರ್ಟಿನಲ್ಲಿ ವಾದ ಮಂಡಿಸಿದರು.

“ಕೊಲೆಯಾದ ಪ್ರೊಫೆಸರ್‌ – ಆರೋಪಿಗೆ ಹಿತೈಷಿ, ಗೆಳೆಯ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಒಳ್ಳೆಯ ಗಂಡನಾಗಿದ್ದ ಎಂಬುದು ಸಂಶಯಾತೀತ. ಆದರೆ, ಆರೋಪಿಯು ಮಾನಸಿಕ ಅಸ್ವಸ್ಥತೆಗೆ ಒಳಗಾದಗಿಂದ ಆತನ ನಡತೆಯಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಖಿನ್ನತೆಗೆ ಒಳಗಾದ ಮಡದಿಯನ್ನು ನಾಜೂಕಾಗಿ ನೋಡಿಕೊಳ್ಳುವ ಬದಲಿಗೆ ಸಿಟ್ಟಾಗುವುದು, ಹೊಡೆಯುವುದು ಬಹಳಷ್ಟು ಸಾರಿ ನಡೆದಿದೆ ಎಂಬುದಕ್ಕೆ ಮನೆಗೆಲಸದ ರಾಜು ಸಾಕ್ಷಿಯಲ್ಲಿ ಹೇಳಿದ್ದಾನೆ. ಸ್ಟುಡಿಯಸ್ ‌ ಆದ ಅವರಿಗೆ ಅಧ್ಯಯನಕ್ಕೆ ಕಿರಿಕಿರಿಯಾಗುತ್ತಿದ್ದ ಕಾರಣದಿಂದ ಆರೋಪಿಗೆ ನಿದ್ದೆ ಮಾತ್ರೆಗಳನ್ನು ಆಗಾಗ್ಗೆ ಕೊಡುತ್ತಿದ್ದರೆಂದು ಮೆಡಿಕಲ್‌ ರಿಪೋರ್ಟ್‌ಗಳು ಹೇಳುತ್ತವೆ. ಯಾವಾಗ ವೈದೇಹಿಯ ಮಾನಸಿಕ ಆರೋಗ್ಯ ವಿಪರೀತವಾಗಿ ಹದಗೆಡಲು ಆರಂಭವಾಯಿತೋ ಆಗಷ್ಟೇ ಸೈಕ್ಯಾಟ್ರಿಷ್ಟ್‌‌ ಬಳಿಗೆ ಚಿಕಿತ್ಸೆಗೆ ಒಯ್ದಿದ್ದಾರೆ. ಆ ಹೊತ್ತಿಗೆ ವೈದೇಹಿ ಡಿಪ್ರೆಶನ್‌ ನಿಂದ ಸ್ಕಿಜೊಫ್ರೇನಿಯಾ ಕಾಯಿಲೆಗೆ ತುತ್ತಾಗುವಂತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕೊಲೆಗೆ ಮುಂಚೆ ಪ್ರೊಫೆಸರ್‌ ಆರೋಪಿಯನ್ನು ಥಳಿಸಿ ಹಲ್ಲೆ ಮಾಡಿದ್ದಾರೆ. ಆಗ ಕೊಲೆ ಮಾಡುವ ಯಾವ ಉದ್ದೇಶವಿರದೆ ಆರೋಪಿ ಸೆಲ್ಪ್‌ಡಿಫೆನ್ಸ್‌ ಗಾಗಿ ಕೈಗೆ ಸಿಕ್ಕಿದ ಪುಟ್ಟಶಿಲ್ಪವನ್ನು ಎಸೆದಾಗ ಪ್ರೊಫೆಸರ್‌ ತಲೆಗೆ ಪೆಟ್ಟು ಬಿದ್ದು ಸಾವು ಸಂಭವಿಸಿದೆ. ಅಲ್ಲದೆ ಆರೋಪಿಯು ಗಂಭೀರವಾದ ಮಾನಸಿಕ ಕಾಯಿಲೆ ಸ್ಕಿಜೊಫ್ರೇನಿಯಾದಿಂದ ನರಳುತ್ತಿರುವುದರಿಂದ ಅವರಿಗೆ ತಾವೇನು ಮಾಡುತ್ತಿದ್ದೇವೆಂಬ ಅರಿವು ಇರುವುದು ಸಾಧ್ಯವಿಲ್ಲ”

ಕೋರ್ಟಿನ ತೀರ್ಪಿನಂತೆ ವೈದೇಹಿ ಕೊನೆಗೆ ಬಿಡುಗಡೆಯಾದಳು. ಆದರೆ, ಅಷ್ಟೊತ್ತಿಗಾಗಲೇ ಅವಳು ಆರೇಳು ತಿಂಗಳ ಜೈಲುವಾಸ ಅನುಭವಿಸಿದ್ದಳು. ಧನಂಜಯ, ರಾಜು ಜೈಲಿನಿಂದ ಅವಳನ್ನು ಮನೆಗೆ ಕರೆತರಲು ಹೋದಾಗ ಗಂಡುಗಲಿ ಕೂಡ ಜೊತೆಗಿದ್ದರು. ಸೆರೆಮನೆವಾಸದಲ್ಲಿದ್ದರೂ ಧನಂಜಯ ಚಿಕಿತ್ಸೆ ಮುಂದುವರೆಸಿದ್ದರಿಂದ ವೈದೇಹಿಯ ಆರೋಗ್ಯ ಸುಧಾರಿಸಿ ಮುಖದಲ್ಲಿ ಕಾಂತಿ ಕಂಡದ್ದು ಸಮಾಧಾನ ತಂದಿತ್ತು. 

ಗಡಿಬಿಡಿಯಲ್ಲಿ ಆಫೀಸಿನೊಳಗೆ ಬಂದ ಧನಂಜಯ ಚೇರ್‌ ಎಳೆದುಕೊಂಡು ಗಂಡುಗಲಿಯ ಮುಂದೆ ಕೂತ.

“ಅರ್ಧಗಂಟೆಯೊಳಗೆ ಬರ್ತೀನಿ ಅಂದಿದ್ದೀ! ಎರಡು ತಾಸಾಯಿತು. ಬೇಗ ಬರೋದಲ್ವ? ಆ ಇನ್ಸ್‌ಪೆಕ್ಟರ್‌ ಬೇರೆ ಮೇಸೆಜ್‌ ಮೇಲೆ ಮೇಸೆಜ್‌ ಹಾಕ್ತಿದ್ದಾನೆ”

“ದರಿದ್ರ ಟ್ರಾಫಿಕ್…ಮನೆಗೋಗಿ ಟುವೀಲರ್‌ನಲ್ಲಿ ಬಂದ್ರು ಇಷ್ಟೊತ್ತಾಯಿತು!”

“ಸರಿ ಬಿಡು. ಬಂದ ವಿಷ್ಯ ಹೇಳು…ಏನಂತಾ ಅರ್ಜೆಂಟು?”

“ಗಂಡುಗಲಿ…ವೈದೇಹಿ ಕಾಣೆಯಾಗಿದ್ದಾಳೆ!”

“ಅಯ್ಯೋ…ಎಲ್ಲಿಗೆ ಹೋಗಿರ್ತಾರೆ. ಅಷ್ಟು ದೊಡ್ಡ ಬಂಗ್ಲೇಲಿ ಅಲ್ಲೇ ಎಲ್ಲೋ ಇರ್ತಾರೆ. ರಾಜುಗೆ ಅವರೊಂದಿಗೆ ಇರಲು ಹೇಳಿದ್ವಿ ಅಲ್ವಾ? ಅವನು ಈಗ್ಲೂ ಇದ್ದಾನೊ ಅಥ್ವಾ ಕೆಲಸ ಬಿಟ್ನಾ?”

“ಇಲ್ಲ…ಇದ್ದಾನೆ. ಅವನೇ ಬೆಳಿಗ್ಗೆಯೇ ಫೋನ್‌ ಮಾಡಿ ಅಕ್ಕಾವ್ರು ಎಲ್ಲೂ ಕಾಣ್ತಿಲ್ಲ. ಲಾನ್‌ನಲ್ಲೇ ವಾಕಿಂಗ್‌ ಮಾಡ್ತಿದ್ರು ಅಂತ ಫೋನ್‌ ಮಾಡಿದ್ದ”

“ನಿನ್ನ ಟ್ರಿಟ್ ಮೆಂಟ್‌ ಇನ್ನೂ ನಡೀತಿದ್ಯಾ? ಈಗ ಹೇಗಿದ್ದಾರೆ?”

“ಪರವಾಗಿಲ್ಲ, ಈಗ ಸ್ವಲ್ಪಸುಧಾರಿಸಿದ್ದಾರೆ…ಮಾಮೂಲಿನಂತಿದ್ದಾರೆ. ಮೆಡಿಸಿನ್‌ ಕಮ್ಮಿ ಮಾಡಿದ್ದೇನೆ. ಆದರೆ, ಹಳೇನೆನಪುಗಳ ಸುಳಿಯಿಂದ ಈಚೆಗೆಬರೋಕೆ ಆಗ್ತಿಲ್ಲ. ವಾರ…ಹದಿನೈದು ದಿನಕ್ಕೊಮ್ಮೆ ಹೋಗಿ ಮಾತಾಡಿಸಿಕೊಂಡು ಬರ್ತೇನೆ. ಕೆಲವೊಮ್ಮೆ ಆತಂಕ ಹೆಚ್ಚಾದಾಗ ಅವರೇ ನರ್ಸಿಂಗ್‌ಹೋಮ್ಗೆ ಬರ್ತಾರೆ”

“ಅವರಿಗಾಗಲಿ, ಪ್ರೊಫೆಸರ್‌ಗೆ ಆಗಲಿ ಬೆಂಗಳೂರಲ್ಲಿ ಯಾರು ಸಂಬಂಧಿಕರಿಲ್ಲ. ಎಲ್ಲಿಗೆ ಹೋಗಿರಬಹುದು?”

“ಅದೇ ಗೊತ್ತಾಗ್ತಿಲ್ಲ! ಅದಕ್ಕಿಂತ ಇಂಪಾರ್‌ಟೆಂಟ್‌ ಒಂದು ವಿಷ್ಯ ನಿನ್ನತ್ರ ಹೇಳ್ಬೇಕು. ಅದಕ್ಕೆ ಬಂದೆ. ನನ್ನಿಂದ ಒಂದು ತಪ್ಪಾಗಿದೆಂತ ಅನಿಸುತ್ತಿದೆ”

“ಏನು ಹಾಗಂದ್ರೆ?” ತುಸುಕೋಪದಿಂದ ಗಂಡುಗಲಿ ಚೇರ್‌ ಮುಂದೆ ಎಳೆದು ಟೇಬಲ್ಲಿನ ಮೇಲೆ ಕೈಗಳನ್ನು ಮಡಿಸಿಟ್ಟು ಧನಂಜಯನನ್ನು ದಿಟ್ಟಿಸಿದರು. ಅವನ ದೃಷ್ಟಿಯನ್ನು ಎದುರಿಸಲಾಗದೆ ಕುಳಿತಲ್ಲಿಯೇ ಚಡಪಡಿಸಿದ ಧನಂಜಯ, ನಾಲಿಗೆಯಿಂದ ತುಟಿಗಳನ್ನು ಸವರಿಕೊಳ್ಳುತ್ತ…

“ನಾನು ಹೇಳ ಹೊರಟಿದ್ದು…ತಪ್ಪು ಅಂದರೆ ಸೈಕಲಾಜಿಕಲ್‌ ಅನಾಲಿಸಸ್‌ ಬಗ್ಗೆ…”

ಗಂಡುಗಲಿ ಗಂಭೀರವಾಗಿ ತುಟಿ ಎರಡು ಮಾಡದೆ ಮಾತು ಮುಂದುವರೆಸುವಂತೆ ಕೈ ಸನ್ನೆ ಮಾಡಿದರು.

“ನಾನೇ ಖುದ್ದಾಗಿ ನೋಡಿ ಬರೋಣಾಂತ ವೈದೇಹಿ ಮನೆಗೆ ಹೋಗಿದ್ದೆ. ಇಡೀ ಮನೆ ಮೂಲೆಮೂಲೆ ಹುಡುಕಿದರೂ ವೈದೇಹಿ ಕಾಣಲಿಲ್ಲ. ಹಾಗೆ ಪ್ರೊಫೆಸರ್ ಸ್ಟಡಿರೂಮಿಗೆ ಬಂದಾಗ ಬುಕ್‌ ಸೆಲ್ಫ್ ನಲ್ಲಿ ಪುಸ್ತಕಗಳ ಮಧ್ಯೆ ಕಂಡ ಒಂದು ಫೋಟೊ ನೋಡಿ ಶಾಕ್‌ ಆಯಿತು!” ಎಂದವನು ಜೇಬಿನಿಂದ ಫೋಟೊ ತೆಗೆದು ಗಂಡುಗಲಿಯ ಕೈಗಿತ್ತರು.

ಅದು ಸ್ಟುಡಿಯೋದಲ್ಲಿ ತೆಗೆದ ಹಳೇಕಾಲದ ಕಪ್ಪುಬಿಳುಪಿನ ಫೋಟೋ ಆಗಿತ್ತು. ಹದಿನೆಂಟು ಆಸುಪಾಸು ವಯಸ್ಸಿನ, ಸೂಟು ತೊಟ್ಟು ಕುಳಿತ ಇಬ್ಬರೂ ನೋಡುವುದಕ್ಕೆ ಒಂದೇ ತೆರನಿದ್ದು ಅವಳಿ ಜವಳಿಗಳಂತಿದ್ದರು.  

“ಇಂಟೆರೆಸ್ಟಿಂಗ್!”

 “ಗಂಡುಗಲಿ…ಪ್ರೊಫೆಸರ್ ಗೆ ಒಬ್ಬ ತಮ್ಮನೋ,ಅಣ್ಣನೋ ಇರಬೇಕು. ಫೋಟೊದಲ್ಲಿ ಬರೆದ ಹೆಸರಂತೆ ಎಡಕ್ಕಿರುವುದು ಪ್ರೊಫೆಸರ್…ಬಲಕ್ಕಿರುವುದು ಅವರ ಸೋದರ”

ಗಂಡುಗಲಿ ಟೇಬಲ್ ಮೇಲಿದ್ದ ಮ್ಯಾಗ್ನಿಫೈರ್ನ‌ಎತ್ತಿಕೊಂಡು, ತೊಡೆಗಳ ಮೇಲೆ ಹಸ್ತವಿಟ್ಟು ಕೂತವರ ಕೈಬೆರಳುಗಳನ್ನು ಪರಿಶೀಲಿಸಿದರು.‌ ಬಲಕ್ಕೆ ಕೂತ ವ್ಯಕ್ತಿಯ ಎಡಗೈಯಲ್ಲಿ ಆರು ಬೆರಳನ್ನು ಕಂಡು ಹೌಹಾರಿದರು.

“ಅದಿರಲಿ…ಅಸಲೀ ವಿಷಯಕ್ಕೆ ಬರ್ತೀನಿ. ಕೊಲೆಗೂ ಮುಂಚೆ…ಸುಮಾರು ಮೂರು ತಿಂಗಳು ಹಿಂದೆ ವೈದೇಹಿಯನ್ನು ಪ್ರೊಫೆಸರ್‌ ಟ್ರಿಂಟ್ ಮೆಂಟಿಗೆ ಕರೆತಂದದ್ದು. ಅಷ್ಟು ಕಾಲದಲ್ಲಿ ಹಲವಾರು ಬಾರಿ ಕೌನ್ಸಿಲಿಂಗ್‌ ಮಾಡಿದ್ದೇನೆ. ಎಲ್ಲವನ್ನೂ ವಾಯ್ಸ್‌ ರೆಕಾರ್ಡ್‌ ಮಾಡಿದ್ದೇನೆ. ಕೆಲವನ್ನು ಅವಳ ಮಾತಲ್ಲೇ ಕೇಳು”

ಪುಟ್ಟ ರೆಕಾರ್ಡಿಂಗ್‌ ಪ್ಲೇಯರ್‌ ಆನ್‌ ಮಾಡಿ ಧನಂಜಯ ಮುದ್ರಿಸಿದ್ದ ಧ್ವನಿಗಳನ್ನು ಕೇಳಿಸುತ್ತ ಹೋದ.   

ಸಾರ್…ಆದಿನ ಪ್ರೊಫೆಸರ್‌ ಸೆಮಿನಾರ್‌ಗೆಂದು ಡೆಲ್ಲಿಗೆ ಹೊರಟಿದ್ರು. ಬರೋದು ಒಂದು ವಾರ ಆಗುತ್ತೆ ಅಂದಿದ್ರು. ಆದ್ರೆ ಎರಡೇ ದಿನಕ್ಕೆ ವಾಪಸ್ಸಾದರು. ಆದರೆ ಬಂದವರು ಪ್ರೊಫೆಸರ್‌ ಆಗಿರಲಿಲ್ಲ…ಅವರ ತಮ್ಮ ಅಂತ ತಿಳಿದ ಮೇಲೆ ನನಗೆ ಶಾಕ್‌ ಆಗಿ…ತುಂಬಾ  ಡಿಸ್ಟರ್ಬ್‌ ಆಗಿದ್ದೆ. ಪ್ರೊಫೆಸರ್ ಗೆ ಪೋನ್‌ ಮಾಡಿ ತಿಳಿಸಿದೆ. ಅವರೂ ತಮ್ಮನ ಜೊತೆ ಸುಮಾರು ಹೊತ್ತು ಮಾತಾಡಿ, “ಅಪ್ಪ ಕೊಟ್ಟ ಆಸ್ತಿನೆಲ್ಲಾ ನುಂಗಿ…ಈಗ ಊರೂರು ಅಲ್ಕೊಂಡ್‌ ಕುಡ್ಕೊಂಡ್ ಎಲ್ರಿಗೂ ಟೋಪಿ ಹಾಕ್ಕೊಂಡ್ ಬದುಕ್ತಿದ್ದಾನೆ! ಕೇಳ್ದಾಗೆಲ್ಲ ದುಡ್ಡುಕಾಸು ಕೊಟ್ಟು ಸಾಕಾಗಿದೆ. ಈಗ ನೋಡಿದ್ರೆ ನೈಸ್‌ ರೋಡ್ ಸೈಟಿನ ಮೇಲೆ ಕಣ್ಣಾಕಿದ್ದಾನೆ… ದುಷ್ಟ! ಆಗಲ್ಲ ಅಂದಿದ್ದೀನಿ. ನಾಲ್ಕೈದು ದಿನ ಇದ್ದು ತೊಲಗುತ್ತಾನಂತೆ. ಇರಲಿ ಬಿಡು. ತಲೆ ಕೆಡಿಸಿಕೊಳ್ಳಬೇಡ” ಅಂದ್ರು.

ಆದಿನ ರಾತ್ರಿ…ಪ್ರೊಫೆಸರ್‌ ತುಂಬಾ ಮೂಡಲ್ಲಿದ್ದರು. ನಂಗೆ ಆಸಕ್ತಿ ಇರದಿದ್ರು ಯಾವತ್ತೂ ನಾನು ಅವರ ಪ್ರೀತಿನಾ ನಿರಾಕರಿಸಿದವಳಲ್ಲ. ನಾವು ಸುಖದ ಉತ್ತುಂಗದಲ್ಲಿದ್ದೆವು. ತಟ್ಟನೆ “ಅತ್ತಿಗೆ…ನೀವು ಎಷ್ಟು ಚೆನ್ನಾಗಿ ಸುಖ ಕೊಡ್ತೀರಾ!” ಅಂದದ್ದು ಕೇಳಿ ಬೆಚ್ಚಿಬಿದ್ದು ಎದ್ದೆ. ಯಾರೋ ಓಡಿ ಹೋದಂತೆ ಅನಿಸಿತು. ಬಾತ್‌ ರೂಮಲ್ಲಿ ನೋಡಿದ್ರೆ ಪ್ರೊಫೆಸರ್‌ ಇದ್ರು (ವೈದೇಹಿ ಅಳುವ ಧ್ವನಿ)

ಇಲ್ಲಾ ಡಾಕ್ಟ್ರೇ…ಪ್ರೊಫೆಸರ್ ಗೆ ಎಲ್ಲಾ ಹೇಳಿದ್ದೆ. ಅವ್ರು ಭಾಳ ಸಿಟ್‌ ಮಾಡ್ಕೊಂಡ್…”ತಾಯಿ ಇಲ್ಲದ ತಬ್ಲಿ ಅಂತ ಮುದ್ದಾಗಿ ಸಾಕಿದ ನಮ್ಮಪ್ಪನ ಪಾಪದ ಫಲ ಇದು. ಎಲ್ಲೋ ಹಾಳಾಗಿ ಹೋಗಿದ್ದ. ಮತ್ತೆ ಬರಲ್ಲ ಅಂದ್ಕೊಂಡಿದ್ದೆ. ತಾಯಿ ಸಮಾನ ಅತ್ತಿಗೆ ಮೇಲೆ ಅವನ ಕಣ್ಬಿತ್ತಾ! ಆ ನೀಚನಿಗೆ ಒಂದ್‌ ಗತಿ ಕಾಣಿಸ್ತೀನಿ…ಆಗ್ಲೇ ನಮ್ಗೆ ನೆಮ್ಮದಿ” ಅಂದ್ರು.

ಆವತ್ತು ಅವನು ರಾಕ್ಷಸನಾಗಿದ್ದ. “ಏನೇ…ಗಂಡಹೆಂಡತಿ ಇಬ್ರೂ ಮಾತಾಡ್ಕೊಂಡ್‌ ನನ್ನ ಮುಗಿಸ್ಬೇಕೂಂತ ಪ್ಲಾನ್‌ ಹಾಕ್ಕೊಂಡಿದ್ದೀರ? ನಂಗೇನು ಗೊತ್ತಿಲ್ಲ ಅಂದ್ಕೊಂಡ್ರ! ನನ್ನ ಜಾಗನಾ ತನ್ನದೇ ಅಂತ ಹೇಳ್ತಿದ್ದಾನೆ, ಬದ್ಮಾಷ್!‌ ಅವನಿಗೆ ಆ ಮಣ್ಣಿನ ಮೇಲೆ ಅಷ್ಟು ಖಾಯಿಶ್ ಇದ್ರೆ…ಆ ಮಣ್ಣಿಗೇ ಅವನ್ನ ಸೇರಿಸ್ತೀನಿ. ಆಮೇಲೆ ನಾನೇ ನಿನ್‌ ಗಂಡ!” ಅಂತ ಕೂಗಾಡಿ…ಸಿಕ್ಕಾಪಟ್ಟೆ ಹೊಡೆದರು…ಮತ್ತೆ ಬಂದು ತಲೆ ನೇವರಿಸಿ” ಕೈಮಾಡಿದೆ…ಸಾರಿ…ಸಾರಿ” ಅಂತ ಪ್ರೊಫೆಸರ್ ಸಮಾಧಾನ ಮಾಡಿದರು…ಸಾರ್‌ (ಬಿಕ್ಕಿಬಿಕ್ಕಿ ಅಳುವ ಧ್ವನಿ)

ರೆಕಾರ್ಡರ್‌ ಆಫ್‌ ಆಗಿ ಇಡೀ ರೂಮಲ್ಲಿ ನೀರವ ಮೌನ ಆವರಿಸಿತು. ಇಬ್ಬರೂ ಮಾತಾಡದೆ ಬಹಳ ಹೊತ್ತು ಕೂತರು.

“ಧನು…ಇಟ್ಸ್‌ ವೆರಿ ಕಂಫ್ಯೂಸಿಂಗ್…ಮಿಸ್ಟರಿ! ಪ್ರೊಫೆಸರ್‌ ಗೆ ಅವರ ತಮ್ಮನ ಬಗ್ಗೆ ಕೇಳ್ಲಿಲ್ವ?”

“ಕೇಳಿದ್ದೆ ಗಂಡುಗಲಿ…ತಂದೆತಾಯಿಗೆ ನಾನೊಬ್ಬನೇ ಮಗ…ಮತ್ಯಾರು ಇಲ್ಲ ಅಂದಿದ್ದ. ಅಲ್ಲೇ ನಾನು ಮೋಸ ಹೋಗಿದ್ದು ಅನ್ಸುತ್ತೆ. ಅದೂ ಅಲ್ಲದೆ ಸ್ಕಿಜೊಫ್ರೇನಿಯಾ ಪೇಶೆಂಟ್‌ಗಳಲ್ಲಿ ಇಲ್ಲದ್ದನ್ನು ಕಲ್ಪಿಸಿಕೊಳ್ಳುವುದು, ತಾವೇ ಪಾತ್ರಗಳನ್ನು, ಸಂದರ್ಭಗಳನ್ನು ಸೃಷ್ಟಿಸಿ ಮಾತಾಡುವುದು ಕಾಮನ್.‌ ನಾನು ಹಾಗೆಂದೇ ತಿಳಿದಿದ್ದೆ. ಅದಕ್ಕೆ ನಾನು ತಪ್ಪು ಮಾಡಿದೆ ಅಂದದ್ದು”

ಅಷ್ಟರಲ್ಲಿ ಸರ್ಕಲ್‌ಇನ್ಸ್‌ ಪೆಕ್ಟರಿಂದ ಗಂಡುಗಲಿ ಮೊಬೈಲಿಗೆ ಕರೆ ಬಂತು. ಇನ್ನೂ ಉತ್ತರಿಸದಿದ್ದರೆ ಸರಿಬರದೆಂದು ಗಂಡುಗಲಿ “ಹಲೋ…ಒಂದು ಇಂಪರ್ಟೆಂಟ್ ಕೇಸ್‌ ಅಟೆಂಡ್‌ ಮಾಡ್ತಿದ್ದೆ. ಸಾರಿ…ವಿಷಯ ಹೇಳಿ” ಎಂದರು.

“ಪರವಾಗಿಲ್ಲ ಸಾರ್…ನಾವೂ‌ ಅಷ್ಟರಲ್ಲಿ ಒಂದಷ್ಟು ಮಾಹಿತಿ ಕಲೆ ಹಾಕಿದ್ವಿ. ನಾನು ಸ್ಪಾಟಲ್ಲೇ ಇದ್ದೀನಿ.  ಲೊಕೇಷನ್ ಶೇರ್‌ ಮಾಡ್ತೀನಿ ಈಗ ಬರೋಕೆ ಆಗುತ್ತಾ?”

“ಆಯ್ತು…ಲೊಕೇಷನ್ ಕಳಿಸಿ”

ನೈಸ್‌ ರೋಡ್‌ ಹೆದ್ದಾರಿಯ ಪಕ್ಕದಲೇ ಬನಶಂಕರಿ ಆರನೇ ಹಂತದಲ್ಲಿದ್ದ ಲೊಕೇಷನ್ನಿಗೆ ಬಂದರೆ, ಆ ಜಾಗ ವೈದೇಹಿ ಮನೆಯ ಸಮೀಪದಲ್ಲೇ ಇತ್ತು. ಅಲ್ಲೊಂದು ಇಲ್ಲೊಂದು ಮನೆಗಳಿರುವ ಲೇಔಟಿನ ಖಾಲಿಸೈಟ್ ಒಂದರ ಸುತ್ತ ಜನರು ಗುಂಪುಗಟ್ಟಿದ್ದರು.

ಗಂಡುಗಲಿ, ಧನಂಜಯರನ್ನು ನೋಡಿದ್ದೇ ಇನ್ಸ್‌ಪೆಕ್ಟರ್‌ ಧಾವಿಸಿ ಬಂದು “ಸಾರ್…ಈ ಸೈಟು ಪ್ರೊಫೆಸರ್ ‌ ಅವರಿಗೆ ಸೇರಿದ್ದು. ಬೆಳಿಗ್ಗೆ ಇಲ್ಲಿ ದಿನಾ ವಾಕಿಂಗ್‌ ಮಾಡೋ ಕೆಲವರು ಸೈಟಲ್ಲಿ ಡೆಡ್‌ಬಾಡಿ ಬಿದ್ದಿದೆ ಅಂತ ಸ್ಟೇಷನ್ನಿಗೆ ಫೋನ್‌ ಮಾಡಿದ್ರು. ಇಲ್ಲಿಗೆ ಬಂದು ಇನ್ವೆಷ್ಟಿಗೇಟ್‌ ಮಾಡಿದಾಗ ತೀರಿಕೊಂಡವರು ನಿಮಗೆ ತಿಳಿದವರು ಅಂತ ಮಾಹಿತಿ ಸಿಕ್ತು. ಅದಕ್ಕೆ ಬೆಳಿಗ್ಗೆನೇ ನಿಮಗೆ ಪೋನ್‌ ಮಾಡಿದ್ದೆ”

ಉದ್ದುದ್ದ ಚಪ್ಪಡಿಕಲ್ಲು ನಿಲ್ಲಿಸಿ ಬೌಂಡರಿ ಮಾಡಿದ್ದ, ಒತ್ತೊತ್ತಾಗಿ ಆಳೆತ್ತರ ಬೆಳೆದಿದ್ದ ಗಿಡ ಗಂಟಿಗಳನ್ನು ಸಾವರಿಸಿಕೊಂಡು ಸೈಟಿನೊಳಗೆ ಬಂದ ಗಂಡುಗಲಿ,‌ ಧನಂಜಯರ ಎದೆ ಒಡೆದುಹೋಯಿತು. ಅಲ್ಲಿದ್ದ ಆಳುದ್ದದ ಮಣ್ಣುಗುಡ್ಡೆಯನ್ನು ತಬ್ಬಿಕೊಂಡು ವೈದೇಹಿ ಮಲಗಿದ್ದಳು. ಕೈಯಲ್ಲಿ ನಿದ್ದೆಮಾತ್ರೆಗಳ ಬಾಟಲಿ ಇತ್ತು.

ಧನಂಜಯ ಬಿಕ್ಕಿಬಿಕ್ಕಿ ಅಳುತ್ತಾ ”ಐ ಆಮ್‌ ಸಾರಿ…ವೈದೇಹಿ”ಎನ್ನುತ್ತ ನೆಲಕ್ಕೆ ಕುಸಿದರು. ಗಂಡುಗಲಿಯ ಕಣ್ಣಲ್ಲಿಯೂ ನೀರಾಡಿತು.

******

‍ಲೇಖಕರು Admin R

5 March, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading