ಬ್ರೇಕ್ ಮತ್ತು ಲಾಕ್ ಇಲ್ಲದ ಸೈಕಲ್!
ಚಂದ್ರಕಾಂತ ವಡ್ಡು
ಎಂಬತ್ತರ ದಶಕದಲ್ಲಿ ನನ್ನನ್ನು ಬಳ್ಳಾರಿಯಲ್ಲಿ ನೋಡಿದ ಯಾರೂ ಸದಾ ನನ್ನೊಂದಿಗಿರುತ್ತಿದ್ದ ನೀಲಿ ಬಣ್ಣದ ಬಿಎಸ್ಎ ಸ್ಪೋರ್ಟ್ ಮಾದರಿ ಸೈಕಲ್ಲನ್ನು ಮರೆತಿರಲಾರರು. ವ್ಯಾಸಂಗ, ನಿರುದ್ಯೋಗ, ಅರೆ ಉದ್ಯೋಗ, ಸಾಹಿತ್ಯ, ವರದಿಗಾರಿಕೆ, ಸಿನಿಕತನ… ಹೀಗೆ ಹಲವು ವಿಧಗಳಲ್ಲಿ ಹರಡಿಕೊಂಡಿದ್ದ ನನ್ನ ಆ ಹತ್ತು ವರ್ಷಗಳ ಬದುಕಿಗೆ ಈ ಸೈಕಲ್ಲು ಜೊತೆಯಾಗಿತ್ತು.
ಇದನ್ನು ಖರೀದಿಸಿದ ಹೊಸದರಲ್ಲಿ ಹರಿದ ಬನಿಯನ್ನಿನಿಂದ ತಿಕ್ಕಿತಿಕ್ಕಿ ದಿನಂಪ್ರತಿ ಒರೆಸುತ್ತಿದ್ದೆ. ವಾರಕ್ಕೊಮ್ಮೆ ನೀರು ಸುರುವಿ ತೊಳೆಯುತ್ತಿದ್ದುದುಂಟು. ಬರುಬರುತ್ತ ಅದರತ್ತ ನನ್ನ ನಿರ್ಲಕ್ಷ್ಯ ಎಷ್ಟಾಯಿತೆಂದರೆ ಕೆಟ್ಟುಹೋದ ಬ್ರೇಕ್, ಮುರಿದುಬಿದ್ದ ಲಾಕ್ ಸರಿಪಡಿಸಲೂ ಮನಸ್ಸು ಮಾಡಲಿಲ್ಲ. ಕೆಲದಿನಗಳ ನಂತರ ಬೆಲ್ ಕೂಡಾ ಕಳಚಿಬಿತ್ತು. ಇದ್ದೊಂದು ಸೈಡ್ ಸ್ಟ್ಯಾಂಡು ಜೋತಾಡತೊಡಗಿತು. ಟ್ಯೂಬ್ ಪಂಕ್ಚರ್ ಆದಾಗ ನೆಹರೂ ಕಾಲನಿಯಲ್ಲಿದ್ದ ದೊಡ್ಡರಂಗನ ಅಂಗಡಿಗೆ ದಬ್ಬಿಕೊಂಡುಹೋಗಿ ತಿದ್ದಿಸುವುದೇ ನಾನು ಆ ಅಮಾಯಕ ಸೈಕಲ್ಲಿಗೆ ಮಾಡುವ ಮಹಾದುಪಕಾರ ಎಂಬ ಧೋರಣೆ ನನ್ನದಾಗಿತ್ತು. ಒಬ್ಬರನ್ನು ಹೊತ್ತು ಸಾಗಲೇ ಏಗುತ್ತಿದ್ದ ಆ ಪುಟ್ಟ ಸೈಕಲ್ ಮೇಲೆ ಇನ್ನೊಬ್ಬರನ್ನು ಕುಳ್ಳಿರಿಸಿಕೊಂಡು ಸಾಗುತ್ತಿದ್ದ ನನ್ನ ನಿರ್ದಯವನ್ನೂ ಅದ್ಯಾವ ಕಾರಣಕ್ಕೋ ಅದು ಸಹಿಸಿಕೊಂಡಿತ್ತು.

ಎಷ್ಟು ಒತ್ತಿದರೂ ಬ್ರೇಕ್ ಹಿಡಿಯುತ್ತಿರಲಿಲ್ಲ. ಆದರೆ ಗೂಡ್ಸ್ ರೈಲು ನಿಲ್ಲುವಾಗ ಉಂಟಾಗುವಂತಹ ಕಿರ್ ರ್ ರ್ ರ್ರ… ಕರ್ಕಶ ಶಬ್ದ ಜೋರಾಗಿ ಹೊರಡುತ್ತಿತ್ತು. ಈ ಸದ್ದು ಸುತ್ತಲಿನ ಕೇಳುಗರಿಗೆ ಅತೀವ ಕಿರಿಕಿರಿ ಉಂಟು ಮಾಡಿದರೂ ನನ್ನಿಂದ ತಪ್ಪಿಸಿಕೊಳ್ಳಬಯಸುವ ಕೆಲವು ಗೆಳೆಯರಿಗೆ ತುಂಬಾ ಖುಷಿಯ ವಿಷಯವಾಗಿತ್ತು. ಅವರಿಗೆಲ್ಲಾ ಈ ಬ್ರೇಕ್ ಸದ್ದು ನನ್ನ ಬರುವಿಕೆಯ ಸುಳಿವು, ಎಚ್ಚರಿಕೆ ನೀಡುವ ಸೈರನ್ ಆಗಿ ಕೇಳಿಸಿ ಸ್ವರಕ್ಷಣೆಯ ವ್ಯೂಹ ರಚಿಸಿಕೊಳ್ಳುತ್ತಿದ್ದರು. ನಾನು ಈ ಮರ್ಮ ಅರಿಯದಷ್ಟು ಮುಗ್ಧನಾಗಿರಲಿಲ್ಲ; ಆದಷ್ಟೂ ಬ್ರೇಕ್ ಒತ್ತದೇ ಎರಡೂ ಕಾಲುಗಳನ್ನು ನೆಲಕ್ಕೆ ಊರುವ ಮೂಲಕ ಚಪ್ಪಲಿ ಸವೆಸಿ ಸೈಕಲ್ಲಿನ ವೇಗ ನಿಯಂತ್ರಿಸಿ, ನಿಲ್ಲಿಸುತ್ತಿದ್ದೆ.
ಹೀಗೆ ಬ್ರೇಕ್ ರಹಿತ ಸೈಕಲ್ಲು ನನಗೆ ಅಷ್ಟಿಷ್ಟು ಅಸಂತೋಷಕ್ಕೆ ಕಾರಣವಾದರೂ ಲಾಕ್ ಇಲ್ಲದಿರುವುದು ಮಾತ್ರ ಎಂದೂ ಸಮಸ್ಯೆಯಾಗಿ ಕಾಡಲಿಲ್ಲ. ನನ್ನ ಸೈಕಲ್ಲು ನಮ್ಮ ಮನೆಯಲ್ಲಿ ಇದ್ದುದಕ್ಕಿಂತ ಪ್ರತಿದಿನ ಊರಿನ ಹತ್ತಾರು ಕಡೆ ತಳ ಊರಿದ್ದೇ ಹೆಚ್ಚು. ಅದೂ ಲಾಕ್ ಇಲ್ಲದೇ! ಓಪಿಡಿ ವೀರೇಶನ ಅಂಗಡಿ, ಶಾಂತಾರಾಮನ ಚಾ ದುಕಾನ್, ರಮೇಶನ ಬುಕ್ ಸ್ಟಾಲ್ ಹಾಗೂ ಸಾರ್ವಜನಿಕ ಗ್ರಂಥಾಲಯದ ಬಳಿ ನನ್ನ ಸೈಕಲ್ ನಿಲ್ಲಿಸಿದ ಅವಧಿಗೆ ಗಂಟೆ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ಪರಿಗಣಿಸಿದ್ದರೆ ನಾನು ಆ ಸೈಕಲ್ಲನ್ನು ಸಾವಿರ ಸಲ ಮಾರಿ ಹಣ ಜೋಡಿಸಿದ್ದರೂ ತೀರುತ್ತಿರಲಿಲ್ಲ.
ನನ್ನನ್ನು ಹುಡುಕುವವರು ಮೊದಲು ರಾಯಲ್ ವೃತ್ತದ ಬಳಿಯ ಆರ್.ಟಿ.ಎಚ್. ಬಳಿ ಬರುತ್ತಿದ್ದರು. ಆ ಹೋಟೆಲ್ ಆವರಣದಲ್ಲಿ ನಾನಿರಬೇಕು, ಇಲ್ಲವೇ ಲಾಕ್ ಇಲ್ಲದ ನನ್ನ ಸೈಕಲ್ಲು. ಅನೇಕ ಸಂದರ್ಭಗಳಲ್ಲಿ ನಾನು ಬೇರೆ ಊರಿಗೆ ಹೋದರೂ ನನ್ನ ಸೈಕಲ್ಲು ಸಹನೆಯಿಂದ ಅಲ್ಲೇ ಕಾಯುತ್ತಿತ್ತು. ಅನೇಕರು ನನಗೆ ತಲುಪಿಸಬೇಕಾದ ಸಂದೇಶಗಳ ಚೀಟಿಗಳನ್ನು ಸೈಕಲ್ ಕ್ಯಾರಿಯರ್ ಬಳಿ ಸಿಕ್ಕಿಸಿ ಹೋಗಿರುತ್ತಿದ್ದರು.
ಒಮ್ಮೆ ಆರ್.ಟಿ.ಎಚ್. ಆವರಣದಿಂದ ಸೈಕಲ್ಲು ಕಣ್ಮರೆಯಾಗಿಬಿಟ್ಟಿತು. ನಾನೇನೂ ಗಾಬರಿ ಬೀಳಲಿಲ್ಲ. ಯಾರೋ ಪರಿಚಿತರೇ ಬಳಸಲು ತೆಗೆದುಕೊಂಡುಹೋಗಿರುತ್ತಾರೆ, ತಂದು ಬಿಡುತ್ತಾರೆ ಎಂಬ ತುಂಬು ವಿಶ್ವಾಸ ನನ್ನದು. ನಾಲ್ಕು ದಿನ ಕಳೆದರೂ ಸೈಕಲ್ ಹಿಂದಿರುಗಲಿಲ್ಲ. ನನ್ನೊಳಗೆ ಶುರುವಾಯಿತು; ಬದುಕಿನ ಒಂದು ಅಂಗವೇ ಕಳಚಿದ ತಳಮಳ, ಕಳವಳ. ಪೊಲೀಸರಿಗೆ ದೂರು ನೀಡುವುದು ಅನಿವಾರ್ಯ ಅನ್ನಿಸತೊಡಗಿತು. ಎನ್.ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳನ್ನು ಅತಿ ಹೆಚ್ಚೇ ಎನ್ನಿಸುವಷ್ಟು ಓದಿಕೊಂಡು ಒಂಥರಾ ಪುರುಷೋತ್ತಮನ ಶೈಲಿಯಲ್ಲಿ ಊರೆಲ್ಲಾ ತಿರುಗಾಡುತ್ತಿದ್ದ ತಿಪ್ಪೇಸ್ವಾಮಿ ಅಲಿಯಾಸ್ ಎಚ್.ಎಂ.ಟಿ. ಮತ್ತೊಂದು ಧರ್ಮಸಂಕಟದ ಪ್ರಶ್ನೆ ಎತ್ತಿದ. ಅವನು ಎತ್ತಿದ ಪ್ರಶ್ನೆಗೆ ಕಾನೂನಿನ, ನೈತಿಕತೆಯ ಆಯಾಮಗಳೂ ಇದ್ದವು. ಸೈಕಲ್ಲಿಗೆ ಬೀಗ ಹಾಕದೆ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ್ದು ಬೇಜವಾಬ್ದಾರಿಯಲ್ಲವೇ? ನಮ್ಮ ವಸ್ತುವನ್ನು ಸುರಕ್ಷಿತವಾಗಿಟ್ಟುಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿ ಈಗ ಹುಡುಕಿಕೊಡುವ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಿಕೊಡುವುದು ಎಷ್ಟು ಸರಿ. ಇದು ಎಚ್.ಎಂ.ಟಿ. ವಾದ. ಇವನನ್ನು ಪೊಲೀಸ್ ಠಾಣೆಗೆ ದೂರು ಕೊಡಲು ಕರೆದುಕೊಂಡು ಹೋದರೆ ಪಿ.ಎಸ್.ಐ. ಎದುರು ಅಮಾಯಕನಂತೆ ತನ್ನ ಅನುಮಾನ ವ್ಯಕ್ತಪಡಿಸಿ ನನ್ನನ್ನು ತಪ್ಪಿತಸ್ಥನನ್ನಾಗಿ ಮೂಡಿಸುವುದು ಗ್ಯಾರೆಂಟಿ ಅಂತ ಗೊತ್ತಾಗಿ ದೂರು ಕೊಡುವುದನ್ನು ಪೆಂಡಿಂಗ್ ಇಟ್ಟೆ.
ಇದಾದ ಒಂದೆರಡು ದಿನಗಳಲ್ಲಿ ನನ್ನ ಸೈಕಲ್ಲು ಅದ್ಯಾವ ಮಾಯದಲ್ಲೋ ನಿಲ್ಲಿಸಿದ ಜಾಗೆಯಲ್ಲಿ ಪ್ರತ್ಯಕ್ಷವಾಗಿ ಬಿಕ್ಕಿಬಿಕ್ಕಿ ಅಳುತ್ತ ನಿಂತಿತ್ತು. ಅದನ್ನು ಒಯ್ದಿದ್ದು ಕಳ್ಳರೋ, ಗೆಳೆಯರೋ ಎಂದು ತನಿಖೆ ನಡೆಸುವ ಉಸಾಬರಿ ಬೇಕಿರಲಿಲ್ಲ.
ಕೆಲವು ವರ್ಷಗಳ ಹಿಂದೆ ‘’ಸಂಸ್ಕೃತಿ ಸಂಪನ್ನ’’ ಮೈಸೂರು ನಗರದ ನಮ್ಮ ಮನೆಯ ಕಾಂಪೌಂಡೊಳಗೆ ಎರಡು ಬೀಗ ಹಾಕಿ ನಿಲ್ಲಿಸಿದ್ದ ನನ್ನ ಮಗನ ಸೈಕಲ್ಲು ಕಳುವಾಯ್ತು. ಆಗ ನನಗೆ ತಕ್ಷಣ ನೆನಪಾಗಿದ್ದು ನನ್ನ ಲಾಕ್ ಇಲ್ಲದ ಸೈಕಲ್ಲು. ಬಳ್ಳಾರಿಯ ಕಳ್ಳರ ಸಭ್ಯತೆ, ಆದ್ಯತೆ ಮತ್ತು ಶಿಷ್ಟಾಚಾರದ ಬಗ್ಗೆ ಹೆಮ್ಮೆ ಮೂಡಿದ್ದೂ ಸುಳ್ಳಲ್ಲ. ಈ ಪ್ರಕರಣ ನೆಪವಾಗಿಟ್ಟುಕೊಂಡು ಮೈಸೂರಿನವರು ತಮ್ಮೂರಿನ ಕಳ್ಳರ ದಕ್ಷತೆಯನ್ನು ಕೊಂಡಾಡಲು ಸ್ವತಂತ್ರರು. ಆದರೆ ನನಗೆ ನಮ್ಮೂರ ಅದಕ್ಷ ಕಳ್ಳರೇ ಇಷ್ಟ, ಶ್ರೇಷ್ಠ.

ನನಗೆ ಮೊದಲಿನಿಂದಲೂ ಮಧ್ಯಾಹ್ನ ಮಲಗುವ ಅಭ್ಯಾಸವಿಲ್ಲ. ಹಾಗಾಗಿ ಮಟಮಟ ಬಿಸಿಲಲ್ಲಿ ಗಾಂಧೀನಗರದ ಮನೆಯಿಂದ ನನ್ನ ಸೈಕಲ್ ಸವಾರಿ ಹೊರಡುತ್ತಿತ್ತು. ಮೊದಲಿಗೆ ಬದರಿನಾರಾಯಣ ದೇವಸ್ಥಾನ ಓಣಿಯ ಅಣ್ಣಾರಾವ್ ಕಟ್ಟಡದಲ್ಲಿದ್ದ ಚಂದ್ರಮೌಳಿ, ಬಿಪಿನ್, ರಾಜೇಂದ್ರ, ಪ್ರಕಾಶ, ದೇಸಾಯಿ ಅವರ ರೂಮುಗಳ ಕದ ತಟ್ಟುತ್ತಿದ್ದೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕರೆ ಸಂಜೆಯವರೆಗೆ ಅಲ್ಲಿಯೇ ಠಿಕಾಣಿ; ಇಸ್ಪೀಟು ಆಟ, ಜೊತೆಜೊತೆಗೆ ಹರಟೆ, ಕೇಕೆ, ರಾತ್ರಿ ಗೆದ್ದವರು ಕೊಡಿಸುವ ಊಟ. ಕೆಲವೊಮ್ಮೆ ಮೊಬೈಲುಗಳಿಲ್ಲದ ಆ ಕಾಲದಲ್ಲೂ ಅದ್ಹೇಗೋ ಹಲವಾರು ಸಮಾನಾಸಕ್ತ ಗೆಳೆಯರನ್ನು ಒಂದೆಡೆ ಸೇರಿಸುವ ಕಲೆಯಲ್ಲಿ ನಾನು ನಿಷ್ಣಾತ. ಇದರ ಸಂಪೂರ್ಣ ಕ್ರೆಡಿಟ್ ಸಲ್ಲುವುದು ನನ್ನ ಶ್ರಮಿಕ ಸೈಕಲ್ಲಿಗೆ. ವಿವಿಧ ಆಸಕ್ತಿಯ ಗುಂಪುಗಳ ಹಲವಾರು ವಿಷಯಗಳಲ್ಲಿ ನನಗೆ ಸಮಾನಾಸಕ್ತಿ ಇದ್ದುದರಿಂದ ಗೆಳೆಯರ ಬಳಗ ಬಹಳ ದೊಡ್ಡದಿತ್ತು.
ಮಹಾನಂದಿಕೊಟ್ಟಿಗೆಯ ಗೆಳೆಯರು, ಕೌಲ್ ಬಜಾರಿನಲ್ಲಿ ರೂಂ ಮಾಡಿಕೊಂಡಿದ್ದ ಡಿಪ್ಲೊಮಾ ಹುಡುಗರು, ಇಂಜಿನಿಯರಿಂಗ್ ಸಹಪಾಠಿಗಳು, ಸಾಹಿತ್ಯಾಸಕ್ತ ಮಿತ್ರರು, ಕ್ರಾಂತಿಕಾರರು, ಹರಟೆಕೋರರು -ಹೀಗೆ ಹಲವುಬಗೆಯ ಮಿತ್ರರ ದೆಸೆಯಿಂದ ನನ್ನ ಸೈಕಲ್ಲಿಗೆ ಪುರುಸೊತ್ತಿಲ್ಲದಷ್ಟು ಕೆಲಸಕಾರ್ಯ. ಆರಂಭದಲ್ಲಿ ನಾನು ಯಾವಾಗ ಎಲ್ಲಿಗೆ ಕರೆದೊಯ್ಯವೆ ಎಂದು ಅಂದಾಜಿಸಲಾಗದ ನನ್ನ ಸೈಕಲ್ಲಿಗೆ ಸದಾ ಗೊಂದಲ. ಕೊನೆಕೊನೆಗೆ ಸೈಕಲ್ಲು ನನ್ನ ಮನೋಧರ್ಮಕ್ಕೆ ಎಷ್ಟೊಂದು ಹೊಂದಿಕೊಂಡಿತೆಂದರೆ ಅನೇಕ ಸಾರಿ ತಾನೇ ಮುಂದಾಳತ್ವ ವಹಿಸಿ ನಾನು ಹೋಗಬೇಕಾದ ಅಥವಾ ಅದು ಹೋಗಬಯಸಿದ ಜಾಗೆಗೆ ನಿರಾಯಾಸವಾಗಿ ಹೊತ್ತೊಯ್ಯುತ್ತಿತ್ತು.
ಎಪ್ರಿಲ್-ಮೇ ತಿಂಗಳ ರಣಬಿಸಿಲಿನಲ್ಲಿ ನಾನು ಸೈಕಲ್ ಏರಿ ಮನೆ ಬಿಟ್ಟರೆ, ದುರ್ಗಮ್ಮನ ಗುಡಿ ಬಳಿಯ ಅಂಡರ್ ಬ್ರಿಡ್ಜ್ ಇಳಿದ್ಹತ್ತಿ ರಾಯಲ್ ವೃತ್ತ ತಲುಪುವಷ್ಟರಲ್ಲಿ ನೆತ್ತಿ ಸಿಡಿಸುವ ಬಿಸಿಲು ಮತ್ತು ನವರಂಧ್ರಗಳಿಂದ ಒಸರುವ ಬೆವರಿನಿಂದಾಗಿ ಹೊರಟಿದ್ದೆಲ್ಲಿಗೆ ಎಂಬುದೇ ಮರೆತುಹೋಗುತ್ತಿತ್ತು! ಎದುರಿಗೆ ಗುಳುಂ ಎಂದು ನುಂಗಲು ಬಾಯ್ದೆರೆದು ನಿಂತ ಮೂರು ದಾರಿಗಳು. ಅನಂತರಪುರ ರಸ್ತೆ ಕಡೆ ತಿರುಗಿದರೆ ಪಂಚಣ್ಣನ ಹೀರೊ ಹೊಂಡಾ ಶೋ ರೂಂ; ಅಲ್ಲಿಗೆ ಹೋದರೆ ತನ್ನ ಕೆಲಸದಲ್ಲಿ ಮುಳುಗಿರುತ್ತಿದ್ದ ಮೌಳಿಗೆ ತಲೆನೋವು. ಎರಡನೇ ಆಯ್ಕೆ ಬೆಂಗಳೂರು ರಸ್ತೆ; ನಟರಾಜ ಚಿತ್ರಮಂದಿರ ನಂತರ ನೆಲಮಹಡಿಯಲ್ಲಿ ಕೂತು ತಣ್ಣನೆಯ ಬೀರು ಹೀರಬಹುದು. ಆದರೆ ಬೊಕ್ಕಣದಲ್ಲಿ ರೊಕ್ಕ ಇರಬೇಕಲ್ಲ? ಇನ್ನೊಂದು ಹಾದಿಯೇ ಸ್ಟೇಷನ್ ರೋಡ್; ಅಲ್ಲಿದ್ದದ್ದು ಶಾಂತಾರಾಮನ ಟೀ ಕಂ ಪಾನ್ ಅಂಗಡಿ. ಅಂತಿಮವಾಗಿ ಅತ್ತ ಕಡೆಯೇ ಹೊರಡುತ್ತೇನೆ. ಈ ಆಯ್ಕೆ ನನ್ನದೋ ಸೈಕಲ್ಲಿನದೋ ಎಂದು ನಿರ್ಧರಿಸುವುದು ಕಷ್ಟ.
ಇನ್ನು ಶಾಂತಾರಾಮನ ಅಂಗಡಿಯಲ್ಲಿ ಅವರಪ್ಪ ಇದ್ದರೆ ಅವರ ಕೆಂಗಣ್ಣು ಎದುರಿಸುತ್ತಾ ಪಕ್ಕದ ಕುಬೇರ ಬಾರ್ ಅಥವಾ ಸಂಜೀವನ ಅಂಗಡಿ ಕಡೆ ಮುಖ ಮಾಡಿ ತಪ್ಪಿತಸ್ಥನಂತೆ ನಿಲ್ಲಬೇಕು; ಅವರು ಮನೆಗೆ ಹೋಗುವವರೆಗೆ ಕಾಯಬೇಕು. ಈ ಸಂದರ್ಭದಲ್ಲಿ ನನ್ನ ಸೈಕಲ್ಲು ನನ್ನನ್ನು ಎಷ್ಟೊಂದು ಬಗೆಯಲ್ಲಿ ಹೀಯಾಳಿಸಿ, ಗೇಲಿ ಮಾಡಿ ನಕ್ಕಿರಬಹುದು ಎಂಬ ಕುತೂಹಲ ನನ್ನಲ್ಲಿ ಇನ್ನೂ ಉಳಿದಿದೆ. ನಂತರ ಶಾಂತಾರಾಮ ಕೊಡುವ ಅರ್ಧ ಕಾಂಪ್ಲಿಮೆಂಟರಿ ಚಹಾ ಮತ್ತು ಶೀನ ಕಟ್ಟಿಕೊಡುವ ಸಾದಾ ಪಾನ್ ಸವಿಯನ್ನು ಬಣ್ಣಿಸಲಾರೆ. ಈಗ ನನ್ನ ಸೈಕಲ್ಲು ಎಷ್ಟು ಹೊಟ್ಟೆ ಉರಿದುಕೊಂಡಿರಬಹುದು ಎಂಬುದನ್ನು ನಿಮ್ಮ ಊಹೆಗೆ ಬಿಡುವೆ.
ಅಂಗಡಿಯಲ್ಲಿ ಇಳಿಬಿಟ್ಟ ಪತ್ರಿಕೆಗಳನ್ನು ಮಾಲೀಕರಿಗೆ ನೋವಾಗದಂತೆ ಒಂದೊಂದಾಗಿ ನಯವಾಗಿ ಎಳೆದುಕೊಂಡು, ಓದಿ, ಅಷ್ಟೇ ನಾಜೂಕಾಗಿ ಅದರ ಜಾಗೆಗೆ ಸೇರಿಸುವುದು ನನಗೆ ಕರಗತವಾಗಿತ್ತು. ಇದಾದ ನಂತರ ಒಂದೇ ಸಾದಾ ಪಾನನ್ನು ಸಂಜೆ ತನಕ ಅಗಿಯುತ್ತಾ, ದಾರಿಯಲ್ಲಿ ಬರುಹೋಗುವವರಿಗೆ ನಾನಾ ಕಾರಣಗಳಿಗಾಗಿ ಉಗಿಯುವುದು ಆ ಸಿನಿಕ ಕಾಲಘಟ್ಟದ ನನ್ನ ನಿತ್ಯ ಕಾಯಕ. ಆಗ ಪಕ್ಕದ ತುಂಡು ಗೋಡೆಗೆ ವಾಲಿಕೊಂಡ ಸ್ಟ್ಯಾಂಡ್ ಇಲ್ಲದ ನನ್ನ ಸೈಕಲ್ಲಿಗೆ ತೂಕಡಿಕೆಯ ಸಮಯ.

ಆ ಕಾಲದಲ್ಲಿ ರಾತ್ರಿ ಹೊತ್ತು ಸೈಕಲ್ಲಿಗೆ ಲೈಟ್ ಕಡ್ಡಾಯವಾಗಿತ್ತು. ಬೆಲ್ ಇಲ್ಲದಿದ್ದರೆ, ಡಬ್ಬಲ್ ರೈಡಿಂಗ್ ಹೊಡೆದರೆ ಪೊಲೀಸರು ಹಿಡಿದು ದಂಡ ಹಾಕುತ್ತಿದ್ದರು. ಅಲ್ಲದೆ ನಗರಸಭೆಗೆ ಶುಲ್ಕ ಪಾವತಿಸಿ ಸೈಕಲ್ ಲೈಸೆನ್ಸ್ ಪಡೆಯಬೇಕಿತ್ತು. ನಾನು ಲೈಸೆನ್ಸ್ ಪಡೆದಿದ್ದೆ. ಆದರೆ ಲೈಸೆನ್ಸ್ ಬಿಲ್ಲೆಯನ್ನು ಸೈಕಲ್ಲಿನ ಹ್ಯಾಂಡಲ್ ಮಧ್ಯದಲ್ಲಿ ಫಿಕ್ಸ್ ಮಾಡದೆ ಮನೆಯಲ್ಲಿ ಬಿಟ್ಟಿದ್ದೆ. ಒಂದು ದಿನ ನಗರಸಭೆಯವರು ನನ್ನ ಸೈಕಲ್ಲನ್ನು ಹಿಡಿದೇಬಿಟ್ಟರು. ಲೈಸೆನ್ಸ್ ಮನೆಯಲ್ಲಿದೆ, ಈಗಲೇ ತಂದು ತೋರಿಸುವೆ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೇಳದಷ್ಟು ಕರ್ತವ್ಯನಿಷ್ಠೆ ಅವರದಾಗಿತ್ತು. ಸೈಕಲ್ ಸೀಜ್ ಮಾಡಿ ದಂಡ ಕಟ್ಟಲು ಒತ್ತಾಯಿಸಿದರು. ನಾನೂ ಎದುರುಬಿದ್ದೆ.
“ನಾನು ಲೈಸೆನ್ಸ್ ಹೊಂದಿದ್ದರೂ ನಗರಸಭೆ ಸಿಬ್ಬಂದಿ ಕಾನೂನು ಬಾಹಿರವಾಗಿ, ದಬ್ಬಾಳಿಕೆಯಿಂದ ನನ್ನ ಸೈಕಲ್ ಕಸಿದುಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ನನ್ನ ಸೈಕಲ್ ಬಿಡಿಸಿಕೊಡಿ’’ ಎಂದು ದೂರು ಬರೆದುಕೊಂಡು ಶಾಸ್ತ್ರೀನಗರ ವೃತ್ತದಲ್ಲಿರುವ ಎಸ್.ಪಿ. ಬಂಗಲೆಗೆ ಹೋಗಿ ಸುಭಾಸ್ ಭರಣಿ ಅವರನ್ನು ಭೇಟಿಯಾದೆ. ತಕ್ಷಣ ಸ್ಪಂದಿಸಿದ ಅವರು ನನ್ನನ್ನು ಪಿ.ಎಸ್.ಐ. ಜೊತೆಗೆ ಕಳುಹಿಸಿ ಸೈಕಲ್ ಬಿಡಿಸಿಕೊಟ್ಟರು. ಬಹುಶಃ ಐಪಿಎಸ್ ಹಂತದ ಅಧಿಕಾರಿಯೊಬ್ಬರು ತಮ್ಮ ವೃತ್ತಿ ಬದುಕಿನನಲ್ಲಿ ಸ್ವತಃ ಪರಿಹರಿಸಬೇಕಾಗಿಬಂದ ಅತ್ಯಂತ ನಿಕೃಷ್ಟ ಪ್ರಕರಣ ಇದಾಗಿರಬೇಕು!
ಕೊರೊನಾ ಕಾರಣಕ್ಕೆ ಮನೆ ಸೇರಿ ಹಳೆಯ ಕಡತಗಳನ್ನು ಪರಿಶೀಲಿಸುವಾಗ ತೇಲಿಬಂದ ಈ ಸೈಕಲ್ ಖರೀಸಿದ ದಾಖಲೆಯೊಂದು ನಿಮ್ಮನ್ನು ಇಷ್ಟೊಂದು ಗೋಳು ಹೊಯ್ದುಕೊಳ್ಳಲು ಕಾರಣವಾಯ್ತು, ಕ್ಷಮಿಸಿ!
[ಅಂದಹಾಗೆ ನಾನು ಆ ಸೈಕಲ್ ಖರೀದಿಸಿದ್ದು ದಿನಾಂಕ 02.02.1983ರಂದು, ಬಳ್ಳಾರಿಯ ಎಸ್.ಕೆ.ಬ್ರದರ್ಸ್ ಸೈಕಲ್ ಅಂಗಡಿಯಲ್ಲಿ. ಬೆಲೆ: ರೂ.599. ಮೌಲ್ಯ: ಕಟ್ಟಲಾಗದು!]
ಈ ಲೇಖನ ಈ ಮೊದಲು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿತ್ತು. ಇಲ್ಲಿರುವುದು ಲೇಖನದ ಸಂಪೂರ್ಣ ಪಾಠ
ಚಂದ್ರಕಾಂತ ವಡ್ಡು 'ಸೈಕಲ್' ಕಥನ
ನಿಮಗೆ ಇವೂ ಇಷ್ಟವಾಗಬಹುದು…





ಶ್ರೀ ಚಂದ್ರಕಾಂತ ವಡ್ಡು ಅವರ ಈ ಲಲಿತ ಪ್ರಬಂಧ ನನ್ನನ್ನು ಬಳ್ಳಾರಿಗೆ ಕರೆದೊಯ್ಯಿತು. ಹಾಗೇ ಇನ್ನೊಂದು ನೆನಪನ್ನು ಮರುಕಳಿಸುವಂತೆ ಮಾಡಿತು. ಅದೇನೆಂದರೆ ಮಯೂರ ಹೊಟೆಲ್ಲನ ಹಿಂಬಾಗ ದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ. ಅದರ ಮುಂಗಡೆ ಇದ್ ಜಾಗದಲ್ಲಿ ಸೈಕಲ್ ಸ್ಟ್ಯಾಂಡ. ಆಗ ನಾನು ಈ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಯಾಗಿದ್ದೆ. ನಮ್ಮಗ್ರಂಥಾಲಯಕ್ಕೆ ಬರುವ ಹಲವರು ಸೈಕಲ್ನಲ್ಲಿ ಬರುತ್ತಿದ್ದರು. ಅಂಥವರಲ್ಲಿ ಸ್ನೇಹಿತರಾದ ಶಿ ರವಿ ಬೆಳಗೆರೆ ಮತ್ತು ಶ್ರೀ ಶೇಷಗಿರಿ ಆಚಾರ್ ಎಂಬ ಶಿಕ್ಷಕರು.ಮತ್ತು ಶ್ರೀ ಇಟಗಿ ಈರಣ್ಣ. ಇವರ ಸೈಕಲ್ಗಳಿಗೆ ಅತ್ಯಂತ ಸುರಕ್ಷಿತ ಜಾಗ ಇದಾಗಿತ್ತು ಕಾರಣ ನಾನು ಇವರ ಸ್ನೇಹಿತನಾಗಿದ್ದೆ. ಅಲ್ಲಿನ ಸೈಕಲ್ ಸ್ಟಾಂಡ್ ನನಗೆ ಹಲವಾರು ಗೆಳೆಯರನ್ನು ಗಳಿಸಿಕೊಟ್ಟಿತು.
ಯಾಕೋ ಗೊತ್ತಿಲ್ಲ,ಇದನ್ನು ಓದಿದಾಗ,ನಿಕೋಲಾಯ್ ಗೊಗೊಲ್ ನ “ದ ನೋಸ್” ನೆನಪಾಯಿತು.ಇಲ್ಲಿ ಸೈಕಲ್ ಅಲ್ಲಿ ಕುರ್ಚಿ ಮೇಜು ಸಮೀಕರಿಸಿತು ಒಳ ಮನಸ್ಸು.
ಅಚ್ಚುಕಟ್ಟಾದ ನಿರೂಪಣೆ ನಿಮಗೆ ಸಿದ್ದಿಸಿದ ವರ,!