ಶರತ್ ಪೂರ್ಣಿಮೆಯಂದು ಶಶಾಂಕ ಕೇಳಿದ್ದು
ಡಾ ನಾಗಮಣಿ
ಮಧ್ಯ ಪ್ರದೇಶ
ಮಧ್ಯಪ್ರದೇಶದ ನಮ್ಮ ಪಬ್ಲಿಕ್ ಸೆಕ್ಟರಿನ ಟೌನ್ ಶಿಪ್ನಲ್ಲಿ ಶರತ್ ಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ಕಾಲೊನಿಯ ದೇವಾಲಯದ ಆವರಣದಲ್ಲಿ ಹೆಸರಾಂತ ಕಲಾವಿದರಿಂದ ಸಂಗೀತ ಕಛೇರಿ, ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿರುತ್ತಾರೆ. ಸಂಜೆಯಿಂದ ಆರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಗಿನ ಜಾವದವರೆಗೂ ನಡೆಯುತ್ತವೆ. ಇನ್ನೊಂದು ವಿಶೇಷ ಆಚರಣೆ, ಆಕರ್ಷಣೆಯೆಂದರೆ ಅಂದು ನಡೆಯುವ ಖೀರು ವಿತರಣೆ! ಮುಸ್ಸಂಜೆಯ ಹೊತ್ತಿಗೆ ಅನ್ನದ ಖೀರನ್ನು ತಯಾರಿಸಿ ಅದನ್ನು ಪೂರ್ಣಚಂದ್ರನ ಕಿರಣಗಳಿಗೊಡ್ಡಿ ರಾತ್ರಿಯಿಡೀ ಇಟ್ಟು, ಬೆಳಗಿನ ಜಾವ ಅಲ್ಲಿ ನೆರೆದಿರುವ ಜನರಿಗೆಲ್ಲ ಅದನ್ನು ಪ್ರಸಾದವೆಂದು ಹಂಚುತ್ತಾರೆ. ಈ ರಾತ್ರಿ ಚಂದ್ರನ ಕಿರಣಗಳಿಗೆ ವಿಶೇಷ ಶಕ್ತಿಯಿದ್ದು, ಆ ಕಿರಣಗಳಿಂದ ಸ್ಪರ್ಶಿಸಿಕೊಂಡ ಖೀರು ಅಮೃತಕ್ಕೆ ಸಮಾನವಾಗುವುದೆಂದು ಇಲ್ಲೆಲ್ಲ ಹೇಳುತ್ತಾರೆ. ಈ ಕಾಲದಲ್ಲಿ ಹೌದೋ ಅಲ್ಲವೋ ಎಂಬಂತೆ ಆರಂಭವಾಗುವ ಹಿತವಾದ ಚಳಿಯನ್ನು ಅನುಭವಿಸುತ್ತಾ ಬೆಳದಿಂಗಳ ರಾತ್ರಿ ಸಂಗೀತ ಕೇಳುತ್ತಾ ತಣ್ಣನೆಯ ಖೀರನ್ನು ಸವಿಯುವುದು ಒಂದು ದಿವ್ಯ ಅನುಭೂತಿಯನ್ನುಂಟು ಮಾಡುವುದಂತೂ ಹೌದು.
ನಮ್ಮ ಟೌನ್ ಶಿಪ್ ನಿಂದ ಸುಮಾರು ಹದಿನೈದು ಕಿ.ಮೀ. ದೂರದಲ್ಲಿರುವ ನಮ್ಮದೇ ಪಬ್ಲಿಕ್ ಸೆಕ್ಟರಿನ ಇನ್ನೊಂದು ಟೌನ್ ಶಿಪ್ ನಲ್ಲಿಯೂ ಇದೇ ರೀತಿಯ ಆಚರಣೆ. ಎರಡರಲ್ಲಿ ನಮ್ಮ ಮನಸ್ಸಿಗೆ ಒಗ್ಗುವ ಕಾರ್ಯಕ್ರಮ ಎಲ್ಲಿ ನಡೆಯುವುದೆಂದು ಮೊದಲೇ ನೋಡಿಟ್ಟುಕೊಂಡು ಸ್ವಲ್ಪ ಹೊತ್ತಾದರೂ ಅಲ್ಲಿಗೆ ಹೋಗಿ ಬರುವುದು ನಮ್ಮ ಅಭ್ಯಾಸ. ಕೆಲವೊಮ್ಮೆ ಖೀರು ವಿತರಣೆಯಾಗುವವರೆಗೂ ಕುಳಿತಿರುತ್ತಿದ್ದರೆ ಇನ್ನು ಕೆಲವೊಮ್ಮೆ ಅರ್ಧ ರಾತ್ರಿಯವರೆಗೂ ಸಂಗೀತ ಕೇಳಿ ಎದ್ದು ಬರುತ್ತಿದ್ದೆವು. ನಗರ ಪ್ರದೇಶದಿಂದ ದೂರವಿರುವ ನಮಗೆ ಸಂಗೀತ ಕಚೇರಿಯನ್ನು ಪ್ರತ್ಯಕ್ಷವಾಗಿ ಕೇಳುವ ಅವಕಾಶ ಇದೊಂದೇ. ಚಿಕ್ಕಂದಿನಲ್ಲಿ ಗಣಪತಿ ಹಬ್ಬ, ರಾಮನವಮಿ ಹೀಗೆ ವರ್ಷಕ್ಕೆರಡು ಬಾರಿ ವಾರಗಟ್ಟಲೆ ನಡೆಯುತ್ತಿದ್ದ ಸಂಗೀತ ಕಛೇರಿಗಳನ್ನು ಆರಂಭದಿಂದ ಮಂಗಳದವರೆಗೂ ಕೇಳಿಯೇ ಬೆಳೆದ ನಾವು ಆ ಕಛೇರಿಯ ಅನುಭವಕ್ಕಾಗಿಯೇ ಇಲ್ಲಿ ಈ ದಿನಕ್ಕಾಗಿ ವರ್ಷವೆಲ್ಲ ಕಾಯುವುದು.
ಈ ಬಾರಿ ಶರತ್ ಪೂರ್ಣಿಮೆಯಂದು ನಮ್ಮ ಟೌನ್ ಶಿಪ್ ನಲ್ಲಿ ”ರಾಮ್ ಕಥಾ’ ಏರ್ಪಡಿಸಿದ್ದರು. ಪಕ್ಕದ ಟೌನ್ ಶಿಪ್ ನಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಮತ್ತು ಸಿತಾರ್ ವಾದನವಿತ್ತು. ಕಾರ್ಯಕ್ರಮ ಶುಕ್ರವಾರವಿದ್ದು ಮರುದಿನ ಮಕ್ಕಳಿಗೆ ರಜೆಯಿದ್ದುದರಿಂದ ಎಲ್ಲರೂ ಹೋಗಿ ಸಂಗೀತ ಕೇಳಿಕೊಂಡು ಖೀರು ಸೇವಿಸಿ ಬರುವುದೆಂದು ಎರಡು ದಿನಗಳಿಂದ ಯೋಜನೆಯನ್ನೇನೋ ಹಾಕಿದ್ದೆವು. ಆದರೆ ಅನಿರೀಕ್ಷಿತ ಕೆಲಸದಲ್ಲಿ ಸಿಕ್ಕಿಹಾಕಿಕೊಂಡ ರಾಯರು ಅಂದು ಮನೆಗೆ ಬರುವುದೇ ರಾತ್ರಿ ಹತ್ತೂವರೆ-ಹತ್ತೂ ಮುಕ್ಕಾಲಾಗಿಬಿಟ್ಟಿತು. ಊಟ ಮುಗಿಯುವಾಗ ಹನ್ನೊಂದು ದಾಟಿತ್ತು. ಅಷ್ಟು ಹೊತ್ತಿನ ಮೇಲೆ ಮನೆಯಿಂದ ಹೊರಟು, ಗಾಡಿ ಓಡಿಸಿಕೊಂಡು ಅಷ್ಟು ದೂರ ಹೋಗಲು ಅದೇಕೋ ಮನಸ್ಸಾಗಲಿಲ್ಲ. ಸ್ನೇಹಿತರೆಲ್ಲ ಎಂಟು ಗಂಟೆಗೇ ಹೋಗಿಯಾಗಿತ್ತು. ಸರಿ, ಹೋಗುವುದು ಬೇಡವೆಂದು ನಿರ್ಧರಿಸಿದೆವು. ಆದರೂ ಸಮಾಧಾನವಿಲ್ಲ. ವರ್ಷಕ್ಕೊಮ್ಮೆ ಅಪರೂಪಕ್ಕೆ ಕೇಳಲು ಸಿಗುವ ಸಂಗೀತ ಕಛೇರಿಯನ್ನು ತಪ್ಪಿಸಿಕೊಳ್ಳುತ್ತಿದ್ದೇವೆಂಬ ತಪ್ಪಿತಸ್ಥ ಭಾವನೆ, ಜೊತೆಗೆ ಖೀರು ತಪ್ಪಿಹೋಯಿತೆನ್ನುವ ಖಾಲಿ ಖಾಲಿ ಭಾವ. ಜೀರ್ಣಿಸಿಕೊಳ್ಳಲು ಕಷ್ಟವಾಯಿತು.

‘ನಾವೇ ಖೀರು ತಯಾರಿಸಿ ಚಂದ್ರನಿಗೆ ತೋರಿಸಿ ಆಮೇಲೆ ಕುಡಿದರೆ ಹೇಗೆ? ಬೇಕಾದ್ರೆ ಜೊತೆಗೆ ಸಂಗೀತದ ಸಿ. ಡಿ. ಹಾಕೋಣ’, ಎಂದವಳೇ ಸೀದಾ ಅಡುಗೆ ಮನೆಗೆ ಹೋಗಿ ಖೀರಿನ ತಯಾರಿಯಲ್ಲಿ ತೊಡಗಿದೆ. ಖಾಲಿಯಾದ ಅಡುಗೆಯ ಪಾತ್ರೆಗಳನ್ನು ತೊಳೆಯಲು ಹಾಕಲು ಬಂದ ಮಕ್ಕಳು, ‘ಅಮ್ಮಾ, ನೀನು ನಿಜ್ವಾಗ್ಲೂ ಖೀರು ಮಾಡ್ತಿದೀಯಾ? ಇಷ್ಟು ಹೊತ್ತಿನಲ್ಲಿ?” ಎಂದು ಕೇಳಿದಾಗ,’ ಬೇಗ ಬೇಗ ಚಾಪೆ, ಬೌಲ್ , ಚಮಚ ಎಲ್ಲ ತೊಗೊಂಡು ಟೆರೇಸ್ ಮೇಲೆ ಹೋಗಿ’, ಎಂದು ಕಳಿಸಿದೆ. ಹತ್ತು -ಹದಿನೈದು ನಿಮಿಷಗಳಲ್ಲಿ ಖೀರು ತಯಾರಾಯಿತು. ತಾರಸಿಯ ಮೇಲೆ ಚಾಪೆ ಹಾಸಿಕೊಂಡು ನಾಲ್ಕೂ ಜನ ಕುಳಿತಾಗ ಆಹಾ! ಏನಾನಂದ!! ಖೀರನ್ನು ಚಂದ್ರನಿಗೆ ಬಿಟ್ಟು ಆಕಾಶವನ್ನು ಮಾತನಾಡಿಸಲಾರಂಭಿಸಿದೆವು. ಹಿನ್ನೆಲೆಯಲ್ಲಿ ಕೊಳಲಿನ ನಾದ! ತಾರಸಿಯ ವಿದ್ಯುದ್ದೀಪವನ್ನೂ ಆರಿಸಿ, ‘ಮಕ್ಕಳೇ, ಬೆಳದಿಂಗಳೆಂದರೆ ಇದು’ ಎಂದು ಹೇಳಿದ್ದಾಯಿತು. ಸಂಜೆಯ ಹೊತ್ತು ಅಡ್ಡಾಡುವಾಗ ಆಕಾಶದೆಡೆಗೆ ನೋಡಿ ‘ಎಷ್ಟು ಚೆನ್ನಾಗಿದೆ ಅಲ್ವಾ?’ ಎಂದುಕೊಳ್ಳುವುದೂ, ನಕ್ಷತ್ರ ಪುಂಜಗಳ ಬಗ್ಗೆ ಮಾತಾಡಿಕೊಳ್ಳುವುದೂ ಸಾಮಾನ್ಯವಾಗಿದ್ದರೂ ಶುದ್ಧ ಬೆಳದಿಂಗಳನ್ನು ಆಸ್ವಾದಿಸಲೆಂದೇ ನಮ್ಮದೇ ಮನೆಯ ತಾರಸಿಯ ಮೇಲೆ ಎಲ್ಲರೂ ಒಟ್ಟಿಗೆ ಕುಳಿತದ್ದು ಇದೇ ಮೊದಲೆನ್ನಬೇಕು. ಹಾಗೆ ಕುಳಿತ ತತ್ ಕ್ಷಣ ರಾಯರ ಬಾಯಿಂದ ಹೊರಟಿದ್ದು, ‘ಬೆಳದಿಂಗಳೂಟ ಎಷ್ಟು ಚೆನ್ನಾಗಿರುತ್ತಲ್ವಾ? ಚಿಕ್ಕಂದಿನಲ್ಲಿ ನಮ್ಮ ತೋಟದ ಮನೆಯಲ್ಲಿ ನಾವೆಲ್ಲ ಮಾಡ್ತಿದ್ದೆವು’, ಎಂದು. ‘ಹೌದಲ್ವಾ? ಈಚೀಚೆಗೆ ಅದನ್ನೆಲ್ಲ ಮರೆತೇ ಬಿಟ್ಟಿದ್ದೇವೆ. ಮುಂದಿನ ಸಲ ಯಾರನ್ನಾದ್ರೂ ಊಟಕ್ಕೆ ಕರೆಯುವಾಗ ಹುಣ್ಣಿಮೆಯಂದು ಕರೆದು ಇಲ್ಲೇ ಹೀಗೇ ಕುಳಿತು ಊಟ ಮಾಡೋಣ’ ಎಂದೆ. ಮಕ್ಕಳಿಬ್ಬರೂ, ‘ಎಷ್ಟು ಚೆನ್ನಾಗಿದೆ ನಮ್ಮ ಟೆರೇಸ್! ನಮ್ಮ ಹತ್ತಿರ ಇರೋದನ್ನ ನಾವು ಉಪಯೋಗಿಸಿಕೊಳ್ಳೋದೇ ಇಲ್ವಲ್ಲಾ?!’, ಎಂದು ಅಲ್ಲಿಂದಿಲ್ಲಿಗೆ ಓಡಾಡುತ್ತಾ,’ ಎಲ್ಲಿಗೆ ನಾ ಹೋದರಲ್ಲಿಗೆ ಬರುವನು, ಅಮ್ಮಾ ಚಂದಿರ ನನ್ನವನು’ ಹಾಡುತ್ತಿದ್ದರು.
ಕುಳಿತು ನೋಡಿದ್ದು ಸಾಲದೆನಿಸಿದಾಗ ಅಲ್ಲೇ ಹಾಗೇ ಅಡ್ದಾದೆವು. ಎಷ್ಟು ವರ್ಷಗಳಾಗಿತ್ತೋ ಹಾಗೆ ಮಲಗಿಕೊಂಡು ಆಕಾಶ ನೋಡಿ!. ಕುಳಿತು ನೋಡಿದಾಗ ಸ್ನೇಹಿತನಂತೆ ಕಾಣಿಸಿದ್ದ ಆಕಾಶ ಮಲಗಿ ನೋಡಿದಾಗ ವಿಸ್ಮಯ ಹುಟ್ಟಿಸಿತು. ಅಬ್ಬಾ! ಅದೆಂಥ ಅಗಾಧತೆ! ನಮ್ಮ ಕಾಲೊನಿಯ ಮಟ್ಟಿಗಾದರೂ ಗಗನಚುಂಬಿ ಕಟ್ಟಡಗಳ ಹಾವಳಿ ಇಲ್ಲದಿರುವುದರಿಂದ ನೋಡಿದಷ್ಟು ದೂರಕ್ಕೂ ಆಕಾಶ! ಚೆಲ್ಲಿದ ಬೆಳದಿಂಗಳು! ಮಧ್ಯೆ ಹೊಳೆಯುವ ಚಂದ್ರ, ಗಳಿಗೆಗೊಮ್ಮೆ ವಿನ್ಯಾಸ ಬದಲಾಯಿಸುವ ಮೋಡಗಳು. ಮಕ್ಕಳಿಬ್ಬರೂ ,’ ಎಷ್ಟು ವಿಚಿತ್ರ ಅನ್ನಿಸ್ತಿದೆ… ಎಲ್ಲೋ ಹೋದ ಹಾಗಾಗ್ತಿದೆ’, ಎನ್ನುತ್ತಾ ಬಿಟ್ಟ ಕಣ್ಣು ಬಿಟ್ಟಂತೆ ಮೇಲೇ ನೋಡುತ್ತಿದ್ದರು. ಚಂದ್ರನ ಸುತ್ತ ಮೋಡಗಳು ವರ್ತುಲಾಕಾರದಲ್ಲಿ ದಟ್ಟೈಸಿದಾಗ ಒಬ್ಬಳಿಗೆ ಚಂದ್ರ ಬಾವಿಯೊಳಗೆ ಬಿದ್ದಂತೆ ಕಾಣಿಸಿದರೆ ಅದೇ ಮೋಡಗಳು ಸ್ವಲ್ಪ ತೆಳ್ಳಗೆ ಹರಡಿಕೊಂಡಾಗ ಇನ್ನೊಬ್ಬಳಿಗೆ ಚಂದ್ರನ ಸುತ್ತ ಕಾಮನ ಬಿಲ್ಲಿನ ಬಣ್ಣಗಳು ಕಾಣಿಸಿದವು. ಆ ಗಳಿಗೆಯಲ್ಲಿ ನನಗೂ ಚಿಕ್ಕಂದಿನಲ್ಲಿ ಕಥೆಯೊಂದರಲ್ಲಿ ಓದಿ ತಲೆಯಲ್ಲಿ ಅಚ್ಚೊತ್ತಿದ್ದ ,’ ಚಂದ್ರನ ಸುತ್ತ ಸಪ್ತ ವರ್ಣದ ಕೊಡೆ ಇದ್ದಂತಿದೆ’ ಎಂಬ ವಾಕ್ಯ ನೆನಪಾಯ್ತು. ‘ ಚಂದ್ರನ ಮೇಲ್ಮೈ ಬಗ್ಗೆ ಪಾಠದಲ್ಲಿ ಓದಿದ್ದೆಲ್ಲ ಎಷ್ಟು ಚೆನ್ನಾಗಿ ಕಾಣ್ತಿದೆ ಅಲ್ವೇನಪ್ಪಾ ?’ ಎಂದು ಕೇಳಿದ ಮಕ್ಕಳಿಗೆ ಅಪ್ಪನಿಂದ, ‘ಚಂದ್ರನ ಮೇಲೆ ನಿಮ್ಗೆ ಮೊಲ ಕಾಣ್ತಿಲ್ವಾ?’ ಎಂದು ‘ಮೊಲದ ತ್ಯಾಗ’ ದ ಕಥಾಪಾಠವೂ ನಡೆಯಿತು! ಮೋಡಗಳ ಚಿತ್ತಾರವನ್ನು ನೋಡುತ್ತಾ ಪ್ರೌಢ ಶಾಲೆಯಲ್ಲಿ ಓದಿದ್ದ ‘ಶರದೃತು ವರ್ಣನಂ’ ಎಂಬ ಸಂಸ್ಕೃತ ಪಾಠವನ್ನು ನೆನಪಿಸಿಕೊಂಡೆ. ಕಾಲೇಜಿನಲ್ಲಿ ಓದುತ್ತಿದ್ದಾಗ ಹಾಸ್ಟೆಲಿನ ಕೋಣೆಯ ಸೆಕೆ ತಡೆಯಲಾರದೆ ಹೀಗೇ ತಾರಸಿಯ ಮೇಲೆ ಸಾಲಾಗಿ ಮಲಗಿಕೊಳ್ಳುತ್ತಿದ್ದುದೂ, ಒಂದು ರಾತ್ರಿ ಹಾಗೆ ಮಲಗಿಕೊಂಡಿದ್ದಾಗ ಏನೋ ಶಬ್ದವಾಗಿ ಎಲ್ಲರೂ ‘ಕಳ್ಳ ಬಂದ, ಕಳ್ಳ ಬಂದ’, ಎಂದು ಕೂಗಿಕೊಂಡು, ದಿಂಬು, ಹೊದಿಕೆಯನ್ನೂ ಅಲ್ಲೇ ಬಿಟ್ಟು ತಮ್ಮ ತಮ್ಮ ಕೋಣೆಗಳಿಗೆ ಓಡಿದ್ದೂ ನೆನಪಾಯಿತು. ಕೊನೆಗೂ ಅದು ನಿಜವಾಗಿ ಕಳ್ಳನೇ ಬಂದಿದ್ದೋ, ಪಕ್ಕದಲ್ಲೇ ಇದ್ದ ಹುಡುಗರ ಹಾಸ್ಟೆಲ್ಲಿನ ಕಿಡಿಗೇಡಿ ಹುಡುಗನೊಬ್ಬನ ಕಿತಾಪತಿಯೋ ಗೊತ್ತಾಗಿರಲಿಲ್ಲ. ಆ ಕಥೆಯನ್ನೂ ಮಕ್ಕಳಿಗೆ ಹೇಳಿದ್ದಾಯಿತು.
ಹೀಗೇ ಆಕಾಶ ದಿಟ್ಟಿಸುತ್ತಾ ಅದೆಷ್ಟು ಹೊತ್ತು ಉರುಳಿಕೊಂಡಿದ್ದೆವೋ! ಕೊನೆಗೊಮ್ಮೆ ಎದ್ದು ಕುಳಿತು ಅಷ್ಟು ಹೊತ್ತಿಗೆ ಚಂದ್ರನ ಕಿರಣಗಳನ್ನು ಹೀರಿಕೊಂಡು ತನ್ನೊಳಗೆ ಒಳ್ಳೆಯತನವನ್ನೆಲ್ಲ ತುಂಬಿಸಿಕೊಂಡಿದ್ದ ಖೀರನ್ನು ಕುಡಿದೆವು. ಅದು ನಿಜಕ್ಕೂ ಅಮೃತವೆನಿಸಿತು! ಕಾರ್ಯಕ್ರಮಕ್ಕೆ ಹೋಗದ ಕೊರತೆ ಕಾಡಲಿಲ್ಲ. ‘ಕೆಳಗೆ ಹೋಗಲೇಬೇಕಾ? ಇಲ್ಲೇ ಮಲಗಿಕೊಂಡರೆ ಹೇಗೆ?’ ಎಂಬ ಮಕ್ಕಳ ಸಲಹೆಗೆ, ‘ಇನ್ಮುಂದೆ ಆಗಾಗಲಾದರೂ ಹುಣ್ಣಿಮೆಯಂದು ಇಲ್ಲಿ ಬಂದು ಹೀಗೇ ಸ್ವಲ್ಪ ಹೊತ್ತು ಕಳೆಯೋಣ’, ಎಂದು ಸಮಾಧಾನ ಹೇಳಿ ಅವರನ್ನು ಬಲವಂತವಾಗಿ ಎಬ್ಬಿಸಿಕೊಂಡು ಕೆಳಗೆ ಬಂದದ್ದಾಯಿತು. ಗಡಿಯಾರದ ಕಡೆ ನೋಡಲೇ ಇಲ್ಲ! ಮಲಗಿದೆವು.
ಬೆಳಿಗ್ಗೆ ಎದ್ದಾಗ ಎಲ್ಲರಿಗೂ ಮನಸ್ಸು ತುಂಬಿ ಬಂದಂತಾಗಿತ್ತು. ಹೊರಬಾಗಿಲಿನ ಬೀಗ ತೆಗೆಯಲು ಹೊರಟ ನನ್ನ ಹಿಂದೆಯೇ ಬಂದ ಮಕ್ಕಳು, ‘ಎಷ್ಟು ಚೆನ್ನಾಗಿತ್ತಲ್ವಾ ನಿನ್ನೆ? ನಿನ್ನ ಧಿಡೀರ್ ಯೋಜನೆಯೂ ಚೆನ್ನಾಗಿತ್ತು’, ಎಂದಾಗ ‘ಹೌದು, ಹೌದು’, ಎನ್ನುತ್ತಲೇ ಮೇಲೆ ಇನ್ನೂ ಹೊಳೆಯುತ್ತಿದ್ದ ಚಂದ್ರನೆಡೆಗೆ ನೋಡಿದೆ. ರಾತ್ರಿಯಿಂದ ನನ್ನ ತಲೆಯನ್ನು ಕೊರೆಯುತ್ತಿದ್ದ ಪ್ರಶ್ನೆಯನ್ನೇ ಅವನೂ ಅಣಕಿಸಿ ಕೇಳಿದಂತಾಯಿತು, ‘ಇಷ್ಟು ದಿನ, ಇಷ್ಟು ತಿಂಗಳು, ಇಷ್ಟು ವರ್ಷ, ಮಕ್ಕಳೊಂದಿಗೆ ಈ ಕೆಲಸವನ್ನೇಕೆ ಮಾಡಿರಲಿಲ್ಲ?’ ಎಂದು!







wow!! ಎಷ್ಟು ಚೆನ್ನಾಗಿದೆ ಲಹರಿ ನಾಗಮಣಿ!
in the hustle bustle of everyday life we forget to enjoy the simple things in life. Just loved it!!
🙂
malathi S
Mani madam,
Adbhutavada baraha. Kannige kattidante barediddiri. Nimma
dhideer plan estella laharige kaarangavaayitu! Heege bareeta iri.
Sandhya
Mani namma vegada jeevana shailiyalli, sanna putta kushigalannu anubhavisuva vyavadanavannu kaledukondbittirteevalla.Nimma barahadinda spoorthigondu mundina hunnimege beladingala oota maduva nirdara madiddini.Sarala sundara baraha tumba ishtavaythu. Heege nimma anubhavagalannu aagaga hanchikolli.
‘ಮಕ್ಕಳೇ, ಬೆಳದಿಂಗಳೆಂದರೆ ಇದು’ -ಈ ಸೊಗಸಿನ ಮುಂದೆ ಬೇರೆಲ್ಲವೂ ಗೌಣ – ತುಂಬಾ ಚೆನ್ನಾಗಿದೆ
-ಅನಿಲ ತಾಳಿಕೋಟಿ
Good write-up, Madam. Flows like moon-light. Keep writing.