ಸುಮ್ಮನೇ ನೆನಪುಗಳು – 8
– ಗೋಪಾಲ ವಾಜಪೇಯಿ
ನಿಮಗೆ ನೆನಪಿರಬೇಕು : ಶ್ರೀಮಂತ ಬಾಳಾಸಾಹೇಬ ಪಟವರ್ಧನರ ಆಸ್ಥಾನದ ‘ನವಮಣಿ’ಗಳ ಬಗ್ಗೆ ಈ ಮೊದಲು ಒಮ್ಮೆ ಪ್ರಸ್ತಾಪಿಸಿದ್ದೆ. ಆ ಪೈಕಿ ‘ದಶವಾದ್ಯ ಚತುರ ಶಿರಹಟ್ಟಿ ನಾಗಪ್ಪ’ ಈಗಾಗಲೇ ನಿಮಗೆ ಪರಿಚಿತನಾಗಿದ್ದಾನೆ.
ಈ ‘ನವಮಣಿ’ಗಳಲ್ಲಿ ಮುಖ್ಯರಾದ ಇನ್ನೊಬ್ಬರು ವೇದ – ಶಾಸ್ತ್ರ ಪಾರಂಗತ ಶ್ರೀಪಾದ ದೀಕ್ಷಿತ ವಾಜಪೇಯಿಯವರು.
ಶ್ರೀಮಂತ ಬಾಳಾಸಾಹೇಬರ ಆಸ್ಥಾನ ಪುರೋಹಿತರೂ, ಆಪ್ತ ಸಲಹೆಗಾರರೂ ಆಗಿದ್ದವರು ಈ ಶ್ರೀಪಾದ ದೀಕ್ಷಿತರು. ಇವರಿಗೆ ‘ಗುರುಸ್ಥಾನ’ವನ್ನಿತ್ತು ಅವರೊಂದಿಗೆ ತುಂಬ ಗೌರವಪೂರ್ವಕವಾಗಿ ನಡೆದುಕೊಳುತ್ತಿದ್ದವರು ಬಾಳಾಸಾಹೇಬರು.
ಇವರಿಬ್ಬರೂ ಪರಸ್ಪರರ ಬಗ್ಗೆ ಹೊಂದಿದ್ದ ಗೌರವಭಾವಗಳದ್ದೇ ಒಂದು ವಿಶಿಷ್ಟ ಅಧ್ಯಾಯ. ಅದನ್ನು ಕೇಳುತ್ತಿದ್ದರೆ ನಿಮಗೊಂದು ‘ದಂತ ಕತೆ’ ಎನಿಸೀತು. ಆದರಿದು ಕಥೆಯಲ್ಲ, ವಾಸ್ತವ ಪ್ರಸಂಗ.
ಶ್ರೀಪಾದ ದೀಕ್ಷಿತ ವಾಜಪೇಯಿಯವರು ನನ್ನ ಮುತ್ತಜ್ಜ ಎಂಬ ಕಾರಣಕ್ಕೆ ಅವರ ಕುರಿತು ನಾನಿಲ್ಲಿ ಬರೆಯುತ್ತಿಲ್ಲ. ಸಂಬಂಧವನ್ನು ಕ್ಷಣಕಾಲ ಮರೆತು, ಆಗಿನವರು ಪರಸ್ಪರ ತೋರುತ್ತಿದ್ದ ಸ್ಥಾನ ಗೌರವ, ಗುಣ ಗೌರವ, ಪ್ರತಿಭಾ ಗೌರವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿದ್ದ ‘ಮಾನವ ಕಾಳಜಿ’ ಮತ್ತು ಅದನ್ನವರು ತೋರುತ್ತಿದ್ದ ರೀತಿಯ ಮೇಲೆ ಬೆಳಕು ಚೆಲ್ಲುವುದಷ್ಟೇ ಇಲ್ಲಿ ನನ್ನ ಉದ್ದೇಶ. (ಈ ಅಂಕಣದಲ್ಲಿ ಆಗಿನವರ ಔದಾರ್ಯದ ಅನೇಕ ಪ್ರಸಂಗಗಳನ್ನು ಮುಂದೆ ನಿರೂಪಿಸಲಿದ್ದೇನೆ. ಕೆಲವೊಮ್ಮೆ ಅವರ ನಡತೆ ‘ವಿಕ್ಷಿಪ್ತ’ ಎನಿಸಿದರೂ ಅದು ಅವರ ಬಾಳಿನ ನೀತಿ, ಅವರು ಬಾಳಿದ ರೀತಿ ಮತ್ತು ಆ ಕಾಲದ ಮೌಲ್ಯವೂ ಆಗಿದ್ದಿರಬಹುದು.)
ಪ್ರತಿ ವರ್ಷ ಯುಗಾದಿಯ ದಿನ ಮಿರಜಿಯಿಂದ ಕಳಿಸಲ್ಪಟ್ಟ ವಿಶೇಷ ದೂತನೊಬ್ಬ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದನಂತೆ. ಶ್ರೀಪಾದ ದೀಕ್ಷಿತರನ್ನು ಕಂಡು, ಫಲ-ಪುಷ್ಪ ಸಹಿತ ಬೆಳ್ಳಿ ನಾಣ್ಯಗಳ ಒಂದು ತಟ್ಟೆಯನ್ನು ಗುರುಗಳಿಗೆ ಅರ್ಪಿಸಿ ಆಶೀರ್ವಾದ ಪಡೆಯುತ್ತಿದ್ದನಂತೆ. ಆ ಪರ್ವದಿನದಂದು ಸಂಸ್ಥಾನಿಕರ ಪರವಾಗಿ ಊರಿನ ಎಲ್ಲ ಮಠ-ಮಂದಿರಗಳಲ್ಲಿ ವಿಶೇಷ ಪೂಜೆಯ ಏರ್ಪಾಟಾಗಿರುತ್ತಿತ್ತು. ಹೀಗೆ ಊರಿನ ಎಲ್ಲ ದೇವರುಗಳಿಂದ ಹಾಗೂ ಶ್ರೀಪಾದ ದೀಕ್ಷಿತರಿಂದ ಸಂಸ್ಥಾನಕ್ಕೂ, ಸಂಸ್ಥಾನಿಕರಿಗೂ ಅವರ ಪರಿವಾರಕ್ಕೂ, ಪ್ರಜೆಗಳಿಗೂ ‘ಶುಭ ಹಾರೈಕೆ’ಗಳನ್ನೂ ಆಶೀರ್ವಾದಗಳನ್ನೂ ‘ಪಡೆದು’ ಆ ದೂತ ಮಿರಜಿಗೆ ಮರಳುತ್ತಿದ್ದನಂತೆ.
ಶ್ರೀಮಂತ ಬಾಳಾಸಾಹೇಬರು ‘ಧರ್ಮವಿಚಾರ’ವಾಗಿ ಸಾಕಷ್ಟು ಓದಿಕೊಂಡವರು. ಹಿಂದೂ ಧರ್ಮದ ಬಗ್ಗೆ ಅಷ್ಟೇ ಅಲ್ಲ, ಜೈನ, ಬೌದ್ಧ, ಮುಸ್ಲಿಂ, ಕ್ರೈಸ್ತ ಹೀಗೆ ಇನ್ನಿತರ ಧರ್ಮಗಳ ಬಗ್ಗೆಯೂ ಅವರಿಗೆ ಅಪಾರ ಆಸಕ್ತಿಯಂತೆ.
ಜನಾರೋಗ್ಯದ ಬಗ್ಗೆ ತುಂಬ ಕಾಳಜಿ ಇದ್ದವರು ಬಾಳಾಸಾಹೇಬರು. ಮಿರಜಿಯಲ್ಲಿ ಕ್ರಿಶ್ಚಿಯನ್ ಸಂಸ್ಥೆಯೊಂದು ದೊಡ್ಡ ಆಸ್ಪತ್ರೆ ಸ್ಥಾಪಿಸುವಾಗ ಅವರು ಅದಕ್ಕೆ ಉಚಿತ ನಿವೇಶನ ನೀಡಿದರಂತೆ. ಈಗಲೂ ಆ ಆಸ್ಪತ್ರೆ ಆ ಭಾಗದಲ್ಲೇ ಸುಪ್ರಸಿದ್ಧ. ನಮ್ಮ ಊರು ಲಕ್ಷ್ಮೇಶ್ವರದಲ್ಲಿ ಆಗ ಆಂಗ್ಲ ವೈದ್ಯ ಓದಿದವರು ಇರಲೇ ಇಲ್ಲ. ಈ ಕೊರತೆಯನ್ನು ಗಮನಿಸಿ, ಮಿರಜಿಯಿಂದ ಡಾ. ಭಡಭಡೆ ಎಂಬವರನ್ನು ಕರೆಯಿಸಿ, ಇಲ್ಲೊಂದು ದವಾಖಾನೆ ಶುರುವಾಗುವಂತೆ ಮಾಡಿದರಂತೆ ಬಾಳಾಸಾಹೇಬರು. ನಾವು ಚಿಕ್ಕವರಿದ್ದಾಗ ಈ ಡಾ. ಭಡಭಡೆಯವರ ಮಗ (ಡಾ. ಎಸ್.ಎಸ್. ಭಡಭಡೆ) ಡಾಕ್ಟರಾಗಿ ಇದ್ದದ್ದನ್ನು ನೋಡಿದ್ದೇನೆ. ಕನ್ನಡ ಒಂದನೆಯ ಇಯತ್ತೆಯಿಂದಲೂ ಅವರ ಮಗ ಶ್ರೀ ನನ್ನ ಸಹಪಾಠಿ. ಈಗ ಅವನೂ ನಮ್ಮ ಊರಿನ ಸುಪ್ರಸಿದ್ಧ ಡಾಕ್ಟರು. ಅಷ್ಟೇ ಅಲ್ಲ, ನಮ್ಮ ಹಿರಿಯರಿಗೆ ಸೇರಿದ ಜಾಗವನ್ನೇ ಖರೀದಿಸಿ ಅಲ್ಲೊಂದು ದೊಡ್ದ ದವಾಖಾನೆ ನಡೆಸುತ್ತಿದ್ದಾನೆ.
ಸಂಸ್ಥಾನಿಕ ಶ್ರೀಮಂತ ಬಾಳಾಸಾಹೇಬರು ನಮ್ಮ ಊರಲ್ಲಿ ವಾಸ್ತವ್ಯ ಇರುವ ಅವಧಿಯಲ್ಲಿ ಆಧ್ಯಾತ್ಮದ ಚರ್ಚೆಯ ಜೊತೆಗೆ ಬದುಕು, ಧರ್ಮಸೂಕ್ಷ್ಮ, ಸಮಬಾಳ್ವೆ ಸಹಬಾಳ್ವೆ ಇತ್ಯಾದಿಗಳ ಕುರಿತು ಶ್ರೀಪಾದ ದೀಕ್ಷಿತರ ಜೊತೆ ಸಂವಾದ ನಡೆಸುತ್ತಿದ್ದರಂತೆ. ಇಬ್ಬರಲ್ಲಿಯೂ ಗಂಟೆಗಟ್ಟಲೆ ಗಹನವಾದ ವಿಚಾರ ವಿನಿಮಯಗಳು ನಡೆಯುತ್ತಿದ್ದವಂತೆ.
ಇದೆಲ್ಲ ನಡೆಯುತ್ತಿದ್ದುದಾದರೂ ಎಲ್ಲಿ? ಕೆಲವೊಮ್ಮೆ ಕಿಲ್ಲೆಯಲ್ಲಿ, ಇನ್ನು ಕೆಲವೊಮ್ಮೆ ನಮ್ಮ ಮುತ್ತಜ್ಜನ ಮನೆಯಲ್ಲಿ.
ಉತ್ತರಾಭಿಮುಖವಾದ ನಮ್ಮ ಮುತ್ತಜ್ಜನ ಮನೆಯಿಂದ ಕೋಟೆ ಅಥವಾ ಕಿಲ್ಲೆ ಇದ್ದದ್ದು ನೇರ ಎದುರಿಗೇನೇ. ಅದು ಪೂರ್ವಾಭಿಮುಖ ದ್ವಾರವುಳ್ಳ ಮಣ್ಣಿನ ಕೋಟೆ. ನಮ್ಮ ಮನೆಯಿಂದ ಪೂರ್ವ ದ್ವಾರದ ಮೂಲಕ ಹೋದರೆ ಕಿಲ್ಲೆ ತಲಪಲು ಏಳರಿಂದ ಹತ್ತು ನಿಮಿಷ ಬೇಕು. ಅದು ಸ್ವಲ್ಪ ಸುತ್ತು ಹಾಕಿ ಹೋಗಬೇಕಾದ ದಾರಿ. ಆದರೆ, ಕೋಟೆಯ ದಕ್ಷಿಣಕ್ಕೂ ಒಂದು ದ್ವಾರವಿತ್ತು ಎಂದು ಈ ಮೊದಲೊಮ್ಮೆ ಹೇಳಿದ್ದೆನಲ್ಲ, ಆ (ದಕ್ಷಿಣ) ದ್ವಾರದ ಮೂಲಕ ಹೋದರೆ ಕೇವಲ ಐದು ನಿಮಿಷ ಸಾಕು.
ಚಂದ್ರನಂಥ ದುಂಡು ಮುಖದ, ಹೊಳೆವ ಕಂಗಳ ನಮ್ಮ ಮುತ್ತಜ್ಜ ಗಾಂಧಿಯಂತೆ ಧೋತರದ ಮೇಲೊಂದು ಪಂಚೆಯನ್ನು ಹೊದ್ದು, ಊರುಗೋಲು ಹಿಡಿದು, ಬರಿಗಾಲಲ್ಲಿ ಮನೆಯಿಂದ ಹೊರಬೀಳುವುದು ಸಾಮಾನ್ಯ ನೋಟ. ಭಸ್ಮಭೂಷಿತವಾದ ಅಗಲ ಹಣೆ. ಅದರ ಮೇಲೆ ಎದ್ದು ಕಾಣುವಂಥ ಅಡ್ಡ ಗಂಧದ ನಾಮ. ನಾಸಿಕಾಗ್ರದ ಮೇಲೆ ಕಣ್ಣ ಕಾಂತಿಯನ್ನು ಇಮ್ಮಡಿಗೊಳಿಸುವಂತೆ ಕಾಣುವ ಕುಂಕುಮದ ಬೊಟ್ಟು. ಕೊರಳಲ್ಲಿ ಇಳಿಬಿದ್ದ ರುದ್ರಾಕ್ಷಿ ಮಾಲೆಗಳು. ಕೈಯಲ್ಲೊಂದು ನಾಗರಬೆತ್ತದಂಥ ದಂಡ. ಸಂಸ್ಥಾನಿಕರು ಮರ್ಯಾದೆ ಮಾಡಿ ನೀಡಿದ್ದ ಪದಕವುಳ್ಳ ಚಿನ್ನದ ಸರವನ್ನೆಂದೂ ಅವರು ಹಾಕಿಕೊಂಡು ಮೆರೆದವರೇ ಅಲ್ಲ.
ನೇರ ನಮ್ಮ ಎದುರಿಗೇ, ತುಸು ದೂರದಲ್ಲಿಯೆ ಕೋಟೆ ಇದ್ದರೂ, ನಡುವೆ ದಾತಾರರ ಮಹಲು ಅಡ್ಡವಿತ್ತು. ಹೀಗಾಗಿ ನಮ್ಮ ಮನೆಯ ಮಾಳಿಗೆಯ ಮೇಲೆ ನಿಂತರೆ ಮಾತ್ರ ಕೋಟೆ ಕಾಣಿಸುತ್ತಿತ್ತು. ಆದರೆ, ಅಲ್ಲಿಗೆ ಹೋಗಲು ಮಾತ್ರ ನಾಲ್ಕು ಸಲ ದಿಕ್ಕು ಬದಲಿಸಿ ನೇರ ದಾರಿಗೆ ಇಳಿಯಬೇಕು.
ಮನೆಯಿಂದ ಹೊರಬಿದ್ದ ನಮ್ಮ ಮುತ್ತಜ್ಜ ನೇರ ದಾರಿ ತಲಪುವ ಹೊತ್ತಿಗಾಗಲೆ ಕಾಲು ಗಂಟೆ ಉರುಳಿರುತ್ತಿತ್ತು. ದಾರಿಯಲ್ಲಿ ಎಲ್ಲರನ್ನೂ ಮಾತಾಡಿಸಬೇಕು. ಅವರ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರ ಬಗ್ಗೆಯೂ ಕೇಳಿ, ಅವರೆಲ್ಲರ ಕ್ಷೇಮ ಸಮಾಚಾರ ತಿಳಿದುಕೊಳ್ಳಬೇಕು. ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು, ಪರಿಹಾರ ಪಡೆದು ಮನಸ್ಸು ಹಗುರ ಮಾಡಿಕೊಳ್ಳುವ ಕೆಲವರು ಭೆಟ್ಟಿಯಾದರಂತೂ ಅರ್ಧ ಗಂಟೆ ಅಲ್ಲಿಯೇ ಕೂತುಬಿಡುತ್ತಿದ್ದರು ಅಜ್ಜ.
ನೇರ ದಾರಿಯಲ್ಲಿ ಸ್ವಲ್ಪ ನಡೆದರೆ ಎದುರು ಒಂದು ದೊಡ್ಡ ಆಲದ ಕಟ್ಟೆ. ಅದರ ಮೆಟ್ಟಿಲ ಮೇಲೆ ಸ್ವಲ್ಪ ಹೊತ್ತು ಕೂತು, ಎದುರಿಗಿರುವ ಪಾಂಡುರಂಗನಿಗೆ ವಂದಿಸುವ ಹೊತ್ತಿಗಾಗಲೇ ಪಕ್ಕದ ಮನೆಯ ಅಭ್ಯಂಕರ ಮಾಸ್ತರರು ಬಂದು ನಮ್ಮ ಮುತ್ತಜ್ಜನ ಪಾದಗಳಿಗೆ ಹಣೆ ಮುಟ್ಟಿಸಬೇಕು. ಅವರ ಮೈದಡವುತ್ತಲೇ ಮತ್ತೆ ಒಂದೆರಡು ನಿಮಿಷ ಉಭಯಕುಶಲೋಪರಿ. ಊರ ಜನಕ್ಕೆಲ್ಲ ಹಿರಿಯರಾಗಿದ್ದು, ಗುರುಸ್ಥಾನದಲ್ಲಿದ್ದ ನಮ್ಮ ಮುತ್ತಜ್ಜ ಹಾಗೆಯೇ ಮೆಲ್ಲನೆ ಅಲ್ಲಿಂದೆದ್ದು, ಕೋಟೆಯ ದಕ್ಷಿಣ ದ್ವಾರದ ಮೂಲಕ ಒಳಗೆ ಹೋದರೆ ಮುಗಿಯಿತು. ಹೊರಗೆ ಬರುವುದು ಮುಂದೆ ಅದೆಷ್ಟು ಹೊತ್ತಿಗೋ…
ಅಭ್ಯಂಕರ ಮಾಸ್ತರರು ಅಂದೆನಲ್ಲ, ಅವರ ತಂದೆ ಮಿರಜದಿಂದ ನಮ್ಮ ಊರಿಗೆ ಬಂದು ನೆಲೆಸಿದವರು. ನಮ್ಮ ಹಿರಿಯ ಕವಿ ಪ್ರೊ. ವಿ. ಕೃ. ಗೋಕಾಕರ ತಂದೆ ಕೃಷ್ಣರಾಯರು ಕೂಡ ಗೋಕಾಕದಿಂದ ಬಂದು ಲಕ್ಷ್ಮೆಶ್ವರದಲ್ಲಿಯೇ ಬೀಡು ಬಿಟ್ಟವರು. ಅಭ್ಯಂಕರ ಮಾಸ್ತರರ ಸೋದರರೊಬ್ಬರು ವಕೀಲರು. ಗೋಕಾಕರ ತಂದೆ ಕೂಡ ವಕೀಲರೆ. ಗೋಕಾಕರ ತಾಯಿಯ ತವರು ನಮ್ಮೂರೇ. ಹೀಗಾಗಿ ಕವಿ ವಿನಾಯಕರ ಜನನ ಮತ್ತು ಬಾಲ್ಯ ನಮ್ಮ ಊರಲ್ಲಿಯೇ ಆಯಿತು. (ಆ ನಂತರ ಕೃಷ್ಣರಾಯರು ಸವಣೂರಿಗೆ ಹೋಗಿ ನೆಲೆಸಿದರು.) ಗೋಕಾಕರು ಮುಂದೆ ಆಗಾಗ ಬೇಂದ್ರೆ, ನರೇಗಲ್, ಮುಗಳಿ ಮತ್ತಿತರ ಗೆಳೆಯರ ಗುಂಪಿನ ಸ್ನೇಹಿತರೊಡನೆ ನಮ್ಮ ಊರಿಗೆ ಬಂದು ನಾಲ್ಕಾರು ದಿನ ಇರುತ್ತಿದ್ದದ್ದು ಇದೇ ಅಭ್ಯಂಕರರ ಮನೆಯಲ್ಲಿ. ಆಗ ‘ಕರ್ನಾಟಕ ಏಕೀಕರಣ ಚಳವಳಿ’ಯ ಚಟುವಟಿಕೆಗಳಲ್ಲಿ ಬೇಂದ್ರೆ ನೇತೃತ್ವದ ‘ಗೆಳೆಯರ ಗುಂಪು’ ತೊಡಗಿಸಿಕೊಂಡಿತ್ತು.
ಬೇಂದ್ರೆಯವರನ್ನು ನಾನು ಮೊದಲ ಸಲ ಭೇಟಿಯಾಗಿದ್ದಾಗ (1972) ನನ್ನ ಅಡ್ಡ ಹೆಸರುಕೇಳಿ, ”ನೀನು ಶ್ರೀಪಾದ ದೀಕ್ಷಿತರಿಗೆ ಏನಾಗಬೇಕು?” ಅಂತ ಪ್ರಶ್ನಿಸಿದ್ದರು. ”ಮರಿಮಗ,” ಅಂತ ನಾನಂದಿದ್ದೆ. ಆ ನಂತರ ನನಗೆ, ನಮ್ಮ ಮನೆತನದ ಬಗ್ಗೆ ನನಗೇ ಗೊತ್ತಿರದ, ಅನೇಕ ಸಂಗತಿಗಳನ್ನು ಬೇಂದ್ರೆ ಅಜ್ಜ ವಿವರಿಸಿ, ನನ್ನನ್ನು ಅಚ್ಚರಿಗೀಡುಮಾಡಿದ್ದರು. (ಇದಕ್ಕೂ ಮುನ್ನಿನ ‘ಬೇಂದ್ರೆ ಭೇಟಿಯ ಫಜೀತಿ’ಗಳದ್ದೆ ಒಂದು ಪ್ರತ್ಯೇಕ ಅಧ್ಯಾಯ. ಮುಂದೆಂದಾದರೂ ಅದನ್ನು ವಿವರಿಸುತ್ತೇನೆ.)
ಬೇಂದ್ರೆ ಹೇಳಿದ್ದರು, ”ನಾ ನೋಡಿದ್ದೆ ನಿಮ್ಮ ಮುತ್ತಜ್ಜನ್ನ. ಭಾರೀ ತೇಜಸ್ಸು ಮಾರೀ ಮ್ಯಾಲೆ. ನೋಡೀದ್ರನs ಕೈಮುಗೀಬೇಕು ಅನಸ್ತಿತ್ತು. ಹಾಂಗಿದ್ರು. 1930 ರ ಆಸ-ಪಾಸಿನ್ಯಾಗ ನಾ ಒಮ್ಮೆ ನಿಮ್ಮೂರಿಗೆ ಹೋದಾಗ, ಸಂಸ್ಥಾನಿಕರು ಒಂದು ಯಾಗ ಮಾಡಿದ್ರು. ಅಲ್ಲೆ ನಿಮ್ಮ ಮುತ್ತಜ್ಜಂದs ನೇತೃತ್ವ. ನಾನು, ಗೋಕಾಕ, ಮುಗಳಿ, ನರೇಗಲ್ಲ ಎಲ್ಲಾರೂ ನಿಮ್ಮ ಅಜ್ಜನ್ನ ನೋಡಿದವರs…” ಅಂದಿದ್ದರು ಬೇಂದ್ರೆ. ಅವರ ನೆನಪಿನ ಶಕ್ತಿ, ಪ್ರಸಂಗವನ್ನು ವಿವರಿಸುವ ರೀತಿಗಳಿಂದಾಗಿ ಆ ಕಾಲದ ಚಿತ್ರ ನನ್ನ ಕಣ್ಣ ಮುಂದೆ ಕಟ್ಟಿತ್ತು. (ಮುಂದೊಮ್ಮೆ ಗೋಕಾಕರು ಕೂಡ ಈ ನೆನಪನ್ನು ನನ್ನೊಂದಿಗೆ ಹಂಚಿಕೊಂಡಿದ್ದರು.)
ಅಂಥ ನಮ್ಮ ಮುತ್ತಜ್ಜ ಶ್ರೀಪಾದ ದೀಕ್ಷಿತರು ಆ ಕಿಲ್ಲೆಯನ್ನು ಹೊಕ್ಕರೆಂದರೆ ‘ಹೊರಗೆ ಬರುವುದು ಅದೆಷ್ತೊತ್ತಿಗೋ’ ಎಂದೆನಲ್ಲ ಆಗ. ಹೌದು. ಬಾಳಾಸಾಹೇಬರ ಜತೆಗಿನ ಅವರ ಚರ್ಚೆಯೇ ಹಾಗಿರುತ್ತಿತ್ತು. ಈ ಜಿಜ್ಞಾಸೆ ಒಮ್ಮೊಮ್ಮೆ ಸೂರ್ಯ ಕಂತುವವರೆಗೂ ಮುಂದುವರಿಯುತ್ತಿತ್ತು. ಆಗ ಶ್ರೀಪಾದ ದೀಕ್ಷಿತರನ್ನು ಅಂಗರಕ್ಷಕರು ಒಂಟಿ ಕುದುರೆಯ ಗಾಡಿಯಲ್ಲಿ ಕರೆತಂದು ಮನೆಗೆ ಮುಟ್ಟಿಸುತ್ತಿದ್ದರಂತೆ.
ಇನ್ನೂ ಮಜವಾದ ಸಂಗತಿ ಇದೆ ಕೇಳಿ, ಹೇಳುತ್ತೇನೆ : ಶ್ರೀಪಾದ ದೀಕ್ಷಿತರು ಸಂಸ್ಥಾನಿಕರಿಗೆ ‘ಗುರುಸ್ಥಾನ’ದಲ್ಲಿದ್ದರು ಎಂದೆನಲ್ಲವೆ… ಆಗೀಗ ಕಿಲ್ಲೆಯಲ್ಲಿಯೇ ಈ ಗುರುವಿನ ಪಾದಪೂಜೆಗೈದು ಗೌರವಿಸುವುದು
ಬಾಳಾಸಾಹೇಬರ ವಾಡಿಕೆ. ಆಗ ನೋಡುವಂತಿರುತ್ತಿತ್ತಂತೆ ಆ ವೈಭವ. ಬೆಳಗಿನ ಸುಮಾರು ಒಂಬತ್ತು ಗಂಟೆಯ ಹೊತ್ತಿಗೆ ಒಂದು ಕುದುರೆ ಬಂಡಿಯಲ್ಲಿ ಪಲ್ಲಕ್ಕಿ ಇಟ್ಟುಕೊಂಡು, ಅದನ್ನು ಹೊರುವ ಇಬ್ಬರು ನಮ್ಮ ಮುತ್ತಜ್ಜನ ಮನೆಯ ಎದುರು ಬಂದು ಇಳಿಯುತ್ತಿದ್ದರಂತೆ. ಜೊತೆಗೆ ಒಬ್ಬ ಪಟ್ಟೇವಾಲಾ… ಆತ ಸಂಸ್ಥಾನಿಕರ ಸಂದೇಶ ವಾಹಕ. ವಿಚಾರ ನಮ್ಮ ಮುತ್ತಜ್ಜನಿಗೆ ಮೊದಲೇ ಗೊತ್ತಿರುತ್ತಿತ್ತು. ಆದರೂ ಶಿಷ್ಟಾಚಾರ. ಆ ಪಟ್ಟೇವಾಲಾ ಒಳಗೆ ಬಂದು ನಮ್ಮ ಮುತ್ತಜ್ಜ ಕೂತಿರುತ್ತಿದ್ದ ಜಗುಲಿಯಿಂದ ದೂರವೇ ನಿಂತುಕೊಂಡು ಸಲಾಮು ಹೊಡೆಯುತ್ತಿದ್ದ. ಆಗ ನಮ್ಮ ಮನೆಯ ಯಾರಾದರೂ ಅವನ ಬಳಿ ಹೋಗಿ ಸಂದೇಶ ಪತ್ರವನ್ನು ಪಡೆದು ಅಜ್ಜನಿಗೆ ಓದಿ ಹೇಳುತ್ತಿದ್ದರಂತೆ. ಶ್ರೀಪಾದ ದೀಕ್ಷಿತರು ಆಯಿತು ಎಂದು ತಲೆಯಾಡಿಸಿ ಸನ್ನೆ ಮಾಡಿದ ಕೂಡಲೇ ಆ ಸಂದೇಶ ವಾಹಕ ಮತ್ತೊಮ್ಮೆ ಸಲಾಮು ಮಾಡಿ, ಹಿಂದಕ್ಕೆ ನಡೆದು ಆ ಮೇಲೆ ತಿರುಗಿ ಹೊರ ನಡೆಯುತ್ತಿದ್ದನಂತೆ.
ಹೊರಗೆ ಪಲ್ಲಕ್ಕಿ ತಯಾರಾಗುತ್ತಿದ್ದರೆ, ಒಳಗೆ ಮುತ್ತಜ್ಜ ತಯಾರಾಗುತ್ತಿದ್ದರು. ”ರೇಷ್ಮೆಯ ಮಡಿಯುಟ್ಟು, ಕಳಸದ ಗುರುಗೋವಿಂದ ಭಟ್ಟರಂತೆ ಶಲ್ಯವನ್ನು ಹೊದ್ದು,
ತಲೆಗೆ ಒಂದು ಪಗಡಿ ಇಟ್ಟುಕೊಂಡು, ಬೆಳ್ಳಿಯ ಹಿಡಿಯುಳ್ಳ ವಿಶೇಷವಾದ ದಂಡವನ್ನು ಹಿಡಿದು, ಕಟ್ಟಿಗೆಯ ಪಾದುಕೆಗಳನ್ನು ಧರಿಸಿ, ಮುತ್ತಜ್ಜ ಹೊರಗೆ ಬಂದರೆ ತೇಜೋಮೂರ್ತಿಯನ್ನು ಕಂಡಂತೆನಿಸುತ್ತಿತ್ತು,” ಎಂದು ಕೆಲವು ವರ್ಷಗಳ ಹಿಂದೆ ಹಿರಿಯರೊಬ್ಬರು ವರ್ಣಿಸಿದ್ದು ಇನ್ನೂ ನನಗೆ ನೆನಪಿದೆ.
ಕಿಲ್ಲೆಗೆ ಹೋಗಿ, ‘ಪಾದಪೂಜೆ’ ಮುಗಿಸಿಕೊಂಡು ಅದೇ ಪಲ್ಲಕ್ಕಿಯಲ್ಲಿ ಮನೆಗೆ ಮರಳುತ್ತಿದ್ದ ಶ್ರೀಪಾದ ದೀಕ್ಷಿತರು, ಮತ್ತೆ ಸ್ನಾನ ಮಾಡಿ, ಪುರೋಹಿತನ ದಿರಿಸು ಧರಿಸಿ ಪಾದಚಾರಿಯಾಗಿ ಕಿಲ್ಲೆಗೆ ಹೊರಡುತ್ತಿದ್ದರು. ಈ ಸಲ ಹೋಗುತ್ತಿದ್ದದ್ದು ಮಾತ್ರ ಕಿಲ್ಲೆಯ ದೇವರಿಗೆ ನೈವೇದ್ಯ ಮಾಡಿ, ಪ್ರಸಾದ ಸ್ವೀಕರಿಸಲಿಕ್ಕೆ.
ಅಲ್ಲಿಂದ ಬರುವಾಗ, ಕಿಲ್ಲೆಯಲ್ಲಿ ದಾನವಾಗಿ ಕೊಟ್ಟ ಹಣ್ಣು-ಹಂಪಲು ಮತ್ತು ದವಸ-ಧಾನ್ಯಗಳನ್ನು ದಾರಿಯಲ್ಲಿ ಸಿಗುವ ಬಡಬಗ್ಗರಿಗೆ ಹಂಚಿ ತೃಪ್ತಿಯಿಂದ ಮನೆ ಸೇರುತ್ತಿದ್ದರಂತೆ ಶ್ರೀಪಾದ ದೀಕ್ಷಿತರು.
ನಮ್ಮ ಮುತ್ತಜ್ಜ ಶ್ರೀಪಾದ ದೀಕ್ಷಿತರು
]]>


ಅಂತಹ ಚೇತನಕ್ಕೆ ಪ್ರಣಾಮಗಳು. ಇನ್ನೂ ಮುಂದುವರೆಸಿ ಗೋಪಾಲ ಸರ್.
Super write up sirji…..
ಗೋಪಾಲ್ ಸರ್,
ಲೇಖನವನ್ನು ಓದಿದ ನಂತರ ನಿಜವಾಗಿಯೂ ಶ್ರೀಮಂತ ಬಾಳಾಸಾಹೇಬ ಪಟವರ್ಧನ ಅವರು,
ಶ್ರೀ ಶ್ರೀಪಾದ ದೀಕ್ಷಿತ ವಾಜಪೇಯಿ ಅವರು, ಡಾ. ಭಡಭಡೆ , ಅವರ ಪುತ್ರ ಶ್ರೀ ಡಾ. ಎಸ್.ಎಸ್. ಭಡಭಡೆ ಇವರೆಲ್ಲರೂ ಪ್ರಾಥಃಸ್ಮರಣೀಯರು ಅನಿಸದೇ ಇರುವುದಿಲ್ಲ.
ನಿಮ್ಮ “ಸುಮ್ಮನೇ ನೆನೆಪು”ಗಳನ್ನ ಓದುತ್ತಿದ್ದರೆ ಆ ಕಾಲದಲ್ಲೇ ಇದ್ದೇವೆನೋ ಅನಿಸುತ್ತದೆ ಹಾಗೂ ಆ ಕಾಲದ ಜನರ ವಿಶಾಲ ಮನೋಭಾವದ ಬಗ್ಗೆ ತಿಳಿಯುವಂತಾಯಿತು. ನಿಮ್ಮ ಈ ಲೇಖನವು ನಮ್ಮ ಹಿರಿಯರ ಇಂತಹ ಗುಣಗಳನ್ನು ನಾವು ನಮ್ಮಲ್ಲಿ ಹುಡುಕುವಂತೆ , [ನಮ್ಮಲ್ಲಿ ಇಲ್ಲದಿದ್ದಲ್ಲಿ] ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ವಿಚಾರ ಮಾಡಲು ಪ್ರೇರೇಪಿಸುತ್ತಿದೆ.
ಧನ್ಯವಾದಗಳೊಂದಿಗೆ,
ಸುನೀಲ್.ಕೇಳ್ಕರ್