ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಲ ವಾಜಪೇಯಿ ಕಾಲಂ : ಬೆಳಕಿನ ಕೋಲಿನಂಥವರು…

ಸುಮ್ಮನೇ ನೆನಪುಗಳು – 21

ಕಳೆದ ವಾರ ಧಾರವಾಡದ ಶಿವಾಜಿ ಬೀದಿ ಅಥವಾ ಕೆರೀ ತೆಳಗಿನ ಓಣಿಯಲ್ಲಿ ನಿಮ್ಮನ್ನು ಅರ್ಧ ದಾರಿಯತನಕ ಕರೆದೊಯ್ದು ಬಿಟ್ಟಿದ್ದೆ…

ಬನ್ನಿ, ಇದೀಗ ಮುಂದುವರಿಯೋಣ.

ಈ ಬೀದಿಯ ಕೊನೆಯಲ್ಲಿ ಒಂದು ಚೌರಸ್ತೆ. ಅದನ್ನು ಕೂಟು, ಸರ್ಕಲ್ಲು ಮುಂತಾದ ಹೆಸರುಗಳಿಂದಲೂ ಕರೆಯುವುದಿದೆ. ಎಡಕ್ಕೆ ಹೊರಳಿದರೆ ಬೇಂದ್ರೆಯವರು ಮಾಸ್ತರರಾಗಿದ್ದ ವಿಕ್ಟೋರಿಯಾ (ವಿದ್ಯಾರಣ್ಯ) ಹೈಸ್ಕೂಲು. ಬಲಕ್ಕೆ ಹೊರಳಿದರೆ ಮಂಗಳವಾರ ಪೇಟೆ. ನೇರ ಸಾಗುವುದೇ ಹೆಬ್ಬಳ್ಳಿ ರಸ್ತೆ. ಇನ್ನು ಎಡಕ್ಕೆ ತಿರುಗಿದ ಕೂಡಲೇ ಮತ್ತೆ ಎಡಕ್ಕೆ ತಿರುಗಿದರೆ ಸಿಗುವ ರಸ್ತೆ ನಿಮ್ಮನ್ನು ಕಾಟನ್ ಮಾರ್ಕೆಟ್ಟಿನ ಕಡೆ ಕರೆದೊಯ್ಯುತ್ತದೆ.

ಸಮಾಜ ಪುಸ್ತಕಾಲಯವನ್ನು ದಾಟಿದ ಮೇಲೆ ಈ ‘ಚೌರಸ್ತೆ’ಗಿಂತ ಮೊದಲೇ ಬಲಕ್ಕೆ ವಾಡೆಯಂಥ ಒಂದು ಮನೆಯಿತ್ತು. ದೊಡ್ಡದಾದ ದಿಡ್ಡಿ ಬಾಗಿಲು. ಕಲ್ಲಿನ ಎತ್ತರದ ಗೋಡೆ. ಆ ಮನೆಯ ಹಿತ್ತಿಲಲ್ಲಿ ಒಂದು ದೈತ್ಯಾಕಾರದ ಬಾದಾಮು ಮರ ಮತ್ತು ಒಂದೆರಡು ಹುಣಿಸೆ ಮರಗಳು… ಎತ್ತರದ ಗೋಡೆಗಿಂತ ಎತ್ತರಕ್ಕೆ ಬೆಳೆದಿದ್ದ ಅವು ರಸ್ತೆಯಿಂದಲೇ ಕಾಣುತ್ತಿದ್ದವು. ಅತ್ತ ನೋಡಿದಾಗೆಲ್ಲ ಅವು ನಮ್ಮನ್ನೇ ಕೈಮಾಡಿ ಕರೆಯುತ್ತಿದ್ದಂತೆ ಭಾಸವಾಗುತ್ತಿತ್ತು. ಹೀಗಾಗಿ, ಆದಿತ್ಯವಾರ ಬಂತೆಂದರೆ ನಾವು ಒಂದೇ ವಯಸ್ಸಿನ, ‘ಮಂಗ್ಯಾ’ನಂಥ ಐದಾರು ಹುಡುಗರು ಅಲ್ಲಿ ಕಾಮಿ ಬೆಕ್ಕಿನ ಹಾಗೆ ಸುತ್ತುತ್ತಲೇ ಇರುತ್ತಿದ್ದೆವು.

ಆ ಕಾಯಿಗಳ ಮೋಹವೇ ಅಂಥದು. ಬೈಸಿಕೊಂಡಾದರೂ ಸರಿ, ಬಿಗಿಸಿಕೊಂಡಾದರೂ ಸರಿ… ಒಟ್ಟು ಒಂದಷ್ಟು ಹುಣಿಸೆ ಕಾಯಿಗಳನ್ನೋ ಬಾದಾಮು ಕಾಯಿಗಳನ್ನೋ ಲಪಟಾಯಿಸಬೇಕು… ಅದು ನಮ್ಮ ಏಕೈಕ ಗುರಿ.

ಆದರೆ ಅಲ್ಲೊಂದು ತೊಂದರೆಯಿತ್ತು. ಆ ಕಟಾಂಜನದ ಮನೆಯ ಎದುರಲ್ಲಿ, ಅಂದರೆ ರಸ್ತೆಯ ಎಡಕ್ಕೆ, ಇನ್ನೊಂದು ದೊಡ್ಡ ಮನೆ. ಅದಕ್ಕೂ ದೊಡ್ಡ ತಲೆಬಾಗಿಲು. ಅದನ್ನು ದಾಟಿದ ಮೇಲೆ ಒಂದು ಕಲ್ಲು ಫರಸಿಯ ಅಂಗಳ. ಅದರಾಚೆ ಕಟಾಂಜನ. ಅದರ ಹಿಂದೆ, ಆರಾಮ ಕುರ್ಚಿಯಲ್ಲಿ ಮುದುಕರೊಬ್ಬರು ಪುಸ್ತಕವನ್ನು ಓದುತ್ತಲೋ, ಇಲ್ಲ ವರ್ತಮಾನಪತ್ರದ ಮೇಲೆ ಕಣ್ಣಾಡಿಸುತ್ತಲೋ ಒರಗಿಕೊಂಡಿರಬೇಕು… ನಾವು ಕಳ್ಳ ಹೆಜ್ಜೆ ಇಟ್ಟು ಮುಂದೆ ಸಾಗುವುದಕ್ಕೂ ಅವರು ಬದಿಯಲ್ಲಿದ್ದ ಬೆತ್ತವನ್ನು ನೆಲಕ್ಕೆ ಬಡಿಯುವುದಕ್ಕೂ ಸರಿ ಹೋಗುತ್ತಿತ್ತು. ಹೀಗಾಗಿ, ಎಷ್ಟೇ ಪ್ರಯತ್ನ ಮಾಡಿದರೂ ನಾವು ‘ಸಫಲ’ರಾಗಲೇ ಇಲ್ಲ…

ಕನಸು ನನಸಾಗಿಸಿಕೊಳ್ಳುವ ನಮ್ಮ ಯತ್ನಕ್ಕೆ ಯಾರಾದರೂ ಕಲ್ಲು ಹಾಕಿದರೆ ಕೋಪ ಬರದೇ ಇರುತ್ತದೆಯೇ?

-0-0-0-

ಆ ದಿನ ಸಮಾಜ ಪುಸ್ತಕಾಲಯದ ಎದುರಿನ ಚಾಳಿನಲ್ಲಿದ್ದ ತಮ್ಮಣ್ಣ ಮಾಮಾನ ಮನೆಯಲ್ಲೇನೋ ಧಾರ್ಮಿಕ ಕಾರ್ಯ. ಊಟ ಸ್ವಲ್ಪ ತಡವಾಗಿದ್ದರಿಂದ ಸಾಲೆಗೆ ಹೋಗುವುದೂ ತಡವೇ ಆಯಿತು. ಆದರೂ ಅವಸರಿಸಿಕೊಂಡು, ತಮ್ಮಣ್ಣ ಮಾಮಾನ ಜೊತೆ ಸಾಲೆಗೆಂದು ಮನೆಯಿಂದ ಹೊರಬೀಳುವುದಕ್ಕೂ, ನಮಗೆ ಅಡ್ಡಗಾಲಾಗಿದ್ದ ಆ ಮುದುಕಪ್ಪ ಬರುವುದಕ್ಕೂ ಸರಿಹೋಯಿತು. ತಮ್ಮಣ್ಣ ಮಾಮಾ ಆ ಮುದುಕಪ್ಪನಿಗೆ ನಮಸ್ಕರಿಸಿದ. ಅವರೂ ಪ್ರತಿ ನಮಸ್ಕಾರ ಮಾಡುತ್ತಾ ನನ್ನತ್ತಲೇ ನೆಟ್ಟಗಣ್ಣಿಂದ ನೋಡುತ್ತಿದ್ದರು. ನನಗೋ ಒಳಗೊಳಗೇ ಅಂಜಿಕೆ. ನೆಲ ನೋಡುತ್ತ ನಿಂತುಬಿಟ್ಟೆ. ಅವರಿಬ್ಬರೂ ಅದೇನು ಮಾತಾಡಿಕೊಂಡರೋ ಗೊತ್ತಾಗಲಿಲ್ಲ. ನಡುವೆ ಒಂದೆರಡು ಸಲ ಅವರಿಬ್ಬರೂ ‘ನನ್ನ ಕಡೆಯೇ’ ನೋಡಿ ಮಾತಾಡಿದಂತೆ ಭಾಸ. ‘ಕಳ್ಳನ ಜೀವ ಹುಳ್ಳುಳ್ಳಗೆ’ ಅಂತಾರಲ್ಲಾ ಹಾಗೆ. ಆ ನಂತರ ಆ ಮುದುಕಪ್ಪ ‘ಸಂಸ್ಕೃತ ಪಾಠಶಾಲೆ’ಯ (ಇದಕ್ಕೀಗ 125 ವರ್ಷಗಳು.) ದಿಕ್ಕಿನಲ್ಲಿ ಮುನ್ನಡೆದು ಮಾಯವಾದರು. ನಾವು ಮತ್ತೊಂದು ದಿಕ್ಕಲ್ಲಿದ್ದ ಸಾಲೆಯ ಹಾದಿ ಹಿಡಿದೆವು.

ಆದರೂ ನನಗೆ ಆ ಮುದುಕಪ್ಪನದೇ ‘ಧ್ಯಾನ’…

ಕಣ್ಣು ಕುಕ್ಕುವಂಥ ಶುಭ್ರ ಬಿಳಿ ಧೋತರ, ಅಷ್ಟೇ ಬಿಳಿದಾದ ತುಂಬು ತೋಳಿನ ಶರ್ಟು. ಎಡಗಡೆಯ ಭುಜದ ಮೇಲೆ ಒಂದು ನಸು ನಸ್ಯದ ಬಣ್ಣದ ಕುಸುರು ಕಸೂತಿಯ ಶಾಲು, ಬಲದ ಭುಜಕ್ಕೆ ನೇತುಬಿದ್ದ ಬಗಲು ಚೀಲ; ಮೋಪಾಗಿ ಶೇವ್ ಮಾಡಿದ ತೇಜಸ್ವೀ ಮುಖ, ಮತ್ತು ಬೆಳ್ಳಿಗೂದಲನ್ನು ನೀಟಾಗಿ ಬಾಚಿ ಎಡಕ್ಕೆ ತೆಗೆದ ಬೈತಲೆ ; ಎದೆಗೆ ಅಮಚಿಕೊಂಡ ಬಲಗೈ, ಅದರಲ್ಲಿ ಒಂದಷ್ಟು ಪುಸ್ತಕಗಳು… ಕಾಲ್ಮರಿಯಿಂದ ಹಿಡಿದು ಶಾಲು-ಚೀಲಗಳ ತನಕ ಎಲ್ಲವೂ ದೇಸಿ, ಎಲ್ಲವೂ ‘ಶುದ್ಧ’ ಖಾದಿ.

ಯಾಕೋ ಏನೋ, ಅವತ್ತೇ ಅಷ್ಟು ಹತ್ತಿರದಿಂದ, ಆ ದಿರಿಸಲ್ಲಿ ನೋಡಿದ್ದ ನನಗೆ ಆ ಮುದುಕಪ್ಪ ‘ನಾವು ತಿಳಿದಷ್ಟು ಸಿಟ್ಟಿನ ವ್ಯಕ್ತಿಯಲ್ಲ,’ ಎಂದೆನಿಸತೊಡಗಿತು.

-0-0-0-

ಮರುದಿನ ಸಾಲೆಗೆ ಸೂಟಿ. ಏನು ಕಾರಣವೋ ನೆನಪಿಲ್ಲ. ಸೂಟಿ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ? ನಮ್ಮಂಥ ಹುಡುಗರಂತೂ ಸೂಟಿಯ ದಿನ ಸಿಕ್ಕಾಪಟ್ಟೆ ಬೀಜಿ. ಅದಾಗಲೇ ನಮ್ಮ ದಂಡು ‘ದಂಡಯಾತ್ರೆ’ ಹೊರಡಲು ‘ರಿಸ್ಬೂಡ್ ಚಾಳ್’ನ ದ್ವಾರದೆದುರೇ ಸಿದ್ಧವಾಗಿ ನಿಂತಿತ್ತು…

ಅಷ್ಟರಲ್ಲೇ ದೂರದಿಂದ ‘ಬೆಳಕಿನ ಕೋಲಿನಂಥ’ ಆ ಅಜ್ಜ ನಡೆದು ಬರುತ್ತಿರುವುದು ಕಾಣಿಸಿತು.

”ವಾಹ್… ಇವತ್ ಬೇಕಾದಷ್ಟು ಬಾದಾಮ್ ಕಾಯಿ, ಹುಣಸೀ ಕಾಯಿ ಹರಕೋಬಹುದು ನೋಡು…” ಎಂದ ಕುಲಕರ್ಣಿ ಗುಂಡ್ಯಾ.

”ಹೌದ ಬಿಡು… ಆ ಅಜ್ಜನ ಕಾಟ ಇರೂದಿಲ್ಲಲ್ಲೋ…” ಪಡಸಲಿಗಿ ಪಲ್ಯಾ ಕುಣಿಯುತ್ತ ಹೇಳಿದ.

ಅಷ್ಟರಲ್ಲೇ ಆ ಅಜ್ಜ ನಮ್ಮತ್ತಲೇ ನೋಡುತ್ತ ಸಮೀಪವೇ ಬಂದುಬಿಟ್ಟರು.

ತಗೋ… ದಂಡು ಬೆದರಿತು, ಚೆದರಿತು… ನಾನು ಮಾತ್ರ ಅದೇನೋ ಗಟ್ಟಿ ಧೈರ್ಯ ಮಾಡಿಕೊಂಡು ಚಾಳಿನ ದ್ವಾರದಲ್ಲೇ ನಿಂತಿದ್ದೆ.

ಅವರು ಸಮೀಪವೇ ಬಂದರು. ನಾನಲ್ಲೇ ನಿಂತಿದ್ದೆ. ನನ್ನೆದುರೇ ನಿಂತರು. ಅದೇನು ಮಾಡುತ್ತಾರೋ ಎಂಬ ಅಳುಕಿನೊಂದಿಗೆ ಸುಮ್ಮನೆ ನಿಂತೆ.

”ಬಾ ಇಲ್ಲೆ…” ಎಂದರು. ಆ ದನಿಯಲ್ಲಿ, ಕಣ್ಣಲ್ಲಿ ಅಷ್ಟೇ ಏಕೆ ಇಡೀ ಶರೀರದಲ್ಲಿ ಪ್ರೀತಿಯೇ ತುಂಬಿದೆ ಎನಿಸಿತು. ಮೋಡಿಗೊಳಗಾದವರಂತೆ ಅವರ ಬಳಿ ಸರಿದೆ. ಎಡಗೈಗೆ ಪುಸ್ತಕಗಳನ್ನು ದಾಟಿಸಿದ ಆ ಅಜ್ಜ ನನ್ನ ಬೆನ್ನ ಮೇಲೊಮ್ಮೆ ಕೈ ಆಡಿಸಿದರು. ಕೆನ್ನೆ ತಟ್ಟಿದರು. ತಲೆಸವರಿದರು. ”ಶಾಣ್ಯಾ ಆಗಬೇಕು…ತಿಳೀತs…?” ಎಂದವರೇ, ನಗುನಗುತ್ತಲೇ ಮತ್ತೆ ಬಲಗೈಗೆ ಪುಸ್ತಕಗಳನ್ನು ದಾಟಿಸಿ, ಎದೆಗೆ ಅಮಚಿ ಹಿಡಿದುಕೊಂಡು, ಎಂದಿನಂತೆ ನೆಟ್ಟಗೆ ನಡೆಯುತ್ತ ಹೋಗಿಬಿಟ್ಟರು.

ಆ ಕೂಡಲೇ ನನಗೆ ಅವರ ಬಗೆಗಿದ್ದ ಎಲ್ಲ ಪೂರ್ವಾಗ್ರಹಗಳೂ ನಶಿಸಿ ಹೋದವು. ಅದೇ ಹೊತ್ತಿಗೆ, ಅವರ ಕೈಯ ಸ್ಪರ್ಶದ ಜೊತೆ ಅದಕ್ಕಂಟಿದ್ದ ನಶ್ಯದ ವಾಸನೆಯೂ ಪ್ರಿಯವೆನಿಸತೊಡಗಿತು.

ಹೌದು… ಅವರು ಮೈಯೆಲ್ಲಾ ಮಿಂಚು ತುಂಬಿಕೊಂಡ ಒಂದು ಬೆಳಕಿನ ಕೋಲು…!

ಒಂದಿನಿತೂ ಬಾಗದ, ಬೀಗದ ಆತ್ಮೀಯತೆಯ ಮೂರ್ತಿ…

ಅಂದಿನಿಂದ ಅವಕಾಶ ಸಿಕ್ಕಾಗಲೆಲ್ಲ ಆ ಬೆಳಕಿನ ಕೋಲಿನ ‘ಬರುವಿಕೆ’ಗಾಗಿ, ಆ ಅಂತಃಕರಣದ ‘ಸ್ಪರ್ಶ’ಕ್ಕಾಗಿ ಕಾಯುತ್ತ ನಿಂತುಕೊಳ್ಳುತ್ತಿದ್ದೆ…

-0-0-0-

ಅವತ್ತು ಅವರು ಹಾಗೆ ಬೆನ್ನು ತಟ್ಟಿ, ಕೆನ್ನೆ ಮುಟ್ಟಿ, ತಲೆ ಸವರಿ ಹೋದರಲ್ಲ… ಆಮೇಲೆ ನನ್ನನ್ನು ಮುತ್ತಿಕೊಂಡಿತು ಗೆಳೆಯರ ಗುಂಪು. ಬಹುಶಃ ಅವರು ನನ್ನನ್ನು ಬೈದಿರಬೇಕು, ಬೆದರಿಸಿರಬೇಕು, ಕೆನ್ನೆ ಹಿಂಡಿರಬೇಕು ಎಂಬೆಲ್ಲ ಗುಮಾನಿಗಳು ಗೆಳೆಯರಿಗೆ. ಅದಕ್ಕೇ ನನ್ನನ್ನು ಕಾಲುಗುರಿನಿಂದ ತಲೆಗೂದಲಿನ ತನಕ ‘ಪರೀಕ್ಷಕ ದೃಷ್ಟಿ’ಯಿಂದ ನೋಡಿಯೇ ನೋಡಿದರು.

ನಾನು ನಿಂತ ಹಾಗೆಯೇ ನಿಂತಿದ್ದೆ.

ಕೊನೆಗೆ ಪಾಟೀಲ ದುರ್ವ್ಯಾ (ಧ್ರುವ ಅವನ ಹೆಸರು), ”ನಿನಗ ಖರೇನs ಆ ಮುದಕಪ್ಪಾ ಏನೂ ಮಾಡ್ಲಿಲ್ಲs?” ಎಂದು ಕೇಳಿಯೇಬಿಟ್ಟ…

ನನಗೆ ಸಿಟ್ಟು ತಡೆಯಲಾಗಲಿಲ್ಲ. ”ಇನ್ನೊಮ್ಮೆ ಅವರಿಗೆ ‘ಮುದಕಪ್ಪಾ, ಗಿದಕಪ್ಪಾ’ ಅಂದಿ ಅಂದ್ರ ನಿನ್ ಕಪಾಳ ಗೆಡ್ಡೀ ಕೆಂಪಗ ಮಾಡ್ತೀನಿ ಮಗನs…” ಅಂದೆ…

”ಅವರಿಗೆ ಮುದಕಪ್ಪಾ ಅಂದ್ರ ನಿನಗ್ಯಾಕ ಸಿಟ್ಟು ಬರಬೇಕಪಾ…? ಅವರೇನು ನಿಮ್ಮಜ್ಜೇನು…?” ದೇಶಪಾಂಡೆ ವಕೀಲರ ಮಗ ಅಶ್ಕ್ಯಾ(ಅಶೋಕ) ಕೆದಕಿದ.

”ಹೌದ್ ನೋಡು… ಅವರು ನನ್ನಜ್ಜನs…”

”ಅಜ್ಜಂತಜ್ಜಾ… ಅಜ್ಜನs ಆಗಿದ್ರ ನಿನ್ನ ಅಡ್ಡೆಸರು ‘ವಾಜಪೇಯಿ’ ಅಂತ ಯಾsಕದಪಾ…? ‘ಬೆಟಗೇರಿ’ ಅಂತಿರಬೇಕಾಗಿತ್ತು…” ಅಂತ ಒಗ್ಗರಣೆ ಹಾಕಿದ ಕುಲಕರ್ಣಿ ಗುಂಡ್ಯಾ.

ಈ ಪ್ರಶ್ನೆಗೆ ನಾನು ನಿರುತ್ತರನಾಗಿದ್ದೆ. ಅವರೊಂದಿಗೇನು ಮಾತು ಎಂಬಂತೆ ಸುಮ್ಮನೆ ಚಾಳಿನೊಳಗೆ ನಡೆದುಬಿಟ್ಟೆ.

ಅವರು ಅದೇನೇನೋ ಚೇಷ್ಟೆ ಮಾಡುತ್ತ, ಬಾಯಿಗೆ ಬಂದಂತೆ ಮಾತಾಡುತ್ತ ಆ ಬಾದಾಮು ಮರದ ಮನೆಯ ಕಡೆ ಹೆಜ್ಜೆ ಹಾಕಿದರು.

ಅಂದೇ ನಾನು ಅವರೊಂದಿಗೆ ‘ಚಾಳೀ ಟೂ’ ಬಿಟ್ಟು ಬಿಟ್ಟೆ…

-0-0-0-

ಮರುದಿನ ಸಾಲೆಗೆ ಹೋಗುವಾಗ ನಾನು ತಮ್ಮಣ್ಣ ಮಾಮಾನನ್ನು ಕೇಳಿದೆ – ”ಮನ್ನೆ ನಾವು ತಡಾ ಮಾಡಿ ಸಾಲಿಗೆ ಹೋಗೂ ಮುಂದ ನೀ ಯಾರಿಗ್ಯೋ ನಮಸ್ಕಾರಾ ಮಾಡಿದೆಲ್ಲಾ… ಯಾರಪಾ ಅವರು…?”

”ಅಲ್ಲೆ ಎಡಕ್ಕ ಇರತಾರ, ಆ ಯಜಮಾನ್ರು… ಅವರ್ನs ಹೌದಲ್ಲೋ ನೀ ಕೇಳೂದು…?”

”ಹೂಂ… ಅವರ್ನs…”

”ಅವರು ಬೆಟಗೇರಿ ಕೃಷ್ಣಶರ್ಮಾ ಅಂತ… ಧೊಡ್ಡ ಕವಿಗ್ಳು… ಕಥೀ ಕಾದಂಬರೀನೂ ಬರದಾರ…” ಎನ್ನುತ್ತ ಭರಭರನೆ ಹೆಜ್ಜೆ ಹಾಕಿದ ತಮ್ಮಣ್ಣ ಮಾಮಾ…

‘ಓಹೋ…ಅದಕs ಆ ನನ ಮಗಾ ಗುಂಡ್ಯಾ ಹಂಗ ಹಂಗಿಸಿದ್ದು…’ ಎಂದುಕೊಳ್ಳುತ್ತ ಬೀಸು ಹೆಜ್ಜೆ ಹಾಕುತ್ತಿದ್ದ ತಮ್ಮಣ್ಣನ ಹಿಂದೆ ಓಡತೊಡಗಿದೆ.

-0-0-0-

ಕೇವಲ ಮುಖ, ದೇಹಾಕೃತಿಗಳ ಮೇಲೆ ಯಾರೊಬ್ಬರನ್ನೂ ‘ಇವರು ಹೀಗೇ…’ ಅಂತ ಭಾವಿಸಿಕೊಂಡುಬಿಡುವುದು ತಪ್ಪು ಎಂದು ಆಗಲೇ ಮನವರಿಕೆಯಾಗಿಬಿಟ್ಟಿತು. ಅವರು ‘ಧೊಡ್ಡ’ ಕವಿಗಳು ಎಂದು ಕೇಳಿದ ಮೇಲಂತೂ ನನಗೆ ಆ ಅಜ್ಜನ ಬಗ್ಗೆ ಇನ್ನಷ್ಟು ಮತ್ತಷ್ಟು ಗೌರವಭಾವ.

ಮುಂದೊಮ್ಮೆ ನಮ್ಮ ಮನೆಯ ಸಮೀಪದ ಒಂದು ಸಭೆಯಲ್ಲಿ ಹುಕ್ಕೇರಿ ಬಾಳಪ್ಪನವರ ಕಾರ್ಯಕ್ರಮ. ಒಂದೆರಡು ಹಾಡುಗಳಾದ ಮೇಲೆ ಬಾಳಪ್ಪನವರು, ”ಈಗ ನಾವು-ನೀವು ಸಂತಿಗೆ ಹೋಗೂಣು ಬರ್ರಿ. ಅಕಿ ಬೆಣ್ಣಿ ತಂದಿರತಾಳು…” ಎಂದು ನಕ್ಕರು. ”ನಮ್ಮ ಕವಿ ಬೆಟಗೇರಿ ಕೃಷ್ಣಶರ್ಮರು ಎಷ್ಟ ಗಮ್ಮತ್ತಿಲೆ ವರ್ಣಿಸ್ಯಾರ ನೋಡ್ರಿ ಆ ಸಂತೀನ…” ಎಂದವರೇ, ‘ನಾ ಸಂತೀಗೆ ಹೋಗಿನ್ನಿ… ಅಕಿ ತಂದಿದ್ದಳೋ ಬೆಣ್ಣಿ…’ ಎಂಬ ಹಾಡನ್ನು ಪ್ರತಿ ಸಾಲಿಗೂ ತಮ್ಮದೇ ಧಾಟಿಯ ವಿವರಣೆಯೊಂದಿಗೆ ಪ್ರಸ್ತುತಪಡಿಸಿದ್ದರು.

ಆ ‘ಬೆಣ್ಣಿಯ ಹಾಡು’ ಕೇಳಿದ ಮೇಲಂತೂ ನಾನು ಆ ಬೆಣ್ಣೆಯಂಥ ಮನಸ್ಸಿನ ಹಿರಿಯನಿಂದ ದೂರ ಇರಲು ಆಗಲೇ ಇಲ್ಲ.

ಆ ವಯಸ್ಸಿನಲ್ಲಿ ನನಗೊಂದು ವಿಚಿತ್ರ ರೀತಿಯ ಧೈರ್ಯ ಬಂದುಬಿಟ್ಟಿತ್ತು. ಅವರು ಎಷ್ಟೇ ದೊಡ್ಡವರಿರಲಿ, ನನ್ನ ಬಗ್ಗೆ ಏನಾದರೂ ಅಂದುಕೊಳ್ಳಲಿ, ನನ್ನ ವರ್ತನೆ ಉದ್ಧಟತನದ್ದು ಎಂದಾದರೂ ಭಾವಿಸಲಿ… ಅವರ ಬಳಿ ಹೋಗಿ ನನಗೆ ಏನು ಕೇಳಬೇಕೆನ್ನಿಸುತ್ತದೋ ಅದನ್ನು ಕೇಳಿಬಿಡುವುದು.

ಆ ಧೈರ್ಯದಿಂದಲೇ ನಾನು ಬೆಟಗೇರಿ ಅಜ್ಜನ ಮನೆಗೆ ಹೋದೆ. ಆ ದಿಡ್ಡೀ ಬಾಗಿಲಿನ ಬಳಿ ನಿಂತು ಮೆಲ್ಲನೇ ಇಣುಕಿದೆ. ಅವರು ಅವತ್ತು ಆರಾಮ ಕುರ್ಚಿಯಲ್ಲಿ ಆ ಕಡೆ ಮುಖ ಮಾಡಿ ಕೂತಿದ್ದರು. ನಾನು ಇಣುಕುವುದಕ್ಕೂ ಅವರು ನೆಲಕ್ಕೆ ‘ಪಟ್’ ಅಂತ ಬೆತ್ತ ಬಡಿಯುವುದಕ್ಕೂ ಸರಿಹೋಯಿತು. ನಾನು ಬೆದರಿ ಹಿಂದೆ ಸರಿದುಬಿಟ್ಟೆ. ಅಲ್ಲಾ… ಆ ಕಡೆ ಮುಖ ಮಾಡಿ ಕೂತಿರುವ ಅವರು, ನಾನು ಬಂದದ್ದನ್ನು ನೋಡಿಯೂ ಇಲ್ಲ. ಆದರೂ ಯಾಕೆ ಬೆತ್ತ ಬಡಿದರು…? ಸ್ವಲ್ಪ ಯೋಚಿಸಿದೆ. ಅಷ್ಟರಲ್ಲೇ ಅವರು, ”ಸುರೇಶಾ… ಬೆಕ್ ಬಂದಿರಬೇಕು ನೋಡು ಒಳಗ… ಕಿಡಕಿ ಹಾಕ್ಯಾರೋ ಇಲ್ಲೋ ನೋಡು…” ಎಂದು ಕೂಗಿ ಹೇಳಿದರು.

ಓಹ್… ಬೆತ್ತ ಬಡಿದದ್ದು ಕಳ್ಳ ಬೆಕ್ಕು ಓಡಿಸಲು… (ಅಂದರೆ, ಅವರು ಬೆತ್ತ ಹಿಡಿದು ಕೂಡುವುದೇ ಬೆಕ್ಕನ್ನು ಬೆದರಿಸಲು…)

ನಾನು ಮತ್ತೆ ಕತ್ತು ಚಾಚಿ ಇಣುಕಿ ನೋಡತೊಡಗಿದೆ. ಅಜ್ಜ ನನ್ನ ಕಡೆ ನೋಡಿದರೆ ‘ಒಳಗೆ ಬರಲಪ್ಪಣೆಯೇ’ ಎಂದು ಕೇಳಿದರಾಯಿತು…

ಅಷ್ಟರಲ್ಲೇ ಸುರೇಶ ಬೆಟಗೇರಿ (ಕೃಷ್ಣಶರ್ಮರ ಮಗ) ಹೊರಗೆ ಬಂದವರು ನನ್ನತ್ತ ನೋಡಿ, ”ಏ… ಯಾರವ್ರು…” ಎಂದು ಗದರಿಸಿದರು.

”ಯಾರೋ…?” ಎಂದು ಅಜ್ಜ ಬಾಗಿಲೆಡೆ ತಿರುಗಿದರು. ನಾನು ಪೆದ್ದು ನಗೆ ನಕ್ಕೆ.

”ಬಾ ಬಾ, ಒಳಗ ಬಾ…” ಎಂದರು.

ಅವರ ಬಳಿ ಹೋಗಿ ಕುಳಿತೆ. ಸುರೇಶ ಬೆಟಗೇರಿ ನನ್ನನ್ನೇ ನೋಡುತ್ತಿದ್ದರು. ಅಜ್ಜ ಅದನ್ನು ಗಮನಿಸಿದರೇನೋ…

”ಆ ಸದರಜೋಶಿ ಮಾಸ್ತsರಿದ್ದಾರಲ್ಲಾ… ಅವರ ತಂಗೀ ಮಗಾ…” ಎಂದು ಮಗನಿಗೆ ಹೇಳಿದರು.

ನಂತರದ ದಿನಗಳಲ್ಲಿ ನಾನು ಅವರ ಮನೆಯಲ್ಲಿ ಅದೆಷ್ಟು ಸಲ ಹೋಗಿ ಕುಳಿತೆನೋ…

ಅಂತೂ ಬೆಟಗೇರಿ ಅಜ್ಜ ನನ್ನ ಮನಸ್ಸಿನಲ್ಲಿ ಕುಳಿತುಬಿಟ್ಟರು.

-0-0-0-

ಇಷ್ಟೆಲ್ಲಾ ಆದರೂ, ನನಗೆ ‘ಬೆಟಗೇರಿ ಅಜ್ಜ ದಿನವೂ ಆ ಹೊತ್ತಿನಲ್ಲಿ, ಸಾಲಿಗೆ ಹೋಗುವ ಹುಡುಗನ ಹಾಗೆ ಅಷ್ಟು ‘ತಯಾರಾಗಿ’ ಹೋಗುತ್ತಾರಾದರೂ ಎಲ್ಲಿಗೆ?’ ಎಂಬ ಕುತೂಹಲ. ಇಂಥ ಕುತೂಹಲಗಳನ್ನು ತೀರಿಸಿಕೊಳ್ಳುತ್ತಿದ್ದದ್ದು ಸಾಲೆಗೆ ಸೂಟಿ ಇದ್ದ ದಿನವೇ. (ಇಂಥ ಕುತೂಹಲಗಳನ್ನು ತೀರಿಸಿಕೊಳ್ಳಲೆಂದೇ ಸಾಲೆಗೆ ಸೂಟಿ ಕೊಡುತ್ತಿದ್ದರೋ ಏನೋ…)

ಅವತ್ತು ಅಲ್ಲೆಲ್ಲೋ ಏನೋ ಗಲಭೆಯಾಗಿದೆ ಎಂಬ ಕಾರಣಕ್ಕೆ ನಮಗೆ ಸೂಟಿ ಸಿಕ್ಕಿತ್ತು.

ಅಜ್ಜ ಹೊರಡುವ ಹೊತ್ತಿಗೆ ನಾನು ಚಾಳಿನ ಬಾಗಿಲ ಮರೆಯಲ್ಲಿ ನಿಂತೆ.

ಎಂದಿನಂತೆ ಅವರು ರಸ್ತೆಯ ಎಡ ಅಂಚಿನ ಗುಂಟ ನೆಟ್ಟಗೆ ನಡೆಯುತ್ತ ಹೊರಟರು.

ನಾನು ‘ನಕ್ಷತ್ರಿಕ’ನಾದೆ.

ಅವರು ಶಿವಾಜಿ ಬೀದಿಯ ಆರಂಭ ಬಿಂದುವಿನಲ್ಲಿ ಎಡಕ್ಕೆ ತಿರುಗಿದರು. ‘ಗಾಂಧೀ ಚೌಕ’ದಿಂದ ಮತ್ತೆ ಬಲಕ್ಕೆ ಹೊರಳಿ ರಸ್ತೆಯ ಬಲ ಅಂಚಿನ ಗುಂಟ ಒಂದಷ್ಟು ಹೆಜ್ಜೆ ನಡೆದು, ನಿಂತರು. ಅಲ್ಲಿದ್ದ ದತ್ತಾತ್ರೇಯ ಮಂದಿರಕ್ಕೆ ಒಂದು ನಮಸ್ಕಾರ ಹಾಕಿ, ಎರಡು ಹೆಜ್ಜೆಗಳ ನಂತರದ ಹಾಲಗೇರಿ ಹಣಮಪ್ಪನಿಗೂ ವಂದಿಸಿ ಹೊರಟರು.

ಹಾಗೇ ಹಳೆ ಬಸ್ ನಿಲ್ದಾಣದ ತನಕ ಸಾಗಿದ ಅಜ್ಜ ಬಲಗಡೆಯ ಫುಟ್ ಪಾತ್ ಏರಿದರು.

ಬಸ್ ನಿಲ್ದಾಣದ ಎದುರಿಗೆ ಒಂದು ದುಮ್ಮಜಲಿನ ಕಟ್ಟಡ. ಅಲ್ಲೆಲ್ಲ ಯಾವ್ಯಾವುದೋ ಅಂಗಡಿ ಸಾಲು. ಜನಸಂಚಾರ ಜಾಸ್ತಿ ಇದ್ದುದರಿಂದ ನನಗೂ ಅವರಿಗೂ ನಡುವಿನ ಅಂತರ ಜಾಸ್ತಿಯಾಯಿತು. ಆ ಗುಂಪಿನಲ್ಲಿ ಬರೀ ಅವರ ನಸು ನಸ್ಯದ ಬಣ್ಣದ ಶಾಲು ಮಾತ್ರ ಕಾಣುತ್ತಿತ್ತು. ಅದನ್ನೇ ಗುರುತಿಟ್ಟುಕೊಂಡು ನಾನು ಹೊರಟರೆ, ಅವರು ಬಲಕ್ಕೆ ತಿರುಗಿ ಮೆಟ್ಟಿಲುಗಳನ್ನೇರಿದಂತೆ ಕಂಡಿತು. ಅಲ್ಲಿ ಹೋಗುವುದರೊಳಗೆ ಅವರು ‘ಮಾಯ’ವಾಗಿದ್ದರು.

ಇಲ್ಲಿ ಎಲ್ಲಿಗೆ ಹೋಗಿರಬಹುದು ಅವರು? ಎಂದು ಮೇಲಕ್ಕೆ ತಲೆ ಎತ್ತಿದರೆ ಕಂಡಿತು ದೂಳಿನಿಂದ ಮಾಸಿ ಹೋದ ‘ಜಯಂತಿ ಪತ್ರಿಕೆ’ ಎಂಬ ಹಳೆಯ ಫಲಕ.

ಮುಂದೆ ನನಗೆ ಗೊತ್ತಾದ ವಿಷಯವೆಂದರೆ ಬೆಟಗೇರಿಯವರು ಈ ‘ಜಯಂತಿ’ ಎಂಬುದು ಅವರು ಸಂಪಾದಿಸಿ ಪ್ರಕಟಿಸುತ್ತಿದ್ದ ಮಾಸಪತ್ರಿಕೆ. ಕನ್ನಡ, ಕರ್ನಾಟಕಗಳ ಹಿತಸಂಬಂಧಿಯಾದ ಲೇಖನಗಳಲ್ಲದೆ, ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸುವ ಸಂಪಾದಕೀಯ ಲೇಖನಗಳಿಂದಾಗಿ ‘ಜಯಂತಿ’ ಆಗ ಪ್ರಸಿದ್ಧಿ ಪಡೆಯಿತು. ಅವರ ಬಹುತೇಕ ಕೃತಿಗಳು ಮೊದಲು ಈ ಪತ್ರಿಕೆಯ ಮೂಲಕವೇ ಬೆಳಕು ಕಂಡವು. ಅದನ್ನವರು ಅನೇಕ ಬಗೆಯಿಂದ ಆಕರ್ಷಕವಾಗಿ ಮಾಡಲು ಬಹುವಾಗಿ ಶ್ರಮಿಸಿದರು. ಕನ್ನಡದ ಆಗಿನ ಲೇಖಕರೆಲ್ಲರ ಕಥೆ, ಕವನ, ವೈಚಾರಿಕ ಲೇಖನಗಳು ‘ಜಯಂತಿ’ಯಲ್ಲಿ ಬೆಳಕು ಕಂಡವು. 1938 ರಿಂದ 1961ರ ತನಕ ಇಪ್ಪತ್ತೊಂದು ವರ್ಷಗಳ ಕಾಲ ಈ ಪತ್ರಿಕೆಯನ್ನು ಬೆಟಗೇರಿಯವರು ಬಹು ಯಶಸ್ವಿಯಾಗಿ ನಡೆಸಿದರು.

(ಅದು ನಿಂತು ಹೋಗಿ ಮೂರು ವರ್ಷಗಳಾಗಿ ಹೋಗಿದ್ದರೂ, ಆ ನಂತರವೂ ಅವರು ಆ ಕಚೇರಿಗೆ ಯಾಕೆ ಹೋಗುತ್ತಿದ್ದರೋ…)

-0-0-0-

ಮನೆಯ ಪರಿಸ್ಥಿತಿಯಿಂದಾಗಿ, ನನಗೆ ಇಪ್ಪತ್ತನೆಯ ವಯಸ್ಸಿಗೇ ನೌಕರಿ ಹಿಡಿಯುವುದು ಅನಿವಾರ್ಯವಾಯಿತು. ಅಲ್ಲಿ-ಇಲ್ಲಿ ಅರ್ಜಿ ಗುಜರಾಯಿಸಿದೆನಾದರೂ ವಶೀಲಿ, ಶಿಫಾರಸು ಯಾವುದೂ ಇಲ್ಲದವನಿಗೆ ಕೆಲಸ ಸಿಗುವುದು ಕಷ್ಟ ಎಂಬ ಸತ್ಯ ಬೇಗನೆ ಅರಿವಿಗೆ ಬಂತು. ಕೊನೆಗೆ ಕೈಹಿಡಿದದ್ದು ಕನ್ನಡವೇ. ಕತೆ-ಕವನ-ಅನುವಾದ ಅಂತ ಅಷ್ಟು ಇಷ್ಟು ಬರೆಯುತ್ತಿದ್ದೆನಲ್ಲ, ಒಂದು ಸಣ್ಣ ಪತ್ರಿಕೆಯವರು ಅವಕಾಶ ಕೊಟ್ಟರು. ಅಲ್ಲಿಂದ ಶುರುವಾದ ಪತ್ರಿಕಾ ವೃತ್ತಿಯೇ ನನಗೆ ಅನ್ನದ ಮಾರ್ಗವಾಯಿತು. ನಂತರ ‘ಕರ್ಮವೀರ’ ಪತ್ರಿಕೆಯಲ್ಲಿ ಕೆಲಸ ಮಾಡಲಾರಂಭಿಸಿದೆ.

‘ಕರ್ಮವೀರ’ದ ಕೆಲಸ ಒಂದು ರೀತಿಯಲ್ಲಿ ನನಗೆ ವರದಾನವೇ ಸೈ. ಅದು ನನಗೊದಗಿದ ‘ಬೆಳಕಿಂಡಿ.’ ತಿಳುವಳಿಕೆಯ ಸೀಮೆಯನ್ನು ವಿಸ್ತರಿಸಿದ ಗುರು. ಹಿರಿಯ ಸಾಹಿತಿಗಳ ಜತೆಗಿನ ಸಂಪರ್ಕಕ್ಕೆ ಸೇತುವೆ. ನನ್ನ ಬದುಕಿಗೆ ಹಾದಿಯನ್ನು ಹಾಕಿಕೊಟ್ಟು ಮುನ್ನಡೆಯಿಸಿದ ಮಾರ್ಗದರ್ಶಿ.

ನಾನೊಂದು ‘ಸಣ್ಣ ಡಬ್ಬಿ’ಯಂಥವನು. ಸಿಕ್ಕುವುದನ್ನೆಲ್ಲ ಅದರಲ್ಲೇ ಒಕ್ಕಿಕೊಳ್ಳುತ್ತ ಬಂದವನು. ಬೇಕೆನಿಸಿದ್ದನ್ನು ‘ಇಟ್ಟು’ಕೊಂಡು ‘ಬೇಡ’ವೆನಿಸಿದ್ದನ್ನು ಎಸೆಯುತ್ತ ಆ ಡಬ್ಬಿಯನ್ನು ಕಾಪಾಡಿಟ್ಟುಕೊಂಡಿದ್ದೇನೆ. ಆದರೆ ಹಿರಿಯರ ಜತೆಗಿನ ನೆನಪುಗಳಿಗೆ ಆ ಡಬ್ಬಿಯಲ್ಲಿ ಒಂದು ‘ಪ್ರತ್ಯೇಕ’ ಜಾಗವಿದೆ.

ಹಿರಿಯರ ಜತೆಗಿನ ನೆನಪುಗಳು ಎಂದೆನಲ್ಲ… ಇಂಥ ಕೆಲವು ನೆನಪುಗಳು ನನ್ನಲ್ಲಿ ಚಿರವಾಗಿರುವುದಕ್ಕೆ ಕಾರಣವಾದವರಲ್ಲಿ ಮುಖ್ಯರು ಗುರು ಸದಾನಂದ ಕನವಳ್ಳಿಯವರು. ಲಕ್ಷ್ಮೇಶ್ವರದಲ್ಲಿ ನಾನು ಓದಿದ ಮುನಿಸಿಪಲ್ ಆರ್ಟ್ಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಅವರಿಗೆ ನನ್ನ ಬಗ್ಗೆ ತುಂಬ ಅಭಿಮಾನ. ಇಂದಿಗೂ ಅದೇ ಅಭಿಮಾನದಿಂದ ಮಾತಾಡಿಸುತ್ತಾರೆ. ನಾನು ‘ಕರ್ಮವೀರ’ದ ಕೆಲಸಕ್ಕೆ ಸೇರಿಕೊಂಡ ಮೇಲೂ ಕಾಲೇಜಿನೊಂದಿಗೆ ನನ್ನ ಸಂಬಂಧ ಮುಂದುವರಿಯಿತು. ನಮ್ಮೂರ ಕಾಲೇಜಿಗೆ ಯಾರೇ ಸಾಹಿತಿ ಬರುವುದಿದ್ದರೂ ಗುರುಗಳು ಪ್ರೀತಿಯಿಂದ ನನ್ನನ್ನೂ ಬರ ಹೇಳುತ್ತಿದ್ದರು. ಧಾರವಾಡ- ಹುಬ್ಬಳ್ಳಿಯ ಮೂಲದ ಸಾಹಿತಿಗಳೇ ಆಗಲಿ, ಅಥವಾ ಬೇರೆಡೆಯಿಂದ ಬಂದು ಹುಬ್ಬಳ್ಳಿಯ ಮೂಲಕ ಹೋಗುವ ಸಾಹಿತಿಗಳೇ ಇರಲಿ, ಅವರನ್ನು ಅಲ್ಲಿಂದ ನಮ್ಮೂರಿಗೆ ಕರೆದೊಯ್ಯುವ ಜವಾಬ್ದಾರಿ ನನ್ನದೇ.

ಅದೊಮ್ಮೆ ಬೆಟಗೇರಿ ಕೃಷ್ಣಶರ್ಮರನ್ನು ಕರೆದೊಯ್ಯುವ ಅವಕಾಶ…

ಧಾರವಾಡ ವಾಸ್ತವ್ಯದ ನಂತರದ ಆ ಹತ್ತು ವರ್ಷಗಳ ಅವಧಿಯಲ್ಲಿ ನಾನು ಬೆಟಗೇರಿ ಕೃಷ್ಣಶರ್ಮರನ್ನು ಕಂಡೇ ಇರಲಿಲ್ಲ. ಅವತ್ತು ಕಾರಿನಲ್ಲಿ ಲಕ್ಷ್ಮೇಶ್ವರ ತಲಪುವ ತನಕದ ಆ ಒಂದೂವರೆ ಗಂಟೆಯ ಪ್ರಯಾಣ ಮತ್ತೆ ನನಗೆ ಅವರ ಆತ್ಮೀಯ, ಅಂತಃಕರಣಪೂರಿತ ನುಡಿಗಳನ್ನು ಆಲಿಸುವ ಅಪೂರ್ವ ಸಂಧಿ.

ಬೆಳಕಿನ ಕೋಲಿನಂಥ ಆ ಅಜ್ಜನೊಂದಿಗೆ ಮಾತಾಡಿದಾಗೆಲ್ಲ ಹೊಸ ಬೆಳಕು ‘ಕಂಡಂಥ’ ಅನುಭವವಾಗುತ್ತಿದ್ದುದಂತೂ ನಿಜ.

-0-0-0-

ಆಗ ‘ಕರ್ಮವೀರ’ದ ಸಂಪಾದಕರಾಗಿದ್ದ ಶಂಕರ ಪಾಟೀಲರು ‘ವಾರದ ವ್ಯಕ್ತಿ’ ಅಂಕಣ ಬರೆಯುವ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ಹುಬ್ಬಳ್ಳಿಯಂಥ ಊರಲ್ಲಿ ಕೂತುಕೊಂಡು, ಸೀಮಿತ ಆಕರ ಮೂಲಗಳನ್ನು ನಂಬಿಕೊಂಡು, ಮಾಹಿತಿ ಸಂಗ್ರಹಿಸುವುದು ನಿಜಕ್ಕೂ ಒಂದು ಸವಾಲೇ. ಕೆಲವೊಮ್ಮೆ ಹಿರಿಯರಿಂದ ಒಡನಾಡಿಗಳಿಂದ ಆಯಾ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹಿಸಬೇಕಾಗುತ್ತಿತ್ತು. (ಈ ‘ಗೂಗಲ್ಲು’ ‘ವಿಕಿಪೀಡಿಯ’ಗಳಿಗಿಂತ ಹಿರಿಯರು ಒಡನಾಡಿಗಳು ನೀಡುವ ಮಾಹಿತಿ ಪರಿಪೂರ್ಣ ವಾದದ್ದು, ನಂಬಲರ್ಹವಾದದ್ದು.)

ಅದೊಂದು ಮುಂಜಾನೆ ಮೇವುಂಡಿ ಮಲ್ಲಾರಿ ಎಂಬ ಅದ್ವೀತಿಯ ಪ್ರತಿಭೆ ಅಸು ನೀಗಿದ ಸುದ್ದಿ ಬಂತು. ”ಈ ವಾರ ಅವರ ಕುರಿತೇ ಬರೆಯಿರಿ,” ಎಂದರು ನಮ್ಮ ಸಂಪಾದಕರು.

ಅವರ ಕುರಿತು ಮಾಹಿತಿ ಸಂಗ್ರಹಿಸಬೇಕು… ನನಗೋ ಆ ಹೆಸರೇ ಹೊಸದು. ಅವರ ಕಾರ್ಯಕ್ಷೇತ್ರ ಯಾವುದೆಂಬುದೂ ಗೊತ್ತಿಲ್ಲ… ಹೇಳಬಲ್ಲವರಾರು?

ಥಟ್ಟನೆ ನೆನಪಾದದ್ದು ಬೆಟಗೇರಿ ಕೃಷ್ಣಶರ್ಮರ ಹೆಸರು.

ಸಂಪಾದಕರಿಗೆ ಹೇಳಿ ಹೊರಟುಬಿಟ್ಟೆ ಧಾರವಾಡಕ್ಕೆ.

ಆಗ ಅವರು ಕೆರೀ ತೆಳಗಿನ ಓಣಿಯ (ಶಿವಾಜಿ ಬೀದಿಯ) ಮನೆಯನ್ನು ಬಿಟ್ಟಿದ್ದರು. ”ಅವರಿಗೆ ಅಷ್ಟು ಅರಾಮಿದ್ದಂಗಿಲ್ಲಾ… ಮಾಳಮಡ್ಡಿ ಒಳಗ ಇರತಾರ. ಎಮ್ಮೀಕೇರೀ ಹತ್ರ,” ಅಂತ ಮಾಹಿತಿ ಸಿಕ್ಕಿತು.

ಅಲ್ಲಿಗೆ ಹೋದಾಗ ಸಂಜೆ ಐದು. ಮನೆ ಹುಡುಕುತ್ತ ಹೊರಟವನಿಗೆ ಎದುರಾದವರು ಗೆಳೆಯರ ಗುಂಪಿನ ಮತ್ತೊಬ್ಬ ಹಿರಿಯ ಸಾಹಿತಿ ಚುಳಕಿ ಗೋವಿಂದರಾಯರು. ”ಬರ್ರಿ, ನಾನೂ ಬೆಟಗೇರಿಯವರ ಮನಿಗೇ ಹೊಂಟೀನಿ,” ಎಂದ ಆ ಹಿರಿಯರ ಜತೆ ಹೆಜ್ಜೆ ಹಾಕಿದೆ.

”ಬೆಟಗೇರಿಯವರಿಗೆ ಅರಾಮಿಲ್ಲಂತಲ್ಲಾ… ಏನಾಗೇದ?”

”ಪಾರ್ಶ್ವವಾಯು…”

ಥಟ್ಟನೆ ನಿಂತುಬಿಟ್ಟೆ…

”ಯಾಕ…?” ಅಂತ ಚುಳಕಿಯವರು.

”ಅವರಿಂದ ಕೆಲವು ಮಾಹಿತಿ ಕೇಳಬೇಕು ಅಂತ ಬಂದಿದ್ದೆ…”

”ಬರ್ರಿ… ಅದಕ್ಕೇನಂತ? ಹೇಳತಾರ…”

”ಅಲ್ಲಾ… ಮತ್ತ ‘ಪಾರ್ಶ್ವವಾಯು…’ ಅಂದ್ರಿ… ಅದಕ್ಕs…”

”ಇಲ್ಲಿಲ್ಲಾ… ಅವರಿಗೆ ಯಾರಾದ್ರೂ ಬಂದು ಮಾತಾಡಿಸೀದ್ರ ಅಷ್ಟs ಖುಷಿ…” ಎಂದು ಅವರ ಮನೆಯೊಳಕ್ಕೆ ಕರೆದೊಯ್ದರು.

ಬೆಟಗೇರಿಯವರು ಅಲ್ಲಿಯೇ ಪಡಸಾಲೆಯಲ್ಲಿ ಮಲಗಿದ್ದರು. ಚುಳಕಿಯವರು ನನ್ನ ಹೆಸರು ಹೇಳಿದ ಕೂಡಲೇ ಅವರ ಮುಖ ಅರಳಿತು.

”ವಾಜಪೇಯಿ… ಬರ್ರಿ…” ಎಂದು ತೊದಲುತ್ತ, ಚುಳಕಿಯವರಿಗೆ, ”ಲಕ್ಷ್ಮೇಶ್ವರಕ್ಕ ಜತೀಗೆ ಹೋಗಿದ್ವಿ ಒಂದು ಕಾರ್ಯಕ್ರಮಕ್ಕ …” ಎಂದರು.

ಕೆಲ ನಿಮಿಷ ಕಳೆದ ಮೇಲೆ ನಾನು ಬಂದ ಉದ್ದೇಶವನ್ನು ವಿವರಿಸಿದೆ.

”ಪಾsssಪ… ಮೇವುಂಡಿ ಮಲ್ಲಾರಿ… ಕನ್ನಡ ಸೇವಕರೊಳಗs ಅತ್ಯಂತ ನತದೃಷ್ಟ… ಜನರನ ಲಗೂ ನಂಬ್ತಿದ್ದಾ… ಯಾರನ್ನ ನಂಬೀದ್ನೋ ಅವರs ಅವನ ಕುತಿಗಿ ಕೊಯ್ದರು…” ಎಂದು ಶುರು ಮಾಡಿ ಮೇವುಂಡಿಯವರ ವ್ಯಕ್ತಿತ್ವವನ್ನು ಸ್ವಲ್ಪದರಲ್ಲೇ ವಿವರಿಸಿದರು.

ಶಾಸನಗಳ ಅಧ್ಯಯನ ಕ್ಷೇತ್ರದಲ್ಲಿ ಮೇವುಂಡಿ ಮಲ್ಲಾರಿಯವರು ಮಾಡಿದ ಸೇವೆ ಅನನ್ಯವಾದದ್ದು. ‘ಕನ್ನಡವೆನೆ ಕುಣಿದಾಡುವುದೆನ್ನೆದೆ’ ಎಂಬ ಕವಿವಾಣಿಯ ವ್ಯಕ್ತಿರೂಪವಾಗಿದ್ದವರು ಮೇವುಂಡಿ ಮಲ್ಲಾರಿ. ಯಾವುದೇ ಪ್ರತಿಫಲಾಪೇಕ್ಷೆ ಪ್ರಚಾರಾಪೇಕ್ಷೆಯಿಲ್ಲದೇ ಶಾಸನಗಳ ಅಧ್ಯಯನ ಕ್ಷೇತ್ರದಲ್ಲಿ ಕೆಲಸ ಮಾಡಿದವರು ಅವರು. ಬಡತನದಲ್ಲೇ ಬೆಳೆದು ಬಾಳಿದರು. ತಮ್ಮ ಕಷ್ಟಗಳ ಬಗ್ಗೆ ಯಾರೆದುರೂ ಹೇಳಿಕೊಂಡವರಲ್ಲ, ಸಹಾಯಕ್ಕಾಗಿ ಕೈಚಾಚಿದವರಲ್ಲ. ಅಲ್ಲಿಯ ತನಕ ಪ್ರಕಟವಾದ ಶಾಸನ ಸಂಪುಟಗಳ ಹಿಂದೆ ಮೇವುಂಡಿಯವರ ಶ್ರಮದ್ದೇ ಸಿಂಹಪಾಲು. ದೊಡ್ಡ ದೊಡ್ಡವರು ಅವರ ಮೇಲೆ ಸವಾರಿ ಮಾಡಿದರು. ಅವರ ಜತೆ ನಯವಾಗಿ ಮಾತಾಡುತ್ತಲೇ ಹೀನವಾಗಿ ನಡೆಸಿಕೊಂಡರು. ಸಿಗರೇಟು-ಚಹ ಇಷ್ಟಿದ್ದರಾಯಿತು… ಎಂಥ ಶಾಸನವಾದರೂ ಅದನ್ನು ಕೂಲಂಕಷವಾಗಿ ಅಧ್ಯಯನ ಗೈದು, ಅದರ ಕುರಿತು ಬರೆಯುತ್ತಿದ್ದರು. ನಿಜವಾದ ‘ಸಮರ್ಪಣಾ ಮನೋಭಾವ’ದ ವ್ಯಕ್ತಿ ಮೇವುಂಡಿ ಮಲ್ಲಾರಿ… ಅವರ ಪರಿಶ್ರಮದ ಫಲವನ್ನು ಉಳಿದವರು ಉಂಡರೇ ಹೊರತ್ಗು ಮಲ್ಲಾರಿಯ ಕುಟುಂಬ ಅರೆಹೊಟ್ಟೆ ಊಟದಲ್ಲೇ ಕಾಲ ಕಳೆಯಬೇಕಾಯಿತು…

ಬೆಟಗೇರಿಯವರು ಎಲ್ಲವನ್ನೂ ಸಂಕ್ಷೇಪದಲ್ಲಿ ಹೇಳಿ, ”ಮತ್ತ ಯಾವಾಗಾದ್ರೂ ಏನಾದ್ರೂ ಮಾಹಿತಿ ಬೇಕಾದ್ರ ಬರ್ರಿ…” ಎಂದರು.

ಆದರೆ, ಐದಾರು ವರ್ಷಗಳ ಕಾಲ ಹಾಸಿಗೆಯಲ್ಲೇ ಮಲಗಿದ ಈ ‘ಕವಿ ಭೂಷಣ’ರನ್ನು ಮತ್ತೆ ನೋಡಲು ನನಗಾಗಲೇ ಇಲ್ಲ.

-0-0-0-

ಮೊನ್ನೆ ಮೊನ್ನೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೃಷ್ಟಿ ವೆಂಚರ್ಸ್ ಅವರು ಏರ್ಪಡಿಸಿದ್ದ ‘ಪುಸ್ತಕ ಪರಿಷೆ’ಯಲ್ಲಿ ಹೀಗೇ ಸುತ್ತಾಡುತ್ತಿದ್ದೆ. ಒಂದೆಡೆ ನನ್ನ ಕಣ್ಣಿಗೆ ಕಂಡದ್ದು ‘ಆನಂದಕಂದ ಸಾಹಿತ್ಯ ವಾಚಿಕೆ’ ಎಂಬ ಪುಸ್ತಕ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ್ದು. ಅದನ್ನು ಕೈಗೆತ್ತಿಕೊಳ್ಳಲು ಕೈಚಾಚುತ್ತಿದ್ದಂತೆಯೇ ಇನ್ನೊಬ್ಬರು ಅದನ್ನು ಎತ್ತಿಕೊಂಡುಬಿಟ್ಟರು.

‘ಅರೆರೆ… ಕಣ್ಣಿಗೆ ಕಂಡದ್ದು ಕೈಗೆ ಸಿಗಲಿಲ್ಲವಲ್ಲ…’ ಎಂದು ಪೇಚಾಡಿಕೊಂಡೆ.

ಆನಂದಕಂದರಿಗೆ ನನ್ನ ಸಂಕಟ ಅರಿವಾಯಿತೇನೋ… ಆ ಪುಸ್ತಕವನ್ನು ಕೈಗೆತ್ತಿಕೊಂಡಾತ ಅದನ್ನು ಬಿಟ್ಟು ಬೇರೊಂದು ಪುಸ್ತಕವನ್ನು ಬಿಡಿಸಿ ನೋಡತೊಡಗಿದ.

ಕೂಡಲೇ ನಾನು ‘ಆನಂದಕಂದ ಸಾಹಿತ್ಯ ವಾಚಿಕೆ’ ಪುಸ್ತಕವನ್ನು ಎತ್ತಿಕೊಂಡವನೇ ಅಲ್ಲಿಂದ ಜಾಗ ಖಾಲಿ ಮಾಡಿದೆ.

 

 

 

 

 

 

 

‍ಲೇಖಕರು G

4 November, 2012

15 Comments

  1. ಆನಂದ ಯಾದವಾಡ

    ನಿಮ್ಮ ಹಾಗೂ ಬೆಟಗೇರಿಯವರ ಪರಿಚಯ ಮತ್ತು ಅನುಭವಗಳನ್ನು ಸರಳವಾಗಿ ಬರೆದಿದ್ದೀರಿ, ನಾವು ನಿಮ್ಮ ಕೂಡ ಅವರನ್ನ ಬೇಟಿ ಆದ ಅನುಭವ ಆತು…

  2. umesh desai

    ಅವನೌನ ಒಂದ ಕಲ್ಲು ಒಗದ್ರೂ ಅದು ಒಬ್ಬ ಕವಿಗೇ ಹೋಗಿ ಬಡೀತದ..ಅಂತ
    ಧಾರವಾಡದ ಬಗ್ಗೆ ಹೇಳತಾರ..ಹೋದಸರೆ ವರಕವಿ ಈ ಸರೆ ಆನಂದಕಂದ..
    ಗುರುಗಳ ನೀವು ಅಂದು ಉಂಡ ರಸಕವಳವನ್ನ ಈಗೀನ ಪೀಳಿಗಿಗ ಹಂಚೂ ನಿಮ್ಮ ಪುಣ್ಣ್ಯಾದ
    ಕೆಲ್ಸ ಹಿಂಗ ಮುಂದ ಸಾಗಲಿ..

  3. Sowmya

    ಚೆಂದ ಬರೆದಿದ್ದೀರಾ! ನಾವೂ ನಿಮ್ಮೊಟ್ಟಿಗ್ಗೆ ಧಾರವಾಡದ ಬೀದಿಗಳಲ್ಲಿ ಅಡ್ಡಾಡಿ ಎಲ್ಲರನ್ನೂ ಭೇಟಿ ಮಾಡಿದ್ದಾಯ್ತು 

  4. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.

    ಹಿರಿಯರಾದ ಶ್ರೀ ಗೋಪಾಲ ವಾಜಪೇಯಿ ಅವರೇ,
    ಬೆಟಗೇರಿ ಕೃಷ್ಣಶರ್ಮರ ಪರಿಚಯ ತಮ್ಮ ಬಾಲ್ಯದಲ್ಲಿ ಆಗಿದ್ದು ,ಹುಕ್ಕೇರಿ ಬಾಳಪ್ಪನವರ ಹಾಡುಗಳನ್ನು ಬೆಟಗೇರಿ ಅವರ ಸಮ್ಮುಖದಲ್ಲಿ ಕೇಳಿದ್ದು ತಮ್ಮ ಭಾಗ್ಯವೆಂದೇ ಭಾವಿಸಿಕೊಳ್ಳುತ್ತೇನೆ.’ಆನಂದಕಂದ'(ಬೆಟಗೇರಿ ಕೃಷ್ಣಶರ್ಮರ) ಕುರಿತು ನನ್ನ ಪಿಎಚ್.ಡಿ.ಪ್ರಬಂಧ ‘ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ’ ಕೃತಿಯಲ್ಲಿ ಅವರ ಕಾವ್ಯದ ಜಾನಪದ ಹಿನ್ನೇಲೆ,ಹಳ್ಳಿಯ ಪರಿಸರ,ಹಬ್ಬದ ಆಚರಣೆಗಳ ಸಂದರ್ಭ ತುಂಬಾ ವಿಸ್ತೃತವಾಗಿಯೇ ಚರ್ಚಿಸಿದ್ದೇನೆ.ಈಗ ಅವರ ನೆನಪುಮಾಡಿಕೊಟ್ಟು ಅವರ ಮೇಲಿನ ಪ್ರಿತಿಯನ್ನು ಇನ್ನಷ್ಟು ಹೆಚ್ಚಿಸಿದ್ದೀರಿ.ಯುವ ಮನಸ್ಸುಗಳು ಇಂದು ‘ಆನಂದ ಕಂದ’ರ ಕಾವ್ಯಗಳನ್ನು ಓದಬೇಕಾಗಿದೆ.ಕಾವ್ಯದ ಸತ್ವ,ರಸ,ಲಯ,ನಡೆ,ಧಾಟಿ,ಭಾಷಿಕ ಸವಿತನ ಎಲ್ಲವೂ ಒಂದು ಮಾದರಿ ಅವರ ಕಾವ್ಯ.ಬಾಲ್ಯದ ಬದುಕಿನ ಚಿತ್ರಗಳೊಂದಿಗೆ ಧಾರವಾಡದ ನೆಲದ ಸತ್ವವನ್ನು ಪ್ರತಿಬಿಂಬಿಸುತ್ತಿರುವ ತಮ್ಮ ಬರಹದ ಸಾಲುಗಳು ನಮ್ಮನ್ನು ಕಾಯುವಂತೆ ಮಾಡುತ್ತಿವೆ,ಅಭಿನಂದನೆಗಳು.-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.

  5. chandrashekhar vastrad

    aanandkandara haadugalella nenapaadawu…. naa santigi hoginni aake tandiddalu benni… namma halli uira namag paada yaatakavva hubballi dharawad?… etteechege Raghvendra Patilara sampaadakatwadalli betageri awara samagra kaavya sogasaagi bandide.betageri avara shubhra vyktitwa chennagi moodi bandide avadhige haagu gopal awarige abhinandanegalu

  6. Jay Hanmantgad

    ‘ಬೆಳಕಿನ ಕೋಲಿನಂಥ ಆ ಅಜ್ಜನೊಂದಿಗೆ ಮಾತಾಡಿದಾಗೆಲ್ಲ ಹೊಸ ಬೆಳಕು ‘ಕಂಡಂಥ’ ಅನುಭವವಾಗುತ್ತಿದ್ದುದಂತೂ ನಿಜ’ – so well put – adu Dharwadada nelada Guna – bere yaav ooraga hejje hejje ge intahavara sahavasa sigtittu helri?

  7. Guruprasad Kurtkoti

    “ಅನಂದಕಂದ” ರ ಭೇಟಿ ಮನಸ್ಸಿಗೆ ಅನಂದ ನೀಡಿತು! ಅಂದ ಹಾಗೆ ನಿಮ್ಮ ಸ್ಮರಣಾ ಶಕ್ತಿಯನ್ನು ಕಂಡು ನಾನು ನಿಜವಾಗಲೂ ಬೆರಗಾಗಿದ್ದೇನೆ! ಎಷ್ಟೊಂದು ಘಟನೆಗಳ ಸೂಕ್ಷ್ಮ ವಿವರಗಳನ್ನು ನೀವು ಇನ್ನೂ ನೆನಪಿಟ್ಟುಕೊಂಡಿರುವುದು ನಿಜಕ್ಕೂ ಅಶ್ಚರ್ಯವೇ. ಇದರ ರಹಸ್ಯವೇನು ಗುರುಗಳೆ? 🙂

  8. samyuktha

    ಮತ್ತೊಂದು ಚೆಂದದ ಬರಹ! ನಿಮ್ಮ ಅನುಭವ ನಮ್ಮದಾದಂತೆ ವಿವರಿಸುವುದು ನಿಮ್ಮ ಪ್ರಾವೀಣ್ಯ!

  9. Anitha Naresh Manchi

    sundara baraha ..

  10. Nivedita N Rao

    Nimma baraha aatmeeya, saralavagi odisikondu hoguva nimma baravanigeya shaili nijakkoo apyayamaana. Balappa Hukkeri avara bagge bareda benni hadu mattomme kelida hagaytu, Nanu avaranna bailahongala busstand nalli bheti madidaga alliye avara bayi inda ide haadannu kelidde. Bahala sarala vyaktitva Balappa avaradu…

  11. ಈಶ್ವರ ಕಿರಣ

    ಆಹಾ, ಒಳ್ಳೆ ಲೇಖನ ಸರ್. ನಿನ್ನೆ ನಾನೂ ಬೆಟಗೇರಿಗೆ ಹೋಗಿದ್ದೆ. ಕಾಕತಾಳೀಯ 🙂

  12. arathi ghatikaar

    ಎಂದಿನಂತೆ ಚಂದದ ಬರಹ , ನಿಮ್ಮ ನೆನಪಿನ ಬುತ್ತಿಯೊಳಗೆ ನಮಗೆ ಹೀಗೆ ಪಾಲು ಸಿಗುತ್ತಿರಲಿ , ಅದ ನಮ್ಮ ಭಾಗ್ಯ , ಆಸ್ವಾದಿಸಿದೆ ಗುರುಗಳೇ 🙂

  13. A S Ashoka ( Bhagamandala)

    ಮೇವುಂಡಿ ಮಲ್ಲಾರಿಯ ಬಗ್ಗೆ ತಿಳಿಯಿತು. ಒಂದಿಷ್ಟು ಚಹಾ ಸಿಗರೇಟು ಇದ್ದರಾಯಿತು…ಸೃಜನ ಶೀಲ ವ್ಯಕ್ತಿಗಳೇ ಹಾಗೆ..ಅವರಿದ್ದದ್ದೂ ಗೊತ್ತಾಗುವುದಿಲ್ಲ ಹೋದದ್ದೂ ಗೊತ್ತಾಗುವುದಿಲ್ಲ. ಬೆಟಗೆರಿ ದೊಡ್ದವರೆಂದು ಕೇಳಿದ್ದೆನೆ. ಅವರ ಕವಿತೆಗಳು ನನ್ನ ಪಾಟ ಪುಸ್ತಕದಲ್ಲಿದ್ದ ನೆನಪು.. ನಿಮ್ಮ ಬರಹದ ಮೂಲಕ ಅವರ ಬಗ್ಗೆ ಹೆಚ್ಛು ತಿಳಕೊಂಡ ಹಾಗಾಯ್ತು.ಜಯಂತಿ ಪತ್ರಿಕೆ ನಿಂತು ಹೋಗಿದ್ದರೂ ಅವರು ಅದರ ಕಚೇರಿಯಲ್ಲಿ ಕಾಲ ಕಳೆಯುತ್ತಿದ್ದದ್ದು ಯಾಕಿರ ಬಹುದು..? ಇದು ನಮ್ಮಂತ ಭಾವುಕರ ಕಲ್ಪನೆಗೆ ಬಿಟ್ಟದ್ದು 🙂 ಒಟ್ಟಿನಲ್ಲಿ ಹಳೆ ಹುಬ್ಬಳ್ಳಿ ಧಾರವಾಡಗಳ ಚಿತ್ರಣ ಕೊಡುತ್ತಾ ಎಲ್ಲೂ ಎಡವದೆ ಮುಗ್ಗರಿಸದೇ ಓದಿಸಿಕೊಂಡು ಹೋಗುವ ನಿಮ್ಮ ಬರಹ ಇಷ್ಟವಾಯಿತು.

  14. Swarna

    ಕಟಾಂಜನ, ಪರಸಿ ಕಲ್ಲು , ಆನಂದ ಕಂದರ ಕವಿತೆಗಳು, ನಿಮ್ಮ ಬರಹ ಎಲ್ಲ ಮತ್ತೆ ಬಾಲ್ಯಕ್ಕೆ ಕೊಂಡೊಯ್ದವು.
    ಚಂದದ ಬರಹ

  15. Pushparaj Chauta

    ವಾರಾಂತ್ಯದ ದಿನಗಳಿಗೆ ನಾನು ಕಾಯುವುದು ಇಂಥಹ ಲೇಖನಗಳಿಗೆ ಸರ್. ನನ್ನ ಓದಿನಂಗಳಕ್ಕೆ ಮತ್ತಷ್ಟು ಮೆರುಗು ನೀಡುವುದಿದ್ದರೆ ಈ ನಿಮ್ಮ ಮಾಹಿತಿವೆತ್ತ ಬರಹಗಳು. ಮನಸು ಧಾರವಾಡ ಸುತ್ತುವುದು ರೂಢಿ ಮಾಡಿಸಿಬಿಟ್ಟಿರಿ ಈವಾಗ. ಧನ್ಯವಾದಗಳು ನೆನಪ ಬುತ್ತಿಯಿಂದ ನೀವಾಯ್ವ ಮಾತುಗಳಿಗೆ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading