ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಲ ವಾಜಪೇಯಿ ಕಾಲಂ : ‘ದೊಡ್ಡಪ್ಪ’ನ ದಂಡಯಾತ್ರೆ!

ಸುಮ್ಮನೇ ನೆನಪುಗಳು –  25

ಪ್ರೇರಣೆ – ಪ್ರೋತ್ಸಾಹಗಳು ನೀರು ಮತ್ತು ಗೊಬ್ಬರಗಳ ಹಾಗೆ… ಪ್ರತಿಭೆಯ ಸಸಿ ಬಯಸುವುದು ಇದನ್ನೇ… ನನ್ನ ಮೊದಲ ನಾಟಕ ಕೃತಿ ‘ದೊಡ್ದಪ್ಪ’ಕ್ಕೆ ರಂಗತಂಡಗಳಿಂದ, ಸಂಘ-ಸಂಸ್ಥೆಗಳಿಂದ, ಸ್ನೇಹಿತರಿಂದ, ಸಾಹಿತ್ಯಾಸಕ್ತರಿಂದ ಮತ್ತು ಹಿರಿಯರಿಂದ ದೊರೆತ ಪ್ರತಿಕ್ರಿಯೆಗೆ ನಾನು ಮೂಕನಾಗಿ ಹೋದೆ…

ಆ ಪರಿಯ ‘ಬೆನ್ನು ತಟ್ಟು’ವಿಕೆಯನ್ನು ನಾನು ಆ ಮೊದಲು ಅನುಭವಿಸಿರಲಿಲ್ಲ.

‘ದೊಡ್ದಪ್ಪ’ ಹಸ್ತಪ್ರತಿಯನ್ನು ಬರೆದು ಮುಗಿಸಿ, ಮತ್ತೊಮ್ಮೆ ತಿದ್ದಿ ತೆಗೆಯುವ ವೇಳೆಗೆ ಸರಿಯಾಗಿ ಇಬ್ಬರು ಮಿತ್ರರು ನನ್ನ ಬಳಿ ಬಂದರು. ಅದಾಗಲೇ ರಂಗಭೂಮಿಯಲ್ಲಿ ಹೆಸರು ಮಾಡಿ ರಾಜ್ಯದ ಒಳ-ಹೊರಗೆಲ್ಲ ಪರಿಚಿತರಾಗಿದ್ದ ಸಮುದಾಯದ ಪಿ. ಗಂಗಾಧರಸ್ವಾಮಿ, ಮತ್ತು ವಾರ್ತಾ ಇಲಾಖೆಯ ನಾಟಕ ವಿಭಾಗದಲ್ಲಿದ್ದ ಆರ್. ನಾಗೇಶ್. ಅವರೆದುರು ನಾಟಕ ವಾಚನ ಮಾಡಿದೆ. ಇಬ್ಬರೂ ಇಷ್ಟಪಟ್ಟರು.

ಗೆಳೆಯ ಗಂಗಾಧರಸ್ವಾಮಿ ಅತ್ತ ಬಾಗಲಕೋಟೆಯಲ್ಲಿ ನಾಟಕದ ತಾಲೀಮು ಶುರು ಮಾಡಿದರು. ಇತ್ತ ಬೆಂಗಳೂರಲ್ಲಿ ಆರ್. ನಾಗೇಶ್ ಆಣತಿಯಂತೆ ‘ಸೂತ್ರಧಾರ’ ತಂಡಕ್ಕೆ ಈ ನಾಟಕ ನಿರ್ದೇಶಿಸಲು ಡಿ.ಟಿ. ಚೆನ್ನಕೇಶವ ಮೂರ್ತಿ ಅಣಿಯಾದರು.

ಅದೇ ವೇಳೆಗೆ ಕನ್ನಡ ಸಾಹಿತ್ಯ ಪರಿಷತ್ತು ‘ನಾಟಕ ರಚನಾ ಸ್ಪರ್ಧೆ’ ಏರ್ಪಡಿಸಿತು. ‘ದೊಡ್ದಪ್ಪ’ದ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಿ ಕೂತೆ.

ಬಾಗಲಕೋಟೆ… ಕನ್ನಡ ಹವ್ಯಾಸಿ ರಂಗಭೂಮಿಯ ಇತಿಹಾಸದ ಆರಂಭದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯಬೇಕಾದ ಹೆಸರು ಬಾಗಲಕೋಟೆ… ಅಲ್ಲಿಯ ‘ವಾಸುದೇವ ವಿನೋದಿನಿ ನಾಟಕಾ ಸಭಾ’ ಕಳೆದ ಶತಮಾನದ ಆರಂಭ ಕಾಲದಲ್ಲಿಯೇ ಆಧುನಿಕ ಕನ್ನಡ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿದ್ದಂಥದು. ಅಂಥ ಐತಿಹಾಸಿಕ ಊರಲ್ಲಿ ನನ್ನ ಮೊದಲ ನಾಟಕ ಕೃತಿ ರಂಗಕ್ಕೆರಲು ಸಿದ್ಧವಾಗಿ ನಿಂತಿತ್ತು. ಅಂದು ಅಂತಿಮ ರಂಗತಾಲೀಮು. ನನಗಿನ್ನೂ ನೆನಪಿದೆ. ಅಂದು 1981ರ ಡಿಸೆಂಬರ್ 18… ಕನ್ನಡ ಸಾಹಿತ್ಯ ಪರಿಷತ್ತು ‘ದೊಡ್ದಪ್ಪ’ಕ್ಕೆ ಎರಡನೆಯ ಬಹುಮಾನ ನೀಡಿದ ಸುದ್ದಿ ಬಂತು. ಬಾಗಲಕೋಟೆಯ ರಂಗಮಿತ್ರರೆಲ್ಲ ತಮಗೇ ಬಹುಮಾನ ಬಂದಷ್ಟು ಕುಣಿದಾಡಿದರು. ‘ದೊಡ್ಡಪ್ಪ’ ನಾಟಕದ ಪ್ರಥಮ ಪ್ರಯೋಗದ ಸಂಭ್ರಮಕ್ಕೆ ಊರಿಗೆ ಊರೇ ಸಿದ್ಧಗೊಂಡಿತು. ಸುತ್ತಲಿನ ರಂಗಮಿತ್ರರೂ ಹಾಜರಾದರು. ಜಾನಪದ ಶೈಲಿಯ ಪ್ರಯೋಗಕ್ಕೆ ಕಲಾವಿದರೆಲ್ಲ ರಂಗು ತಂದರು. ಅಂದಿನ ಪ್ರಯೋಗದ ಯಶಸ್ಸಿಗೆ ಸಾಕ್ಷಿಯಾದವರು ಹಿರಿಯ ನಾಟಕಕಾರ ಚಂದ್ರಕಾಂತ ಕುಸನೂರ, ರಂಗಕರ್ಮಿ ಶ್ರೀನಿವಾಸ ತಾವರಗೇರಿ (ಶೀನಣ್ಣ), ಕವಿ ಶಾಮಸುಂದರ ಬಿದರಕುಂದಿ ಇತ್ಯಾದಿ…

ಬಾಗಲಕೋಟೆಯ ಗೆಳೆಯರು ಆ ನಾಟಕದ ಹಲವಾರು ಮರುಪ್ರಯೋಗಗಳನ್ನು ನೀಡಿದರು.

ಬೆಂಗಳೂರಿನ ‘ಸೂತ್ರಧಾರ’ ತಂಡದ ‘ದೊಡ್ಡಪ್ಪ’ನಂತೂ ದೇಶಾದ್ಯಂತ ಸುತ್ತಾಡಿದ. ಮುಂಬಯಿಯ ‘ಕನ್ನಡ ಕಲಾ ಕೇಂದ್ರ’ದ ನಾಟಕೋತ್ಸವದಲ್ಲೂ ‘ದೊಡ್ಡಪ್ಪ’ಇದ್ದ. ತಂಡದವರು ನನ್ನನ್ನೂ ಮುಂಬಯಿಗೆ ಆಮಂತ್ರಿಸಿದರು. ವಾಪಸು ಬರುವಾಗ ಪುಣೆ, ಬೆಳಗಾಂವಿ, ಕಿತ್ತೂರು, ಧಾರವಾಡ ಮತ್ತು ಹುಬ್ಬಳ್ಳಿಗಳಲ್ಲಿ ‘ದೊಡ್ಡಪ್ಪ’ ಪ್ರದರ್ಶನಗಳು…

ಮುಂಬಯಿಗೆ ಹೋಗುವ ಮೊದಲು. ಯಾವುದೋ ಕೆಲಸಕ್ಕೆ ಅಂತ ಧಾರವಾಡಕ್ಕೆ ಹೋದವ ‘ಅಟ್ಟ’ದ ಮೆಟ್ಟಿಲೇರಿದೆ. ಜಿ.ಬಿ. ಜೋಶಿಯವರು ಎಂದಿನಂತೆ ನಕ್ಕು, ‘ಬಾ, ಕೂಡು…’ ಎಂದು ಸನ್ನೆ ಮಾಡಿದರು. ಕೂತೆ.

”ಮುಂಬಯಿ ಒಳಗ ನಿನ್ನ ನಾಟಕ ಅದ ಅಂತಲ್ಲೋ…?” ಕೇಳಿದರು. ಹೌದೆಂದೆ. ತಂಡದ ಜತೆ ನಾನೂ ಹೊರಟಿರುವುದಾಗಿ ಹೇಳಿದೆ.

”ಒಂದು ಮಾತು ಹೇಳ್ತೀನಿ ಕೇಳು. ಯಾವದs ತಂಡದ ಜತೀಗೆ ಗುರುತಿಸಿಕೋಬ್ಯಾಡಾ… ನೀ ಬರದಂಥಾ ನಾಟಕದಾಗ ಯಾವತ್ತಿಗೂ ನೀ ಪಾರ್ಟ್ ಮಾಡಬ್ಯಾಡಾ…”

ಆ ಸಂದರ್ಭದಲ್ಲಿ ಉತ್ಸಾಹಕ್ಕೆ ತಣ್ಣೀರೆರಚಿದಂತೆನಿಸಿದರೂ, ಅವರು ಹಾಗ್ಯಾಕೆ ಹೇಳಿದರು ಎಂದು ನನಗರ್ಥವಾದದ್ದು ಎಷ್ಟೋ ದಿನಗಳ ಮೇಲೆ…

ನಾಟಕ ಬರೆದ ಮೇಲೆ ಅದನ್ನು ‘ದೂರ’ದಲ್ಲಿ ನಿಂತು ನೋಡಬೇಕೇ ವಿನಾ ನಾಟಕಕಾರ ಅದರ ‘ಭಾಗ’ವಾಗಬಾರದು.

ಹೌದು. ಅದು ಅನುಭವ ವಾಣಿಯೇ.

ಆದರೆ, ತಂಡವೊಂದನ್ನು ಕಟ್ಟಿಕೊಂಡು, ತಂಡಕ್ಕೆಂದು ನಾಟಕ ರಚನೆಗೆ ತೊಡಗಿದ್ದ ನನ್ನಂಥವನಿಗೆ ಅಜ್ಜನ ಮಾತನ್ನು ಪಾಲಿಸುವುದು ಆಗಿನ ಸಮಯದಲ್ಲಿ ಕಷ್ಟವೇ…

(ಅವತ್ತು ಜಿ.ಬಿ. ಇನ್ನೂ ಒಂದು ಮಾತು ಹೇಳಿದ್ದರು – ”ತಂಡ ಕಟ್ಟಬೇಕು. ನಾಟಕಾ ಆಡಬೇಕು. ಆದ್ರ, ತಂಡದ ಹೆಸರಿನ್ಯಾಗ bank balance ಇರಬಾರದು. ಎಲ್ಲೆ bank balance ಮುಖ್ಯ ಆಗ್ತದೋ ಅಲ್ಲೆ ಚಟುವಟಿಕಿ nil ಆಗ್ತದ…”)

ನಾನು ಮುಂಬಯಿಯ ನಾಟಕೋತ್ಸವದಲ್ಲಿ ಭಾಗವಹಿಸಿದೆ. ‘ದೊಡ್ಡಪ್ಪ’ ಅಲ್ಲಿಯ ಕನ್ನಡಿಗರು ಮತ್ತು ಪತ್ರಿಕೆಗಳ ಪ್ರಶಂಸೆಗೆ ಪಾತ್ರವಾಯಿತು. ಅಷ್ಟೇ ಅಲ್ಲ, ಅಂದಿನ ಪ್ರಯೋಗದ ಕಾರಣದಿಂದ ನಾನು ಹಿರಿಯ ನಾಟಕಕಾರ, ಕವಿ ಬಿ.ಎ. ಸನದಿಯವರ ‘ಪ್ರೀತಿಯ ಗೋಪಾಲ’ನಾದೆ. ಅವರು ನನ್ನ ‘ಪ್ರೀತಿಯ ಅಣ್ಣ’ನಾದರು. ಮುಂದೆಲ್ಲ ನಾನು ಮುಂಬಯಿಗೆ ಹೋದರೆ ಆಕಾಶವಾಣಿಯ ಹಿರಿಯ ಅಧಿಕಾರಿಯಾಗಿದ್ದ ಅವರನ್ನು ಕಾಣದೇ ಬರುತ್ತಿರಲಿಲ್ಲ. ಹುಬ್ಬಳ್ಳಿಗೆ ಬಂದರೆ ಅವರು ನೇರ ನನ್ನ ಕಚೇರಿಗೆ ಬರಬೇಕು… ಇಂದಿಗೂ ಮುಂದುವರಿದಿದೆ ಈ ಬಾಂಧವ್ಯ. ‘ಮುಂಬಾ ನಗರಿಲಿ ತುಂಬಾ ಗಡಿಬಿಡಿ…’ ಎಂಬ ತಮ್ಮದೇ ಕವನಕ್ಕೆ ಅಪವಾದದಂತಿದ್ದವರು ಸನದಿ. ಉಳಿದವರೆಲ್ಲಾ ಅಳುತ್ತಲೇ ಹುಟ್ಟಿದರೆ ಸನದಿ ಅವರು ನಗುತ್ತಲೇ ಹುಟ್ಟಿದರೇನೋ… ನನ್ನ ಪ್ರಕಾರ ಅವರು ‘ಸ’ದಾ ‘ನ’ಗುತ್ತಲೇ ಇದ್ದು, ‘ದಿ’ಮಾಕು ತೋರದೆ ಬಾಳಿದವರು. ಇದೀಗ ಕರ್ನಾಟಕದ ಕುಮಟಾದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವವರು.

‘ಸೂತ್ರಧಾರ’ ತಂಡದ ಗೆಳೆಯರು ಅಭಿನಯಿಸಿದ ‘ದೊಡ್ಡಪ್ಪ’ ನವರಸಭರಿತವಾದದ್ದು. ನಿರ್ದೇಶಕ ಚೆನ್ನಕೇಶವ ಮೂರ್ತಿ ಅದರಲ್ಲಿ ಸೃಷ್ಟಿಸಿದ ಕುಸ್ತಿಯ ದೃಶ್ಯಗಳು, ದೊಡ್ಡಪ್ಪ-ಸಿಂಗಾರಿಯ ಶೃಂಗಾರ ದೃಶ್ಯಗಳು, ಮುದುಕ-ಯುವಕರ ನಡುವಿನ ವ್ಯಂಗ್ಯ ಬಾಣಗಳ ಆದಾನ-ಪ್ರದಾನ, ಆ ಹಾಡುಗಳು, ಆ ಮೇಳ… ಅಬ್ಭಾ ! ಮುಂಬಯಿಯ ಪ್ರದರ್ಶನವನ್ನು ಅಲ್ಲಿಯ ಆಂಗ್ಲ ಪತ್ರಿಕೆಗಳು ಕೂಡ ಮುಕ್ತಕಂಠದಿಂದ ಪ್ರಶಂಸಿಸಿದವು. ಅದರಲ್ಲಿದ್ದ ನಟ-ನಟನಟಿಯರಾದರೂ ಎಂಥೆಂಥವರೆನ್ನುತ್ತೀರಿ?

ಈಗ ‘ಅನಾವರಣ’ ಮುಂತಾದ ಕಿರುತೆರೆ ಧಾರಾವಾಹಿಗಳ ನಿರ್ದೇಶಕರಾಗಿರುವ ಎನ್. ಎಸ್. ಸೇತೂರಾಂ, ಈಗ ‘ಸಂಯಕ್ತ ಕರ್ನಾಟಕ’ದ ಸಂಪಾದಕರಾಗಿರುವ ಹುಣಸವಾಡಿ ರಾಜನ್, ಖ್ಯಾತ ರಂಗ ಚಿಂತಕ-ವಿಮರ್ಶಕ ನಾರಾಯಣ ರಾಯಚೂರ್, ನಾಟಕಕಾರ-ಕತೆಗಾರ-ಕಿರುತೆರೆ ಧಾರಾವಾಹಿಗಳ ನಿರ್ದೇಶಕ ಪಾಲ್ ಸುದರ್ಶನ್, ಮತ್ತು ಖ್ಯಾತ ಅಭಿನೇತ್ರಿ ನೃತ್ಯ ವಿದುಷಿ ನಳಿನಾ ಮೂರ್ತಿ…

ಬೆಂಗಳೂರಿನಲ್ಲಿ ದೂರದರ್ಶನದ ಸ್ವತಂತ್ರ ನಿರ್ಮಿತಿ ಕೇಂದ್ರ ಆಗಿನ್ನೂ ಸ್ಥಾಪನೆಯಾಗಿರಲಿಲ್ಲ. ಹೈದರಾಬಾದಿನ ದೂರದರ್ಶನ ಕೇಂದ್ರದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಿಕೊಂಡು ಗುಲಬರ್ಗ ಮತ್ತು ಬೆಂಗಳೂರು ಮರುಪ್ರಸಾರ ಕೇಂದ್ರಗಳಿಂದ ಬಿತ್ತರಿಸಲಾಗುತ್ತಿತ್ತು. ಅಂತ ಸಂದರ್ಭದಲ್ಲಿ ಸೂತ್ರಧಾರ’ ತಂಡದ ‘ದೊಡ್ಡಪ್ಪ’ ಹೈದರಾಬಾದಿಗೂ ಹೋಗಿ ಬಂದ. ಬೆಂಗಳೂರಿನಿಂದ ಆರು ಕಂತುಗಳಲ್ಲಿ ಎಲ್ಲರಿಗೂ ಕಂಡ…

-೦-೦-೦-೦-೦-

ಹೀಗೆ ಮೊದಲ ನಾಟಕ ಕೃತಿಯಿಂದ ನನ್ನ ಸ್ನೇಹವಲಯ ವಿಸ್ತಾರವಾಯಿತು. ವಿಸ್ತಾರಗೊಳ್ಳುತ್ತಲೇ ನಡೆಯಿತು. ನಾಟಕ ಪ್ರಯೋಗ ಮತ್ತು ನಾಟಕ ರಚನೆ ಮುಂದುವರಿಯಿತು. ನನ್ನ ತಂಡಕ್ಕೋ, ಅಥವಾ ಮಿತ್ರ ತಂಡಗಳಿಗೋ ವರ್ಷಕ್ಕೆ ಒಂದೆರಡು ಹೊಸ ನಾಟಕಗಳನ್ನು ಒದಗಿಸಲೇಬೇಕು. ರಂಗಭೂಮಿಯ ಮೂಲಕ ಮಿತ್ರರಾದ ರಂಗನಿರ್ದೆಶಕರುಗಳಿಗಾಗಿ ನಾಟಕ ರಚನೆಗೆ ಕೈಹಾಕಬೇಕು. ಆ ಎಲ್ಲ ರಂಗನಿರ್ದೆಶಕರದೂ ‘ತೊಟ್ಟ ಬಾಣವ ತೊಡದ’ ಛಲ. ಅವರಿಗೆಲ್ಲ ‘ಹೊಸ ಕೃತಿಗಳು ಹುಟ್ಟುತ್ತಿಲ್ಲ ಎಂಬ ಕೊರಗು. ಹೀಗಾಗಿ ಅದು ಮೂಲ ಕೃತಿಯೋ, ಅನುವಾದವೋ, ರೂಪಾಂತರವೋ ಒಟ್ಟು ನಾಟಕ ರಚನೆಯಾಗಬೇಕು…

ಎಲ್ಲ ಅವಸರದ ಅಡಿಗೆ…

1980ರ ದಶಕ… ರಾಜ್ಯದ ತುಂಬಾ ರಂಗಚಟುವಟಿಕೆಗಳು ಗರಿಗೆದರಿದ ಸಂದರ್ಭ ಅದು. ತಂಡಗಳಿಗೆ ಉತ್ಸಾಹವಿತ್ತು. ಆದರೆ ತಕ್ಕ ಶಿಸ್ತಾಗಲೀ, ಶಿಕ್ಷಣವಾಗಲೀ ಇರಲಿಲ್ಲ. ಅತ್ತ ‘ಕರ್ನಾಟಕ ನಾಟಕ ಅಕಾಡೆಮಿ’ ಆ ದಿಶೆಯಲ್ಲಿ ಚಿಂತನೆ ನಡೆಸಿತ್ತು. ಆಗ ಅಕಾಡೆಮಿಯ ಅಧ್ಯಕ್ಷರಾಗಿದ್ದವರು ಡಾ. ಚಂದ್ರಶೇಖರ ಕಂಬಾರರು. ದಂಡಿಯಾಗಿ ಎನ್. ಎಸ್. ಡಿ. ಪದವೀಧರರು ಕನ್ನಡ ರಂಗಭೂಮಿಯನ್ನು ಆವರಿಸಿಕೊಳ್ಳತೊಡಗಿದ್ದರು. ಅತ್ತ ನೀನಾಸಂ ಡಿಪ್ಲೊಮಾ ಪಡೆದವರೂ ಗ್ರಾಮಾಂತರದ ರಂಗಚಟುವಟಿಕೆಗಳಿಗೆ ಕೈಹಾಕಲಾರಂಭಿಸಿದ್ದರು. ಅವರನ್ನೆಲ್ಲ ಸೃಜನಾತ್ಮಕವಾಗಿ ಬಳಸಿಕೊಳ್ಳಬೇಕಿತ್ತು. ಒಂದೊಂದು ತಂಡಕ್ಕೆ ರಂಗತರಬೇತಿ ನೀಡಲು ಅವರನ್ನು ನಿಯೋಜಿಸುವ ಯೋಜನೆ ರೂಪಗೊಂಡಿತು.

ಇಂಥ ಶಿಬಿರಗಳಂತೂ ಸರಿಯೇ. ಅವಕ್ಕೆ ಹೊಸ ನಾಟಕಗಳು ಬೇಕಲ್ಲ… ಆ ಕೊರತೆಯನ್ನು ನೀಗುವ ದಿಶೆಯಲ್ಲಿ ಅಕಾಡೆಮಿ ಆಗ ಬಹು ಮುಖ್ಯ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತು. ಅದೇ, ದಾವಣಗೆರೆ ಬಳಿಯ ಕೊಂಡಜ್ಜಿಯಲ್ಲಿ ನಡೆದ ಹತ್ತು ದಿನಗಳ ‘ಕನ್ನಡ ನಾಟಕ ರಚನಾ ಶಿಬಿರ’. ಅದಕ್ಕೆ ನಿರ್ದೇಶಕ ನಾಟಕಕಾರ ಪ್ರಸನ್ನ ಅವರ ನೇತೃತ್ವ…

ಇತ್ತ ಫೋರ್ಡ್ ಫೌಂಡೇಶನ್ ನೆರವಿನಿಂದ ಹೆಗ್ಗೋಡಿನ ‘ನೀನಾಸಂ’ ರಾಜ್ಯಾದ್ಯಂತ ಗ್ರಾಮಾಂತರ ಪ್ರದೇಶಗಳಲ್ಲಿ ‘ಜನಸ್ಪಂದನ’ ಎಂಬ ರಂಗತರಬೇತಿ ಶಿಬಿರಗಳನ್ನು ಏರ್ಪಡಿಸಿತು. ಅದಕ್ಕೆ ಪೂರಕವಾಗಿ ಹೆಗ್ಗೋಡಿನಲ್ಲಿ ಕೆಲವರು ಆಮಂತ್ರಿತ ಯುವ ನಾಟಕಕಾರರು ಭಾಗವಹಿಸಿದ್ದ ನಾಟಕ ರಚನಾ ಶಿಬಿರ.

ಇವೆರಡೂ ಕಡೆ ನಾನು ಭಾಗವಹಿಸಿದೆ.

ಅದಾಗಲೇ ‘ಸೂತ್ರಧಾರ’ ತಂಡವೊಂದರಿಂದಲೇ ನಲವತ್ತಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡದ್ದಲ್ಲದೆ, ಅನೇಕ ಲಲಿತ ಕಲಾ ಸಂಘಗಳ ತಂಡಗಳ ಆಯ್ಕೆ ಎನಿಸಿತ್ತು ‘ದೊಡ್ಡಪ್ಪ’. ಆ ನಾಟಕದ ಹಾಡುಗಳು ರಂಗಭೂಮಿ ವಲಯದಲ್ಲಿ ಜನಪ್ರಿಯವಾಗಿದ್ದವು. ಆದರೂ ಹಸ್ತಪ್ರತಿಯ ರೂಪದಲ್ಲೇ ಉಳಿದಿದ್ದ ‘ದೊಡ್ಡಪ್ಪ’ಕ್ಕೆ ಪುಸ್ತಕರೂಪ ಪಡೆಯುವ ಭಾಗ್ಯ ಒದಗಿದ್ದು ಕೊಂಡಜ್ಜಿಯ ಶಿಬಿರದ ಸಂದರ್ಭದಲ್ಲೇ.

ಆ ‘ನಾಟಕ ರಚನಾ ಶಿಬಿರ’ವನ್ನು ಪ್ರಸನ್ನ ತುಂಬ ಜಾಣ್ಮೆಯಿಂದ ವಿನ್ಯಾಸಗೊಳಿಸಿದ್ದರು. ನಮ್ಮ ಭಾಷೆಯ ಹಿಂದಿನ ಅಂದಿನ ಹಿರಿಯ ನಾಟಕಕಾರರ ಕೃತಿಗಳ ಬಗ್ಗೆ ಸ್ಥೂಲ ಪರಿಚಯ, ಚರ್ಚೆ, ಕನ್ನಡವಲ್ಲದೆ ಬೇರೆ ಬೇರೆ ಭಾಷೆಗಳ ಶ್ರೇಷ್ಠ ನಾಟಕಕಾರರ ಜತೆ ಸಂವಾದ, ಆಶು ನಾಟಕ ರಚನೆ ಇತ್ಯಾದಿ ಇತ್ಯಾದಿ…

ಕೇರಳದ ಪಣಿಕ್ಕರ್, ಮರಾಠಿಯ ವಿಜಯ ತೆಂಡೂಲ್ಕರ್, ಕನ್ನಡದ ಶ್ರೀರಂಗ, ಕೀರ್ತಿನಾಥ ಕುರ್ತಕೋಟಿ, ಮುದೇನೂರ ಸಂಗಣ್ಣ… ಎಂಥೆಂಥ ಘಟಾನುಘಟಿಗಳು ಬಂದು ನಮಗೆಲ್ಲ ನಾಟಕ ರಚನೆಯ ಕುರಿತ ಸುಳುಹುಗಳನ್ನು ಇತ್ತು ಹೋದರು.

ಆ ಸಂದರ್ಭದಲ್ಲೇ ಅಲ್ಲಿಗೆ ಬಂದರು ಹೆಗ್ಗೋಡಿನ ಕೆ.ವಿ. ಸುಬ್ಬಣ್ಣ. ಇಡೀ ಜಗತ್ತಿನ ಗಮನವನ್ನೇ ಹೆಗ್ಗೋಡು ಎಂಬ ಹಳ್ಳಿಯೆಡೆಗೆ ತಿರುಗಿಸಿದ ಸುಬ್ಬಣ್ಣ… ತಮ್ಮ ‘ಅಚ್ಹುಕಟ್ಟು’ತನದಿಂದಾಗಿ ಪ್ರಕಟನ ಪ್ರಪಂಚದಲ್ಲಿ ಎಲ್ಲರ ‘ಅಚ್ಹುಮೆಚ್ಹು’ ಎನಿಸಿದ್ದ ‘ಅಕ್ಷರ ಪ್ರಕಾಶನ’ದ ಸುಬ್ಬಣ್ಣ… ಅವರೊಂದಿಗಿನ ‘ಮಾತುಕತೆ’ ತುಂಬಾ ‘ರಸಪೂರ್ಣ’ವಾಗಿರುತ್ತಿತ್ತು.

ಶಿಬಿರಾರ್ಥಿಗಳಾಗಿ ನಮ್ಮೊಂದಿಗೆ ಅನೇಕ ರಂಗ ನಿರ್ದೇಶಕರೂ ಅಲ್ಲಿದ್ದರು. ಗೆಳೆಯ ಗಂಗಾಧರ ಸ್ವಾಮಿ ನನ್ನನ್ನು ಸುಬ್ಬಣ್ಣ ಅವರಿಗೆ ಪರಿಚಯಿಸಿ, ‘ದೊಡ್ಡಪ್ಪ’ ನಾಟಕದ ಹಸ್ತಪ್ರತಿಯನ್ನು ಅವರಿಗೆ ನೋಡಲು ಕೊಟ್ಟರು. ”ಓದುತ್ತೇನೆ,” ಎಂದು ತಮ್ಮ ಬಗಲುಚೀಲಕ್ಕೆ ಅದನ್ನಿಳಿಸಿಕೊಂಡರು ಸುಬ್ಬಣ್ಣ.

ಶಿಬಿರ ಮುಗಿದು ನಾನು ಹುಬ್ಬಳ್ಳಿಗೆ ಮರಳಿದ ಮೇಲೆ ಒಂದು ದಿನ ಸುಬ್ಬಣ್ಣನವರಿಂದ ಒಂದು ಪಾರ್ಸಲ್ಲು. ಒಡೆದು ನೋಡಿದೆ. ಒಳಗಿತ್ತು ‘ದೊಡ್ದಪ್ಪ’ದ ಹಸ್ತಪ್ರತಿ. ಓದಿ ವಾಪಸ್ಸು ಕಳಿಸಿರಬಹುದೆಂದು ಸುಮ್ಮನಾದೆ. ಸಂಜೆ ಮನೆಗೆ ಹೋಗಿ ಅದನ್ನು ತೆಗೆದು ಫೈಲಿನಲ್ಲಿಟ್ಟರಾಯಿತೆಂದು ತೆಗೆದರೆ ತುಂಡು ಕಾಗದ ಕೆಳಗೆ ಬಿತ್ತು. ಎತ್ತಿಕೊಂಡು ಓದಿದೆ. ಸುಬ್ಬಣ್ಣ ಹಸ್ತಪ್ರತಿಯನ್ನು ಮೆಚ್ಚಿಕೊಂಡಿದ್ದರು, ಅದನ್ನು ಅಕ್ಷರ ಪ್ರಕಾಶನದಿಂದ ಪ್ರಕಟಿಸುವ ನಿರ್ಧಾರವನ್ನೂ ತಿಳಿಸಿದ್ದರು. ಜೊತೆಗೆ ”ನೀವೇ, ನಿಮ್ಮ ಪರಿಚಯದ ಪ್ರೆಸ್ಸಿನಲ್ಲಿ ಇದನ್ನು ಮುದ್ರಿಸುವ ಬಗ್ಗೆ ಮಾತಾಡಿ… ಒಟ್ಟು ಎಷ್ಟು ಖರ್ಚು ಬರುತ್ತದೆಂದು ತಿಳಿಸಿ…” ಎಂಬ ಸಾಲು…

ನಾನು ಕುಣಿದಾಡಿಬಿಟ್ಟೆ.

ಹೀಗೆ ಪುಸ್ತಕ ರೂಪವನ್ನು ಪಡೆದು ನಿಂತ ‘ದೊಡ್ಡಪ್ಪ’ ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ‘ಸಮುದಾಯ’ದ ಗೆಳೆಯರು ಬೆಂಗಳೂರಲ್ಲಿ ಏರ್ಪಡಿಸಿದರು. ರವೀಂದ್ರ ಕಲಾಕ್ಷೇತ್ರದ ತಾಲೀಮು ಕೊಠಡಿಯಲ್ಲಿ, ಒಂದು ರವಿವಾರ, ಬೆಳಗಿನ ಹೊತ್ತಿನಲ್ಲಿ, ಕೆಲವೇ ಆತ್ಮೀಯ ರಂಗಕರ್ಮಿಗಳ ಎದುರು ‘ದೊಡ್ಡಪ್ಪ’ ಕೃತಿಯನ್ನು ಬಿಡುಗಡೆ ಮಾಡಿದವರು ಕನ್ನಡದ ಹೆಮ್ಮೆಯ ನಾಟಕಕಾರ ಕವಿ ಡಾ. ಚಂದ್ರಶೇಖರ ಕಂಬಾರರು. ಕೃತಿಯ ಕುರಿತು ಅವರು ಅಂದು ಆಡಿದ ಮಾತುಗಳು ನನಗೆ ಇಂದಿಗೂ ಮಾರ್ಗದರ್ಶೀ ಸೂತ್ರಗಳೇ… ಈಗಲೂ ನಾನು ಕಂಬಾರರ ಮನೆಗೆ ಹೋದರೆ, ಅವರ ಶ್ರೀಮತಿಯವರು ‘ದೊಡ್ಡಪ್ಪ’ ನಾಟಕ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ‘ನಾಟಕ ರಚನಾ ಸ್ಪರ್ಧೆ’ಗೆ ನಾನು ಹಸ್ತಪ್ರತಿ ಕಳಿಸಿದ್ದೆ ಎಂದೆನಲ್ಲ, ಆಗ ಡಾ. ಕಂಬಾರರೂ ಒಬ್ಬ ನಿರ್ಣಾಯಕರಂತೆ. ತಮಗೆ ಬಂದಿದ್ದ ಹಸ್ತಪ್ರತಿಗಳಲ್ಲಿ ತಾವು ಇಷ್ಟಪಟ್ಟ ಕೆಲವನ್ನು ‘ಓದು’ ಎಂದು ತಮ್ಮ ಶ್ರೀಮತಿಯವರಿಗೂ ಕೊಟ್ಟಿದ್ದರಂತೆ… !

1983ರ ವರ್ಷದ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಪ್ರಶಸ್ತಿಗಳು 1985ರ ಮಾರ್ಚ್ ತಿಂಗಳಲ್ಲಿ ಘೋಷಣೆಯಾದವು. ಆ ಸಲ ನಾಟಕ ಪ್ರಕಾರಕ್ಕೆ ಎರಡು ಬಹುಮಾನಗಳನ್ನು ಘೋಷಿಸಲಾಗಿತ್ತು : ಹಿರಿಯ ಪತ್ರಕರ್ತ ಬಿ.ವಿ. ವೈಕುಂಠ ರಾಜು ಅವರ ‘ಅನಾವರಣ’ (ಬಹುಶಃ ) ಮತ್ತು ಕಿರಿಯ ಪತ್ರಕರ್ತನಾಗಿದ್ದ ನನ್ನ ‘ದೊಡ್ಡಪ್ಪ.’

ಆಗ ತಮ್ಮ ಕೃತಿಗಳಿಗೆ ಬಹುಮಾನ ಪಡೆದು ವೇದಿಕೆಯ ಮೇಲೆ ಆಸೀನರಾಗಿದ್ದವರು ಡಾ. ದೇ. ಜವರೇಗೌಡ, ಜಿಎಸ್ಸೆಸ್, ಸಿದ್ಧಲಿಂಗ ಪಟ್ಟಣಶೆಟ್ಟಿ, ಬೊಳುವಾರು ಮುಂತಾದ ಘಟಾನುಘಟಿಗಳು… ಎಲ್ಲರನ್ನೂ ಆಗಿನ ಅಕಾಡೆಮಿಯ ಅಧ್ಯಕ್ಷ ‘ಸಿರಿ ಬೆಳಕಿನ ಕವಿ’ ಡಾ. ಕೆ.ಎಸ್. ನಿಸಾರ್ ಅಹ್ಮದರು ಅದೆಷ್ಟು ಗೌರವದಿಂದ ಬರಮಾಡಿಕೊಂಡರು ಅಂತೀರಿ…

ಪ್ರಶಸ್ತಿ ಸಮಾರಂಭ ಮುಗಿದ ಮೇಲೆ ಒಂದು ತಮಾಷೆ ನಡೆಯಿತು. ಅಕಾಡೆಮಿಯ ಸದಸ್ಯನಾಗಿದ್ದ ಮಿತ್ರ ಪುಂಡಲೀಕ ಶೇಟ್ ನನ್ನನ್ನು ಕಲಾಕ್ಷೇತ್ರದ ಬಲ ಅಂಗಣಕ್ಕೆ ಕರೆದೊಯ್ದ… ಅಲ್ಲಿದ್ದರು ಶ್ರೀಕೃಷ್ಣ ಆಲನಹಳ್ಳಿ. ಅವರೂ ಆಗ ಸಾಹಿತ್ಯ ಅಕಾಡೆಮಿಯ ಸದಸ್ಯ. ಒಂದೊಂದು ವಿಭಾಗದ ಕೃತಿಗಳನ್ನೂ ಆಯಾ ಕ್ಷೇತ್ರದ ನಿಷ್ಣಾತರಿಗೆ ಕಳುಹಿಸಿ, ಅವರು ಆಯ್ಕೆ ಮಾಡಿ ಕಳಿಸಿದ ಕೃತಿಗಳಿಗೆ ಬಹುಮಾನ ಘೋಷಿಸುವುದು ಸಾಹಿತ್ಯ ಅಕಾಡೆಮಿಯ ವಾಡಿಕೆ. ಆ ಬಗ್ಗೆ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಆಯ್ಕೆ ಪಟ್ಟಿಯನ್ನು ಒಪ್ಪಿಗೆಗಾಗಿ ಮಂಡಿಸುವ ಕ್ರಮವುಂಟು. ಆಗ ಭಾರೀ ಭಾರೀ ಚರ್ಚೆಗಳಾಗುವುದೂ ಉಂಟು. ಆ ವರ್ಷ ದೀರ್ಘ ಕಾಲದವರೆಗೆ ಚರ್ಚೆ ನಡೆದದ್ದು ನನ್ನ ಬಗ್ಗೆಯೇ ಅಂತೆ…! ಶ್ರೀಕೃಷ್ಣ ಆಲನಹಳ್ಳಿಯವರಿಗೆ ನಾನು ಕನ್ನಡಿಗ ಎಂಬ ಬಗ್ಗೆಯೇ ಗುಮಾನಿ ಇತ್ತಂತೆ. ”ಈ ವಾಜಪೇಯಿ ಉತ್ತರ ಭಾರತದವನು. ಹಿಂದಿಯಲ್ಲಿ ಅವನು ಬರೆದ ನಾಟಕವನ್ನು ಯಾರೋ ಕನ್ನಡಕ್ಕೆ ರೂಪಾಂತರಿಸಿ ಅವನದೇ ಹೆಸರಲ್ಲೇ ಪ್ರಕಟಿಸಿದ್ದಾರೆ. ಆದ್ದರಿಂದ ಈ ಕೃತಿಗೆ ಬಹುಮಾನ ಕೊಡಬಾರದು,” ಎಂದೆಲ್ಲ ಅವರು ವಾದಿಸಿದ್ದರಂತೆ. ”ಇಲ್ಲಿಲ್ಲ… ಆತ ಕನ್ನಡಿಗನೇ… ನಾನು ಬಾಲ್ಯದಿಂದಲೂ ಬಲ್ಲೆ… ಇಬ್ಬರೂ ಒಂದೇ ಶಾಲೆ, ಹೈಸ್ಕೂಲು, ಕಾಲೇಜಿನಲ್ಲಿ ಒಟ್ಟಿಗೆ ಓದಿದವರು. ಆತ ಪತ್ರಕರ್ತ…” ಎಂದೆಲ್ಲ ಪುಂಡಲೀಕ ಶೇಟ್ ಪ್ರತಿವಾದ ಮಂಡಿಸಿದ್ದನಂತೆ. ಅಂದು ರಾತ್ರಿ ”ನೀವು ನಿಜವಾಗಿಯೂ ಕನ್ನಡದವರೇನ್ರೀ…?! ಮತ್ತೆ ‘ವಾಜಪೇಯಿ’ ಅಂತ…” ಅಂತ ರಾಗ ಎಳೆದ ಆಲನಹಳ್ಳಿಗೆ ನಾನು, ”ಇದೆಲ್ಲವನ್ನೂ ವಿವರವಾಗಿ ಕಾಗದ ಬರೀತೇನೆ ಆಯ್ತಾ…?” ಎಂದು ಹೇಳಿ ಜಾರಿಕೊಳ್ಳಬೇಕಾಯಿತು.

ಮುಂದೆ ಕೆಲವೇ ದಿನಗಳಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ‘ಗ್ರಂಥ ಗೌರವ ಪುರಸ್ಕಾರ’ಕ್ಕೆ ಕೂಡ ‘ದೊಡ್ಡಪ್ಪ’ ಪಾತ್ರನಾದ. ಅದಕ್ಕೂ ಹಿಂದಿನ ವರ್ಷ ನನ್ನ ವೃತ್ತಿಮಿತ್ರ ರಮಜಾನ್ ದರ್ಗಾ ಅವರ ‘ಕಾವ್ಯ ಬಂತು ಬೀದಿಗೆ’ ಎಂಬ ಕೃತಿಗೆ ಆ ಪುರಸ್ಕಾರ ಸಂದಿತ್ತು.

ಹುಬ್ಬಳ್ಳಿಯ ಮೂರುಸಾವಿರ ಮಠದ ‘ಗ್ರಂಥ ಗೌರವ ಪುರಸ್ಕಾರ’ ಸ್ವೀಕರಿಸುತ್ತಿರುವಾಗ…

-೦-೦-೦-೦-೦-

ಇದೆಲ್ಲ ಆದ ಮೇಲೆ ಹೀಗೇ ಒಮ್ಮೆ ರಂಗ ನಿರ್ದೇಶಕ ಜಯತೀರ್ಥ ಜೋಶಿಯ ಜೊತೆಗೆ ‘ಮ.ಗ್ರ.ಮಾ.’ಕ್ಕೆ ಹೋಗಿದ್ದೆ. ಪ್ರವೇಶ ದ್ವಾರದ ಎಡಕ್ಕೆ ಇದ್ದ ಒಂದು ಸುಖಾಸನದ ಮೇಲೆ ಅಜ್ಜ ‘ತಕ್ಕೆ’ಗೆ ಒರಗಿಕೊಂಡಿದ್ದರು. ಆ ಕಡೆ ಕೂತುಕೊಂಡಿದ್ದರು ವಿಮರ್ಶಕ ಪ್ರೊ. ಕೀರ್ತಿನಾಥ ಕುರ್ತಕೋಟಿ.

”ಲೇ… ಬಾ ಇಲ್ಲೇ…” ಎಂದರು. ಬಳಿಗೆ ಹೋದೆ. ಅವಡುಗಚ್ಚಿ ಎಡಗೈ ಮುಷ್ಟಿಯಿಂದ ನನ್ನ ಹೊಟ್ಟೆಗೊಮ್ಮೆ ಗುದ್ದಿ, ”ಸ್ವೀಟು ತರಸೋ ಮಗನs…?” ಎಂದರು ಅಜ್ಜ…

ಅದು ಅವರ ‘ಪ್ರೀತಿ’ಯ ರೀತಿ…

ಆಗ, ”ಈ ಹುಡಗೂರಿಗೆ…” ಎಂದು ಅರ್ಧಕ್ಕೆ ಮಾತು ತುಂಡರಿಸಿ ಎದ್ದು ಹೋಗಿ ತಾಂಬೂಲ ರಸವನ್ನು ಉಗುಳಿ ಬಂದ ಪ್ರೊ. ಕುರ್ತಕೋಟಿಯವರು, ”…ಈಗಿನ ಹುಡಗೂರಿಗೆ ಇಂಥಾವೇನಾರೆ ಪ್ರಶಸ್ತಿ-ಗಿಶಸ್ತಿ ಬಂದ್ರ ಸಾಕು, ಬ್ಯಾರೆಯವ್ರು ಕಣ್ಣಿಗೇ ಕಾಣೂದಿಲ್ಲ…” ಎಂದು ಚೇಷ್ಟೆ ಮಾಡಿ, ”ಒಳ್ಳೆ ಪ್ರಯತ್ನ ಮಾಡೀರಿ… ಇದು ಇಷ್ಟಕ್ಕs ನಿಲ್ಲಬಾರದು…” ಅಂದರು.

”ಅವ್ರು ನಿಂತ್ರ ನಾವು ಬಿಡಬೇಕಲ್ಲಾ…” ಅಂತ ಜಯತೀರ್ಥ ಜೋಶಿ…

ಜಿ. ಬಿ. ಜೋಶಿ ‘ದೊಡ್ದಪ್ಪ’ದ ಪ್ರದರ್ಶನವನ್ನು ಧಾರವಾಡದಲ್ಲಿ ನೋಡಿದ್ದು ಗೊತ್ತಿತ್ತು. ಆದರೆ ಪುಸ್ತಕ ರೂಪದಲ್ಲಿ ಅದನ್ನು ಅವರು ಓದಿದ್ದರೆಂಬ ವಿಷಯ ನನಗೆ ಗೊತ್ತಾದದ್ದು ಅವತ್ತೇ. ತಾವು ಓದಿದ್ದಷ್ಟೇ ಅಲ್ಲ, ಕೀರ್ತಿಯವರಿಗೂ ಅದನ್ನು ಓದಲು ಕೊಟ್ಟಿದ್ದರಂತೆ…

ನಾನೇನೋ ಹುಡುಗತನದಲ್ಲಿ ಬರೆದ ‘ದೊಡ್ಡಪ್ಪ’ ನನಗೆ ಹೆಸರು-ಹಣ ಎರಡನ್ನೂ ತಂದಿತ್ತಿತು.

 

‍ಲೇಖಕರು G

2 December, 2012

26 Comments

  1. paresh saraf

    ನಾಟಕ ರಂಗದಲ್ಲಿ ನೀವು “First Impact” ಮೂಡಿಸಿದ ರೀತಿ ಬಹಳ ವಿಶೇಷವಾದುದು. ಲೇಖನ ಬಹಳ ಇಷ್ಟವಾಯಿತು. ನಾಟಕ ರಂಗದಲ್ಲಿ ನಿಮ್ಮ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ 🙂

  2. ಮಂಜುಳಾ ಬಬಲಾದಿ

    ನಿಮ್ಮ ’ಸುಮ್ಮನೆ ನೆನಪುಗಳು’ ನಿಮ್ಮ ಆತ್ಮಕಥೆಯ ಒಂದು ಸಣ್ಣ ವಿಭಾಗ ಅಂತ ಅನಿಸ್ತಿರ್ತದ ಯಾವಾಗಲೂ 🙂 ಇವತ್ತಿಗೂ ನಿಮ್ಮನ್ನ ನೋಡಿದರ, ಸಾಹಿತ್ಯದ ಜೊತೆ ಬರಹಗಾರರ ಸಂಬಂಧ ಹೆಂಗ ಬೆಸೆದುಕೊಂಡಿರಬೇಕು ಅನ್ನೋದಕ್ಕ ನೀವs ಮಾದರಿ ಅಂತ ಅನಿಸ್ತಿರ್ತದ.. ’ದೊಡ್ಡಪ್ಪ’ನ್ನ ಓದಬೇಕಾತು:-)

  3. ಗುರುಪ್ರಸಾದ ಕುರ್ತಕೋಟಿ

    ದೊಡ್ಡಪ್ಪನ ದಂಡಯಾತ್ರೆ ಓದಿ ದಿಲ್ ಖುಷ್ ಆತು! ಆ ದಿನಗಳಲ್ಲಿ ನಿಮ್ಮ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ ಎಲ್ಲಾ ಹಿರಿಯರಿಗೊಂದು ದೊಡ್ಡ ಸಲಾಮು. “ನಾಟಕ ಬರೆದ ಮೇಲೆ ಅದನ್ನು ‘ದೂರ’ದಲ್ಲಿ ನಿಂತು ನೋಡಬೇಕೇ ವಿನಾ ನಾಟಕಕಾರ ಅದರ ‘ಭಾಗ’ವಾಗಬಾರದು” ವಾಹ್ ಎಂಥಾ ಅನುಭವದ ಮಾತದು!

  4. chandrashekhar vastrad

    ರಂಗಭೂಮಿ ಸಂಗದಿಂದ ಬದುಕು ಶ್ರೀಮಂತವಾದ ಬಗೆ ಸೊಗಸಾಗಿ ನಿರೂಪಿತವಾಗಿದೆ.ಲೇಖಕರಿಗೆ ಅಭಿನಂದನೆಗಳು

  5. Atmananada Vasan

    “ನಾಟಕ ಬರೆದ ಮೇಲೆ ಅದನ್ನು ‘ದೂರ’ದಲ್ಲಿ ನಿಂತು ನೋಡಬೇಕೇ ವಿನಾ ನಾಟಕಕಾರ ಅದರ ‘ಭಾಗ’ವಾಗಬಾರದು” ದೊಡ್ಡಪ್ಪನ ನೋಡೋ ಹಾಗ ಆಗಿದೆ ಸರ್….

  6. Anitha Naresh Manchi

    ಲೇಖನ ಬಹಳ ಇಷ್ಟವಾಯಿತು

  7. sudheendra

    ಯಾವತ್ತಾದರು ಇದರ ನಾಟಕ ನಡೆದರೆ, ನನ್ನು ಕರೆಯಿರಿ ಸರ್. ಚೆನ್ನಾಗಿದೆ

  8. sunil Rao

    ಜೀವನಕ್ಕೆ ಅದೆ೦ತಹ ಅನುಭವಗಳು ಸಾರ್??
    ಒ೦ದು ಕೃತಿಯ ಮನ್ನಣೆ ಕೊಡುವಷ್ಟು, ಆನ೦ದ ಮಾತ್ಯಾವುದು ಕೊಡಲಾರದ, ಇ೦ತಹ ಹಾಲವಾರು ನಿದರ್ಶನ ಹಾಗು ಪುಸ್ತಕ ನಾಟಕಗಳಿ೦ದಲೇ ನಮ್ಮ ಪೀಳಿಗೆಗೆ ದಾರಿ…
    beautiful experience

  9. ಸವಿತ ಇನಾಮದಾರ್

    ಕಾಕಾ.. ನಿಮ್ಮ ‘ದೊಡ್ಡಪ್ಪ’ನ ಆಶೀರ್ವಾದದಿಂದ ನೀವಿಂದು ಈ ಉತ್ತುಂಗವನ್ನು ತಲುಪಿದ್ದೀರೆನ್ನುವ ನಿಮ್ಮ ಮಾತುಗಳು ನಂಗ ಭಾಳ ಹಿಡಿಸಿದವು..
    ”ಒಂದು ಮಾತು ಹೇಳ್ತೀನಿ ಕೇಳು. ಯಾವದs ತಂಡದ ಜತೀಗೆ ಗುರುತಿಸಿಕೋಬ್ಯಾಡಾ… ನೀ ಬರದಂಥಾ ನಾಟಕದಾಗ ಯಾವತ್ತಿಗೂ ನೀ ಪಾರ್ಟ್ ಮಾಡಬ್ಯಾಡಾ…” ಎನ್ನುವ ಜಿ.ಬಿ. ಜೋಶಿಯವರ ಅನುಭವಾಮೃತವನ್ನು ಹಂಚಿಕೊಳ್ಳುವ ಸುಯೋಗ ನಿಮಗೆ ದೊರೆತದ್ದಲ್ಲದೇ ಮತ್ತೆ ಇನ್ನಷ್ಟು ಹೊಸ ನಾಟಕ ರಚನೆಗೆ ಪ್ರೋತ್ಸಾಹ ಸಿಕ್ಕಿದ್ದು ನಿಜವಾಗಿಯೂ ಶ್ಲಾಘನೀಯ.. ನಿಮ್ಮ ನಾಟಕಗಳನ್ನು ನೋಡುವುದಷ್ಟೇ ಅಲ್ಲದೆ ಅದರಲ್ಲಿ ಪಾತ್ರವಹಿಸುವ ಯೋಗ ಯಾವಾಗ ಬರತದ ಅಂತ ಕಾಯ್ಲಿಕ್ಕೆ ಹತ್ತೀನಿ.

  10. Dr. Vasanthkumar Perla

    ಭಾಳಾ ಚಲೋ ಬರೀತೀರಿ ಸರ.. ತುಂಬಾ ಇಷ್ಟ ಆತು ನೋಡ್ರೀ… 🙂

  11. hipparagi Siddaram

    ಸರ್, ಜಿ.ಬಿ.ಯವರಂತ ಹಿರಿಯರ ಮಾತುಗಳು ಅನನ್ಯ….ಅಪರೂಪ….ಅವರ ಮಾತುಗಳು ನನಗಂತೂ ಸುಮಾರು ಇಪ್ಪತ್ತು ವರ್ಷಗಳಿಂದ ಹವ್ಯಾಸಿ ರಂಗಭೂಮಿಯ ಒಳ-ಹೊರಗನ್ನು ಬಲ್ಲ ನನಗೆ ಮನಕ್ಕೆ ಇರಿದಂತಾದವು. ಯಾಕಂದರೆ ಇಂದಿನ ರಂಗಕರ್ಮಿಗಳು ಪ್ರತಿಯೊಂದನ್ನು ಲಾಭಾಂಶದ ಆಧಾರದ ಮೇಲೆ ಅಳೆಯುವುದನ್ನು ನೋಡಿದರೆ ಹೀನ ಮನದವರೆಂದು, ರಂಗಭೂಮಿ ಕಟ್ಟುವವರಲ್ಲ…ಕೆಡವುವವರು ಎಂಬುದು ತಿಳಿಯುತ್ತದೆ. ಮೊದಲು ತಂಡದ bank balance ನೋಡಿದಾದ ಮೇಲೆಯೇ ಮುಂದುವರಿಯುವ ಹೀನ ಪ್ರವೃತ್ತಿ ಈಗ ಹೆಚ್ಚಾಗುವುದನ್ನು ಗಮನಿಸಿದರೆ ಕಳೆದ ಶತಮಾನದಲ್ಲಿ ಜಿ.ಬಿ.ಯವರು ಹೇಳಿದ ಮಾತುಗಳು ಇಂದಿಗೂ ಹೆಚ್ಚು ಪ್ರಸ್ತುತವೆನಿಸುತ್ತಿದೆ.ಲೇಖನ ಉತ್ತಮವಾಗಿ ಮೂಡಿ ಬಂದಿದೆ….ಧನ್ಯವಾದಗಳು !

  12. raju vaividya

    ಸರ್ ನಿಮ್ಮ ಪ್ರತಿಯೊಂದು ಕಾಲಂ: ಮದುರವಾದ ಅನುಭವವನ್ನ ಸುಂದರವಾಗಿ ಕಣ್ಣ ಮುಂದೆ ಬರುವಂತೆ ಬರೆಯುತ್ತಿರಿ. ಅಂದಿನ ನಿಮ್ಮ ದೊಡ್ಡಪ್ಪ ದಂಡಯಾತ್ರೆ ನಿಜವಾಗಿಯು ಸುಂದರ ಅಂದು ದೊರೆತಂತ ಪ್ರಶಂಸೆ,ಪ್ರಶಸ್ತಿ ನಿಮ್ಮ ಅನುಭವವನ್ನು ಬರೆಯುವಂತೆ ಇಂದು ಮಾಡಿದೆ. ನಿಜವಾಗಿಯೂ ಸಂತೋಷವಾಗುತ್ತೆ

  13. prakash hegde

    ಪ್ರೀತಿಯ ಅಣ್ಣಾ…

    ಲೇಖನ ಬಹಳ ಇಷ್ಟವಾಯ್ತು..
    ನಿಮ್ಮ ಸಂತಸದ ಸಂಭ್ರಮದಲ್ಲಿ ನಾನೂ ಭಾಗಿಯಾದೆ…

    ಜೆಬಿ ಯವರ ಮಾತು ಬಹಳ ಇಷ್ಟವಾಯ್ತು..

    ಇನ್ನೂ ಏನೇನ್ ಸಾಧಿಸಿದ್ದೀರಿ ಅಣ್ಣಾ… ?

    ನಿಮ್ಮ ಲೇಖನಕ್ಕಾಗಿ ಮತ್ತೆ ಮುಂದಿನವಾರ ಕಾಯ್ತಿವಿ….

  14. ಈಶ್ವರ ಕಿರಣ

    ಭರ್ಜರಿ. ಈ ವಾರ ಅಂತೂ ತುಂಬಾ ಇಷ್ಟವಾಯಿತು. ಮುಂದಿನ ವಾರಕ್ಕೆ?

  15. samyuktha

    ‘ದೊಡ್ಡಪ್ಪ’ ನನ್ನ ಓದಬೇಕು ಅಂತಿದೆ ಸರ್!

  16. ಸುಗುಣಮಹೇಶ್

    ನೀವು ಬರೆಯೋ ಈ ಅಂಕಣವನ್ನೇ ಒಂದು ಆತ್ಮಕಥನಾ ಪುಸ್ತಕವನ್ನಾಗಿ ಮಾಡಬಹುದು 🙂 ಸರ್ ನಾನು ನಿಮ್ಮನ್ನು ಉತ್ತರಭಾರತದವರು ಎಂದುಕೊಂಡಿದ್ದೆ :).. ನಿಮ್ಮ ಪುಸ್ತಕವನ್ನು ಓದುವ ಆಸೆಯಾಗಿದೆ

  17. ಜ ಬ ಪರೇಶ

    ನಿಮ್ಮ ‘ದೊಡ್ಡಪ್ಪ’ನ ಮೂಲಕ ನಮ್ಮ ‘ಸೂತ್ರಧಾರ’ ತಂಡವನ್ನು ಹಾಗೂ ಆ ದಿನಗಳನ್ನು ನೆನಪಿಸಿದೊಂಡಿರುವಿರಿ. ಧನ್ಯವಾದಗಳು.

  18. umesh desai

    ಗುರುಗಳ ನಮೋನಮಃ
    ದೊಡ್ಡಪ್ಪ ನ್ನ ಓದಬೇಕಾತಲ್ರಿ..
    ನಿಮ್ಮ ಅನುಭವ ಅನನ್ಯ ಹಂಗ ಅದನ್ನ ನಮ್ಮಂಥವರ ಮುಂದ ಹಂಚಿಕೊಂಡು
    ಪುಣ್ಯಾ ಗಳಸತಿರ್ರಿ..

  19. bharathi

    enthenthaa janra sanga ella sikkide nimge … bhagyavanthru neevu. nimma lekhana odode ondu sundara anubhava

  20. Pushparaj Chauta

    ಸರ್ ದೊಡ್ಡಪ್ಪ ಸಿಕ್ತಾರ? ಇದ್ದರೆ ಇನ್ನೊಮ್ಮೆ ಭೆಟ್ಟಿಯಾದಾಗ ಪರಿಚಯ ಮಾಡಿಸಿ. ದೊಡ್ಡಪ್ಪನ ಬಗ್ಗೆ ಮಾತಾಡೋಣ.

  21. Mudgal Venkatesh

    Super write-up Sirji,,,,,

  22. Badarinath Palavalli

    ನಿಮ್ಮ ಹಳೆಯ ಫೋಟೋ ನಿಮ್ಮ ಅದಮ್ಯ ಚೈತನ್ಯ ಪೂರ್ಣ ತಾರುಣ್ಯ ಭಾವ.

    ರಂಗ ಭೂಮಿಯ ನಂಟು ಸದಾ ಹುರುಪಿನ ನೆನಪುಗಳೇ ಅಲ್ಲವೇ ಸಾರ್?

  23. arathi ghatikaar

    ಗೋಪಾಲ್ ಕಾಕಾ , ನಿಮ್ಮ ಮೊದಲ ನಾಟಕವೆ ಇಷ್ಟೊಂದು ಹೆಗ್ಗಳಿಕೆ ಪಡೆದು ಮುಂದೆ ಸಾಹಿತ್ಯ ನಾಟಕ ಅಕಾಡಮಿ ಅಂತ ಉನ್ನತ ಪ್ರಶಸ್ತಿ ಗಳಸುವಸ್ತು ಶ್ರೇಷ್ಟ ಕೃತಿ ಅದಾಗಿತ್ತು ,ಅಂದ್ರೆ ನಿಜಕ್ಕೂ ಶ್ಲಾಗ್ನನೀಯ ! ಅದು ನಡೆದು ಬಂದ ಹಾದಿಯಲ್ಲೇ ನಿಂತು ನಿಮ್ಮ ಬೆನ್ನು ತಟ್ಟಿ , ಪ್ರೋತ್ಸಾಹ ನೀಡಿದ ಘಟಾನುಘಟಿ ಅನುಭವಿ ರಚನಕಾರರು , ನಾಟಕಕಾರರು ಎಲ್ಲರನ್ನು ಬಹಳ ಆತ್ಮೀಯವಾಗಿ,ಆಪ್ತವಾಗಿ ಸ್ಮರಿಸಿದ್ದೀರಿ . ಅ ” ದೊಡ್ಡಪ್ಪ ” ನಿಗೂ ಹಾಗು ನನ್ನ ದೊಡ್ಡಪ್ಪ ಅಂದ್ರ ಕಾಕಾಗೂ ಅಭಿನಂದನೆಗಳು 🙂 ಈ ನಾಟಕವನ್ನು ಓದುವ ಅದಮ್ಯ ಆಸೆ ಹುಟ್ಟಿ ಕನಸು ಕಾಣ್ತಾ ಇದೆ 🙂 , ?:)

  24. n.s.sreedhara murthy

    ಲೇಖನ ನೆನಪುಗಳಿಂದ ಸಿಂಗರಗೊಂಡಿದೆ, ಛಾಯಾಚಿತ್ರ ಸೊಗಸಾಗಿದೆ

  25. sumathi

    Thanks for tagging me to read this interesting part of your work. I’m still opening up in this regard, hope to know more through this kind of write-ups. Enjoyed reading!

  26. Satya

    ನಿಮ್ಮ ಲೇಖನ ಓದಿದ್ದರ ನಾವು ಸಣ್ಣವರಿದ್ದಾಗ ಧಾರವಾಡ್ ಆಕಾಶವಾಣಿ ಕೇಂದ್ರದಿಂದ ನಾಟಕ ಪ್ರಸಾರ ಆಗತಿದ್ದುವಲ ಅದರ ನೆನಪು ಆಗ್ತದ. ಎಲ್ಲಾ ವಿಷಯ ಮತ್ತ ಭಾವನೆಗಳನ್ನ ಅವರು ಬರೀ ಧ್ವನಿಯಿಂದ ನಮಗ ತಲುಪಿಸ್ತಿದ್ದ್ರು. ಅದನ್ನ ನೀವು ಶಬ್ದದಿಂದ ಸಾಧಿಸೀರಿ … ಭಾಳ ಖುಷಿ ಅನಸ್ತದ. ಬಹುಷಃ ಹಿಂದಿನ ದಿನಗೊಳನ್ನ ನೆನಪು ಮಾಡಿಕೋತ ಇರೂ ಸುಖ ಮತ್ತ ಎಡರಾಗೂ ಇಲ್ಲ ಅನಸ್ತದ. ಇನ್ಥಾವ ಸವಿ ನೆನಪು ನಮ್ಮ ಮಕ್ಕಳಿಗೆ ಇರ್ಲಿ ಅಂತ ಆಶಾ ಮಾಡ್ತೀವಿ … ಆದ್ರ ಈಗಿನ ಪರಿಸ್ಥಿತಿ ನೋಡಿದ್ರ ಬಹುಷಃ ಅವರ ಮನಸ್ನ್ಯಾಗ ಸುವರ್ಣ ನ್ಯೂಸ್, TV9 ನ್ಯೂಸ್, ಆಜ್ ತಕ್ ನ್ಯೂಸ್ … etc etc ಗಳ ನೆನಪು ಇರಬಹುದು … ಹಿಂಗ ಬರಕೋತ ಇರ್ರಿ …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading