ಸುಮ್ಮನೇ ನೆನಪುಗಳು – 9
– ಗೋಪಾಲ ವಾಜಪೇಯಿ
ಶ್ರೀಪಾದ ದೀಕ್ಷಿತ ವಾಜಪೇಯಿಯವರು ಲಕ್ಷ್ಮೇಶ್ವರದ ಕಿಲ್ಲೆಗೆ ಹೋಗಿ ಬರುತ್ತಿದ್ದ ವಿಚಾರವನ್ನು ನಿಮ್ಮೆದುರು ಹೇಳುತ್ತಿದ್ದೆ. ಮಿರಜ್ ಸಂಸ್ಥಾನದ ಶ್ರೀಮಂತ ಬಾಳಾಸಾಹೇಬ ಪಟವರ್ಧನರ ಜೊತೆಗಿನ ಒಡನಾಟದ ಇನ್ನೊಂದು ಮುಖವನ್ನು ಇವತ್ತು ನಿಮ್ಮೆದುರು ಅನಾವರಣಗೊಳಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಇದು ಒಬ್ಬ ದೊರೆ ತನ್ನ ಗುರುವನ್ನು ಹೇಗೆ ಗೌರವಿಸುತ್ತಿದ್ದ ಎಂಬುದರ ಉದಾಹರಣೆ.
ಶ್ರೀಮಂತ ಬಾಳಾಸಾಹೇಬರು ಮಹಾ ಜಿಜ್ಞಾಸು. ಧರ್ಮ, ಶಾಸ್ತ್ರ ಮುಂತಾದವುಗಳ ಬಗ್ಗೆ ಅವರು ಚರ್ಚೆಗೆ ಕೂತರೆ ಹೊತ್ತು ಹೋದದ್ದೇ ತಿಳಿಯುತ್ತಿರಲಿಲ್ಲ.
ಆಡಳಿತದ ವಿಚಾರವಾಗಿ ಅವರು ನಡೆಸುತ್ತಿದ್ದ ಚರ್ಚೆಗಳ ಸಂದರ್ಭದಲ್ಲಿ, ಮತ್ತು ಯಾವುದೇ ಒಂದು ನಿರ್ಣಯವನ್ನು ಪ್ರಕಟಿಸುವಾಗ ಅವರು ತಾಳುತ್ತಿದ್ದ ಮುಖಭಾವ ತುಂಬ ಗಂಭೀರ ಎನಿಸುತ್ತಿತ್ತು. ಅಲ್ಲಿ ಅವರದೇ ಅಧಿಕಾರವಾಣಿ. ಆದರೆ, ಧರ್ಮಶಾಸ್ತ್ರ ಚಿಂತನೆಯ ಸಂದರ್ಭದಲ್ಲಿ ಮಾತ್ರ ಬಾಳಾಸಾಹೇಬರು ನಿಜಕ್ಕೂ ಒಬ್ಬ ವಿನಮ್ರ ‘ವಿದ್ಯಾರ್ಥಿ’ಯೇ. ಅಂಥ ಶಿಸ್ತು, ಅಂಥ ಏಕಾಗ್ರತೆ, ಅಂಥ ಆಸಕ್ತಿ… ಮತ್ತು, ಗುರುವಿನ ಬಗ್ಗೆ ಅಂಥ ಭಕ್ತಿ. ಇನ್ನಷ್ಟು, ಮತ್ತಷ್ಟು, ಮಗದಷ್ಟು ತಿಳಿದುಕೊಳ್ಳಬೇಕು ಎಂಬುದವರ ಮನಿಷೆ.
ಅವರಿಗೆ, ‘ಗುರು ಶ್ರೀಪಾದ ದೀಕ್ಷಿತ ವಾಜಪೇಯಿಯವರ ಸಮ್ಮುಖದಲ್ಲೇ ಕೂತು ಚರ್ಚಿಸಬೇಕು,’ ಎಂದೆನಿಸಿದರೆ ಮುಗಿಯಿತು. ಕೂಡಲೇ ದೀಕ್ಷಿತರ ಮನೆಗೆ ಸೂಚನೆ ಹೋಗುತ್ತಿತ್ತು. ಸಂದೇಶ ಹೊತ್ತು ಹೋದವ ದೀಕ್ಷಿತರ ಮನೆ ಮುಟ್ಟುವುದರೊಳಗಾಗಿ ಶ್ರೀಮಂತ ಬಾಳಾಸಾಹೇಬರು ‘ತಯಾರಾಗಿ’ ಹೊರಟು ನಿಲ್ಲುತ್ತಿದ್ದರು. ಹೌದು, ‘ತಯಾರಾಗಿ’… ತಾವು ಈಗ ಒಬ್ಬ ಸಂಸ್ಥಾನಿಕನಲ್ಲ, ಕೇವಲ ಒಬ್ಬ ವಿದ್ಯಾರ್ಥಿ. ಗುರುವಿನ ಸನ್ನಿಧಾನಕ್ಕೆ ಹೊರಟಿದ್ದೇನೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ಮರೆಯುತ್ತಿರಲಿಲ್ಲ. ಆ ಎಚ್ಚರಿಕೆಯಿಟ್ಟುಕೊಂಡೇ ಅವರು ಹೊರಡುತ್ತಿದ್ದದ್ದು.
ನಿಮಗೆ ನೆನಪಿರಬಹುದು, ಕಿಲ್ಲೆಗೊಂದು ದಕ್ಷಿಣ ದ್ವಾರ ಇತ್ತೆಂದು ಈ ಮೊದಲೊಮ್ಮೆ ಹೇಳಿದ್ದೆ. (ಇಲ್ಲೀಗ ಮುನ್ಸಿಫ್ ಕೋರ್ಟು ಇರುವುದರಿಂದ ಈ ದ್ವಾರವನ್ನು ಕೋರ್ಟ್ ಬಾಗಿಲೆಂದೇ ಕರೆಯುವದು ವಾಡಿಕೆ.) ಪೋಷಾಕಿನಲ್ಲಿದ್ದಾಗ ಎಂದೂ ಈ ದಕ್ಷಿಣ ದ್ವಾರದ ಮೂಲಕ ಬಂದವರಲ್ಲ ಬಾಳಾಸಾಹೇಬರು. ಸಾರೋಟಿನಲ್ಲೋ, ಮೇಣೆಯಲ್ಲೋ ಹೊರಡುವುದಾದರೆ ಪೂರ್ವದ್ವಾರದಿಂದಲೇ ಸಾಗುತ್ತಿದ್ದರು. ಆದರೆ, ಗುರುವಿನ ಸನ್ನಿಧಾನಕ್ಕೆ ಹಾಗೆಲ್ಲ ‘ಮೆರೆದಾಡುತ್ತ’ ಹೋಗಲಾದೀತೇ? ‘ಗುರುದರ್ಶನ’ಕ್ಕೆ ಅವರು ಮಡಿಬಟ್ಟೆಯುಟ್ಟು, ಬರಿಗಾಲಲ್ಲಿ ನಡೆದೇ ಹೋಗುತ್ತಿದ್ದರು…!
ಮಡಿಬಟ್ಟೆ ಎಂದರೆ? ಜೈನ ಮಂದಿರಕ್ಕೆ ಹೊರಟ ಒಬ್ಬ ಹಿರಿಯ ಶ್ವೇತಾಂಬರ ಜೈನ ವ್ಯಕ್ತಿಯನ್ನು ಕಣ್ಮುಂದೆ ತಂದುಕೊಳ್ಳಿ. ಆಗ ನಿಮಗೊಂದು ಅಂದಾಜು ಬರುತ್ತದೆ. ಒಂದು ಶುಭ್ರ ಬಿಳಿ ಧೋತರ ಮತ್ತು ಮೈಮುಚ್ಚುವಂಥ ಒಂದು ಶಾಲು. ಹಣೆಗೆ ಗಂಧ, ಕುಂಕುಮ ಬೊಟ್ಟು. ಕೊರಳಲ್ಲಿ ತುಳಸಿಮಣಿ ಮಾಲೆ.
ಕಿಲ್ಲೆಯಿಂದ ಹೆಚ್ಚೆಂದರೆ ಹದಿನೈದು ನಿಮಿಷದ ದಾರಿ ಸವೆಸಬೇಕು ಗುರುಮನೆ ತಲಪಲು. ಆದರೆ, ಹಾಗೆ ಹೊರಟಾಗ ಯಾವತ್ತೂ ತಮ್ಮೊಂದಿಗೆ ಅಂಗರಕ್ಷಕರನ್ನು ಕರೆದೊಯ್ದವರಲ್ಲ ಬಾಳಾಸಾಹೇಬರು. ಹೆಚ್ಚೆಂದರೆ ಅವರಿಗಿಂತ ತೀರ ಮುಂದೆ ಮತ್ತು ತೀರ ಹಿಂದೆ ಒಬ್ಬೊಬ್ಬ ಸಾಮಾನ್ಯ ಉಡುಪಿನ ವ್ಯಕ್ತಿ ಇರಬೇಕು. ಕೈಲ್ಲೊಂದು ಬೆಳ್ಳಿ ತಂಬಿಗೆ, ಹೂಮಾಲೆ, ಮತ್ತು ಗಂಧದ ತಟ್ಟೆ ಇವಿಷ್ಟನ್ನು ತಾವೇ ಹಿಡಿದು ಹೊರಡುತ್ತಿದ್ದ ಬಾಳಾಸಾಹೇಬರ ಮುಖದಲ್ಲಿ ಆಗೆಲ್ಲ ಸಾತ್ವಿಕ ಕಳೆ ತುಂಬಿರುತ್ತಿತ್ತು.
ದೀಕ್ಷಿತರ ಮನೆಯಲ್ಲಿ ಜಗುಲಿಯ ಮೇಲೆ ಗುರು. ಎದುರು ನೆಲದ ಮೇಲೆ ಹಾಸಿದ ಚಾಪೆಯ ಮೇಲೆ ಶಿಷ್ಯ ! ಎಲ್ಲಿಯಾದರೂ ನೋಡಲು ಸಾಧ್ಯವೇ ಇಂಥದನ್ನು? ಗುರುವಿನ ಸಮಸಮ ವೇದಿಕೆಯಲ್ಲಿ ಕೂತು ರಾರಾಜಿಸುವ ಇಂದಿನ ರಾಜಕೀಯ ನಾಯಕರುಗಳೆಲ್ಲಿ, ಅಂದಿನ ರಾಜ ಪರಿವಾರದ ಜನರೆಲ್ಲಿ?
ಗುರುವಿನೊಂದಿಗೆ ಗಹನ ಚರ್ಚೆ ಅದೆಷ್ಟು ಹೊತ್ತು ಸಾಗುತ್ತಿತ್ತೋ… ಊಟದ ಪರಿವೆಯೇ ಇಬ್ಬರಿಗೂ ಇರುತ್ತಿರಲಿಲ್ಲ. ದೀಕ್ಷಿತರು ಮಿತಾಹಾರಿ. ಬಾಳಾಸಾಹೇಬರೂ ಅಷ್ಟೇ. ಒಂದಷ್ಟು ಹಣ್ಣುಗಳು, ಮೇಲೊಂದು ಲೋಟ ಬದಾಮಿ ಹಾಲು. ಆಗೀಗ ಒಂದಷ್ಟು ‘ಸುಖಾಮೇವಾ’… ಅದನ್ನು ತಿಂದರೆ ಒಂದು ಅನಿರ್ವಚನೀಯ ಆನಂದ, ಸುಖ ಸಿಗುವುದರಿಂದ ಅದನ್ನು ಸುಖಾ ಮೇವಾ ಎಂದು ಕರೆಯುತ್ತಿದ್ದಿರಬೇಕೆಂದು ನನ್ನ ಭಾವನೆ. (ಅದು ‘ಸುಕ್ಕಾ ಮೇವಾ.’ ಅಂದರೆ ಒಣ ಫಲಗಳು. ಡ್ರೈ ಫ್ರೂಟ್ಸ್ ಅಂತೀವಲ್ಲ… ‘ಸುಕ್ಕಾ’ ಅಂದರೆ ಒಣ. ಅದು ‘ಸೂಖಾ’ದ ಮರಾಠಿ ರೂಪ.)
‘ಜಿಜ್ಞಾಸಾ ಸಮಯ’ ಮುಗಿದ ಮೇಲೆ ಹೊರಬಂದ ಬಾಳಾಸಾಹೇಬರ ಮುಖ ಒಂದು ವಿಶೇಷವಾದ ಕಳೆಯಿಂದ ಬೆಳಗುತ್ತಿತ್ತು. ಕಣ್ಣುಗಳಲ್ಲಿ ಅದೆಂಥ ಹೊಳಪು…!
ಅದೆಂಥ ಆನಂದ ಮುಖದಲ್ಲಿ…!
ಶ್ರೀಪಾದ ದೀಕ್ಷಿತ ವಾಜಪೇಯಿಯವರನ್ನು ಕುರಿತು ವರಕವಿ ಬೇಂದ್ರೆಯವರು ಒಂದು ಕಡೆ ಹೀಗೇ ಬರೆಯುತ್ತಾರೆ : ”….’ಅದೊಂದು ತೇಜದ ಪುಂಜ. ಒಮ್ಮೆ ನೋಡಿ ಬಾ… ಆಶೀರ್ವಾದ ಪಡೆದು ಬಾ,’ ಅಂತ ನಮ್ಮ ಅವ್ವ ಹೇಳಿದಳು. ಅಂತೆಯೇ ನಾನು ಲಕ್ಷ್ಮೇಶ್ವರಕ್ಕೆ ಹೋದೆ. ಆಗ ಮಿರಜ್ ಸಂಸ್ಥಾನಿಕರು ಕಿಲ್ಲೆಯಲ್ಲಿ ಒಂದು ದೊಡ್ಡ ಯಾಗ ಏರ್ಪಡಿಸಿದ್ದರು. ಅಲ್ಲಿ ಶ್ರೀಪಾದ ದೀಕ್ಷಿತ ವಾಜಪೇಯಿಯವರದೆ ನೇತೃತ್ವ. ನೂರಾರು ಜನರ ನಡುವೆಯೂ ಎದ್ದು ಕಾಣುವಂಥ ಆ ನಿಲುವು, ಆ ಧ್ವನಿ, ಮಂತ್ರೋಚ್ಚಾರಣೆಯಲ್ಲಿಯ ಆ ಸ್ಪಷ್ಟತೆ… ಎಲ್ಲಕ್ಕೂ ನಾನು ಮಾರು ಹೋದೆ….”
ಅಂಥ ತೇಜದ ಪುಂಜದೆದುರು ತಾಸುಗಟ್ಟಲೆ ಕೂತು ಬಂದವರ ಮುಖದಲ್ಲಿ ಖಂಡಿತವಾಗಿ ವಿಶೇಷವಾದ ಕಳೆ, ಹೊಳಪು, ಆನಂದ ಇದ್ದೇ ಇರುತ್ತದೆ…
ಒಂದೊಂದು ಸಲ ಅವರಿಬ್ಬರ ನಡುವೆ ನಾಲ್ಕಾರು ಗಂಟೆಗಳ ಕಾಲ ನಡೆಯುತ್ತಿದ್ದ ಚರ್ಚೆಗಳು, ಅವತ್ತಿನ ಮಟ್ಟಿಗೆ ಬ್ರೇಕ್ ತೆಗೆದುಕೊಂಡು ಮರುದಿನಕ್ಕೂ ಲಂಬಿಸುತ್ತಿದ್ದವಂತೆ. ”ಅವರು ಬಳಸುತ್ತಿದ್ದ ಪದಗಳು, ಅವಕ್ಕೆ ಅವರು ‘ಹುಡುಕು’ತ್ತಿದ್ದ ಆಧ್ಯಾತ್ಮಿಕ ಅರ್ಥಗಳು, ಆ ಕುರಿತೇ ಸಾಗುತ್ತಿದ್ದ ಚಿಂತನೆ ಎಲ್ಲವೂ ನಮ್ಮ ಬುದ್ಧಿಗೆ ಮೀರಿದವುಗಳಾಗಿರುತ್ತಿದ್ದವು…” ಎನ್ನುತ್ತಾರೆ 96 ವರ್ಷದ ನಮ್ಮ ಹಿರಿಯ ಸಂಬಂಧಿಯೊಬ್ಬರು.
ಲಕ್ಷ್ಮೇಶ್ವರದ ವಾಸ್ತವ್ಯ ಮುಗಿಸಿ, ಮಿರಜಿಗೆ ಮರಳಿದ ಮೇಲೆ ಕೂಡ ಬಾಳಾಸಾಹೇಬರು ಶ್ರೀಪಾದ ದೀಕ್ಷಿತರನ್ನು ತಮ್ಮಲ್ಲಿಗೆ ಒಂದು ಇಲ್ಲವೇ ಎರಡು ವಾರ ಕಾಲ ಕರೆಸಿಕೊಳ್ಳುತ್ತಿದ್ದುದುಂಟು. ಆಗ ದೀಕ್ಷಿತರೊಂದಿಗೆ ಪೆಂಡಸೆ ಭೀಮರಾಯನೂ ಮಿರಜಿಗೆ ಹೊರಡಲು ಅಣಿಯಾಗುತ್ತಿದ್ದ.
ತಮ್ಮ ಎಂಬತ್ತರ ವಯದಲ್ಲಿ ಶ್ರೀಪಾದ ದೀಕ್ಷಿತ ವಾಜಪೇಯಿಯವರು
ಲಕ್ಷ್ಮೇಶ್ವರದಿಂದ ಮಿರಜಿಗೆ ಹೋಗಲು ಆಗ ರೈಲೊಂದೇ ಸಾಧನ. ಗುಡಗೇರಿ ನಮ್ಮ ಊರಿಗೆ ಸಮೀಪದ ರೈಲು ನಿಲ್ದಾಣ. (ನಟ ಎನ್. ಬಸವರಾಜರ ಊರು) ನಮ್ಮ ಊರಿಂದ ಅಲ್ಲಿಯವರೆಗೂ ಆಗ ಬಸ್ಸಿನಲ್ಲಿ ಹೋಗಬೇಕು. ಆದರೆ ಇದು ‘ರಾಜಕಾರ್ಯನಿಮಿತ್ತ ಪ್ರವಾಸ’ವಾದ್ದರಿಂದ ಕಿಲ್ಲೆಯವರೇ ಒಂದು ವಿಶೇಷ ಸಾರೋಟಿನ ವ್ಯವಸ್ಥೆ ಮಾಡಿರುತ್ತಿದ್ದರಂತೆ. ಹೀಗಾಗಿ ಲಕ್ಷ್ಮೇಶ್ವರದಿಂದ ಗುಡಗೇರಿವರೆಗಿನ ಆ ಎಂಟತ್ತು ಮೈಲಿನ ಅಂತರವನ್ನು ಸಾರೋಟಿನಲ್ಲಿ ಅವರು ಕ್ರಮಿಸುತ್ತಿದ್ದುದನ್ನು ಕಲ್ಪಿಸಿಕೊಳ್ಳುವುದೇ ಒಂದು ಆನಂದದ ಅನುಭವ.
ಕಿಲ್ಲೆಯ ದಕ್ಷಿಣ ದ್ವಾರ
]]>

ತುಂಬಾ ಚೆನ್ನಾಗಿದೆ ಸರ್…
ಗುರುವಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ…
ಆ ಹಿರಿಯರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು..
ಅಗದಿ ಕಣ್ಣಿಗ ಕಟ್ಟುವಹಂಗ ಬರದೀರಿ..
ಸ್ವಲ್ಪಹೊತ್ತು ನಿಮ್ಮುರಾಗ ಅವಾಗಿನ ದಿನದಾಗ ಹೋದಂಗಾತು
ಖರೇನ ಕಣ್ಣಿಗೆ ಕಟ್ಟು ಹಂಗ ಬರದೀರಿ. ಓದಿ ಭಾಳ ಖುಷಿ ಆತು.
ಯಾವ ಇತಿಹಾಸದ ಪುಸ್ತಿಕೆಯಲ್ಲೂ ಸಿಗದ ಅನನ್ಯ ಹಾಗು ಅದ್ಬುತ ಇತಿಹಾಸಿಕ ಸತ್ಯಗಳನ್ನು ನಿಮ್ಮ ಲೇಖನದ ಮೂಲಕ ತಿಳಿದು ಪುಳಕಿತಗೊಲ್ಲುತ್ತಿದ್ದೇನೆ… ಆ ಹಿರಿಯರ ಬದುಕಿಗೊಂದು ಪ್ರಿತಿಪುರ್ವಕ ಗೌರವ .. ನಿಮ್ಮ ಮುಂದಿನ ಲೇಖನಕ್ಕಾಗಿ …..
ಕಾಯುತ್ತ ……
ರವಿ ವರ್ಮ ಹೊಸಪೇಟೆ
ದೀಕ್ಷಿತರ ಮನೆಯ ಜಗುಲಿಯ ಮೇಲೆ ಗುರು, ಅವರೆದುರು ಕೆಳಗೆ ಹಾಸಿದ ಚಾಪೆಯ ಮೇಲೆ ಶಿಷ್ಯ! ಈಗ ಎಲ್ಲಿಯಾದರೂ ನೋಡಲು ಸಾಧ್ಯವೇ ಇಂಥ ಅಮೋಘ ದೃಶ್ಯ??
ಗುರುವಿನ ಸರಿಸಮ ವೇದಿಕೆಯಲ್ಲಿ ಕೂತು ರಾರಾಜಿಸುವ ಇಂದಿನ ರಾಜಕೀಯ ನಾಯಕರುಗಳೆಲ್ಲಿ, ಅಂದಿನ ರಾಜ ಪರಿವಾರದ ಜನರೆಲ್ಲಿ? ಅದು ನಿಜವಾದ ‘ರಾಜರಕ್ತ’, ಈ ರಾಜಕಾರಣಿಗಳದು ಕಲಬೆರೆಕೆಯ ರಕ್ತ!
ಈ ರೀತಿ ಭಕ್ತಿ ಭಾವ, ನಮೃತೆಯಿಂದ ಕೂಡಿದ ಶ್ರೀಮಂತ ಬಾಳಾಸಾಹೇಬರು ಅಂಥ ತೇಜದ ಪುಂಜದೆದುರು ತಾಸುಗಟ್ಟಲೆ ಕೂತು ಬಂದ ಕಾರಣ ಅವರ ಮುಖದಲ್ಲಿ ಖಂಡಿತವಾಗಿ ವಿಶೇಷವಾದ ಕಳೆ, ಹೊಳಪು, ಆನಂದ ಕಾಣದಿರಲು ಸಾಧ್ಯವೇ? ಗುರುವಿನ ಗುಲಾಮನಾಗಿ, ಈ ತೆರನಾದ ಭಕ್ತಿ- ಭಾವ , ನಮೃತೆ ಕಾಣಸಿಗುವುದೆ ಈ ಕಾಲದಲ್ಲಿ??
ಸಂಸ್ಥಾನಿಕನಾದರೂ ಗುರುವಿನ ಗುಲಾಮನಾದ ಶ್ರೀಮಂತ ಬಾಳಾಸಾಹೇಬರ ಇನ್ನೊಂದು ಚೆಹರೆಯ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು…