ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಲ ವಾಜಪೇಯಿ ಕಾಲಂ : ಅಣ್ಣಾ ಅಂದ್ರೆ…

ಸುಮ್ಮನೇ ನೆನಪುಗಳು – 17

”ಕೋಶ ಓದು…” ಅಂತ ಅಪ್ಪ.

”ದೇಶ ಸುತ್ತತೀನಿ…” ಅಂತ ಮಗ.

”ಅದೆಲ್ಲಾ ಬ್ಯಾಡಾ… ಸುಮ್ನs ವೇದ-ಶಾಸ್ತ್ರ ಅಧ್ಯಯನ ಮಾಡು…”

”ಊಹೂಂ… ಅದೆಲ್ಲಾ ನಂಗ ಮನಸಿಲ್ಲಾ…”

”ಹಿರೇ ಮಗಾ ನೀ ಮನೀಗೆ. ಮನಿತನದ ಪರಂಪರಾ ಮುಂದವರಸಬೇಕು…”

”ಆ ಕೆಲಸ ಮಾಡ್ಲಿಕ್ಕೆ ಇನ್ನೂ ನಾಲ್ಕು ಮಂದಿ ತಮ್ಮಂದರಿದ್ದಾsರಲ್ಲಾs…”

”ನನ್ನ ಜೋಡಿ ವಾದಸ್ತೀ…?”

”ವಾದ ಅಲ್ಲಾ… ನನ್ನ ಮನಸಿನ್ಯಾಗ ಇರೋದನ್ನ ಹೇಳಿದೆ…”

”ಇದs ನಿನ್ನ ಕಡೀ ಮಾತs…?”

”ಹೌದು…”

”ಆತ್ಹಂಗಾsರ… ನಿನಗ ತಿಳಧಾಂಗ ಮಾಡಿಕೊ…” ಎಂದು ಅವರು ಎದ್ದು ಒಳಗೆ ಹೋಗಿ ತಮ್ಮ ಕೋಣೆಯ ಬಾಗಿಲು ಹಾಕಿಕೊಂಡರು.

ಈತ ಮನೆಯಿಂದ ಹೊರಬಿದ್ದು ಕಿಲ್ಲೆಯ ಬುರುಜಿನ ಮೇಲೆ ಹೋಗಿ ಕೂತುಕೊಂಡ.

ಮಧ್ಯಾಹ್ನದ ಊಟದ ಹೊತ್ತಾದರೂ ಹುಡುಗ ಮನೆಗೆ ಬಂದಿಲ್ಲವಲ್ಲ ಎಂಬ ಚಿಂತೆ ಅವ್ವನಿಗೆ. ಅದನ್ನು ಪತಿಯೆದುರು ಹೇಳಿಕೊಳ್ಳಲಾಗದ ಸಂಕಟ ಆಕೆಗೆ. ಹೇಳಿದರೆ, ”ಹೊಟ್ಟಿ ಕೆರದರ ತಾನs ಬರತಾನೇಳು,” ಎಂದುಬಿಡುವ ಪೈಕಿ ಅವರು. ಅಷ್ಟರ ಮಟ್ಟಿಗಿನ ಖಟ್ಟಾ ಆಸಾಮಿ ದೀಕ್ಷಿತರು.

ಪಾಪ, ಹೆತ್ತ ಕರುಳಿನ ಸಂಕಟ ನೋಡಿ. ಒಳಗೊಳಗೇ ಅನುಭವಿಸುತ್ತ ಕಿಟಕಿಯಿಂದ ಬೀದಿಯೆಡೆ ದಿಟ್ಟಿ ನೆಟ್ಟಳು.

ಅಪ್ಪನಿಗೂ ಏನೋ ತಳಮಳ ಶುರುವಾಯಿತು. ತಾನಷ್ಟು ಸಿಟ್ಟಿಗೇಳಬಾರದಿತ್ತು ಎಂದುಕೊಂಡು ಎರಡನೇ ಮಗ ರಾಮನಿಗೆ, ”ಹೋಗು, ಅಣ್ಣಾ ಎಲ್ಲಿದ್ದಾನ ನೋಡ್ಕೊಂಡು ಕರಕೊಂಡು ಬಾ…” ಎಂದು ಹೇಳಿಕಳಿಸಿದರು.

ರಾಮ ಪಿತೃವಾಕ್ಯವನ್ನು ಪರಿಪಾಲಿಸಿದ.

ಐವರೂ ಮಕ್ಕಳೊಂದಿಗೆ ಅಪ್ಪ ಊಟ ಮಾಡಿದರು.

ಎಂದಿನಂತೆ ಮಾತು-ಕತೆ ಇರದ, ನಗೆ-ಚೇಷ್ಟೆಗಳಿಂದ ದೂರವಾದ ಜೊತೆಯೂಟ.

ಬಡಿಸಲು ಬಂದರೆ ಪ್ರೀತಿಯಿಂದ ಕೇಳಿ ಹಾಕಿಸಿಕೊಳ್ಳುತ್ತಿದ್ದವರು ಅವತ್ತು ಬರಿ ‘ಹೂಂ…’ (ಬೇಕು) ‘ಊಹೂಂ…’ (ಬ್ಯಾಡಾ) ಎಂದಷ್ಟೇ ಪ್ರತಿಕ್ರಿಯಿಸುತ್ತಲಿದ್ದರು.

ಅಂತೂ ಊಟ ಮುಗಿಯಿತು. ಕಾಟಾಚಾರದ ಊಟ…

ಊಟದ ನಂತರ ಹಿರಿಯ ಮಗ ಮತ್ತೆ ಅಂಗಿ ಹಾಕಿಕೊಳ್ಳುತ್ತಿದ್ದುದನ್ನು ಕಂಡ ದೀಕ್ಷಿತರು, ”ಅಣ್ಣಾ… ಬಾ ಇಲ್ಲೆ…” ಎಂದು ಕರೆದರು. ಬಿರುಸೆನಿಸಿದರೂ ಆ ದನಿಯಲ್ಲಿ ಮತ್ತೇನೋ ಬೇರೆಯೇ ಭಾವವಿದ್ದುದನ್ನು ಗಮನಿಸಿದ ‘ಅಣ್ಣಾ’ ಅವರೆದುರು ಹೋಗಿ ನಿಂತ.

ದೀಕ್ಷಿತರು ಹಿರಿಯ ಮಗನ ಹೆಗಲ ಮೇಲೆ ಕೈಹಾಕಿಕೊಂಡು ಹೀಗೇ ಒಂದು ಸುತ್ತು ಹೋದರು.

ವಾಪಸ್ಸು ಬಂದಾಗ ತನ್ನ ಹಟವೇ ಗೆದ್ದ ಸಂಭ್ರಮವಿತ್ತು ‘ಆತ’ನ ಮುಖದಲ್ಲಿ.

ಇದು ನನ್ನ ಮುತ್ತಜ್ಜ (ಶ್ರೀಪಾದ ದೀಕ್ಷಿತರು) ಮತ್ತು ಅವರ ಜ್ಯೇಷ್ಠ ಪುತ್ರನಾದ ನನ್ನ ಅಜ್ಜನ (ಯಜ್ಞೇಶ್ವರ ದೀಕ್ಷಿತರು) ನಡುವೆ ನಡೆದ ಪ್ರಸಂಗ.

ಅಜ್ಜನೆ ತನ್ನ ‘ಡೈರಿ’ಯಲ್ಲಿ ಬರೆದಿಟ್ಟದ್ದು. (ನಮ್ಮ ಅಜ್ಜನ ‘ಡೈರಿ’ ಎಂದರೆ ಒಂದು ರೀತಿ ‘ವಿಶ್ವಕೋಶ’ ಇದ್ದಹಾಗೆ. ಅದರಲ್ಲಿ ‘ಅಡಿಗೆ’ಯಿಂದ ‘ಆಯುರ್ವೆದ’ದ ತನಕ ಎಲ್ಲ ಅಂದರೆ ‘ಎಲ್ಲ’ವೂ ಇತ್ತು.)

ಆ ದಾಖಲೆಗಳ ಆಧಾರದ ಮೇಲೆಯೇ ನಮ್ಮ ಅಜ್ಜನ ವ್ಯಕ್ತಿತ್ವವನ್ನಿಲ್ಲಿ ಕಟ್ಟಿಕೊಡುವ ಪುಟ್ಟ ಪ್ರಯತ್ನ ನನ್ನದು.

-೦-೦-೦-

ಅದು 1880. ನನ್ನ ತಾತನಿಗೆ ಆಗಷ್ಟೇ ಒಂಬತ್ತು ತುಂಬಿ ಹತ್ತರಲ್ಲಿ. ಆದರೆ, ವಯಸ್ಸಿಗೆ ಮೀರಿದ ಲೋಕಜ್ಞಾನ ಆತನದು. ಸದಾ ಪರಿಶ್ರಮಿ. ಪರಾಕ್ರಮಿ ಕೂಡ. ಒಂದಕ್ಕೇ ಅಂಟಿಕೊಂಡಿರುವ ಜಾಯಮಾನವಲ್ಲ. ಹೋದಲ್ಲಿ ಬಂದಲ್ಲಿ ಏನಾದರೂ ಕಿತಾಪತಿ ಇದ್ದದ್ದೇ. ವಯಸ್ಸಿಗೆ ಮೀರಿದ ಜಿಜ್ಞಾಸೆಯ ಹುಡುಗ. ಆ ಜಿಜ್ಞಾಸೆಯಿಂದಾಗಿಯೇ ಎಲ್ಲ ಕೆಲಸಗಳೂ ಈತನನ್ನೇ ಅಮರಿಕೊಳ್ಳುತ್ತಿದ್ದವು.

ಮನೆಯಲ್ಲಿ ಸೌದೆ ತೀರಿದರೆ – ”ಅಣ್ಣಾ ಇದ್ದಾನೇನೋ ನೋಡು…”

ಗೌಡರ ತೋಟಕ್ಕೆ ಹೋಗಿ ಏನಾದರೂ ತರಕಾರಿ ತರಬೇಕೆಂದಿದ್ದರೆ – ”ಅಣ್ಣಾ ಇದ್ದಾನೇನೋ ನೋಡು…”

ಅಪ್ಪ ಆ ಕಡೆ ಮಿರಜಿಗೋ, ಸಾಂಗ್ಲಿಗೋ ಇಲ್ಲವೇ ಸೊಂಡೂರಿಗೋ ಹೋಗಬೇಕೆಂದರೆ – ”ಅಣ್ಣಾ, ಜತೀಗೆ ನಡಿ…”

ಮನೆಯಲ್ಲಿ ನೀರು ತುಂಬಬೇಕೆಂದರೆ – ”ಅಣ್ಣಾ… ಮೂರ್ ಹಂಡೇ ನೀರ್ ತುಂಬಬೇಕಲಪಾ…”

(ಅಬ್ಬಾ… ನಮ್ಮ ಅಜ್ಜ ನೀರು ತುಂಬಿದ ಬಾವಿಯಿಂದಲೇ ನಾನೂ ನೀರು ತಂದಿದ್ದೇನೆ. ಕೇವಲ ಮೂವತ್ತೈದು ಅಡಿ ಆಳ ಅಷ್ಟೇ. ಬಾವಿಯಲ್ಲಿ ಕೊಡ ಇಳಿಬಿಟ್ಟು ನೀರು ಎತ್ತಬೇಕು. ಒಂದು ಹಂಡೆ ನೀರು ತುಂಬುವುದರೊಳಗಾಗಿ ರಗಡು ಆಯಾಸವಾಗಿರುತ್ತಿತ್ತು. ಒಂದೊಂದೂ ಹಂಡೆ ಹದಿನೈದು ಕೊಡ ನೀರು ಹಿಡಿಸುವಷ್ಟು ದೊಡ್ಡದು… ಆ ದಪ್ಪದ ಹಗ್ಗ ಎಳೆದೆಳೆದು ನಮ್ಮ ಕೈಗಳು ದಡ್ಡು ಬಿದ್ದು ಹೋಗಿದ್ದವು. ಅದೇನೇ ಇರಲಿ, ನನ್ನ ತೋಳುಗಳು ಎಂಥದೇ ಭಾರ ಹೊರುವಷ್ಟು ಗಟ್ಟಿಯಾದದ್ದರಲ್ಲಿ ಆ ಬಾವಿ ಮತ್ತು ಆ ಹಂಡೆಗಳ ಕೊಡುಗೆ ಸಾಕಷ್ಟಿದೆ.)

ಅಷ್ಟು ಜನರಿರುವ ಮನೆಯೆಂದ ಮೇಲೆ ಇರುವ ಕೆಲಸ ಎಷ್ಟೆಂಬುದನ್ನು ನೀವೇ ಊಹಿಸಿಕೊಳ್ಳಿ. ಹೀಗಾಗಿ, ಒಂದು ರೀತಿಯಲ್ಲಿ ‘ಸರ್ವೋಪರಿ’ಯಾಗಿ ಬೆಳೆದುಬಿಟ್ಟ ”ಅಣ್ಣಾ”… ಆದರೆ, ಒಮ್ಮೊಮ್ಮೆ ಹೇಳಿದ ಕೆಲಸವನ್ನು ಮರೆತು ಏನೋ ಕನಸು ಕಾಣುತ್ತ ಕೂತುಬಿಡುತ್ತಿದ್ದದ್ದೂ ಉಂಟಂತೆ.

ಈಗಾಗಲೇ ನಿಮಗೆ ಪರಿಚಿತರಾಗಿರುವ ಶ್ರೀಪಾದ ದೀಕ್ಷಿತ ವಾಜಪೇಯಿಯವರು ಹಿರಿಯ ಮಗನಿಗೆ ತಮ್ಮ ತಂದೆಯ ಹೆಸರನ್ನೇ ಇಟ್ಟಿದ್ದರು. ಅದು ಆಗಿನ ರೂಢಿ. ಆದರೆ ಕರೆಯುತ್ತಿದ್ದದ್ದು ಮಾತ್ರ ”ಅಣ್ಣಾ” ಎಂದೇ. (ಹೆಸರುಗೊಂಡು ಕರೆದು, ಬೈದರೆ ಅಪ್ಪನಿಗೆ ಬೈದಂತೆ ಎಂಬ ಭಾವನೆ ಆಗ ಸಾಮಾನ್ಯವಾಗಿತ್ತು. ಅದಕ್ಕೇ ‘ಅಣ್ಣಾ’ ‘ಅಪ್ಪಾ’… ಎಂದೆಲ್ಲ ಕರೆಯುತ್ತಿದ್ದದ್ದು.)

ಉಳಿದ ನಾಲ್ವರು ತಮ್ಮಂದಿರಿಗೂ, ಇಬ್ಬರು ತಂಗಿಯರಿಗೂ ಈತ ಆತ್ಮೀಯ ”ಅಣ್ಣಾ”ನೇ…

ಈ ಹೆಸರು ಎಷ್ಟರ ಮಟ್ಟಿಗೆ ಪ್ರಚಲಿತವಾಯಿತೆಂದರೆ, ಊರಲ್ಲಿ ‘ಯಜ್ಞೇಶ್ವರ’ ‘ಯಜ್ಞಪ್ಪ’ ಅಂದರೆ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ‘ಅಣ್ಣಾ’ ಎಂದರೇನೆ ”ಓಹೋ… ಶ್ರೀಪಾದ ದೀಕ್ಷಿತರ ಮಗನಾs…” ಎಂದು ಥಟ್ಟನೆ ಗುರುತು ಹಿಡಿಯುತ್ತಿದ್ದರು ಜನ.

ಹೀಗಾಗಿ ಇಟ್ಟ ಹೆಸರು ಹಿಂದಾಯಿತು. ಕೊಟ್ಟ ಹೆಸರು ಮುಂದಾಯಿತು.

ಅಂತೂ ‘ಅಣ್ಣಾ’ ಊರಿಗೆಲ್ಲ ಇಷ್ಟದ ಹುಡುಗನೆನಿಸಿದ.

-೦-೦-೦-

ಆದರೆ ದಿನಗಳೆದಂತೆ, ಅದ್ಯಾಕೋ ತಾನು ಇಷ್ಟೆಲ್ಲ ಕೆಲಸ ಮಾಡುತ್ತಿದ್ದರೂ ಅಪ್ಪನಿಗೆ ಉಳಿದ ಮಕ್ಕಳ ಮೇಲೆಯೇ ಹೆಚ್ಚು ಪ್ರೀತಿ ಎಂಬ ಭಾವ ‘ಅಣ್ಣಾ’ನಲ್ಲಿ ಬೆಳೆಯಿತು. ತನ್ನ ಹಿಂದೆ ಹುಟ್ಟಿದ ಇಬ್ಬರು ‘ಹುಶಾರಿ ಹುಡುಗರು’ ಎಂದು ಅಪ್ಪನ ಪ್ರೀತಿ ಗಳಿಸಿದ್ದರು. ಆ ನಂತರದ ಇಬ್ಬರು ಅಪ್ಪನ ಇಚ್ಚೆಯಂತೆ ‘ಮನಿತನದ ಪರಂಪರಾ’ ಮುಂದುವರಿಸಲು ಸಿದ್ಧರಾಗಿ, ಅಪ್ಪನಿಂದ ವಿಶೇಷ ಪ್ರಶಂಸೆಗೆ ಪಾತ್ರರಾಗಿದ್ದರು. ಹೀಗಾಗಿ, ‘ಅಣ್ಣಾ’ನಿಗೆ ತಾನು ಏನಿದ್ದರೂ ಇಲ್ಲಿ ಹೆಸರಿಗೆ ಹಿರಿಯ ಮಗ. ಭಾರ ಹೊರಲಿಕ್ಕಿರುವ ಕತ್ತೆಯ ಹಾಗೆ ತನ್ನ ಸ್ಥಿತಿ ಎಂದೆನಿಸತೊಡಗಿತು. ಆದ್ದರಿಂದ ಮನೆಯಿಂದ ಓಡಿ ಹೋಗುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದ. ಒಂದು ಬೆಳಗಿನ ಜಾವದಲ್ಲಿ ಆತ ಹಾಗೆ ಮಾಡಿಯೂಬಿಟ್ಟ.

ಆಗಿನ್ನೂ ಆತ ಹದಿನೈದರ ಪೋರ.

‘ಬೇಕಾದ್ದನ್ನು ಕರಗತಗೊಳಿಸಿಕೊಳ್ಳಬಲ್ಲೆ,’ ಎಂಬ ಆತ್ಮವಿಶ್ವಾಸ ಮತ್ತು, ‘ಅದೊಂದೇ ಇದ್ದರೆ ಸಾಲದು’ ಎಂಬ ವಿವೇಕ ಎರಡೂ’ಅಣ್ಣಾ’ನಲ್ಲಿದ್ದವು. ಜೊತೆಗೆ, ‘ಕಟ್ಟಿಗೆ ಕಡಿದಾದರೂ ಹೊಟ್ಟೆ ತುಂಬಿಕೊಳ್ಳುತ್ತೇನೆ,’ ಎಂಬ ಭಂಡ ಧೈರ್ಯ. (ಆಗ ಸೌದೆ ಮಾತ್ರ ಅಡುಗೆಯ ಇಂಧನಕ್ಕೆ ಮೂಲವಾಗಿರುತ್ತಿತ್ತಲ್ಲ. ದಿನದ ಅಡುಗೆಗೆ ಕಟ್ಟಿಗೆ ಕಡಿಯುವುದು ಸೌದೆ ಸೀಳುವುದು ಪ್ರತಿ ಮನೆಯ ಗಂಡಸಿನ ಬೆಳಗಿನ ಕೆಲಸವೇ ಆಗಿರುತ್ತಿತ್ತು.)

‘ಅಣ್ಣಾ’ಗೆ ಬದುಕುವ ಕಲೆಯನ್ನು ಯಾರೂ ಕಲಿಸಬೇಕಾಗಿ ಬರಲೇ ಇಲ್ಲ. ಹೀಗಾಗಿ ಉದರಂಭರಣ ಒಂದು ಸಮಸ್ಯೆ ಎನಿಸಲೇ ಇಲ್ಲ.

ಇಂಥದೇ ಅಂತಲ್ಲ, ಯಾವ ಕೆಲಸವಾದರೂ ಸರಿ. ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ. ಬಂದದ್ದರಲ್ಲಿ ತನಗೆ ಬೇಕಾದಂತೆ ತಾನೇ ರುಚಿರುಚಿಯಾದ ಅಡಿಗೆ ಮಾಡಿಕೊಂಡು ಉಣ್ಣುತ್ತಿದ್ದ. ದಿನಂಪ್ರತಿ ಒಂದು ಹೊಸ ಪದಾರ್ಥದ ಆನ್ವೇಷಣೆ… ‘ಅಣ್ಣಾ’ ಕೆಲವೇ ದಿನಗಳಲ್ಲಿ ಪಾಕಪ್ರವೀಣನಾಗಿಬಿಟ್ಟ. ಆದರೆ ಎಂದೂ ‘ಮಾಡಿದ್ದುಣ್ಣೋ ಮಾರಾಯಾ…’ ಎಂಬ ಗಾದೆ ಋಣಾತ್ಮಕ ಅರ್ಥದಲ್ಲಿ ಅವನಿಗೆ ಅನ್ವಯವಾಗಲೇ ಇಲ್ಲ.

ಹೀಗೆ ತನ್ನ ಅಡುಗೆಯ ಕಾರಣದಿಂದಾಗಿಯೇ ಎಷ್ಟೋ ಜನರ ಸ್ನೇಹವನ್ನು ಸಂಪಾದಿಸಿದ ‘ಅಣ್ಣಾ.’ ಎಲ್ಲಾದಕ್ಕೂ ಸೈ ಎಂದು ತೋಳೇರಿಸಿ ನಿಂತಾಗಲೇ ಬಾಳು ಹಗುರವೆನಿಸುವುದು ಎಂಬುದು ಆತನ ಸಿದ್ಧಾಂತವಾಗಿಬಿಟ್ಟಿತು.

ಬದುಕು ಕೇವಲ ಕನಸಲ್ಲ ಎಂಬ ಸತ್ಯ ಬೇಗನೆ ಗೊತ್ತಾದ್ದರಿಂದ ‘ಅಣ್ಣಾ’ ಕನಸುಣಿಯಾಗಲೇ ಇಲ್ಲ. ಹಾಗಂತ ಆತ ಸಿನಿಕನೂ ಅಲ್ಲ. ದೊಡ್ಡವರೂ ಬೆರಳು ಕಚ್ಹುವಂಥ ತರ್ಕಶಕ್ತಿಯ ‘ಅಣ್ಣಾ’ ತನ್ನ ವಯಸ್ಸಿನವರೊಂದಿಗೆ ಎಂದೂ ಬೆರೆಯುತ್ತಿರಲಿಲ್ಲ. ಆತನ ವ್ಯವಹಾರ ಏನಿದ್ದರೂ ತನಗಿಂತ ಎರಡು ಪಟ್ಟು ವಯಸ್ಸಿನಷ್ಟು ದೊಡ್ದವರೊಂದಿಗೇನೇ. ಅವರೊಂದಿಗಿನ ಒಡನಾಟ, ವ್ಯವಹಾರಗಳ ಅನುಭವ ‘ಅಣ್ಣಾ’ನ ಬೆಳವಣಿಗೆಗೆ ಪೂರಕವಾಯಿತು.

ಕೇವಲ ‘ಮುಲ್ಕಿ’ (ಅಂದರೆ ಏಳನೆಯ ವರ್ಗ) ಪಾಸು ಮಾಡಿದ್ದ ‘ಅಣ್ಣಾ’ ಅಂಗಡಿಗಳ ಲೆಕ್ಕ-ಪತ್ರ ಬರೆಯುವುದನ್ನೂ ರೂಢಿಸಿಕೊಂಡ. ಧಾರವಾಡದಲ್ಲಿ ಇದ್ದುದರಿಂದ ಹಿಂದಿ, ಮರಾಠಿಗಳಂತೂ ಸರಿಯೇ, ಕೆಲವು ಶ್ರೀಮಂತ ವ್ಯಾಪಾರಸ್ಥರ ಅಚ್ಚುಮೆಚ್ಚಿನ ಕಾರಕೂನನಾದ. ಹೈಸ್ಕೂಲು ಕಲಿಯುತ್ತಿದ್ದ ಆ ಶ್ರೀಮಂತರ ಮಕ್ಕಳ ಪರಿಚಯವೂ ಆದುದರಿಂದ ಇಂಗ್ಲಿಷಿನಲ್ಲೂ ಗುಂಡಗೆ ಬರೆಯುವುದನ್ನೂ, ಆಕರ್ಷಕವಾಗಿ, ಅಸ್ಖಲಿತವಾಗಿ ಮಾತಾಡುವುದನ್ನೂ ಕಲಿತ.

ಆದರೂ ಸರಳತೆ, ಸಹಜತೆ ಮತ್ತು ದೇಸಿತನದಿಂದ ಎಂದೂ ದೂರ ಸರಿಯಲಿಲ್ಲ.

-೦-೦-೦-

ಅದೊಮ್ಮೆ ದೀಕ್ಷಿತರು ಟಾಂಗಾದಲ್ಲಿ ಕೂತು ಧಾರವಾಡದ ರೈಲು ನಿಲ್ದಾಣದಿಂದ ಊರೊಳಗೆ ಹೊರಟಿದ್ದರು. ಒಂದು ಕಡೆ ರಸ್ತೆಯಲ್ಲಿ ಕಲ್ಲು, ಇಟ್ಟಿಗೆ, ಮರಳು ರಾಶಿ. ಏನೋ ದುರಸ್ತಿ ಕೆಲಸ ನಡೆದಿತ್ತು.

ಟಾಂಗಾದವ ಸ್ವಲ್ಪ ನಿಧಾನವಾಗಿ ಸಾಗತೊಡಗಿದ.

ಅಲ್ಲ್ಯಾರೋ ಒಬ್ಬ ದೀಕ್ಷಿತರಿಗೆ ಥೇಟ್ ‘ಅಣ್ಣಾ’ನಂತೆಯೇ ಕಂಡ. ”ತಡಿ, ತಡಿ, ತಡೀ…” ಎಂದರು. ಟಾಂಗಾ ನಿಂತಿತು.

”ಆ ಕರೇ ಟೊಪಿಗಿಯವನ್ನ ಕರಕೊಂಬಾರಪಾ…” ಎಂದು ಟಾಂಗಾದವನಿಗೆ ಹೇಳಿದರು.

ಆತ ಹಾಗೇ ಮಾಡಿದ.

‘ಆ ಕರೇ ಟೊಪಿಗಿಯವ’ ಬಂದವನೇ ದೀಕ್ಷಿತರ ಕಾಲಿಗೆ ಬಿದ್ದ. ಇಬ್ಬರೂ ಕಣ್ಣಲ್ಲೇ ಮಾತಾಡಿಕೊಂಡರು.

ಮಗ ಕ್ಷೇಮವಾಗಿಯೇ ಇದ್ದಾನೆ ಎಂಬ ಸಮಾಧಾನ ಅಪ್ಪನಿಗೆ. ಅಂತೂ ತನ್ನ ಮೇಲೆ ಅಪ್ಪನಿಗೆ ಪ್ರೀತಿಯಿದೆ ಎಂಬ ಖುಷಿ ಮಗನಿಗೆ.

ಬೆಳೆದು ನಿಂತ ಮಗ. ದುಡಿತಕ್ಕೆ ನಿಂತ ಸ್ವಾಭಿಮಾನಿ ಮಗ.

”ಹೂಂ… ಟಾಂಗಾ ಹತ್ತಿ ಕೂಡು…”

”ಇಲ್ಲ, ನಾ ಇಲ್ಲಿರದಿದ್ರ ಈ ಕೆಲಸ ನಿಲ್ಲತದ…ನನ್ನಿಂದಾಗಿ ಕೆಲಸ ನಿಂತ್ಯು ಅನ್ನೋ ಅಪವಾದಾ ಹೊರಲಿಕ್ಕೆ ತಯಾರಿಲ್ಲ ನಾ…”

”ಯಾರು ಹಾಂಗ ಅಪವಾದಾ ಹೊರಸವ್ರು? ಕರೀ ಇಲ್ಲೆ…”

”ಅವ್ರು ಮುನಸಿಪಾಲ್ಟಿ ಅಧ್ಯಕ್ಷರು…”

”ಎಲ್ಲಿರತಾರವ್ರು…?”

”ಅಲ್ಲೆ, ಗಿಡದ ನೆಳ್ಳಿನ್ಯಾಗ ಇಂಜಿನಿಯರ್ ಜೋಡಿ ಮಾತಾಡಲಿಕ್ಕತ್ಯಾರ…”

ದೀಕ್ಷಿತರಿಗೆ ಏನೂ ಹೇಳಬೇಕೆಂದು ತೋಚಲಿಲ್ಲ.

”ಆತಾತು… ನೀ ಏನ್ ಮಾಡ್ತೀಯೋ ಇಲ್ಲೇ…?”

”ಮುನಸಿಪಾಲ್ಟಿ ಕೆಲಸದ ದೇಖರಿಕಿ…”

”ಮತ್ತs… ಊಟಾ-ಉಡಿಗಿ?”

”ನಾನs ಮಾಡಿಕೋತೀನಿ…”

”ಹೀಂಗs ಒಬ್ನs ಎಷ್ಟು ದಿನಾ ಅಂತ ಕೈಯಿ-ಬಾಯಿ ಸುಟಗೋತೀ ನೀ…?”

ತನ್ನ ಕತ್ತಿಗೆ ಸಂಸಾರದ ಸರಪಣಿಯನ್ನು ಬಿಗಿಯುವ ಹುನ್ನಾರವಿದು ಎಂದುಕೊಂಡ ಅಣ್ಣಾ…

”ನಾ ಈಗ ಅರಾಮs ಇದ್ದೀನಿ…ಹಿಂಗs ಇರತೀನಿ…”

”ಅದೆಲ್ಲಾ ನಡಿಯೂದಿಲ್ಲಾ… ನಿನಗೊಂದು ಮದಿವಿ ಮಾಡೂದು ಅಪ್ಪ ಆಗಿ ನನ್ನ ಕರ್ತವ್ಯ. ಅದನ್ನ ಮುಗಿಸೀದ್ರ ಮುಂದಿನವರಿಗೆ ದಾರಿ ಆಗ್ತದ…” ಎನ್ನುತ್ತ ಕೆಳಗೆ ಇಳಿದ ದೀಕ್ಷಿತರು ಟಾಂಗಾದವನಿಗೆ ನಿಲ್ಲಲು ಹೇಳಿದವರೇ ಅಧ್ಯಕ್ಷರು ನಿಂತಿದ್ದ ಮರದ ಕಡೆ ಸಾಗಿದರು.

ಅವರನ್ನು ತಡೆಯುವುದು ಈಗ ಅಸಾಧ್ಯ…

-೦-೦-೦-

ಲಕ್ಷ್ಮೇಶ್ವರದ ಜೋಯಿಸರ ಮಗಳು ವೆಂಕವ್ವನೊಂದಿಗೆ ‘ಅಣ್ಣಾ’ನ ಮದುವೆಯಾಯಿತು. ಆಕೆ ಇವರ ಮನೆಯ ಸಮೀಪವೇ ಇದ್ದವಳು. ಅವಳ ಅಪ್ಪ ಇವರ ಮನೆಗೆ ಬಂದು-ಹೋಗಿ ಮಾಡುತ್ತಿದ್ದವರೇ. ಹೀಗಾಗಿ, ಅವಳು ಹುಟ್ಟಿ ವಾರದೊಳಗಾಗಿ, ಜಾತಕವನ್ನು ದೀಕ್ಷಿತರಿಂದಲೇ ಬರೆಯಿಸಿದ್ದರಂತೆ ಜೋಯಿಸರು.

”ಈಕೀ ಜಾತಕಾ ಭಾಳಂದ್ರ ಭಾಳ ಪ್ರಶಸ್ತ ಅದ ಏನಪಾ… ಇದರ ಪ್ರಕಾರ, ಈ ಕೂಸು ಒಳ್ಳೇ ಮನೀ ಸೇರತದ…” ಎಂದು ಅವತ್ತೇ ಭವಿಷ್ಯ ನುಡಿದಿದ್ದರಂತೆ ದೀಕ್ಷಿತರು.

ಜೋಯಿಸರಿಗೆ ವೆಂಕಮ್ಮ ಒಬ್ಬಳೇ ಮಗಳು. ಆಕೆಗೆ ಇಬ್ಬರು ತಮ್ಮಂದಿರು. ತಾಯಿಯ ಕಡೆಯ ಆಸ್ತಿಯಾಗಿ ಒಂದು ಮನೆ ಒಂದಷ್ಟು ಜಮೀನು ವೆಂಕಮ್ಮನಿಗೆ ಬಂತು.

ಮದುವೆಯ ಸಂಭ್ರಮವೆಲ್ಲ ಕರಗಿದ ಮೇಲೆ ಗಂಡನ ಬಗ್ಗೆ ಒಂದೊಂದೇ ವಿಚಾರ ಆಕೆಗೆ ತಿಳಿಯತೊಡಗಿತು. ನಿಶ್ಚಿತ ಆದಾಯವಿಲ್ಲದ ಗಂಡ. ಒಂದು ವಾರ ಇಲ್ಲಿದ್ದರೆ ಮೂರು ವಾರ ಅದೆತ್ತಲೋ… ಆದರೂ ಸಹಿಸಿಕೊಂಡು ಸಂಸಾರ ನಡೆಸಿದ ವೆಂಕಮ್ಮ ಮೂವರು ಹೆಣ್ಣು ಮಕ್ಕಳ ಮೇಲೆ ಇಬ್ಬರು ಪುತ್ರರತ್ನರನ್ನೂ ಹೆತ್ತಳು.

ಅಪ್ಪನೆನಿಸಿಕೊಂಡರೂ ‘ಅಣ್ಣಾ’ ಬದಲಾಗಲಿಲ್ಲ. ಆದರೆ ಮಾಡಿದ ಒಳ್ಳೆಯ ಕೆಲಸ ಎಂದರೆ ಸುಶಿಕ್ಷಿತ ಸಂಪನ್ನ ಮನೆತನದ ಹುಡುಗರನ್ನು ಹುಡುಕಿ, ಮೂವರೂ ಹೆಣ್ಣು ಮಕ್ಕಳ ಮದುವೆಯನ್ನು ಮಾಡಿದ್ದು.

‘ಅಣ್ಣಾ’ನದು ಹಲಸಿನಹಣ್ಣಿನಂಥ ವ್ಯಕ್ತಿತ್ವ. ಹೊರಗೆ ಮುಳ್ಳಿದ್ದರೂ ಒಳಗೆ ಒಳ್ಳೆಯ ಸಿಹಿಯಾದ ತೊಳೆಗಳು…!

ಮೇಲೆಲ್ಲಾ ಒರಟೊರಟಾಗಿ ಕಂಡರೂ ಮನಸು ಮಾತ್ರ ‘ಸವಿಸಕ್ಕರಿ ಕಣ್ಣಿ’ಯ ಹಾಗೆ… (ಕಣ್ಣಿ=ಕರಣಿ)

ಖಡಕ್ ಎಂಬಂತೆ ಕಾಣುತ್ತಿದ್ದರೂ ಆತನದು ನಿಜಕ್ಕೂ ಹೆಂಗರುಳು.

ಅದಕ್ಕೇ ತನ್ನ ಹೆಣ್ಣುಮಕ್ಕಳ ಬಗ್ಗೆ ಆತನಿಗೆ ಇನ್ನೆಲ್ಲಿಲ್ಲದ ಕಾಳಜಿ.

ಹೆಣ್ಣು ಮಕ್ಕಳ ಮದುವೆಯೇನೋ ಆಯಿತು. ಅವರ ಬಾಳಂತನವೂ ಆಯಿತು.

ಆದರೆ ವೆಂಕಮ್ಮ (ಅಂದರೆ ನನ್ನ ಅಜ್ಜಿ) ಆದಷ್ಟು ಬೇಗ ಸೊಸೆಯಂದಿರನ್ನು ಕಾಣುವ ಕಾಣುವ ಕನಸಿಟ್ಟುಕೊಂಡೇ ಕಣ್ಣು ಮುಚ್ಚಿದಳು.

ಅಂದಿನಿಂದ ‘ಅಣ್ಣಾ’ ಅಂತರ್ಮುಖಿಯಾಗಿಬಿಟ್ಟ. ಇದ್ದ ಇಬ್ಬರು ಗಂಡು ಮಕ್ಕಳಲ್ಲಿ ಚಿಕ್ಕವ ಕಾಲರಾಕ್ಕೆ ಬಲಿಯಾದ. ದೊಡ್ಡವ ಹಾಗೂ ಹೀಗೂ ಅಕ್ಕಂದಿರ ಮನೆಯಲ್ಲಿ ಬೆಳೆದು ಹುಬ್ಬಳ್ಳಿಯಲ್ಲೊಂದು ನೌಕರಿ ಹಿಡಿದುಕೊಂಡ.

ಆದರೂ ‘ಅಣ್ಣಾ’ ಮಗನ ಜೊತೆ ಇರದೇ ತನಗೆ ತಿಳಿದಲ್ಲಿ, ತಿಳಿದಷ್ಟು ದಿನ ಇರತೊಡಗಿದ. ಆತನ ಸ್ವಭಾವ ಗೊತ್ತಿದ್ದುದರಿಂದ ಮಕ್ಕಳ್ಯಾರೂ ಅಪ್ಪನಿಗೆ ಬಾ ಎಂದು ಒತ್ತಾಯ ಮಾಡುತ್ತಿರಲಿಲ್ಲ.

ಆದರೆ ಅಕ್ಕಂದಿರಿಗೆ ತಮ್ಮನದೇ ಚಿಂತೆ. ಆತನಿಗೊಂದು ಮೂಗುದಾರ ಹಾಕಬೇಕೆಂದು ಯೋಚಿಸಿದರು.

ಎರಡನೆಯ ಅಕ್ಕ ತನ್ನ ಹಿರಿಯ ಮಗಳನ್ನು ತಮ್ಮನಿಗೆ ಕೊಟ್ಟು ತವರು ಮನೆಯ ಅಂಗಳ ಚೆಂದದ ರಂಗವಲ್ಲಿಯನ್ನು ಕಾಣುವಂತೆ ಮಾಡಿದಳು. ಆ ಮನೆಯಲ್ಲಿ ಕಂದನ ಅಳು ಕೇಳುವಂತೆ ಮಾಡಿದಳು.

ಹೆಂಡತಿಯ ಕಣ್ಮರೆಯ ನಂತರ ಊರಿಗೆ ಹೋಗುವುದನ್ನು ಕಡಿಮೆ ಮಾಡಿದ್ದ ‘ಅಣ್ಣಾ’ ಮಗನ ಮದುವೆಯಾದ ಮೇಲೆ ಮಕ್ಕಳ ಮನೆಗೂ ಹೋಗುವುದನ್ನು ನಿಲ್ಲಿಸಿದ. ಒಮ್ಮೊಮ್ಮೆ ತಿಂಗಳುಗಟ್ಟಲೆ ಆತನ ಪತ್ತೆಯೇ ಇರುತ್ತಿರಲಿಲ್ಲ. ದೇವರು-ದಿಂಡರು ಎಂದು ಅಷ್ಟಾಗಿ ಹಚ್ಚಿಕೊಂಡಿರದ ಮನುಷ್ಯ. ತೀರ್ಥಯಾತ್ರೆಗೆ ಹೋಗುವುದಂತೂ ದೂರದ ಮಾತೇ. ಒಟ್ಟಿನಲ್ಲಿ ಆತನ ಸುಳಿವೇ ಇರುತ್ತಿರಲಿಲ್ಲ. ಬರಬರುತ್ತ ಆತನ ಈ ನಾಪತ್ತೆ ಪ್ರಕರಣಗಳು ಮಕ್ಕಳಿಗೆ ಮಾಮೂಲೆನಿಸಿಬಿಟ್ಟವು. ಆದರೂ, ‘ಎಲ್ಲಿದ್ದಾನೋ, ಏನೂ ಮಾಡುತ್ತಿದ್ದಾನೋ…’ ಎಂದು ನೆನೆಯುವ ಹೊತ್ತಿಗೆ ನೆನೆದವರ ಮನೆಯ ಬಾಗಿಲು ತಟ್ಟಿಬಿಡುತ್ತಿದ್ದ. ಅವರು ಏನನ್ನಾದರೂ ಕೇಳುವ ಮೊದಲೇ, ”ಇಕಾ, ತೊಗೋ… ಇದು ಕಾರವಾರ ಕಡೆ ಬೆಳಿಯೋ ಬದನೀಕಾಯಿ.” ”ಇದನ್ನ ನೋಡು, ಅಲಸಂದಿ ಕಾಯಿ ಇಷ್ಟುದ್ದ ಅದ…” ”ಸವತೀಕಾಯಿ ಅಂದ್ರ ವಿಜಾಪುರದ ಸವತೀಕಾಯಿನs… ಬ್ಯಾರೆ ಕಡೆ ಇಂಥಾ ರುಚಿ ಬರಲಿಕ್ಕೆ ಸಾಧ್ಯ ಇಲ್ಲಾ…” ಎನ್ನುತ್ತಿದ್ದ.

ಇನ್ನೊಬ್ಬ ಮಗಳ ಮನೆಗೆ ಹೋದರೆ, ”ದಿನಾ ನೀ ಮಾಡಿದ ಹುಳೀ ತಿಂದು ತಿಂದು ನಿನ್ನ ಗಂಡಗ ಬ್ಯಾಸರ ಬಂದಿರಬೇಕು… ಇವತ್ತ ನಾ ಹುಳೀ ಮಾಡತೀನಿ, ನೋಡದರ ರುಚೀನ…” ಎಂದು ಅಡಿಗೆಗೆ ನಿಲ್ಲುತ್ತಿದ್ದ. ಆತ ಕುಟ್ಟುತ್ತಿದ್ದ ಮಸಾಲೆಯ ವಾಸನೆಗೆ ಅಕ್ಕಪಕ್ಕದ ಹೆಂಗಸರು ಮೂಗು ಅರಳಿಸಿಕೊಂಡು ಬರುತ್ತಿದ್ದರಂತೆ. ಅಂತೂ ಆ ದಿನ ಇಡೀ ಓಣಿಗೆ ‘ಅಣ್ಣಾ’ನ ಹುಳಿಯ ವಾಸನೆ ಇಡುಗುತ್ತಿತ್ತು. ಇನ್ನು ಉಂಡವರ ಕೈ ಎರಡು ದಿನವಾದರೂ ವಾಸನೆ ಕಳಕೊಂಡಿರುತ್ತಿರಲಿಲ್ಲ. ತಾನೊಬ್ಬನೇ ಇದ್ದನಲ್ಲ, ಆಗ ಒಂದು ‘ದೇಸಿ ಕುಕ್ಕರ್’ ಮಾಡಿಕೊಂಡಿದ್ದ. ಇದ್ದಿಲು ಒಲೆಯ ಮೇಲೆ ಅಡಿಗೆ. ಆ ಕುಕ್ಕರಿನಲ್ಲಿ ಅಕ್ಕಿ, ಬೇಳೆ ಬೇಯಲು ಇಟ್ಟು ಒಂದಷ್ಟು ಹೊರಗೆ ಹೋಗಿ ಬರುವುದರೊಳಗಾಗಿ ಬೇಳೆ ಬೆಂದಿರುತ್ತಿತ್ತು, ಅನ್ನ ಅರಳಿರುತ್ತಿತ್ತು. ಆ ನಂತರ ಅಣ್ಣಾ ಕೊಡುತ್ತಿದ್ದ ಒಗ್ಗರಣೆಯ ಘಮ ಆ ಬೀದಿ ತುಂಬೆಲ್ಲ ಹಬ್ಬಿರುತ್ತಿತ್ತು. ಇನ್ನು ‘ಅಣ್ಣಾ’ ಮಾಡುತ್ತಿದ್ದ ಜಿಲೇಬಿಯಂತೂ A-one.

‘ಅಣ್ಣಾ’ ಕೆಲವು ಕಾಲ ಹುಬ್ಬಳ್ಳಿ ಮುನಸಿಪಾಲಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿಯೂ ಕೆಲಸ ಮಾಡಿದ. ಕೆಲವು ಕಾಲ ನಾಕಾಗಳ ಇನ್ಸ್ಪೆಕ್ಟರ್ ಅಂತಲೂ ದುಡಿದ. ಅಷ್ಟಿಷ್ಟು ಗಳಿಸಿ ಉಳಿಸಿದ. ಬದುಕುಳಿದ ಏಕಮಾತ್ರ ಪುತ್ರರತ್ನನ ಬಗ್ಗೆ ‘ಅಣ್ಣಾ’ಗೆ ಅಷ್ಟೊಂದು ಅಭಿಮಾನವೂ ಇರಲಿಲ್ಲ. ಹೀಗಾಗಿ, ತನ್ನ ಕಾಲದಲ್ಲಿ ತಾನು ಗಳಿಸಿದ್ದನ್ನು ತಾನು ಕಣ್ಣು ಮುಚ್ಚುವುದರೊಳಗೆ ಸದ್ವಿನಿಯೋಗ ಮಾಡಬೇಕು ಎಂದುಕೊಂಡ. ಜಮೀನು ಮುಂತಾದ ಪಿತ್ರಾರ್ಜಿತ ಆಸ್ತಿ ಇರಲೇ ಇಲ್ಲ. ಹುಬ್ಬಳ್ಳಿಯಲ್ಲಿ ತಾನು ಕೊಂಡುಕೊಂಡಿದ್ದ ಮನೆಯನ್ನು ಒಂದು ಶಾಲೆಗೆ ಬಿಟ್ಟುಕೊಟ್ಟ.

ಆತನಿಗಿದ್ದ ದೊಡ್ಡ ಆಸಕ್ತಿ ಎಂದರೆ ಕನ್ನಡ ಪುಸ್ತಕಗಳನ್ನು ಕೊಂಡು ಓದುವುದು. ಗಳಗನಾಥರ ಎಲ್ಲ ಕಾದಂಬರಿಗಳನ್ನೂ ಕೊಂಡು ಇಟ್ಟಿದ್ದನಂತೆ. ಅಪರೂಪಕ್ಕೊಮ್ಮೆ ಮಗನ ಮನೆಗೆ ಬರಬೇಕು. ಮೊಮ್ಮಗಳೇ ಆದ ಸೊಸೆಯ (ನಮ್ಮ ಅವ್ವ) ಕೈಗೆ ಅಂಥ ಒಂದು ಕಾದಂಬರಿಯನ್ನು ಇಡಬೇಕು. ”ಓದು, ಚೊಲೋ ಅದ…” ಎನ್ನಬೇಕು. ಹಾಗೆ ಆತ ತಂದುಕೊಡುತ್ತಿದ್ದ ಕಾದಂಬರಿಗಳನ್ನೆಲ್ಲ ತಾನು ಓದಿರುವುದಾಗಿ ನಮ್ಮ ಅವ್ವ ಇತ್ತೀಚಿಗೆ ಹೇಳಿದಳು.

-೦-೦-೦-

‘ಅಣ್ಣಾ’ ಅಂದರೆ ನಮ್ಮ ಅಜ್ಜ, ಸ್ವಾತಂತ್ರ್ಯ ಹೋರಾಟದ ಎಲ್ಲ ಮಜಲುಗಳನ್ನೂ ಕಂಡವ. ಅಪ್ಪಟ ಖಾದೀ ಧಾರಿ. ಆದರೆ ಒಮ್ಮೆಯೂ ಗಾಂಧಿಯ ಬಗ್ಗೆಯಾಗಲೀ, ಸ್ವಾತಂತ್ರ್ಯ ಹೋರಾಟದ ಬಗ್ಗೆಯಾಗಲೀ ಒಲವು ತೋರುವುದಿರಲಿ, ಮಾತಾಡಿದವನೂ ಅಲ್ಲ.

ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು, ದೇಶ ಎರಡು ಹೋಳಾದ ಮೇಲೆ ನಡೆಯಿತಲ್ಲ ಗಾಂಧಿಯ ಹತ್ಯೆ…

ಆಗ – ”ಆಂ…? ಗಾಂಧೀ ಸತ್ತರs…? ನಾನೂ ಅದs ವರ್ಷ ಹುಟ್ಟಿದಾಂವಾ… ನಾನೂ ಹೋಗಬೇಕು ಗಾಂಧೀ ಹೋದಲ್ಲಿಗೆ…” ಎಂದು ತುಂಬ ಚಡಪಡಿಸಿದನಂತೆ.

ಮುಂದೆ ಎರಡು ದಿನ ಮೌನಿಯಾಗಿಯೇ ಇದ್ದ ‘ಅಣ್ಣಾ’ ಧಾರವಾಡಕ್ಕೆ ಬಂದನಂತೆ. ನಂತರ ಇದ್ದಕ್ಕಿದ್ದಂತೆ ಜ್ವರದಿಂದ ಹಾಸಿಗೆ ಹಿಡಿದ. ಕೊನೆಯ ಮಗಳನ್ನು ನೋಡಬೇಕು ಎಂದು ಬಡಬಡಿಸತೊಡಗಿದನಂತೆ. ಅವಳ ಮನೆಗೆ ಸ್ಥಳಾಂತರಿಸಿದ ಮೇಲೆ ಸ್ಥಿತಿ ಇನ್ನಷ್ಟು ಬಿಗಡಾಯಿಸಿ ನರಳುತ್ತ ಬಿದ್ದುಕೊಂಡ.

ಇಡೀ ಬದುಕಿನಲ್ಲಿ ಎಂದೂ ಇತರರಿಂದ ಸೇವೆ ಮಾಡಿಸಿಕೊಂಡು ಗೊತ್ತಿರದ ಆತನಿಗೆ ಈ ಪರಾಧೀನತೆ ಅಸಹನೀಯವೆನಿಸಿರಲೂ ಸಾಕು.

1948 ರಫೆಬ್ರವರಿ 7 – ತನ್ನ ಎಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ.

ಗಾಂಧೀ ಸತ್ತು ಅಂದಿಗೆ ಸರಿಯಾಗಿ ಎಂಟನೆಯ ದಿನ…

-೦-೦-೦-

ಅಂಥ ‘ಅಣ್ಣಾ’ನ ಏಕಮಾತ್ರ ಮೊಮ್ಮಗನಾದ ನಾನು ಹುಬ್ಬಳ್ಳಿಯಲ್ಲಿ ಕೆಲಸ ಹಿಡಿದ ಮೇಲೆ ಲಕ್ಷ್ಮೇಶ್ವರದ ನಮ್ಮ ಮನೆಯನ್ನು ಮಾರಬೇಕಾಯಿತು. ಅದಕ್ಕೂ ಮೊದಲು ಬೇಕಾದ, ಬೇಡವಾದ ಸಾಮಾನುಗಳನ್ನೆಲ್ಲ ವಿಂಗಡಿಸುವ ಕೆಲಸವಾಗಬೇಕಲ್ಲ… ಆದರೆ ಮನೆಯಲ್ಲಿದ್ದ ದೊಡ್ಡ ಸಂದೂಕವನ್ನು ಏನು ಮಾಡುವುದು? ಸಾಮಾನ್ಯವಾಗಿ ನಾವೀಗ ನೋಡುವ ಬಾಕ್ಸ್ ಇರುವ ದಿವಾನಿನ ಮೇಲೆ ಅಂಥದೇ ಮತ್ತೊಂದು ದಿವಾನನ್ನು ಇಟ್ಟರೆ ಆಗುವಷ್ಟು ಎತ್ತರದ ಸಂದೂಕ. ಅದರಲ್ಲಿ ಏನಿದೆ ಎಂಬುದು ನಮ್ಮ ಅವ್ವನಿಗೂ ಗೊತ್ತಿರಲಿಲ್ಲ. ನನಗೆ ತಿಳುವಳಿಕೆ ಬಂದಾಗಿನಿಂದ ಅದು ಹಾಸಿಗೆಗಳನ್ನು ಪೇರಿಸಿ ಇಡುವ ಜಾಗ ಮಾತ್ರವಾಗಿತ್ತು. ಅಷ್ಟಾದರೂ, ಅದರ ಮೇಲೆ ನನ್ನಂಥ ಇಬ್ಬರು ಹುಡುಗರು ಆರಾಮಾಗಿ ಮಲಗಬಹುದಾದಷ್ಟು ವಿಶಾಲವಾಗಿತ್ತು. ಅದಕ್ಕೊಂದು ತುಕ್ಕು ಹಿಡಿದುಹೋಗಿದ್ದ ದೊಡ್ಡ ಬೀಗ. ಅದರ ಕೈಯನ್ನು ನೋಡಿದ ನೆನಪೇ ತನಗಿಲ್ಲ ಎಂದು ಅವ್ವ. ಅನಿವಾರ್ಯವಾಗಿ ಬೀಗ ಒಡೆಯಬೇಕಾಯಿತು.

ನಾನು-ನಮ್ಮವ್ವ ಇಬ್ಬರೂ ಸೇರಿ ಆ ಭಾರದ ಬಾಗಿಲು ಎತ್ತಿ ತೆಗೆದು ನೋಡಿದರೆ… ಅಬ್ಬಾ… ಅದೊಂದು ಮ್ಯೂಜಿಯಮ್ಮೇ…!

(ಅಲ್ಲಿ ಏನೇನು ಸಿಕ್ಕವು ಎಂಬ ವಿವರಕ್ಕೆ ನಾನೀಗ ಹೋಗುವುದಿಲ್ಲ. ಆ ಕುರಿತು ಮುಂದೆ ಒಮ್ಮೆ ಪ್ರತ್ಯೇಕವಾಗಿಯೇ ಬರೆಯಲಿದ್ದೇನೆ.)

ಮುಖ್ಯವಾಗಿ ಸಿಕ್ಕದ್ದು ಒಂದು ಡೈರಿ. ಅದು ನಾನೀಗ ಏನೆಲ್ಲಾ ವಿವರಗಳನ್ನು ‘ಅಣ್ಣಾ’ನ ಬಗ್ಗೆ ಬರೆದೆನೋ ಅವೆಲ್ಲ ಇದ್ದ ಡೈರಿ. ಮತ್ತು ಒಂದಷ್ಟು ಸರ್ಟಿಫಿಕೆಟ್ಟುಗಳು.

ಅವು ನಾಲ್ಕು ಜನ ಬ್ರಿಟಿಶ್ ಅಧಿಕಾರಿಗಳು ಕೊಟ್ಟಂಥ ಪ್ರಮಾಣಪತ್ರಗಳು ಮತ್ತು ‘ಅಣ್ಣಾ’ನ ಕೆಲಸವನ್ನು ಮೆಚ್ಚಿ ಕೊಟ್ಟ ಪ್ರಶಂಸಾ ಪತ್ರಗಳು.

‘ಅಣ್ಣಾ’ ಅತ್ತ ಕುಮಟಾ, ಕಾರವಾರ, ಮತ್ತು ಮುಂಬಯಿ ಪ್ರಾಂತ್ಯದ ಇನ್ನು ಕೆಲವು ಊರುಗಳಲ್ಲಿಯೂ ಕೆಲಸ ಮಾಡಿದ್ದ ಎಂಬುದಕ್ಕೆ ಪ್ರಮಾಣವಾದ ಪ್ರಶಂಸಾ ಪತ್ರಗಳವು.

ಇನ್ನು, ಕನ್ನಡ ಶಿಕ್ಷಕನಾಗಿ ಜಾನ್ ರೀಡ್ ಎಂಬೊಬ್ಬ ಬ್ರಿಟಿಶ್ ಅಧಿಕಾರಿಗೆ ಆರು ತಿಂಗಳು ಪಾಠ ಹೇಳಿದನಂತೆ ‘ಅಣ್ಣಾ.’

ಅಂದಹಾಗೆ, ನಾನು ನೋಡದ ನನ್ನ ಅಜ್ಜನ ಫೋಟೋ ಏನಾದರೂ ಆ ಸಂದೂಕದಲ್ಲಿ ಸಿಗಬಹುದೇ ಎಂಬ ಕುತೂಹಲ ನನಗೆ. ಹುಡುಕಿಯೇ ಹುಡುಕಿದೆ. ಸಿಗಲಿಲ್ಲ.

ಆಗ,”ಇಲ್ಲಪಾ… ಅವಗ ಫೋಟೋ ತಗಿಸಿಕೊಳ್ಳೋದು ಅಂದ್ರ ಆಗ್ತಿರಲಿಲ್ಲ…” ಅಂದಳು ಅವ್ವ.

‍ಲೇಖಕರು G

7 October, 2012

14 Comments

  1. Badarinath Palavalli

    ರಾಮ ಪಿತೃವಾಕ್ಯವನ್ನು ಪರಿಪಾಲಿಸಿದ.

    ಬಲು ಇಷ್ಟವಾಯ್ತು ಕಾಕ.

    ಅಣ್ಣಾನವರದು ವಿಶಿಷ್ಟ ವ್ಯಕ್ತಿತ್ವ.

    ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಕ ಮತ್ತು ಇತರ ಅವರ ಹೊಳಹುಗಳು ಅವರ ಪ್ರಯೋಗ ಶೀಲತೆಯ ಸಂಕೇತ.

  2. umesh desai

    ಗುರುಗಳೆ, ಶರಣು. ಆ ಒಂದು ಕಾಲಘಟ್ಟದ ನಡಾವಳಿ, ಘಟನಾವಳಿಗಳನ್ನು
    ಅಗದಿ ಕಣ್ಣಿಗೆ ಕಟ್ಟುವ ಹಾಗೆ ಬರದೀರಿ..

  3. Guruprasad Kurtkoti

    ಅದ್ಭುತ ಚಿತ್ರಣ! ” … ಇಡೀ ಓಣಿಗೆ ‘ಅಣ್ಣಾ’ನ ಹುಳಿಯ ವಾಸನೆ ಇಡುಗುತ್ತಿತ್ತು. ಇನ್ನು ಉಂಡವರ ಕೈ ಎರಡು ದಿನವಾದರೂ ವಾಸನೆ ಕಳಕೊಂಡಿರುತ್ತಿರಲಿಲ್ಲ” .. ಓದಿಯೇ ಬಾಯಲ್ಲಿ ನೀರು ಬಂತು, ಇನ್ನು ಹುಳಿಯ ರುಚಿ ಹೇಗಿದ್ದಿರಬೇಕು! ಆಗ ರುಚಿಯನ್ನು ಸವಿದವರು ಪುಣ್ಯವಂತರು!

  4. ಆನಂದ

    ಇಷ್ಟೆಲ್ಲ ವಿಶಿಷ್ಟ ವ್ಯಕ್ತಿತ್ವದ ‘ಅಣ್ಣಾ’ ಅವರ ಫೋಟೊ ನೋಡುವ ಅವಕಾಶ ಸಿಗಲಿಲ್ಲ ಎಂಬುದೇ ಬಜಾರು…
    – ಆನಂದ

  5. sugunamahesh

    ಅಬ್ಬಾ..’ಅಣ್ಣ’ ದಿ ಗ್ರೇಟ್..!! ಬಹಳ ಕುಶಿ ಆಯ್ತು ಅವರ ಬಗ್ಗೆ ಓದಿ. ಪಾಕಪ್ರವೀಣರು, ಶಿಕ್ಷಕರು,ಸ್ವಾತಂತ್ರ ಹೋರಾಟಗಾರರು… ಎಷ್ಟೆಲ್ಲಾ ಪ್ರತಿಭೆ ಅವರಲ್ಲಿದೆ. ಅವರು ತಮ್ಮ ಡೈರಿಯಲ್ಲಿ ಇಷ್ಟೇಲ್ಲಾ ಬರೆದಿಟ್ಟು ನಿಮಗೆ ಒಂದು ಲೇಖನ ಬರೆಯುವಂತಾಯಿತು ಜೊತೆಗೆ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವಂತಾಯಿತು. ಮ್ಯೂಜಿಯಮ್ ಬಗ್ಗೆ ಓದುವ ಆಸೆ ಇದೆ ಆದಷ್ಟು ಬೇಗ ಬರೆಯಿರಿ. ಉತ್ತರ ಕರ್ನಾಟಕ ಶೈಲಿಯ ಈ ಲೇಖನ ಹುಬ್ಬಳ್ಳಿ, ಧಾರವಾಣ.. ಎಲ್ಲಾ ಕಡೆ ಸುತ್ತಾಡಿಸಿದೆ. 🙂

  6. gayathri

    ತುಂಬ ಚೆನ್ನಾಗಿದೆ . ಆಗಿನ ಕಾಲಕ್ಕೆ ಹೋಗಿ ಬಂದಹಾಗಯ್ತು

  7. chandrashekhar vastrad

    edu kewala obba vyktiya katheyalla ondu kaalaghattada sundara chitrana. abhinandanegalu

  8. s.s.chandrashekar

    ನಿಮ್ಮ ಲೇಖನಕ್ಕೆ ನನ್ನದೊ೦ದು ದೊಡ್ಡ ಸಲಾ೦…………..:)

  9. shamsunder kulkarni

    Abhinandanegalu – sundara chitrana – kantumbi bantu

  10. prakash hegde

    ಗುರುಗಳೆ..

    ಲೇಖನ ತುಂಬಾ ಇಷ್ಟವಾಯ್ತು ……………..

  11. ಹಿಪ್ಪರಗಿ ಸಿದ್ದರಾಮ್

    ಎರಡನೆಯ ಅಕ್ಕ ತನ್ನ ಹಿರಿಯ ಮಗಳನ್ನು ತಮ್ಮನಿಗೆ ಕೊಟ್ಟು ತವರು ಮನೆಯ ಅಂಗಳ ಚೆಂದದ ರಂಗವಲ್ಲಿಯನ್ನು ಕಾಣುವಂತೆ ಮಾಡಿದಳು. ಆ ಮನೆಯಲ್ಲಿ ಕಂದನ ಅಳು ಕೇಳುವಂತೆ ಮಾಡಿದಳು….

    ಈ ಸಾಲುಗಳು ನನ್ನ ಮನಕಲಕಿದವು. ಯಾಕಂದರೆ ಅಕ್ಕಂದಿರ ಅಕ್ಕರತೆಯು ತಾಯಿಯ ಮಮತೆಯನ್ನು ಇಳಿವಯಸ್ಸಿನಲ್ಲಿಯೂ ನೆನಪು ಮಾಡಿಕೊಡುತ್ತಾರೆ. ಅಂತಹ ಅಕ್ಕನ ಕುರಿತು ಹೇಳಿದ ಮಾತುಗಳ ಶಬ್ದ ಜೋಡಣೆಗೆ ನೂರಾರು ನಮನಗಳು.

    ಲೇಖನ ಸ್ವಾರಸ್ಯವಾಗಿ ಮೂಡಿಬಂದಿದೆ. ಧನ್ಯವಾದಗಳು ಸರ್.

  12. samyuktha

    ಒಂದು ಸುಂದರ ವ್ಯಕ್ತಿ ಚಿತ್ರಣವನ್ನು ಅತ್ಯಂತ ಸೊಗಸಾಗಿ ಮೂಡಿಸಿದ್ದೀರಿ. ಹ್ಯಾಟ್ಸ್ ಆಫ್!

  13. Rekha Nataraj

    ಒಬ್ಬ ವ್ಯಕ್ತಿಗೆ ಇಷ್ಟೊಂದು ಪ್ರತಿಭೆ ? ಬಹುಮುಖ ಪ್ರತಿಭೆಯುಳ್ಳ ಅಣ್ಣಾ ಅವರನ್ನು ಒಮ್ಮೆ ನೋಡಬೇಕಿತ್ತು ಅನಿಸುತ್ತಿದೆ !! ವ್ಯಕ್ತಿ ಪರಾವಲಂಬಿ ಆಗದೆ
    ಕೆಲಸ ಕಾರ್ಯಗಳನ್ನು ನಿರ್ವಂಚನೆಯಿಂದ ಮಾಡುತ್ತಾ ಹೋದರೆ ಜೀವನ ಎಂಥ ಸುಂದರ ! ಎಲ್ಲಿ ಹೋದರೂ ಸೈ ಎನಿಸಿಕೊಳಬಲ್ಲ
    ಆದರೆ ಅವರು ಕೊನೆಗಾಲದಲ್ಲಿ ನಿರ್ವಿಕಲ್ಪ ನಿರ್ಮೋಹ ಜೀವನ ನಡೆಸಿದ್ದು ಬೇಸರವಾಯಿತು ಮತ್ತೆ ಸಂಸಾರಕ್ಕೆ ಮರಳಿದ್ದರೆ ಚೆನ್ನಾಗಿತ್ತು
    ಆಗಿನ ಕಾಲದಲ್ಲಿ ಅವರು ಡೈರಿ ಬರೆಯುತ್ತಿದ್ಧಿದ್ಧು ಅದು ನಿಮಗೆ ಸಿಕ್ಕಿದ್ಧು ಅದ್ಬುತ

  14. ಮಂಜುಳಾ ಬಬಲಾದಿ

    ಅದೇನ್ ಛಂದs ಕಥೀ ಹೇಳ್ತೀರೀ ನೀವು.. ಹಂಗs ಸಣ್ ಹುಡುಗೂರ್ಹಂಗ ಕಥೀ ಒದ್ಕೋತನ ಕೂಡಬೇಕನಸ್ತದ (ಇನ್ನs ನೀವು ಕಥಿ ಹೇಳೂದು ಕೇಳಲಿಕ್ಕೆ ಸಿಕ್ರ ಹೆಂಗಿರಬಹುದು ಅಂತ ವಿಚಾರ ಮಾಡಲೀಕತ್ತೀನಿ :-))

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading