ಕಳೆದ ಎರಡೇ ದಿನ ಹಿಂದೆ ಅಂದರೆ ಭಾನುವಾರ ನಮ್ಮ ಮ್ಯಾಳ ಸೇರೋದಿತ್ತು.
ನಾನು, ಪ್ರೊ. ಸಂಪಿಗೆ ತೋಂಟದಾರ್ಯ, ಶ್ರೀಪತಿ ಮಂಜನಬೈಲು,ಮತ್ತು ಗೋಪಾಲ ವಾಜಪೇಯಿ. ಧನಂಜಯ ಮನೆಯಲ್ಲಿ ಇಡೀ ದಿನದ ಕಾರ್ಯಕ್ರಮ ನಿಗದಿಯಾಗಿತ್ತು. ಧಾರವಾಡದ ನೆನಪುಗಳು, ರಂಗ ಸಂಗ, ಹರಟೆ, ರೊಟ್ಟಿ ಊಟ .. ಹಿಂಗ್ ಒಂದು ಕಳಬಳ್ಳಿ ಹತ್ತಿರ ತಂದು ಖುಷಿ ಪಡುವ ಉಮೇದಿ ಈ ಗೋವಾ ಎನ್ನುವ ದಿಲ್ದಾರ್ ಹಿರಿಯ ಜೀವಕ್ಕಿತ್ತು. “ನೀ ತಪ್ಪಸಬ್ಯಾಡಾ ಹದಿನೈದು ದಿನ ಮೊದಲ ಹೇಳೇನ್ನೋಡ ಮತ್ತ..” ಅಂದಿದ್ರು. ಎರಡ್ಮೂರ ದಿನ ಹಿಂದೆ “ನೆಂಪೈತಿಲ್ಲೊ ಬಾಳಾ? ಧಕು ಮನ್ಯಾಗ ಕೂಡಿ ಉಣ್ಣೂನು. ನಿನ್ ಸಂಗ್ತಿ ಎರಡ ರೊಟ್ಟಿ ಉಣಬೇಕೊ… ” ಅಂದ್ರು.
ಆಗಲಿ ಧಣೇರ ಅಂದೆ ನಾಟಕದ ಗತ್ತಲ್ಲಿ. “ನೀ ಹ್ಞೂ ಅಂದ ಎಷ್ಟ ಸಲ ಕೈಕೊಟ್ಟಿಲ್ಲ? ಈ ಸಲ ತಪ್ಸಬ್ಯಾಡೊ ಹಳೀ ಮಂದಿ ನಾವು. ಇನ್ನೆರಡ ದಿನಾ ಉಳದೈತೊ ಸಂತಿ ..” ಅಂದ್ರು.
ಆದರೆ, ಭಾನುವಾರ ಸೇರೋ ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ್ರು. “ಯಾಕೊ ದವಾಖಾನಿಗ ಹೋಗಬೇಕಾಗೈತಪಾ ಹೋಗ್ ಬರ್ತೀನಿ” ಅಂದು ಫೋನ್ ಇಟ್ರು. ಧಕು ಕೂಡ ಇದನ್ನೇ ಹೇಳಿ ಫೋನ್ ಇಟ್ರು.
ಈಗ ಅರ್ಧ ತಾಸಿಗೆ ಮುಂಚೆ ನರಸಿಂಹ ರಾವ್ ಫೋನ್ ಮಾಡಿ ಗೋವಾ ಹೋಗಿಬಿಟ್ರು ಅಂದ.
ಹತ್ತು ನಿಮಿಷ ಮೌನವಾಗಿ ಕೂತೆ. ಅವರ ನಾಟಕ, ಹಾಡು, ಹರಟಿ … ಎಲ್ಲ ಮುಗದ ಹೋತಲ್ಲ. ಅನಿಸ್ತು.. ಎರಡ ದಿನ ಅಂತ ಹೇಳಿ ಎರಡ ದಿನಕ್ಕ ಸಂತಿ ಮುಗಿಸಿಬಿಟ್ರೇನು ಗೋಪಾಲ ವಾಜಪೇಯಿ… ಇದು ಮೋಸ….
ದಿಲಾವರ್ ರಾಮದುರ್ಗ





ಇದು ಅಪ್ಪಟ ಸತ್ಯವೇ? ಕೆಲ ದಿನಗಳ ಹಿಂದೆ ಪಾರ್ಲೆ-ಜಿ ಮುಚ್ಚಿತು ಎನ್ನೋ ಸುದ್ದಿ ಅವಧೀಲಿ ಬಂದಿತ್ತು, ಇದೂ ಹಾಗೇ ಆಗಲಿ ದೇವ್ರೇ!
🙁