ಗೊರೂರು ಶಿವೇಶ್
ಕನ್ನಡ ಸಾಹಿತ್ಯವನ್ನು ತಮ್ಮ ಸಣ್ಣ ಕಥೆ, ಕಾದಂಬರಿ, ಲಲಿತ ಪ್ರಬಂಧ, ಪ್ರವಾಸ ಕಥನ, ವಿಡಂಬನೆ ಮುಂತಾದ ಪ್ರಕಾರಗಳಿಂದ ಶ್ರೀಮಂತಗೊಳಿಸಿದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಗ್ರಾಮೀಣ ಸಂಸ್ಕೃತಿಯನ್ನು ಹಾಗೂ ಅವರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಹಾಸ್ಯದ ಪರಿಚಯವನ್ನು ಓದುಗರಿಗೆ ಮಾಡಿಕೊಟ್ಟಿದ್ದಾರೆ. ಸ್ವತಃ ಉತ್ತಮ ಹಾಸ್ಯಗಾರರಾಗಿದ್ದ ಗೊರೂರರು ತಮ್ಮ ಹಾಸ್ಯ ಪ್ರಜ್ಞೆ ಹಾಗೂ ಹಾಸ್ಯ ಚಟಾಕಿಗಳಿಂದ ತಾವು ನಕ್ಕು ಇತರರನ್ನು ನಗಿಸುತ್ತಿದ್ದರು.
ಚಿಕ್ಕಂದಿನಲ್ಲಿ ಅವರ ಸ್ನೇಹಿತನೊಬ್ಬನಿಗೆ ಒಂದು ಕಣ್ನು ಸರಿಯಾಗಿ ಕಾಣಿಸುತ್ತಿರಲಿಲ್ಲ. ಇತರ ಸ್ನೇಹಿತರು ಅವನನ್ನು ಒಕ್ಕಣ್ಣ ಒಕ್ಕಣ್ಣ ಎನ್ನುತ್ತಿದ್ದಾಗ ಅವನು ಅವರನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುತ್ತಿದ್ದನು. ಗೊರೂರರು ಮಾತ್ರ ಅವನನ್ನು ‘ದಶನೇತ್ರ’ ಎಂದು ಕರೆಯುತ್ತಿದ್ದು, ಅವನು ಅವರಿಗೆ ಮಾತ್ರ ಏನೂ ಮಾಡುತ್ತಿರಲಿಲ್ಲವಂತೆ. ಸ್ನೇಹಿತರು ದಶನೇತ್ರ ಎಂದರೆ ಏನು ಎಂದು ಅರ್ಥವಾಗದೆ ಇವರನ್ನು ಪ್ರಶ್ನಿಸಿದರಂತೆ.
ಆಗ ಗೊರೂರರು ದಶ ಎಂದರೆ ಎಷ್ಟು?
ಹತ್ತು!
ಹತ್ತನ್ನು ಹೇಗೆ ಬರೆಯುವುದು?
10 !
ನಾನು ನೀವು ಹೇಳಿದ್ದೇ ಹೇಳಿದ್ದು! ಒಂದು ಕಾಣಿಸುತ್ತೆ, ಇನ್ನೊಂದು ಸೊನ್ನೆ ಅಂತ.
ಒಂದು ದಿನ ಅವರ ತಂದೆ ಕರೆದು ಹೇಳಿದರು. ರಾಮ್ಸಾಮಿ, ನಾಳೆ ನಾಡಿದ್ದು ಎಲ್ಲೂ ಹೋಗ್ಬೇಡ, ಮನೆ ಹತ್ರ ಇರು.
ಯಾಕೆ?
ಯಾಕೆ ಅಂದ್ರೆ ನಿನ್ನ ಮದುವೆ ಅದಕ್ಕೆ.
ಇದು ಬಹಳ ಅನ್ಯಾಯ, ವಯಸ್ಸಿಗೆ ಬಂದಿರುವ ನನ್ನನ್ನು ಒಂದೂ ಮಾತೂ ಕೇಳದೆ ಮದುವೆ ನಿಶ್ಚಯ ಮಾಡಿರುವಿರಿ ಎಂದು ಗೊರೂರರು ತುಂಬಾ ಕೂಗಾಡಿದರಂತೆ.
ಆಗ ಅವರ ತಾಯಿ ಹೇಳಿದರಂತೆ ಯಾವುದೂ ಯೋಚನೆ ಮಾಡಿ ಸಂಜೆ ಒಳಗೆ ಹೇಳಪ್ಪ. ಯಾಕೇಂದ್ರೆ ಮಾಡಿರುವ ಲಡ್ಡು, ಹೋಳಿಗೆ ಎಲ್ಲಾ ದಂಡ ಆಗುತ್ತೆ.
ಮಾಡಿರುವ ಹೋಳಿಗೆ ಲಡ್ಡು, ಕಜ್ಜಿಕಾಯಿ ಎಲ್ಲಾ ‘ದಂಡ’ ಆಗುತ್ತಲ್ಲಾ ಅಂತ ಮದುವೆಗೆ ಒಪ್ಪಿಕೊಂಡೆ ಎಂದು ವಿನೋದವಾಗಿ ಅವರು ಹೇಳಿಕೊಳ್ಳುತ್ತಿದ್ದರು.
ಮದುವೆಯ ಮೊದಲ ರಾತ್ರಿ ಗಂಡು ಹೆಣ್ಣಿಗೆ ಸ್ವಲ್ಪವೂ ಪರಿಚಯವಿಲ್ಲ. ವಿಶಾಲವಾದ ಹಜಾರ. ಜೊತೆಗೆ ಕತ್ತಲು. ಮೊದಲೇ ಕೋಣೆಯನ್ನು ಸೇರಿರುವ ಮದುಮಗಳನ್ನು ಹೇಗೆ ಪತ್ತೆ ಹಚ್ಚುವುದು? ಎಂಬ ಸಂಕಟ ಹಾಗೂ ಸಂಕೋಚ. ಇದಕ್ಕೆ ಪರಿಹಾರ ಹುಡುಕಿದ ಅವರು ಒಂದು ಒಣ ಮೆಣಸಿನಕಾಯಿಯನ್ನು ಕೆಂಡದಲ್ಲಿ ಸುಟ್ಟು ಹಜಾರ ಪ್ರವೇಶಿಸಿದರಂತೆ. ಕೆಮ್ಮುವ ಸದ್ದನ್ನೇ ಅನುಸರಿಸಿ ಬಳಿಸಾರಿದರಂತೆ.
ಸಾವಿನಂಥ ಗಂಭೀರ ಸನ್ನಿವೇಶದಲ್ಲಿಯೂ ಅವರ ಹಾಸ್ಯಪ್ರಜ್ಞೆ ಜಾಗೃತವಾಗಿರುತ್ತಿತ್ತು. ಅನಾಥ ಮುದುಕಿಯ ಶವಸಂಸ್ಕಾರಕ್ಕಾಗಿ ಊರ ಹೊರಗಿನ ಸ್ಮಶಾನಕ್ಕೆ ಹೋಗಿದ್ದಾಗ ಅಲ್ಲಿ ಸೇರಿದ್ದ ಜನ ಜೀವನದ ನಶ್ವರತೆಯ ಬಗ್ಗೆ ಮಾತನಾಡಲಾರಂಭಿಸಿದರು. ಆಗ ಅವರ ಸ್ನೇಹಿತ ಅಪ್ಪಣೈಯಂಗರಿಯ ಸನ್ನಿವೇಶದ ಗಂಭೀರತೆ ಕಡಿಮೆ ಮಾಡಲು ‘ಚಿತೆಯ ಉದ್ದ ಸಾಕೆ?’ ಎಂದನು. ಆಗ ಇವರ ಸ್ನೇಹಿತ ಶೀನಪ್ಪ ಮಲಗಿಕೊಂಡು ಒಮ್ಮೆ ಪರೀಕ್ಷೆ ಮಾಡಿ ನೋಡು ಎಂದು ಹೇಳಿದನಂತೆ.
‘ಬೂತಯ್ಯನ ಮಗ ಅಯ್ಯು’ ಚಲನಚಿತ್ರವಾಗಿ ಅಪಾರ ಯಶಸ್ಸನ್ನು ಸಾಧಿಸಿದ್ದಲ್ಲದೆ ಗೊರೂರರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.
ಚಲನಚಿತ್ರದ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ|| ರಾಜ್ಕುಮಾರ್ರವರು ಆಗಮಿಸಿದ್ದರು. ಆಗ ಯಾರೋ ಗೊರೂರರಿಗೆ ರಾಜ್ಕುಮಾರ್ರವರ ಪರಿಚಯ ಮಾಡಿಕೊಟ್ಟರು. ಆಗ ಗೊರೂರರು ಒಮ್ಮೆಲೇ ರಾಜ್ರವರನ್ನು ಆಪಾದಮಸ್ತಕ ನೋಡಲಾರಂಭಿಸಿದರಂತೆ.
‘ಯಾಕೆ ಸ್ವಾಮಿ ಹಾಗೇ ನೋಡ್ತೀರಿ? ಎಂದು ರಾಜ್ಕುಮಾರ್ರವರು ಪ್ರಶ್ನಿಸಿದಾಗ ರಾಜ್ ಕುಮಾರ್ ಅಂತೀರಿ. ಕಿರೀಟ, ಭುಜಕೀತರ್ಿ ಏನೂ ಇಲ್ಲ. ಅದಕ್ಕೆ ನೋಡ್ತಾ ಇದ್ದೀನಿ ಅಂದರಂತೆ.
ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು 1947-48ರಲ್ಲಿ ತಮ್ಮ ಕೊನೆ ವರ್ಷದ ಲೋಯರ್ ಸೆಕೆಂಡರಿಯನ್ನು ಗೊರೂರಿನಲ್ಲಿ ಓದಬೇಕಾದ ಸಂದರ್ಭದಲ್ಲಿ ಗೊರೂರರ ಪರಿಚಯವಾಯಿತು. ಸುಮಾರು ಇಪ್ಪತ್ತು ವರ್ಷಕ್ಕೂ ಮೀರಿ ಹಿರಿಯರಾದ ಅವರೊಂದಿಗೆ ಇವರು ಸ್ನಾನಕ್ಕಾಗಿ ಹೇಮಾವತಿ ನದಿಗೆ ಹೋಗುತ್ತಿದ್ದರು. ತಮ್ಮ ಹಳ್ಳಿಯಲ್ಲಿ ಕೆರೆಯಲ್ಲಿ ಈಜಿ ಚೆನ್ನಾಗಿ ಅಭ್ಯಾಸವಿದ್ದ ಭೈರಪ್ಪನವರಿಗೆ ಹೇಮಾವತಿ ನದಿಯ ಮೊಟ್ಟೆ-ಕಲ್ಲು ಮಡುವಿನವರೆಗೆ ಈಜಿಕೊಂಡು ಹೋಗಬೇಕೆಂಬ ಆಸೆ. ಇವರ ಆಸೆಗೆ ತಡೆಯೊಡ್ಡಿದ ಗೊರೂರು, ನೀನು ಬೇಡಪ್ಪ ಅಲ್ಲಿಗೆ. ಅಲ್ಲಿ ಇರುವ ಮೊಸಳೆಗೆ ಎಳೆ ಮಾಂಸ, ಎಳೆ ಕೈ-ಕಾಲು ಅಂದ್ರೆ ತುಂಬ ಇಷ್ಟ. ಅದ್ರಿಂದ ನೀನು ಇಲ್ಲೇ ಈಜಿ ಎಂದು ನಿರಾಸೆ ಮೂಡಿಸಿದರಂತೆ.

ಮುಂದೆ ಭೈರಪ್ಪನವರು ಕಾದಂಬರಿಕಾರರಾಗಿ ಹೆಸರು ಮಾಡಿದ ಸಂದರ್ಭದಲ್ಲಿ ಹಾಸನದಲ್ಲಿ ಭಾಷಣದ ಏಪರ್ಾಡು ಮಾಡಲಾಗಿತ್ತು. ಆಗ ಖ್ಯಾತ ಗಾಂಧಿವಾದಿಗಳಾದ ಹಾರ್ನಳ್ಳಿ ರಾಮಸ್ವಾಮಿಯವರು ಇವರನ್ನೂ ಬೆಳಗಿನ ತಿಂಡಿಗೆ ಆಹ್ವಾನಿಸಿದರು. ಮಾರನೇ ದಿನ ಶಿವರಾತ್ರಿ. ಇವರು ತಿಂಡಿಗೆ ಹೋದಾಗ ಅಲ್ಲಿ ಗೊರೂರರು ಇದ್ದರಂತೆ. ಎಲ್ಲರೊಂದಿಗೆ ಮಾತನಾಡುತ್ತಾ ಪುಷ್ಕಳವಾಗಿ ತಿಂಡಿಯನ್ನು ತಿಂದ ಗೊರೂರರು ನಂತರ ಭೈರಪ್ಪನವರು ಮೈಸೂರಿಗೆ ಹೋಗುವ ವಿಷಯ ತಿಳಿದು ತಾವೂ ಬರುವುದಾಗಿ ಹೇಳಿ ಅವರೊಂದಿಗೆ ಹೊರಟರು. ನಂತರ ಹೊಳೆನರಸೀಪುರದ ಆಧ್ಯಾತ್ಮ ಪ್ರಕಾಶನಕ್ಕೆ ಭೇಟಿ ನೀಡಿದ ಅವರು ಅಲ್ಲಿಯೂ ಫಲಾಹಾರವನ್ನು ಸೇವಿಸಿದರು. ನಂತರ ಮೈಸೂರಿನಲ್ಲಿ ತೀ.ನಂ. ಶಂಕರನಾರಾಯಣರ ಮನೆಗೆ ಭೇಟಿ ನೀಡಿದ್ದರು. ಅಲ್ಲಿ ಏನಪ್ಪ, ಶಂಕರ ಊಟ ಆಯ್ತಾ ಎಂದು ವಿಚಾರಿಸಿದರು. ಅದಕ್ಕೆ ಆಯ್ತು ಎಂದು ತಲೆಯಾಡಿಸಿದ ಅವರನ್ನು ಕಂಡು, ಏನಪ್ಪ, ಇವತ್ತು ಶಿವರಾತ್ರಿ, ಅಯ್ಯಂಗಾರಾದ ನಾನೇ ಉಪವಾಸ ಮಾಡಿದ್ದೀನಿ. ನೀನು ಮೊದಲೇ ಸ್ಮಾರ್ತ. ಜೊತೆಯಲ್ಲಿ ಶಂಕರ ಎಂದು ಹೆಸರು ಬೇರೇ ಇಟ್ಕೊಂಡಿದ್ದೀಯ, ಹಗಲು ಉಪವಾಸವಿದ್ದು, ನಂತರ ಏನಾದ್ರೂ ಸೇವನೆ ಮಾಡಬೇಕು. ಅಲ್ವೆ? ಬೇಕಂದ್ರೆ ಇವರನ್ನೇ ಕೇಳು ಎಂದು ಭೈರಪ್ಪನವರ ಕಡೆಗೆ ಕೈ ತೋರಿಸಿದರಂತೆ. ಪೆಚ್ಚಾದ ಶಂಕರನಾರಾಯಣರು ಸಂಜೆಗೆ ಅವರಿಗೆ ಮತ್ತೊಮ್ಮೆ ಇಷ್ಟವಾದ ತಿಂಡಿ ವ್ಯವಸ್ಥೆ ಮಾಡಿದರಂತೆ.
‘ರಸಸಿದ್ಧಾಂತ’ ಪ್ರತಿಪಾದಕರಾದ ಪು.ತಿ.ನ.ರವರ ಸಾಹಿತ್ಯದ ವಿಷಯ ಮಾತಾಡುವಾಗಲೆಲ್ಲಾ ‘ರಸ’ದ ವಿಷಯವನ್ನೇ ಹೆಚ್ಚಾಗಿ ಪ್ರತಿಪಾದಿಸುತ್ತಿದ್ದರು. ಇಂಥ ಒಂದು ಸಂದರ್ಭದಲ್ಲಿ ಗೊರೂರರು ಏನು ರಸ ರಸ ಅಂತ ‘ರಾಧಾ-ಕೃಷ್ಣರ’ ಶೃಂಗಾರ ರಸವನ್ನೆ ಹೇಳ್ತಾ ಇರ್ತೀಯಪ್ಪಾ. ನಮ್ಮೂರ ರಂಗ-ತಿಮ್ಮಿಯರ ಶೃಂಗಾರ ರಸ ಬರೀ ನೋಡೋಣ ಎಂದರಂತೆ. ಗೊರೂರರು ತಮ್ಮ ಬದುಕಿನ ಕೊನೆಯ ದಿನಗಳನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಕಳೆದರು. ಇವರ ಮನೆಯ ಮುಂದೆ ವಿವಿಧ ರೀತಿಯ ಫಲದ ಗಿಡ-ಮರಗಳಿದ್ದವು. ಇಂತಹ ಒಂದು ಸಂದರ್ಭದಲ್ಲಿ ಕವಿ ಲಕ್ಷ್ಮೀನಾರಾಯಣ ಭಟ್ಟರು ಭೇಟಿ ನೀಡಿದರು. ಅವರು ವಾಪಸ್ ಬರುವಾಗ ಗೊರೂರರು ಮರದಲ್ಲಿ ಇನ್ನೂ ಹಲಸು ಕಸುಗಾಯಿಯಾಗಿದೆ. ಹಣ್ಣಾಗಿದ್ರೆ ನೀನೂ ಒಂದು ತೊಗೊಂಡು ಹೋಗಬಹುದಿತ್ತು ಅಂದರಂತೆ. ಅದಕ್ಕೆ ಭಟ್ಟರು, ಮರದ ಮೇಲಿನದ್ದು ಏಕೆ? ಮಂಚದ ಕೆಳಗೆ ಇಟ್ಟಿದ್ದೀರಲ್ಲ, ಅದನ್ನು ಕೊಟ್ಟಿದ್ರೆ ಸಾಕಿತ್ತು ಎಂದರಂತೆ. ಆಗ ಗೊರೂರರು ಭಟ್ಟ ನಿನ್ನ ಕಣ್ಣು ಆಗ್ಲೆ ಅಲ್ಲಿಗೆ ಬಿತ್ತಾ ಎಂದು ಹಣ್ಣು ಕೊಟ್ಟು ಕಳುಹಿಸಿದರಂತೆ.
ಕ.ಸಾ.ಪ.ದ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಲೇಖಕ ಹಂ.ಪ.ನಾ.ರವರು ಗೊರೂರರೊಡನೆ ಮಾತನಾಡುತ್ತಾ ನಿಮ್ಮ ಮನೆ ಎಲ್ಲದಕ್ಕೂ ಹತ್ತಿರವಾಗಿದೆ. ಮಾಕರ್ೆಟ್ಗೆ, ಬಸ್ಸ್ಟಾಂಡಿಗೆ, ದೇವಸ್ಥಾನಕ್ಕೆ ಹೀಗೆ ಎಲ್ಲದಕ್ಕೂ ಹತ್ತಿರವಾಗಿದೆ ಎಂದರು. ಅದಕ್ಕೆ ಗೊರೂರರು ನೀನು ಹೇಳಿದ್ದು ಸರಿ, ಹರಿಶ್ಚಂದ್ರ ಘಾಟ್ಗೂ ಹತ್ತಿರವಾಗಿದೆ ಎಂದರಂತೆ.
ಅರ್ಧ ಹಲಸಿನಹಣ್ಣನ್ನು ಅವರು ತಿಂದು ಉಳಿದರ್ಧ ಹಣ್ಣನ್ನು ಸಮೀಪವಿದ್ದ ಹಂ.ಪ.ನಾ,ರವರ ಮನೆಗೆ ತರುತ್ತಿದ್ದ ಗೊರೂರರು ಕಮಲಾಗೆ (ಹಂ.ಪ.ನಾ. ಅವರ ಪತ್ನಿ) ಹಲಸಿನ ಹಣ್ಣು ಅಂದ್ರೆ ತುಂಬ ಇಷ್ಟ. ತಗೊಂಡು ಹೋಗಿ ಕೊಡಿ ಅಂತ ನನ್ನ ಶ್ರೀಮತಿ ಕೊಟ್ಟು ಕಳುಹಿಸಿದ್ದಾಳೆ ಅವಳಿಗೆ ಎಂದು ಕೊಟ್ಟ ನಂತರ ಕಮಲ, ತುಂಬಾ ಚೆನ್ನಾಗಿ ಕಾಫಿ ಮಾಡ್ತಾಳೆ, ಅಲ್ಲೆ ಕುಡಿದುಕೊಂಡು ಬನ್ನಿ ಅಂತಾನೂ ಹೇಳಿದ್ದಾಳೆ ಎಂದು ಕಾಫಿಯನ್ನು ಮಾಡಿಸಿ ಕುಡಿಯುತ್ತಿದ್ದರಂತೆ.
ಅವರ ಹಳ್ಳಿಯ ಚಿತ್ರಗಳು ಪ್ರಕಟವಾಗಿ ಅಪಾರ ಜನಮನ್ನಣೆಗೆ ಪಾತ್ರವಾಗಿತ್ತು. ಕೃತಿಯನ್ನು ಓದಿ ಮರುಳಾದ ಕುಲಪತಿ ಎನ್.ಎಸ್. ಸುಬ್ರಾಯರು ಗೊರೂರರನ್ನು ಎಸ್.ಎಸ್.ಎಲ್.ಸಿ.ಗೆ ಪರೀಕ್ಷಕರನ್ನಾಗಿ ನೇಮಿಸಿದರು. ಗೊರೂರರು ಯಾವ ಪರೀಕ್ಷೆಯನ್ನೂ ಪಾಸ್ ಮಾಡಿರಲಿಲ್ಲ. ಹೀಗಾಗಿ ಎಸ್.ಎಸ್.ಎಲ್.ಸಿ. ಆಗದವರನ್ನು ಪರೀಕ್ಷಕರಾಗಿ ನೇಮಿಸಿದ್ದು ಸರಿಯಲ್ಲ ಎಂದರು. ಆಗ ಸುಬ್ಬರಾಯರು ಅವರು ಯಾವ ಪರೀಕ್ಷೆಯನ್ನು ಪಾಸ್ ಮಾಡದಿದ್ದರೇನಂತೆ. ‘ಹಳ್ಳಿಯ ಚಿತ್ರಗಳು’ ಬರೆದಿಲ್ಲವೇ? ಅಷ್ಟು ಸಾಕು ಎಂದು ಅವರ ಬಾಯಿ ಮುಚ್ಚಿಸಿದರು. ನಂತರ ಗೊರೂರರನ್ನು ಕರೆದು ‘ಏನ್ರಿ ನೀವು ಬಿ.ಎ. ಇಂಟರ್ ಮೀಡಿಯೇಟ್, ಎಸ್.ಎಸ್.ಎಲ್.ಸಿ. ಏನೂ ಮಾಡಿಲ್ಲವೆ? ಎಂದು ಕೇಳಿದ್ದರಂತೆ. ಇಲ್ಲ ಸರ್, ನಾನು ಯಾವ ಪರೀಕ್ಷೆಯನ್ನು ಮಾಡಿಲ್ಲ ಎಂದರು. ಗೊರೂರರಿಗೆ ಬೇಸರದ ದನಿಯಲ್ಲಿ ಹೋಗಿ ಯಾವುದಾದರೂ ಪರೀಕ್ಷೆಗೆ ಕಟ್ಟಿ ಪಾಸ್ ಮಾಡಿ ಎಂದರಂತೆ. ‘ಆಗಲಿ’ ಎಂದ ಗೊರೂರರು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ವಿದ್ವಾನ್ ಪರೀಕ್ಷೆ ಕಟ್ಟಿದರು.
ವಿಶೇಷವೆಂದರೆ ಅಲ್ಲಿ ಇವರದೆ ಪುಸ್ತಕ ‘ನಮ್ಮ ಊರಿನ ರಸಿಕರು’ ಪಠ್ಯವಾಗಿತ್ತು. ಇವರ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ಪರೀಕ್ಷಕರಾದ ಶ್ರೀ ಮುಳಿಯ ತಿಮ್ಮಪ್ಪಯ್ಯನವರು ನೀವು ಬರೆದ ಪುಸ್ತಕ ಚೆನ್ನಾಗಿದೆ, ಆದರೆ ನೀವು ಉತ್ತರ ಬರೆದ ಚೆನ್ನಾಗಿರಲಿಲ್ಲ. ಅವುಗಳಿಗೆ ನಾನು ಇನ್ನೂ ಕಡಿಮೆ ಅಂಕಗಳನ್ನು ನೀಡಬೇಕಾಗಿತ್ತು ಎಂದರಂತೆ.






Uttama haasyaprajneya ghatanegalannu baredu odisi namma idee wara chennagi saaguvante madiddeeri. Tumbaa dhanyawaadagalu.
ಗೊರೂರ ನೆನಪು ಗೊರೂರ ಬರವಣಿಗೆಯಷ್ಟೇ ಆಪ್ತವಾಗಿದೆ.
ಆಹಾ! ತುಂಬಾ ಚೆನ್ನಾಗಿವೆ. ಬಹಳ ಖುಶಿ ಕೊಟ್ಟಿತು. ಧನ್ಯವಾದಗಳು, ಇನ್ನೂ ಬರೆಯಿರಿ.
Fantastic
Fantastic narration
You are great
ಗೊರೂರುರಾಮಸ್ವಾಮಿಅಯ್ಯಂಗಾರ್ ಅವರ ನೆನಪು ಅವರ ಬರಹಗಳಷ್ಟೇ ಆಪ್ತವಾಗಿದೆ.