ಈ ನಾಟಕದ ಪ್ರದರ್ಶನ ನಾಳೆ ಬೆಂಗಳೂರಿನ ರಂಗ ಶಂಕರದಲ್ಲಿದೆ
ರಂಗ ಸಂಪ್ರದಾಯಗಳನ್ನು ಡಿ- ಫೆಮಿಲಿಯರೈಸ್ ಮಾಡುವ ಪ್ರತಿಮಾ ನಾಟಕ
ಡಾ.ಎಂ.ಜಿ. ಹೆಗಡೆ
ಪ್ರಕಾಶ ರಾಜ್ ಅರ್ಪಿಸುವ ನಿರ್ದಿಗಂತ ರಂಗಪಯಣದ
ಕವನ,ಕತೆ,ಕಾದಂಬರಿಗಳನ್ನು ಆಧರಿಸಿದ ನಾಟಕ
‘ಗಾಯಗಳು’
ಪರಿಕಲ್ಪನೆ, ವಿನ್ಯಾಸ,ನಿರ್ದೇಶನ: ಡಾ. ಶ್ರೀಪಾದ ಭಟ್
ಸಹ ನಿರ್ದೇಶನ: ಶ್ವೇತಾರಾಣಿ ಹಾಸನ
ಕುವೆಂಪು ತಮ್ಮ ಸ್ಮಶಾನ ಕುರುಕ್ಷೇತ್ರಂ ನಾಟಕವನ್ನು ‘ ಪ್ರತಿಮಾ ಸೃಷ್ಟಿ’ ಎಂದು ಕರೆದಿದ್ದಾರೆ. ಯುದ್ಧದ ದುರಂತತೆ, ಅನ್ಯಾಯ, ಕ್ರೌರ್ಯ, ಅವಿವೇಕ, ಸಂಸ್ಕೃತಿಯ ಸಾವು – ಇವುಗಳಿಗೆಲ್ಲ ಪ್ರತಿಮೆ ಈ ನಾಟಕ ಎನ್ನುತ್ತಾರವರು. ಮೊನ್ನೆ ಅಗಸ್ಟ್ 13 ರಂದು ಧಾರವಾಡದ ಸೃಜನದಲ್ಲಿ ನೋಡದೊರಕಿದ ನಿರ್ದಿಗಂತ ತಂಡದ ‘ ಗಾಯಗಳು’ ಪ್ರತಿಮಾ ಸೃಷ್ಟಿಯ ಕ್ರಮವನ್ನು ವಿಸ್ತರಿಸಿ ಪ್ರತಿಮಾವಳಿಗಳನ್ನೇ (ಮಾಂಟಾಜ್) ಮುಂದಿರಿಸಿ ಹೊಚ್ಚ ಹೊಸ ರಂಗಾನುಭವ ನೀಡಿತು.
ಕಳೆದೊಂದು ದಶಕದಲ್ಲಿಯೇ ಇಷ್ಟು ಪ್ರಖರ ರಾಜಕೀಯ ಪ್ರಜ್ಞೆಯೂ ಆಳವಾದ ಸೌಂದರ್ಯ ಪ್ರಜ್ಞೆಯೂ ಮೇಳೈಸಿದ ರಂಗ ನಿರ್ಮಾಣವನ್ನು ನಾನು ಕಂಡಿರಲಿಲ್ಲ. ಈ ದಶಕದ ಪ್ರಮುಖ ನಾಟಕವಿದು.
ಸ್ವತಹ ಒಂದು ಕಾವ್ಯವೇ ಆಗಿಬಿಡುವ ಹವಣಿಕೆಯಲ್ಲಿ ರಂಗ ಸಂಪ್ರದಾಯಗಳನೆಲ್ಲ ಛಿದ್ರಗೊಳಿಸಿ ಚಿಂದಿಗಳಿಂದ ಕಟ್ಟಿದ ಚೆಂಡಿನಂತಿರುವ ಈ ನಾಟಕವು loose ends ನ್ನು ಹಾಗೆಯೇ ಉಳಿಸಿಕೊಂಡಿದೆ – ತಾರ್ಕಿಕ ಕಥನಕ್ಕೆ ಶ್ರುತಿಗೊಂಡ ಮನಸ್ಸನ್ನು ತಬ್ಬಿಬ್ಬುಗೊಳಿಸುತ್ತ, ಕಾಡುತ್ತ, ಬಳಲಿಸುತ್ತ ಕೂಡ. ವಿರಾಠ್ ಕಥನಗಳ ನೋವರಿವಳಿಕೆ ( ಅನೆಸ್ಥೇಷಿಯಾ) ನಿಶ್ಚೇಷ್ಠಿತಗೊಳಿಸಿದ್ದ ಸಂವೇದನಾ ತಂತುಗಳನೆಲ್ಲ ಜಾಗ್ರತಗೊಳಿಸುವ ಹವಣಿನಲ್ಲಿ ಪಿರಾಂಡೆಲೊ, ಕುವೆಂಪು, ಮಂಟೋ, ಹನೂರರು, ಬ್ರೆಖ್ಟ್, ಬ್ರೂಕ್, ವಿಸ್ಲಾವಾ, ಕ್ವಾಸಿರ್ ಹಸನ್, ಸಾಹಿರ್ ನಂತಹ ಧೀಮಂತರೆಲ್ಲರ ಆವಾಹನೆ ರಂಗದ ಮೇಲಾಗುತ್ತದೆ.
ವಿಭಿನ್ನ ದೇಶ, ಭಾಷೆ, ಕಾಲಗಳಲ್ಲಿ ರೂಪುಗೊಂಡ ಪ್ರತಿಮೆಗಳೆಲ್ಲ ಭಾವಸಾಮ್ಯ, ಸಾಹಚರ್ಯದಿಂದ ಬೆಸೆದುಕೊಂಡು ಅರ್ಥ ಪರಂಪರೆ ಸೃಷ್ಟಿಸುತ್ತದೆ. ಪ್ರೇಕ್ಷಕರ ಸಂವೇದನೆ ಸೂಕ್ಷ್ಮಗೊಂಡಂತೆ ಗಾಯದ ನೋವು ಅರಿವಿಗೆ ಬರಲಾರಂಭಿಸುತ್ತದೆ; ನೋವಿನ ಆಕ್ರಂದನ ಸ್ಪಷ್ಟವಾಗಿ ಕೇಳಿ ಕರುಳು ಹಿಂಡುತ್ತದೆ; ಚಿಕಿತ್ಸೆಯ ಕುರಿತು ಚಿಂತಿಸುವುದು ಅನಿವಾರ್ಯವಾಗುತ್ತದೆ. ಸ್ವತಹ ಇನ್ನೊಂದು ಚಂದದ ಕಥನವಾಗಲು ನಿರಾಕರಿಸುವ ಇದರ loose ends ವಿರಾಟ್ ಕಥನಗಳಿಗೆ ಸವಾಲು.
0 ಪ್ರತಿಕ್ರಿಯೆಗಳು