ಸಾವಿತ್ರಿ ಹಟ್ಟಿ
ಸಾಲೀ ಗುಡಿ ಕಸ ಉಡುಗೂದು ಅಂದ್ರ ಏನ್ ತಿಳಿದೀರ್ಲೆ? ಇಡೀ ರಾತ್ರಿ ಸರಸ್ವತಿ ಅಡ್ಡಾಡಿರ್ತಾಳ ಸಾಲಿ ಒಳಗ ಹೊರಗ, ಗೊತ್ತದ ಏನು? ಅಂತ ನಮ್ಮ ಗುರೂಜಿ ಕಾಶೀಬಾಯಿ ಸಿದ್ದೋಪಂತ ಅಮ್ಮಾರು ಆಗಾಗ್ಗೆ ಹೇಳ್ತಿದ್ರು. ಹಂಗ ಸರಸ್ವತಿ ಅಡ್ಡಾಡಿದ ನೆಲಾನ ಕಸ ಯಾರು ಗುಡಿಸ್ತಾರ ಅವರಿಗೆ ಒಲಿತಾಳ ಸರಸ್ವತಿ. ಅದಕ್ಕಾ ಬೆಳಿಗ್ಗೆ ಸಾಲಿ ಗುಡಿ ಕಸ ಗುಡಿಸಲಿಕ್ಕೆ ಹಿಂದೇಟು ಹಾಕಬಾರದಾ ನಮ್ಮವ್ವ… ಅಂತ ಗುರೂಜಿ ಹೇಳಿದ್ದನ್ನು ನೂರಕ್ಕೆ ನೂರು ನಂಬಿದ ನಾನು ಕಸ ಗುಡಿಸುವುದೆಂದರೆ ಅಕ್ಷರಗಳನ್ನೇ ಬಳೆದು ಬಾಚಿ ಎದೆಗೂಡಿನ್ಯಾಗಿಟ್ಟುಕೊಂಡಂಗ ಅಂತ ತಿಳಿದಿದ್ದೆ. ಅದಕ್ಕಾ ಬೆಳಿಗ್ಗೆ ನಮ್ಮ ಮನೆಯಿಂದ ದೂರ ಇರೂ ನಾರಾಯಣಪ್ಪನ ಗುಡಿ ಅಂದ್ರ ನಮ್ಮ ಗುರೂಜಿ ಸಾಲೀಗಿ ನಾನು ಮತ್ತು ತಂಗಿ ಎದ್ದೂ ಬಿದ್ದೂ ಓಡ್ತಿದ್ವಿ. ನಾವಿಬ್ರೂ ದಸ್ ದಸ್ ತೇಕುತ್ತಾ ಓಡಿ ಹೋಗಿ ಗುರೂಜಿ ಮನಿ ಮುಟ್ಟಿದಾಗ ಗುರೂಜಿ ರಂಗೋಲಿ ಹಾಕಾಕ್ಹತ್ತಿರತಿದ್ರು ಇಲ್ಲಾ ಆಗ್ಲೇ ತಯಾರಾಗಿ ಮನಿಗಿ ಬೀಗ ಹಾಕ್ಹಾಕ್ಹತಿರತಿದ್ರು. ನಾವು ಗುರೂಜಿ ಕೈಯಿಂದ ಸಾಲೀ ಗುಡಿ ಕೀಲಿ ಕೈ ಇಸಕೊಂಡು ಸಾಲೀ ಗುಡಿ ತನಕ ಮತ್ತೆ ಓಡ್ತಿದ್ವಿ.
ನಮ್ಮ ವಾರಿಗೀ ಹುಡುಗೂರು ಹುಡುಗ್ಯಾರು ಅಂದ್ರ ನಮ್ಮ ಸಹಪಾಠಿಗಳು ಪಾಠೀ ಚೀಲ ಹೆಗಲಗಿ ಹಾಕ್ಕೊಂಡು ಸಾಲೀಗಿ ಬರೂ ಹೊತ್ತಿಗಿ ನಾನು ನನ್ನ ತಂಗಿ ಪ್ರೇಮಾ ಸೇರಿ ಕಸ ಗುಡಿಸಿ ಸ್ವಚ್ಛ ಮಾಡಿತರ್ಿದ್ವಿ. ಕರ್ರಗೆ ಮಿಂಚುತ್ತಾ ಆಳೆತ್ತರ ನಿಂತಿರುವ ನಾರಾಯಣಪ್ಪನ ಮುಂದೆ ಗುರೂಜಿ ಎಣ್ಣೀದು ಇಲ್ಲಾ ತುಪ್ಪದ್ದು ದೀಪ ಹಚ್ಚಿಡೂ ಹೊತ್ತಿಗೆ ನಿಧಾನಕ್ಕೆ ಎಲ್ಲಾ ವಿದ್ಯಾಥರ್ಿಗಳ ಜಮಾಯಿಸಾಕ್ಹತ್ತಿರತಿದ್ರು.
ಒಂದೊಂದು ಸಲ ಏನಾಕ್ಕಿತ್ತಪಾ ಅಂದ್ರ ನಾವು ಹೋದ ಹೊತ್ತಿಗೆನೇ ನಾಕಾರು ಜನ ಇತರ ವಿದ್ಯಾಥರ್ಿಗಳೂ ಬಂದು ಬಿಟ್ಟಿತರ್ಿದ್ರು. ಆಗೆಲ್ಲಾ ಗುರೂಜೀ, ಲೇ ಕಸಬರಿಗಿ ತಗೊರ್ರಿ, ಚೌಕಿ ನೀನು ಉಡುಗು ಚೆನ್ನಿ, ಅಂಗಳ ನೀನು ಗುಡಿಸು ರತ್ನಿ, ಒಳಗಿನ ಗುಡಿ ನೀ ಗುಡಿಸು ಮಾಗುಂಡ.. ಅಂತ ಕಸ ಗುಡಿಸೂ ಕೆಲಸಾನ್ನೆಲ್ಲಾ ನಮ್ಮ ಗೆಳೆಯ/ಗೆಳತ್ಯಾರಿಗೆ ಹಂಚಿ ಬಿಡ್ತಿದ್ರು. ಗುರೂಜಿಯವರಾ ನಾನ್ರೀ ಗುರೂಜಿಯವ್ರಾ ನಾನ್ರೀ .. ಅಂತ ನಾನೂ ಮತ್ತ ತಂಗಿ ಕೇಳೀದ್ರೂ ದಿನಾಲೂ ನೀವಾ ಗುಡಿಸ್ತೀರಲಲ್ಲೇ ಅಕ್ಕಿ, ಅವು ಗುಡಿಸಲಿ ಬಿಡ್ರೆಲೆ ಇವತ್ತಾ.. ಅಂತ ನಮಗೆ ಅಕ್ಕರೆಯಿಂದಾ ಹೇಳಿದಾಗ ನಮ್ಮ ಸಹಪಾಠಿಗಳು ಒಳಗೊಳಗೆ ಕೆಂಡ ಕಾರುತಿದ್ರು. ಗುರೂಜಿ ಪಕ್ಷ ಪಾತ ಮಾಡ್ತಾರ ಅನ್ನೂ ಹಂಗ ಹುಡುಗರು ಕೆಕ್ಕರಿಸಿಕೊಂಡು ನಮ್ಮ ಕಡೆ ನೋಡಿ, ಬೆಕ್ಕಿನಂಗೆ ಗುರೂಜಿ ಕಡೆ ನೋಡಿ ಕಸಬರಿಗಿ ಹಿಡಿದು ಅಲ್ಲೀಟು ಇಲ್ಲೀಟು ಕಸ ಬಿಟ್ಟು ಗುಡಿಸಿ ಅದಕ್ಕೊಂದಿಷ್ಟು ಬೈಗುಳ ತಿಂತಿದ್ರು ಗುರೂಜಿಯಿಂದ. ಸರಸ್ವತಿ ಅಡ್ಡಾಡಿರತಿದ್ಲೋ ಇಲ್ಲಾ ಅನ್ನೂದು ಆ ಸರಸ್ವತಿಗಷ್ಟೇ ಗೊತ್ತು. ಆದ್ರ ಕೆಲಸ ಕಲಿಸೂದು ಗುರೂಜಿಯವರ ಉದ್ದೇಶವಾಗಿತ್ತು ಅಂತ ತಿಳುವಳಿಕಿ ಬಂದ್ಮ್ಯಾಲೆನೆ ನನಗ ಗೊತ್ತಾಗಿದ್ದು. ಆದ್ರ ಸರಸ್ವತಿ ಅಡ್ಡಾಡಿತರ್ಾಳ ಅನ್ನೂ ದಿವ್ಯ ನಂಬಿಕೆಯೇ ಸಾಕಾಗಿತ್ತು ಆ ಬಾಲ್ಯದಾಗ ಸ್ವಗರ್ಿಯ ಕಲ್ಪನೆಯಲ್ಲಿ ಕಳೆದು ಹೋಗಾಕೆ.
ಕಸ ಗುಡಿಸೋ ಕೆಲಸ ನನಗೊಬ್ಬಾಕಿಗೆ ಬಿದ್ದ ದಿನ ನಾನಂತೂ ಈ ಲೋಕದ ಹುಡುಗಿನೇ ಆಗಿತರ್ಿದ್ದಿಲ್ಲ. ನಾರಾಯಣಪ್ಪನ ಗರ್ಭ ಗುಡಿಯನ್ನು ಮಾತ್ರ ಗುರೂಜಿಯೇ ಸ್ವಚ್ಛ ಮಾಡ್ತಿದ್ರು. ಉಳಿದ ಇನ್ನೊಂದು ಒಳಗುಡೀನ ನಾನು ಸ್ವಚ್ಛ ಮಾಡ್ತಿದ್ದೆ. ಹೊರಗಿನ ಮುಖ ಮಂಟಪ, ಅದರ ಸುತ್ತಲಿನ ಚೌಕಿ ಎಲ್ಲಾನೂ ಗುಡಿಸಿ ಶುಚಿ ಮಾಡೂದಂದ್ರ ನನಗ ಭೂರಿ ಭೋಜನದ ಆನಂದ ಸಿಗ್ತಿತ್ತು. ಗುಡಿಯ ಮಾಡು ಮಾಡನ್ನೆಲ್ಲಾ, ಕಮಾನು ಕಮಾನನ್ನೆಲ್ಲಾ ಬರೀ ಧೂಳು ಒರೆಸಿ, ಕಸ ಗುಡಿಸುತ್ತಿರಲಿಲ್ಲ ನಾನು. ಅಲ್ಲೆಲ್ಲಾದ್ರೂ ಸರಸ್ವತಿಯ ಹೆಜ್ಜೆ ಕಾಣ್ಸ್ಯಾವಾ, ನಾರಾಯಣನ ಹೆಜ್ಜೆ ಮೂಡ್ಯಾವಾ ಅಂತ ನೋಡೇ ಕಸಬರಿಗಿ ಆಡಿಸುತ್ತಿದ್ದೆ. ಆದ್ರ ಕಲ್ಲು ಹಾಸಿನ ಆ ಸಾಲೀ ಗುಡಿಯಾಗ ಶಾರದೆಯ ಹೂಪಾದಗಳ ಹೆಜ್ಜೆ ಗುರುತು ಕಾಣದಾದಾಗ ಅವ್ಯಕ್ತ ವೇದನೆ ನನ್ನ ಕಾಡ್ತಿತ್ತು. ಸಾಲೀ ಗುಡಿಯ ಬಲಗಡೆ ಇರೂ ಆ ಆವಾರ ಮಣ್ಣಿನದು. ಅದು ನಮಗ ಆಟದ ಅಂಗಳ. ಅಲ್ಲೆಲ್ಲಿಯಾದರೂ ಶಾರದೆ ನಡೆದ ಕುರುಹು ಕಂಡೀತಾ ಅಂತ ಹುಡುಕಿ ಆಕೀ ಹೆಜ್ಜೆ ಗುರುತು ಕಾಣದೆ, ಅಲ್ಲಿ ನಡೆದಾಡಿ ಹೋಗಿದ್ದ ಯಾವುದೋ ಹಕ್ಕಿ, ಗುಬ್ಬಚ್ಚಿಗಳ ಚಿಗುರೆಲೆ ಬಳ್ಳಿಯಂಥಾ ಹೆಜ್ಜೆ ಸಾಲಿನ ಗುರುತು ನೋಡಿ ಅಷ್ಟಾದ್ರೂ ಕಂಡಿತಲ್ಲಾ ಅಂತ ಖುಷಿ ಪಡುತ್ತಿದ್ದೆ. ಅಲ್ಲೇ ಇದ್ದ ಆ ಒಗರು ಬಾರೀ ಹಣ್ಣಿನ ಗಿಡ ಸದಾ ಹಸಿರಾಗಿ ಮದುವಣಗಿತ್ತಿಯಂತೆ ನಿಂತಿದ್ರೂ ಅದರಾಗ ಹಣ್ಣು ಬಿಡೂದು ಮಾತ್ರ ಅಪರೂಪ. ಬಿಟ್ಟಾಗಲೂ ಅವು ಒಗರು, ಕಹಿ ಮಿಶ್ರಿತ ಹುಳಿ ಬಾರಿ ಹಣ್ಣು. ಪಾಪ ಆ ಗಿಡವಾದ್ರೂ ಏನು ಮಾಡೀತು, ಅದಕ್ಕ ಸರಿಯಾಗಿ ಬುಡ ಅಗೆದು ಉಪ್ಪು ಕಟ್ಟಿ ನೀರು ಹಾಕಿದರೆ ಸಿಹಿ ಬಾರೀ ಹಣ್ಣು ಕೊಡಬಲ್ಲದು ಅಂತ ನನಗ ಆಗ ತಿಳಿಯುವ ವಯಸ್ಸಾಗಿರಲಿಲ್ಲ. ಅಲ್ಲದಾ ಗುರೂಜಿ ಕೂಡ ಅದರ ಬಗ್ಗೆ ಲಕ್ಷ್ಯ ಕೊಟ್ಟಿರಲಿಲ್ಲ. ಆದ್ರ ನನಗ ಮಾತ್ರ ಆ ಬಾರೀಗಿಡದ ಮ್ಯಾಲೆ ನಾರಾಯಣ ಒಮ್ಮೆಯಾದ್ರೂ ಏರಿರಬಹುದು, ಹಾವಿನ ಹೆಡೆ ಮ್ಯಾಲೆ ಕ್ರಿಷ್ಣಾಗಿ ಕುಣಿದಾತಗೆ ಆ ಮುಳ್ಳಿನ ಗಿಡ ಏರಾಕಾಗಲ್ಲೇನು ಅಂತ ಸ್ವಗತದಲ್ಲಿ ಮಾತಾಗುತ್ತಿದ್ದೆ. ಸಾವೀ ಸಾವಕ್ಕಾ, ಏನ್ಮಾಡ್ತಾ ಇದ್ದೀಯಲೇ ಬಾ ಇಲ್ಲಿ.. ಅಂತ ಗುರೂಜಿಯವರ ಅಕ್ಕರೆಯ ಕರೆ ಕೇಳಿ ಹತ್ತರ ಹರೆಯದ ನಾನು ಜಿಂಕೆ ಮರಿಯಂತೆ ನೆಗೆಯುತ್ತಾ ಅವರ ಕುಚರ್ಿಯ ಬಲಗಡೆ ನನ್ನ ಸ್ಥಾನವನ್ನು ಅಲಂಕರಿಸ್ತಿದ್ದೆ.

ಅದು ಪ್ರಾರ್ಥನೆಯ ಹೊತ್ತು. ಪ್ರಾರ್ಥನೆ ಮಾಡೂವಾಗ ಗುರೂಜಿಯ ಎಡ ಬಲದ ಸ್ಥಾನ ತಂಗಿ ಮತ್ತು ನನಗೆ ಮೀಸಲಾಗಿರುತ್ತಿತ್ತು. ಅದ್ಯಾಕೋ ಗೊತ್ತಿಲ್ಲ. ನೂರಾರು ವಿದ್ಯಾಥರ್ಿಗಳಿದ್ರು. ಶ್ರೀಮಂತರ ಮಕ್ಕಳಿದ್ರು. ಚೆಂದ ಚೆಂದದ ರೂಪಿನ ಉಡುಗೆ ತೊಡುಗೆಯ ಮಕ್ಕಳಿದ್ರು. ಅವರೆಲ್ಲರನ್ನೂ ಗುರೂಜಿ ಪ್ರೀತಿಸ್ತಿದ್ರು. ಆದ್ರ ಅವರೊಂದಿಗೆ ಹೋಲಿಸಿ ನೋಡೀದ್ರ ನನ್ನ ಮತ್ತು ತಂಗೀನ್ನ ವಿಶೇಷವಾಗಿ ಪ್ರೀತಿಸ್ತಿದ್ರು. ನಿಜ ಹೇಳಬೇಕಂದ್ರ ಆಗ ತುತ್ತಿನ ಚೀಲಕ್ಕೆ ಎಷ್ಟೊಂದು ಪರದಾಟ ಇತ್ತು ನಮಗ. ಈಗಿನಂಗ ಸಾಲ್ಯಾಗ ಬಿಸಿ ಊಟ ಇರಲಿಲ್ಲ, ಕ್ಷೀರಭಾಗ್ಯವಿರಲಿಲ್ಲ. ಬಡವರಿಗೆ ಅನ್ನಭಾಗ್ಯವಿರಲಿಲ್ಲ.ಸೈಕಲ್ ಇರಲಿಲ್ಲ. ದುಡಿದು ತಿನ್ನಬೇಕಂದ್ರ ಕೆಲಸ ಸಿಕ್ತಿರಲಿಲ್ಲ. ಕೆಲಸ ಸಿಕ್ಕರೂ ಕೂಲಿ ಹಸಿದ ಸಮಯಕ್ಕೆ ಸಿಕ್ತಿರಲಿಲ್ಲ. ಸರಿಯಾದ ಸಮವಸ್ತ್ರ ಇರಲಿಲ್ಲ. ಆದರೆ ಗುರೂಜಿ ಹೇಳಿಸುತ್ತಿದ್ದ ,ಏಳು ಬೇಗನೇ ಬಾಲ ನಂದನ, ತಾಯಿ ತಂದೆಗೆ ಮಾಡು ವಂದನೆ… ಎಂಬ ಹಾಡು ನಮಗೆ ಗುರು-ಹಿರಿಯರಲ್ಲಿ ತಂದೆ ತಾಯಿಯಲ್ಲಿ ಗೌರವ ತುಂಬಿತ್ತು. ಹಳೇ ದಿರಿಸೇ ಆಗಲಿ ಸ್ವಚ್ಛವಾಗಿರಿಸಿಕೊಳ್ಳಲು ಗುರೂಜಿ ಸದಾ ಸ್ಫೂತರ್ಿಯಾಗಿದ್ರು. ಅವರ ಕಾಳಜಿ ನಮ್ಮಲ್ಲಿ ಶಿಸ್ತನ್ನು ಮೈಗೂಡಿಸಿತ್ತು. ಪ್ರತೀ ವರ್ಷ ಹೊಸ ಪುಸ್ತಕ ಸಿಗ್ತಿರಲಿಲ್ಲ. ಹಿರಿಯ ವಿದ್ಯಾಥರ್ಿಗಳು ಓದಿ ಬಿಟ್ಟ ಪುಸ್ತಕಗಳು ನಮಗೆ ಸಿಗ್ತಿದ್ವು. ಅದು ನನಗಂತೂ ಪೂರ್ಣ ಅನ್ವೇಷಣಾ ಹಂತದ ಬದುಕು. ಮನ್ಯಾಗ ತಿನ್ನಾಕ ಹುಡುಕ್ತಿದ್ದೆ. ಸಿಕ್ಕಿದ್ದಾ ಪಂಚಾಮೃತವಾಗ್ತಿತ್ತು. ಸಾಲೀಗಿ ಹೋದ್ರ ಅಕ್ಷರಗಳಿಗೆ ಹುಡುಕಾಡ್ತಿದ್ದೆ.
ಓದಿದ್ದನ್ನೆಲ್ಲಾ ಎದಿಯಾಗ ಪ್ರೀತಿಯಿಂದ ಕಾಪಿಡುತ್ತಿದ್ದೆ. ಯಾರಾದರೂ ಯಾರಿಗಾದ್ರೂ, ‘ಎದೀ ಸೀಳಿದರ ಎರಡಕ್ಷರ ಇಲ್ಲ ಧಿಮಾಕು ನೋಡು’ ಅಂತ ಬೈಯ್ಯುವಾಗೆಲ್ಲಾ ನನಗಾದ್ರೂ ಬೈಯ್ಬಾರ್ದಾ ನೀವು ನನ್ನೆದ್ಯಾಗ ಇರೂ ಅಕ್ಷರ ಹೆಂಗಿವೆ ಅಂತ ತೋರಿಸೇನು ಅಂತ ಒಳಗೊಳಗಾ ಒಂಚೂರು ಧಿಮಾಕು ಮಾಡ್ಕೊಂತಿದ್ದೆ. ಕೆಲವೊಮ್ಮೆ ಹಿಂಗ ಒಣ ಜಂಭ ಮಾಡಿಕೊಂಡಾಗ ಅದೂ ತಿಳಿದು ಬಿಟ್ಟಿತೇನೋ ಅನ್ನೂವಂಗ ಗುರೂಜಿ ತಮ್ಮ ಗುರುವಾರದ ನೀತಿ ಕಥೆ ಪಾಠದ ಸಮಯದಾಗ ಯಾವುದನ್ನೋ ಒಂದು ಕಥೆ ಹೇಳಿ ನನ್ನ ಜಂಭ ಜರ್ರನಾ ಇಳಿದು ಹೋಗುವಂಗ ಮಾಡಿಬಿಡ್ತಿದ್ರು.
ಪ್ರತಿ ಗುರುವಾರದ ಸಂಜೆ ತರಗತಿಯ ಕೊನೆಯ ಒಂದು ತಾಸು ಕಥೆ ಪಾಠಕ್ಕೆ ಮೀಸಲಿಡುತ್ತಿದ್ರು ಗುರೂಜಿ. ಪ್ರತಿವಾರವೂ ಒಂದು ಕಥೆ ಹೇಳ್ತಿದ್ರು. ಅವರು ಕಥೆ ಹೇಳೂವಾಗ ಅವರಾಗಿರ್ತಿರಲಿಲ್ಲ. ಕಥೆಯೊಳಗಿನ ಎಲ್ಲಾ ಪಾತ್ರಗಳೂ ತಾವೇ ಬಂದು ಮಾತಾಡಿದವೇನೋ ಅನ್ನೂವಂಗ ಗುರೂಜಿಯವರ ನಿರೂಪಣೆಯಲ್ಲಿ ಧ್ವನಿಯಲ್ಲಿ ಏರಿಳಿತ, ಇರುತ್ತಿತ್ತು. ಗುರುಜೀ ತಮ್ಮ ಕುಚರ್ಿಯಲ್ಲೇ ಕುಳಿತು ಒರಗಿಕೊಂಡು ಕಥೆ ಹೇಳುತ್ತಿದ್ರೂ ಅವರ ಕಥೆಯ ಬಡವ ಬಡವಿ ಪಾತ್ರಗಳಿಗೆ ನಮ್ಮವ್ವ ಅಪ್ಪನಿಗೇ ಕಾಲ್ಪನಿಕ ವೇಷ ತೊಡಿಸಿಬಿಡ್ತಿದ್ದೆ. ದೇವತೆ ಮಹಾರಾಣಿ ಪಾತ್ರಗಳು ಬಂದಾಗ ಗುರೂಜಿಯವರೇ ಅಲ್ಲಿ ಕಾಣಿಸುತ್ತಿದ್ರು. ಹಟಮಾರಿ ಕಿಡಿಗೇಡಿ ಹುಡುಗರ ಪಾತ್ರಗಳು ಬಂದಾಗ ನಾನು ಮತ್ತ ನಮ್ಮಣ್ಣ ಅಲ್ಲಿರುತ್ತಿದ್ವಿ. ಮೋಸಗಾರರು, ಕಳ್ಳರ ಪಾತ್ರಗಳು ನನ್ನ ಕೆಲವು ಸಹಪಾಠಿಗಳ ಪಾಲಾಗುತ್ತಿದ್ವು. ಕೃಷ್ಣ ಪರಮಾತ್ಮನ ಕಥೆ ನಡೆದಾಗ ಗರ್ಭಗುಡಿಯಲ್ಲಿದ್ದ ಶಾಮ ನಾರಾಯಣನೇ ಹೊರಬಂದುಬಿಡುತ್ತಿದ್ದ ನನ್ನ ಕಲ್ಪನೆಯ ಲೋಕಕ್ಕೆ.
ನಾನು ಮತ್ತೆ ಆ ಬಾಲ್ಯದ ದಿನಗಳಿಗೆ ಓಡ್ತೀನಿ. ಅಲ್ಲಿ ಗುರೂಜಿ ಇತರ್ಾರ. ನನಗೆ ಅಕ್ಷರದ ಗೆಳೆತನ ರೂಢಿಸಿದ ಗುರೂಜಿ ಸಾಲಿ ಇರುತ್ತ. ತಾನೇ ತಾನೊಬ್ಬ ಜಗದೊಡೆಯ ಎಂಬ ನಂಬಿಕೆ ಗಟ್ಟಿಗೊಳಿಸಿದ ಆ ಶಾಮ ನಾರಾಯಣನೆಂಬ ನೂರೆಂಟು ನಾಮಗಳೊಡೆಯ ಶ್ರೀಕೃಷ್ಣನಿತರ್ಾನ. ಜಗಳ ಮಾಡಿದ ಸಣ್ಣ ಗೆಳೆಯ ಗೆಳತಿಯರು, ಹುಣಸೆ ಹಣ್ಣು ಹಂಚಿ ತಿಂದ ಅದೇ ಜಗಳಗಂಟಿ ಗೆಳತಿಯರು, ಕುಂಟುಬಿಲ್ಲೆಯಾಟದಾಗ ಸೋತು ದುಬ್ಬಕ್ಕೆ ಗುದ್ದಿ ಓಡಿ ಹೋದ ನನ್ನ ಪ್ರೀತಿಯ ಗೆಳತಿಯರು, ಸೇಡು ತೀರಿಸಿಕೊಳ್ಳಲು ನನ್ನ ಮುಖದ ಮುಂದೆನೇ ಹೂಸು ಬಿಟ್ಟು ವಜ್ರಮುನಿಯಂತ ನಕ್ಕೊಂತಾ ಪರಾರಿ ಆಗುತ್ತಿದ್ದ ನನ್ನ ಸಹಪಾಠಿ ಗೆಳೆಯರು… ಅಲ್ಲಿ ಏನೆಲ್ಲಾ ಖುಷಿ ಇತ್ತು. ಬದುಕಿನ ಜಟಿಲತೆಯೇ ಅರಿವಿರದ ನಿರುಮ್ಮಳ ದೈವಿಕ ಖುಷಿಯೊಂದೆ ಅಲ್ಲಿತ್ತು…
ದಿನಾಲೂ ಆ ಸರಕಾರಿ ಪ್ರಾಥಮಿಕ ಸಾಲೀಗುಡಿ ದಾಟಿಕೊಂಡು ನಮ್ಮ ಕಛೇರಿಗೆ ಹೋಗುವಾಗ ನನಗದು ನಿತ್ಯದ ನೋಟ, ಆ ಸಾಲಿ ಮಕ್ಕಳು ತಮ್ಮ ಸಮವಸ್ತ್ರ ಕೊಳೆ ಆದಾವೆಂಬ ಹಿಂಜರಿಕೆಯೂ ಇಲ್ಲದಾ ಕಸ ಗುಡಿಸ್ತಿತರ್ಾರ. ಕಸಾನೆಲ್ಲಾ ಎತ್ತಿ ಒಂದೆಡೆ ಹಾಕಿ ಸುಡ್ತಾರ. ಉಳಿದ ಮಕ್ಕಳು ನೀರು ತಂದು ಅಂಗಳಕ್ಕ ಚಿಮುಕಿಸ್ತಾರ. ಅವರ ಕೆಲಸ ಕಾರ್ಯಗಳ ಉಸ್ತುವಾರಿ ನೋಡಲು ಅಲ್ಲೇ ಒಬ್ಬರು ಹಿರಿಯ ಮಾಸ್ತರು ನಿಂತಿರ್ತಾರ. ಸ್ವಚ್ಛವಾದ ಸಾಲೀ ಗುಡಿ ಬಾಗಿಲ ಮ್ಯಾಲೆ. ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ಎಂಬ ಸ್ವಾಗತ ವಿದ್ಯಾಥರ್ಿಗಳಿಗೂ ಮತ್ತವರ ಶಿಕ್ಷಕರಿಗೂ, ಪೋಷಕರಿಗೂ. ಅದನ್ನೆಲ್ಲಾ ಕಣ್ತುಂಬಿಕೊಳ್ಳುವ ಭಾಗ್ಯ ನನಗೆ ನಿತ್ಯವೂ. ಅದನ್ನೆಲ್ಲಾ ನೋಡಿ ನನಗ ಗುರೂಜಿ ಮತ್ತು ಗುರೂಜಿ ಸಾಲಿ ನೆನಪು ದಿನವೂ. ಸರಸ್ವತಿ ಅಡ್ಡಾಡಿರಲಿ ಈ ಸಾಲೀ ಗುಡಿ ಒಳ ಹೊರಗ; ಆಕೆಯ ಅಗೋಚರ ಹೆಜ್ಜೆಗಳ ಗುರುತು ಅಕ್ಷರಗಳಾಗಿ ಈ ವಿದ್ಯಾಥರ್ಿಗಳ ಎದೆಯೊಳಗ ಮೂಡಲಿ ಅಂತ ನಿತ್ಯವೂ ಆ ಮಕ್ಕಳಿಗೆ ನನ್ನದೊಂದು ಹೃತ್ಪೂರ್ವಕ ಶುಭಾಶಯ…






TUMBA AAPTATEYA, BARAHA. ANUBHAVAGALU HEEGEYE AVADHIYALLI BARALI