ಗೀತಾ ಹೆಗಡೆ ಕಲ್ಮನೆ
ಕಪಾಟಿನ ತುಂಬ ತೂರಿಸಿಟ್ಟ
ಸೀರೆ, ಚೂಡಿದಾರುಗಳು
ಈ ಮಳೆಗೆ ಮುಗ್ಗು ಹಿಡಿದು
ಬಾಗಿಲು ತೆಗೆದರೆ ಸಾಕು
ಮಹಾ ಗಬ್ಬು ಗಬ್ಬು.
ನೇತಾಡುವ ವ್ಯಾನಿಟಿ ಬ್ಯಾಗನ್ನು
ಒಮ್ಮೆ ತೆಗೆದು ಕೈಯ್ಯಾಡಿಸಿದೆ
ಏನೊ ಅಂಟು ಅಂಟು
ಬಿಳಿ ಚಿತ್ತಾರ ಅಲ್ಲಲ್ಲಿ
ಜಿಪ್ಪೋ….ಸರಿಯಲೊಲ್ಲದು
ಅವಕೂ ತಟಾಕು ಎಣ್ಣೆ ನೀವಬೇಕು.
ಎಲ್ಲವನ್ನೂ ಬಿಸಿಲಿಗೆ ಹರಡಬೇಕು
ಅದು ಬರುವ ದಿನಕ್ಕಾಗಿ ಕಾದು
ಆಗಾಗ ಮೋಡ ಕಟ್ಟಿದರೆ
ಒಳಗೊಳಗೇ ಆತಂಕ
ಬಡಬಡನೆ ತೆಗೆದಿಡಲು ತಡವಾದರೆ
ಒದ್ದೆ ಮುದ್ದೆ ಆದರೆ ಗತಿ?

ಮೂಲೆಯಲ್ಲಿ ಕೂತಲ್ಲೇ ಕೂತ
ಕವಿತೆ ಬರಹಗಳು
ನೆಗಾಡುತ್ತವೆ ಹಿ…ಹಿ… ಎಂದು
ಅವಕೂ ಗೊತ್ತು ತಮ್ಮಂತೆ ಇವು
ಒಂದಾ ಸುತ್ತಿಕೊಳ್ಳಬೇಕು
ಇಲ್ಲಾ ಬಿಸಿಲಿಗೆ ನೇತಾಡಬೇಕು.
ಮತ್ತೇನಿಲ್ಲ ಒಂದು ಪುಸ್ತಕವಾಗಿ
ನಾಲ್ಕು ಜನರ ಕೈಯಲ್ಲಿ ಓಡಾಡಿ
ಬೀಗುವ ದಿನಕ್ಕಾಗಿ ಕಾಯುವ
ಕಾದೂ ಕಾದೂ ಸುಸ್ತಾಗಿ
ಬೆನ್ನು ಬಿದ್ದ ಕವಿತೆಗಳ ವಿಚಾರ.
ಸತ್ಯವಿರಬಹುದು ಸೂಚ್ಯಂಕ
‘ಎಲ್ಲದಕ್ಕೂ ಕಾಲ ಕೂಡಿ ಬರಬೇಕು’
ಅನುಭವಿಕರ ಅಂಬೋಣ
ಆದರೂ ಕಣ್ಣಾರೆ ಕಂಡ ಸಂವೇದಿ ತುಣುಕುಗಳು
ತಲೆ ಕೊರೆಯುವುದ ಎಲ್ಲಿ ಬಿಟ್ಟಾವು?
ರಾತ್ರಿ ನಿದ್ದೆ ನಡಿಗೆಯಾಯಿತು
ತಲೆ ಹೊಕ್ಕ ವಸ್ತುಗಳು ಚೆಲ್ಲಾಪಿಲ್ಲಿಯಾಗಿ
ಮನಸಿಂದ ಮರೆಯಾಗಿ ಹೋಗಬಾರದೇ…
ಒಳಗೊಳಗೆ ಹಂಬಲಿಸಿದ್ದಷ್ಟೇ ಬಂತು
ಕಣ್ಣು ಮಾತ್ರ ಕೆಂಪಾಗಿತ್ತು.
ಮೂಡಣದ ಸೂರ್ಯ ಚಿಲಿಪಿಲಿ ಹಕ್ಕಿಗಳನ್ನು
ಗೂಡಿಂದ ಹೊರದಬ್ಬಿದ್ದು ಕಿವಿಗೆ ಬಿತ್ತು
ಓಹೋ ಬೆಳಗಾಯಿತೆಂದು ಸಂಭ್ರಮಿಸಿದೆ
ಇಂದಾದರೂ ಬಿಸಿಲು ಬಂದಾತು
ಎಲ್ಲವನ್ನೂ ಊರಗಲ ಹರಡಿಬಿಡಬೇಕು
ಹಾಗೆ ಕವಿತೆಗೂ ಕಾಲ ಕೂಡಿ ಬಂದಿದ್ದೇ ಆದರೆ
ಗಬ್ಬೂ ಇಲ್ಲ
ರಾತ್ರಿ ನಡಿಗೆಯೂ ಇಲ್ಲ.

ಹಳತಾದರೂ ಹೊಸಕಿ ಹಾಕಲಾಗದ
ಅದೆಷ್ಟೋ ಸಂಗತಿಗಳಂತೆ
ಇದನ್ನೂ ಕವಿತೆಗೆ ಒಡ್ಡಿದ್ದಕ್ಕೆ
ಒಳಗಿರುವ ಸೀರೆ ಚೂಡಿದಾರು
ವ್ಯಾನಿಟಿ ಬ್ಯಾಗಿಗೂ ಗೊತ್ತಾಗಿ
ಕುಣಿಯುತ್ತಿವೆ ಸಂತೋಷದಿಂದ!
ಪಾಪ ಅವಕೇನು ಗೊತ್ತು
ಇದೂ ಕೂಡ
ಬೆನ್ನು ಬಿದ್ದ ಕವಿತೆಯಾಗುವುದೆಂದು!






0 Comments