ಗೀತಾಲಕ್ಷ್ಮಿ
—-
ಚಿತ್ತದ ಸ್ವಪ್ನಗಳಿಗೆ ದೊರೆ ನೀವು
ಚುಕ್ಕಿಗಳ ಮಂಟಪವ ಹೆಣೆದು
ಬೆಳಗೆಂಬ ಕಡಲಾಗಿ ಹಬ್ಬಿ
ತಣ್ಣಗೆ ದಡಮುಟ್ಟಿ ದನಿಮುಗಿದ ಹುಣ್ಣಿಮೆಯ ಗರ್ಭದಲಿ ಮುತ್ತುಗಳ ಕಡೆದೆ
ತನ್ನ ದಾರಿಯ ತಾನೇ ರೂಪಿಸಿ
ನಡೆವಾಗ ಎದುರಾದ ಕತ್ತಲೆಯ ಉಸಿರಿಗೆ; ಹದಗೊಂಡ ಅನುಭೂತಿಯ ಹಣತೆ ಬೆಳಗಿ
ಹೂಗಳು ಕಣ್ಣು ಬಿಟ್ಟವು
ಎಲ್ಲವೂ ಅದೇಕೋ ಮಬ್ಬು
ನೀ ನಡೆದ ದಾರಿಗಳಲ್ಲಿ
ಕುಣಿಕೆ ಸರಿಯಬಾರದಿತ್ತು
ಕೇಜಿಗೆಯ ಮೆಳೆಯಲ್ಲಿ ಸರ್ಪ ಹರಿವ ಸದ್ದಿಗೆ ಪರಿಮಳ ಸತ್ತಿತು
ತೆನೆಯಲ್ಲಿ ಕಟ್ಟಿದ ಕಾಳುಗಳು
ಮುಗ್ಗಿಹೋದಾಗ ನಿನ್ನದೇ ಹೆಜ್ಜೆ
ಎಲ್ಲಕ್ಕೂ ತಗುಲಿದ ನೀನೇಕೆ
ನೀನಾಗದೆ ಹೋದೆ?!
ಎಷ್ಟೊಂದು ಹೇಳುವುದಿತ್ತು !
ಲಗ್ನದಗ್ನಿಗೆ ಹೂವಿಟ್ಟು ಉರಿಸುವಾಗ ನಿನ್ನ ಕಣ್ಣಿಗೆ ಬೂದಿ ಹಾರಲಿಲ್ಲವೇ?
ಸಾಗಿದ ಹಾದಿಗಳ ತುಂಬಾ ಗೆದ್ದ
ನಿನಗೆ ನನ್ನನು ಸೋಲಿಸುವ ಅಮಲು ಹಿಡಿದದ್ದು ಯಾಕಾಗಿ?
ಎಲ್ಲವನು ಕೊಟ್ಟು ನಿನ್ನನೇ ತುಂಬಿಕೊಂಡೆ! ವಸಂತದ
ಹೂಬನದಲ್ಲಿ ಇಂದ್ರಚಾಪ ಒಣಗಿ ಅದರಲ್ಲಿ ನಿನ್ನ ನೆರಳು
ಈಗೀಗ ಕನಸಾಗುತ್ತದೆ
ಸೂರ್ಯ ಮಗುವನ್ನು ಬಗೆದು
ತಿನ್ನುತ್ತಿರುವಂತೆ!!!
ಚೀರಲು ಗಂಟಲ ದನಿಸತ್ತು ನಿದ್ದೆ ಕೆಡುವಾಗ ತಡಕುತ್ತೇನೆ
ನಿನ್ನ ಬೆವರಿನ ನಾತಕ್ಕೆ ಸೋತು ಕರಗಿ ಹೋದ ಜೀವ ಒಂಟಿ
ತಗ್ಗು ದಿಬ್ಬ ಹತ್ತಿಳಿದ ನೀನೆಂಬ ಮಾಯೆಗೆ ಮದ್ಧಿಲ್ಲ; ಎಡವಿ ಒಡೆದ ಮುಖದಲ್ಲಿ ಗುರುತಿಲ್ಲ
ಆಗಸದ ತುಂಬಾ ಹೆಪ್ಪುಗಟ್ಟಿದ
ಹನಿಗಳೆಲ್ಲ ಹಿಂಗಿಹೋಗಿ
ಧರೆಯ ಧಾವಂತ ಮಲಗಿದೆ
ಎಲ್ಲವೂ ಸುಖವಾಗಲಿ ನಿನಗೆ
ನಿಜವಾಗಿದ್ದರೆ ನೀನು ದಕ್ಕಬಹುದಿತ್ತು! ಸವೆದು ಇಲ್ಲವಾದ ರೂಪವಿನ್ನು ಬೆಳಗಿದೆ
ಚೆನ್ನಾಗಿದೆ
ಚೆನ್ನಾಗಿದೆ ಕವಿತೆ