ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಿರಿಜಾ ಶಾಸ್ತ್ರಿ ಕಾಲಂ: ಹೇಡಿಯೊಬ್ಬನ ಹಾಡುಗಳು

ಗಿರಿಜಾ ಶಾಸ್ತ್ರಿ

ಭಾಗ-೨

ಪೆರುಮಾಳ್ ಮುರುಗನ್ ಅವರ “ಸಾಂಗ್ಸ್ ಆಫ್ ಎ ಕವರ‍್ಡ್” ಓದುತ್ತಿದ್ದಂತೆ ಥಟ್ಟನೆ ನೆನಪಾದದ್ದು. ಕಾಮೂನ “ಔಟ್ ಸೈಡರ್” ಮತ್ತು ಕಾಫ್ಕಾನ “ಮೆಟಾಮರ‍್ಫಸಿಸ್” ಮುರುಗನ್ ಅವರು ಕೂಡ ಒಬ್ಬ ಅನ್ಯನಾಗಿ ಅನುಭವಿಸಿದ ಕತೆಯೇ ಈ ಕವಿತೆಗಳಲ್ಲಿ ದಾಖಲಾಗಿವೆ. ಕೆಳ ಜಾತಿಯವರಾದ ಕಾರಣ ಅನುಭವಿಸಿದ ಅಪಮಾನ, ಕೀಳರಿಮೆಗಿಂತಲೂ ಹೆಚ್ಚಾಗಿ ಅವರು ತಮ್ಮ “ಮಧೋರುಭಾಗನ್” ಕಾದಂಬರಿ ಬರೆದು ವಿವಾದಕ್ಕೆ ಒಳಗಾಗಿ ಬಲಪಂಥೀಯರ ಹಿಂಸೆಗೆ ಒಳಪಟ್ಟು ಬರಹ ಪ್ರಪಂಚಕ್ಕೆ ಅನ್ಯರಾಗಿಬಿಟ್ಟ ನೋವೇ ಹೆಚ್ಚು. ಅದು ಈ ಕವಿತೆಗಳಲ್ಲಿ ಪ್ರಕಟವಾಗಿದೆೆ. ಸತ್ತ ಹೆಗ್ಗಣವೊಂದನ್ನು ಅದರ ಬಾಲದಿಂದೆತ್ತಿ ಜಿಗುಪ್ಸೆಯಿಂದ ಜನ ಸಮೂಹದಿಂದ ಆಚೆಗೆ ಎಸೆದ ಅನುಭವ ಅಕ್ಷರಶಃ ಈ ಕವಿತೆಗಳಲ್ಲಿ ಆಗುವುದಕ್ಕೆ ಕಾರಣ ಅವರು ವೈಯಕ್ತಿಕವಾಗಿ ಅನುಭವಿಸಿದ ನೋವೇ. ಮೆಟಾಮರ‍್ಫಸಿಸ್ ಕಾದಂಬರಿಯ ನಾಯಕನ ಹಾಗೆಯೇ ಇಲ್ಲಿ ತಮ್ಮನ್ನು ತಾವು ಒಂದು ಕ್ಷುದ್ರ ಜಂತು, ಕ್ರಿಮಿ ಕೀಟಗಳೊಂದಿಗೆ ಗುರುತಿಸಿಕೊಂಡಿದ್ದಾರೆ.

ಪಾರಂಪರಿಕವಾಗಿ ನಂಬಿಕೊಂಡು ಬಂದ ಒಂದು ಪದ್ಧತಿಯನ್ನು ತಮ್ಮ “ಮಧೋರುಭಾಗನ್” ಕಾದಂಬರಿಯ ಉದ್ದೇಶಕ್ಕೆ ಬಳಸಿಕೊಂಡು ಆ ನಂಬಿಕೆಯನ್ನು ಅವಹೇಳನ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅವರ ಪುಸ್ತಕವನ್ನು, ಅವರ ಪ್ರತಿಕೃತಿಯನ್ನು ಬೀದಿ ಬೀದಿಗಳಲ್ಲಿ ಸುಡಲಾಯಿತು. ಅವರು ಮತ್ತೆ ಬರೆಯದ ಹಾಗೆ ತೇಜೋವಧೆ ಮಾಡಲಾಯಿತು. ಆಗ ಮುರುಗನ್ ದುಃಖ ಹಿಂಸೆಗಳಿಂದ ಮೌನಕ್ಕೆ ಶರಣಾದರು. ಸಾಮಾಜಿಕ ಚಟುಚಟಿಕೆಗಳಿಂದ, ಸರ‍್ವಜನಿಕ ಬದುಕಿನಿಂದ ದೂರಾಗಿ ಚಿಪ್ಪಿನೊಳಗೆ ಅಡಗಿಕೊಂಡರು. ಬಾಲ್ಯದಿಂದ ಪೋಷಿಸಿಕೊಂಡು ಬಂದಿದ್ದ ತಮ್ಮ ಅತ್ಯಂತ ಪ್ರೀತಿಯ ಚಟುವಟಿಕೆಯಾದ ಬರವಣಿಗೆಯನ್ನು ಕಿತ್ತುಕೊಂಡ ಜಗತ್ತಿನೊಂದಿಗೆ ನಂಬಿಕೆಯನ್ನು ಕಳೆದುಕೊಂಡರು. ಅವರಿಗೆ ಹೇಡಿಯ ಪಟ್ಟ ಕಟ್ಟಲಾಯಿತು. ಆಗ ತಮಗೆ ತಾವೇ ಲೇಖಕನಾಗಿ ತಾವು ಸತ್ತ ಘೋಷಣೆಯನ್ನು ಮಾಡಿಕೊಂಡರು. “ನಾನೊಂದು ನಡೆದಾಡುವ ಹೆಣ” ಎಂದು ಹೇಳಿದರು.

ಕಡೆಗೆ ಚೆನ್ನೈ ಹೈಕೋರ‍್ಟು ಅವರ ಮೇಲಾದ ಹಲ್ಲೆಯನ್ನು ಖಂಡಿಸಿ ಅವರು ಬರೆಯಬಹುದೆಂದು ತೀರ್ಪು ನೀಡಿ ಅವರಿಗೆ ಪುನರ‍್ಜನ್ಮ ನೀಡಿತು. ‘ಬರೆ ಎಂದಾಗ ಬರೆಯಲು ಬೇಡವೆಂದಾಗ ಬಿಡಲು ನಾನೊಂದು (ಸೃಜನಶೀಲ ಚಟುವಟಿಕೆ) ಮೋಟಾರು ಪೊಂಪೇ?’ ಎಂದು ಮುರುಗನ್ ಅವರು ಸವಾಲೆಸೆದರೂ, ಸಾಮಾಜಿಕವಾಗಿ ಬಹಿಷ್ಕೃತರಾದ ಇಂತಹ ಸಂದರ‍್ಭದಲ್ಲಿ ಅವರನ್ನು ಕೈಹಿಡಿದು ಅವರಿಗೆ ನಿಜವಾಗಿ ಪುನರ‍್ಜನ್ಮ ನೀಡಿದ್ದು ಕವಿತೆ. ಹಾಗೆ ಉಕ್ಕುಕ್ಕಿ ಬಂದ ೨೦೦ ಕವಿತೆಗಳ ಸಂಗ್ರಹವೇ “ಸಾಂಗ್ಸ್ ಆಫ್ ಎ ಕವರ‍್ಡ್”
ಅಪಮಾನ, ನಿರಾಶೆ, ದುಃಖ, ಹಿಂಸೆ, ಅಳು, ಎಲ್ಲರಿಂದ ದೂರಾದ ಅನ್ಯ ಮತ್ತು ಅನಾಥ ಭಾವ, ಏಕಾಂಗಿತನ, ಹತಾಶೆ, ಕೀಳರಿಮೆ ಇವೆಲ್ಲವೂ ಹೇಡಿಯ ಆಸ್ತಿಗಳು. ಸಮಾಜದಲ್ಲಿ ಹೇಡಿಗೆ ಸ್ಥಾನವಿಲ್ಲ. ವೀರಗಾಥೆಗಳಿಗೇ ಮಣೆಹಾಕುವ ನಮ್ಮ ಸಮಾಜದಲ್ಲಿ ಅದೊಂದು ಮೌಲ್ಯವಲ್ಲ. ವೀರತ್ವ, ಶೌರ‍್ಯ, ಧೈರ‍್ಯ ಎಂದಿಗೂ ಸಲ್ಲುವ ಮೌಲ್ಯ. ಅದು ಸಮಾಜದ ಘನತೆ. ಪೆರುಮಾಳ್ ಮುರುಗನ್ ಈ ಸಂಕಲನದಲ್ಲಿ ಸಮಾಜದ ಈ ವೀರ ಮೌಲ್ಯಗಳನ್ನೇ ಪ್ರಶ್ನಿಸುತ್ತಾರೆ. ಒಬ್ಬ ವ್ಯಕ್ತಿ ಯಾಕೆ ಹೇಡಿಯಾಗುತ್ತಾನೆ ಎನ್ನುವುದರ ಒಂದು ಮಾನಸಿಕ, ಸಾಮಾಜಿಕ ತಲಸ್ಪರ್ಶಿ ನೋಟ ಈ ಕವಿತೆಗಳಲ್ಲಿದೆ. ಶ್ರೇಣೀಕೃತ ಈ ಸಮಾಜದಲ್ಲಿ ಪಂಚಮರ ಬದುಕು ಹೇಗೆ ಹೇಡಿಗಳ ಬದುಕಾಗಿದೆ. ತಿಪ್ಪೆಯಿಂದ ಎದ್ದುಬರುವ ಈ ಹೇಡಿಗಳನ್ನು ಮತ್ತೆ ಏಳಲಾರದಂತೆ ಹೇಗೆ ಯಥಾಸ್ಥಿತಿಗೇ ನೂಕಲಾಗುತ್ತದೆ. ಎನ್ನುವುದರ ಸೂಕ್ಷ್ಮ ಮರ‍್ಮಘಾತಕ ಕವಿತೆಗಳು ಇಲ್ಲಿವೆ.

ಕವಿತೆ ಅವರನ್ನು ಹೇಗೆ ಕಾಪಾಡಿತು ಎಂದು ಈ ಪುಸ್ತಕದ ಪ್ರಸ್ತಾವನೆಯಲ್ಲಿ ಅವರು ಹೇಳಿಕೊಂಡಿದ್ದಾರೆ. ಇವು ಕವಿತೆ ಹುಟ್ಟುವ ಸಂವಹನಗೊಳ್ಳುವ ಕಲಾ ವ್ಯಾಪಾರದ ಕಡೆಗೂ ಬೊಟ್ಟು ಮಾಡಿ ತೋರಿಸುತ್ತವೆ. ಅವುಗಳನ್ನು ಅವರ ಮಾತುಗಳಲ್ಲೇ ಹೇಳುವುದಾದರೆ,
“ಬರವಣಿಗೆ ನನ್ನ ನಿಜವಾದ ಉದ್ಯೋಗ. ನಾನು ಬಹಳ ಚಿಕ್ಕವನಿದ್ದಾಗಿನಿಂದಲೂ ಬರವಣಿಗೆಯ ಕರೆಗೆ ಓಗೊಡುತ್ತಿದ್ದೆ. ಅದು ನನಗೆ ಒಳ್ಳೆಯ ಸಾಂಗತ್ಯವನ್ನು ಕೊಟ್ಟಿದೆ. ನನ್ನೊಡನೆಯೇ ನನ್ನನ್ನು ನಾನು ಹಂಚಿಕೊಳ್ಳಲು ಅವಕಾಶಮಾಡಿ ಕೊಟ್ಟಿದೆ. ದೂರದೃಷ್ಟಿಯನ್ನು ದಯಪಾಲಿಸುವುದರ ಜೊತೆಗೆ ವಸ್ತುನಿಷ್ಠತೆಯನ್ನು ಬೆಳೆಸಿದೆ. ಕಾಲದ ನಡಿಗೆಯಲ್ಲಿ ಹಿಂದು ಮುಂದು ಚಲಿಸಲು ನನಗೆ ಕಲಿಸಿದೆ. ಹಕ್ಕಿಯಂತೆ ಹಾರಿ ನನ್ನ ದನಿಯನ್ನು ವರ‍್ತಮಾನದ ಜೊತೆಗೆ ಬೆರೆಸುವಲ್ಲಿ ಸಹಾಯಕವಾಗಿದೆ.

ಬದುಕಿನ ಒತ್ತಡಗಳು ನನಗೆ ಆಗೊಮ್ಮೆ ಈಗೊಮ್ಮೆ ಬರೆಯಲು ಒತ್ತಾಯಿಸಿರಬಹುದು. ಆದರೂ ಯಾವಾಗಲೂ ನನ್ನ ಮನಸ್ಸು ತೀವ್ರವಾದ ಆಲೋಚನೆಗಳಿಂದ ಕೂಡಿರುತ್ತಿತ್ತು. ನನ್ನ ಎಲ್ಲಾ ಆಲೋಚನೆಗಳನ್ನು ಬರಹದ ರೂಪಕ್ಕೆ ತರುವ ಸಾಮರ್ಥ್ಯ ನನಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಎಂದೂ ಅವುಗಳ ಲಗಾಮನ್ನು ಹಿಡಿದು ನಿಯಂತ್ರಿಸಬೇಕೆಂದು ಎನಿಸಿಲ್ಲ. ಕೆಲವು ಆಲೋಚನೆಗಳು ಹುಟ್ಟಿದ ಕೂಡಲೇ ಹಾರಿಹೋಗಿವೆ ಮತ್ತೆ ಎಂದೂ ಬಾರದ ಹಾಗೆ, ಇನ್ನು ಕೆಲವು ಆಲೋಚನೆಗಳು ಹಾರಿಹೋಗುವುದಕ್ಕೆಂದೇ ಬಂದು ನನ್ನೊಳಗೆ ಭದ್ರವಾಗಿ ತಳವೂರಿ ನಾನು ಲೇಖನಿ ಕೈಗೆತ್ತಿಕೊಂಡ ಕೂಡಲೇ ಕಾಗದದ ಮೇಲೆ ಪ್ರತ್ಯಕ್ಷವಾಗಿವೆ. ಬರವಣಿಗೆ ಎನ್ನುವುದು ನನಗೊಂದು ಚಿತ್ತವೃತ್ತಿ (ಹ್ಯಾಬಿಟ್ ಆಫ್ ಮೈಂಡ್) ಕವಿತೆ ನನ್ನ ಅಭಿವ್ಯಕ್ತಿಯ ಆರ‍್ಶ ರೂಪ. ಅದು ನನ್ನ ಅಂತರಂಗಕ್ಕೆ ಹತ್ತಿರವಾದದ್ದು. ಸರಿಯೋ, ತಪ್ಪೋ ಅವು ನನ್ನ ಭಾವಾನುಭವಗಳಿಗೆ (ಫೀಲಿಂಗ್ಸ್ ಆಂಡ್ ಎಮೋಷನ್ಸ್) ರಹದಾರಿಯನ್ನು ತೋರಿಸಿವೆ.

ಯಾವುದರಿಂದಲಾದರೂ (ಆಘಾತದಿಂದಲಾದರೂ) ಚೇತರಿಸಿಕೊಳ್ಳಲು ಇರುವ ಒಂದು ಸಾಧನವೆಂದರೆ ಅದು ನನಗೆ ಕವಿತೆಯೇ. ಯಾವುದೇ ಒತ್ತಡವನ್ನಾದರೂ ಸಹಿಸಿಕೊಳ್ಳುವುದನ್ನು ಅದು ನನಗೆ ಕಲಿಸಿದೆ. ಮನಸ್ಸಿನಲ್ಲಿ ಹೊಳೆದ ಒಂದೇ ಒಂದು ಶಬ್ದದ ಮೇಲೆ ನೇತಾಡುತ್ತಾ ಇಡೀ ಕವಿತೆ ರೂಪುಗೊಂಡಿದ್ದಿದೆ. ನನಗೆ ನಾನೇ ಮಾತನಾಡಿಕೊಳ್ಳುವ ಅಭ್ಯಾಸ ಕೆಲವು ಸಲ ನನ್ನ ತುಟಿಗಳ ಚಲನೆಯಮೇಲೂ ಕಾಣಿಸಿಕೊಳ್ಳುತ್ತದೆ. ಇದು ಹೊರಗಿನ ಪ್ರಪಂಚದಲ್ಲಿ ಕೆಲವು ಆಭಾಸಗಳನ್ನು ಮಾಡಿರುವುದೂ ಉಂಟು. ನಾನು ಬರೆಯಲು ಸಾಧ್ಯವಾಗದೇ ಹೋದ ಕೆಲವು ಏಕಾಂಗಿ ಪದಗಳು, ಶಬ್ದಗುಚ್ಛಗಳೂ ಉಂಟು. ನನ್ನ ಮನಸ್ಸಿನಲ್ಲಿ ಹೊಳೆದ ಯಾವುದೇ ಶಬ್ದದ ಬಗೆಗೆ ನನಗೆ ಹೆಮ್ಮೆಯೇನೂ ಇಲ್ಲ, ಎನ್ನುವುದು ನಿಜ. ನನ್ನ ಈ ಚಿತ್ತವೃತ್ತಿಯು ಯಾವಾಗಲೂ ನನಗೆ ವರವೆಂದೇ ಎನಿಸಿದೆ”.

“ಆದರೆ ಕೆಲವು ಸಂದರ‍್ಭಗಳಲ್ಲಿ ಇದು ಶಾಪ ಕೂಡ ಆಗಿದೆ ಎಂದು ಎನಿಸುವುದುಂಟು. ಆಗ ನನ್ನನ್ನು ನಾನು ಬದಲಾಯಿಸಿಕೊಂಡಿದ್ದೇನೆ. ಆಗ ಅವಕ್ಕೆ ಅಂತ್ಯ ಸಂಸ್ಕಾರ ಮಾಡಿ ಮುಂದುವರೆಯಬಹುದು ಎಂದು ಕೊಳ್ಳುತ್ತೇನೆ. ಇಲ್ಲ ಅದು ಸಾಧ್ಯವಾಗಿಲ್ಲ. ಅನೇಕ ಸಲ ನಾನು ಓಡಾಡುವ ಹೆಣ ಎಂದು ಎನಿಸಿದೆ. ಅದಕ್ಕೆ ನಾನು ಏನು ಮಾಡಲು ಸಾಧ್ಯವಿಲ್ಲದಿದ್ದರೂ, ನನ್ನ ಯಾತನೆಗೆ ಮುಕ್ತಿ ಸಿಗಬಹುದೆಂದು, ನನ್ನೊಳಗಿನ ದನಿಯನ್ನು ನಾನೇ ಕತ್ತುಹಿಸುಕಿ ಕೊಲ್ಲಲು ಯತ್ನಿಸಿದ್ದೇನೆ. ಆದರೆ ಅದರಲ್ಲಿ ನಾನು ಯಶಸ್ವಿಯಾಗಿಲ್ಲ. ಬಹುಶಃ ಕೊಲ್ಲುವ ಶಕ್ತಿ ನನ್ನಲ್ಲಿರಲಿಲ್ಲವೆನಿಸುತ್ತದೆ. ನನ್ನ ಈ ಚಿತ್ತವೃತ್ತಿಯು ಬಹಳದಿನಗಳ ಕಾಲ ಅಜ್ಞಾತವಾಗಿ ನರಳುತ್ತಲೇ ಮಲಗಿತ್ತು. ಆದರೆ ಕೊನೆಗೊಮ್ಮೆ ಅದು ದೊಡ್ಡ ರ‍್ಜನೆಯೊಂದಿಗೆ ಎದ್ದು ನನ್ನನ್ನು ಮತ್ತೆ ಆವರಿಸಿಕೊಂಡು ಬಿಟ್ಟಿತು- ಶಬ್ದಗಳು. ಆಲೋಚನೆಗಳು, ಕವಿತೆ. ಮತ್ತು ಅದು ಎಲ್ಲಾ ದಿಕ್ಕುಗಳಿಗೂ ತಡೆಯಲು ಅಸಾಧ್ಯವಾದ ಚಿಲುಮೆಯಂತೆ ಚೆಲ್ಲವರಿಯಿತು.ನನಗೆ ಅವಕಾಶ ಸಿಕ್ಕಿದಾಗಲೆಲ್ಲಾ ಕಾಗದದ ಮೇಲೆ ಶಬ್ದಗಳನ್ನು ಜೋಡಿಸುತ್ತಿದ್ದೆ. ಅವು ಎಂದಿಲ್ಲದಂತೆ ಹೊಮ್ಮತೊಡಗಿದವು. ಕವಿತೆ ಒಂದು ದಿವ್ಯೌಷಧ, ಅನನ್ಯ ಗಿಡಮೂಲಿಕೆ. ನನಗೆ ಪುನರುಜ್ಜೀವನ ಕೊಟ್ಟಿದ್ದೇ ಕವಿತೆ”

ಪೆರುಮಾಳ್ ಮುರುಗನ್ ಅವರಿಗೆ ಪುನರುಜ್ಜೀವನ ಕೊಟ್ಟ ಕೆಲವು ಕವಿತೆಗಳ ಅನುವಾದ ಹೀಗಿವೆ:

 

ಖಂಡಿತವಾಗಿಯೂ ನಾನೊಂದು ಹೆಗ್ಗಣವೇ

ನಾನೊಂದು ಹೆಗ್ಗಣ
ಎಂಬುದನ್ನು
ಅವರು ಕಂಡು ಹಿಡಿದು ಬಿಟ್ಟರು

ನನಗೆ ಅದು ಗೊತ್ತಿರಲಿಲ್ಲ
ಯಾವುದೇ ಸುಳಿವು ಹತ್ತದ ನಾನು
ಸುಮ್ಮನೇ ನೋಡುತ್ತಾ ಕುಳಿತೆ
ಹೆಗ್ಗಣ ಹಿಡಿಯಲು ನಡೆಸುವ
ಅವರ ತಯಾರಿಯನ್ನು

ನನ್ನನ್ನು ಹೆಗ್ಗಣವೆಂದು ಕರೆದು
ನನ್ನ ಭಾವ ಚಿತ್ರದೊಂದಿಗೆ
ಭಿತ್ತಿ ಪತ್ರಗಳನ್ನು ಅಂಟಿಸಿ
ಚೀಟಿಗಳ ಹಂಚಿದರು
ಆದರೆ ನಾನು ಯಾವ ರೀತಿಯಲ್ಲಿಯೂ
ಹೆಗ್ಗಣವನ್ನು ಹೋಲುತ್ತಿರಲಿಲ್ಲ.

ಚಿಮಟದಿಂದ ನನ್ನ ತಲೆಯನ್ನು ಹಿಡಿದು
ಅವರು ಮೇಲೆತ್ತಿದಾಗ
ನನ್ನ ಬಾಲ ಅಲ್ಲಾಡುವ ಭಾಸವಾಯಿತು
ಆಗ ನಾನೊಂದು ನಿಜವಾದ ಹೆಗ್ಗಣವೆಂದು ಅರಿವಾಯಿತು.

ನಾನು ಈಗ ಮೇಜಿನ ಮೇಲೆ ಮಲಗಿದ್ದೇನೆ
ಮೊಳೆ ಹೊಡೆದ ಕಾಲುಗಳನ್ನು ಅಗಲಿಸಿಕೊಂಡು
ನಾನು ಈಗ ನಿಜವಾಗಿಯೂ ಒಂದು ಹೆಗ್ಗಣವೇ ಸರಿ
ಪ್ರಯೋಗಾಲಯದ ಹೆಗ್ಗಣ

ಮುಟ್ಟಿದರೆ ಮುನಿ 

(ಟಚ್ ಮಿ ನಾಟ್)

ಬಂಜರು ನೆಲದ ಮೇಲೆ
ಕಾಲ ಬಿತ್ತಿದ ಒಂದು ಬೀಜ
ಒಂದು ಮಳೆಗಾಲದ ದಿನ ಮೊಳಕೆಯೊಡೆದು
ಚಿಗುರಿತು ಮುಟ್ಟಿದರೆ ಮುನಿ
ಹಚ್ಚಗೆ ಅರಳಿತು
ಅಚ್ಚರಿ…

ಮಾಸಲು ಕೆಂಪು ಮೊಗ್ಗು ಬಿಟ್ಟಾಗ
ಯಾರಿಗೂ ಗೊತ್ತಿರಲಿಲ್ಲ ಅದರ ಮಹತ್ವ
ಒಬ್ಬ ಮುಗ್ಧ ಹುಡುಗ ಬೆರಗಿನಿಂದ ನೋಡಿ
ಹೂವ ಕೀಳಲೆಂದು ಹೋದಾಗ
ಎಲೆಗಳೆಲ್ಲಾ ಗಡ ಗಡ ನಡುಗುತ್ತಾ ಮುದುರಿಕೊಂಡವು
ಎಲ್ಲಾ ಎಲೆಗಳನ್ನೂ ಅವನು ಮುಟ್ಟಿದ
ಗಿಡ ಸತ್ತ ಹಾಗೆ ತನ್ನೆಲ್ಲಾ ಎಲೆಗಳನ್ನು ಸೆಳೆದುಕೊಂಡು ಬಿಟ್ಟಿತು.

ಹುಡುಗ ತನ್ನ ಗೆಳೆಯರನು ಕರೆತಂದ
ವಿಸ್ಮಯವ ತೋರಿಸಲೆಂದು
ಆಗ ಎಲ್ಲಾ ಎಲೆಗಳು ತೆರೆದುಕೊಂಡಿದ್ದವು.
ಅವನು ಮೃದುವಾಗಿ ಬೆರಳುಗಳಿಂದ ಮುಟ್ಟಿದ
ಎಲೆಗಳು ಕಂಪಿಸುತ್ತಾ ಮುದುರಿಕೊಂಡವು.
ಇನ್ನೊಬ್ಬ ತನ್ನ ಕಾಲಿನಿಂದ ಮುಟ್ಟಿದ
ಎಲೆಗಳು ಕಂಪಿಸುತ್ತಾ ಮುದುರಿ ಹೋದವು
ಮತ್ತೊಬ್ಬ ತನ್ನ ಬೂಟುಗಳಿಂದ ಮುಟ್ಟಿದ
ಆಗಲೂ ಎಲೆಗಳು ನಡುಗುತ್ತಾ ಮುದುರಿಕೊಂಡವು
ಮಗದೊಬ್ಬ ಕಡ್ಡಿಯಿಂದ ತಿವಿದ
ಎಲೆಗಳು ನಡುಗುತ್ತಾ ಮುದುರಿ ಕೊಂಡವು.
ತಮ್ಮನ್ನು ತಾವು ಪೂರ‍್ತಿಯಾಗಿ ಮುಚ್ಚಿಕೊಂಡು ಬಿಟ್ಟವು

ಅವರು ಕಾಯುತ್ತಿದ್ದರು
ಮುದುರಿದ ಎಲೆಯೊಂದು ಅರಳುವಾಗ
ಯಾರೋ ಒಬ್ಬರು ಗದರು ದನಿಯಿಂದ ಮುಟ್ಟಿದರು ಅದನು
ನಡುಗುತ್ತಾ ಮುದುರಿಕೊಂಡ ಎಲೆಗೆ
ದನಿಗಳ ಸ್ರ‍್ಶವೇ ಸಾಕಾಯಿತು
ಅದಾದನಂತರ ಒಂದು ಎಲೆಯೂ ಅರಳಲೇ ಇಲ್ಲ.


ಹೇಡಿಯ ಹಾಡು

ಒಬ್ಬ ಹೇಡಿಯಿಂದಾಗಿ
ಕಷ್ಟಗಳು ಬಂದೆರಗುವುದಿಲ್ಲ
ಒಬ್ಬ ಹೇಡಿಯಿಂದಾಗಿ
ಗಲಭೆಗಳು ಏಳುವುದಿಲ್ಲ
ಒಬ್ಬ ಹೇಡಿಯಿಂದಾಗಿ
ಎಂದೂ ಏನೂ ನಾಶವಾಗಿಲ್ಲ.

ಒಬ್ಬ ಹೇಡಿ
ಎಂದೂ ಕತ್ತಿ ಎತ್ತುವುದಿಲ್ಲ
ಅದರ ಹರಿತ ಪರೀಕ್ಷಿಸಲು
ಮರಕಡಿಯುವುದಿಲ್ಲ.

ಒಬ್ಬ ಹೇಡಿಗೆ ಯಾರೂ
ಹೆದರುವುದಿಲ್ಲ.

ಹೇಡಿಗೆ
ಕತ್ತಲೆಂದರೆ ಭಯ
(ಅದಕೇ) ಅವನಿಂದ ಹಾಡುಗಳು ಹುಟ್ಟುತ್ತವೆ

ಹೇಡಿಗೆ ಹಗಲೆಂದರೆ ದಿಗಿಲು
(ಅದಕೇ) ಕವಿತೆ ಹುಟ್ಟಿಬರುತ್ತದೆ ಅವನಿಂದ

ಪ್ರಕೃತಿಗೆ ಹೇಡಿಯೆಂದರೆ ಇಷ್ಟ
(ಯಾಕೆಂದರೆ) ಅವನು ಎಲೆಯನ್ನು ಚಿವುಟುವುದಿಲ್ಲ
ಹೂವನ್ನೂ ಕೀಳುವುದಿಲ್ಲ

ಪ್ರಕೃತಿ ಅವನನ್ನು ಅಪ್ಪಿಕೊಳ್ಳುತ್ತಾಳೆ
ಚಳಿಯಿಂದ ನಡುಗುವ ಕಂದನಿಗೆ
ತಾಯಿ ಎಂದಿಗೂ ಮೊಲೆಯೂಡುವವಳೇ

ಪ್ರಕೃತಿ ಹೇಡಿಯನ್ನು ಕೊಂಡಾಡುತ್ತಾಳೆ
ಅವನು ತನ್ನ ಹೊಟ್ಟೆಪಾಡಿಗಾಗಿ ಮಾತ್ರ ಹೊರ ಹೋಗುತ್ತಾನೆ
ಅವನು ತನ್ನ ಪಾಡಿಗೆ ತಾನು ಇರುವುದರಿಂದ ಯಾವುದೂ ಅಲ್ಲೋಲಕಲ್ಲೋಲವಾಗುವುದಿಲ್ಲ.

ಹೇಡಿಗೆ ಬಹಳ ಕಷ್ಟ
ಮನೆಯೊಳಗೆ ಬಂಧಿಯಾಗಿರಲು
ಮೂಲೆ ಮೊಡುಕುಗಳನ್ನೆಲ್ಲಾ ತಡಕಾಡುವುದರಲ್ಲೇ
ತೊಡಗಿರುತ್ತಾನೆ

ಆಟದ ಮೈದಾನದಲ್ಲಿ ನೀವೆಂದೂ ಅವನನ್ನು ಕಾಣಲಾರಿರಿ
ಅವನೆಂದೂ ಮೈ ಬೆವರು ಹರಿಸುವುದಿಲ್ಲ
ರಾಷ್ಟ್ರೀಯತಾ ವಾದಗಳಲ್ಲಿ ಕೊಚ್ಚಿಹೋಗುವುದಿಲ್ಲ

ಹೇಡಿಯೊಬ್ಬ
ಎಂದೂ ರಾಜಕೀಯ ಪಕ್ಷಗಳಿಗೂ ಸೇರುವುದಿಲ್ಲ
ಸೈದ್ಧಾಂತಿಕ ಒಲವರವೂ ಇಲ್ಲ
ಯಾವ ನೇತಾರನಿಗೂ ಡೊಗ್ಗು ಸಲಾಮು ಹಾಕುವುದಿಲ್ಲ

ಹೇಡಿಯೊಬ್ಬ
ಯಾವ ಘೋಷಣಾಪತ್ರವನ್ನೂ ರಚಿಸಲಾರ
ಯಾವ ಪ್ರತಿಕೃತಿಗೂ ಮಾಡಲಾರ ಹಾಲಿನಭಿಷೇಕ
ಅವನು ಸುಮ್ಮನೇ
ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸಲಾರ
ಯಾವ ಮೆರವಣಿಗೆಯಲ್ಲೂ ಭಾಗಿಯಾಗಲಾರ

ಹೇಡಿಯೊಬ್ಬ
ಯಾರಿಂದಲೂ ಏನನ್ನೂ ಕದಿಯಲಾರ
ತನ್ನದನ್ನು ಕದ್ದವರಿಗೆ ಯಾವ ತೊಂದೆರೆಯನ್ನೂ ಕೊಡಲಾರ

ಹೇಡಿಯೊಬ್ಬ
ಮಾನಭಂಗಕ್ಕೆ ಕೈಹಚ್ಚಲಾರ
ಯಾಕೆಂದರೆ ಅವನಿಗೆ ಯಾವುದಾದರೂ ದೇಹವನ್ನು
ಕದ್ದು ನೋಡುವುದು ಗೊತ್ತೇ ಇಲ್ಲ.

ಹೇಡಿಯೊಬ್ಬ
ಕೊಲೆಗಡುಕನಾಗಲಾರ
ಆದರೆ
ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾನೆ
ಹಾಗೆ ಮಾಡಿಕೊಳ್ಳುತ್ತಾನೆ ಕೂಡ.

ಒಂದು ಕ್ಷುದ್ರ ಜಂತು

ನಾನು
ಒಂದು ಜಂತು
ಒಂದು ಸಣ್ಣ ಜಂತು
ಒಂದು ಕ್ಷುದ್ರ ಜಂತು
ಒಂದು ಮಾಮೂಲು ಸ್ಪರ್ಶ
ಚೇಷ್ಟೆಯ
ಸ್ಪರ್ಶದ ಅನುಭವ
ಯಾವುದೇ ಇರಲಿ
ಭಯಭೀತವಾದುದು
ಒಂದು ಹಗುರ ಸ್ಪರ್ಶಕೂ
ಮುರುಟಿಕೊಳ್ಳುತ್ತೇನೆ
ಸುರುಳಿ ಸುರುಳಿ ಸುತ್ತಿ
ಸುರುಟಿಕೊಳ್ಳುತ್ತೇನೆ
ನಾನೊಂದು ಕ್ಷುದ್ರ ಜಂತು
ಈ ಸುಟ್ಟ ನೆಲದ ತುಂಡನ್ನು ದಾಟಲೂ
ಅಶಕ್ತನಾಗಿದ್ದೇನೆ.

 

‍ಲೇಖಕರು avadhi

31 December, 2019

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. ಕ.ನಾ ವಿಜಯಕುಮಾರ, ಶಿಕಾರಿಪುರ

    ಇಡೀ ಲೇಖನದ ತೂಕ ಒಂದಾದರೆ, ಆ ಅಪರೂಪದ ಪದ್ಯಗಳ ಅನುವಾದ ಅದಕ್ಕಿಂತಲೂ ಮಿಗಿಲು. ಕವಿತೆಯೊಳಗೆ ಕೂತು ತನ್ಮಯರಾಗಿ ತರ್ಜುಮೆ ಮಾಡಿದ್ದೀರಿ ಮ್ಯಾಮ್. ಹೆಗ್ಗಣ ಮತ್ತು ಹೇಡಿಗಳ ಹಾಡನ್ನು ಹೃದಯ ಹೊಕ್ಕುವಂತೆ ಕನ್ನಡೀಕರಿಸಿದ್ದೀರಿ. ಥ್ಯಾಂಕ್ಸ್ ಎಂದು ಹೇಳಿದರೆ ಕಡಿಮೆಯಾದೀತು.

  2. Girija

    Thank you

  3. T S SHRAVANA KUMARI

    ಪೆರುಮಾಳ್ ಮುರುಗನ್ ಅವರ ಬಗ್ಗೆ ಆಸಕ್ತಿ ಹುಟ್ಟಿಸಿದ ಲೇಖನ. ಅವರ ಅನುವಾದಿತ ಕವಿತೆಗಳು ತುಂಬಾ ಚೆನ್ನಾಗಿವೆ. ಒಟ್ಟಾರೆಯಾಗಿ ತುಂಬಾ ಇಷ್ಟವಾಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading