ಗಾಂಧಿ: ಸತ್ಯ, ಅಹಿಂಸೆಯ ಬೆಚ್ಚನೆಯ ಬಟ್ಟೆ..

ಜಿ ಪಿ ಬಸವರಾಜು

ಅಕ್ಟೋಬರ್‌ ೨ ವರ್ಷದಲ್ಲಿ ಒಮ್ಮೆ ಮಾತ್ರ ಬರುತ್ತದೆ. ಅದು ಭಾರತೀಯರಾದ ನಮ್ಮ ನೆನಪಿನಲ್ಲಿ ಉಳಿದಿರುವಂತೆ ಕಾಣುತ್ತದೆ. ಮರೆಯಬಾರದು ಎಂಬ ಕಾರಣಕ್ಕೊ ಏನೊ ಅಕ್ಟೋಬರ್‌  ಎರಡನ್ನು ರಜಾದಿನವಾಗಿ ಘೋಷಿಸಿದ್ದೇವೆ. ಗಾಂಧಿ ಹುಟ್ಟಿದ ದಿನ ಇದು ಎಂಬುದನ್ನು ನೆನಪಿಸಲು ಶಾಲಾ ಕಾಲೇಜುಗಳಲ್ಲಿ ಸಮಾರಂಭಗಳನ್ನು ನಡೆಸುತ್ತೇವೆ. ಗಾಂಧಿಯ ನೆನಪಾಗಿ ಕೆಲವು ಮಾತುಗಳನ್ನು ಹೇಳಿ ಆ ದಿನ ಮುಗಿಯುವುದನ್ನು ನೋಡುತ್ತೇವೆ. ರಜಾ ದಿನದ ಖುಷಿಯಲ್ಲಿ ನಮ್ಮ ಮಕ್ಕಳೂ ಗಾಂಧಿಗೆ ನಮಸ್ಕರಿಸುತ್ತಾರೆ- ಭಕ್ತಿಯಿಂದಲ್ಲ, ಗೌರವದಿಂದಲೂ ಅಲ್ಲ; ಅದೊಂದು ಯಾಂತ್ರಿಕ ಕ್ರಿಯೆ ಎನ್ನುವಂತೆ.; ಇತಿಹಾಸದ ಮರೆಯಬಾರದ ನೆನಪು ಎನ್ನುವಂತೆ.

ಆದರೆ ಜನವರಿ ೩೦ನ್ನು ನಾವು ನಿತ್ಯವೂ ಆಚರಿಸುತ್ತೇವೆ. ಗಾಂಧಿಯನ್ನು ಕೊಂದ ಆ ದಿನ ವರ್ಷದಲ್ಲಿ ಎಷ್ಟು ಸಲ ಮರಳಿ ಮರಳಿ ಬರುತ್ತದೆ? ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ, ಸಾಮಾಜಿಕ ಸಂಕಷ್ಟಗಳನ್ನು ಗಮನಿಸಿದರೆ, ಸಾಂಸ್ಕೃತಿಕ ಪಲ್ಲಟಗಳನ್ನು ಸೂಕ್ಷ್ಮವಾಗಿ ಪರಿಭಾವಿಸಿದರೆ, ಕೊಲೆ, ಸಲಿಗೆ, ಹಲ್ಲೆ, ಅಲ್ಪಸಂಖ್ಯಾತರ, ದುರ್ಬಲರ ಮೇಲೆ ನಡೆಯುತ್ತಿರುವ ಅಟ್ಟಹಾಸದ ದಬ್ಬಾಳಿಕೆಗಳನ್ನು ನೋಡಿದರೆ  ನಿತ್ಯವೂ ಜನವರಿ ೩೦ ಎದುರಾಗುತ್ತಲೇ ಇರುವುದನ್ನು ಗುರುತಿಸಬಹುದು. ನಾವು ಅಹಿಂಸಾ ನಾಡಿನವರು ಎಂದು ಹೇಳುತ್ತಲೇ ಹಿಂಸೆಯನ್ನು ಆರಾಧಿಸುತ್ತೇವೆ; ವೈಭವೀಕರಿಸುತ್ತೇವೆ; ಹಿಂಸೆಯ ಪಾಲುದಾರರೂ ಆಗುತ್ತವೆ. ಈ ಕಾರಣದಿಂದಾಗಿಯೇ ನಾವು ನಮ್ಮೊಳಗೇ ದ್ವೇಷವನ್ನು ತುಂಬಿಕೊಳ್ಳುತ್ತಾ, ಕಾರಣವಿಲ್ಲದೆ ಎದುರಾಳಿಗಳನ್ನು ರೂಪಿಸಿಕೊಂಡು ಅವರೊಡನೆ ಜಗಳಕ್ಕಿಳಿಯುತ್ತೇವೆ. ಧರ್ಮ ಎನ್ನುವುದು ಕರುಣೆಯ, ಸಹನೆಯ, ಅರಿವಿನ, ಕೂಡಿಬಾಳುವ ಮಾರ್ಗವಾಗದೆ, ನಮ್ಮ ಅಹಂಕಾರದ, ಗರ್ವದ, ಪ್ರತಿಷ್ಠೆಯ, ಹುಸಿನಂಬಿಕೆಯ ದಾರಿಯಾಗಿ ಹಿಂಸೆಗಿಳಿಯುವ ಕಾರಣವೂ ಆಗುತ್ತದೆ. ಎದುರಾಳಿಗಳನ್ನು ಕೊಲ್ಲುವ, ಹಿಂಸಿಸುವ, ತುಳಿಯುವ, ಅಪಮಾನಿಸುವ ಖಡ್ಗವೂ ಆಗಿ ರಕ್ತದ ಹೊಳೆ ಹರಿಯಲು ನೆರವಾಗುತ್ತದೆ.

ವರ್ಷದ ೩೬೫ ದಿನಗಳೂ ಜನವರಿ ಮೂವತ್ತಾಗಿ ಮಾರ್ಪಾಟಾಗುವ ಸೋಜಿಗ ನಮಗೆ ತಿಳಿಯದಂತೆಯೇ ನಮ್ಮನ್ನು ಸುತ್ತುವರಿದಿರುತ್ತದೆ. ಗಾಂಧೀಜಿಯ ಕಣ್ಣೀರು ನಮಗೆ ಕಾಣುವುದೇ ಇಲ್ಲ. ಗಾಂಧೀ ಬದುಕಿನುದ್ದಕ್ಕೂ ಪಾಲಿಸಿಕೊಂಡ ಬಂದ ಅಹಿಂಸೆ, ಸಹನೆ, ನಂಬಿಕೆಗಳು ನಮ್ಮ ಹತ್ತಿರವೂ ಸುಳಿಯದೆ, ಗೋಡ್ಸೆ ಹರಿಸಿದ ರಕ್ತ, ಅದರ ಬಣ್ಣ ನಮ್ಮೆಲ್ಲರ ಕಣ್ಣು ತುಂಬುವ ಸೋಜಿಗವನ್ನು ನಾವು ನೋಡುತ್ತೇವೆ. ಇದು ವರ್ತಮಾನದ, ನಾವೇ ಸೃಷ್ಟಿಸಿಕೊಂಡಿರುವ ಜಾದೂ! 

ಇತಿಹಾಸ ವರ್ತಮಾನಗಳ ವ್ಯತ್ಯಾಸವೇ ತಿಳಿಯದಂಥ ದಾರುಣ ಸನ್ನಿವೇಶದಲ್ಲಿ ನಾವಿದ್ದೇವೆ. ಧಾರ್ಮಿಕ ಬಲಿ ಎನ್ನುವುದು ಪ್ರಾಣ ಹರಣಕ್ಕೆ, ಮುಗ್ಧರ ವಧೆಗೆ ಕಾರಣವಾಗಿರುವ ಚಿತ್ರಗಳೇ ನಮ್ಮ ಕಣ್ಮುಂದೆ ನಿತ್ಯವೂ ಬಿಚ್ಚಿಕೊಳ್ಳುತ್ತಿವೆ.

ಧರ್ಮ ಎನ್ನುವುದು ಗಾಂಧೀಜಿಗೆ ಏನಾಗಿತ್ತು ಎಂಬುದು ನಮಗೆ ಮರೆತುಹೋಗಿದೆ. ಗಾಂಧೀಜಿಯವರಿಗೆ ಧರ್ಮ ಎದೆಯಾಳದ ಅರಿವನ್ನು ತಿಳಿಯುವ ಮಾರ್ಗವಾಗಿತ್ತು. ಮನುಷ್ಯ-ಮನುಷ್ಯರನ್ನು ಗೌರವಿಸುವ, ಪ್ರೀತಿಸುವ, ಪರಸ್ಪರರನ್ನು ಅರ್ಥಮಾಡಿಕೊಳ್ಳುವ ನಂಬಿಕೆಯಾಗಿತ್ತು. ಮನುಷ್ಯರ ಎದೆಯಾಳದ ಪ್ರೀತಿಯ ಸೆಲೆಗಳನ್ನು ಬತ್ತದಂತೆ ಉಳಿಸಿಕೊಳ್ಳುವ ಪ್ರಯತ್ನದಂತೆಯೂ ಕಾಣುತ್ತಿತ್ತು. ಗಾಂಧೀಜಿ ಈ ಸಾರ್ಥಕತೆಯಲ್ಲಿ ಧರ್ಮವನ್ನು ಬಳಸಿದರು.

ಗಾಂಧೀಜಿಯವರ ಪರಿಭಾವನೆಯಲ್ಲಿ ಯಾವ ಧರ್ಮವೂ ದೊಡ್ಡದಲ್ಲ; ಯಾವುದೂ ಸಣ್ಣದಲ್ಲ. ಎಲ್ಲ ಧರ್ಮಗಳೂ ಸಮಾನವಾದವು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸರಿಕಂಡ, ತಾನು ನಂಬಿಕೆಯನ್ನು ಇಟ್ಟುಕೊಳ್ಳುವ ಧರ್ಮವನ್ನು ಪಾಲಿಸಬಹುದು.  ಪರಸ್ಪರ ಗೌರವ, ಪ್ರೀತಿ, ಸಹನೆ, ಕರುಣೆಗಳನ್ನು ಇಟ್ಟುಕೊಂಡು ಮಾನವನ ಒಳಿತಿನ ಕಡೆಗೆ ನಡೆಯಬೇಕಾದ ಗುರಿಯೇ ಧರ್ಮದ ಗುರಿಯಾಗಿರುತ್ತದೆ ಎಂಬ ಆಳವಾದ ನಂಬಿಕೆ ಗಾಂಧೀಜಿಯವರಲ್ಲಿತ್ತು. ಎಲ್ಲ ಧರ್ಮಗಳೂ ಮೂಲದಲ್ಲಿ ಶ್ರೇಷ್ಠ ಧರ್ಮಗಳೇ; ನಿಜವಾದ ಧರ್ಮಗಳೇ. ಅವುಗಳಲ್ಲಿ ಕೊರತೆ, ದೋಷಗಳು ಕಾಣಿಸಿದರೆ ಅದಕ್ಕೆ ಕಾರಣ ಈ ಧರ್ಮಗಳು ಪರಿಪೂರ್ಣರಲ್ಲದ ಮನುಷ್ಯರ ಮೂಲಕ ಬಂದಿರುವುದೇ ಆಗಿದೆ ಎಂದು ಗಾಂಧಿ ತಿಳಿದಿದ್ದರು. ʼನನ್ನ ಬೆಳವಣಿಗೆಯನ್ನು ಎಲ್ಲಿಯವರೆಗೆ ಕುಬ್ಜಗೊಳಿಸುವುದಿಲ್ಲವೊ, ಅಲ್ಲಿಯವರೆಗೆ ನನ್ನ ಪೂರ್ವಿಕರನ್ನು ಗೌರವಿಸುತ್ತೇನೆ, ಅವರ ಹಣೆಪಟ್ಟಿಯನ್ನು ಇಟ್ಟುಕೊಳ್ಳುತ್ತೇನೆ, ಒಳ್ಳೆಯದು ಎಲ್ಲಿಯೇ ಇರಲಿ ಅದನ್ನು ಪಡೆಯಲು ಎಲ್ಲಿಯವರೆಗೆ ನನ್ನ ಪೂರ್ವಿಕರು ತಡೆಯುವುದಿಲ್ಲವೋ ಅಲ್ಲಿಯವರೆಗೆ ನಾನು ಅವರನ್ನು ಗೌರವಿಸುತ್ತೇನೆʼ ಎಂದು ಹೇಳುತ್ತಿದ್ದ ಗಾಂಧಿ ತಮ್ಮ ಮನದ ಕಿಟಕಿ ಬಾಗಿಲುಗಳನ್ನು ತೆರೆದು ಒಳ್ಳೆಯದು ಒಳಬರಲು ಅವಕಾಶ ಕಲ್ಪಿಸಿದ್ದರು.

ಬೇರೆಯ ಧರ್ಮಗಳನ್ನು ನಾವು ಗೌರವಿಸಬೇಕೆಂದರೆ ಮೊದಲು ನಮ್ಮ ಧರ್ಮವನ್ನು ಗೌರವಿಸಬೇಕು ಎಂಬ ನಂಬಿಕೆಯಿಂದಲೇ ಅವರು ನಾನು ಹಿಂದೂ ಧರ್ಮದವನು ಎಂದು ಹೇಳುತ್ತಿದ್ದರು. ಹಿಂದೂ ಧರ್ಮದ ಒಳಗಿನವರಾಗಿ ಅದನ್ನು ವಿಮರ್ಶಾತ್ಮಕವಾಗಿ ನೋಡುವ ಹಕ್ಕನ್ನು ಅವರು ಪಡೆದುಕೊಂಡಿದ್ದರು. ʼಅಸ್ಪೃಶ್ಯತೆ ಹಿಂದೂ ಧರ್ಮದ ಭಾಗ ಎನ್ನುವುದಾದರೆ, ಅದು ಕೊಳೆತ ಭಾಗ. ನಾನು ಹಿಂದು ಆಗಿರುವ ಕಾರಣ ನನಗೆ ಅದರ ದೋಷಗಳು ಎದ್ದು ಕಾಣುತ್ತವೆ.ʼ

ʼಅಸ್ಪೃಶ್ಯತೆ ಧರ್ಮಸಮ್ಮತವಾದ ಆಚರಣೆಯಲ್ಲ. ಅದು ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಮಾನವತೆಗೇ ಅಪಚಾರ ಮಾಡುವಂತಹ ಆಚರಣೆ…ʼ ಎಂದು ಹೇಳುವ ಧೀರತನವನ್ನೂ ಗಾಂಧೀಜಿ ತೋರಿಸಿದ್ದರು.

ತನ್ನ ಧರ್ಮದಲ್ಲಿ ಆಳವಾದ ನಂಬಿಕೆಯ ಬೇರುಗಳನ್ನು ಉಳಿಸಿಕೊಂಡು ಇತರ ಧರ್ಮಗಳ ಸಂಪರ್ಕವನ್ನು ಇಟ್ಟುಕೊಳ್ಳುವುದು, ಆ ಧರ್ಮಗಳನ್ನು ಗೌರವಿಸುವುದು, ಸಹನೆಯಿಂದ ನೋಡುವುದನ್ನು ಗಾಂಧೀಜಿ ಒಪ್ಪುತ್ತಿದ್ದರು. ತಾವು ಕೂಡಾ ಹಾಗೆಯೇ ನಡೆದುಕೊಂಡರು. ಇಂಥ ನಡೆ ತನ್ನ ಧರ್ಮಕ್ಕೆ ಮಾಡುವ ಅನ್ಯಾಯವಲ್ಲ ಎಂದು ಅವರು ಹೇಳುತ್ತಿದ್ದರು.

ಏಸುಕ್ರಿಸ್ತನ ಬಗ್ಗೆ ಮತ್ತು ಕ್ರಿಶ್ಚಿಯನ್‌ ಧರ್ಮದ ಬಗ್ಗೆ ಗಾಂಧೀಜಿಗೆ ವಿಶೇಷ ಒಲವಿತ್ತು. ಅದಕ್ಕೆ ಕಾರಣ ಏಸುವಿನ ವ್ಯಕ್ತಿತ್ವ. ಆದರೆ ಏಸುವನ್ನು ದೇವಪುತ್ರ ಎಂಬುದನ್ನು ಅವರು ಒಪ್ಪುತ್ತಿರಲಿಲ್ಲ. ಏಸು ದೇವಪುತ್ರನಾದರೆ ಪ್ರತಿಯೊಬ್ಬ ಮನುಷ್ಯನೂ ದೇವಪುತ್ರನೇ ಎಂದು ಹೇಳುತ್ತಿದ್ದರು. ಮನುಷ್ಯರೆಲ್ಲರೂ ಸಮಾನರು ಎಂಬ ತತ್ವ ಅವರದು. ಏಸುವಿನ ಕರುಣೆ, ಸಹನೆ ಮತ್ತು ಮಾನವೀಯ ಗುಣಗಳನ್ನು ಬಿಚ್ಚುಮನಸ್ಸಿನಿಂದ ಮೆಚ್ಚುತ್ತಿದ್ದ ಗಾಂಧೀಜಿ, ಏಸು ಕೇವಲ ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಿದವನಲ್ಲ, ಅವನು ಇಡೀ ಜಗತ್ತಿಗೇ ಸೇರಿದವನು; ಅವನನ್ನು ಒಂದು ಧರ್ಮಕ್ಕೆ ಕಟ್ಟಿಹಾಕಿ ಸೀಮಿತಗೊಳಿಸಬಾರದು ಎಂದು  ಹೇಳುತ್ತಿದ್ದರು.

ಗಾಂಧೀಜಿಯವರಿಗೆ ರಾಮ ಪ್ರಿಯನಾದವನು. ತಮ್ಮ ಎದೆಗೆ ಗುಂಡು ಬಿದ್ದು, ಪ್ರಾಣಬಿಡುವಾಗಲೂ ಗಾಂಧೀಜಿ ʼಹೇ ರಾಮ್‌ʼ ಎಂದು ಹೇಳುತ್ತಲೇ ಪ್ರಾಣಬಿಟ್ಟದ್ದು ಇತಿಹಾಸ.  ಆದರೆ ಇವತ್ತಿನ ವರ್ತಮಾನದಲ್ಲಿ ರಾಮ ಬೇಕಾಬಿಟ್ಟಿಯಾಗಿ ಬಿಕರಿಯಾಗುತ್ತಿದ್ದಾನೆ; ವಿರೂಪಗೊಳ್ಳುತ್ತಿದ್ದಾನೆ. ರಾಮನ ಎತ್ತರವನ್ನು ಇಳಿಸಿ ಇಳಿಸಿ ತೀರ ಕುಬ್ಜನನ್ನಾಗಿ ಮಾಡಲಾಗಿದೆ. ಇನ್ನೊಂದು ಧರ್ಮವನ್ನು ದ್ವೇಷಿಸುವ, ಅನ್ಯಧರ್ಮೀಯರ ಮೇಲೆ ಯುದ್ಧಸಾರಿ ಅವರನ್ನು ನಿರ್ನಾಮ ಮಾಡುವ ವ್ಯಕ್ತಿಯನ್ನಾಗಿಯೂ ರಾಮನನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಮನ ಹೆಸರಿನಲ್ಲಿ ʼರಾಮಸೇನೆʼಯನ್ನು ಕಟ್ಟಲಾಗಿದೆ. ಕೊಲೆ, ಸುಲಿಗೆ, ದರ್ಪ, ಹಿಂಸೆ ಎಲ್ಲದಕ್ಕೂ ರಾಮ ಒಂದು ಸಂಕೇತ ಎಂಬಂತೆ ಚಿತ್ರಿಸಲಾಗಿದೆ ಮತ್ತು ಬಳಸಲಾಗುತ್ತಿದೆ. 

ಗಾಂಧಿಜಿಯವರ ಪೂಜ್ಯ ರಾಮನನ್ನು ನಾವು ಎಲ್ಲಿಗೆ ಎಳೆದುತಂದು ನಿಲ್ಲಿಸಿದ್ದೇವೆ. ಈಗಿನ ರಾಮ ರಕ್ತಸಿಕ್ತ ರಾಮ; ಹಿಂಸೆಯನ್ನು ವೈಭವೀಕರಿಸುವ ಪ್ರತೀಕವಾಗಿ ರಾಮನನ್ನು ನಾವು ಎತ್ತಿ ನಿಲ್ಲಿಸಿದ್ದೇವೆ. ಇಂಥ ರಾಮನನ್ನು ಆರಾಧಿಸುತ್ತಲೇ ಗಾಂಧೀಜಿಯನ್ನು ಕೊಲ್ಲುತ್ತಿದ್ದೇವೆ. ಈ ಎಚ್ಚರವೂ ನಮಗಿಲ್ಲ ಎಂಬುದು ಗಾಂಧೀ ನಾಡಿನ ದೊಡ್ಡ ದುರಂತ.  

ಗಾಂಧೀಜಿ ʼರಾಮರಾಜ್ಯʼದ ಕಲ್ಪನೆಯನ್ನು ಬಿಚ್ಚಿಡುತ್ತಿದ್ದ ರೀತಿಯೇ ಸೆಳೆಯುವಂತಿದೆ: ರಾಮರಾಜ್ಯ ಎನ್ನುವುದು ಪ್ರತ್ಯೇಕ ಪದವೂ ಅಲ್ಲ; ಅದು ದೇವ ಪ್ರಭುತ್ವವೂ ಅಲ್ಲ. ನ್ಯಾಯಬದ್ಧವಾದ, ಮಾನವೀಯವಾದ,  ಭೂಮಿಯ ಮೇಲೆ ದೇವರನ್ನು ಸಾಧ್ಯಮಾಡಿಕೊಳ್ಳುವ ಸರ್ಕಾರ ಮತ್ತು ಸಮಾಜವೇ ರಾಮರಾಜ್ಯ. ರಾಮರಾಜ್ಯ ಎಂದರೆ ಹಿಂದೂಗಳ ಆಡಳಿತವಲ್ಲ. ಹಲವು ಧಾರ್ಮಿಕ ನಂಬಿಕೆಗಳನ್ನು ಒಳಗೊಳ್ಳುವ ಪ್ರಭುತ್ವ. ಖುದಾ ಅಥವಾ ದೇವರಿಗೆ ಇರುವ ಇನ್ನೊಂದು ಹೆಸರೇ ನನ್ನ ರಾಮ. ಖುದಾರಾಜ್ಯ ಅಂದರೆ ಭೂಮಿಯ ಮೇಲಿನ ದೇವರ ರಾಜ್ಯ. ಅದು ಪರಿಪೂರ್ಣ ಪ್ರಜಾಪ್ರಭುತ್ವ.

ಈ ಪರಿಪೂರ್ಣ ಪ್ರಜಾಪ್ರಭುತ್ವದಲ್ಲಿ ಯಾವುದೇ ರೀತಿಯ ತಾರತಮ್ಯಗಳು ಇರುವುದಿಲ್ಲ. ಉಳ್ಳವರು, ಇಲ್ಲದವರು, ಬಣ್ಣ, ಜನಾಂಗ, ಧಾರ್ಮಿಕ ನಂಬಿಕೆ, ಲಿಂಗ ಮೊದಲಾದವನ್ನು ಆಧರಿಸಿದ ಅಸಮಾನತೆಗಳು, ಯಾವುದೇ ತಾರತಮ್ಯಗಳು ಇರುವುದಿಲ್ಲ ಎನ್ನುವ ಬಲವಾದ ನಂಬಿಕೆಯ ಮೇಲೆ ಖುದಾ ರಾಜ್ಯವನ್ನು ಗಾಂಧೀಜಿ ಅರ್ಥೈಸುತ್ತಿದ್ದರು,

ಇತರ ನಂಬಿಕೆಗಳನ್ನು, ಧರ್ಮಗ್ರಂಥಗಳನ್ನು ಟೀಕಿಸುವುದಾಗಲಿ ಅಥವಾ ಅವುಗಳಲ್ಲಿನ  ದೋಷಗಳನ್ನು ಹುಡುಕಿ ಹೇಳುವುದು ನನ್ನ ಕೆಲಸವಲ್ಲ. ಆದರೆ ಹಿಂದೂಧರ್ಮದಲ್ಲಿನ ದೋಷಗಳನ್ನು, ಕೊರತೆಗಳನ್ನು ಎತ್ತಿ ತೋರಿಸಿ ಅವುಗಳನ್ನು ಶುದ್ಧೀಕರಿಸುವುದು ನನ್ನ ಹಕ್ಕು ಮತ್ತು ನನ್ನ ಕರ್ತವ್ಯ- ಎಂದೂ ಗಾಂಧೀಜಿ ನಂಬಿಕೊಂಡಿದ್ದರು.

ಧರ್ಮ ಎನ್ನುವುದನ್ನು ಇವತ್ತು ಬಲಿದಾನದ ಜೊತೆ ಬೆರಸಿ ಅದರ ಅರ್ಥವನ್ನು ತಿರುಚಲಾಗಿದೆ. ಬಲಿದಾನ ತನ್ನನ್ನು ತಾನು ಕೊಟ್ಟುಕೊಳ್ಳುವುದರ ಬದಲು ಅನ್ಯರನ್ನು, ತನ್ನ ಧರ್ಮವನ್ನು ಒಪ್ಪದ, ಬೇರೊಂದು ಧಾರ್ಮಿಕ ನಂಬಿಕೆಯನ್ನು ಇಟ್ಟುಕೊಂಡವರನ್ನು ಕೊಲ್ಲಲು ಪಡೆದುಕೊಂಡ ಪರವಾನಗಿಯಂತೆ ಬಲಿದಾನವನ್ನು ಅರ್ಥೈಸಿ ಮುಗ್ಧರನ್ನು ದಾರಿ ತಪ್ಪಿಸಲಾಗುತ್ತಿದೆ. ಅನ್ಯ ಧರ್ಮೀಯರನ್ನು ಕೊಲ್ಲುವುದು ಬಲಿದಾನವಾಗಿ, ಧಾರ್ಮಿಕ ಕ್ರಿಯೆಯಾಗಿ ಮಾರ್ಪಟ್ಟಿರುವುದು ಎಂಥ ಘೋರ!

ಸತ್ಯ ಮತ್ತು ಅಹಿಂಸೆಯನ್ನು ಗಾಂಧೀಜಿ ಬೇರೆ ಬೇರೆಯಾಗಿ ನೋಡಲೇ ಇಲ್ಲ. ಇವೆರಡೂ ಪರಸ್ಪರ ಪೂರಕವಾದವು. ಚಿಂತನೆ, ನಡೆ-ನುಡಿಗಳಲ್ಲಿ ನಾವು ಸಂಪೂರ್ಣವಾಗಿ ಅಹಿಂಸಾತ್ಮಕವಾಗಿ ಇಲ್ಲವಾದರೆ ನಾವೆಂದೂ ಬಲಿಷ್ಠರಾಗಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದರು. ಗಾಂಧೀಜಿಯವರ ಏಕಾದಶ (ಹನ್ನೊಂದು) ವ್ರತದಲ್ಲಿ ಸತ್ಯ ಮತ್ತು ಅಹಿಂಸೆ ಮುಖ್ಯವಾದವು. ಅಸ್ಪೃಶ್ಯತಾ ನಿವಾರಣೆ, ಶರೀರ ಶ್ರಮ, ಸಹಿಷ್ಣುತೆ, ಸರ್ವಧರ್ಮ ಸಮಭಾವ ಮೊದಲಾದವೂ ಈ ವ್ರತದಲ್ಲಿ ಸೇರಿದ್ದವು. ರಕ್ತಸಿಕ್ತವಾದ ಪಶುಬಲದ ಹೊರಾಟವನ್ನು ಎದುರಿಸಲು ಸಾಧ್ಯವಾಗುವ ಹೋರಾಟವೆಂದರೆ ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದ ಹೋರಾಟ ಎಂಬ ನಂಬಿಕೆಯ ಮೇಲೇ ಅವರ ಪ್ರತಿರೋಧಗಳು, ಹೋರಾಟಗಳು ರೂಪಿತವಾಗುತ್ತಿದ್ದವು.

ಗಾಂಧೀಜಿಗೆ ತಾನು ಹಿಂಸೆಯ ಪರವಾಗಿರಬಹುದೆಂಬ ಅನುಮಾನವಿತ್ತು; ಈ ಬಗ್ಗೆ ದೊಡ್ಡ ಅಳುಕೂ ಇತ್ತು. ಜಾಗತಿಕ ಯುದ್ಧಗಳಲ್ಲಿ ತಾವು ವಹಿಸಿದ ಪಾತ್ರವನ್ನು ಅವರು ನೆನಪಿಸುತ್ತಿದ್ದರು. ಪಾತ್ರ ಎಂಥದೇ ಆಗಿರಲಿ, ಯುದ್ಧವನ್ನು ಬೆಂಬಲಿಸುವ ನಿಲುವನ್ನು ತಾವು ತಳೆದದ್ದು ಸತ್ಯ ಎಂದು ಅವರು ಭಾವಿಸಿದ್ದರು. ಇದು ಹಿಂಸೆಯನ್ನು ಬಯಸುವ ಮನಸ್ಸಿನ ನಿರ್ಧಾರವೆಂದೇ ಅವರು ಹೇಳುತ್ತಿದ್ದರು. 

ಸತ್ಯ ಗಾಂಧೀಜಿಯವರ ಬದುಕಿನಲ್ಲಿ ಹೇಗೆ ಬೇರೆಯಿತು ಎಂಬುದನ್ನು ಅವರ ಬಾಲ್ಯದ ಒಂದು ಸಂಗತಿಯೇ ಹೇಳುತ್ತದೆ. ಅವರು ಸತ್ಯ ಹರಿಶ್ಚಂದ್ರನಿಂದ ಪ್ರಭಾವಿತವಾದ ಕತೆ ಎಲ್ಲರಿಗೂ ತಿಳಿದಿದೆ. ಅಹಿಂಸೆ ಗಾಂಧೀಜಿಯವರನ್ನು ಆವರಿಸಿದ್ದು ಹೇಗೆ? ಇದಕ್ಕೆ ಗಾಂಧೀಜಿಯವರೇ ಉತ್ತರವನ್ನು ಹೇಳಿದ್ದಾರೆ: ನಾನು ಹುಟ್ಟಿದ್ದು ಗುಜರಾತಿನಲ್ಲಿ. ಗುಜರಾತ್‌ನಲ್ಲಿ ಜೈನಧರ್ಮದ ಅಗಾಧವಾದ ಪ್ರಭಾವ ಇತ್ತು. ಜೈನಧರ್ಮ ಎಂದರೆ ಅದು ಅಹಿಂಸಾ ತತ್ವದ ಮೇಲೆ ನಿಂತ ಧರ್ಮ ಹೀಗಾಗಿ ಅಹಿಂಸಾ ತತ್ವ ನನ್ನ ಮೇಲೆ ಗಾಢ ಪ್ರಭಾವ ಬೀರಿದೆ.

ಅಹಿಂಸೆಯ ಮಾರ್ಗವನ್ನು ಗಾಂಧೀಜಿ ಎಂದೂ ಹೇಡಿತನದ ಮಾರ್ಗ ಎಂದು ತಿಳಿದಿರಲಿಲ್ಲ. ಹೋರಾಟ ಮಾರ್ಗದಲ್ಲಿ ಅಹಿಂಸೆ ಎನ್ನುವುದು ಪ್ರಬಲವಾದ ಶಕ್ತಿ. ತನ್ನ ನ್ಯಾಯಬದ್ಧ, ಹೋರಾಟದಲ್ಲಿ ಅಹಿಂಸಾವಾದಿ ಗಾಯಗೊಳ್ಳಬಹುದು, ಸಾಯಲೂ ಬಹುದು. ಅಂಥವನು ಧೀರ; ಹೇಡಿಯಲ್ಲ. ತನ್ನ ಕರ್ತವ್ಯವನ್ನು ನಿಭಾಯಿಸಬೇಕಾದ ವ್ಯಕ್ತಿ, ಎದುರಾಳಿಯನ್ನು ಎದುರಿಸುವ ಹೊತ್ತಲ್ಲಿ, ಅಪಾಯವನ್ನು ಕಂಡ ಕ್ಷಣದಲ್ಲಿ ಪಲಾಯನ ಮಾಡುವುದಾದರೆ ಅವನು ಹೇಡಿಯಾಗುತ್ತಾನೆ, ಧೀರನಾಗುವುದಿಲ್ಲ. ಅಂಥವನು ಮನುಷ್ಯರಲ್ಲಿ ಮತ್ತು ದೇವರಲ್ಲಿ ಇಟ್ಟ ನಂಬಿಕೆಯನ್ನು ಕಳೆದುಕೊಂಡಂತೆ. ಅಹಿಂಸಾ ಮಾರ್ಗ ಧೀರ ನಡೆಯ ನೇರ ಹಾದಿ.

ಗಾಂಧೀಜಿ ತಮ್ಮ ಬದುಕಿನಲ್ಲಿ ಮೈತುಂಬ ಬಟ್ಟೆ ಹೊದ್ದುಕೊಳ್ಳಲಿಲ್ಲ. ದಕ್ಷಿಣ ಆಫ್ರಿಕಾದ ಯಶಸ್ವೀ ಹೋರಾಟದ ನಂತರ ಗಾಂಧೀಜಿ ಭಾರತಕ್ಕೆ ಮರಳಿ ಬಂದಾಗ (೧೯೧೫) ಅವರ ಉಡುಗೆ ಸರಳವಾಗಿದ್ದರೂ ಪೂರ್ಣವಾಗಿತ್ತು: ಹತ್ತಿಯಲ್ಲಿ ನೇಯ್ದ ಉದ್ದನೆಯ ಬಿಳಿ ನಿಲುವಂಗಿ, ಧೋತಿ, ಕಾಠೇವಾಡಿಯ ಪೇಟ. ಆದರೆ ಮುಂದೆ ಭಾರತ ಯಾತ್ರೆಯನ್ನು ಕೈಗೊಂಡ ಹೊತ್ತಿಗೆ ಈ ಉಡುಗೆ, ಹತ್ತಿಯ ಪಂಚೆ ಮತ್ತು ಅಂಗಿಗಳ ಮಟ್ಟಕ್ಕೆ ಇಳಿಯಿತು. ಇನ್ನೂ ಮುಂದಿನ ಹಂತದಲ್ಲಿ ಅವರು ಪಂಚೆಯನ್ನು ಮಾತ್ರ ಉಳಿಸಿಕೊಂಡು ಅರೆಬೆತ್ತಲೆಯಲ್ಲಿಯೇ ಉಳಿದದ್ದು ಇತಿಹಾಸವಾಯಿತು.

 ದುಂಡು ಮೇಜಿನ ಪರಿಷತ್ತಿನಲ್ಲಿ ಮಾತುಕತೆಗಾಗಿ ಭಾರತದ ಪ್ರತಿನಿಧಿಯಾಗಿ ಹೋದಾಗಲೂ ಅವರು ತಮ್ಮ ವಸ್ತ್ರ ಸಂಹಿತೆಯನ್ನು ಮೀರಲಿಲ್ಲ. ವಿಪರೀತ ಚಳಿ ಇದ್ದ ಇಂಗ್ಲೆಂಡಿನಲ್ಲಿ, ಅಲ್ಲಿನ ದೊರೆ ಐದನೇ ಜಾರ್ಜ್‌ ಏರ್ಪಡಿಸಿದ್ದ ಚಹಾಕೂಟದಲ್ಲಿ ಭಾಗವಹಿಸಿದ್ದಾಗಲೂ ಗಾಂಧಿಜಿ ತಮ್ಮ  ಎಂದಿನ ಉಡುಗೆಯಲ್ಲಿಯೇ ಇದ್ದರು; ಅಷ್ಟೇ ಬಟ್ಟೆಯಲ್ಲಿದ್ದರು.

ಆದರೆ ಅವರು ಜೀವನ ಪೂರ್ತಿ ಸತ್ಯ, ಧರ್ಮ, ಅಹಿಂಸೆಯ ಬಟ್ಟೆಗಳನ್ನು ಪೂರ್ಣ ಪ್ರಮಾಣದಲ್ಲಿ ಹೊದ್ದುಕೊಂಡಿದ್ದರು; ಬೆಚ್ಚಗಿದ್ದರು; ಸುರಕ್ಷಿತವಾಗಿದ್ದರು. ಹೀಗಾಗಿಯೇ ಅವರು ಯಾವ ಹೊತ್ತಿನಲ್ಲಿಯೂ ಹೇಡಿಯಾಗಿ ವರ್ತಿಸಲಿಲ್ಲ; ತಮ್ಮ ಜೀವಿತದ ಕೊನೆಯ ಕ್ಷಣದಲ್ಲಿಯೂ ದೀರನಾಗಿಯೇ ಗುಂಡಿಗೂ ಎದೆಕೊಟ್ಟರು. ಅದು ಧರ್ಮದ ಮಾರ್ಗ; ಬಲಿದಾನದ ಮಾರ್ಗ; ಅಹಿಂಸೆಯ ಮಾರ್ಗ. ಇಡೀ ಜಗತ್ತಿಗೆ ಆದರ್ಶವಾದ ಗಾಂಧೀಮಾರ್ಗ.

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: