“ಗಾಂಧಿ” ಎಂಬ ವಿಸ್ಮಯ ಹಾಗೂ ಜಾಗತಿಕ ಶಾಂತಿ…

ಆರ್ ಜಿ ಹಳ್ಳಿ ನಾಗರಾಜ

ವಿಶಾಲವಾಗಿ ಹರಿವ ಒಂದು ನದಿ. ಮಳೆಗಾಲದಲ್ಲಿ ತನ್ಮೊಡಲು ತುಂಬಿಕೊಂಡು ಒನಪು ವೈಯ್ಯಾರದಿಂದ ಮೆರೆದು, ಬೇಸಗೆ ಬಂದಾಗ, ತನ್ನ ಸಂಭ್ರಮವನ್ನೆಲ್ಲ ಕಳಕೊಂಡು ಸಪ್ಪೆ ಮುಖದಲ್ಲಿ ಅಲ್ಲಲ್ಲಿ ಕಿರುದಾರಿ ಮಾಡಿಕೊಂಡು ಹರಿವಾಗ ಕಳೆಹೀನವಾಗಿರುತ್ತೆ.‌ ಆದರೂ ಅಲ್ಲಿನ ಜೀವಜಲ ಬದುಕಿಗೆ ಸಂಜೀವಿನಿ.

ಬತ್ತಿದ ನದಿಯ ಒಂದು ಮೂಲೆಯಲ್ಲಿ ಹರಿವ ನೀರು ಕುಡಿವ ಧಾವಂತವಾದರೂ, ಅಲ್ಲಿ ನೂರಾರು ಹೆಜ್ಜೆಗಳನ್ನು ಮೂಡಿಸಬೇಕು. ಹೀಗೆ ಹೆಜ್ಜೆ ಸವೆಸುವ  ಮೊದಲೇ ಬತ್ತಿದ ನದಿಯ ಮೈ ತುಂಬಿದ ಮರಳರಾಶಿಯಲ್ಲೇ ಪನ್ನೀರಿನ ಚಿಲುಮೆ ಉಕ್ಕುತ್ತದೆ. ಕಾಲಬುಡದ ಮರಳರಾಶಿ‌ ಎರಡೂ ಕೈಯಿಂದ ಬಗಿದು ಒರತೆ ತೆಗೆದರೆ ತಣ್ಣನೆಯ ನೀರ ಝರಿ ಪ್ರವಹಿಸುತ್ತಿರುತ್ತದೆ. ಬೊಗಸೆ ತುಂಬಾ ಆ ಒರತೆಯೊಳಗಿನ ಸ್ವಚ್ಛ ಹಾಗೂ ಸ್ಪಟಿಕದಂತ ನೀರು ಮೊಗೆದು ಕುಡಿದರೆ ಅದರ ಸವಿ/ರುಚಿಯೇ ಬೇರೆ.

ಮೇಲಿನ ಪ್ರಕೃತಿ ಸಹಜ ಜೀವಂತಿಕೆಗೂ  ಅಕ್ಟೋಬರ್ ೨ರಂದು ಹುಟ್ಟಿದ ಮಹಾತ್ಮಗಾಂಧಿ [‘ಮೋಹನದಾಸ ಕರಮಚಂದ ಗಾಂಧಿ]ಗೂ ಈ ಒರತೆ ನೀರಿನ ಸಂಬಂಧ ಇದೆ!  “ಗಾಂಧಿ” ಬತ್ತಿದ ನದಿಯ ಮರಳರಾಶಿ ಒಳಗಿನ ಜೀವಂತಿಕೆಯ ಪನ್ನೀರು. ನದಿ ಮೈಯೊಳಗೆ ಎಲ್ಲೆಡೆಯೂ  ಅಂತರ್ಜಲವಾಗಿ ಪ್ರವಹಿಸುವ ವ್ಯಕ್ತಿತ್ವವೇ ಗಾಂಧಿ. ಮರಳರಾಶಿಯಲ್ಲಿ ಬಗಿದಷ್ಟೂ ದಕ್ಕುವ ಒರತೆ ನೀರಿನ  ಗಾಂಧಿ ಎಲ್ಲ ಜಾತಿ, ಧರ್ಮ, ಕೋಮಿನ ಶಾಂತಿದೂತ. ಪೋರಬಂದರಿನಿಂದ ದೇಶದ ತುಂಬೆಲ್ಲ ಹರಡಿಕೊಂಡ ವಿಶಾಲ ಆಲ. ಜಾಗತಿಕ ಮಟ್ಟದಲ್ಲೂ ಅಹಿಂಸೆ ಹಾಗೂ ಶಾಂತಿ ಮೂಲಕ ಜನನಾಯಕರ ಮನಗೆದ್ದ ಮಾನವತಾವಾದಿ. ಭಾರತದಂಥ ಬೃಹತ್ ದೇಶಕ್ಕೆ ಶಸ್ತ್ರಾಸ್ತ್ರಗಳಿಲ್ಲದೆ ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ತಂದುಕೊಟ್ಟ ಅಪರೂಪದ ಜಾದುಗಾರ.

ಗಾಂಧಿ ಎಂದರೆ ಸರಳತೆ
ಗಾಂಧಿ ಎಂದರೆ ಶಾಂತಿ
ಗಾಂಧಿ ಎಂದರೆ ಅಹಿಂಸೆ
ಗಾಂಧಿ ಎಂದರೆ ಸ್ವರಾಜ್ಯ
ಗಾಂಧಿ ಎಂದರೆ ಸ್ವಾತಂತ್ರ್ಯ – ಸಮಾನತೆ.
ಗಾಂಧಿ ಜಾತ್ಯತೀತ, ಧರ್ಮಾತೀತ ವ್ಯಕ್ತಿ.
ಈ ಎಲ್ಲ ಪ್ರಿಯವಾದ ಸಮಾಜದ ಹಾಗೂ ದೇಶದ ಒಳಿತಿನ ವಿಚಾರಗಳ ಮೊತ್ತವೇ ಗಾಂಧಿ. ಇಂಥ ಗಾಂಧಿಯ ಬಗ್ಗೆ ವಿಶ್ವದಾದ್ಯಂತ ಅನೇಕ ಮಾಧ್ಯಮಗಳು ಬರೆದಿವೆ‌. ವಿದ್ವಾಂಸರು ಚರ್ಚಿಸಿದ್ದಾರೆ. ಪುಸ್ತಕ ಬರೆದಿದ್ದಾರೆ. 

ಕನ್ನಡದ ಹೆಸರಾಂತ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ೧೯೭೨ರಲ್ಲಿ “ಗೋಡೆ” ಎಂಬ ಕವನ ಸಂಕಲನ ಪ್ರಕಟಿಸಿ, ಅದರಲ್ಲಿ “ಗಾಂಧಿ” ಎಂಬ ಕವಿತೆ ಬರೆದರು.”ಉತ್ತಹೊಲ, ತೆರೆದ ಪುಸ್ತಕ ಗಾಜು ಮೈ ಗಡಿಯಾರ, ನಿನ್ನ ಬದುಕು”ಎಂದು ರೂಪಕದಲ್ಲಿ ಗಾಂಧಿಯನ್ನು ಹಿಡಿದಿಟ್ಟಿದ್ದಾರೆ. ಕವಿಸಾಲು ವಾಸ್ತವಕ್ಕೆ ಮುಖಾಮುಖಿ ಆಗುವಂತಿದೆ. “ಗಾಂಧಿ” ನಮ್ಮ ಕಣ್ಣಿಗೆ ಕಾಣುವಂತೆ ಎಷ್ಟು ಸರಳ ವ್ಯಕ್ತಿಯೋ, ಅವರ ಬದುಕಿನ ಆಳಕ್ಕಿಳಿಯುತ್ತ ಹೋದರೆ, ಬಡಕಲು ದೇಹದ, ಮೈತುಂಬಾ ಬಟ್ಟೆ ಹೊದಿಯದ ಜಂಗಮ ಸ್ವರೂಪಿ ಈ ಫಕೀರ ನಿಜಕ್ಕೂ ವಿಸ್ಮಯ ಹಾಗೂ ನಿಗೂಢ. ಬಾಹ್ಯ ಚಹರೆಯಲ್ಲೇನೋ ಸರಳಾತಿ ಸರಳ. ಆದರೆ, ಒಣಕಲು ದೇಹದ, ಪುಟ್ಟ ಶರೀರದ ಅವರ ಕನಸುಗಳು ಆಕಾಶದಗಲ. ನೂರಾರು ವರ್ಷಗಳ ಬ್ರಿಟಿಷರ ದಬ್ಬಾಳಿಕೆ, ಗುಲಾಮಗಿರಿಗೆ ಇತಿಶ್ರೀ ಹಾಡಿ, ಸ್ವಾತಂತ್ರ್ಯ ಕೈಗಿಡುವ ಕನಸು.  ಬ್ರಿಟಿಷರ ಕಾನೂನು ಮುರಿದು ಅಸಹಕಾರ ಚಳವಳಿ ರೂಪಿಸಿ ಸಂಘಟನೆ ಮೂಲಕ  ಜನಜಾಗೃತಿ ಮಾಡಿ ಎಲ್ಲರನ್ನೂ ಸ್ವಾತಂತ್ರ್ಯದೆಡೆಗೆ ಕೊಂಡೊಯ್ವ ಜನನಾಯಕ.

ಗಾಂಧೀಜಿ ಸರಳ ಬದುಕಿನ ಮೂಲಕ ಭಾರತೀಯ ಕೋಟ್ಯಾಂತರ ಜನ ಮಾನಸದಲ್ಲಿ ಸ್ತಬ್ಧ ಚಿತ್ರವಾಗಿ, ಮೆರವಣಿಗೆಯ ಮೂರ್ತಿಯಾಗಿ, ಸಾವಿರ, ಲಕ್ಷ, ಕೋಟ್ಯಾಂತರ ಜನರ ಮನದಾಳಕ್ಕೆ ಇಳಿದು, ದೇಶಭಕ್ತಿ ಸಾರಿದ  ಜೀವಂತ ವ್ಯಕ್ತಿಯಾಗಿ, ಚಲನಶೀಲರಾಗಿ ಕಂಡಿದ್ದರ ಪರಿಣಾಮವೇ “ನಡೆದಾಡುವ ದೇವರು” ಆದರು. ಹಾಗೆಂದು ಅವರೇನು ಕಾವಿ ಧರಿಸಲಿಲ್ಲ. ಸನ್ಯಾಸಿ ಆಗಿರಲಿಲ್ಲ. ಅತೀ ಚಿಕ್ಕವಯಸ್ಸಲ್ಲೇ ಮದುವೆಯಾಗಿ (ಬಾಲ್ಯ ವಿವಾಹವಾಗಿ) ಸ್ವಾತಂತ್ರ್ಯ ಚಳವಳಿಗೆ ಧುಮುಕುವ ಮೊದಲೇ ಮೂವರು ಮಕ್ಕಳನ್ನು‌ಪಡೆದ ಭಾಗ್ಯವಂತರು. ಮದುವೆ ಮಾಡಿಕೊಂಡ ನಂತರವೇ ಅವರ ನಿಜವಾದ ವಿದ್ಯಾಭ್ಯಾಸ ಹಾಗೂ ಜನ ಸಂಘಟಿತ ಹೋರಾಟ ಆರಂಭ ಆದದ್ದು. ಅದೂ ವಿದೇಶಿ ನೆಲದಲ್ಲಿ ಓದಿ, ಬ್ಯಾರಿಸ್ಟರ್ ಪದವಿ ದಕ್ಕಿಸಿಲೊಂಡದ್ದು. ದಕ್ಷಿಣ ಆಫ್ರಿಕಾದದಲ್ಲಿ ಭಾರತೀಯ ಗಾಂಧಿಯನ್ನು ರೈಲ್ವೆ ಟಿಕೆಟ್ ಕಲೆಕ್ಡರ್  ಕಪ್ಪುಜನಾಂಗದವನೆಂದು ವರ್ಣಭೇಧ ನೀತಿ ಅನುಸರಿಸಿ, ಅಪಮಾನ ಮಾಡಿದ. ಅವರು ಪ್ರಯಾಣಿಸುತ್ತಿದ್ದ  ಪ್ರಥಮದರ್ಜೆ ಬೋಗಿಯಿಂದ ಒತ್ತಾಯಪೂರ್ವಕವಾಗಿ  ದಬ್ಬಿ ಕೆಳಗಿಳಿಸಿ ಅಪಮಾನಗೊಳಿಸಿದ.

ದ.ಆಫ್ರಿಕಾದ ಈ ಅವಮಾನ ಅವರನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಅಪಮಾನದ ಕೆಚ್ಚನ್ನು ಮನದಲ್ಲಿಟ್ಟುಕೊಂಡು, ಆ ದೇಶದಲ್ಲಿದ್ದ ಭಾರತೀಯರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಾರೆ. ಮುಂದೆ ಅಲ್ಲೇ ವಕೀಲಿ ವೃತ್ತಿ ಆರಂಭಿಸಿದಾಗ ತನ್ನ ಇಬ್ಬರು ಮಕ್ಕಳು ಹಾಗೂ ಅಕ್ಕನ ಮಗನಿಗೆ ವಿದ್ಯಾಭ್ಯಾಸ ಕೊಡಲು ಮುಂದಾಗುತ್ತಾರೆ.  ಇಂಗ್ಲಿಷ್ ಭಾಷೆಯಲ್ಲಿ ಸರಿಯಾಗಿ  ಪಾಠ ಮಾಡುವವರನ್ನು ಹುಡುಕಿ ಶಿಕ್ಷಣ ‌ಕೊಡಿಸಲು ಒದ್ದಾಡುತ್ತಾರೆ. ತಮ್ಮ ವೃತ್ತಿಯಕಡೆ ಹೆಚ್ವಿನ ಗಮನ ಹರಿಸಿದ್ದರ ಪರಿಣಾಮ, ತಮ್ಮ ಮಕ್ಕಳು, ಅಕ್ಕನ ಮಗನಕಡೆ ಗಮನ ಕೊಡಲಾಗಲ್ಲ. ಹಿರಿಯ ಮಗ ಹರಿಲಾಲ್ ಹೊರದೇಶದಲ್ಲಿದ್ದರೂ ತಂದೆ ಗಾಂಧಿಜೊತೆ ಜಗಳಕಾದು ಕೆಲ ವರ್ಷದಲ್ಲೇ ಭಾರತಕ್ಕೆ ಬರುತ್ತಾನೆ. ಅವನಿಗೆ ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಕೊಡಿಸಲಿಲ್ಲ, ತಮ್ಮಕಡೆ ಗಮನ ಹರಿಸಲಿಲ್ಲ ಎಂಬ ಸಿಟ್ಟು. ಕೆಲವರ ಸಹವಾಸವೂ ಹಿರಿಯ ಮಗನನ್ನು ದಾರಿತಪ್ಪಿಸುತ್ತವೆ. ತಮ್ಮ ಆತ್ಮಕತೆ “ಸತ್ಯಾನ್ವೇಷಣೆ”ಯಲ್ಲಿ ಎಲ್ಲವನ್ನೂ ದಾಖಲಿಸಿದ್ದಾರೆ.

ಗಾಂಧಿ ದೇಶದ ಸ್ವಾತಂತ್ರ್ಯಕ್ಕಾಗಿ ಕುಟುಂಬವನ್ನೂ ಕಡೆಗಣಿಸಿದ್ದರಿಂದ ಪತ್ನಿ ಕಸ್ತೂರ ಬಾ ಹಾಗೂ ಇತರೆ ಮಕ್ಕಳಿಗೂ ಬೇಸರ. ಮನೆ ತೊರೆದು ಎಲ್ಲರ ಸಂಪರ್ಕದಲ್ಲಿದ್ದರೂ ಕಸ್ತೂರ ಬಾ ಅವರಿಗೆ ಆಶ್ರಮ ಮತ್ತಿತರ ಕೆಲವು ಜವಾಬ್ದಾರಿ ಹೊರಿಸುತ್ತಾರೆ. ಎಲ್ಲರೂ ಬಹುತೇಕ ತಮ್ಮ ಕೆಲಸಗಳನ್ನು ತಾವೇ ನಿರ್ವಹಿಸಬೇಕು. ಇಂತಿಷ್ಟು ಶ್ರಮಧಾನ ಮಾಡಲೇಬೇಕು. ಕಡ್ಡಾಯ ಪ್ರಾರ್ಥನೆ ಮಾಡಬೇಕು. ನೂಲು ತೆಗೆದು ಖಾದಿ ಬಟ್ಟೆ ನೇಯಬೇಕು, ಹರಿಜನರಿಗಾಗಿ, ಹೆಣ್ಣುಮಕ್ಕಳಿಗಾಗಿ ವಿಶೇಷ ಗಮನಕೊಡಬೇಕು ಎಂದು ಕರಾರುವಾಕ್ಕು ಆದೇಶ ನೀಡುತ್ತಿದ್ದರು.

ದೇಶದಾದ್ಯಂತ ಬ್ರಿಟಿಷರ  ದಬ್ಬಾಳಿಕೆ ವಿರುದ್ಧ ಆಂದೋಲನ‌ ಶುರುವಾದಾಗ, ಅವರು ಮಾಡಿದ ಕಾನೂನುಪಾಲನೆಯ ಬಹಿಷ್ಕಾರದಿಂದ ಅಸಹಕಾರ ತೋರುತ್ತ ಬಂದಿದ್ದರಿಂದ ಹಲವುಬಾರಿ ಸೆರೆವಾಸವನ್ನೂ ಅನುಭವಿಸಿದರು. ಅಲ್ಲಿ ಆರೋಗ್ಯದಲ್ಲಿ  ಏರುಪೇರು ಆಗಿದ್ದೂ ಉಂಟು. ಆದರೂ, ಅಲ್ಲಿ಼ಂದಲೇ ತಮ್ಮ ಕಾರ್ಯಚಟುವಟಿಕೆ ಹಿಗ್ಗಿಸುತ್ತಿದ್ದರು.”ಯಂಗ್ ಇಂಡಿಯಾ”, “ಹರಿಜನ” ಎಂಬ ಪತ್ರಿಕೆ ಆರಂಭಿಸಿ, ಜನತೆಗೆ ಮಾಹಿತಿ ರವಾನೆ ಮಾಡುತ್ತಿದ್ದರು. ಆ ಪತ್ರಿಕೆಗಳಲ್ಲಿ ಪುಟ್ಟಪುಟ್ಟ ಬರಹ ಬರೆದು ಜನ ಜಾಗೃತಿ‌ಮಾಡಿದರು. ಮುಖ್ಯವಾಗಿ ಮಹಿಳೆಯರಿಗಾಗಿ ವಿಶೇಷ ಅರಿವುಮೂಡಿಸುವ‌ ಬರಹ ದಾಖಲಿಸಿದರು. ಬಾಲ್ಯ ವಿವಾಹ ವಿರೋಧಿಸಿ, ವಿಧವಾ ವಿವಾಹ ಬೆಂಬಲಿಸಿದರು. ತಮ್ಮದೇ ಪತ್ರಿಕೆಯಲ್ಲಿ ಸ್ವರಾಜ್ಯ, ಸ್ವಾತಂತ್ರ್ಯ, ಅಸ್ಪೃಶ್ಯತೆ ಹಾಗೂ ನನ್ನ ಕನಸಿನ ಭಾರತದ ಬಗ್ಗೆಯೂ ಬೆಳಕು ಚೆಲ್ಲಿದರು. 

ಕಾಲಿಗೆ ಚಕ್ರಕಟ್ಟಿಕೊಂಡಂತೆ ಇಡೀ ಭಾರತ ಸುತ್ತಿದರು. ಸಾರ್ವಜನಿಕ ಸಭೆ ಮಾಡಿದರು. ಕರ್ನಾಟಕದ ಬೆಂಗಳೂರು, ನಂದೀಬೆಟ್ಟ, ಮೈಸೂರು, ನಂಜನಗೂಡು,  ಕೊಡಗು, ತುಮಕೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ,  ಉತ್ತರ ಕರ್ನಾಟಕ, ಈಗಿನ ಕಲ್ಯಾಣ ಕರ್ನಾಟಕದ ಭಾಗಗಳಲ್ಲಿ ಸಂಚರಿಸಿ, ಕೆಲವೆಡೆ ಸಭೆಗಳಲ್ಲಿ ಮಾತಾಡಿ ಬ್ರಿಟಿಷರಿಗೆ ಅಸಹಕಾರ ನೀಡುವ ಬಗ್ಗೆ ತೀರ್ಮಾನಿಸಿದರು.  ಹರಿಜನರ ಉದ್ಧಾರಕ್ಕಾಗಿ ನಿಧಿ ಸಂಗ್ರಹಿಸಿಕೊಟ್ಟರು. ಮಹಿಳೆಯರು ಆತಿಥ್ಯ ‌ನೀಡಿ ತಮ್ಮಲ್ಲಿದ್ದ ಬಂಗಾರದ ಒಡವೆ, ಆಭರಣ, ಹಣ ನೀಡಿ ಗಾಂಧೀಜಿ ಅವರ ಚಳವಳಿಗೆ ಬೆಂಬಲಕೊಟ್ಟರು. 

ಗಾಂಧಿ ಛಲಗಾರ ಹೇಗೋ ಹಠವಾದಿಯೂ ಹೌದು. ತಮ್ಮ ಕೆಲಸದ ಸಾಧನೆಗೆ ಅವರು ಕಂಡುಕೊಂಡ ಮಾರ್ಗ ಉಪವಾಸ ಸತ್ಯಾಗ್ರಹ. ಹೀಗಾಗಿ ದಲಿತ ನಾಯಕ ಅಂಬೇಡ್ಕರ್ ಅವರ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದರು. ಪೂನಾ ಒಪ್ಪಂದದಲ್ಲಿ ದಲಿತರಿಗೆ ಚುನಾವಣೆಯಲ್ಲಿ ಮೀಸಲಾತಿ ಬೇಕೆಂದು ಅಂಬೇಡ್ಕರ್ ವಾದಿಸಿದರೆ, ಇವರು ಅದು ಸಲ್ಲದೆಂದು ಉಪವಾಸ ನಿರಸನ ಸತ್ಯಾಗ್ರಹ ಕೂತರು! ಇಬ್ಬರು‌ ಮಹಾನ್ ಚಿಂಕಕರ ನಡುವೆ  ಸಾಕಷ್ಟು ಭಿನ್ನಾಭಿಪ್ರಾಯ ಕೊನೆವರೆಗೂ ಉಳಿದವು.  ಇದರಿಂದಾಗಿ ದಲಿತ ವರ್ಗ ಗಾಂಧಿಯವರ ಹಠ ಖಂಡಿಸಿ ಅವರ ವಿರೋಧಿಗಳಾದರು. ಇನ್ನೊಂದಡೆ ಗಾಂಧಿ ಮುಸ್ಲಿಂ ಜನಾಂಗವನ್ನು ಓಲೈಸುತ್ತಾರೆ ಎಂದು ಕಟ್ಟಾ ಹಿಂದುತ್ವವಾದಿಗಳು ಇವರನ್ನು ವಿರೋಧಿಸಿದರು. ಕಂದಕ ಹೆಚ್ಚದಂತೆಲ್ಲ ಗಾಂಧಿಗೆ ಪ್ರಾಣಭಯ ಹುಟ್ಟಿಸಿದರು. ಅಂತಿಮವಾಗಿ ಗೋಡ್ಸೆ ಎಂಬ ಒಬ್ಬ ಆರ್ ಎಸ್ ಎಸ್ ಕಟುಕನ ಗುಂಡಿಗೆ ಗಾಂಧಿ ಬಲಿಯಾದರು. 
ಗಾಂಧಿ ಗುಂಡಿಗೆ ಬಲಿಯಾಗುವ ಮುನ್ನ ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಹಳ್ಳಿ ನಗರಗಳಿಗೆ ಭೇಟಿ ನೀಡಿದ್ದರು. ಜನ ಹಗಲುರಾತ್ರಿ ನಿದ್ದೆಗೆಟ್ಟು ನೂರಾರು ಕಿ.ಮೀ. ನಡೆದುಬಂದು ಗಾಂಧಿ ದರ್ಶನ ಪಡೆದು, ತಮ್ಮ ಕೈಲಾದ ಆರ್ಥಿಕ ಸಹಾಯ ಮಾಡಿದರು.

ಇವತ್ತು ದೇಶದಲ್ಲಿ “ಗಾಂಧಿ” ಫುಟ್ಬಾಲ್ ಚೆಂಡಾಗಿದ್ದಾರೆ. ಲೇಖನದಲ್ಲಿ ಹಿರಿ ಪತ್ರಕರ್ತ ಜಾಣಗೆರೆ ಹೇಳುವಂತೆ ಗಾಂಧಿಯನ್ನು ಖಳನಾಯಕನನ್ನಾಗಿಸಿದ್ದೇವೆ. ಎರಡು ಅತಿಗಳ ನಡುವೆ ಗಾಂಧಿ ಉಸಿರು ಇದೆ. ಆರ್ ಎಸ್ ಎಸ್ ನವರು ಗಾಂಧಿ ಕಂಡರೆ ಕೆಂಡ ತುಳಿದಂತೆ ಆಡುತ್ತಾರೆ! ಇನ್ನು ದಲಿತ ಮಿತ್ರರು ಅಂಬೇಡ್ಕರ್ ಬೆಂಬಲಿಸುತ್ತಲೇ ಪೂನಾ pact ಇಟ್ಟುಕೊಂಡು ಗಾಂಧಿಯನ್ನು ಕಳಾನಾಯಕನನ್ನಾಗಿಸಿದ್ದಾರೆ! ಪ್ರೊ. ಸಿಜಿಕೆ, ನಾನು ಈ ಗಾಂಧಿ – ಅಂಬೇಡ್ಕರ್ ದ್ವೇಷ ಕಡಿಮೆ ಮಾಡಲು ಎರಡು ದಿನ “ಗಾಂಧಿಭವನ”ದಲ್ಲಿ ಶಿಬಿರ ಏರ್ಪಡಿಸಿದ್ದೆವು. ಹಿಂದೆ, ದೇವನೂರು ಆಗ ಅಟೆನ್ ಬ್ಯೂರೋನ “ಗಾಂಧಿ” ಚಿತ್ರ ಬಹಿಷ್ಕರಿಸದೆ ದಲಿತರೆಲ್ಲ ನೋಡಿ ಎಂದು ಕರೆಕೊಟ್ಟಿದ್ದರು.
ಗಾಂಧಿ ಬಗ್ಗೆ ಒಪ್ಪುವವರು ಬಹು ಸಂಖ್ಯೆಯಲ್ಲಿ ಇರುವಂತೆ ಅವರನ್ನು‌ವಿರೋಧಿಸುವವರು ಇದ್ದಾರು. ಪರ ವಿರೋಧಗಳ ನಡುವೆಯೂ ಅವರು ಬಹುಸಂಖ್ಯಾತ ಮನಸ್ಸುಗಳನ್ನು ಗೆದ್ದಿದ್ದರು ಅನ್ನುವುದೇ ಸಮಾಧಾನದ ಸಂಗತಿ. ಗಾಂಧಿ ಬಿಟ್ಟುಹೋದ ಶಾಂತಿ, ಅಹಿಂಸೆ, ಸ್ವಾತಂತ್ರ್ಯ, ಸ್ವಾಭಿಮಾನ ನಮ್ಮನ್ನು ಮುನ್ನಡೆಸಲಿ ಎಂದು ಅವರ ೧೫೩ನೇ ಜಯಂತಿ ಸಂದರ್ಭದಲ್ಲಿ ಸ್ಮರಿಸುತ್ತೇನೆ.

***        ***

‘ಗಾಂಧಿ’ ವಿಶೇಷಾಂಕಕ್ಕಾಗಿ *ಅವಧಿ* ಹಾಗೂ ಜಿ.ಎನ್. ಮೋಹನನಿಗೆ ವಿಶೇಷ ಕೃತಜ್ಞತೆ.

ಸಾಹಿತ್ಯ, ಕಲೆ, ಸಂಸ್ಕೃತಿ ಗುಂಗಿನಲ್ಲಿ ಮೂರು ದಶಕಗಳ ಒಡನಾಡಿ ಆಪ್ತ ಹಾಗೂ ಕಿರಿಯ  ಮಿತ್ರ ಜಿ.ಎನ್. ಮೋಹನ. *ಅವಧಿ* ಹಾಗೂ “ಬಹುರೂಪಿ” ಅವನ ಕನಸಿನ ಕೂಸುಗಳು. ಚಿಕ್ಕ ಹುಡುಗನಾಗಿದ್ದಾಗಲೆ ತುಂಟಾಟ ಮಾಡುತ್ತ, ಗಂಭೀರ ಕಾವ್ಯಾಭ್ಯಾಸಿ, ರಂಗಾಸಕ್ತ, ಬರಹಗಾರನಾಗಿ ಗುರ್ತಿಸಿಕೊಂಡು, ನನಗಿಂತ ಎತ್ತರಕ್ಕೆ ಬೆಳೆದಿರುವುದರ ಹಿಂದೆ ಅವನ‌ ಓದು, ಗ್ರಹಿಕೆ, ಬದ್ಧತೆ, ಕೆಲಸದಲ್ಲಿನ ನಿಷ್ಠೆ ಹಾಗೂ ಹಠ ಮುನ್ನಡೆಸಿದೆ.  ಮೋನಿ,  ಕವಿಯಾಗಿ ನನ್ನ ಜೊತೆ ಸಾಕಷ್ಟು ಹಂಚಿಕೊಂಡಿದ್ದಾನೆ. ಅವನಿಗೆ ಸು.ರಂ. ಎಕ್ಕುಂಡಿ ಪ್ರಿಯರಾದ ಕವಿ. ಅವರ ಮಾರ್ಕ್ಸ್ ಹಾಗೂ ಮಾಧ್ವ ಸಿದ್ಧಾಂತ, ಜನಸಾಮಾನ್ಯರ ಹಾಗೂ ಹೋರಾಟಗಾರರ ಕಾವ್ಯದ‌ ಜಾಡು ಅವರಿಗೆ ಇಷ್ಟ.  ಆ ಜಾಡು ಹಿಡಿದು ನಮ್ಮ “ಅನ್ವೇಷಣೆ” ಸಾಹಿತ್ಯ ಪತ್ರಿಕೆಗೆ ಮೋನಿ ಧೀರ್ಘ ಸಂದರ್ಶನ ಮಾಡಿಕೊಟ್ಟಿದ್ದ. ಇವತ್ತಿಗೂ ಅದೊಂದು ಮೌಲಿಕ ಸಂದರ್ಶನ. ಮೋನಿಯ ನಡೆದು ಬಂದ ಹಾದಿ ಮೆಚ್ಚುಗೆಗೆ ಪಾತ್ರವಾದಂತೆ ಅಸೂಯೆಯನ್ನೂ ಹುಟ್ಟಿಸುತ್ತೆ. ಹಲವು ಮಾಧ್ಯಮಗಳಲ್ಲಿ ದುಡಿದು, ಪ್ರಶಸ್ತಿ ಬಾಚಿದ್ದಾನೆ. ಅವನ ಬೆಳವಣಿಗೆ ನನಗೆ ಖುಷಿ ನೀಡಿದೆ. 

ಇಂಥ ಕಿರಿಯ ಮಿತ್ರನ ಗುರು  ನಾನು. (ಅವನ ಪ್ರಕಾರ!) ಆದರೂ, ಅವನ ಸ್ನೇಹದ ಒತ್ತಾಸೆಗೆ ಕಟ್ಟುಬಿದ್ದು ಅಕ್ಟೋಬರ್ ೨ರ ಗಾಂಧಿ‌ ಜಯಂತಿಯ ನೆಪದಲ್ಲಿ “ಗಾಂಧಿ ಚಿಂತನೆಗಳ  ವಿಶೇಷಾಂಕ ೨೦೨೨” ಮಾಡಿದ್ದೇನೆ. ಅಂದು ಪ್ರಧಾನಿ ಆಗಿದ್ದಾಗಲೇ ಅಕಾಲ ಮರಣಕ್ಕೆ ತುತ್ತಾದ ಪ್ರಾಮಾಣಿಕ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಹುಟ್ಟು ಹಬ್ಬವೂ ಹೌದು. ಅವರನ್ನೂ ಸ್ಮರಿಸುತ್ತೇನೆ. ಗಾಂಧಿ ಸಂಚಿಕೆ ಮಾಡಲು ನನಗೆ ಸಹಕಾರ ನೀಡಿದ ಕರ್ನಾಟಕದ ಗಂಭೀರ ಚಿಂತನೆಯ ಬರಹಗಾರ ಪಡೆಯೇ ಇದೆ. ಅವರೆಲ್ಲ ನಾನು ಕೇಳಿದ ವಿಷಯದ ಮೇಲೆ ಮೂರು, ನಾಲ್ಕು ದಿನಗಳಲ್ಲೇ ಮೌಲಿಕ ಲೇಖನ ಬರೆದು ಕೊಟ್ಟು ದೊಡ್ಡ ಉಪಕಾರ ಮಾಡಿದ್ದಾರೆ. “ಅವಧಿ” ಪರವಾಗಿ ಅವರಿಗೆಲ್ಲ ಕೃತಜ್ಞತೆ. ಈ ಅರ್ಥಪೂರ್ಣ ಬರಹದಿಂದ  ನನಗೆ, ಗೆಳೆಯ ಜಿ.ಎನ್. ಮೋಹನನಿಗೆ, “ಅವಧಿ”ಯ ಸಂಪಾದಕೀಯ ಬಳಗಕ್ಕೆ ಸಹಜವಾಗೇ ಸಂತೋಷವಾಗಿದೆ. ಇಲ್ಲಿ “ಅವಧಿ” ಸಂಪಾದಕ, ಸಂಪಾದಕ ‌ಮಂಡಳಿಯವರದ್ದು ಸಣ್ಣ ಮಧ್ಯಪ್ರವೇಶಿಕೆಯೂ ಇರಲಿಲ್ಲ. ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಸಂತೋಷವಾಗಿದೆ.ಮೂರು ದಿನ ತಪಸ್ಸಿನಂತೆ ಕೂತು (ಕಚೇರಿಗೆ ಸಂಬಳ ರಹಿತ ಚಕ್ಕರ್ ಹಾಕಿ!) ಈ “ಕಾಯಕ” ಮಾಡಿದ್ದೇನೆ. ತೃಪ್ತಿ ಆಗಿದೆ. ಗುಡ್ಡೇ ಹಾಕಿಕೊಂಡು ಸಾಕಷ್ಟು ಗಾಂಧಿ ಪುಸ್ತಕ ತಿರುವಿ ಹಾಕಿದ್ದೇನೆ. ಅದರಲ್ಲಿ ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಸಂಪಾದಕತ್ವದ “ಕರ್ನಾಟಕ ಹಾಗೂ ಗಾಂಧಿ” ಬೃಹತ್ ಗ್ರಂಥ, ಗಾಂಧಿಯ ಸತ್ಯಾನ್ವೇಷಣೆ ೧ ಮತ್ತು ೨, ಕುವೆಂಪು ಅವರ “ನೆನಪಿನ ದೋಣಿಯಲ್ಲಿ”, ಎಚ್.ಎಸ್. ದೊರೆಸ್ವಾಮಿ ನೆನಪುಗಳ ಕೃತಿ ಮೊದಲಾದವುಗಳಿಂದ ಕಲಿತಿದ್ದೇನೆ. “ಗಾಂಧಿ” ನನಗಿನ್ನೂ ಅರ್ಥನೇ ಆಗಲಿಲ್ಲ. ಆ ಕೊರತೆ ಉಳಿದೇ ಇದೆ. ಸಮುದ್ರದ ನೀರನ್ನು ಬೊಗಸೆಯಲ್ಲಿ ಹಿಡಿದು ಕೊಟ್ಟಿದ್ದೇನೆ. ಸ್ವೀಕರಿಸಿ. ಓದಿ. ಕಾಮೆಂಟ್ ಮಾಡಿ. ನಮಸ್ಕಾರ.

 ———-++++———-

ನನ್ನ ಮನವಿಗೆ ಓ ಗೊಟ್ಟ ಲೇಖಕರು ಹಾಗೂ ಅವರ ಲೇಖನಗಳು ಇಲ್ಲಿವೆ. ಜೊತೆಗೆ ನನಗೆ ಇಷ್ಟವಾದ  ಕವಿ ಜಿ.ಎಸ್ ಎಸ್, ಚಂಪಾ ಅವರ ಪದ್ಯಗಳನ್ನು ಆಯ್ಕೆ ಮಾಡಿದ್ದೇನೆ: 

ಲೇಖನಗಳು

* ‘One Gandhi please…’  – ಜಿ ಎನ್ ಮೋಹನ್ *.  ಗಾಂಧೀಜಿಯ ಪ್ರಭಾವ ಹಾಗೂ ಜೈಲು ವಾಸ – ಎಚ್. ಎಸ್. ದೊರೆಸ್ವಾಮಿ, * ಗಾಂಧಿ ನಮ್ಮೊಳಗಿನ ಒಳಗಿನ ತಿಳಿ – ಎಲ್.ಎನ್. ಮುಕುಂದರಾಜ್, * ಗಾಂಧೀಜಿ ಕಲ್ಪನೆಯ ಸ್ವರಾಜ್ಯ ಹಾಗೂ ಸ್ವಾತಂತ್ರ್ಯ –ಸಂಗ್ರಹಾನುವಾದ., * ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ನೋಡಿಬಂದ ಕುವೆಂಪು. * ಗಾಂಧೀಜಿ ಖಳನಾಯಕರಾಗಿಬಿಟ್ಟರೆ? – ಜಾಣಗೆರೆ, * ಗಾಂಧಿ: ಸತ್ಯ, ಅಹಿಂಸೆಯ ಬೆಚ್ಚನೆಯ ಬಟ್ಟೆ – ಜಿ.ಪಿ. ಬಸವರಾಜು, *. ಸಮಾಜವಾದದೊಂದಿಗೆ ಗಾಂಧಿ ಮುಖಾಮುಖಿ – ಬಾಪು ಹೆದ್ದೂರಶೆಟ್ಟಿ, * ಗಾಂಧಿ ಸ್ಮರಣೆಯ ಕೆಲವು ವೈರುಧ್ಯಗಳು – ಡಾ. ರಹಮತ್ ತರೀಕೆರೆ, * ಹಿಂಸೆಯ ನಾವೆಯೊಳಗೆ ಅಹಿಂಸೆಯ ಪೂಜಾರಿ – ಡಾ. ರಾಜಶೇಖರ ಮಠಪತಿ (ರಾಗಂ) * ಗಾಂಧಿ ಕಣ್ಣಿನಲ್ಲಿ ಗಾಂಧಿ – ವಿಕ್ರಮ ವಿಸಾಜಿ, *. ಗಾಂಧಿ ಎಂಬ ಎಕಾನಾಮಿಸ್ಟು ಹಾಗೂ ವಾಸ್ತವ – ವಿಜಯಕಾಂತ ಪಾಟೀಲ, * ಗಾಂಧಿ: ನಮ್ಮ ಕಾಲದ ನಿಜವಾದ ಮಹಾಪುರುಷ – ಶ್ರೀನಿವಾಸ  ಜೋಕಟ್ಟೆ, ಮುಂಬಯಿ * ಮಹಿಳಾ ದೃಷ್ಟಿಕೋನದಲ್ಲಿ – ಗಾಂಧಿ ವಿಚಾರಗಳು – ಸಾವಿತ್ರಿ ಮುಜುಮದಾರ, ಕೊಪ್ಪಳ

+—————++++———+

ಕವಿತೆಗಳು

* ಗಾಂಧೀ ಅಜ್ಜನಿಗೆ  – ಆರ್.ಜಿ. ಹಳ್ಳಿ ನಾಗರಾಜ * ಬೆರಗಿನ ಚಲನೆ  – ಚ. ಸರ್ವಮಂಗಳ * ಅಕ್ಟೋಬರ್ ೨ರಂದು ಅಸಾಮಾನ್ಯ ಗಾಂಧೀ ಮಾರಾಜನಿಗೆ ಸಾಮಾನ್ಯ ಹೇಳಿದ್ದು – ಪ್ರೊ. ಚಂದ್ರಶೇಖರ ಪಾಟೀಲ,* ಹೀಗೆ ನೆನಪಾಗುವರು… ಡಾ. ಚಿದಾನಂದ ಕಮ್ಮಾರ * ಗಾಂಧಿ – ಡಾ. ಜಿ‌‌.ಎಸ್. ಶಿವರುದ್ರಪ್ಪ, * ಅಹಿಂಸೆ ಎಂಬ ವಿಸ್ಮಯ – ಮೀನಾ ಮೈಸೂರು*ಒತ್ತಡದಲ್ಲೂ ಸಕಾಲದಲ್ಲಿ ಬರಹ ನೀಡಿದ ಲೇಖಕ, ಲೇಖಕಿಯರೆಲ್ಲರಿಗೂ ನಮಸ್ಕಾರ.

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: