ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗರಡಿಬೆಟ್ಟಿನ ದೊಂದಿ ಬೆಳಕಲ್ಲಿ.. 

ವಿಜಯಶ್ರೀ ಹಾಲಾಡಿ ಅವರ ಕಥಾಸಂಕಲನ ‘ಉಮ್ಮಲ್ತಿ ಗುಡಿಯ ಸಾಕ್ಷಿ’

ಈ ಕೃತಿಯನ್ನು ‘ಮಳೆಕೋಂಗಿಲ ಪ್ರಕಾಶನ’ ಪ್ರಕಟಿಸಿದೆ.

ಈ ಕಥಾಸಂಕಲನದ ಆಯ್ದ ಒಂದು ಕತೆ ಇಲ್ಲಿದೆ.

-ವಿಜಯಶ್ರೀ ಹಾಲಾಡಿ

ಮಳೆ ಕತ್ತಲು ಕವುಚಿಕೊಂಡಿತ್ತು. ನೆರೆಯೆಂದರೆ ಅಂತಿಂತಾದ್ದಲ್ಲ! ಇನ್ನೂ ಬೈಗು ಇಳಿಯುತ್ತಿದ್ದರೂ ನಡುರಾತ್ರಿ ಮಿಕ್ಕಿಹೋಯಿತೇನೋ ಎಂಬಂತೆ ಭ್ರಮೆಯಾಗುತ್ತಿತ್ತು. ಈ ವರ್ಷ ವಿಚಿತ್ರ ಮಳೆ. ಬ್ಯಾಸಿ ತಿಂಗಳ ಅಖೇರಿ ಬರುವವರೆಗೂ ಹಾರ್ ಹನಿ ನೆಲಕ್ಕೆ ಬಿದ್ದಿರಲಿಲ್ಲ. ಈಗ ಮೊನ್ನೆ ಬಿಡ್ಕಟ್ಟಿಗೆ ಹೊಡೆಯಲು ಸುರುವಾದದ್ದೆಂದರೆ ತಕೋ ಬಿಡ್ಬೇಡ ಎಂಬಂತಾ ಮಳೆ!  ‘ಕಲಿಗಾಲ ಅಂಬ್ದ್ ಸುಳ್ಳೇನಲ್ಲ, ಇನ್ನ್ ನಮ್ಗ್ ಹಾಯ್ಗುಳಿಯೇ ಗತಿ’ ಬಚ್ಚಿಬಾಯಿ ಗೊಣಗುಡುತ್ತ ಗಂಡ, ಮಗಳು, ಮೊಮ್ಮಕ್ಕಳಿಗೆ ಕೊಚ್ಚಕ್ಕಿ ಕೂಳು, ಕಾಣಿ ಮೀನಿನ ಸಾರು ಬಡಿಸುತ್ತಿದ್ದಳು. ‘ಇಂದಾರೂ ಉಂಡ್ ಬೇಗ ಮನ್ಕಣ್ಕ್’ ಎಂಬುದು ಅವಳ ಆಲೋಚನೆ. ಜೈಲ್ಗುಟ್ಟಿ ಹೊಯ್ಯುವ ಮಳೆಗೋ ಅಥವಾ ಬಾಗಿಲು ಕಡಿಯಲ್ಲೇ ಇಟ್ಟ ಗೂಡೊಳಗೆ ಹಂಡನಾಯಿ ಸಂದು ಕಡಿಯದೆ ಬೊಗಳುತ್ತಿದ್ದುದಕ್ಕೋ ಕಳೆದೆರಡು ರಾತ್ರಿ ಕಣ್ಣಿಗೆ ನಿದ್ದೆ ಹತ್ತಿರಲಿಲ್ಲ. “ಈ ಕಿಚ್ಚಿಡ್ದ್ ನಾಯಿಗೊಂದ್ ಎಂತ ಆಯಿತೋ ಏನೋ” ಮತ್ತೆ ಹಂಡ ಬೊಬ್ಬಿರಿಯುವುದು ಕೇಳಿ “ಹಚ ಹಚ” ಎನ್ನುತ್ತ ಬರಾಕಿಂದ ಬಾಗಿಲ ಹತ್ತಿರ ಬಂದಳು ಬಚ್ಚಿಬಾಯಿ. “ಇಂತಾ ಮಳ್ಯಂಗೆ, ಈ ಕತ್ಲಂಗೆ ಯಾರ್ ಬಂದಿಪ್ರಪ” ಹೇಳಿಕೊಳ್ಳುತ್ತಿದ್ದ ಬಚ್ಚಿಬಾಯಿಯ ಎದುರು ಫಕ್ಕನೆ ಬಂದು ನಿಂತದ್ದು ಶಾಂತಾಬಾಯಿಯ ಅಕ್ಕನ ಮಗಳು ಲೀಲಾ ಹೆಣ್ಣ್. “ಅಯ್ಯೋ ಲೀಲಾ! ನೀನಾ ಮರೆತೀ. ಒಂದ್ಸಲ ಕುಮ್ಟಿ ಬಿದ್ದಿ ನಾನ್. ಜಾಗ್ಟಿ ಪರಾತ ಕೊಟ್ಟಿದಾಳಾ ಎಂತ ಶಾಂತ? ಈ ನೆರ್ಯಂಗೆ ಎಂತಕ್ ಬಂದೆ ಹೆಣೇ?” ನೀರಿಳಿಯುತ್ತಿದ್ದ ಕೊಡೆಯನ್ನು ಮಡಚಿಟ್ಟು, ಮೊಬೈಲ್ ಬೆಳಕನ್ನು ಆರಿಸಿ ಬಚ್ಚಿಬಾಯಿಯ ಕೈ ಹಿಡಿದು ಎಡಮಗ್ಗುಲಿನ ದನದ ಕೊಟ್ಟಿಗೆಗೆ ಎಳೆದುಕೊಂಡೇ ಹೋದಳು ಲೀಲಾ! “ಹಿರಿಯಬ್ಯಾ ಹೆದರ್ಕಬೇಡಿ ಅಕಾ; ಆರೂ ಒಂದ್ ಗಿರಾಚಾರ ಬಂದಿತೀಗ” ದನಿ ತಗ್ಗಿಸಿ ಲೀಲಾ ಹೇಳುತ್ತಿದ್ದಂತೆ ಬಚ್ಚಿಬಾಯಿಯ ಎದೆ ನಡುಗಿಹೋಯಿತು. ‘ಸಾವಿನ್ ಸುದ್ದಿಯೇ ಇರ್ಕ್, ಯಾರಿಗ್ ಎಂತಾಯ್ತ್ ದೇವ್ರೇ’ ಬಚ್ಚಿಬಾಯಿಯ ಕೈಕಾಲು ತಣ್ಣಗಾಯಿತು. ಆದರೆ ಮುಂದೆ ಲೀಲಾಹೆಣ್ಣು ಗುಟ್ಟಿನಲ್ಲಿ ಹೇಳಿದ ವಿಷಯದಲ್ಲಿ ಅರ್ಧಕ್ಕರ್ಧ ಅರ್ಥವಾಗದಿದ್ದರೂ ಪರಿಣಾಮ ಮಾತ್ರ ಎದೆಗೆ ನೆಟ್ಟ ಚೂರಿಯಾಗಿ ಕಣ್ಣೀರು ದಳದಳನೆ ಉದುರತೊಡಗಿದವು.

****

ದಿನನಿತ್ಯದ ಹಾಗಾಗಿದ್ದರೆ ಎಲ್ಲರಿಗೂ ಊಟ ಬಡಿಸಿ ತಾನೊಂದು ಬಟ್ಟಲಲ್ಲಿ ಅನ್ನ, ಪರಾತ ಹಾಕಿಕೊಂಡು ಉಂಡು ಹಂಡನಿಗೂ, ಬಿಲ್ಲಿಬೆಕ್ಕಿಗೂ ಗಂಜಿ ಹಾಕಿ ತೆಂಗಿನಕಟ್ಟೆಯಲ್ಲಿ  ಪಾತ್ರೆಗಳನ್ನು ತೊಳೆದು ತಂದಿಟ್ಟು ಚಾಪೆ ಬಿಡಿಸಿ ಮಲಗಿಕೊಳ್ಳುತ್ತಿದ್ದಳು ಬಚ್ಚಿಬಾಯಿ. ಆದರೆ ಇವತ್ತು ಅವಳಿಗೆ ಕೂಳು, ನೀರು ಯಾವುದೂ ಬೇಡವಾಗಿತ್ತು. ಮೀವರಿಗೆ ಹೋಗಿ ಬಂದು ನಾಕು ಮಡ್ಲು ಬಿಟ್ಟು ಬೇರೆ ಬಂದೋಬಸ್ತಿಲ್ಲದ ಅಲ್ಲಿನ ಹಿಮಗಾಳಿಗೋ ಅಥವಾ ಒಂದು ಸಸೂತ್ರ ಬಚ್ಚಲುಮನೆಯೂ ಇಲ್ಲದ ತಮ್ಮ ಅವಸ್ಥೆ ನೆನೆದೋ ನಡುಗಿ ಹಸೆ ಬಿಡಿಸಿ ಕತ್ತಲನ್ನು ದಿಟ್ಟಿಸುತ್ತ ಮುರುಟಿಕೊಂಡಿದ್ದಳು. ಅವಳ ಗಂಡ ಕೃಷ್ಣನಾಯ್ಕ ತನ್ನ ಅನುದಿನದ ಕಟ್ಟಳೆಯಂತೆ ಕೆಲಸ ಬಿಟ್ಟು ಬರುವಾಗ ಸರಾಯಿ ಮೋರಿಕೊಂಡು ಬಂದದ್ದರಿಂದಲೋ ಏನೋ ಮೂಗು ಬಾಯಿಯಲ್ಲಿ ಗೊರೆಯುತ್ತಿದ್ದ. ಕಣ್ಣು ಬಿಟ್ಟುಕೊಂಡು ಮಗ್ಗುಲಾದ ಬಚ್ಚಿಬಾಯಿಯ ತಲೆಯೊಳಗೆ ಕಡಲೊಂದು ಉರುಳುರುಳಿ ಮರಳತೊಡಗಿತು.

ಹಿಂದಿನಿಂದ ಗೇಣಿಗೆ ಮಾಡಿಕೊಂಡು ಬಂದ ನಾಲ್ಕು ಮುಡಿ ಗದ್ದೆ, ದಿನನಿತ್ಯದ ಕೂಲಿ ಕೆಲಸ ಇವಿಷ್ಟೇ ಬಚ್ಚಿಬಾಯಿಯ ಕುಟುಂಬಕ್ಕೆ ಆಧಾರ. ಅವಳಿಗೆ ಹುಟ್ಟಿದ್ದು ಮೂರು ಗಂಡು, ಒಂದು ಹೆಣ್ಣು. ಮದಿಯಾಗುವುದೇ ತಡ; ತಮ್ಮ ತಮ್ಮ ಹೆಂಡಿರನ್ನು ಕಟ್ಟಿಕೊಂಡು ಗಂಡುಮಕ್ಕಳು ಬೇರೆ ಸಂಸಾರ ಹೂಡಿ ದಾರಿ ಹಿಡಿದವು. ಕಡೆಯಲ್ಲಿ ಹುಟ್ಟಿದ ಹೆಣ್ಣು ಗುಲಾಬಿ ಮತ್ತವಳ ಎರಡು ಸಣ್ಣ ಮಕ್ಕಳು ಮಾತ್ರ ಈಗ ಬಚ್ಚಿಬಾಯಿಯ ಮನೆಯಲ್ಲೇ ಇದ್ದಾವೆ. ಗುಲಾಬಿಯ ಗಂಡ ಹೋಟ್ಲು ಕೆಲಸಕ್ಕೆಂದು ಬೆಂಗಳೂರು ಸೇರಿಕೊಂಡದ್ದರಿಂದ ಗುಲಾಬಿಹೆಣ್ಣಿಗೆ ಮಾಯಿ ಮನೆಯಲ್ಲಿ ಸರಿಕಟ್ಟಾಗದೆ ಅಬ್ಬೆಯ ಮನೆಯಲ್ಲೇ ಇರಬೇಕಾಗಿದೆ.

ನರಿಗುಡ್ಡೆ ನೂರೋ, ನೂರೈವತ್ತೋ ಮನೆಗಳಿರುವ ಸಣ್ಣ ಹಳ್ಳಿಯೇ ಆದರೂ, ಹೊಂಡಕಂಡಿಯೆದ್ದಿರುವ ಟಾರ್ ರಸ್ತೆಯೊಂದಿದ್ದು ಅದು ಬಸ್ಸಿನ ಮುಖ ಕಂಡಿಲ್ಲವಾದರೂ ಈಗೀಗ ಹುಟ್ಟಿದ ಮಕ್ಕಳೂ ಅಬ್ಬಿದಿಕ್ಕಳ ಮೊಬೈಲನ್ನು ಎರಡೂ ಕೈಯ್ಯಲ್ಲಿ ಆಮರ್ಸಿ ಹಿಡಿದುಕೊಂಡು ಕಣ್ಣು ಹೊಳೆಯಿಸುವುದಂತೂ ಸುಳ್ಳಲ್ಲ. ಮೊಬೈಲಿನ ನೆನಪಿನೊಂದಿಗೇ ಲೀಲಾಹೆಣ್ಣು ಹೇಳಿಹೋದ ಸುದ್ಧಿ ಮತ್ತೊಮ್ಮೆ ಮೈಮೇಲೆ ಎರಗಿದಂತಾಗಿ ಬಚ್ಚಿಬಾಯಿ “ಅಯ್ಯಬ್ಬೇ, ಈ ಜರ್ದ್ ಬೆನ್ನೊಂದ್ ಸುಡುದಂದ್ರೆ ಅಂತಿಂತಾದ್ದಲ್ಲ” ನರಳುತ್ತ ಮಗ್ಗುಲಾದಳು. ನರಿಗುಡ್ಡೆಯ ಹುಲ್ಮಕ್ಕಿಯೆಂದರೆ ಪಂಜುರ್ಲಿ ಗುಡಿಗೆ ಕಳಸವಿಟ್ಟಂತೆ ಎತ್ತರದ ಜಾಗ. ಮೂರು ದಾರಿ ಕೂಡುವ ಜಾಗವೂ ಹೌದು. ಮನೆಮಕ್ಕಳ ಸಣ್ಣ ಶಾಲೆಗೆ, ಸೋಮನಾಯ್ಕನ ಕುಟುಕುಟು ಅಂಗಡಿಗೆ, ಪೇಟೆಗೆ ಎಲ್ಲಿಗೆ ಹೋಗುವುದಾದರೂ ಹುಲ್ಮಕ್ಕಿಯ ಮೇಲೇ ಹೋಗಬೇಕು. ಹಾಗಾಗಿ ಊರಿನ ಕೆಲವು ಹಡೆಗಂಡುಗಳಿಗೆ ಭಾರೀ ಮೆಚ್ಚಿನ ಜಾಗವದು. ದಾರಿ ಬದಿಮೇಲೆ ಕೂತುಕೊಂಡು ಬೀಡಿ ಎಳೆಯುತ್ತ ಹೆಣ್ಣುಗಳಿಗೆ ಹಿಲಾಲ್ ಹಿಡಿಯುದು, ಯಾರಿಗಾದರೂ ಜಗಳ ಹಿಡಿಸಿ ಹಾಕಿ ಚಂದ ನೋಡುವುದು, ಹಡೆ ಮಾತುಗಳನ್ನಾಡುತ್ತ ಬೆಟ್ಟಗುಡ್ಡಗಳು ಮಾರ್ದನಿಸುವಂತೆ ನಗಾಡುವುದು, ಹೊತ್ತು ಮುಳುಗಿದ ಮೇಲೆ ಸರಾಯಿ ಕುಡಿದುಕೊಂಡು ಗಲಾಟೆ ಮಾಡುವುದು ಹೀಗೆ ಅವುಗಳ ಡೌಲು ಒಂದೆರಡಲ್ಲ. ತಮ್ಮ; ಅಂದರೆ ಕುಡುಬಿಯರ ಪೈಕಿಯ ನಾಲ್ಕೈದು ಗಂಡುಗಳೂ ಅಲ್ಲಿ ಹೋಗಿ ಸೇರಿಕೊಂಡಿರುವುದು ಬಚ್ಚಿಬಾಯಿಗಂತಲ್ಲ, ಇಡೀ ಊರಿಗೇ ಗೊತ್ತಿರುವ ವಿಷಯ. ಅದಲ್ಲದೆ ಸೂರಿಭಟ್ಟರ ಮನೆಯ ಎರಡು ಮಾಣಿಗಳು, ಭೋಜ ಪೂಜಾರ್ರ ಮಗ, ಪದ್ದಿ ಹಾಂಡ್ತಿಯ ಗಂಡ್, ಸೀನ ಆಚಾರ್ರ ಮೊಮ್ಮಗ, ರಿತೇಶ್ ಶೆಟ್ಟರ ಅಕ್ಕನ ಮಗ ಎಲ್ಲ ಇದ್ದಾವೆ ಅಲ್ಲಿ. ಇವುಗಳಿಗೆಲ್ಲ ಲೀಡರ್ ಎಂಬವನು ರಾಜುಶೆಟ್ಟರ ಕಿರೀ ಗಂಡು ರಾಕೇಶ ಎಂದು ಲೀಲಾ ಹೇಳಿದ್ದು ನೆನಪಾಗಿ ಬಚ್ಚಿಯ ಮುಖ ಕಹಿಯಾಯಿತು.

ಮೊದಲೊಮ್ಮೆ ಇದೇ ಬಿಲಾಸ್ ಬಿಟ್ಟ ಗಂಡುಗಳು ಗುಲಾಬಿಯನ್ನು ಅಡ್ಡ ಹಾಕಿಕೊಂಡು ಹಡೆಮಾತುಗಳನ್ನು ಆಡಿದ್ದು, ಅವಳು ಬಾಯಿಗೆ ಬಂದದ್ದೆಲ್ಲ ಬಯ್ದು ಕಾಲಲ್ಲಿದ್ದ ಮೆಟ್ಟು ತೋರಿಸಿ ಬಂದದ್ದು ಎಲ್ಲವೂ ಬಚ್ಚಿಬಾಯಿಯ ಕಣ್ಣೆದುರಿಗೆ ಬಂದಿತು. ಲೀಲಾಹೆಣ್ಣು ಗಿರಾಚಾರ ಬಂದಿತ್ ಎನ್ನುತ್ತ ಹಡೆಗಂಡುಗಳ ಸುದ್ಧಿ ತೆಗೆದಾಗ ಪುನಾ ತಮ್ಮ ಪೈಕಿಯ ಯಾವುದೋ ಹೆಣ್ಣಿಗೆ ಏನೋ ಆಗಿರಬೇಕೆಂದು ಹೊಳೆದರೂ ವಿಷಯ ಇಷ್ಟು ಕೈಮೀರಿ ಹೋಗಿ ತನ್ನ ಬುಡಕ್ಕೇ ಬರಬಹುದೆಂದು ಬಚ್ಚಿಬಾಯಿ ಕನಸು ಮನಸಿನಲ್ಲೂ ಗಿರಾಯಿಸಿರಲಿಲ್ಲ. ತನ್ನ ಮಗಳು, ಎರಡು ಮಕ್ಕಳ ಅಬ್ಬೆ ಗುಲಾಬಿ ಚಿಮಣಿ ಬೆಳಕು ಬೆಚ್ಚಿಕೊಂಡು ಮೀವರಿಯಲ್ಲಿ ಸ್ನಾನ ಮಾಡುವಾಗ ತಟ್ಟಿ ಮಡಲಿನ ಎಡಕಿನಲ್ಲಿ ಮೊಬೈಲ್ ಇಟ್ಟುಕೊಂಡು ಹಿಕ್ಮತ್ತ್ ಮಾಡಿ ಪಟ, ವೀಡಿಯೋ ಎಲ್ಲ ತೆಕ್ಕೊಂಡಿದಾವಂತೆ ಆ  ಹಡೆಗಂಡುಗಳು! ಅಷ್ಟೇ ಅಲ್ಲದೆ ಊರುಮನೆಯ ಗಂಡಸರ ಮೊಬೈಲಿಗೆ ಕಳಿಸಿಕೊಟ್ಟಿದ್ದಾವಂತೆ. ‘ಇದೆಲ್ಲ ಎಂತದ್’ ಎಂಬಂತೆ ಅರ್ಥವಾಗದೆ ದಿಟ್ಟಿಸುತ್ತಿದ್ದ ಬಚ್ಚಿಬಾಯಿಗೆ ಲೀಲಾಹೆಣ್ಣು ತನ್ನ ಕಾಲೇಜಿನ ದೋಸ್ತಿ ಜೆಸಿಂತಾ ತಿಳಿಸಿದ್ದೆಲ್ಲವನ್ನೂ ಅರ್ಥವಾಗುವಂತೆ ಹೇಳಿದಾಗ ಬಚ್ಚಿಯ ಮೈಮೇಲೆ ಬಿಸಿನೀರು ಚೆಲ್ಲಿದಂತಾಗಿ ಹಟ್ಟಿಹಣಿಯ ಕಂಬವನ್ನು ಹಿಡಿದುಕೊಂಡು ಕುಸಿದಿದ್ದಳು. “ಅಯ್ಯೋ ಹಾಯ್ಗುಳಿಯೇ, ನಮ್ಮ್ ಕೈ ಬಿಟ್ಯಾ ದೇವ್ರೇ” ಎಂದೆಲ್ಲ ಗೋಳಾಡಿದ ಬಚ್ಚಿಯ ಬಾಯಿಗೆ ಕೈ ಅಡ್ಡ ಹಿಡಿದು ಮನೆಯಲ್ಲಿ ಯಾರಿಗೂ ಗೊತ್ತಾಗುವುದು ಬೇಡವೆಂದು ತಾಕೀತು ಮಾಡಿದ ಲೀಲಾಹೆಣ್ಣು “ಹಿರಿಯಬ್ಯಾ, ಎಂತಾರು ಮಾಡ್ವ. ನಾನ್ ಸಂಗದವ್ರಿಗ್ ಹೇಳಿದೆ. ಬೆಳ್ಗಾ ಮುಂಚೆ ಬತ್ತೊ ನಾವೆಲ್ಲ. ಈಗ ಮನಿಕಣಿ, ಜಾಗ್ರತಿ” ಎಂದು ಧೈರ್ಯ ಹೇಳಿ ಧೋಗುಟ್ಟಿ ಸುರಿವ ಮಳೆಯಲ್ಲಿ ಮರೆಯಾಯಿತು.

****

ದೇವಿಬಾಯಿಯ ನೇತೃತ್ವದಲ್ಲಿ ಎಂಟ್ಹತ್ತು ಜನ ಕುಡುಬಿ ಹೆಂಗಸರು ಕೂಡಿ ಮಾಡಿಕೊಂಡ ಸಂಘವೊಂದಿತ್ತು. ವಾರಕ್ಕೆ ಇನ್ನೂರೈವತ್ತು ರೂಪಾಯಿಯ ಪ್ರಕಾರ ಕಟ್ಟುವ, ದುಡ್ಡಿನ ಅರ್ಜೆಂಟ್ ಇರುವವರಿಗೆ ಸಾಲ ಕೊಡುವ, ಅವರವರೊಳಗೇ ಬಾಯಿಮಾತಿನಲ್ಲಿ ನಡೆಯುತ್ತಿದ್ದ ಸಂಘವದು. ಈ ಸಂಘವನ್ನು ಪ್ರಾರಂಭಿಸಿದ್ದು, ಸಸೂತ್ರವಾಗಿ ನಡೆಸಿಕೊಂಡು ಬರುತ್ತಿರುವುದು ಎಲ್ಲವೂ ದೇವಿಬಾಯಿಯೇ ಆದದ್ದರಿಂದ ದೇವಿಬಾಯಿ ಸಂಘ, ದೇವಿ ಸಂಘ ಎಂದೇ ಹೆಸರು ಬಿದ್ದಿತ್ತು. ಬರುಬರುತ್ತ ಇನ್ನೂ ಐದು ಜನರು ತಾವಾಗಿ ಬಂದು ಸಂಘವನ್ನು ಸೇರಿಕೊಂಡು ಸದಸ್ಯರ ಸಂಖ್ಯೆ ಹದಿನೈದಕ್ಕೆ ಏರಿತ್ತು. ಆಶಾಕಾರ್ಯಕರ್ತೆ ಶಾಂತಾಬಾಯಿ, ಬಿಸಿಯೂಟದ ಅಡುಗೆ ಕೆಲಸದ ಕಾಳಿಬಾಯಿ, ಅಂಗನವಾಡಿ ಹೆಲ್ಪರ್ ದುರ್ಗಾಬಾಯಿ, ಸಣ್ಣಪುಟ್ಟ ಟೈಲರಿಂಗ್ ಕೆಲಸ ಮಾಡುವ ಸೀತಾಬಾಯಿ ಮೊದಲಾದವರೆಲ್ಲ ಸಂಘದಲ್ಲಿದ್ದರು. ದೇವಿ ಹೆಣ್ಣಂತೂ ಭಾರೀ ಚುರುಕು. ಸ್ಟೇಜ್ ಹತ್ತಿ ಮೈಕದಲ್ಲಿ ಮಾತಾಡುವುದರಿಂದ ಹಿಡಿದು ಬ್ಯಾಂಕಿನ ವ್ಯಾವಾರ ಮಾಡಿಕೊಂಡು ಬರುವುದರವರೆಗೆ ಗಟ್ಟಿಗಿತ್ತಿ…. 

ಬೆಳಿಗ್ಗೆ ಹೊತ್ತು ಏರಿ, ತಾನು ಮಕ್ಕಳನ್ನು ಶಾಲೆಗೆ ಕಳಿಸಿ ಬಂದರೂ ಎದ್ದೇಳದೆ ಮುಚ್ಚಿಹಾಕಿಕೊಂಡು ಮಲಗಿದ್ದ ಅಬ್ಬೆಯನ್ನು ಕರೆದು, “ನಂಗ್ ಜ್ವರ ಹೆಣೇ” ಎಂಬ ಉತ್ತರ ಪಡೆದು ತಾನೇ ಸೊಪ್ಪು ತರಲು ಹೊರಟುಹೋದಳು ಗುಲಾಬಿ.

“ಬಚ್ಯಾ ಎಂತ ಮಾಡ್ತೇ” ಸಂಘದ ಹೆಂಗಸರು ಕರೆಯುತ್ತ ಮನೆಯೊಳಗೆ ಬಂದಾಗಲೂ ಬಚ್ಚಿಬಾಯಿ ಹಸೆ ಬಿಟ್ಟು ಎದ್ದಿರಲಿಲ್ಲ. ದೇವಿಬಾಯಿ ಸಮಾಧಾನದ ಮಾತುಗಳನ್ನು ಹೇಳಿ, ತಾನೇ ಚಾಕಣ್ಣು ಮಾಡಿ ಎಲ್ಲರಿಗೂ ತಂದುಕೊಟ್ಟಳು. “ಅಲ್ಲ, ನಮ್ಮ್ ನರಿಗುಡ್ಡಿಗೂ ಬಂತಾ ಇಂಥಾ ಅನಾಚಾರ”, “ಎಂಥಾ ಹಪ್ಪ್ ಗಂಡ್‌ಗಳ್, ಇದೆಲ್ಲ ಮಾಡೂ ಬದ್ಲಿಗೆ ಸತ್ರ್ ಆತಿಲ್ಯಾ ಅಂವ್”, “ಈಗ ಗುಲಾಬಿ ಹೆಣ್ಣಿಗೆ ಇದೆಲ್ಲ ಗುತ್ತಾರೆ ಕತಿ ಎಂತ” ಮಾತುಕತೆ ನಡೆಯುತ್ತಿದ್ದಾಗ ಬಚ್ಚಿ ಬಾಯಿ ಅಳಲು ಶುರು ಮಾಡಿದಳು. “ಗುಲಾಬಿ ಹೆಣ್ ಕೆರಿ, ಬಾಮಿ ಕಂಡ್ಕಂಡ್ರೆ ನಾನೆಂತ ಮಾಡೂದಕ್ನೇ” ಅವಳ ಕರುಳಿನ ಬೆಂಕಿಯನ್ನು ನಂದಿಸಲು ಸಂಘದ ಹೆಂಗಸರು ಪ್ರಯತ್ನಪಟ್ಟರು. ಕಾಲೇಜಿಗೆ ರಜೆ ಮಾಡಿ ಬಂದಿದ್ದ ಲೀಲಾ “ಸಮಾ ನಾಕ್ ನಾಕ್ ಬಿಡ್ಕ್ ಆ ಬಿಲಾಸ್‌ಬಿಟ್ಟ್ ಗಂಡ್‌ಗಳಿಗೆ ” ಸಿಡಿಗುಟ್ಟಿದಳು. ಇಷ್ಟು ಹೊತ್ತಿಗೆ ಹೊರಗೆ ಅಂಗಳದಲ್ಲಿ ಸೊಪ್ಪಿನ ಹೊರೆ ಹಾಕಿದ ಸದ್ದು ಕೇಳಿತು. ಸೀರೆಯಿಂದ ಇಳಿಯುತ್ತಿದ್ದ ನೀರನ್ನೂ ಲೆಕ್ಕಿಸದೆ ಓಡಿಬಂದು ಅಬ್ಬೆಗೆ ತೆಕ್ಕೆ ಹಾಕಿಕೊಂಡು ಗೋಳಾಡತೊಡಗಿದಳು ಗುಲಾಬಿ. “ಅಬ್ಯಾ, ನಾ ಸಾಯ್ತೆ ಅಬ್ಯಾ…. ನನ್ನ್ ಮಕ್ಳನ್ನ್ ನೀನೇ ಕಂಡ್ಕೋ, ನಾನಿನ್ನ್ ಬದುಕೂದಿಲ್ಲೆ” ಗುಲಾಬಿಯನ್ನು ಸಮಾಧಾನಿಸಿದಾಗ ತಿಳಿದ ವಿಷಯವೆಂದರೆ ಸಂಘದವರೇ ಆದ ನೇತ್ರಾಬಾಯಿ, ಕಾಂತಿಬಾಯಿ ಮತ್ತು ಸುಗುಣಬಾಯಿ ದಾರಿ ಮೇಲೆ ಅಡ್ಡ ಹಾಕಿಕೊಂಡು ಮೊಬೈಲಿನಲ್ಲಿದ್ದ ಪಟಗಳನ್ನು ತೋರಿಸಿ “ಗುಲಾಬ್ಯಾ ಹೇಸಿಗಿ ಆಯ್ತಲೇ ಮರಾಯ್ತಿ ನಿನ್ನ್ ಯಾಪಾರ”, “ಆ ಹಡಿಗಂಡ್‌ಗಳ್ ಹೀಂಗೆಲ್ಲ ಮಾಡದ್ದಾರೂ ಹ್ಯಾಂಗೆ? ನಿಂಗ್ ದಾತಿರ್ಲಿಲ್ಯಾ ಆಗಳಿಕ್ಕೆ? ಅದೆಲ್ಲ ಹೋಯ್ಲಿ ಹೆಣೇ, ನೀನಿನ್ನ್ ಬದುಕುದಾರೂ ಹ್ಯಾಂಗೆ? ನಿನ್ ಗಂಡಂಗ್ ಗೊತ್ತಾರೆ ಬೆಚ್ತ್ನಾ ನಿನ್ನ?” “ಎಂತಾ ಕೆಲ್ಸ ಆಯ್ತಲೇ ಗುಲಾಬಿ, ನನ್ನ್ ಪಟು ಎಲ್ಲಾರೂ ಹೀಂಗೆಲ್ಲ ಚೂರ್ ಸೂ ಅಂದ್ ಬಂದಿರೂ ಸಾಕಿತ್, ನಾನ್ ಹಗ್ಗ ತಕಂತಿದ್ದಿ” ಎಂದೆಲ್ಲ ಹೇಳಿದರಂತೆ. ಸಂಘದ ಹೆಂಗಸರಿಗೆ ಅಂದಾಜಾಯಿತು. ಮುಂಚಿನ ದಿನ ಶಾಂತಾಬಾಯಿ ವಿಷಯವೆಲ್ಲ ತಿಳಿಸಿ ಕರೆದು ಬಂದಿದ್ದರೂ ಕಾಂತಿ, ನೇತ್ರಾ, ಸುಗುಣಾ ಯಾರೂ ಬರದಿದ್ದಾಗಲೇ ಸಂಶಯ ಹುಟ್ಟಿತ್ತು. “ಆ ಸುಟ್ಟ್ ಹೆಂಗಸ್ರ್ ಹೇಳ್ತೋ ಅಂದ್ ನೀನ್ ಹೆದ್ರ್ಕಂಬ್ದಾ ಗುಲಾಬ್ಯಾ… ನಾವೆಲ್ಲ ಜೀವ್ದಂಗಿತ್ತ್, ಸತ್ತ ಹ್ವಾಯಿಲ್ಲೆ.. ಗೊತಾಯ್ತಾ” ಸೀತಾಬಾಯಿ ಹೇಳಿದಳು.

ಬೆಳಿಗ್ಗೆ ಕಪ್ಪಿನ ಕೂಡ ಎದ್ದು ಸಂಘದ ಹೆಂಗಸರು ರಾಜುಶೆಟ್ಟರ ಮನೆಗೆ ಹೊರಟರು. ರಾಜುಶೆಟ್ರ ಅಪ್ಪಯ್ಯ ಸುಬ್ಬು ಶೆಟ್ಟರು ಆ ಊರಿನ ದೊಡ್ಡ ಜನ, ಬೇಕಾದಷ್ಟು ಆಸ್ತಿಪಾಸ್ತಿ ಹೊಂದಿದವರು. ಮೊದಲಿನ ಕಾಲದಲ್ಲಂತಲ್ಲ, ಈಗಲೂ ನರಿಗುಡ್ಡೆ ಎಂಬ ಆ ಊರಿನ ಮುಖ್ಯಸ್ಥರಾಗಿರುವವರು. ಆದರೆ ಸುಬ್ಬುಶೆಟ್ಟರು ಹಾಸಿಗೆ ಹಿಡಿದಿರುವುದರಿಂದ ಈಗ ಮಗ ರಾಜುಶೆಟ್ರದ್ದೇ ಕಾರುಬಾರು. ಸಂಘದ ಹೆಂಗಸರು ಶೆಟ್ಟರ ಮನೆಯ ದೊಡ್ಡ ಬಾಗಿಲು ದಾಟಿ ಒಳ ಅಂಗಳಕ್ಕೆ ಕಾಲಿರಿಸಿದೊಡನೆಯೇ ಹೊರಬಂದ ರಾಜುಶೆಟ್ಟರ ಹೆಂಡತಿ ವಿಮಲ ಶೆಡ್ತೇರು ”ಇವ್ರ್ ತಿಂಡಿ ತಿಂತಾ ಇದ್ರ್. ಬತ್ರ್ ಈಗಾಳ್, ಕೂಕಣಿ” ಎಂದು ಹೇಳಿ ಹೋದರು. ಒಂದು ಕಾಲದಲ್ಲಿ ಸುಬ್ರುಶೆಟ್ರ ಆಳ್ವಿಕೆ ನಡೆಯುತ್ತಿದ್ದಾಗ ಬಚ್ಚಿಬಾಯಿ ಇದೇ ಮನೆಗೆ ಕೆಲಸಕ್ಕೆ ಬರುತ್ತಿದ್ದಳು. ಸುಬ್ಬುಶೆಟ್ರು  ಒಳ್ಳೆ ಜನ. ದಯ ದಾಕ್ಷಿಣ್ಯ ಜಾಸ್ತಿ. ಎರಡು ಸೇರು ಕೊಚ್ಚು ಅಳೆದು ಎರಡು ಮುಷ್ಟಿ ಹೆಚ್ಚಿಗೆ ಹಾಕುವಂತಹ ಧಾರಾಳಿ. ಆದರೆ ಮಗ ರಾಜುಶೆಟ್ರು ಹಾಗಲ್ಲ. ಧಾರಾಳತನವೊಂದು ಅಪ್ಪನಿಂದ ಬಳುವಳಿಯಾಗಿ ಬಂದದ್ದು ಹೌದೆನ್ನುವುದು ಬಿಟ್ಟರೆ ಇನ್ನಿತರ ವಿಷಯಗಳಲ್ಲಿ ಪಡಪೋಶಿ. ಸುಬ್ಬು ಶೆಟ್ರಿಗೆ ಪಾರ್ಶ್ವವಾಯು ಬಡಿದು ಹಾಸಿಗೆ ಹಿಡಿದು ಮಗ ರಾಜುಶೆಟ್ರ ಪಾರುಪತ್ಯ ಸುರುವಾಗಿದ್ದ ಸಮಯದಲ್ಲಿ ಒಂದಿನ ಬಚ್ಚಿ ಬಾಯಿ ತೋಟದಲ್ಲಿ ಅಡಿಕೆ ಹೆಕ್ಕುವಾಗ ಹಿಂದಿನಿಂದ ಬಂದ ರಾಜುಶೆಟ್ರು ಮೈ ಕೈ ಮುಟ್ಟಿದಾಗ ದಿಗಿಲು ಹಾರಿ ಅಬ್ಬರಿಸಿ ಅಲ್ಲಿಂದ ಒಂದೇ ಪೆಟ್ಟಿಗೆ ಮನೆಗೆ ಓಡಿದ್ದಳು. ಆಗ ಜೀವಂತವಿದ್ದ ತನ್ನ ಮಾವ ದ್ಯಾವನಾಯ್ಕನ ಮುಂದೆ ಗೋಳಾಡಿ ಇನ್ನು ತಾನು ರಾಜುಶೆಟ್ರ ಮನೆಯ ಕೆಲಸಕ್ಕೆ ಹೋಗುವುದಿಲ್ಲವೆಂದು ಪ್ರಮಾಣ ಮಾಡಿದ್ದಳು. ಈ ಸಂಗತಿಯೆಲ್ಲ ಉಪ್ಪು, ಖಾರ ಮಸಾಲೆಯೊಂದಿಗೆ ನರಿಗುಡ್ಡೆಯೊಳಗೆ ಸಂಚರಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ರಾಜುಶೆಟ್ಟರು ಡರ್ರನೆ ತೇಗುತ್ತಾ ಜಗುಲಿಗೆ ಬಂದು “ಏನ್ ದೇವಿ ಸಂಗದವ್ರ್ ಸವಾರಿ ಇತ್ಲಾಯ್ ಬಂದೀತಲೇ, ಓ ಬಚ್ಚಿ ಬಾಯೂ ಇದ್ದಾಳ್. ಕಡಿಗೂ ಬಚ್ಚಿಬಾಯಿ ನಮ್ಮನಿ ಮೆಟ್ಕಲ್ಲ್ ಹತ್ತಿಯೇ ಬಿಟ್ಟಾಳ್‌ ಅಂದಾಯ್ತ್” ಎಂದು ಜಾಪಿನಲ್ಲಿ ಹೇಳಿ ಅಟ್ಟಹಾಸ ಮಾಡುವುದಕ್ಕೂ ಆ ಕಡೆಯಿಂದ ಸೂರಿಭಟ್ರ ಸರ್ಕೀಟ್ ಬರುವುದಕ್ಕೂ ಸರಿಯಾಯಿತು. ಫಕ್ಕನೆ ಇಬ್ಬರೂ ‘ಆಫೀಸ್ ಕೋಣೆ’ಗೆ ಹೋಗಿ ಬಾಗಿಲು ಹಾಕಿಕೊಂಡರು. ಸುಮಾರು ಹೊತ್ತು ಮಾತುಕತೆ ಮುಗಿಸಿ ಅವಸರದಿಂದೆಂಬಂತೆ ಸೂರಿಭಟ್ರು ಮನೆಯ ಕಡೆಗೆ ಹೊರಟುಹೋದರು. ಇದ್ಯಾವುದನ್ನೂ ಗಮನಿಸದಂತೆ ಸ್ಥಿತಪ್ರಜ್ಞಳಾಗಿ ಕೂತಿದ್ದ ದೇವಿಬಾಯಿ ತಾವು ಬಂದ ವಿಷಯವನ್ನು ರಾಜುಶೆಟ್ಟರಿಗೆ ಹೇಳಿದಳು. ಆರಾಮ ಕುರ್ಚಿಯಲ್ಲಿ ಒರಗಿ ತಮ್ಮ ಪಾಡಿಗೆ ಕಿವಿಯ ಕುಗ್ಗೆ ತೆಗೆದು ಪಂಚೆಗೆ ಒರೆಸುತ್ತಾ ಎಲ್ಲವನ್ನೂ ಕೇಳಿಸಿಕೊಂಡ ಶೆಟ್ಟರು “ ಆ ಪಟ ಎಲ್ಲ ಎಲ್ಲಿತ್ತ್, ಕೊಡಿನಿ ಕಾಂಬ” ಎಂದು ಗಂಭೀರವಾಗಿ ಕೇಳಿದರು. ಲೀಲಾ ತನ್ನ ಮೊಬೈಲ್ ಕೊಟ್ಟಾಗ ಆಸಕ್ತಿಯಿಂದ ತಿರುಗಿಸಿ ಮುರುಗಿಸಿ ಪ್ರತಿ ಪಟವನ್ನೂ ಶೆಟ್ಟರು ವೀಕ್ಷಿಸತೊಡಗಿದಾಗ ಮಾತ್ರ ಸಂಘದ ಹೆಂಗಸರು ತಲೆ ಅಡಿಹಾಕಿ ಕುಳಿತರು. ಲೀಲಾಹೆಣ್ಣು  ಮುಖ ಕೆಂಪಗೆ ಮಾಡಿಕೊಂಡು ಉರಿಯುತ್ತಿತ್ತು. ಗುಲಾಬಿ, ಬಾಯಿಗೆ ಸೆರಗು ತುಂಬಿಕೊಂಡು ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದಳು. ಲೀಲಾ ಥಟ್ಟನೆ “ಆ ಗಂಡ್‌ಗಳ ಗುಂಪಿಗೆ ನಿಮ್ಮನಿ ರಾಕೇಶನೇ ಲೀಡರ್. ಕಾಲೇಜಿಗೆ ಹೋಯಿಬಪ್ಪ ಹೆಣ್ಗಳಿಗೂ ದಾರಿಮ್ಯಾಲೆ ರಗ್ಳಿ ಕೊಡ್ತ ಅಂವ. ಸೂರಿಭಟ್ರ್ ಮಗನೂ ಹೀಂಗೇ” ಎಂದಳು.

ಮೊದಲೇ ಕೆಂಪಗಿದ್ದ ಕಣ್ಣುಗಳನ್ನು ಮತ್ತಷ್ಟು ಕೆಂಪು ಮಾಡಿಕೊಂಡ ಶೆಟ್ಟರು “ನೀನ್ಯಾರಾ, ಲೀಲ ಅಲ್ದನಾ? ಅದೇ ಅಬ್ಬಿ ಸತ್ತ್ ಹೆಣ್ಣ್, ಶಾಂತಾಬಾಯಿಯ ಅಕ್ಕನ್ ಮಗ್ಳ್ ಅಲ್ದಾ ನೀನ್?” ಎನ್ನುತ್ತ ವಾರೆ ನಕ್ಕರು. ಶಾಂತಾಬಾಯಿಯ ಅಕ್ಕ ಅಕ್ಕುಬಾಯಿ ನೇಣು ಹಾಕಿಕೊಂಡು ಸತ್ತದ್ದಕ್ಕೆ ಈ ಶೆಟ್ಟರೇ ಕಾರಣ ಎಂಬ ಗುಸುಗುಸು ಸುದ್ದಿ ಆ ಕಾಲದಲ್ಲಿ ಎಲ್ಲರ ಕಿವಿಗೂ ಬಿದ್ದಿತ್ತು. ತುಸುಹೊತ್ತಿನ ಗಾಢ ಮೌನದ ನಂತರ ಬಚ್ಚಿಬಾಯಿ “ಶೆಟ್ರೇ ನಿಮ್ ಹತ್ರ ಕೈ ಮುಗ್ದ್ ಕೇಂಬ್ದ್ ಇಷ್ಟೇ; ಹ್ಯಾಂಗಾರೂ ಮಾಡಿ ನನ್ನ ಹೆಣ್ಣಿನ್ ಉಳ್ಸಿಕೊಡಿ ಒಡೇರೇ. ನಿಮ್ ದಮ್ಮಯ್ಯ ಅಂತಿ” ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಸೆರಗಿನಲ್ಲಿ ಒರೆಸಿಕೊಳ್ಳತೊಡಗಿದಳು. “ಹಾ ಆಯ್ತ್, ಎಂತ ಅಂದ್ ಕಾಂತೆ ನಾನ್. ನಮ್ಮನ್ಯಂಗ್ ಕೂಕಂಡ್ ನೀವೆಲ್ಲ ಮರ್ಕೂದ್ ಬ್ಯಾಡ. ಮನಿಗ್ ಹೋಯ್ನಿ ಈಗ” ಎಂದವರೇ ಶೆಟ್ಟರು ಮಾತು ಮುಗಿಯಿತೆಂಬಂತೆ  ಎದ್ದುನಿಂತರು. ಪರಿಸ್ಥಿತಿಯ ತೀವ್ರತೆಗೆ ದಿಗ್ಭ್ರಮೆಗೊಂಡಂತಿದ್ದ ಸಂಘದ ಹೆಂಗಸರು ಮನೆಕಡೆ ಮುಖ ಮಾಡಿದಾಗ ಹಿಂದಿನ ಬಾಗಿಲಿನಿಂದ ಕರೆದ ವಿಮಲ ಶೆಡ್ತೇರು ಹಾಲು ಹಾಕಿದ ಬಿಸಿ ಬಿಸಿ ಚಾ ಕೊಟ್ಟು “ಎಲ್ಲ ಸಮ ಆತ್ ಹೆಂಗಸ್ರೇ, ತಲಿಬಿಸಿ ಮಾಡ್ಕಬೇಡಿ…ಇಷ್ಟಲ್ದೇ ಇನ್ನ್ ಎಂತ ಹೇಳೂಕೂ ನಂಗ್ ಬಾಯಿ ಬತ್ತಿಲ್ಲೆ. ನಮ್ಮನ್ಯಂಗೆ ನಾನೊಬ್ಳ್ ಇದ್ದ್ ಲೆಕ್ಕವೂ ಅಲ್ಲ, ಸತ್ತ್ ಲೆಕ್ಕವೂ ಅಲ್ಲ. ನಿಮ್ಗಿದೆಲ್ಲ ಗೊತ್ತಿಪ್ದೇ ಅಲ್ದ ” ಎನ್ನುತ್ತ  ಕಣ್ಣೊರೆಸಿಕೊಂಡಾಗ  “ನೀವೆಂತಕ್ ಮರ್ಕುದ್ ಶೆಡ್ತೇರೆ. ಯಾವ್ದಕ್ಕೂ ನಮ್ಮ್ ಗಿರಾಚಾರು ಸರಿಯಿಲ್ಲೆ ಅಷ್ಟೇ.  ನಾವಿನ್ನ್ ಬತ್ತೋ, ಒಳ್ಗ್ ಹೋಯ್ನಿ, ಶೆಟ್ರ್ ಕಾಂಬ್ಕಿದ್ರ್ ಕಡಿಕೆ” ಎನ್ನುತ್ತ ಅಲ್ಲಿಂದ ಹೊರಟರು.

****

ಆವತ್ತು ರಾತ್ರಿ ಗುಲಾಬಿ ಹೆಣ್ಣಿಗೆ ಕೆಂಡದಂಥಾ ಜ್ವರ. ಚಳಿಗೆ ನಡುಗುತ್ತಾ ಬಾಯಿಗೆ ಬಂದದ್ದನ್ನೆಲ್ಲ ಕನವರಿಸುತ್ತಿತ್ತು. ಮಳೆಯಂತೂ ಯಾರದೋ ಮೇಲಿನ ಸಿಟ್ಟಿನಿಂದೆಂಬಂತೆ ಭೋರ್ಗುಡುತ್ತಿತ್ತು. “ಕಟ್ಟಿನ್ಮಕ್ಕಿ ಭೂತವೇ, ನೀನೇ ಕಂಡ್ಕೋ ದೇವ್ರೇ” ಎಂದು ಅಡ್ಡಬಿದ್ದು ಕಾಣಿಕೆ ಸುಳಿದಿಟ್ಟ ಬಚ್ಚಿಬಾಯಿ ನೆನಪಿಗೆ ಬಂದ ದೈವ ದೇವರುಗಳಿಗೆಲ್ಲ ಹರಕೆ ಹೇಳಿಕೊಂಡಳು. ಒಳ್ಳೆಮೆಣಸಿನ ಕಷಾಯ ಮಾಡಿ ಗುಲಾಬಿಗೆ ಕುಡಿಸಿದಳು. ನಡೂರಾತ್ರಿಯಾಗುವಾಗ ಸುಮಾರು ವರ್ಷಗಳ ಹಿಂದೆ ತೀರಿಹೋದ ಬಚ್ಚಿ ಬಾಯಿಯ ಕಿರೀ ತಂಗಿ ಪುಷ್ಪಬಾಯಿಯ ಜಕ್ಣಿ ಗುಲಾಬಿಯ ಮೈಮೇಲೆ ಬಂದಿತು. “ನನ್ನ್ ಹೆಣ್ಣಿಗೆ ಉಪದ್ರ ಕೊಡುವವ್ರನ್ನ ನಾನ್ ಕಂಡ್ಕಂತಿ, ಬಿಡೂದಿಲ್ಲೆ” ಎಂದು ಬೊಬ್ಬೆ ಹೊಡೆದು ಬಚ್ಚಿಬಾಯಿ ನೀರು ಕೊಟ್ಟ ಮೇಲೆ ಜಕ್ಣಿ ಹಿರಿದು ಹೋದಾಗ ಆಯಾಸಗೊಂಡ ಗುಲಾಬಿ ಅಬ್ಬೆಯ ತೊಡೆಯ ಮೇಲೇ ಮಲಗಿಬಿಟ್ಟಳು. ಸಣ್ಣ ಮಗುವಿನಂತೆ ಅವಳನ್ನು ತಟ್ಟುತ್ತಾ ರಾತ್ರಿಯಿಡೀ ಜಾಗರಣೆ ಮಾಡಿದಳು ಬಚ್ಚಿ. ಹಂಡ ಕತ್ತಲಲ್ಲಿ ಏನನ್ನೋ ಕಂಡಂತೆ ಹಾರಿ ಹಾರಿ ಕೂಗುತ್ತಿತ್ತು.

ಮರು ಬೆಳಿಗ್ಗೆ ಲೀಲಾ ಹೆಣ್ಣು ತಂದ ಸುದ್ದಿಯೆಂದರೆ ಮತ್ತೂ ಮತ್ತೂ ಯಾರ್ಯಾರ ಮೊಬೈಲಿಗೋ ಪಟಗಳನ್ನು ಕಳಿಸುತ್ತಲೇ ಇವೆಯಂತೆ ಆ ಹಪ್ಪಿಡಿದ ಗಂಡುಗಳು; ಅದಲ್ಲದೆ ನೇತ್ರಾಬಾಯಿ, ಕಾಂತಾಬಾಯಿ ಕೂಡಾ ಆ ಗಂಡುಗಳ ಪಾರ್ಟಿಗೆ ಸೇರಿಕೊಂಡು ಅವರೂ ಪಟಗಳನ್ನು ಕಳಿಸಿಕೊಡುತ್ತಿದ್ದಾರಂತೆ! “ಬೆನ್ನಿಗೆ ಚೂರಿ ಹಾಕೂದಂದ್ರೆ ಇದೇ. ಅಲ, ಈ  ಹೆಣ್ಗಳಿಗೆ ಎಂತಾ ದುರ್ಬುದ್ದಿ”  ದೇವಿಬಾಯಿ ನುಡಿದು, ಪೋಲಿಸ್ ಸ್ಟೇಶನ್ನಿಗೆ ಹೋಗುವುದೆಂಬ ತನ್ನ ನಿರ್ಧಾರವನ್ನು ಪ್ರಕಟಿಸಿದಳು. ಅವಳ ಮಾತಿನಂತೆ ಎಲ್ಲರೂ  ಸ್ಟೇಷನ್ನಿಗೆ ಹೋದರೆ, ಅಲ್ಲಾಗಲೇ ಸಾಹೇಬರಿಗೆ ವಿಷಯವೆಲ್ಲಾ ತಿಳಿದಂತಿತ್ತು! “ಓ ಕುಡ್ಬೇರ್ರ್ ಕೇರಿಯೇ ಬಂದ ಹಾಗಿದೆ” ಎಂದು ನಸುನಕ್ಕರು! ಅಲ್ಲಿದ್ದ ಪೋಲೀಸರು ಮೊಬೈಲ್ ತೆಗೆದುಕೊಂಡು ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತಾ ಪಟಗಳನ್ನು ಕಂಡೂ ಕಂಡೂ ಇಟ್ಟರು! ಕಡೆಗೆ ಸಾಹೇಬರು “ಕಂಪ್ಲೆಂಟು, ಕೇಸು, ಕೋರ್ಟು ಕಚೇರಿ ಅಂತ ಈ ಹೇಸಿಗೆ ಪಟಗಳನ್ನು ಎಲ್ಲರಿಗೂ ತೋರಿಸುತ್ತ ಏಳೆಂಟು ವರ್ಷ ಅಲೆಯಬೇಕಾಗುತ್ತದೆ. ಅದಕ್ಕೆಲ್ಲ ಕಂಡಾಪಟ್ಟೆ ದುಡ್ಡು ಬೇಕು. ಅದಲ್ಲದೆ ನಿಮ್ಮ ಹೆಣ್ಣಿನ ಮರ್ಯಾದೆಯೇ ಹೋಗುತ್ತದೆ. ಇದೆಲ್ಲದರ ಬದಲು ಸುಮ್ಮನೆ ಮನೆಗೆ ಹೊರಡಿ, ಆ ಹುಡುಗರನ್ನು ಕರೆಸಿ ನಾನೇ ನೋಡಿಕೊಳ್ಳುತ್ತೇನೆ; ಇದರ ಮೇಲೆ ನಿಮ್ಮಿಷ್ಟ” ಎಂದರು. ಗುಲಾಬಿ ಹೆಣ್ಣಂತೂ “ಎಂತದೂ ಬ್ಯಾಡ, ಮನಿಗ್ ಹ್ವಾಪ” ಎಂದು ಏಂಕಿ ಏಂಕಿ ಅಳಲು ಶುರುಮಾಡಿತು. ಏನೊಂದೂ ದಾರಿ ಕಾಣದ ಸಂಘದ ಹೆಂಗಸರು ಮೌನವಾಗಿ ಮನೆಗೆ ಮರಳಿದರು.

ಯಾವ ಹೊಸ ಬೆಳವಣಿಗೆಯೂ ಇಲ್ಲದೆ ಆರೇಳು ದಿನಗಳೇ ಕಳೆದುಹೋದಾಗ ಸಮಾಧಾನವೆನಿಸಿತು. ಬಹುಶಃ ಪೋಲೀಸರ ಪೆಟ್ಟಿಗೆ ಹಡೆಗಂಡುಗಳು ಹೆದರಿರಬಹುದೆಂದು ಎಲ್ಲರೂ ಭಾವಿಸಿದರು. ಇಷ್ಟಾಗುವಾಗ ಮತ್ತೆ ಹದ್ದಿನಂತೆ ಮೇಲೆರಗಿ ಬಂದ ಸುದ್ದಿಯೆಂದರೆ ಇನ್ನೂ ಮದುವೆಯಾಗದ, ಕಾಲೇಜಿಗೆ ಹೋಗುವ ಲೀಲಾಹೆಣ್ಣಿನ ಇಂತಹ ಪಟಗಳನ್ನು ಈಗ ಕಳಿಸುತ್ತಿವೆಯಂತೆ! ಅಬ್ಬೆಯನ್ನು ಕಳೆದುಕೊಂಡ ಪಾಪದ ಹೆಣ್ಣು. “ಏನ್ ಹಟ ಸಾದ್ನಿ ಹಂಗರೆ ಈ ನಾಯಿಗ್ ಹುಟ್ಟದ್ ಗಂಡ್ಗಳದ್ಧ್. ಇಷ್ಟೆಲ್ಲ ಆರ್ ಮೇಲೂ ಮತ್ತ್ ಪೀಕ್ಲಾಟ ಮಾಡಿ ಲೀಲಹೆಣ್ಣಿನ್ ಪಟ ತೆಗ್ದೊ ಅಂದ್ರೆ! ಇಂವ್ಗಳ್ ಬಲಿ ಬಿಡ್ಸ್ಕಾಯ್ತ್ ಈಗ. ಸತ್ತ್ ಹ್ವಾಪ್ಕೆ, ಕಲಿಗೆಟ್ಟವ್” ಬಚ್ಚಿಬಾಯಿಗೆ ಸಿಟ್ಟು ನೆತ್ತಿಗೇರಿತು. “ಇನ್ನೂ ನಾವ್ ಸುಮ್ನಾಯ್ಕಂಡ್ರೆ ಆತಿಲ್ಲೆ ಹಿರಿಯಬ್ಯಾ” ದೇವಿಬಾಯಿ ನಿರ್ಧಾರದ ಧ್ವನಿಯಲ್ಲಿ ಹೇಳಿದಳು. “ಬಿಡುಕಾಗ ಈ ಶನಿಗಳನ್ನ. ನಾಕ್ ನಾಕ್ ಬಾರ್ಸಿ ಹೊಳಿಗೆ ದೂಡಿ ಹಾಕ್ಕ್” ಶಾಂತಾಬಾಯಿ ಅಬ್ಬರಿಸಿದಳು.

***

ಹೊಯ್ದು ಸಾಕಾಗಿದ್ದಕ್ಕೋ ಏನೋ, ಆವತ್ತು ಸಾಯಂಕಾಲ ಮಳೆ ಬಿಟ್ಟಿತ್ತು. ಗರಡಿಬೆಟ್ಟನ್ನು ಸುತ್ತುವರಿದ ದಟ್ಟವಾದ ಕಾಡಿನಿಂದ ಜೀರುಂಡೆಗಳು, ಇನ್ಯಾವುದೋ ಕೀಟಗಳು ‘ಜೀ’ ಎಂದು ಒಂದೇ ಸಮನೆ ಕೂಗುತ್ತಿದ್ದವು. ಕೋಟಿ ಚನ್ನಯ್ಯರ ಗರಡಿಯಲ್ಲಿ ಕಾಲುದೀಪಗಳೆರಡು ಮಂದವಾಗಿ ಉರಿಯುತ್ತಿದ್ದವು. ಅರ್ಧ ವೃತ್ತಾಕಾರವಾಗಿ ಗರಡಿಬೆಟ್ಟನ್ನು ಬಳಸಿರುವ ಗೌರಿನದಿಯ ಪ್ರವಾಹ ಬಿರುಸಾಗಿತ್ತು. ದಡ ಮೀರುವಂತೆ ಧಾವಿಸುತ್ತಿದ್ದ ಕೆಂಪು ನೀರನ್ನು ಕಂಡರೆ ಎಂತವರ ಎದೆಯೂ ಢವಗುಟ್ಟುತ್ತಿತ್ತು. ಗರಡಿಯ ಎದುರಿನ ಬೋಳು ಜಾಗದ ಸುತ್ತಲಿನ ಮರಗಳಲ್ಲಿ ದೊಂದಿಗಳು ಗಂಭೀರವಾಗಿ ಉರಿಯುತ್ತಿದ್ದವು. ಜಗತ್ತಿಗೆ ಕತ್ತಲೆ ಮುಸುಕುವ ಹೊತ್ತಿಗೆ ಸರಿಯಾಗಿ ಒಂಬತ್ತು ಜನ ಹೆಂಗಸರು ‘ಫಲ್‌ಘಲ್’ ಗೆಜ್ಜೆಯ ಶಬ್ದದೊಂದಿಗೆ ಗರಡಿಬೆಟ್ಟಿಗೆ ನಡೆದುಬಂದರು. ನವದುರ್ಗೆಯರಂತೆ ಅಲಂಕರಿಸಿಕೊಂಡ ಅವರು ಕಚ್ಚೆ ಹಾಕಿ ಸೀರೆಯುಟ್ಟು ಯಾವುದೋ ನೃತ್ಯಕ್ಕೋ, ನಾಟಕಕ್ಕೋ  ತಯಾರಾದಂತೆ ಕಾಣುತ್ತಿದ್ದರು. ಗರಡಿಬೆಟ್ಟಿಗೆ ತಾಗಿಕೊಂಡಿದ್ದ ಹುಲ್ಮಕ್ಕಿಗೆ ಧಾವಿಸಿದ ಹೆಂಗಸರು ಅಲ್ಲಿ ಮೊಬೈಲ್ ನೋಡುತ್ತ ಹಡೆ ಮಾತುಗಳನ್ನಾಡುತ್ತಿದ್ದ ಹುಡುಗರೆದುರು ನಿಂತರು. ಗೆಜ್ಜೆಯ ಶಬ್ದ ಕೇಳಿ ಹಡೆಗಂಡುಗಳು ತಲೆಯೆತ್ತಿ ಕಂಡರೆ ಒಂಬತ್ತು ಜನ ದೇವಿಯರು ತಮ್ಮೆದುರು ಪ್ರತ್ಯಕ್ಷರಾಗಿ ಬಂದಂತೆನಿಸಿ ಹೌಹಾರಿದವು. “ಮಕ್ಳೇ, ಯಾವ್ಯಾವ್ದೋ ಪಾಪದ ಹೆಣ್ಣುಗಳ ಪಟ ತೆಗ್ದ್ ಊರಿಗೆಲ್ಲ ಕಳಸ್ತ್ರಿ ಅಂಬ್ರಲೇ, ಎಂತ ಕತಿ ನಿಮ್ದ್?” ಒಬ್ಬಳು ದೇವಿ ಕೇಳಿದಳು.

“ನಮ್ಗೂ ಒಂದ್ ನಾಕ್ ಪಟ ಕಳ್ಸಿನಿ ಕಾಂಬ” ಇನ್ನೊಬ್ಬಳು ದೇವಿ ರಾಕೇಶನ ಕಾಲರ್ ಹಿಡಿದಳು. ಇಷ್ಟು ಹೊತ್ತಿಗೆ ದೇವಿ ಸಂಘದವರ ಗುರ್ತ ಸಿಕ್ಕಿ ಅವರ ನಿರ್ಧಾರದ, ಕಡುಸಿಟ್ಟಿನ ಧ್ವನಿ ಕೇಳಿ; ಆರ್ಭಟ ಕಂಡು ತೊಡೆ ನಡುಗಲು ಆರಂಭವಾದ್ದರಿಂದ ಹಡೆಗಂಡುಗಳು ಕುಂಡೆಗೆ ಕಾಲು ಕೊಡಲು ತಯಾರಾದವು. ಆದರೆ ಒಬ್ಬೊಬ್ಬಳು ದೇವಿಯೂ ಒಂದೊಂದು ಗಂಡಿನ ರಟ್ಟೆ ಹಿಡಿದೆಳೆದು ಕೈಯ್ಯಲ್ಲಿ ಅಡ್ಡ ಬಡ್ತಿಗೆ ತೆಗೆದುಕೊಂಡು ಕುಂಡೆಗೆ ನಾಲ್ಕು ಬಾರಿಸಿ ಗರಡಿಬೆಟ್ಟಿಗೆ ಎಳೆದೊಯ್ದಳು! ಗರಡಿಬೆಟ್ಟಿನ ಅಂದ ಹೆಚ್ಚಿಸಿದ್ದ ಮರಗಳಿಗೆ ಸಾಲಾಗಿ ಕಟ್ಟಿಹಾಕಿ ಹಡೆಗಂಡುಗಳ ಎದುರು ಅಟ್ಟಹಾಸಗೈದರು ಒಂಬತ್ತು ದೇವಿಯರು. “ಏ ರಾಕೇಸ, ಅಬ್ಬಿ ಹಾಲಿಲ್ದೆ ನೀನ್ ಸಾಯುಕ್ ಬಿದ್ದಾಗಳಿಕ್ಕೆ ಮೊಲಿ ಹಾಲ್ ಕುಡ್ಸದ್ದ್ ನಾನೇ ಬಲ್ಯಾ?” ಕಾಳಿಬಾಯಿ ಉಗ್ರ ರೂಪ ತಾಳಿದಳು. ಅಡ್ಡಬಡ್ತಿಗೆಯಲ್ಲಿ  ಮತ್ತಷ್ಟು ಧರ್ಮದೇಟುಗಳು ಹಡೆಗಂಡುಗಳಿಗೆ ಬಿದ್ದವು. “ಅಯ್ಯೋ ಅಮ್ಮಾ, ಬ್ಯಾಡ ದಮ್ಮಯ್ಯ” ಎಂಬ ಅವುಗಳ ಉದ್ಗಾರದ ಮಧ್ಯೆ ದೇವಿಬಾಯಿ ತನ್ನ ಮೈಯ್ಯ ಚರ್ಮವನ್ನೇ ಕಿತ್ತೆಸೆಯುವಂತೆ ರವಿಕೆಯನ್ನು ಕಳಚಿ ಎಳೆದು ತೆಗೆದು ಗೌರಿಯ ಪ್ರವಾಹಕ್ಕೆ ಎಸೆದಳು. ಅದೇ ಸಮಯದಲ್ಲಿ ಉಳಿದ ಎಲ್ಲಾ ದೇವಿಯರೂ ಅವಳನ್ನು ಅನುಸರಿಸಿ ರವಿಕೆಗಳನ್ನು ಕಿತ್ತೆಸೆದು ಸೆರಗನ್ನು ಸೊಂಟಕ್ಕೆ ಸುತ್ತು ಕಟ್ಟಿ ಅರೆಬೆತ್ತಲೆಯಾಗಿ ನಿಂತರು. ಮಕ್ಕಳಿಗೆ ಹಾಲೂಡಿಸಿ ಜೋತುಬಿದ್ದ ತಮ್ಮ ಮೊಲೆಗಳ ಕಡೆ ತೋರಿಸುತ್ತಾ “ಇಗಣಿ ಮಕ್ಳೇ, ಈಗ ಬೇಕಾದಷ್ಟ್ ಪಟ ತೆಕ್ಕಣಿ. ಲಾಯ್ಕ್ ಬತ್ತತ್ತ್, ಊರಂಗಿಪ್ಪ ಎಲ್ಲ ಮನ್ಸ್ರಿಗೂ ಈ ಪಟ ಕಳ್ಸಿನಿ. ನಾವ್ಯಾರೂ ಹೆದ್ರುದಿಲ್ಲೆ. ನಿಮ್ಮ್ ಅಬ್ಬಿದಿಕ್ಕಳಿಗೂ, ಅಕ್ಕ, ತಂಗೀಗೂ ಹೀಂಗೇ ಇಪ್ದ್;  ಹೊಸ್ತೆಂತ ಇಲ್ಲೆ . ತೆಗೀನಿ ಪಟ”

‘ತೆಗೀನಿ ಪಟ; ಕಳ್ಸಿನಿ ಎಲ್ಲರಿಗೂ’ ಎಂಬ ಧ್ವನಿ ಇಡೀ ಗರಡಿಬೆಟ್ಟಿನಲ್ಲಿ ಮಾರ್ದನಿಕೊಟ್ಟಿತು.

ಲೀಲಾ, ಗುಲಾಬಿ, ಲೀಲಾಳ ತಮ್ಮ ರುದ್ರ, ಅವನ ದೋಸ್ತಿ ಧರ್ಮ ಎಲ್ಲರೂ ತಲೆ ತಗ್ಗಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಹಡಿಗಂಡುಗಳ ತಲೆಗಳೂ ನೆಲ ನೋಡುತ್ತಿದ್ದವು. ತಲೆ ಮೇಲೆತ್ತದೆ “ನೀವೆಲ್ಲ ನಮ್ಮ್ ಅಬ್ಬಿದಿಕ್ಕಳ್ ಕಣೆಂಗೆ. ನಮ್ದ್ ತಪ್ಪಾಯ್ತ್,  ನಿಮ್ಮ್ ದಮ್ಮಯ್ಯ, ನಿಮ್ಮ್ ಕಾಲ್ ಹಿಡ್ಕಂತೋ. ಇನ್ನ್ ಹೀಂಗೆಲ್ಲ ಮಾಡೂದಿಲ್ಲೆ” ರಾಕೇಶ, ಕಾಳು ನಾಯ್ಕರ ಮಗ ನಾಗ, ಸೂರಿಭಟ್ಟರ ಮಗ ವಿಫ್ನೇಶ ಎಲ್ಲರೂ ಅಳುತ್ತಲೇ ಹೇಳಿದರು. ಶಾಂತಾಬಾಯಿಯ ನಿರ್ದೇಶನದಂತೆ ಲೀಲಾ, ಗುಲಾಬಿ ಹಡೆಗಂಡುಗಳ ಮೊಬೈಲ್ ತೆಗೆದುಕೊಂಡು ಆದಷ್ಟು ಪಟಗಳನ್ನು ಡಿಲೀಟ್ ಎವರಿವನ್ ಕೊಟ್ಟರು. “ಕೆಲವೆಲ್ಲ ಎಂತದೂ ಮಾಡುಕಾತಿಲ್ಲೆ, ಅದೆಲ್ಲ ಕಳ್ಸಿ ಸುಮಾ‌ರ್ ದಿನ ಆಯ್ತಲೇ; ಹಾಂಗಾಯ್” ಲೀಲಾ ಹೇಳಿದಾಗ “ಸತ್ತ್ ಮಣ್ ತಿಂದ್ ಹ್ವಾಯ್ಲಿ, ತೆಗ್ದ್ ಬಿಸಾಡಿ ಹ್ವಳಿಗೆ” ದೇವಿಬಾಯಿ ಹೇಳಿದಳು. ಭೀಕರ ಪ್ರವಾಹ ತನ್ನ ತೆಕ್ಕೆಯೊಳಗೆ ಮೊಬೈಲ್‌ಗಳನ್ನು ತೆಗೆದುಕೊಂಡು ಸಾಗಿಹೋಯಿತು. “ಈಗ ನೀವೆಲ್ಲ ನಿಮ್ಮ್ ನಿಮ್ಮ್ ಮೊಬೈಲ್ ಹಿಡೂಕೆ ಹ್ವಾಯ್ಲಕ್ಕ್, ಗೌರಿನದಿಯ ಹೊಟ್ಟಿಯೊಳ್ಗೆ, ತಯಾರಾಯ್ನಿ” ದುರ್ಗಾಬಾಯಿ ಅಬ್ಬರಿಸಿದಾಗ ಗಂಡುಗಳು ನಡುಗಿದವು.

ಆ ಪ್ರವಾಹಕ್ಕೆ ದೂಡಿಬಿಟ್ಟರೆ ಎಂಥಾ ಈಜು ಬರುವವರಿಗೂ ಮೇಲೆ ಹತ್ತಿ ಬಚಾವಾಗಲು ಸಾಧ್ಯವಿಲ್ಲ! ಎಣಿಸಿ ಎಣಿಸಿ ಹಡೆಗಂಡುಗಳ ಒಳ ವಸ್ತ್ರ ಒದ್ದೆಯಾಯಿತು. ತಮ್ಮ ಬದುಕು ಮುಗಿಯಿತೆಂದು ಬಿಕ್ಕಳಿಸಿದವು. ಗರಡಿಬೆಟ್ಟಿನಲ್ಲಿ ಮೌನ ತಾಂಡವವಾಡಿತು! ಒಂಬತ್ತೂ ಜನ ದೇವಿಯರು ಕೋಟಿ ಚೆನ್ನಯ್ಯರ ಎದುರು ಮಣಿದು ನಮಸ್ಕರಿಸಿ ಕುಳಿತರು. ಕಗ್ಗತ್ತಲು ಇಡೀ ಜಗವನ್ನಾವರಿಸಿದಂತೆ ಭಾಸವಾಗುತ್ತಿತ್ತು. ಸುಮಾರು ಸಮಯದ ಮೌನದ ನಂತರ ಎದ್ದು ನಿಂತ ದೇವಿಯರು ಒಬ್ಬೊಬ್ಬರಾಗಿ ಸೂಡಿ ಹಚ್ಚಿಕೊಂಡರು. ಗೌರಿನದಿಯ ರುದ್ರ ಭಯಂಕರ ಪ್ರವಾಹವನ್ನು ವೀಕ್ಷಿಸಿ ಬಂದ ದೇವಿಬಾಯಿ ರುದ್ರ ಮತ್ತು ಧರ್ಮನನ್ನು ಕರೆದು “ಈ ರಾತ್ರಾಳ್ ನೀವಿಬ್ರ್ ಇಲ್ಲೇ ಆಯ್ಕಣಿ. ಈ ಹಡೆಗಂಡುಗಳ ಮನೆಯವ್ರ್ ಬೇಕಾರೆ ಬಂದ್ ಬಿಡ್ಸ್ಕ ಹ್ವಾತ್ರ್” ಎಂದವಳೇ ಬಲಗಡೆಯ ಕಾಡಿನ ಸೆರಗಿನ ದಾರಿಯ ಕಡೆಗೆ ಹೊರಳಿ ನಡೆಯತೊಡಗಿದಳು. ಅವಳ ಹಿಂದೆ ಲೀಲಾ, ಗುಲಾಬಿ ಮತ್ತೆ ಹಿಂದಿನಿಂದ ಸೂಡಿಬೆಳಕು ಹಿಡಿದುಕೊಂಡ ಇನ್ನೆಂಟು ಮಂದಿ ದೇವಿ ಸಂಘದ ಸದಸ್ಯೆಯರು! ಗವ್ವೆನ್ನುವ ಕಾಡಿನ ನಡುವೆ ಉದ್ದಾನುದ್ದಕ್ಕೆ ಪ್ರಯಾಣ ಹೊರಟ ನಕ್ಷತ್ರಗಳಂತೆ ಅವರೆಲ್ಲ ಕಂಡು ಗರಡಿಬೆಟ್ಟಿನಲ್ಲಿದ್ದವರೆಲ್ಲ ಬೆರಗಿನಿಂದ ಮೂಕರಾಗಿ ನೋಡತೊಡಗಿದರು!

**

‍ಲೇಖಕರು Admin

21 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading