
ಪತ್ರಕರ್ತ, ರಂಗಭೂಮಿ ವಿಮರ್ಶಕ ಗಣೇಶ ಅಮೀನಗಡ ಅವರ ಇತ್ತೀಚಿನ ಕೃತಿ ‘ತುಸುವೆ ಕುಡಿವ ಗಂಡನ್ನ ಕೊಡು ತಾಯಿ…’
ಮೈಸೂರಿನ ‘ಕವಿತಾ ಪ್ರಕಾಶನ’ ಇದನ್ನು ಪ್ರಕಟಿಸಿದೆ.
ಇದರಿಂದ ಆಯ್ದ ಅದೇ ಹೆಸರಿನ ಪ್ರಬಂಧ ಇಲ್ಲಿದೆ-
ಮದ್ಯದ ಬಗ್ಗೆ ಬರೆಯುತ್ತೇನೆ
ಸೋಮರಸ ಕುಡಿದರಂತೆ ಸುರಾಸುರರು
ಸುರೆಯ ಅಮಲೇರಿದ ದೇವಾನುದೇವತೆಗಳೇ ಹೀಗಿರುವಾಗ
ಹುಲುಮಾನವರು ಮತ್ತಾಗುವುದು ತಪ್ಪೇ?
– ಎಚ್.ಎನ್. ಆರತಿ

ಅವು ಕಡುಬೇಸಿಗೆಯ ದಿನಗಳು.
ಅಂದರೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳ ದಿನಗಳೆಂದರೆ ಗಿಡಮರಗಳು ಅಲುಗಾಡದೆ ನಿಂತಿರುತ್ತವೆ. ಹೀಗಿದ್ದಾಗ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿರುವ ಗೆಳೆಯ ಆಹ್ವಾನಿಸುತ್ತಲೇ ಇದ್ದ. ಕೊನೆಗೆ ಮಂಗಳೂರಿನ ಬೆವರಿಳಿಸುವ ಊರಿಂದ ಉರಿಬಿಸಿಲೂರಾದ ಹೊಸಪೇಟೆಗೆ ಹೋದಾಗ ಗೆಳೆಯ ಕಾದಿದ್ದ. ಹತ್ತು-ಹನ್ನೆರಡು ವರ್ಷಗಳಿಂದ ಕಾದ ಕಾವಲಿ ಮೇಲಿನ ಬದುಕಿಗೆ ಒಗ್ಗಿಕೊಂಡಿರುವ ಗೆಳೆಯ ರಾತ್ರಿಯಾಗುತ್ತಲೇ ಮೂರು ಗ್ಲಾಸುಗಳನ್ನಿಟ್ಟ.
‘ಎರಡು ಗ್ಲಾಸುಗಳು ಸರಿ. ಮೂರು ಯಾಕೆ?’ ಎಂದೆ.
‘ಎರಡು ನಮಗೆ. ಇನ್ನೊಂದು ನನ್ನಾಕೆಗೆ’ ಎಂದ.
ಆಶ್ಚರ್ಯವಾಯಿತು. ಆತ ವಿವರಿಸಿದ.
ವಿಶ್ವವಿದ್ಯಾಲಯದಲ್ಲಿ ಮೊದಲು ಅಧ್ಯಾಪಕನಾಗಿದ್ದಾಗ ಆತ ಬಾರ್‌ನಲ್ಲಿ ಕುಡಿದು ಮನೆಗೆ ಹೋಗುವಾಗ ಆತನ ಹೆಂಡತಿ ತಕರಾರು ತೆಗೆಯುತ್ತಿದ್ದಳಂತೆ. ಬಾರ್‌ನಲ್ಲಿ ಕುಡಿದು ಬಂದರೆ ಹತ್ತಾರು ಜನರು ನೋಡುತ್ತಾರೆ. ಗಂಡನ ಮರ್ಯಾದೆಗೆ ಕುಂದು ಎಂದು ಭಾವಿಸಿ, ಕುಡಿಯುವುದಾದರೆ ಮನೆಯಲ್ಲೇ ಕುಡಿಯಿರಿ. ಮನೆಯಲ್ಲೇ ಲಾಕ್‌ಡೌನ್ ಆಗಿ. ಅಲ್ಲಿ-ಇಲ್ಲಿ ಹೋಗುವುದ್ಯಾಕೆ ಎಂದು ಪರವಾನಗಿ ಕೊಟ್ಟಾಗ ಆತ ಖುಷಿಯಾದ. ಹಾಗೆ ನಿತ್ಯ ಮನೆಯಲ್ಲಿಯೇ ಕುಡಿಯುವಾಗ ಆಕೆ ಮೊಟ್ಟೆ ಬೇಯಿಸಿಯೋ, ಆಮ್ಲೆಟ್ ಮಾಡಿಯೋ ಕೊಡುವುದು ರೂಢಿ.
ಹೀಗಿರುವಾಗ ‘ದಿನಾ ಕುಡಿತೀರಲ್ಲ. ಅದರಲ್ಲೇನು ಮಜಾ?’ ಎಂದು ಪದೇ ಪದೇ ಕೇಳತೊಡಗಿದಳು. ಕೊನೆಗೆ ಜಗಳ ಶುರುವಾಯಿತು.
‘ಕುಡಿಯುವುದು ರಮ್, ಆರೋಗ್ಯಕ್ಕೆ ಒಳ್ಳೆಯದು’ ಎನ್ನುವುದು ಗೆಳೆಯನ ವಾದ. ಅದೊಂದು ದಿನ ಜಗಳಾಡುವಾಗ ಆಕೆಯ ಮೂಗು ಮುಚ್ಚಿ, ಬಾಯಿಗೆ ರಮ್ ಸುರಿದ. ತಂಪು ಪಾನೀಯ ಬೆರೆಸಿದ ರಮ್ ಅನ್ನು ಹೆಚ್ಚೇ ಕುಡಿಸಿದ. ಆ ದಿನ ಆಕೆಗೆ ಬೇಗ ನಿದ್ದೆ ಬಂತಂತೆ. ಮರುದಿನವೂ ಅಷ್ಟೇ ಜಗಳ. ಮತ್ತೆ ಕುಡಿಸಿದ.
‘ಅಲ್ಲಿಂದ ಇಬ್ಬರೂ ಸಮಾ ಕುಡಿತಿದ್ದೇವೆ ಮಾರಾಯ. ಆದ್ರೆ ಜಗಳ ಇಲ್ಲ. ಕದನ ವಿರಾಮಕ್ಕೆ ಇದು ಮದ್ದು’ ಎಂದು ನಕ್ಕ. ಗಾಬರಿಯಾಗುವ ಸರದಿ ನನ್ನದು. ಎಲ್ಲ ದಂಪತಿಗಳು ಹೀಗೆಯೇ ಸಮಾ ಕುಡಿದು ಮಲಗಿದರೆ? ಆಗ ಹೊಸದೊಂದು ಗಾದೆ ಹುಟ್ಟಬಹುದು- ‘ಗಂಡ-ಹೆಂಡಿರ ಜಗಳ ಕುಡಿದು ಮಲಗುವ ತನಕ’ ಏನಂತೀರಿ? ಆದರೆ ಒಟ್ಟಿಗೇ ಕುಡಿದು ಮಲಗದವರು ಜಗಳಾಡಿದ ಮರುದಿನ ಹೆಂಡತಿ ತವರಿಗೆ ಹೋಗಬಹುದು. ಬಾರಿಗೆ ಗಂಡ ಹೋಗಬಹುದು. ಆದರೆ ಕೊರೊನಾ ವೈರಸ್ ಹಾವಳಿ ಸಂದರ್ಭದಲ್ಲಿ ಜಗಳವಾದರೂ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಇತ್ತು. ಏಕೆಂದರೆ ಲಾಕ್‌ಡೌನ್ ಪರಿಣಾಮ!
ಇದು ಮದುವೆಯಾಗಿ ಅನೇಕ ವರ್ಷಗಳಾದವರ ಕಥೆಯಾದರೆ, ಮದುವೆ ಮುಂಚೆ ಎಲ್ಲ ಹುಡುಗಿಯರು ಕೇಳುವ ಹಾಗೆ ‘ನೀವು ಕುಡಿತೀರಾ?’ ಎಂದು ಆಕೆ ಕೇಳಿದ್ದಳಂತೆ. ಆಗ ಆತ `ಇಲ್ಲ ಇಲ್ಲ’ ಎಂದಾಗ ಪದೇ ಪದೇ ಕೇಳಿದರೆ ತನ್ನನ್ನೇ ತಿರಸ್ಕರಿಸಿಬಿಟ್ಟಾನು ಎಂದು ಸುಮ್ಮನಾದಳಂತೆ. ಆದರೆ ಮದುವೆಯಾದ ಹೊಸತರಲ್ಲಿ ಸುಮ್ಮನಿದ್ದ ಗೆಳೆಯ ಕ್ರಮೇಣ ಕುಡಿಯಲಾರಂಭಿಸಿದ. ಏಕೆಂದರೆ ಮದುವೆಯಾದ ಖುಷಿಗೆ ಗೆಳೆಯರಿಗೆಲ್ಲ ಪಾರ್ಟಿ ಕೊಟ್ಟರೂ ತಾನು ಮಾತ್ರ ಕುಡಿಯುತ್ತಿರಲಿಲ್ಲ. ಎಲ್ಲರೂ ರೇಗಿಸುವವರೇ. ಕೊನೆಗಾತನಿಗೆ ತಡೆಯಲಾಗಲಿಲ್ಲ. ದುಡ್ಡು ಕೊಟ್ಟು ಪಾರ್ಟಿ ಕೊಡುವುದಾದರೆ ತಾನೂ ಯಾಕೆ ಕುಡಿಯಬಾರದು ಎಂದು ನಿರ್ಧರಿಸಿ ಸ್ವಲ್ಪ ಸ್ವಲ್ಪ ಕುಡಿದು ಮನೆಗೆ ಹೋಗತೊಡಗಿದ. ಆತ ಹೆಂಡತಿ ಪಕ್ಕ ಮಲಗದೆ ಬೇರೆಡೆ ಮಲಗುತ್ತಿದ್ದನಂತೆ. ಜತೆಗೆ, ವಾಸನೆ ಬರಬಾರದು ಎಂದು ಮಸಾಲೆ ಅಂದರೆ ಸ್ವೀಟ್ ಪಾನ್ ತಿಂದು ಹೆಂಡತಿಗೊಂದು ಕಟ್ಟಿಸಿಕೊಂಡು ಹೋಗಿ ಕೊಡುತ್ತಿದ್ದ. ಆದರೂ ಆತನ ಹೆಂಡತಿ ‘ಏನೋ ವಾಸನೆ ಬರ್ತಾ ಇದೆ?’ ಎಂದು ಗುಮಾನಿಪಟ್ಟಾಗ ಆತ ‘ಪಾನ್ ವಾಸನೆಯದು’ ಎಂದನಂತೆ. ಆಗ ಆಕೆ ‘ಕೆಟ್ಟ ವಾಸನೆ’ ಎಂದು ಮೂಗು ಮುರಿದಾಗ ‘ಇಲಿ ಸತ್ತಿರಬೇಕು’ ಎಂದು ಹೇಳಿ ಮಲಗಿಬಿಡುತ್ತಿದ್ದನಂತೆ. ಕೊನೆಗದು ಆತನ ಕುಡಿತದ ವಾಸನೆ ಎಂದು ಆಕೆಗೆ ಗೊತ್ತಾಗಿ ‘ಇವತ್ತು ಇಲಿ ಸತ್ತಿದೆಯಾ?’ ಎಂದು ರೇಗಿಸುತ್ತಿದ್ದಳಂತೆ. ಮೊದಮೊದಲು ಆತ ಸುಮ್ಮನಾಗಿ ಹೂಂ ಎಂದರೆ ಮತ್ತಷ್ಟು ಕಿಚಾಯಿಸುವುದು ಕಂಡು ಆತ ಬೀರು ಕುಡಿದಾಗ ಇಲಿ ಸತ್ತಿದೆಯೆಂದು, ರಮ್, ವಿಸ್ಕಿ ಕುಡಿದಾಗ ನಾಯಿ, ಕತ್ತೆ ಸತ್ತಿದೆಯೆಂದು ಹೇಳುತ್ತಿದ್ದನಂತೆ. ಕೊನೆಗೆ ಒಟ್ಟಿಗೇ ಕುಡಿಯಲಾರಂಭಿಸಿದ ಮೇಲೆ ಯಾವುದೂ ಸತ್ತಿಲ್ಲ. ಕುಡಿದ ಮೇಲೆ ನಾವೇ ಸತ್ತಂತೆ ಬೀಳ್ತೀವಿ ಎಂದು ನಗುತ್ತಿದ್ದರಂತೆ.
ಇದರೊಂದಿಗೆ ಲಗ್ನಪತ್ರಿಕೆಯಲ್ಲಿ ಗಮನ ಸೆಳೆಯುವ ಒಕ್ಕಣೆ ಹೀಗಿತ್ತು – ಕುಡಿದು ಬರೋರಿಗೆ ಕಲ್ಯಾಣ ಮಂಟಪದ ಒಳಗೆ ಅವಕಾಶ ಇಲ್ಲ. ಇದರ ಪರಿಣಾಮ ಮದುವೆ ದಿನ ಮದುವೆ ಗಂಡೇ ನಾಪತ್ತೆ!
ಇದು ಗುಂಡಿನ ಗಮ್ಮತ್ತಿನ ಪರಿ. ಈಗೆಲ್ಲ ಕುಡಿಯುವುದು ಸಾಮಾನ್ಯ ಸಂಗತಿ ಎಂಬಂತಾಗಿಬಿಟ್ಟಿದೆ. ಆದರೆ ಕೆಲವರು ಕುಡಿದ ಮೇಲೆ ಹಾರಾಡುತ್ತಾರೆ. ಅನೇಕರು ಕುಡಿದ ಮೇಲೆ ಸುಮ್ಮನಿರುತ್ತಾರೆ.
‘ನಾವು ಕಡಿಮೆ ದುಡ್ಡಿನ, ವಾಸನೆ ಹೆಚ್ಚಿರುವುದನ್ನು ಕುಡಿದು ಬೈದಾಡಿ, ಜಗಳಾಡಿದ್ರೆ ಎಲ್ಲರಿಗೂ ಗೊತ್ತಾಗ್ತದ. ಆದ್ರ ನೀವು ಹೆಚ್ಚಿನ ದುಡ್ಡಿನ, ಕಡಿಮೆ ವಾಸನೆಯದು ಕುಡಿದು ಯಾರ ಹತ್ರ ಮಾತಾಡದೆ, ಮನೆಗೆ ಹೋಗಿ ಮಲಗ್ತೀರಿ. ನಮಗೂ ನಿಮಗೂ ಇರೋ ವ್ಯತ್ಯಾಸ ಅಷ್ಟೇ…’ ಎಂದು ಬಾರಿನಲ್ಲೊಬ್ಬ ಕುಡಕ ಹೇಳಿದ ಮಾತು ಸದಾ ಪ್ರಸ್ತುತ.
* * *
ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದೆ. ಅದು ರಾತ್ರಿ ಹತ್ತರ ಸಮಯ. ಆಗ ತೂರಾಡುತ್ತ ಒಬ್ಬ ಬಂದು ‘ಟೈಮ್ ಎಷ್ಟು ಗುರು?’ ಎಂದು ಕೇಳಿದ. ನಾನು ಅಂಗಿಯ ತೋಳನ್ನು ಸರಿಸಿ ಹೇಳುವಷ್ಟರಲ್ಲಿ ತಡವಾಯಿತು. ಆಗ ಆತ ‘ಯಾಕ್ ಗುರು ಫುಲ್ ಟೈಟಾ?’ ಎಂದು ಕೇಳಿದ. ನಾನು ನಗಬೇಕೋ, ಅಳಬೇಕೋ, ಟೈಮ್ ಹೇಳಬೇಕೋ ಗೊತ್ತಾಗದೆ ಸುಮ್ಮನಾದೆ. ಅಷ್ಟರಲ್ಲಿ ಆತ ಬೇರೊಬ್ಬರನ್ನು ಟೈಮ್ ಕೇಳಲು ಹೊರಟಿದ್ದ.
ಅದೊಂದು ದಿನ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂಎ ಓದುತ್ತಿದ್ದ ಅಂತಿಮ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಭಿನ್ನವಾಗಿರಲೆಂದು ಹಿರಿಯ ವಿದ್ಯಾರ್ಥಿಗಳಿಗೆ ಮೊದಲ ವರ್ಷದ ಕಿರಿಯ ವಿದ್ಯಾರ್ಥಿಗಳು ಪ್ರಶ್ನೆ ಕೇಳುವುದಾಗಿತ್ತು.
ಹಿರಿಯ ವಿದ್ಯಾರ್ಥಿನಿಗೆ ವಿದ್ಯಾರ್ಥಿಯೊಬ್ಬ `ನಿಮಗೆ ಕುಡಿವ ಗಂಡ ಸಿಕ್ಕರೆ?’ ಕೇಳಿದ. ಎಂಥಾ ಪ್ರಶ್ನೆ ಕೇಳಿದ ಎಂದು ಎಲ್ಲರೂ ಆತನನ್ನು ಬೈಯ್ದುಕೊಂಡರು.
ಸದಾ ಗಂಭೀರವಾಗಿರುತ್ತಿದ್ದ ವಿದ್ಯಾರ್ಥಿನಿ `ನಾನೂ ಅವನೊಂದಿಗೆ ಕುಡಿಯುವೆ’ ಎಂದಾಗ ಎಲ್ಲರೂ ದಂಗು ಬಡಿದರು. ಆಮೇಲೆ ಜೋರಾಗಿ ಚಪ್ಪಾಳೆ ಬಡಿದರು.
* * *

ಆಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿದ ದಿನಗಳವು. ಬೇಸಿಗೆ ಬೇರೆ. ಬಿಯರು ಕುಡಿದರೆ ಹೊಟ್ಟೆಗೆ ತಂಪು. ದಪ್ಪವೂ ಆಗುತ್ತಾರೆಂದು ಯಾರೋ ಹೇಳಿದ್ದಕ್ಕೆ ಕದ್ದುಮುಚ್ಚಿ ಬಿಯರು ಕುಡಿಯಲಾರಂಭಿಸಿದ್ದೆ. ಆದರೆ ಒಬ್ಬನೇ ಒಂದು ಬಿಯರು ಕುಡಿಯಲಾಗುತ್ತಿರಲಿಲ್ಲ. ಅಂದರೆ ಆಗ ಬಾಟಲಿಪುತ್ರರಾಗಿರಲಿಲ್ಲ. ಜತೆಗೆ ಅಷ್ಟೊಂದು ದುಡ್ಡು ಬೇರೆ ಇರುತ್ತಿರಲಿಲ್ಲ. ಇದಕ್ಕಾಗಿ ಗೆಳೆಯರ ಜೊತೆ ಬೈಟು ಬಿಯರು ಅಭ್ಯಾಸವಾಗಿ ಬಿಟ್ಟಿತು. ಏಕೆಂದರೆ ಆಗ ಬಾರ್‌ನಲ್ಲಿ ಕೂತು ಕುಡಿದರೆ ಗತಿ ಏನು ಪ್ರಶ್ನೆ ಕಾಡುತ್ತಿತ್ತು. ಇದಕ್ಕಾಗಿ ಯಾರಿಗೂ ಗುರುತು ಸಿಗದಿರಲಿ ಅಂತ ಕನ್ನಡಕ ತೆಗೆದು ಬಿಯರು ಬಾಟಲಿ ಕೊಂಡ ಮೇಲೆ ಅದನ್ನು ಲುಂಗಿಯಲ್ಲಿ ಮುಚ್ಚಿಕೊಂಡು ದೂರದಲ್ಲಿ ನಿಂತಿರುತ್ತಿದ್ದ ಗೆಳೆಯನೊಂದಿಗೆ ಹೊಲವೊಂದಕ್ಕೆ ಹೋಗಿ ಹೇಗೋ ಮುಚ್ಚಳ ತೆಗೆದು ಇಷ್ಟಿಷ್ಟೇ ಬಿಯರು ಕುಡಿಯುತ್ತಿದ್ದೆವು.
ಆದರೆ ಹೆಚ್ಚಿಗೆ ಕುಡಿಯುತ್ತಾನೆಂದು ಗೆಳೆಯನಿಂದ ಕಸಿದುಕೊಂಡು ಗಟಗಟ ಕುಡಿಯುವಾಗ ಆತ ಕಸಿದುಕೊಳ್ಳುತ್ತಿದ್ದ. ಹೀಗೆ ಏನೊಂದೂ ನೆಂಚಿಕೊಳ್ಳಲು ಸಿಗದೆ ಬರಿ ಬಿಯರು ಕುಡಿದು ತೇಗಿ, ಕಣ್ಣು ಮಂಜಾಗಿ ಹಾಗೆಯೇ ಹೊಲದಲ್ಲಿ ಮಲಗಿರುವಾಗ, ಹೊಲದ ಒಡೆಯ ಬಂದು ಬಾಯಿ ಬಾಯಿ ಬಡಿದುಕೊಳ್ಳುವಾಗ ದಡಬಡಿಸಿ ಓಡಿಹೋಗಿದ್ದೆವು.
* * *
ನಮ್ಮ ಹಿರಿಯ ಗೆಳೆಯರೊಬ್ಬರು ಸಂಜೆ ಏಳರಿಂದ ಕುಡಿಯಲು ಶುರು ಮಾಡಿ ಮಧ್ಯರಾತ್ರಿಯವರೆಗೆ ಮುಂದುವರಿಸಿದರು. ಅವರು ಇನ್ನೂ ಮುಂದುವರಿಸುತ್ತಿದ್ದರು. ಆದರೆ, ಸ್ಟಾರ್ ಹೋಟೆಲ್ ಆಗಿದ್ದರಿಂದ ಹೇಗೋ ಮಧ್ಯರಾತ್ರಿಯವರೆಗೆ ಕೊಟ್ಟಿದ್ದಾರೆ. ಕೊನೆಗೆ ಬಾರ್ ಬಂದ್ ಎಂದು ಘೋಷಿಸಿದ ಮೇಲೆ ಸುಮ್ಮನಾದ ಗೆಳೆಯರು ಮನೆಗೆ ಹೊರಡಲು ಬೈಕ್ ಹತ್ತಿ ಸ್ಟಾರ್ಟ್ ಮಾಡಿದ್ದಾರೆ. ಕೂಡಲೇ ಎದುರಿಗೆ ಇದ್ದ ಕಾರಿಗೆ ಡಿಕ್ಕಿ ಹೊಡೆದರು. ಆಗ ಅಲ್ಲಿದ್ದ ಸಿಬ್ಬಂದಿ ಬೈಕ್ ತೆಗೆದುಕೊಂಡು ಹೋಗುವುದು ಬೇಡ. ಇಲ್ಲಿಯೇ ಇಡಿ. ಬೆಳಿಗ್ಗೆ ಒಯ್ಯಿರಿ ಎಂದು ಬುದ್ಧಿವಾದ ಹೇಳಿದ ಮೇಲೆ ಆಟೊ ಹತ್ತಿದ್ದಾರೆ.
ಆದರೆ, ಆಟೊದವನಿಗೆ ಯಾವುದೋ ಅಡ್ರೆಸ್ ಹೇಳಿದ್ದಾರೆ. ಆಟೊ ಚಾಲಕ ಸುತ್ತಿದ್ದೇ ಸುತ್ತಿದ್ದು. ಪ್ರತಿ ಬಾರಿ ಮನೆಯ ಮುಂದೆ ಆಟೊ ನಿಂತಾಗ ಗೆಳೆಯರು, ಇದು ನಮ್ಮ ಮನೆಯಲ್ಲ, ಇದಲ್ಲ… ಇದಲ್ಲ.. ಎಂದು ಹೇಳಿ ಸುತ್ತಾಡಿಸಿದ್ದಾರೆ. ಕೊನೆಗೆ ಆಟೊದವನಿಗೆ ಸಾಕಾಗಿ ಅವರನ್ನು ಹತ್ತಿಸಿಕೊಂಡಿದ್ದ ಹೋಟೆಲಿಗೇ ಮರಳಿ ತಂದು ಬಿಟ್ಟು ಹೋದರು. ಅನಿವಾರ್ಯವಾಗಿ ಹೋಟೆಲಿನವರು ಲಾಂಜ್‌ನಲ್ಲಿ ಮಲಗಲು ಅವಕಾಶ ಕೊಟ್ಟರು. ಬೆಳಿಗೆದ್ದು ಬೈಕ್ ತಗೊಂಡು ಮನೆಗೆ ಹೋದಾಗಲೇ ಮನೆಯವರು ಸಮಾಧಾನಪಟ್ಟರು. ಏಕೆಂದರೆ ಅವರ ಮೊಬೈಲ್ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗಿತ್ತು. ಹೀಗೆ ಚಿತ್ ಆಗುವವರೆಗೆ ಕುಡಿದ ಮೇಲೆ ಮನೆಯ ವಿಳಾಸ ಸಿಗುವುದಾದರೂ ಹೇಗೆ? ಸದ್ಯ ಇನ್ನೊಬ್ಬರ ಮನೆಯ ಕದ ತಟ್ಟಿಲ್ಲವೆನ್ನುವ ಸಮಾಧಾನ ಅವರ ಮನೆಯವರದು. ಇದಕ್ಕಾಗಿ ಗಂಡ ಕುಡಿಯಲಿ. ಆದರೆ, ತುಸುವೇ ಕುಡಿಯುವ ಗಂಡ ಇರಲಿ ಎನ್ನುವ ಅಭಿಪ್ರಾಯ ಅನೇಕ ಹೆಣ್ಣಮಕ್ಕಳದು. ಆದರೆ ಮದುವೆ ಮುಂಚೆ ತುಸುವೂ ಕುಡಿಯದ ಗಂಡ ಸಿಗಲಿ ಎನ್ನುವ ಪ್ರಾರ್ಥನೆ ಅನೇಕರದು. ಈ ಕುರಿತು ಮದುವೆ ಮುಂಚೆಯೇ ಅನೇಕ ಹುಡುಗಿಯರು ‘ನೀವು ಕುಡಿಯುತ್ತೀರಾ’ ಎಂದು ಕೇಳಿದಾಗ ಕೂಡಲೇ ಹುಡುಗರು ‘ಇಲ್ಲ‘ ಎಂದು ಉತ್ತರಿಸುತ್ತಾರೆ. ಆಮೇಲೆ ನಿಧಾನವಾಗಿ ಗಂಡನ ಕುಡಿತದ ಪರಿಚಯ ಆಗುತ್ತದೆ.
* * *
ಈಚಿನ ವರ್ಷಗಳ ಸಿನಿಮಾಗಳಲ್ಲಿ ಐಟಂ ಸಾಂಗ್ ಕಾಯಂ ಇದ್ದ ಹಾಗೆ ಇತ್ತೀಚೆಗೆ ಎಣ್ಣೆ ಸಾಂಗ್ ಕಡ್ಡಾಯವಾಗಿದೆ.
ಎಣ್ಣೆ ಗಾಯಕ ಎಂದೇ ಪ್ರಸಿದ್ಧರಾದ ನವೀನ್ ಸಜ್ಜು ಅವರು ‘ನಾಳೆಯಿಂದ ಎಣ್ಣೆ ಬುಟ್ಬಿಡ್ತೀನಿ. ಒಂದಿನಾ ಲಾಸ್ಟ್ ಕುಡ್ದುಬುಡ್ತಿನಿ’ ಎನ್ನುವ ಹಾಡು ಯೂ ಟ್ಯೂಬ್ ನಲ್ಲಿ ಸಖತ್ ಪ್ರಸಿದ್ಧವಾಯಿತು. ಜತೆಗೆ, ಬಾರ್ ಎಂದರೆ ಗಂಡುಮಕ್ಕಳ ತವರು ಎಂದು ಹಾಡು ಕೂಡಾ ಜನಪ್ರಿಯವಾಗಿದೆ. `ಏನ್ ಚೆಂದ ಕಾಣಿಸ್ತಾಳ ನಮ್ಮ ಖೋಡೆ ರಮ್ಮವ್ವಾ, ನೀನು ನಾನು ಸೇರೋದು ಎಂದ್ರೆ ಎಂಥಾ ಮಜ ಯವ್ವಾ’ – ಇಂತಹ ಹಾಡುಗಳೇ ಈಗ ಹೆಚ್ಚು. ಮುಂದೆ ಕನ್ನಡ ಸಿನಿಮಾಗಳಲ್ಲಿ ಎಣ್ಣೆ ಸಾಂಗ್ ಕುರಿತು ಎಂ.ಫಿಲ್., ಪಿಎಚ್.ಡಿ. ಅಧ್ಯಯನ ಕೈಗೊಳ್ಳಬಹುದು.
* * *
ಸಂತೋಷಕ್ಕೆ, ದುಃಖಕ್ಕೆ, ಕ್ರಿಕೆಟ್‌ನಲ್ಲಿ ಭಾರತ ಸೋತರೆ ಅಥವಾ ಗೆದ್ದರೆ, ಬಾಸ್ ಬೈದರೆ, ಪ್ರಮೋಷನ್ ಸಿಕ್ಕರೆ, ಕಚೇರಿಯಲ್ಲಿ ನೋಟಿಸ್ ಕೊಟ್ಟರೆ, ಮೈಕೈ ನೋವಿಗೆ ಮದ್ದಾಗುವುದೆಂದು, ಮನೆಯಾಕೆ ಊರಿಗೆ ಹೋದಳೆಂಬ ಖುಷಿಗೆ, ಹೆಂಡತಿ ಬೇರೆ ಊರಲ್ಲಿ ನೌಕರಿಯಿದ್ದರೆ, ಚಳಿಯಾದರೆ, ಮಳೆಯಾದರೆ, ಬಿಸಿಲು ಹೆಚ್ಚಾದರೆ, ಹಳೆಯ ನೆನಪುಗಳ ಮರೆಯಲು, ಹಳೆಯ ಲವರ್ ಮರೆಯಲು ಮದ್ಯಕ್ಕೆ ಮೊರೆ ಹೋದವರು ಕುಡಿಯುತ್ತ ಮತ್ತೆ ಮತ್ತೆ ನೆನಪುಗಳಿಗೆ ಜಾರುತ್ತಾರೆ. ಕೊರೊನಾ ವೈರಸ್ ಬರದಿರಲು ಕುಡಿಯಬೇಕು ಎಂದ ಗೆಳೆಯರಿದ್ದಾರೆ. ಕೊರೊನಾ ವೈರಸ್ ಪ್ರಯುಕ್ತ ಮದ್ಯದಂಗಡಿಗಳು ಮುಚ್ಚಿದ ಪರಿಣಾಮ ಕೆಲವರು ಆತ್ಮಹತ್ಯೆ ಮಾಡಿಕೊಂಡರು. ‘ಕೊಡು ತಾಯಿ ವರವ ಕುಡುಕನಲ್ಲದ ಗಂಡನ್ನ’ ಎಂದು ಕೇಳುವ ದಿನಗಳಲ್ಲ ಇವು. ‘ಹೆಚ್ಚು ಕುಡಿಯದ, ಕುಡಿದರೂ ಸೀದಾ ಮನೆಗೇ ಬರುವ ಗಂಡನ ಕೊಡು ತಾಯಿ’ ಎಂದು ಪ್ರಾರ್ಥಿಸುವ ದಿನಗಳಿವು.
* * *
ಉತ್ತರ ಕರ್ನಾಟಕದಲ್ಲಿ ಶಬ್ದಗಳಿಗೆ ಸಾಮಾನ್ಯವಾಗಿ ವ್ಯಂಜನ ಬಳಸುವುದಿಲ್ಲ. ಹೀಗಾಗಿ ಕಾಂಚನ ಬಾರ್ ಅಂಡ್ ರೆಸ್ಟೊರೆಂಟ್ ಎಂದು ಬರೆಯುವ ಬದಲು ‘ಕಾಂಚನ ಬಾರ’ ಎಂದು ಬರೆಯುತ್ತಾರೆ. ಹೀಗೆಯೇ ವೈನ್ ಶಾಪ್ ಎಂದು ಬರೆಯುವ ಬದಲು ‘ವೈನ ಶಾಪ’ ಎಂದು ಬರೆದಿರುತ್ತಾರೆ. ಇದು ನಿಜ. ಗುಂಡು ಯಾವಾಗಲೂ ಶಾಪವೇ. ಆದರೆ ಅನೇಕರಿಗೆ ಅದು ಮದ್ದು ಕೂಡಾ. ಇದಕ್ಕಾಗಿ ಆಯಾಸವಾದರೆ, ಗಾಯವಾದರೆ ಪೇನ್ ಕಿಲ್ಲರ್ ಎಂದು ಗುಂಡು ಹಾಕುವುದುಂಟು. ಕೆಲವರಿಗಂತೂ ಕಂಡಲ್ಲಿ ಗುಂಡು ಹಾಕುವುದಕ್ಕಿಂತ ಮನೆಯಲ್ಲೇ ಗುಂಡು ಹಾಕಲು ಒಳ್ಳೆಯ ನೆಪ ಸಿಕ್ಕಿತು ಎಂದು ಖುಷಿಪಡುತ್ತಾರೆ.
ಕೆಲ ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಸೆಕೆಂಡ್ಸ್ ಮಾರುವುದು ಸಾಮಾನ್ಯವಾಗಿತ್ತು. ಅಂದರೆ ನಕಲಿ ಮದ್ಯ ಮಾರಾಟ ಜೋರಾಗಿತ್ತು. ಅಲ್ಲಿನ ಕಮರಿಪೇಟೆಯಲ್ಲಿ ಕಡಿಮೆ ಬೆಲೆಯ, ಎಲ್ಲ ಬ್ರಾಂಡ್ ನ ಮದ್ಯ ಸಿಗುವುದು ಸಾಮಾನ್ಯವಾಗಿತ್ತು. ಕಮರಿಪೇಟೆಯ ಕೆಲ ಮನೆಗಳಿಗೆ ಹೋದೊಡನೆ ಗೋಡೆಗೆ ಅಂಟಿಕೊಂಡಿರುವ ಬೆಂಚುಗಳನ್ನು ಕೆಳಗಿಳಿಸುತ್ತಿದ್ದರು. ಹೀಗೆ ಚಹಾದ ಅಂಗಡಿಗೆ ಹೋದ ಹಾಗೆ ಕಮರಿಪೇಟೆಗೆ ಹೋಗಿಬರುವುದು, ಉದ್ರಿ ಹೇಳುವುದು ಸಾಮಾನ್ಯವಾಗಿತ್ತು. ಇದನ್ನೆಲ್ಲ ಬಂದ್ ಮಾಡಿಸಿದ್ದು ಆಗ ಅಲ್ಲಿ ಡಿಸಿಪಿ ಆಗಿದ್ದ ರವಿಕಾಂತೇಗೌಡ ಅವರು.
ಇಂಥ ಹುಬ್ಬಳ್ಳಿಯಲ್ಲಿ ಪತ್ರಕರ್ತನಾದ ಗೆಳೆಯ ಸುಶಿಲೇಂದ್ರ ಕುಂದರಗಿ ‘ಮದ್ಯಾರಾಧನೆ’ ಎಂಬ ಶೀರ್ಷಿಕೆಯ ಅಮಲು ಪದ್ಯಗಳ ಸಂಕಲನವನ್ನೇ ಪ್ರಕಟಿಸಿದ್ದಾನೆ.
* * *

ನಿವೃತ್ತ ಪ್ರಾಧ್ಯಾಪಕರ ಪತ್ನಿಯೊಬ್ಬರು ಮೈಸೂರಿಗೆ ನೆಂಟರ ಮನೆಗೆ ಬಂದಿದ್ದರು. ರಾತ್ರಿ ಒಂಬತ್ತಾದ ಮೇಲೆ ನೆಂಟರ ಬಳಿ ಖಾಸಗಿಯಾಗಿ ಕರೆದು ಕಿವಿಯಲ್ಲಿ ‘ಗುಂಡು ತಂದು ಕೊಡಿ’ ಎಂದು ಕೇಳಿದಾಗ ಬೆಚ್ಚಿ ಬಿದ್ದರವರು. ಆಗಾಗ ಗುಂಡು ಹಾಕುವವರಾದರೂ ನಿತ್ಯ ಅಲ್ಲ. ಅಲ್ಲದೆ, ಮಕ್ಕಳ ಎದುರು ಕುಡಿದವರೇ ಅಲ್ಲ. ಹಾಗೆ ಕೇಳಿದಾಗ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಆಗ ಕೇಳಿದರಾಕೆ ‘ನೀವು ತಂದುಕೊಡದಿದ್ದರೆ ನನಗೆ ಕಷ್ಟ. ನಿದ್ದೆಯೇ ಬರಲ್ಲ. ಹೇಗಾದರೂ ಮಾಡಿ ಗುಂಡು ತಂದುಕೊಡಿ. ಊಟ ಬೇಡವೆಂದು ಹೇಳುವೆ. ಆಮೇಲೆ ಒಬ್ಬಳೇ ರೂಮಲ್ಲಿ ಕುಳಿತು ಕುಡಿದು ಮಲಗ್ತೀನಿ. ದಯವಿಟ್ಟು ತಂದುಕೊಡಿ’ ಎಂದು ದುಂಬಾಲು ಬಿದ್ದರು. ಆಮೇಲೆ ನೆಂಟರು ವಾಕಿಂಗ್ ಹೋಗುವ ನೆಪದಲ್ಲಿ ಶಾಲು ಹೊದ್ದುಕೊಂಡು ವೈನ್‌ಶಾಪ್‌ಗೆ ಹೋಗಿ ಗುಂಡು ತಂದುಕೊಟ್ಟರು.
ಕುತೂಹಲದ ಸಂಗತಿ ಎಂದರೆ, ಪತಿ ಬದುಕಿದ್ದಾಗ ಹೊರಗೆಲ್ಲೂ ಹೋಗದೆ ಮನೆಯಲ್ಲಿಯೇ ತೆಗೆದುಕೊಳ್ಳುತ್ತಿದ್ದರು. ಆಮೇಲೆ ಆಕೆಗೆ ಕಂಪನಿ ಕೊಡುವುದು ಅಭ್ಯಾಸವಾಗಿ ಒಟ್ಟಿಗೇ ತೆಗೆದುಕೊಳ್ಳುವುದು ರೂಢಿಯಾಯಿತು. ವಯೋಸಹಜದಿಂದ ನಿವೃತ್ತ ಪ್ರಾಧ್ಯಾಪಕರು ನಿಧನರಾದರು. ನಿತ್ಯ ಕುಡಿದೇ ಮಲಗುವ ಅಭ್ಯಾಸ ಅವರ ಪತ್ನಿಗಾಗಿತ್ತು. ಆದರೆ, ನೆಂಟರ ಮನೆಗಳಿಗೆ ಹೋದರೆ ಕಷ್ಟವಾಗುತ್ತಿತ್ತು. ಈ ಫಜೀತಿಯೇ ಬೇಡವೆಂದು ನೆಂಟರ ಮನೆಗಳಿಗೆ ಹೋದಾಗ ಬ್ಯಾಗಿನೊಳಗೆ ಚಿಕ್ಕ ಚಿಕ್ಕ ಬಾಟಲಿಗಳ ಸಮೇತ ಪ್ರಯಾಣಿಸುವುದು ರೂಢಿ ಮಾಡಿಕೊಂಡರು.
* * *
ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆ ಬಳಿಯ ಶಿವನಹಳ್ಳಿ (ಶಿವನಗರ)ಯಲ್ಲಿ ಮದುವೆ ಮುಂಚೆ ನಮ್ಮ ಊರಿನ ದೇವೇಂದ್ರ ನಾಗರಾಳ ಜೊತೆಗೆ ಸಿಂಗಲ್ ಬೆಡ್ ರೂಮ್ ಬಾಡಿಗೆಗೆ ಹಿಡಿದಿದ್ದೆ. ಹಾಲು ಉಕ್ಕಿಸದೆ ಬೆಳಿಗ್ಗೆ ಕಚೇರಿಗೆ ಹೋಗಿದ್ದೆವು. ಸಂಜೆ ಹಾಲು ತರಲು ಹೊರಟಾಗ ಬಂಡಾಯ ಕವಿ ಹಾಗೂ ಜಾನಪದ ಗಾಯಕ ಎದುರಾದರು. ಬಹಳ ಖುಷಿಯಿಂದ ವಿಚಾರಿಸಿದಾಗ ಇವತ್ತೇ ಹೊಸ ಮನೆಗೆ ಬಂದಿದ್ದೇವೆ ಎಂದೆ.
‘ನೋಡೋಣ ಬನ್ನಿ’ ಎಂದು ಗೆಳೆಯರು ಉತ್ಸುಕತೆ ತೋರಿಸಿದರು. ಅವರನ್ನು ಕರೆದುಕೊಂಡು ಮನೆಗೆ ಹೋದಾಗ ಖುಷಿಪಟ್ಟರು. ಕುರ್ಚಿ ಜೋಡಿಸಿರದ ಕಾರಣ ಹಾಗೆಯೇ ನೆಲದ ಮೇಲೆ ಕುಳಿತು ಎಲ್ಲಿ ನೀರು ತಗೊಂಡು ಬನ್ನಿ ಎಂದರು. ತಂಬಿಗೆಯಲ್ಲಿ ದೇವೇಂದ್ರ ನೀರು ತಂದ. ಜಾನಪದ ಗಾಯಕರು ಮೆಲ್ಲಗೆ ತಮ್ಮ ವೇಸ್ಟ್ ಕೋಟಿನಿಂದ ರಮ್ ಬಾಟಲಿ ತೆಗೆದರು. ಜತೆಗೆ ಎರಡು ಗ್ಲಾಸು ಕೊಡಿರಿ ಎಂದರು. ಗ್ಲಾಸು ಇರದ ಕಾರಣ ಕುಡಿಯುವ ನೀರಿನ ಲೋಟವೇ ಸಾಕು ಎಂದರು. ಕೂಡಲೇ ಇರುವ ಎರಡು ಲೋಟಗಳಿಗೆ ರಮ್ ಹಾಕಿ ನೀರು ಬೆರೆಸಿ ನನ್ನತ್ತ ನೋಡಿದರು. ಇನ್ನೊಂದು ಲೋಟ ಕೊಡಿ ಎಂದರು. ನಮ್ಮಲ್ಲಿ ಇಲ್ಲವೆಂದೆವು. ಸರಿ ಎಂದು ತಮಗೆ ಪರಸ್ಪರ ಚಿಯರ್ಸ್ ಹೇಳಿ ಒಂದು ಸಿಪ್ ಹೀರಿದರು.
‘ನಾವಿನ್ನೂ ಹಾಲು ಉಕ್ಕಿಸಿಲ್ಲ. ಹಾಲು ತರಲು ಹೋಗುತ್ತಿದ್ದೆವು. ಬೆಳಿಗ್ಗೆ ಸಾಮಾನುಗಳನ್ನೆಲ್ಲ ಹಾಗೆಯೇ ತಂದು ಇಟ್ಟು ಅವಸರದಲ್ಲಿ ಕಚೇರಿಗೆ ಹೋಗಿದ್ದೆವು’ ಎಂದೆ.
‘ಹಾಲು ಉಕ್ಕಿಸಲೇಬೇಕೆಂದೇನೂ ಇಲ್ಲ. ನಾವು ಆಲ್ಕೊಹಾಲ್ ತಂದು ಕುಡಿದೆವಲ್ಲ. ಅದೇ ಹಾಲು ಉಕ್ಕಿಸಿದ ಶಾಸ್ತ್ರ’ ಎಂದು ನಕ್ಕರು. ಆಮೇಲೆ ತಂಬಿಗೆಯಿಂದ ಗೆಳೆಯ ನೀರು ತರುವುದು, ಅವರು ಖಾಲಿ ಮಾಡುವುದು ನಡೆಯಿತು. ನೆಂಚಿಕೊಳ್ಳಲು ಮಿಕ್ಸ್ಚರ್ ತಂದೆವು. ಅವರು ತಂದಿದ್ದ ರಮ್ ಖಾಲಿಯಾಯಿತು. ನಮ್ಮ ಗೆಳೆಯರು ಹೋಗಿ ಮತ್ತೆ ಕೊಂಡು ತಂದರು. ತಂಬಿಗೆಯಿಂದ ನೀರು ತರುವುದು ಮುಂದುವರಿದಿತ್ತು. ಕೊನೆಗೆ ಜಾನಪದ ಗಾಯಕ, ‘ಯಾವುದರಿಂದ ನೀರು ತರುತ್ತಿದ್ದೀರಿ?’ ಎಂದು ಕೇಳಿದರು.
ಗೆಳೆಯ ‘ತಪೇಲಿಯಿಂದ’ ಎಂದ.
‘ಅದನ್ನೇ ಇಲ್ಲಿಗೆ ತಂದುಬಿಡಿ. ಅದಕ್ಕೇ ರಮ್ ಹುಯ್ದುಬಿಡೋಣ. ಅದರಿಂದಲೇ ಕುಡಿಯೋಣ’ ಎಂದು ಸಲಹೆ ಕೊಟ್ಟರು. ಆಗ ಕವಿ, ‘ರಮ್ ಕಡಿಮೆಯಾಗಿ ನೀರು ಜಾಸ್ತಿಯಾಗ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಗಾಯಕ `ರಮ್ ಕಡಿಮೆಯಾದರೆ ಮತ್ತೆ ತರೋದು’ ಎಂದು ಸಲಹೆ ಕೊಟ್ಟರು.
‘ಸದ್ಯಕ್ಕೆ ಖಾಲಿ ಮಾಡಿ ಸಾಕು’ ಎಂದು ಕೇಳಿಕೊಂಡೆ.
ಹೀಗೆ ರಾತ್ರಿ ಒಂಬತ್ತಾದರೂ ಅವರು ಹೋಗುವ ಸೂಚನೆ ಕಾಣಲಿಲ್ಲ. ಇಬ್ಬರೂ ರಂಗೇರಿದ್ದರು. ಬಂಡಾಯ ಕವಿ ಕವಿತೆ ವಾಚಿಸಿದರು. ಇದಕ್ಕೆ ಪೂರಕವಾಗಿ ಜಾನಪದ ಕವಿ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ?’ ಎಂದು ಜೋರಾದ ಧ್ವನಿಯಲ್ಲಿ ಹಾಡಲು ಶುರು ಮಾಡಿದರು. ಕೂಡಲೇ ಕೈ ಮುಗಿದೆ.
‘ಇವತ್ತೇ ಈ ಮನೆಗೆ ಬಂದಿದ್ದೇವೆ. ವಠಾರದಲ್ಲಿರುವ ಮನೆ ಇದು. ಓನರ್ ಮನೆ ಬಿಡಸ್ತಾರೆ’ ಎಂದು ಭಯದಿಂದ ಹೇಳಿದೆ. ಅವರು ಇಬ್ಬರೂ ನಕ್ಕು `ಕವಿತೆ ವಾಚನ ಹಾಗೂ ಗಾಯನದಿಂದ ನಿಮ್ಮ ಮನೆಯ ಹಾಲು ಉಕ್ಕಿಸುವ ಶಾಸ್ತ್ರ ಮುಗಿದಿದೆ. ಆಗಾಗ ನಮ್ಮನ್ನು ಕರೆಯಿರಿ. ಬಾರಲ್ಲಿ ಕುಳಿತು ಕುಡಿದರೆ ಖರ್ಚು ಜಾಸ್ತಿ. ಅದಕ್ಕೆ ರಮ್ ಕೊಂಡು ಎಲ್ಲಿ ಕೂಡುವುದೆಂದು ಹುಡುಕುವಾಗ ನೀವು ಸಿಕ್ರಿ. ನಿಮಗೆ ಜಯವಾಗಲಿ’ ಎಂದು ಹಾರೈಸಿ ಹೊರಟರು. ಮತ್ತೆ ಮತ್ತೆ ಸಿಕ್ಕಾಗ ‘ನಿಮ್ಮ ಮನೆಗೆ ಹೋಗೋಣ್ವಾ?’ ಎಂದು ಕೇಳುತ್ತಿದ್ದರು.
* * *
ಮದ್ಯಪ್ರಿಯರೆಲ್ಲ ಪತ್ರಿಕಾಗೋಷ್ಠಿ ಮಾಡಿದ್ದು ನಿಮಗೆ ಗೊತ್ತಾ? ಮದ್ಯದ ಅಂಗಡಿ ಆರಂಭವಾಗಬೇಕು. ಇದಕ್ಕಾಗಿ ಜಿಲ್ಲಾಧಿಕಾರಿ ಪರವಾನಗಿ ನೀಡಬೇಕೆಂದು ಪತ್ರಿಕಾಗೋಷ್ಠಿ ನಡೆಸುವುದು ಅಪರೂಪ. ಇಂಥದೊAದು ಮೈಸೂರಿನಲ್ಲಿ ನಡೆಯಿತು.
ಎಚ್.ಡಿ.ಕೋಟೆ ತಾಲ್ಲೂಕಿನ ಸರಗೂರು ಪಟ್ಟಣದಲ್ಲಿ ಎಂಎಸ್‌ಐಎಲ್ (ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್) ಮಳಿಗೆ ಮಂಜೂರಾಗಿದ್ದು, ಶಾಸಕರು ಅಡ್ಡಗಾಲು ಹಾಕುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಸರಗೂರಿಗೆ ಬಂದು ಮಳಿಗೆ ಪರಿಶೀಲಿಸಿ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಸರಗೂರಿನ ಸಾರ್ವಜನಿಕರು ಮೈಸೂರಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿದ್ದರು.
ಮದ್ಯದಂಗಡಿ ಏಕೆ ಬೇಕು ಎಂದು ಕೇಳಿದಾಗ ಇಪ್ಪತ್ತು ಸಾವಿರ ಜನಸಂಖ್ಯೆ ಇರುವ ಸರಗೂರಲ್ಲಿ ಐದು ಮದ್ಯದಂಗಡಿಗಳಿವೆ. ಎಲ್ಲದರಲ್ಲೂ ಕಲಬೆರಕೆ ಮಾರಾಟ ನಡೆಯುತ್ತಿದೆ. ಜತೆಗೆ, ದರವೂ ದುಪ್ಪಟ್ಟು. ಇದನ್ನು ತಪ್ಪಿಸಲು ಜನರಿಗೆ ಶುದ್ಧವಾದ ಮದ್ಯ ಸಿಗಬೇಕು. ದುಡಿದು ಸುಸ್ತಾದವರು ಕುಡಿದು ಹಾಯಾಗಿ ಮಲಗಲು ಅವಕಾಶ ಸಿಗಬೇಕು ಎಂದು ಪತ್ರಿಕಾಗೋಷ್ಠಿ ನಡೆಸಿದವವರ ಮನವಿಯಾಗಿತ್ತು.
ಮದ್ಯದಂಗಡಿ ಬೇಡ ಎಂದು ಹೋರಾಟ ನಡೆಯುತ್ತಿರುವಾಗ ನೀವು ಬೇಕು ಎನ್ನುತ್ತೀರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ‘ಸರ್ಕಾರವೇ ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡಿದೆ. ಜನರಿಗೆ ಕಡಿಮೆ ದುಡ್ಡಲ್ಲಿ, ಶುದ್ಧವಾದ ಮದ್ಯ ಸಿಗಲಿಬಿಡಿ‘ ಎಂದು ಉತ್ತರಿಸಿದಾಗ ಪತ್ರಕರ್ತರು ಸುಸ್ತು.
ಇನ್ನೊಂದು ಪ್ರಸಂಗ; ಗ್ಲಾಸಿಗೆ ಮತ, ಕುಡಿಯುವವರಿಗೆಲ್ಲ ಹಿತ ಎಂದು ೨೦೦೮ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಹುಬ್ಬಳ್ಳಿಯಲ್ಲಿ ಸ್ಪರ್ಧಿಸಿದ ಎಸ್.ಆರ್. ಕಂಪ್ಲಿ ಅವರ ಉದ್ದೇಶವಾಗಿತ್ತು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾದ ಎಸ್.ಆರ್.ಕಂಪ್ಲಿ ಅವರು ಚುನಾವಣೆ ಗುರುತಿನ ಚಿಹ್ನೆಯಾಗಿ ಗ್ಲಾಸನ್ನು ಆಯ್ದುಕೊಂಡಿದ್ದರು. ಇದಕ್ಕಾಗಿ ಗ್ಲಾಸಿಗೆ ಮತ, ಕುಡಿಯುವವರಿಗೆಲ್ಲ ಹಿತ ಎಂದು ಅವರು ಕರಪತ್ರ ಹಂಚಿದ್ದರು.

ಗ್ಲಾಸನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ ಎಂದು ಕೇಳಿದಾಗ, ‘ನೀರು, ಹಾಲು ಕುಡಿಯುವುದರಿಂದ ಹಿಡಿದು ಆಲ್ಕೋಹಾಲು ಕುಡಿಯುವುದಕ್ಕೂ ಗ್ಲಾಸು ಬೇಕು. ಹೀಗಾಗಿ ನನ್ನ ಗುರುತಿನ ಚಿಹ್ನೆ ಎಲ್ಲರ ನೆನಪಲ್ಲಿ ಉಳಿಯುತ್ತದೆ’ ಎಂಬುದು ಅವರ ಸಮಾಜಾಯಿಷಿಯಾಗಿತ್ತು.
ರಂಗಭೂಮಿ ಕಲಾವಿದರೂ ಆದ ಕಂಪ್ಲಿ ಅವರು ಸ್ಪರ್ಧಿಸಿದ್ದು ಹಿರಿಯ ರಾಜಕಾರಣಿ ಜಗದೀಶ ಶೆಟ್ಟರ ವಿರುದ್ಧ. ‘ಶೆಟ್ಟರ ಹತ್ತಿರ ಹೋಗಿ ನನಗೇ ಮತ ನೀಡಿರಿ’ ಎಂದು ಅವರು ಕೇಳಿದ್ದರು. ಕುತೂಹಲದ ಸಂಗತಿ ಎಂದರೆ, ಅವರು ರಂಗಭೂಮಿ ಪ್ರವೇಶಿಸಿದಾಗ ಜಗದೀಶ ಶೆಟ್ಟರ ಅವರು ಇನ್ನೂ ಚಿಕ್ಕವರು. ಅವರ ನಾಟಕ ನೋಡಲು ಶೆಟ್ಟರ ಹೋಗುತ್ತಿದ್ದರಂತೆ.
ಇಂಥ ಕಂಪ್ಲಿಯವರು ರಾಜ್ಯ ಮದಿರಾಪ್ರಿಯರ ಹಿತರಕ್ಷಣಾ ಸಂಘ ಕಟ್ಟಿಕೊಂಡು ಅದರ ಅಧ್ಯಕ್ಷರಾಗಿದ್ದರು. ಇನ್ನೊಂದು ರಾಜ್ಯ ಕುಡುಕರ ಹಿತರಕ್ಷಣಾ ಒಕ್ಕೂಟವೊಂದನ್ನು ಕೆ. ಥಾಮಸ್ ಕಟ್ಟಿಕೊಂಡು ಅದರ ಸಂಚಾಲಕರಾಗಿದ್ದಾರೆ.
* * *
ಇನ್ನು ಪಬ್‌ಗಳತ್ತ ಗಮನ ಹರಿಸಿದರೆ ಅವು ಯುವತಲೆಮಾರಿನ ಅಡ್ಡೆಗಳು. ಪಬ್‌ಗಳಲ್ಲಿ ಶ್ರೀಮಂತರು, ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಹುಡುಗ/ಹುಡುಗಿಯರು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಐಟಿ, ಬಿಟಿಯಂಥ ಹೆಚ್ಚಿನ ಸಂಬಳದವರು ಪಬ್‌ಗಳಲ್ಲಿ ಕುಳಿತು ಬಿಯರು ಕುಡಿಯುವುದು ಸಾಮಾನ್ಯವಾಗಿದೆ. ಇಂಥ ಪಬ್‌ಗಳಲ್ಲಿ ಬಿಯರನ್ನು ಚಿಲ್ಲರೆಯಾಗಿ ಕೊಡುವುದೂ ಸಾಮಾನ್ಯ.
‘ಬ್ರಿವರೀಸ್’ನಿಂದ ಸಣ್ಣ ಡ್ರಮ್‌ಗಳಲ್ಲಿ ನಿತ್ಯ ತಂದ ಮೇಲೆ ಲೋಟ, ಮಗ್ ಹಾಗೂ ‘ಪಿಚ್ಚರ್’ಗಳಲ್ಲಿ (ಬೌಲ್ ಆಕಾರವಿರುವ) ಮಾರಲಾಗುತ್ತಿದೆ. ಪಬ್ ಪರವಾನಗಿ ಪಡೆದವರು ಬ್ರಿವರಿಸ್ ಮೂಲಕ ಬಿಯರ್ ತರಿಸಿ ಮಾರುತ್ತಾರೆ. ಆದರೆ ಬಾಟಲಿ ಬಿಯರ್‌ಗಿಂತ ಪಬ್‌ನ ಬಿಯರು ಹೆಚ್ಚು ರುಚಿ. ಏಕೆಂದರೆ ಬಾಟಲಿಗಳಲ್ಲಿ ಬಿಯರು ತುಂಬಿದ ಅನೇಕ ದಿನಗಳಾದ ನಂತರ ಮಾರಾಟವಾಗಿ ಕುಡಿಯುವವರ ಹೊಟ್ಟೆ ತುಂಬುವಾಗ ಒಗರಾಗಿರುತ್ತದೆ. ಆದರೆ ಪಬ್ಬುಗಳಿಗೆ ಬ್ರಿವರೀಸ್‌ನಿಂದ ಬರುವ ಬಿಯರು ತಾಜಾ ಹಾಗೂ ಒಗರು ಕಡಿಮೆ ಇರುತ್ತದೆ.
ಗಮನಿಸಿ; ಪಬ್ಬುಗಳಿಗೆ ಹಗಲು ಹೊತ್ತಿನಲ್ಲಿಯೇ ಹೋಗುವುದು ಹೆಚ್ಚುತ್ತಿದೆ. ಕುಟುಂಬ ಸಮೇತ ಮಧ್ಯಾಹ್ನ ಊಟಕ್ಕೆ ಹೋಗಿ ಬಿಯರು ಕುಡಿಯುವುದು ಸಾಮಾನ್ಯವಾಗುತ್ತಿದೆ. ಮುಖ್ಯವಾಗಿ ಸಂವಾದ, ಚರ್ಚೆಗಳಿಗೆ ಗಂಟೆಗಟ್ಟಲೆ ಬೇಕಾಗುವುದರಿಂದ ಪಬ್ಬುಗಳಲ್ಲಿ ಕುಳಿತುಕೊಳ್ಳುವವರು ಹೆಚ್ಚುತ್ತಿದ್ದಾರೆ. ಇದರೊಂದಿಗೆ ಪ್ರೇಮಿಗಳಿಗೆ ಪಬ್‌ನ ಮಂದಬೆಳಕು ಹೆಚ್ಚು ಉಪಯುಕ್ತವಾಗುತ್ತಿದೆ. ಉದ್ಯಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜೋಡಿಗಳ ಜೇಬು ಗಟ್ಟಿಯಿದ್ದರೆ ಪಬ್‌ನತ್ತ ಧಾವಿಸುತ್ತವೆ.
ಪಬ್‌ನಲ್ಲಿ ಕೂತು ಪೆಗ್ ಮೇಲೆ ಪೆಗ್ ಇಳಿಸುತ್ತ ಹೋದ ಹಾಗೆ ನೆಟ್ಟಗಿರುವ ಗೆರೆಗಳೂ ಅಂಕುಡೊಂಕಾಗಿ ಕಾಣುತ್ತವೆ. ಮೊದಲೇ ಗೆರೆಗಳು ಅಂಕುಡೊಂಕಾಗಿದ್ದರೆ?
ಇಂಥದೊಂದು ಪ್ರಯತ್ನ ಮಂಗಳೂರಿನ ಬಲ್ಮಠದ ಇಂದ್ರಭವನ ಹೋಟೆಲ್ ಪಕ್ಕದಲ್ಲಿರುವ ಪಬ್‌ನಲ್ಲಿ ನಡೆಯಿತು. ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ಮಂಗಳೂರಿನ ನಿತ್ಯದ ಬದುಕನ್ನು ತಮ್ಮ ಅಂಕುಡೊಂಕು (ವ್ಯಂಗ್ಯಚಿತ್ರ) ಗೆರೆಗಳ ಮೂಲಕ ಪಬ್‌ನ ಗೋಡೆಗಳ ಮೇಲೆ ಅನಾವರಣಗೊಳಿಸಿದರು.
ಸಾಮಾನ್ಯವಾಗಿ ವ್ಯಂಗ್ಯಚಿತ್ರಗಳನ್ನು ಕೇವಲ ಪತ್ರಿಕೆಗಳಲ್ಲಿ, ಪ್ರದರ್ಶನಗಳಲ್ಲಿ ಮಾತ್ರ ಕಾಣಬೇಕಿಲ್ಲ. ಗೋಡೆಗಳ ಮೇಲೂ ಕಾಣಬಹುದು ಎಂದು ಪಬ್‌ನ ಒಡೆಯರಾದ ಸುಧೀರ್ ಹಾಗೂ ಅವರ ಸೋದರರು ಹೇಳುತ್ತಾರೆ. ಪೇಂಟಿಂಗ್ ಅಥವಾ ಸಿನಿಮಾ ನಟ/ನಟಿಯರ ಛಾಯಾಚಿತ್ರಗಳನ್ನು ಅಂಟಿಸುವ ಬದಲು ಗೆರೆಗಳಿಗೆ ಮಹತ್ವ ಕೊಟ್ಟರು.
ಕುಡಿದು ಚಿತ್ತಾದ ಮೇಲೆ ಕಂಡವರೆಲ್ಲ ಅಥವಾ ಕಂಡಿದ್ದೆಲ್ಲ ಅಂಕುಡೊಂಕಾಗಿ ಕಾಣುವ ಮೊದಲೇ ಅಂಕುಡೊಂಕು ಗೆರೆಗಳನ್ನು ಪ್ರದರ್ಶಿಸುವ ಸಣ್ಣ ಯೋಜನೆಯಿದು. ಜೊತೆಗೆ ಮಂಗಳೂರಿನ ಬಿಸಿಲಿಗೆ ಬೆವರಿಳಿಯುವಾಗ ಬೀರಿಳಿಸಲು ಈ ಪಬ್‌ಗೆ ಹೋದವರಿಗೆ ಈ ವ್ಯಂಗ್ಯಚಿತ್ರಗಳು ಮುದ ಕೊಡಬಹುದು. ಅಲ್ಲದೇ ಟೆನ್ಷನ್‌ಗೆ ಒಳಗಾಗಿ ಮುಖ ಬಿಗಿದುಕೊಂಡು ಪಬ್‌ನ ಒಳಗೆ ಹೋದವರಿಗೆ ಮುಗುಳ್ನಗೆ ಮೂಡಿಸಲಿ ಎನ್ನುವ ಆಲೋಚನೆಯೂ ಇರಬಹುದು. ಏನೇ ಇರಲಿ, ಕಚಗುಳಿ ಇಡುವ ವ್ಯಂಗ್ಯಚಿತ್ರಗಳವು.
ನಿಮಗೆ ನೆನಪಿರಬೇಕು: ೨೦೦೯ರಲ್ಲಿ ಮಂಗಳೂರಲ್ಲಿ ಪಬ್ಬೊಂದರ ಮೇಲೆ ದಾಳಿ ನಡೆಯಿತು. ನಮ್ಮ ಸಂಸ್ಕೃತಿಯನ್ನು ಪಬ್‌ಗಳು ಹಾಳು ಮಾಡುತ್ತಿವೆ ಎನ್ನುವುದು ದಾಳಿ ಮಾಡಿದ ಸಂಘಟನೆಯ ಕಾರ್ಯಕರ್ತರ ಆರೋಪವಾಗಿತ್ತು. ಏನೇ ಆದರೂ ಈಗೀಗ ಪಬ್‌ಗಳು ಹೆಚ್ಚಿವೆ. ಹೀಗಾಗಿ ಬೆಂಗಳೂರು ಪಬ್ ಸಿಟಿ ಎಂದೇ ಪ್ರಸಿದ್ಧವಾಗಿದೆ. ಹಾಗೆ ನೋಡಿದರೆ ಬೆಂಗಳೂರಿನ ಪಬ್ ಸಂಸ್ಕೃತಿಗೆ ೧೬೦ ವರ್ಷಗಳಿಗೂ ಅಧಿಕ ಇತಿಹಾಸವಿದೆ. ಸ್ಕಾಟ್ ಥಾಮಸ್ ಲೀಸ್ಮನ್ ಎಂಬಾತ ೧೮೫೭ರಲ್ಲಿ ಬೆಂಗಳೂರಿನಲ್ಲಿ ಯುನೈಟೆಡ್ ಬ್ರಿವರೀಸ್ ಶುರು ಮಾಡಿದ. ಅದು ಈಗ ಯುಬಿ ಸಿಟಿಯಾಗಿದೆ. ಆ ಕಾಲದಲ್ಲಿ ಬೆಂಗಳೂರಲ್ಲಿದ್ದ ಬ್ರಿಟಿಷ್ ಸೈನಿಕರಿಗೆ ಬ್ಯಾರಲ್ ಮೂಲಕ ಬಿಯರು ಸರಬರಾಜು ಆಗುತ್ತಿತ್ತು. ಆಮೇಲೆ ಅರವತ್ತರ ದಶಕದಲ್ಲಿ ಕಿಂಗ್ ಫಿಶರ್ ಶುರುವಾದರೂ ಬಿಯರು ಜನಪ್ರಿಯವಾಗಿದ್ದು ಎಂಬತ್ತರ ದಶಕದಲ್ಲಿ.
ಇರಲಿ, ಬಿಯರ್‌ನೊಂದಿಗೆ ಊಟ ಮಾಡಿದರೆ ಬೀರೂಟ, ರಮ್‌ನೊಂದಿಗೆ ಊಟ ಮಾಡಿದರೆ ರಮ್ಮೂಟ ಎಂದು ಚಲನಚಿತ್ರ ನಿರ್ದೇಶಕ, ರಂಗಕರ್ಮಿ ಬಿ. ಸುರೇಶ್ ಆಗಾಗ ಸಿಕ್ಕಾಗ ಹೇಳುತ್ತಾರೆ.

ಕೊರೊನಾ ವೈರಸ್ ಪರಿಣಾಮ ಸ್ಯಾನಿಟೈಸರ್ ಬಳಸಿ ಎಂಬ ಒತ್ತಾಯ ಎಲ್ಲೆಡೆ ಇತ್ತು. ಸ್ಯಾನಿಟೈಸರ್‌ನಲ್ಲಿ ಆಲ್ಕೋಹಾಲ್ ಅಂಶ ಇರುತ್ತದೆ. ಇದು ಯಾಕೆ ನೆನಪಾಯಿತು ಎಂದರೆ ನಮ್ಮ ಹಿರಿಯರು ಕುಡಿಯುವ ಮೊದಲು ಒಂದೆರಡು ಹನಿಗಳನ್ನು ಭೂಮಿತಾಯಿಗೆ ಅರ್ಪಣೆ ಎಂದು ಗ್ಲಾಸಿನ ಸುತ್ತ ಹಾಕುತ್ತಿದ್ದರು. ಈ ಮೂಲಕ ಅವರಿಗೆ ಅರಿವಿಲ್ಲದೇ ಸ್ಯಾನಿಟೈಸರ್ ಬಳಸಿದ ಹಾಗಾಗುತ್ತಿತ್ತು. ಆದರೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಸ್ಯಾನಿಟೈಸರ್ ಕುಡಿದು ಅಕ್ಕ-ತಮ್ಮ ಸತ್ತುಹೋಗಿದ್ದು ಮರೆಯಲಾಗದು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಕೊರೊನಾ ಸಲುವಾಗಿ ಮದ್ಯದ ಅಂಗಡಿ ಬಂದಾಗಿದ್ದವು. ಇಂಥದ್ದೇ ಅಂಗಡಿಗಳ ಮಾಲೀಕರೊಬ್ಬರು ನಿತ್ಯವೂ ತಮ್ಮ ಅಂಗಡಿ ನೋಡಿಕೊಂಡು ಹೋಗುತ್ತಿದ್ದರು. ಒಂದು ದಿನ ಅಂಗಡಿ ಮುಂದೆ ಮದ್ಯ ಹರಿದು ರಸ್ತೆಗೆ ಬಂದಿದೆ. ಕೂಡಲೇ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಅಧಿಕಾರಿಗಳು ಬಂದು ಅಂಗಡಿ ತೆರೆದಾಗ ಪೌಚುಗಳು ಒಡೆದದ್ದು, ಅವುಗಳಲ್ಲಿನ ಮದ್ಯ ಕುಡಿದದ್ದು ಇಲಿಗಳೆಂದು ಗೊತ್ತಾಯಿತು. ಅಂತೂ ಜಗದ ಜನರಿಗೆ ಸಿಗದ ಮದ್ಯ ಇಲಿಗಳಿಗೆ ದಕ್ಕಿದ್ದು, ಅವು ರುಚಿ ಕಂಡ ಪರಿಣಾಮ ನಿತ್ಯ ಸೇವಿಸಿ ಆನಂದಿಸಿದ್ದಾಯಿತು. ಜೊತೆಗೆ ಪೌಚುಗಳ ಮದ್ಯ ಹರಿದು ರಸ್ತೆಗೆ ಬಂದಾಯಿತು. ಆಮೇಲೆ ಪೌಚುಗಳನ್ನು ಭದ್ರವಾಗಿರಿಸಲಾಯಿತು.
ಇನ್ನೊಂದು ಸಂಗತಿ; ಕೊರೊನಾದಿಂದ ಲಾಕ್‌ಡೌನ್ ಆದ ಪರಿಣಾಮ ಹುಬ್ಬಳ್ಳಿಯಲ್ಲಿ ಮದ್ಯದ ಕಳವೂ ಆಯಿತು. ಆದರೆ ನಗದು ದೋಚದೆ ಅದರಲ್ಲೂ ಪ್ರಾಮಾಣಿಕತೆ ಮೆರೆದರು ಕಳ್ಳರು. ಹೀಗೆಯೇ ಮದ್ಯಕ್ಕೆ ಕನ್ನ ಹಾಕಿದ ರೌಡಿ, ಸಿಕ್ಕಿದ್ದೇ ಶಿವಾ ಎಂದು ಜಮಾಯಿಸಿದ ಪರಿಣಾಮ ಪೂರ್ತಿ ಟೈಟಾಗಿ ಮದ್ಯದಂಗಡಿಯಲ್ಲಿಯೇ ಮಲಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ. ಇದರೊಂದಿಗೆ ಮದ್ಯಕ್ಕೆ ಸಂಬಂಧಿಸಿ ಅಬಕಾರಿ ಅಧಿಕಾರಿಗಳು ಕೊಡಗು ಜಿಲ್ಲೆಯಲ್ಲಿ ನಡುರಸ್ತೆಯಲ್ಲಿಯೇ ಹೊಡೆದಾಡಿಕೊಂಡು, ಮರುದಿನ ಅಮಾನತು ಕೂಡಾ ಆದರು. ಈ ಸಂದರ್ಭದಲ್ಲಿ ಮದ್ಯದಂಗಡಿಗಳು ಮುಚ್ಚಿದ್ದಾಗ ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ’ ಎಂಬ ಹಾಡು ಟಿಕ್‌ಟಾಕ್‌ನಲ್ಲಿ ಜನಪ್ರಿಯವಾಗಿತ್ತು.
ಲಾಕ್‌ಡೌನ್ ಸಂದರ್ಭದಲ್ಲಿ `ತ್ರಾಸಾಗೇತಿ, ವೈನ್‌ಶಾಪ್ ಓಪನ್ ಮಾಡ್ಸಿ’ ಅಂತ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಒತ್ತಾಯಿಸಿದವರು ಅನೇಕರು.
ಕೊರೊನಾ ವೈರಸ್ ಹಾವಳಿಯಿಂದಾಗಿ ಮದ್ಯ ಸಿಗದೆ ಖಿನ್ನತೆಗೆ ಒಳಗಾದವರಿಗೆ ವೈದ್ಯರ ಸಲಹೆಯ ಮೇರೆಗೆ ಅಬಕಾರಿ ಇಲಾಖೆಯಿಂದ ಮದ್ಯ ಖರೀದಿಸಲು ಅವರ ಮನೆಗಳಿಗೆ ವಿಶೇಷ ಪಾಸುಗಳನ್ನು ನೀಡಲು ಕೇರಳ ಸರ್ಕಾರ ಮುಂದಾಗಿತ್ತು. ಆದರೆ ಹೈಕೋರ್ಟ್ ತಡೆ ನೀಡಿತು. ಆದರೆ ನಮ್ಮ ರಾಜ್ಯದಲ್ಲಿ ಈ ಬಗೆಯ ಪಾಸುಗಳು ಸಿಗದೆ ಖಿನ್ನತೆಗೆ ಒಳಗಾಗಿ `ಸಂಜೆಯೊಳಗೆ ವೈನ್‌ಶಾಪ್ ಶುರುಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂದು ವ್ಯಕ್ತಿಯೊಬ್ಬ ಮುಖ್ಯಮಂತ್ರಿಗೆ, ಪ್ರಧಾನಿಗೆ ಬೆದರಿಕೆ ಹಾಕಿದ ವಿಡಿಯೊ ವೈರಲ್ ಆಯಿತು. ಆದರೆ ‘ಹೌದ್ದು ಹುಲಿಯಾ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಗಮನ ಸೆಳೆದಿದ್ದ ವೀರಪ್ಪ ಕಟಗೇರಿಯವರು ಮದ್ಯಸೇವನೆ ಬಿಟ್ಟು ತಮ್ಮ ಹೆಂಡತಿಗೆ ಹೊಲದಲ್ಲಿ ನೆರವಾದರು. ಹೀಗೆಯೇ ಚಲನಚಿತ್ರ ನಟ ಕಮಲಹಾಸನ್ ಪುತ್ರಿ ಶ್ರುತಿ ಹಾಸನ್ ಮದ್ಯಸೇವನೆಯನ್ನು ತ್ಯಜಿಸಿದ್ದು ಕೊರೊನಾ ವೈರಸ್ ಹಾವಳಿಯ ಸಂದರ್ಭದಲ್ಲಿಯೇ. ಆದರೆ ಮದ್ಯ ಸಿಗದೆ ಆತ್ಮಹತ್ಯೆ ಮಾಡಿಕೊಂಡವರು ಕೆಲವರು. ಇದಕ್ಕಾಗಿ ತುಸುವೇ ಕುಡಿವ ಗಂಡನ್ನ ಕೊಡು ತಾಯಿ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತದೆ.
ತುಸುವೇ ಕುಡಿವ ಗಂಡನ್ನ ಕೊಡು ತಾಯಿ ಎಂದು ಹೇಳಹೊರಟು ಪಿಎಚ್.ಡಿ. ಅಧ್ಯಯನಕ್ಕಾಗುವಷ್ಟು ಸರಕಾಯಿತು ಎಂದು ಬೆರಗಾಗದಿರಿ.






ಚೆನ್ನಾಗಿದೆ. ಆದರೆ ಸ್ವಲ್ಪ ದೀರ್ಘವಾಯಿತು.