ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಜ಼ಲ್..

ಸಿಕಂದರ್ ಅಲಿ

ದೇವರು ದಿಂಡರು ಒತ್ತಟ್ಟಿಗಿರಲಿ ಅನ್ನ-ರೊಟ್ಟಿಗಳ ಕುರಿತು ಮಾತಾಡು |
ಧರ್ಮಗಳು ಹೊಟ್ಟೆ ತುಂಬಿಸುವುದಿಲ್ಲ ಹಸಿವುಗಳ ಕುರಿತು ಮಾತಾಡು ||

ಹಳೆಯ ನೋವು ಮಾಸುವ ಮುನ್ನ ಮತ್ತೊಂದು ಗಾಯವಾಗುತ್ತಿದೆ |
ಕುಕ್ಕಿ ತಿನ್ನುವ ಅತ್ಯಾಚಾರಿಯ ವಿಕೃತ ನೋಟಗಳ ಕುರಿತು ಮಾತಾಡು ||

ರೆಕ್ಕೆ-ಪುಕ್ಕ ಕತ್ತರಿಸಿ ಹಾರುವ ಹಕ್ಕಿಗಳ ಬಂಧಿಸಲಾಗುತ್ತಿದೆ ನೋಡು |
ಗಡ್ಡಧಾರಿ ನಿತ್ಯ ಹೊದ್ದು ಬರುವ ಹಗಲುವೇಷಗಳ ಕುರಿತು ಮಾತಾಡು ||

ಬಂದೂಕು ನಳಿಕೆ ಒಮ್ಮೆಯಾದರೂ ಪ್ರೀತಿಯ ಗುಂಡು ಸಿಡಿಸಲಿ |
ದ್ವೇಷ ಬಿತ್ತಿ ಹುಸಿ ಭಕ್ತಿ ಬೆಳೆಸುವ ಮನಸುಗಳ ಕುರಿತು ಮಾತಾಡು ||

ಸೂಫಿ ಸಂತರ ನೆಲದಲಿ ಮಾನವೀಯತೆ ಫಸಲನು ನೆಡಬೇಕಿದೆ ಈಗ |
ಸಾಮರಸ್ಯ, ಸೌಹಾರ್ದತೆ ಉಳಿಸುವ ಒಡನಾಡಿಗಳ ಕುರಿತು ಮಾತಾಡು ||

ನಿಜ ನುಡಿಯುವ ಕನ್ನಡಿಯೂ ಸುಳ್ಳು ಹೇಳುವುದು ರೂಢಿಸಿಕೊಂಡಿದೆ |
ಬೇಟೆಗಾರ ರೂಪಿಸಲು ಹೊರಟ ಕರಾಳ ಭವಿಷ್ಯಗಳ ಮೇಲೆ ಮಾತಾಡು ||

ಮಾಯಪೆಟ್ಟಿಗೆ ವಿಕಾರ ಮಿಥ್ಯಗಳ ದಾಖಲಿಸಿ ಭಯಪಡಿಸುತಿದೆ ಗೆಳೆಯ |
ಅಲಿಯ ನೆತ್ತರಲಿ ಅದ್ದಿ ಸತ್ಯ ಬರೆಯುವ ಲೇಖನಿಗಳ ಕುರಿತು ಮಾತಾಡು. ||

‍ಲೇಖಕರು Admin

3 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading