ಬಿ ಎಸ್ ವೆಂಕಟಲಕ್ಷ್ಮಿ
ಬಾಲ್ಯದಿಂದ ಬಿಡುಗಡೆ ಹೊಂದಿ ಕೌಮಾರ್ಯಕ್ಕೆ ಕಾಲಿಡುವ ಹುಡುಗಿಗೆ ಬದುಕಿನಲ್ಲಿ ನಿರ್ದಿಷ್ಟ ಅಥವಾ ನೈಜ ಗುರಿಗಳಿಲ್ಲದಿದ್ದರೂ ಗಂಡಸಿನ ಸಾಮಿಪ್ಯ ಬಯಕೆಯೇ ಅವಳ ಬದುಕಿನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತದೆ. ಹದಿಹರೆಯದ ಹುಡುಗನೂ ಹುಡುಗಿಯರ ಕನಸು ಕಾಣುತ್ತಾನೆ. ಆದರೆ ಅದೇ ಅವನ ಜೀವನದ ಗುರಿಯಾಗಿರುವುದಿಲ್ಲ. ಈ ವಯಸ್ಸು ಅವನ ಪಾಲಿಗೆ ಕ್ರೌರ್ಯ ಪ್ರದರ್ಶನದಲ್ಲಿ ತರಬೇತಿ ಪಡೆಯುವ ಹಂತ. ಆಕ್ರಮಣ ಮನೋಭಾವವನ್ನು ಬೆಳೆಸಿಕೊಂಡು, ಇಚ್ಛಾಶಕ್ತಿಯನ್ನು ವೃದ್ಧಿಗೊಳಿಸಿಕೊಂಡು, ಸ್ಪರ್ಧೆಗಿಳಿಯುವ ಹಂಬಲವನ್ನು ಪೂರೈಸಿಕೊಳ್ಳುವ ಘಟ್ಟ. ಆದರೆ ಮುಟ್ಟಾಗಲು ಪ್ರಾರಂಭಿಸಿ, ಅಸ್ಪಷ್ಟ ಆಸೆಗಳಿಗೆ ಬಲಿಯಾಗುವ ಹುಡುಗಿ ಈ ವಯಸ್ಸಿನಲ್ಲಿ ಹುಡುಗನಂತೆಯೇ ಬಿಡುಬೀಸಾಗಿರುವುದು ಸಾಧ್ಯವಾಗದೆ, ಒರಟು ಆಟಗಳನ್ನು ಬಿಟ್ಟುಕೊಟ್ಟು, ಮೋಜು ಮನರಂಜನೆಗಳನ್ನು ನಿಯಂತ್ರಿಸಿಕೊಂಡು ಸುಸಂಸ್ಕೃತ ತರುಣಿಯಾಗಿ ರೂಪುಗೊಳ್ಳಲು ತನ್ನನ್ನು ತಾನೇ ಸಜ್ಜಾಗಿಸಿಕೊಳ್ಳಬೇಕಾಗುತ್ತದೆ. ಅನೇಕ ದೇಶಗಳಲ್ಲಿನ ಹುಡುಗಿಯರಿಗೆ ಮನೆಯಲ್ಲಿ ಉತ್ತೇಜನವಿದ್ದರೂ ಸಹ ಅವರು ಕ್ರೀಡೆಗಳಲ್ಲಿ ಆಸಕ್ತಿ ತೋರುವುದಿಲ್ಲ ಮಾತ್ರವಲ್ಲ, ಹಿಂಸಾಚಾರವನ್ನು ಒಳಗೊಂಡಂಥ ಘಟನೆಗಳ ಸಂದರ್ಭದಲ್ಲಿ ಮುದುಡಿ ಕೂರುವುದನ್ನು ಕಾಣಬಹುದು. ತಾವಾಗೇ ಸಂಘಟನೆಗೊಂಡು, ದೀರ್ಘ ಕಾಲ್ನಡಿಗೆ ಅಥವಾ ಬೈಸಿಕಲ್ ವಿಹಾರಕ್ಕೆ ಹೊರಡುವುದರಲ್ಲಿ ನಿರಾಸಕ್ತರಾಗುವುದನ್ನು ಗಮನಿಸಬಹುದು. ಇದಕ್ಕೆ ಕಾರಣ ಮಗುವಾಗಿದ್ದಾಗಿನಿಂದಲೂ ಹುಡುಗಿಗೆ ಪರಂಪರೆ ಪದ್ಧತಿಗಳು ಸ್ವಾತಂತ್ರ್ಯವನ್ನು ಅಲಭ್ಯವಾಗಿಸಿ, ಅವಳ ಉತ್ಸಾಹಕ್ಕೆ ತಣ್ಣೀರೆರಚುವ ಪ್ರಸಂಗಗಳು ನಡೆದಿರುವುದು. ಪುಟ್ಟ ಹುಡುಗಿ ಮಿಕ್ಕ ಹುಡುಗಿಯರ ಸಹವಾಸದಲ್ಲಿ ಶೀಘ್ರವಾಗಿ ಬೇಸರಗೊಳ್ಳುತ್ತಾಳೆ. ಪರಸ್ಪರರಿಗೆ ನೆರವಾಗುವ ಉದ್ದೇಶದಿಂದ ಅವಳು ಮಿಕ್ಕವರೊಡನೆ ಒಟ್ಟುಗೂಡುವುದು ಕಡಿಮೆ.
ಹುಡುಗಿಯ ಈ ಸ್ವಭಾವದಿಂದಾಗಿಯೇ ಅವಳಿಗೆ ಹುಡುಗರ ಸಹವಾಸ ಬೇಕು. ಎತ್ತರದ ಗುರಿಯನ್ನು ಹೊಂದುವ ಬಗ್ಗೆ ದಿಗಿಲುಗೊಂಡು ಉತ್ಕೃಷ್ಟ ಯಶಸ್ಸು ಪುರುಷರಿಗೆ ಮಾತ್ರ ಮೀಸಲು ಎಂಬುದಾಗಿ ಭಾವಿಸುವ ಸುಮಾರು ಹದಿನಾಲ್ಕು ವರ್ಷದ ಹುಡುಗಿ ತನ್ನನ್ನು ಬಾಲಕರಿಗೆ ಹೋಲಿಸಿಕೊಂಡು “ಅವರು ಉತ್ತಮ” ಎಂದು ನಿರ್ಧರಿಸುವುದನ್ನು ಕಾಣಬಹುದು. ಇದರ ಪರಿಣಾಮ ಸೋಮಾರಿತನ ಹಾಗೂ ಮಧ್ಯಮ ದರ್ಜೆಯ ಸಾಧನೆಯ ಬಗೆಗೇ ಸಂತೃಪ್ತಿ. ಕೌಮಾರ್ಯದಲ್ಲಿರುವ ಬಾಲಕಿಯೊಬ್ಬಳು ತನ್ನ ಭವಿಷ್ಯಕ್ಕೆ ತಾನೇ ಹೊಣೆಗಾರಳು ಎಂಬುದಾಗಿ ತಿಳಿದುಕೊಳ್ಳಲಾರಳು. ಅವಳು ತನಗಾಗಿಯೇ ಏನನ್ನಾದರೂ ಅಪೇಕ್ಷಿಸುವುದರಿಂದ ಹೆಚ್ಚು ಪ್ರಯೋಜನವಿಲ್ಲವೆಂದು ತಿಳಿಯುವುದಕ್ಕೆ ಕಾರಣ ಅಂತಿಮವಾಗಿ ಅವಳ ಸ್ವಪ್ರಯತ್ನವನ್ನು ಯಾವುದೂ ಅವಲಂಬಿಸದೇ ಇರುವುದು. ತಾನು ಕೀಳೆಂಬ ಭಾವನೆಯನ್ನು ಅವಳು ತಂತಾನೇ ಗುರುತಿಸಿಕೊಂಡು ಅದನ್ನು ಒಪ್ಪಿಕೊಳ್ಳುವ ಮೂಲಕವೇ ಅವನ್ನು ಸತ್ಯವೆಂಬುದಾಗಿ ಸ್ಥಾಪಿಸುತ್ತಾಳೆ. ಆದರೆ ಹದಿಹರೆಯದ ಹುಡುಗನೊಬ್ಬ ಸ್ವಾತಂತ್ರ್ಯ ಹಾಗೂ ಮುಕ್ತತೆಯ ಬಗ್ಗೆ ತನಗಿರುವ ಸ್ವಸಮರ್ಥನೆಯ ಮೂಲಕವೇ ತನ್ನ ಸಾಮಾಜಿಕ ಮೌಲ್ಯ ಹಾಗೂ ಗಂಡಸಾಗಿ ತನ್ನ ಗೌರವವನ್ನು ಗಳಿಸಿಕೊಳ್ಳುತ್ತಾನೆ.
ಹುಡುಗ ಹುಡುಗಿಯನ್ನು ದಿಗ್ಮೂಢಗೊಳಿಸುತ್ತಲೇ ಅವಳಿಗೆ ಬೆದರಿಕೆಯನ್ನು ಉಂಟು ಮಾಡುತ್ತಾನೆ. ಆದರೆ ಹುಡುಗಿ ಅವನ ಬಗ್ಗೆ ತಾನು ಹೊಂದಿರುವ ದ್ವಂದ್ವವನ್ನು ಒಪ್ಪಿಕೊಳ್ಳುತ್ತಲೇ ತನ್ನನ್ನು ಬೆದರಿಸುವ ಅವನಿಂದ ದೂರವಾಗಿ ಅದೇ ಕಾಲಕ್ಕೆ ಅವನಲ್ಲಿ ಇರುವುದೆಂಬುದಾಗಿ ತಾನು ಭಾವಿಸುವ ದೈವಿಕ ಗುಣವನ್ನು ಮನದಲ್ಲೇ ಆರಾಧಿಸುತ್ತಾಳೆ. ತನಗೆಟುಕದ ಜೀವಂತ ಅಥವಾ ದಿವಂಗತ ಚಿತ್ರ ನಟನ ಭಾವಚಿತ್ರವನ್ನು ತಮ್ಮ ಹಾಸಿಗೆಯಲ್ಲಿ ಬಚ್ಚಿಟ್ಟುಕೊಳ್ಳುವ ಹುಡುಗಿಯರುಂಟು. ಆಕಸ್ಮಿಕವಾಗಿ ಒಮ್ಮೆ ಕಾಣಿಸುವ ಆದರೆ ಮತ್ತೆಂದೂ ತಮಗೆ ಕಾಣಸಿಗಲಾರದಂಥವರನ್ನು ಹೆಗ್ಗಳಿಸುವ ಪ್ರವೃತ್ತಿ ಇವರಿಗೆ. ಅವರ ಈ ವರ್ತನೆಗೆ ಕಾರಣ ಇಂಥ ಹವ್ಯಾಸಗಳು ಹಾನಿರಹಿತ ಹಾಗೂ ಸಮಸ್ಯೆಯನ್ನೆಂದೂ ತಂದೀಯಲಾರವು ಎಂಬುದಾಗಿ ಅವರು ಭಾವಿಸುವುದು. ಅನೇಕ ಸಂದರ್ಭಗಳಲ್ಲಿ ಕೆಲವು ಹುಡುಗಿಯರು ನೋಡಲು ಅಂದವಾಗಿಲ್ಲದಿದ್ದರೂ ಸಾಮಾಜಿಕ ಅಥವಾ ಬೌದ್ಧಿಕ ಪ್ರತಿಷ್ಠೆಯುಳ್ಳವನನ್ನು ಮೋಹಿಸುವುದುಂಟು. ಉದಾಹರಣೆಗೆ, ವಯಸ್ಸಾದ ಒಬ್ಬ ಅಧ್ಯಾಪಕ. ಈ ವೃದ್ಧರು ಕೌಮಾರ್ಯ ಜಗತ್ತಿಗೆ ಅತೀತರಾಗಿರುವುದರಿಂದಲೇ ಹುಡುಗಿಯರು ಗುಟ್ಟಾಗಿ ತಮ್ಮನ್ನು ಅವರಿಗೆ ಒಪ್ಪಿಸಿಕೊಂಡು ಅವರನ್ನು ದೇವರಂತೆ ಆರಾಧಿಸತೊಡಗಬಹುದು. ಇದು ಅವರ ದೃಷ್ಟಿಯಲ್ಲಿ ಅಪಮಾನಕರವಲ್ಲ ಎನ್ನಿಸುವುದಕ್ಕೆ ಕಾರಣ ಅವರು ಇದನ್ನು ಕಾಮುಕ ಬಯಕೆಯಲ್ಲವೆಂದು ತಿಳಿಯುವುದು. ಹೀಗೆ ಕೌಮಾರ್ಯದಲ್ಲಿರುವ ಹುಡುಗಿಯರು ನಿಜವಾದ ಅನುಭವಗಳನ್ನು ತಿರಸ್ಕರಿಸಿ ಅನೇಕ ವೇಳೆ ಕಲ್ಪನಾ ಜೀವನಕ್ಕೇ ಮೊರೆ ಹೋಗಿ ಕಲ್ಪನೆಗಳಿಗೂ ವಾಸ್ತವತೆಗಳಿಗೂ ವ್ಯತ್ಯಾಸಗಳನ್ನೇ ಕಾಣದೆ ಹೋಗುತ್ತಾರೆ.
ಕೆಲವು ಹುಡುಗಿಯರು ನಿಜವಾದ ಹಾಗೂ ಪರಿಪೂರ್ಣ ಪ್ರೇಮವನ್ನು ಹೊಂದಲೇ ಅಸಮರ್ಥರಾಗುತ್ತಾರೆ. ಅರಿವಾಗಿಸಿಕೊಳ್ಳಲೇ ಅಸಾಧ್ಯವಾದಂಥ ಆದರ್ಶವನ್ನು ಜೀವನವಿಡೀ ಹುಡುಕುತ್ತಾರೆ. ಹುಡುಗರನ್ನು ಉದ್ದೀಪನಗೊಳಿಸುವಲ್ಲಿ ಅವರಿಗೆ ಹರ್ಷವಿದೆಯಾದರೂ ಅವರಲ್ಲಿ ಬಯಕೆ ಹುಟ್ಟುವುದನ್ನು ಕಂಡಾಗ ಅವರು ಜಿಗುಪ್ಸೆಯಿಂದ ಮುದುರಿಕೊಳ್ಳುತ್ತಾರೆ. ಇಲ್ಲಿ ಮಾತ್ರ ಮೂಲಭೂತ ಮರ್ಯಾದೆಯ ಆತಂಕ ಎದ್ದು ನಿಲ್ಲುತ್ತದೆ. ಅವರು ತಮ್ಮ ಭವಿಷ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಉತ್ಸುಕರಾಗುತ್ತಿದ್ದಂತೆಯೇ, ಭೂತಕಾಲದಿಂದ ತಮ್ಮನ್ನು ಬಿಡಿಸಿಕೊಳ್ಳಲು ಭಯಪಡುತ್ತಾರೆ. ಅವರಿಗೆ ಹುಡುಗನೊಬ್ಬನನ್ನು “ಕೂಡಿಕೊಳ್ಳುವುದು” ಬೇಕು. ಆದರೆ ಅವನು ತಮ್ಮನ್ನು ಆಹುತಿಯನ್ನಾಗಿಸಿಕೊಳ್ಳುವುದು ಬೇಡ. ಹೀಗಾಗಿ ಪ್ರತಿ ಬಯಕೆಯ ಹಿಂದೆಯೂ ಭಯವೊಂದು ಅಡಗಿರುತ್ತದೆ. ಪ್ರಣಯ ಕೇಳಿಯ ಸಂದರ್ಭದಲ್ಲಿ ಬಾಲಕಿಯರು ನಗುವುದು ತಮ್ಮ ಮುಜುಗರ ಹಾಗೂ ನಿಯಂತ್ರಣವನ್ನು ತೋರುವ ಒಂದು ಸಾಧನವಾಗಿ. ಕೆಲವರು ಹುಡುಗರಿಗೆ ಅನಾಮಧೇಯ ಪತ್ರಗಳನ್ನು ಕಳಿಸುವಲ್ಲೇ ಸಂತೋಷಪಡುತ್ತಾರೆ ಹೊರತು ಕ್ರಿಯೆಗಿಳಿಯುವುದೇ ಇಲ್ಲ.
ಇಂಥ ವಿಚಿತ್ರ ಹಂತಗಳನ್ನು ದಾಟುವ ಹುಡುಗಿಯರು ಪ್ರೌಢರಾಗುತ್ತಿದ್ದಂತೆಯೇ ತಾಯಂದಿರು ಅವರ ಮೇಲೆ ಅಧಿಕಾರವನ್ನು ಸ್ಥಾಪಿಸಲು ಪ್ರಯತ್ನಿಸಿದಾಗ, ಅಷ್ಟು ಹೊತ್ತಿಗಾಗಲೇ ಮನೆಗೆಲಸದಲ್ಲಿ ತಾಯಿಗೆ ಕೇವಲ ಸಹಾಯಕರಾಗಿರುವುದು ಬೇಡವಾಗಿ, ತಮ್ಮದೇ ಮನೆ ಮಕ್ಕಳ ಹಂಬಲ ಬೆಳೆಸಿಕೊಳ್ಳುವ ಅವರು ಸಾಂಕೇತಿಕ ಪ್ರತಿಭಟನೆಗಳಲ್ಲಿ ತೊಡಗುವುದನ್ನು ಕಾಣಬಹುದು. ಗಾಜಿನ ಲೋಟಗಳನ್ನು, ಕಿಟಕಿಗಳನ್ನು, ಹೂ ಕುಂಡಗಳನ್ನು ಒಡೆಯುವುದು ಇಂಥ ವಿರೋಧದ ಅಭಿವ್ಯಕ್ತಿ. ಅಧಿಕಾರರಹಿತರಾದ ಅವರು ಗುಲಾಮಗಿರಿಯ ವಿರುದ್ಧ ದಂಗೆಯೇಳುವ ರೀತಿ. ಹುಡುಗನೊಬ್ಬನ ತಂದೆ ಅವನನ್ನು ವಿರೋಧಿಸಿದಾಗ ಅವನು ಸ್ವಶಕ್ತಿಯಿಂದ ಅಡೆತಡೆಗಳನ್ನು ಭೇದಿಸಿಕೊಂಡರೆ, ಹುಡುಗಿಯರ ಕೋಪ ಅವರ ಸುತ್ತಲಿನ ಸಂಕೋಲೆಗಳನ್ನು ಮತ್ತಷ್ಟು ಬಿಗಿಯಾಗಿಸುತ್ತದೆ.
(“ಬದುಕು ಬವಣೆ ಭರವಸೆ” ಕೃತಿಯಿಂದ)






does avadhi need to perpetuate worn out stereotypes??!
I was totally shocked. Each girl or a woman is an island by herself. You cannot put forward generalisations like this. The very idea that a girl laughs during intercourse to hide her agitation or nervousness is laughable. Why would anyone do that?
STUPID