ಗಂಗಾಧರ ಕೊಳಗಿ
ಚಿಕ್ಕ ಚೀಲವೊಂದರಲ್ಲಿ ಒಂದಿಷ್ಟು ದಿನಸಿ ಸಾಮಗ್ರಿಗಳ ಚೀಲವನ್ನು ಎಡಭುಜದ ಮೇಲಿಟ್ಟುಕೊಂಡು ಬರುತ್ತಿದ್ದ ಶಾಮಣ್ಣ ದೂರದಲ್ಲಿ ಮರಗಿಡಗಳ ನಡುವೆ ಮಸುಕಾಗಿ ಕಾಣುತ್ತಿದ್ದ ತಮ್ಮ ಮನೆ ಬೇರೆ ರೀತಿಯಲ್ಲಿ ಕಾಣತೊಡಗಿದ್ದಕ್ಕೆ ಅರೆಕ್ಷಣ ಗೊಂದಲಪಟ್ಟರು. ಎಂದೂ ಅನಿಸದಿದ್ದದ್ದು ಇಂದ್ಯಾಕೆ ಈ ಥರ ತೋರುತ್ತಿದೆ ಎನ್ನುವ ಕಳವಳದಲ್ಲೇ ಕೆಳಗಿನ ಕಣ ವೆಯಲ್ಲಿದ್ದ ತೋಟದ ಅಡಕೆ ಮರಗಳ ಹಸಿರು, ಕಪ್ಪು ಮಿಶ್ರಿತವಾದ ಹರವಾದ ಹೆಡಗಳ ತೂಗಾಟವನ್ನ, ತೋಟದ ಎರಡೂ ಪಕ್ಕದ ಬೆಟ್ಟಗಳಲ್ಲಿ ಹಸಿರು ಉಕ್ಕಿಸುವ ಮರಗಳ ಸಮೃದ್ಧತೆಯನ್ನು ನೋಡುತ್ತ, ಆಗುತ್ತಿದ್ದ ದಣ ವನ್ನು ಸ್ವಲ್ಪ ಹೊತ್ತು ನಿಂತು ನಿವಾರಿಸಿಕೊಂಡು ಬೇಲಿಯ ದಣಪೆಯ ಕೋಲುಗಳನ್ನು ಸರಿಸಿ. ಮತ್ತೆ ಹಾಕಿ ಮನೆಯತ್ತ ಬಂದರು.
ತೋಟದಿಂದ ಎತ್ತರದ ದರೆಯ ಮೇಲೆ ಸುಮಾರು ನಲವತ್ತು ವರ್ಷಗಳ ಹಿಂದೆ ತಾನು, ಮಡದಿ ಸಾವಿತ್ರಿ, ಈ ಜಾಗಕ್ಕೆ ಬಂದಾಗಿನಿ೦ದ ಜೊತೆಗಿರುವ ಮಾಬ್ಲ ಮತ್ತು ಅವನ ಸಹಚರರು ಎಲ್ಲ ಸೇರಿ ಸ್ವತ: ಶ್ರಮಿಸಿ ಕಟ್ಟಿದ್ದು ಈ ಮಣ್ಣಿನಗೋಡೆಗಳ ಎರಡಂಕಣದ ಮನೆ; ಮೊದಲು ಅಡಕೆಸೋಗೆ ಹೊಚ್ಚಿಗೆಯಿದ್ದದ್ದು ಇತ್ತೀಚೆಗೆ ಮಂಗಳೂರು ಹೆಂಚು ಹೊದೆಸಿದ್ದು. ಪ್ರಾಯಶ:, ಇಷ್ಟು ವರ್ಷಗಳ ಕಾಲವೂ ಅದರೊಳಗೆ ನೋವು, ನಲಿವು, ಕಷ್ಟ, ಸುಖಗಳನ್ನೆಲ್ಲ ಅನುಭವಿಸುತ್ತ, ನೆರಳು ಕೊಟ್ಟ ಮನೆ ಇವತ್ತ್ಯಾಕೆ ಸಣ್ಣ ಬಿಡಾರದಂತೇ ಕಾಣುತ್ತಿದೆಯಲ್ಲ ಎನ್ನುವ ವಿಸ್ಮಯ ಶಾಮಣ್ಣನವರಿಗಾಯಿತು. ಹಾಗೇ ಕಂಡರೂ ತೊಂದರೆಯೇನಿಲ್ಲ, ಇರುವದೇ ಹಾಗೇ. ಆದರೆ ಇವತ್ತು ಮನೆ ಬೇರೆಯದೇ ಆಗಿ ತೋರುತ್ತಿದೆ? ತನ್ನ ದೃಷ್ಟಿಶಕ್ತಿಗೇನಾದರೂ ತೊಂದರೆಯಾಯಿತೇ? ಎನ್ನುವದು ಆಶ್ಚರ್ಯದ ಜೊತೆಗೆ ಚಿಂತೆಯನ್ನೂ ಮೂಡಿಸಿತು.
ಅದೇ ಒಳಗುದಿಯಲ್ಲಿ ಮನೆಗೆ ಬಂದು ಜಗಲಿಯ ಮೇಲೆ ಕೂತು, ಗೋಡೆಗೊರಗಿ ‘ರಾಮಾ, ರಾಮಾ’ ಎಂದು ಉಸಿರೆಳೆದ ಕ್ಷೀಣ ಧ್ವನಿಗಾಗಿ ಕಾದವರಂತೆ ಒಳಗಿನಿಂದ ಸಾವಿತ್ರಮ್ಮ ಕೈಯಲ್ಲಿ ಕಾದಾರಿಸಿದ ನೀರಿನ ತಂಬಿಗೆ ತರುತ್ತಲೇ ಎಂದಿನ೦ತೆ ಸೌಮ್ಯವಾದ ಆಕ್ಷೇಪವೆತ್ತುತ್ತ ನೀರನ್ನ ಲೋಟಕ್ಕೆ ಹನಿಸಿ ಎದುರಿಟ್ಟರು.
“ನೀವ್ಯಾಕೆ ಹಾರ್ಸಿಕಟ್ಟೆಗೆ ಹೋಗಬೇಕಿತ್ತು? ಮಾಬ್ಲನ ಹತ್ರ ಅಥ್ವಾ ಅವನ ಮಗ ನರಸಿಂಹನ ಹತ್ರ ಹೇಳಿದ್ರೂ ಸಾಕಿತ್ತು? ರಾಯರ ಅಂಗಡಿಯಿ೦ದ ಸಾಮಾನು ತಂದುಕೊಡ್ತಿದ್ರು. ನಿಮಗೆ ನನ್ನ ಮಾತು ಅಂದ್ರೆ ಆಗೋದೇ ಇಲ್ಲ” ಎಂದ ಮಡದಿಯ ಆಕ್ಷೇಪಣೆಗೆ ಎಂದಿನ೦ತೆ ಹುಸಿ ನಗು ನಕ್ಕ ಶಾಮಣ್ಣ ನೀರು ಕುಡಿದರೂ ಅಷ್ಟಕ್ಕೆ ಬಾಯಾರಿಕೆ ತೀರದೇ ಮಡದಿಗೆ “ಒಂದುಸ್ವಲ್ಪ ಕಡೆದ ಮಜ್ಜಿಗೆಗೆ ನೀರು ಹಾಕಿ ಕೊಡ್ತೀಯಾ?” ಎಂದರು. ಸಾವಿತ್ರಮ್ಮ ಅದನ್ನು ತಂದು ಕೈಗಿಡುತ್ತ “ಬೇಗ ಮಿಂದು ದೇವರಿಗೆ ಪೂಜೆ ಮಾಡಿ, ಊಟ ಮಾಡೋಣ” ಎಂದಾಗ ‘ಒಂದು ಘಳಿಗೆ ತಡೆದುಕೊಳ್ಳೆ, ಯಾವುದಕ್ಕೂ ಒಂದು ಕವಳ ಹಾಕಿಕೊಳ್ತೇನೆ’ ಎಂದವರು ತಾಂಬೂಲದ ಹರಿವಾಣವನ್ನು ಎಳೆದುಕೊಂಡರು.
ಹದವಾಗಿ ಬೆಳೆದ ವೀಳ್ಯದೆಲೆಗೆ ತನ್ನ ಎಂದಿನ ಪ್ರಮಾಣದಲ್ಲಿ ಸುಣ್ಣ, ಅಡಕೆಯ ಹೋಳು, ತಂಬಾಕಿನ ಎಸಳಿನ ತುಂಡನ್ನು ಬೆರೆಸುವಾಗೆಲ್ಲ ಶಾಮಣ್ಣನಿಗೆ ಬೆಳಗ್ಗೆ ಹಾರ್ಸಿಕಟ್ಟೆಗೆ ಹೋದಾಗ ನಡೆದ ಘಟನೆಗಳು ಮರೆಯಲೆತ್ನಿಸುತ್ತ ಬಂದರೂ ಮತ್ತೆ ನೆನಪಾಯಿತು. ಸಾವಿತ್ರಿಗೆ ಹೇಳಲೋ, ಬೇಡವೋ? ಹೇಳಿದರೆ ತಡೆದುಕೊಂಡಾಳೇ? ಎನ್ನುವ ಪ್ರಶ್ನೆಗಳೂ ಎದುರಾದವು. ಯಾವುದೇ ಸಣ್ಣ ಸಂಗತಿಯನ್ನೂ ಮಡದಿಯೆದುರು ಈವರೆಗೂ ಮರೆಮಾಚದ ಶಾಮಣ್ಣ ‘ ತಕ್ಷಣ ಹೇಳೋದು ಬೇಡ. ಸಂಜೆಯೊಳಗೆ ಹೇಳಿದರಾಯಿತು’ ಎಂದು ಸುಮ್ಮನಾದರು.
ಮೊನ್ನೆಯಿಂದಲೇ ಸಾವಿತ್ರಮ್ಮ ನಿತ್ಯದ ಅಗತ್ಯ ಸಾಮಗ್ರಿಗಳಾದ ಚಹಾಪುಡಿ, ಸಕ್ಕರೆ..ಮುಂತಾದವು ಖಾಲಿಯಾಗುತ್ತಿದೆ ಎಂದು ಎಚ್ಚರಿಕೆ ಹೇಳುತ್ತಲೇ ಇದ್ದರು. ಸಾಮಗ್ರಿ ಮುಂದಿನ ಒಂದು ವಾರಕ್ಕಾಗುವಷ್ಟೇ ಇದೆ ಎಂದಾದಾಗಲೇ ಮುನ್ನೆಚ್ಚರಿಕೆ ಕೊಡುವ ಆಕೆಯ ನಿರ್ವಹಣೆಯ ಕ್ರಮ ಗೊತ್ತಿದ್ದ ಶಾಮಣ್ಣನವರಿಗೆ ಮಡದಿ ಹೇಳತೊಡಗಿ ನಾಲ್ಕು ದಿನದ ಮೇಲಾಯಿತು ಅನ್ನಿಸಿದ್ದೇ ತಾವೇ ಹೊರಟಿದ್ದರು. ನೆಂಟರ ಕಡೆ ಮದುವೆ ಇದೆ ಎಂದು ಮೊದಲೇ ಹೇಳಿದ್ದ ಮಾಬ್ಲನಾಗಲೀ, ಅವನ ಮಗನಾಗಲೀ ನಾಲ್ಕಾರು ದಿನದಿಂದ ಈ ಕಡೆ ಬಂದಿರಲಿಲ್ಲ. ಹಾರ್ಸಿಕಟ್ಟೆ ಸೊಸೈಟಿಯಲ್ಲೂ ಒಂಚೂರು ಕೆಲಸವಿದ್ದರಿಂದ ಎಲ್ಲವೂ ಆಯ್ತು ಅಂತ ಶಾಮಣ್ಣ ಹೋಗಿದ್ದರು.
ಸೊಸೈಟಿ ಕೆಲಸ ಮುಗಿಸಿ, ರಾಯರ ಅಂಗಡಿಯಲ್ಲಿ ಸಾಮಗ್ರಿ ಖರೀದಿಸಿ, ಅವರು ಎಂದಿನ೦ತೆ ಎದುರು ತಂದಿಟ್ಟ ತಾಂಬೂಲದ ಹರಿವಾಣದಿಂದ ಒಂದು ಖಡಕ್ ಕವಳ ಹಾಕಿ ಹೊರ ಬಿದ್ದ ಸ್ವಲ್ಪ ದೂರದಲ್ಲೇ ಪೋಷ್ಟಮನ್ ದಾಮೋದರ ಎದುರಾಗಿದ್ದ. “ಶಾಮಣ್ಣ, ನಿಮ್ಮ ಮನೆಗೆ ಹೋಗಬೇಕು ಅಂತಾನೇ ಇದ್ದೆ. ನೀವೇ ಸಿಕ್ರಿ. ಆದರೆ ನಂಗೆ ಲಾಸಾಯ್ತು” ಎಂದ. ಅವನ ಮಾತು ಅರ್ಥವಾಗದೇ “ಎಂತಾ ಲಾಸಾ?” ಎಂದದ್ದಕ್ಕೆ ಯಾವಾಗಲೂ ನಡು ಮಧ್ಯಾಹ್ನದಲ್ಲೇ ಪೋಷ್ಟ ಕೊಡುವದಕ್ಕೆ ಬರುವ ದಾಮೋದರ “ಪತ್ರ ಕೊಡೂಕೇ ಬಂದ್ರೆ ಅಮ್ಮ ಘನಾ ರುಚಿ ಊಟ ಹಾಕ್ತಿದ್ರಾ. ಅದು ತಪ್ಪೋಯಿತಲ್ರಾ?” ಎಂದು ಬೇಸರದ ನಗು ನಕ್ಕ. “ನಿಂಗೆ೦ತದಾ, ಬಾಕಿ ದಿನನೂ ಬಾರಾ, ದಾಕ್ಷಿಣ್ಯ ಎಂತದಾ?” ಎಂದು ಸಮಾಧಾನಿಸಿದ ಶಾಮಣ್ಣನಿಗೆ ಆತ ಒಂದು ಪತ್ರ ಕೊಟ್ಟ. ಅದನ್ನು ತೆಗೆದುಕೊಂಡವರು “ನಿಂಗೆ ಗೊತ್ತದೆಯಲ್ಲಾ, ಬಾ, ಏನೂಂತ ಓದಿಹೇಳು” ಅಂತ ಹತ್ತಿರದ ಅಶ್ವತ್ಥ ಮರದ ಕಟ್ಟೆಗೆ ಕರೆದರು.
ಕನ್ನಡ ಎರಡನೇ ತರಗತಿಯಲ್ಲೇ “ಎಲ್ಲರೂ ಓದೋದಕ್ಕೆ ಹೋದರೆ ಮನೆಯಲ್ಲಿ ಯಾರೂ ತೋಟ, ಕೊಟ್ಟಿಗೆ ಕೆಲಸ ಮಾಡೋರು? ಇಷ್ಟು ಓದಿದ್ದು ಸಾಕು” ಎಂದು ಅವಿಭಕ್ತ ಕುಟುಂಬದ ಯಜಮಾನ ದೊಡ್ಡಪ್ಪ ಶಾಮಣ್ಣನವರ ಓದು ಬಿಡಿಸಿದ್ದ. ಅಕ್ಷರಗಳು ಅರಿವಾಗುತ್ತಾದರೂ ಉದ್ದನೆಯ ವಾಕ್ಯಸರಣ ಅವರಿಗೆ ಗೊಂದಲ ಹುಟ್ಟಿಸುತ್ತಿತ್ತು. ಹಾಗಾಗಿ ಸೊಸೈಟಿ, ಕಂದಾಯ ಇಲಾಖೆ, ಮಗನಿಂದ ಬರುತ್ತಿದ್ದ ಪತ್ರಗಳನ್ನೆಲ್ಲ ದಾಮೋದರನ ಬಳಿಯೇ ಓದಿಸಿ ತಿಳಿದುಕೊಳ್ಳುತ್ತಿದ್ದುದು ಲಾಗಾಯ್ತಿನಿಂದ ಬಂದ ಪದ್ಧತಿ; ಒಮ್ಮೆ ಕೇಳಿದ ಮೇಲೆ ಪತ್ರದಲ್ಲಿರುವಂತೆ ಕರಾರುವಕ್ಕಾಗಿ ಮರು ಭಾಷಿಸುವ ಸಿದ್ಧಿ ಶಾಮಣ್ಣನವರಿಗಿತ್ತು.
ತಮ್ಮ ಪುರೋಹಿತರು ತಿಳಿಸಿಕೊಟ್ಟಂತೆ ಪಂಚಾ೦ಗದ ಪ್ರಕಾರ ಆಯಾ ದಿನದಂದು ಅಪ್ಪ,ಅಮ್ಮನ ಶ್ರಾದ್ಧ ಸಂಸ್ಕಾರ ಮಾಡುತ್ತಿದ್ದ ಶಾಮಣ್ಣನವರಿಗೆ ಭಟ್ಟರು ಹೇಳುವ, ವರ್ಷಕ್ಕೊಮ್ಮೆ ಬಂದು ಗೋಕರ್ಣ ಮಹಾಬಲೇಶ್ವರನ ಪ್ರಸಾದ ಕೊಟ್ಟು ಸಂಭಾವನೆ ಪಡೆದು ಹೋಗುವ ಸಭಾಹಿತರ ಆಶೀರ್ವಾದದ ಮಂತ್ರಗಳನ್ನ, ಚೌತಿ, ನವರಾತ್ರಿಯಲ್ಲಿ ಹತ್ತಿರದಲ್ಲೆಲ್ಲಾದರೂ ಜರುಗುವ ತಾಳಮದ್ದಳೆಯ ಪಾತ್ರಧಾರಿಗಳು ಸಿಡಿಸುವ ಶ್ಲೋಕ, ಸುಭಾಷಿತಗಳನ್ನ ಕೇಳುವಾಗೆಲ್ಲ ಇವರೆಲ್ಲ ಸಾಕಷ್ಟು ಕಲಿತವರೇ ಇರಬೇಕು ಅನ್ನಿಸುತ್ತಿತ್ತು. ಒಮ್ಮೆ ಸಂಭಾವನೆಗೆ ಬಂದು, ತಡವಾಯ್ತೆಂದು ಮನೆಯಲ್ಲೇ ಉಳಿದ ಸಭಾಹಿತರ ಬಳಿ ಈ ಅನುಮಾನವನ್ನು ವ್ಯಕ್ತಪಡಿಸಿದ್ದರು.
“ಥೋ ಮಾರಾಯಾ, ಅವೆಲ್ಲ ಹೊಸಾ ಶಾಲೆ ಕಲಿತವರಲ್ಲ. ಅದೊಂದು ಸೂತ್ರ. ಹಠಯೋಗ. ಗುರುಗಳು ಹೇಳಿಕೊಡೋದಷ್ಟೇ, ಹುಡುಗರು ಲಯ,ಸ್ವರ ಅರ್ಥಮಾಡಿಕೊಂಡು ಕಂಠಪಾಠ ಮಾಡಬೇಕು. ಹುಡುಗಾಟಿಕೆ ಅಲ್ಲ ಅದು. ಬುದ್ದಿ, ಸ್ಮರಣೆ, ಪರಿಶ್ರಮ ಎಲ್ಲವೂ ಬೇಕು” ಎಂದಿದ್ದರು. ಶಾಮಣ್ಣನವರಿಗೆ ಪೂರ್ತಿ ಅರ್ಥವಾಗದಿದ್ದರೂ ಅದು ಸುಖಾಸುಮ್ಮನೆ ದಕ್ಕುವ ವಿದ್ಯೆಯಲ್ಲ ಅನ್ನಿಸಿದ್ದಂತೂ ಸತ್ಯ. ಅಂಥ ಒಳಶಕ್ತಿ ತನ್ನಲ್ಲಿದೆ ಎನ್ನುವದು ಅವರಿಗೆ ಸಾಕಷ್ಟು ಧೈರ್ಯ ಕೊಡುತ್ತಿತ್ತು.
ಮಧ್ಯಾಹ್ನ ಊಟ ಮುಗಿಸಿ, ಸಣ್ಣ ನಿದ್ದೆ ತೆಗೆದು, ಚಹಾ ಕುಡಿದು, ಕವಳ ಹಾಕಿದರೂ ಶಾಮಣ್ಣ ತನ್ನೊಳಗೆ ತಾನೇ ಇರುವದನ್ನ ಗಮನಿಸಿದ ಸಾವಿತ್ರಮ್ಮ ಅಚ್ಚರಿಪಟ್ಟರು. “ಅಲ್ಲಾ, ನಡೆಯಲೇ ಆಗದಿದ್ರೂ ದಿನಾ ಬೆಳಿಗ್ಗೆ, ಸಂಜೆ ತೋಟ ಸುತ್ತಿ ರ‍್ತೀರಿ. ಇವತ್ತೇನೂ. ಬಾಳಾ ಸುಸ್ತಾಯಿತೇನೋ?” ಎಂದು ಸಣ್ಣಗೆ ಕುಟುಕಿದರು. ಅದರ ಹಿಂದಿನ ಮಮತೆ ಗೊತ್ತಿದ್ದ ಶಾಮಣ್ಣ ಎಂದಿನ೦ತೆ ಮುಖದಲ್ಲಷ್ಟೇ ಕಿರುನಗು ಚಿಮ್ಮಿಸಿ “ನಿನಗೆ ಒಂದಷ್ಟು ಹೇಳೋದಿತ್ತು. ಇಗ್ಲೇ ಮರೆಯುತ್ತಾ ಬಂತು. ಇನ್ನು ತೋಟ ತಿರುಗಿ ಬಂದ್ರೆ ಪೂರ್ಣ ಮರೆತೇ ಹೋಗುತ್ತಲ್ವಾ. ಅದಕ್ಕೆ ಇಲ್ಲೇ ಕೂತೆ” ಎಂದರು.
ಆ ದಟ್ಟ ಕಾಡಿನ ನಡುವೆ ಸೂರ್ಯ ಪ್ರಭೆ ಬೀರುವದೇ ತಡವಾಗಿ. ಆರು ತಿಂಗಳು ಮಳೆ, ಇನ್ನುಳಿದ ತಿಂಗಳಲ್ಲಿ ಚಳಿ, ಪ್ರಖರವಲ್ಲದ ಸೆಕೆ. ಯಾವ ಋತುವೇ ಇರಲಿ, ಗಡಿಯಾರ ಇರದ ಮನೆಯಲ್ಲಿ ಸಾವಿತ್ರಮ್ಮ ಅರೆಗತ್ತಲಲ್ಲೇ ಬೆಳಗಿನ ಆಸರಿಗೆ ಸಿದ್ಧತೆ ಮಾಡುತ್ತಿದ್ದರು. ಕೊಟ್ಟಿಗೆಯಲ್ಲಿದ್ದ ಒಂದು ಎಮ್ಮೆ, ಎರಡು ಗಿಡ್ಡಹಸುಗಳ ಹಾಲು ಕರೆದು, ಬಿಸಿ ಮಾಡಿದರೆಂದರೆ ಮುಗಿಯಿತು. ಅಂದಿನ ಕೃಷಿ ಕೆಲಸಗಳಿಗೆ ಚಾಲನೆ ಕೊಟ್ಟ ಹಾಗೇ. ಸಾವಿತ್ರಿ ಎದ್ದದ್ದೇ ಶಾಮಣ್ಣ ತಾವೂ ಎದ್ದು ಸೊಂಟಕ್ಕೆ ಕತ್ತಿ ಸಿಲುಕಿಸುವ ಅಂಡುಗೊಕ್ಕೆ ಕಟ್ಟಿ, ಅದಕ್ಕೆ ಕತ್ತಿ ಸಿಕ್ಕಿಸಿ, ಸಿದ್ಧಪಡಿಸಿಟ್ಟ ಕತ್ತದ ಹಗ್ಗ, ಕಂಬಳಿ ಎತ್ತಿಕೊಂಡು ಹತ್ತಿರದ ಕಾಡಿಗೆ ನುಗ್ಗಿ ಆನೆಭಾರದ ಸೊಪ್ಪಿನ ಹೊರೆಯನ್ನು ತಂದು ಚಾಚುತ್ತಿದ್ದರು. ಬಚ್ಚಲಿಗೆ ಹೋಗಿ ಶುದ್ಧಮಾಡಿಕೊಂಡು ಅಡುಗೆಮನೆಯಲ್ಲಿ ಕೂತು ತಾವೇ ಬೆಳೆದ ಬೆಲ್ಲ, ತಮ್ಮದೇ ಕೊಟ್ಟಿಗೆ ಜಾನುವಾರುಗಳ ಬೆಣ್ಣೆ, ತುಪ್ಪದ ಜೊತೆಗೆ ಹೊಟ್ಟೆತುಂಬ ಮಗೆಕಾಯಿ ದೋಸೆ ತಿಂದು, ಹಿತ್ತಾಳೆ ಲೋಟದಲ್ಲಿ ಎರಡು ದಪ್ಪಹಾಲಿನ ಖಡಕ್ ಚಹಾ ಕುಡಿದರೆಂದರೆ ಮುಂದಿನ ಕೆಲಸಗಳಿಗೆ ಕಸುವು ಬಂದ೦ತೇ. ನಂತರ ತೋಟ,ಗದ್ದೆಯ ಕೆಲಸ, ಮಧ್ಯಾಹ್ನ ಎಷ್ಟೇ ಸುಸ್ತಾಗಿ ಬಂದರೂ ಸ್ನಾನ ಮಾಡಿ ದೇವರಿಗೆ ಪೂಜೆ, ಊಟ, ಒಂದಿಷ್ಟು ಗಳಿಗೆ ಅರೆನಿದ್ದೆ. ಮತ್ತೆ ಚಹಾ ಕುಡಿದು ಸಂಜೆಯಾಗುವ ತನಕ ದುಡಿಮೆ.. ಇಡೀ ಬದುಕನ್ನು ಸ್ವಶ್ರಮದಲ್ಲೇ ಕಟ್ಟಿಕೊಂಡು ಬಂದ ಆ ದಂಪತಿಗಳಿಗೆ ಬಿಡುವು ಸಿಕ್ಕಾಗೆಲ್ಲ ಪರಸ್ಪರ ಮನಸಿನ ಹಿತ ಕಾಯುವ ಚಾಟೋಕ್ತಿಯೇ ಮನರಂಜನೆಯಾಗಿತ್ತು.
ಜಗಲಿಯಲ್ಲಿ ಕೂತ ಶಾಮಣ್ಣನವರ ತುಸು ಸನಿಹ ಬಂದು ಕೂತ ಸಾವಿತ್ರಮ್ಮ “ಅದೇನು? ಹೇಳೋದು ಮರೆಯಬಾರದು ಎಂದ್ರಲ್ಲ” ಎಂದರು.
ಅವಿಭಕ್ತ ಕುಟುಂಬದ ಯಜಮಾನನಾದ ತನ್ನ ಸ್ವಂತ ಅಣ್ಣ ಆಸ್ತಿಯ ಪಾಲಿನಲ್ಲಿ ಮೋಸ ಮಾಡಿ, ಕೇವಲ ಭತ್ತದ ಗದ್ದೆಯಾಗಿದ್ದ ಜಮೀನನ್ನು ತನಗೆ ವಹಿಸಿದ್ದ. ತಲೆತಲಾಂತರದ ಮನೆಯ ಒಡವೆಯಾಗಿ ಸಿಕ್ಕಿದ್ದು ಸಾವಿತ್ರಿಯ ಕೊರಳಲ್ಲಿದ್ದ ತಾಳಿಸರವನ್ನು ಸೇರಿಸಿ, ಮತ್ತೊಂದು ತೆಳ್ಳನೆಯ ಚಿನ್ನದ ಸರ. ಪಾತ್ರೆ,ಪರಡಿ, ಹಾಸಿಗೆವಸ್ತ್ರ, ಕಂಬಳಿ ಎಲ್ಲದರಲ್ಲೂ ಸಿಕ್ಕಿದ್ದು ಗುಲಗುಂಜಿಯೇ. ಶಾಮಣ್ಣನ ಇಬ್ಬರು ಅಣ್ಣಂದಿರು ಗಡಸು ಸ್ವಭಾವದವರು ಮತ್ತು ಅವರ ಹೆಂಡಿರ ಮನೆಯವರು ಆಢ್ಯಸ್ಥರಾದ ಕಾರಣ ಅವರಿಗೆ ಸಮಪಾಲು ಕೊಟ್ಟ ಹಿರಿಯಣ್ಣ ಸೌಮ್ಯ ಸ್ವಭಾವದ ಮತ್ತು ಹಿಂದೆ ಯಾರೂ ಗಟ್ಟಿಗರಿಲ್ಲದ ಶಾಮಣ್ಣನಿಗೆ ಒಂದಿಷ್ಟು ಕೊಟ್ಟಂತೆ ಮಾಡಿ ಅಕ್ಷರಶ: ಹೊರಹಾಕಿದ್ದ.
ಆ ನೆನಪುಗಳಲ್ಲಿ ತನ್ನೊಳಗೆ ಇಳಿದುಹೋಗಿದ್ದ ಶಾಮಣ್ಣನಿಗೆ ಅದೆಲ್ಲೋ ಅಶರೀರವಾಣ ಯಂತೆ ಕೇಳಿತು. “ಏನ್ರೋ, ಅಷ್ಟೊಂದು ಗಾಢಾಲೋಚನೆ?” ಎಂದ ಹೆಂಡತಿಯ ಕೀಟಲೆ ಮಾತಿಗೆ ಶಾಮಣ್ಣ “ಏನೂ ಅಲ್ಲ, ಯಾಕೋ ನಾವು ಹಿಸೆಯಾಗಿ ಇಲ್ಲಿ ಬಂದು, ಗಂಜಿ ಕೆಲವು ಸಾರಿ ಅದೂ ಇಲ್ದೇ ಬಾಳೆಕಾಯಿ, ಹಲಸಿನ ಬೇಳೆ ಬೇಯಿಸಿಕೊಂಡು ಹೊಟ್ಟೆ ಹೊರೆದುಕೊಂಡ ದಿನಗಳು ನೆನಪಾಯ್ತು. ಪಾಲಿಗೆ ಬಂದ ಗದ್ದೆಯ ಒಂದಿಷ್ಟನ್ನ ಅಡಕೆ ತೋಟ ಮಾಡಿದ ಶ್ರಮ ನೆನಪಾಯ್ತು. ಮಕ್ಕಳನ್ನ ತೀರಾ ಕಷ್ಠದಿಂದ ಬೆಳೆಸಬೇಕಾದ ದಾರಿಧ್ಯದ ನೆನಪಾಯ್ತು” ಎಂದವರ ದನಿಯಲ್ಲಿ ಆರ್ಧತೆಯಿತ್ತು.
“ಅದನ್ನೆಲ್ಲ ಯಾಕೆ ನೆನಪು ಮಾಡಿಕೊಂಡು ಒದ್ದಾಡ್ತಿರೇನೋ? ಕಳೆದದ್ದು ಕಳೆದುಹೋಯ್ತು. ಈಗೆಂತ ಕಮ್ಮಿ? ಸುಮ್ಮನೆ ತಲೆಬಿಸಿ ಮಾಡ್ಕೋತೀರಿ” ಎಂದು ಸಾವಿತ್ರಮ್ಮ ಹೇಳಿದರೂ ಅವರೊಳಗೂ ಆ ಸ್ಮೃತಿ ಯಾವಾಗಿನಂತೆ ಈಗಲೂ ಜೀವಂತವಾಗೇ ಇತ್ತು. ಮಾತು ಮರೆಸಲೆನ್ನುವಂತೆ ‘ಅದೇನೋ ಹೇಳದಿತ್ತು ಅಂದ್ರೀ, ಅದನ್ನ ಹೇಳಿ’ ಎಂದರು.
‘ಹೇಗೆ ಹೇಳಲಿ? ಕೇಳಿದ್ದನ್ನ ಹೆಂಡತಿ ಹೇಗೆ ಅರಗಿಸಿಕೊಳ್ಳಬಹುದು?’ ಎನ್ನುವದನ್ನ, ಹೇಳದಿರಲು ಸಾಧ್ಯವೇ ಇಲ್ಲದ ಶಾಮಣ್ಣ ಹಾರ್ಸಿಕಟ್ಟಾದಿಂದ ಹೊರಟಲ್ಲಿಂದ ಈ ಕ್ಷಣದವರೆಗೂ ಯೋಚಿಸುತ್ತಿದ್ದರು. ಈ ವಿಷಯವನ್ನ ಆಕೆಯಲ್ಲಿ ಹೇಳದಿರಲು ಸಾಧ್ಯವೇ ಇರದ ಶಾಮಣ್ಣ ಅವಳ ಮೇಲೆ ಏನು ಪರಿಣಾಮವಾಗಬಹುದು ಎನ್ನುವ ಆತಂಕದಲ್ಲೇ ‘ಏನಿಲ್ಲ, ಮಗ ಪತ್ರ ಬರೆದಿದ್ದ’ ಎಂದು ಸುಮ್ಮನಾದರು. ಕುತೂಹಲ ಮತ್ತು ನಿಜವನ್ನ ತಿಳಿಯುವ ನಡುವಿನ ಬಿಡುವು ಮಡದಿಯ ಮನಸ್ಸನ್ನ ಧೃಡಗೊಳಿಸಬಹುದು ಎನ್ನುವ ನಂಬಿಕೆ ಅವರದ್ದಾಗಿತ್ತು. “ಹೇಳೊದನ್ನ ನೆಟ್ಟಗೆ ಹೇಳಿ, ಶಕುನ ಹೇಳೋರಂಗೆ ತಡೆ, ತಡೆದು ಹೇಳೋದು ಯಾಕೆ?” ಎಂದು ಹುಸಿಮುನಿಸು ತೋರಿಸಿದವಳಿಗೆ ವ್ಯಕ್ತಗೊಳ್ಳುವದು ಶಾಮಣ್ಣನವರಿಗೆ ಅನಿವಾರ್ಯವಾಯಿತು.
“ಮಗ, ಸೊಸೆ ಮನೆ ಕಟ್ಟಿಸ್ತಾ ಇರೋದು ನಿನಗೆ ಗೊತ್ತಿದ್ದದ್ದೇ ಅಲ್ಲವೇ? ಅದೆಷ್ಟೋ ಅಂತಸ್ತಿನ ಮೇಲಂತೆ! ಅದೆಂತೋ ಇಂಗ್ಲೀಷ್ ಹೆಸರು, ನನಗೆ ನಾಲಗೆ ಹೊರಳೋದಿಲ್ಲ. ಅದರ ಕಡೇ ಕೆಲಸ ಇದೆಯಂತೆ, ಅಂದ್ರೆ ನಾವು ಮನೆಗೆ ಹಂಚೋ, ತಗಡೋ, ಸೋಗೆಯೋ? ಮುಚ್ಚಿಗೆ ಮಾಡೋದಿಲ್ವಾ, ಆ ಹಂತದಲ್ಲಿ ಇದೆಯಂತೆ. ಈಗ ಅವರ ಬಳಿ ದುಡ್ಡೆಲ್ಲ ಖಾಲಿ ಆಗಿದೆಯಂತೆ. ಅದಕ್ಕೆ ಈ ಮನೆ, ತೋಟ, ಗದ್ದೆಯನ್ನ ಬ್ಯಾಂಕೋ, ಸೊಸೈಟಿಯಲ್ಲೋ ಅಡ ಇಟ್ಟು ದುಡ್ಡಿನ ವ್ಯವಸ್ಥೆ ಮಾಡಬೇಕು. ಅದಕ್ಕಿಂತ ನಿಮಗೂ ಜಮೀನು ನಿಗಾ ಮಾಡೋದು ಕಷ್ಟ. ಅದಕ್ಕೆ ಅದನ್ನ ಮಾರೋದೇ ಒಳ್ಳೆಯದು. ಜಮೀನು ಮಾರಿ ನಮ್ಮ ಹೊಸಮನೆಯಲ್ಲಿ ಆರಾಮವಾಗಿ ಇರಬಹುದು ಅಂತ ನಿನ್ನ ಮಗ ಪತ್ರ ಬರೆದಿದ್ದಾನೆ. ನಿಂಗೆ ಏನು ಅನಿಸುತ್ತದೆ?” ಎಂದು ಆವರೆಗೆ ತುಂಬಿಕೊ೦ಡಿದ್ದ ಒಜ್ಜೆ ಕಳೆದವರಂತೆ ಹಗುರಾಗಿ ನಿಟ್ಟುಸಿರುಬಿಟ್ಟರು.
ಗಂಡ ಹೇಳುತ್ತಿದ್ದ ಸಣ್ಣದನಿಯ ಮಾತುಗಳನ್ನ ಕೇಳಿಸಿಕೊಳ್ಳುತ್ತಲೇ ಸಣ್ಣಗೆ ಕುಸಿಯುತ್ತಿದ್ದ ಸಾವಿತ್ರಮ್ಮ ಶಾಮಣ್ಣನವರ ಮಾತು ಮುಗಿದು ಒಂದಷ್ಟು ಕ್ಷಣ ಮೌನಿಯಾದವರು, ಅದರ ಘಾಸಿಯನ್ನ ತಡೆಯಲು ಪರಿಹಾರವೆನ್ನುವಂತೆ ‘ಯಾರು ಓದಿ ಹೇಳಿದ್ದು?’ಎನ್ನುವ ಹಗುರವಾದ ಮಾತನಾಡಿದರು.
ಶಾಮಣ್ಣ ಪಕ್ಕದಲ್ಲಿದ್ದ ಪತ್ರವನ್ನ ಸಾವಿತ್ರಿಯ ಎದುರು ಹಿಡಿದು ತೋರಿಸುತ್ತ “ಮಧ್ಯಾಹ್ನ ದಾಮೂ ಸಿಕ್ಕಿ ಪತ್ರ ಕೊಟ್ಟ. ನನಗೆಲ್ಲಿ ಓದಲಿಕ್ಕೆ ಎಲ್ಲಿರ‍್ತದೆ? ನೀನೇ ಓದು ಅಂದೆ. ಅವನೇ ಓದಿ ಹೇಳಿದ್ದು” ಎಂದವರು ಅವಳ ಮನಸ್ಸು ಒಂದಿಷ್ಟು ಹಗುರವಾಗಲಿ ಎನ್ನುವಂತೆ “ನಾನು ಅಲ್ಲಿ ಸಿಕ್ಕಿದ್ದು ಅವಂಗೆ ಒಳ್ಳೇ ಊಟ ತಪ್ಪಿದಹಾಗಾಯ್ತೇನೋ?, ಸುಳ್ಳೇ ಏನಾರೂ ಹೇಳಿದ್ನೇನೋ?” ಎಂದು ತಮ್ಮ ಅಂತರ೦ಗದಲ್ಲಿದ್ದ ಈ ಪತ್ರದ ಸಾರವೇ ಸುಳ್ಳಾಗಲಿ ಎನ್ನುವ ಆಶಯವನ್ನ ಮರುವ್ಯಕ್ತಪಡಿಸಿದರು.
ಕೆಲವು ಹೊತ್ತಿನ ಕಾಲ ಆ ಮನೆಯ ಜಗಲಿಯಲ್ಲಿ ಸ್ಥಾಯಿಗೊಂಡ ಮೌನವಿತ್ತು. ಮನೆಯ ಪಕ್ಕದ ಮರಗಳ ಮರ್ಮರ, ಕೀಟ, ಪಕ್ಷಿಗಳ ದನಿಯ ಕಲರವ ಮುಂತಾಗಿ ಕಾಡನಡುವಿನ ಎಲ್ಲ ಶೃತಿ, ರಾಗ, ಧ್ವನಿಗಳು ಆ ದಂಪತಿಗಳ ಮನಸ್ಸನ್ನ ಹೊಕ್ಕಿಯೂ, ಹೊಕ್ಕದಂತೆ ದಾಟಿಕೊಳ್ಳುತ್ತಿದ್ದವು.
ಆ ಮೌನವನ್ನ ಸಹಿಸಿಕೊಳ್ಳಲಾಗದವರಂತೆ ಶಾಮಣ್ಣ ಎಲೆ, ಅಡಿಕೆಯ ಹರಿವಾಣವನ್ನ ಎಳೆದುಕೊಂಡರು. ಮನೆಯ ಸೂರಂಚನ್ನು ದೃಷ್ಟಿಸುತ್ತಿದ್ದ ಸಾವಿತ್ರಮ್ಮ ಸ್ವಲ್ಪಹೊತ್ತಿನ ನಂತರ ‘ದಾಮೂ ಓದಿದ ಮಗನ ಈ ಪತ್ರದಲ್ಲಿರುವದು ಸುಳ್ಳಲ್ಲ’ ಎಂದು ಖಚಿತವಾದ ದನಿಯಲ್ಲಿ ಹೇಳಿದವರು ಕವಳ ಹಾಕಿಕೊಳ್ಳುತ್ತಿದ್ದ ಗಂಡನ ಮುಖವನ್ನ ಚೂಪಾದ ನೋಟದಲ್ಲಿ ನೋಡುತ್ತ “ಆರು ತಿಂಗಳ ಹಿಂದೆ ಬಂದ್ದಿದ್ರಲ್ಲಾ , ಆವಾಗ್ಲೇ ಅರ್ಪಿತಾ ಹೇಳಿದ್ಳು. ಅತ್ತೆ, ನಾವು ಒಂದು ಮನೆ ತಗೋತಾ ಇದೀವಿ. ಸುಮಾರು ಇಪ್ಪತ್ತು ಲಕ್ಷ ದುಡ್ಡು ಕೊಟ್ಟಿದೀವಿ. ಇನ್ನೆಷ್ಟು ಬೇಕಾಗುತ್ತೆ ಅಂತ ಗೊತ್ತಿಲ್ಲ. ಇಷ್ಟೆಲ್ಲಾ ಇಬ್ರೂ ದುಡಿತೀವಿ. ಆದರೂ ಮನೆ ಅಂತ ಮಾಡ್ಕೊಳ್ಳೊದಕ್ಕೇ ಒದ್ದಾಡಬೇಕಿದೆ ಅಂದಿದ್ಲು” ಎಂದವರು ಆ ಎದೆಭಾರದ ಸನ್ನಿವೇಶದಿಂದ ಸದ್ಯ ದೂರವಾಗುವ ಉಪಾಯವೆನ್ನುವಂತೆ ಒಳಮನೆಗೆ ನಡೆದರು.
ಜಗಲಿಯಲ್ಲಿ ಕೂತ ಶಾಮಣ್ಣ ಮತ್ತು ಒಳಮನೆಯಲ್ಲಿದ್ದ ಸಾವಿತ್ರಮ್ಮ ಇಬ್ಬರಲ್ಲೂ ಒಂದೇ ಬಗೆಯಲ್ಲಿ ನೆನಪಿನ ಹಾಯಿದೋಣ ತೇಲುತ್ತಿತ್ತು. ಮೊದಲ ಹೆಣ್ಣುಮಗು ಪದ್ಮಾ, ಅಷ್ಟರ ನಂತರ ನಾಲ್ಕು ವರ್ಷ ತಡೆದು ಹುಟ್ಟಿದ ಗಂಡು ಕಾರ್ತೀಕರನ್ನು ಬೆಳೆಸಿದ ಘಳಿಗೆಗಳು ಈ ಕ್ಷಣದಲ್ಲಿ ಅವರಿಬ್ಬರನ್ನು ತಲ್ಲಣಿಸುತ್ತಿತ್ತು. ದಟ್ಟ ಕಾಡಿನ ನಡುವಿನ ಋತುಚಕ್ರದ ಎಲ್ಲ ಘಾಸಿಗಳ ನಡುವೆ ನಿತ್ಯದ ಬದುಕು ಮತ್ತು ಭವಿಷ್ಯವೂ ಕತ್ತಲಾದ ಸ್ಥಿತಿ, ಹಸಿವನ್ನು ಇನ್ನಷ್ಟು ಹೆಚ್ಚಿಸುವ ಬಡತನ, ಯಾವುದೇ ಕ್ಷಣದಲ್ಲೂ ಎದುರಾಗಬಹುದಾದ ಅಪಾಯ, ಕಾಯಿಲೆ.. ಎಲ್ಲದರ ನಡುವೆಯೂ ಆ ಬಾಲರನ್ನು ಪೋಷಿಸಿದ ಕ್ಷಣಗಳು ಅವರ ಮುಂದೆ ಹಾಯುತ್ತಿದ್ದವು. ಒಂದೆಡೆ ಬದುಕನ್ನು ಕಟ್ಟಿಕೊಳ್ಳಬೇಕಾದ ಶ್ರಮದ ದುಡಿಮೆ, ಇನ್ನೊಂದೆಡೆ ಕರುಳಕುಡಿಗಳನ್ನ ಬೆಳೆಸಬೇಕಾದ ಜವಾಬ್ದಾರಿ ಇವೆಲ್ಲದರ ನಡುವೆ ಮಾಬ್ಲ ಗೌಡನ ಕುಟುಂಬದ ಸಹಕಾರವಿಲ್ಲದಿದ್ದರೆ ಈಗ ಈ ಸ್ಥಿತಿಯಲ್ಲಿ ನಾವಿರುತ್ತಿರಲಿಲ್ಲ ಎನ್ನುವದು ಗೋಡೆಗಳ ಆಚೆ,ಈಚೆ ಇದ್ದ ದಂಪತಿಗಳಿಬ್ಬರಲ್ಲೂ ಅನುರಣನಗೊಳ್ಳುತ್ತಿತ್ತು.
ಒಡಹುಟ್ಟಿದ ಅಣ್ಣ ತನ್ನ ಸ್ವಂತಮಕ್ಕಳ ಭವಿಷ್ಯವನ್ನ ಅಂದಾಜಿಸಿ “ಈ ಅವಿಭಕ್ತ ಕುಟುಂಬವನ್ನ ಇನ್ನು ಸಂಬಾಳಿಸಲು ಸಾಧ್ಯವಿಲ್ಲ, ನೀವೆಲ್ಲ ನಿಮ್ಮ ಪಾಲನ್ನು ತೆಗೆದುಕೊಂಡು ನಿಮ್ಮ ಸಂಸಾರ ಕಟ್ಟಿಕೊಳ್ಳಿ” ಎನ್ನುವ ಫರ್ಮಾನು ಹೊರಡಿಸಿ, ತನ್ನ ಮಾತಿಗೆ ಮನ್ನಣೆ ನೀಡುವ ಪಂಚರನ್ನ ಕರೆಸಿಕೊಂಡು ಹಿಸೆ ಮಾಡಿಸಿದ್ದ. ಆಗ ಶಾಮಣ್ಣನವರಿಗೆ ದಕ್ಕಿದ್ದು ಇನ್ನೂ ಭತ್ತದ ಗದ್ದೆಯಾಗಿದ್ದ ಕಾನುಮೂಲೆ. ಕಾಡುಪ್ರಾಣ ಗಳ ಕಾಟದ ನಡುವೆ ದಕ್ಕುವ, ಪಟ್ಟ ಶ್ರಮದ ನಾಲ್ಕನೇ ಭಾಗದ ಫಸಲಿನ ಜಮೀನು. ಊರಿನಿಂದ ಸಾಕಷ್ಟು ದೂರದ, ಕಾಡನಡುವಿನ ಕಣಿವೆಯಲ್ಲಿ ಶಾಮಣ್ಣ ಸೋಗೆ ಹೊಚ್ಚಿದ ಗುಡಿಸಲಿನಂಥ ಮನೆಯಲ್ಲಿ ಸಂಸಾರ ಶುರು ಹಚ್ಚಿದ್ದರು. ಇಬ್ಬರೂ ಚಿಕ್ಕಮಕ್ಕಳ ಜೊತೆ ಮಡದಿಯ ಜೊತೆ ಅಪಾತ್ರರಾಗಿ ಬಂದವರು ಬದುಕನ್ನು ಕಟ್ಟಿಕೊಂಡಿದ್ದು ಆತ್ಮಬಲದಿಂದಲೇ. ಹೊರನೋಟಕ್ಕೆ ಅಶಕ್ತ ಶರೀರದ, ವ್ಯವಹಾರಶೂನ್ಯನಾಗಿ ತೋರುತ್ತಿದ್ದ ಶಾಮಣ್ಣನಲ್ಲಿ ಹೊಸ ಜೀವನ ಕಟ್ಟಿಕೊಳ್ಳುವ ಅದ್ಯಮ ಶಕ್ತಿ ಕೊಟ್ಟದ್ದು ಮಡದಿ ಸಾವಿತ್ರಿ.
ಒಟ್ಟುಕುಟುಂಬದ ಸೊಸೆಯಾಗಿ ಬಂದ ತನ್ನ ಪಾಡಿನ ನೆನಪು ಸಾವಿತ್ರಮ್ಮನಿಗೆ ಒಳಮನೆಯ ಗೋಡೆಗೊರಗಿ ಕೂತಾಗ ಬಿಚ್ಚಿಕೊಳ್ಳತೊಡಗಿತ್ತು. ಬಡವರ ಮನೆಯ ಹೆಣ್ಣಾದ ತನ್ನನ್ನ ಓರಗಿತ್ತಿಯರು, ಗಂಡನ ಕುಟುಂಬದ ನೆಂಟರು ನಡೆಸಿಕೊಳ್ಳುತ್ತಿದ್ದ ರೀತಿ, ಮಾಡುತ್ತಿದ್ದ ಅಪಹಾಸ್ಯದ ಜೊತೆಗೆ ಗಂಡನಿ೦ದ ತಾನು ಪಡೆದುಕೊಂಡ ಮಕ್ಕಳನ್ನ ಪೋಷಿಸಿಕೊಂಡು ಬಂದ ಘಳಿಗೆಗಳು ಕಣ್ಣೆದುರು ಬರತೊಡಗಿದವು. ಯಜಮಾನನ ಮಕ್ಕಳಿಗೆ, ಜಬರದಸ್ತು ಮಾಡುವ ಆತನ ತಮ್ಮನ ಮಕ್ಕಳಿಗೆ ದೊರಕುವ ಮನ್ನಣೆ, ಊಟ, ಆಸರಿಯಲ್ಲೂ ತಾರತಮ್ಯ, ಕೆಲಸದವರಿಗಿಂತ ಕಡೆಯಾಗಿ ನೋಡುವ ರೀತಿಗಳನ್ನ ತನ್ನ ಗಂಡ, ಮಕ್ಕಳ ಜೊತೆಯಲ್ಲಿ ತನಗೂ ಆಗುತ್ತಿದ್ದುದನ್ನ ಸಹನಶೀಲವಾಗಿ ಅನುಭವಿಸಿಕೊಂಡು ಬಂದ ಸಾವಿತ್ರಿ ಈಗ ಮಗ,ಸೊಸೆ ಕೋರಿದ ಆಪೇಕ್ಷೆಗೆ ಉತ್ತರಿಸಬೇಕಾದ ಇಕ್ಕಟ್ಟಿನಲ್ಲಿದ್ದರು.
ಈ ಕಾಡಿಗೆ ಬಂದು ಓರ್ವ ಕೆಲಸದ ಹೆಣ್ಣಿಗಿಂತಲೂ ಕಡೆಯಾಗಿ, ಗಂಡನ ಹೆಗಲಿಗೆ ಹೆಗಲು ಕೊಟ್ಟು ದುಡಿದೆ. ಮಕ್ಕಳು ಹೆಚ್ಚಿಗೆ ಓದಲೆಂದು, ಗಂಡನ ಆಕ್ಷೇಪವನ್ನೂ ಮೀರಿ, ಬಡತನದಲ್ಲೇ ಇದ್ದ ತವರುಮನೆಯ ಸಮೀಪ ಕನ್ನಡ ಶಾಲೆ, ಹೈಸ್ಕೂಲು ಇದೆಯೆಂದು ಮಕ್ಕಳ ಊಟದ ಖರ್ಚಿಗೆ ಅಕ್ಕಿ, ಕಾಯಿ ಕೊಟ್ಟು, ಕೆಲವೊಮ್ಮೆ ಒಂದಿಷ್ಟು ದುಡ್ಡನ್ನೂ ಕೊಟ್ಟು ಅಲ್ಲೇ ಉಳಿಸಿ ಓದಿಸಿದೆ. ಮಗಳನ್ನ ಒಳ್ಳೆಯ ಕುಟುಂಬದವರು ತಾವಾಗಿಯೇ ಗೌರವಯುತವಾಗಿ ಕೇಳಿ ಸೊಸೆಯಾಗಿಸಿಕೊಂಡರು. ಆದರೆ ಮುದಿ ವಯಸ್ಸಿನಲ್ಲಿ ಆಸರೆಯಾಗುತ್ತಾನೆ ಎಂದು ಕನಸುಕಟ್ಟಿಕೊಂಡು ಬಂದ ನಮಗಿರುವ ಓರ್ವ ಮಗ ಅಲ್ಲೆಲ್ಲೋ ತಾನು ಕಟ್ಟುವ ಮನೆಗೆ ಅನ್ನ ಕೊಟ್ಟ ಜಮೀನನ್ನು ಅಡವಿಡು ಎನ್ನುತ್ತಿದ್ದಾನೆ. ರಕ್ತವನ್ನು ಬೆವರಿನಂತೆ ಹರಿಸಿ, ಮೈ, ಮನಸ್ಸುಗಳನ್ನು ಜೀರ್ಣವಾಗಿಸಿಕೊಂಡು ದುಡಿದು, ಬೆಳೆಸಿದ ಈ ತೋಟವನ್ನು ನಿಕೃಷ್ಠವಾಗಿ ಕಾಣುತ್ತಿದ್ದಾನೆ. ಇಂದೆ೦ಥ ಕೆಡುಗಾಲ ಅನ್ನಿಸಿಬಿಟ್ಟಿತು ಸಾವಿತ್ರಮ್ಮನಿಗೆ.
ಓದಿ, ಒಳ್ಳೆಯ ನೌಕರಿ ಹಿಡಿದು, ತಾನೇ ಇಷ್ಟಪಟ್ಟ ಹುಡುಗಿಯನ್ನು ಅವಳ ತವರಿನವರ ಆಶಯದಂತೆ ಮದುವೆಯಾದ ಮಗ ಕಾರ್ತೀಕ ಆ ನಂತರ ಕಳೆದೇಹೋಗಿಬಿಟ್ಟ. ಮೊದಲು ತಿಂಗಳಿಗೆ ಎರಡು ಸಾರಿಯಾದರೂ ಪತ್ರ ಬರೆಯುತ್ತಿದ್ದ. ಕ್ರಮೇಣ ಅದೂ ನಿಂತು ಹೋಯಿತು. ವರ್ಷದಲ್ಲಿ ಎರಡೋ,ಮೂರೋ ಬಾರಿ ಬರುವ, ಬಂದಾಗಲೂ ಮೊದಲು ಹೆಂಡತಿಯ ಮನೆಗೆ ಹೋಗಿ ಎರಡು ದಿನದ ನಂತರ ಹೆಂಡತಿ, ಮಗುವಿನ ಜೊತೆಗೆ ಇಲ್ಲಿಗೆ ಬರುತ್ತಿದ್ದ. ಬರುವಾಗಲೇ ಹೊರಡಲು ಅವಸರಿಸಿಕೊಂಡೇ ಇರುತ್ತಿದ್ದ ಸೊಸೆ ‘ಕರೆಂಟ್ ಇಲ್ಲ, ಮೊಬೈಲ್ ಸಿಗ್ನಲ್ ಇಲ್ಲ..’ಎನ್ನುವ ತರಹೇವಾರಿ ತಕರಾರುಗಳನ್ನು ಸಿಡುಕಿನ ಧ್ವನಿಯಲ್ಲಿ ಪಿಸುಗುಡುತ್ತ ಎರಡು ರಾತ್ರಿ ಕಳೆಯುವಷ್ಟರಲ್ಲಿ ಗಂಡನನ್ನು ಎಬ್ಬಿಸಿಕೊಂಡು ಹೊರಟುಬಿಡುತ್ತಿದ್ದಳು.
ಅಪ್ಪ, ಅಮ್ಮನ ಬಳಿ ಹೆಚ್ಚಿಗೇನೂ ಮಾತನಾಡದೇ ಇರುತ್ತಿದ್ದ ಕಾರ್ತೀಕ ಅಮ್ಮನ ಪ್ರಶ್ನೆಗಳಿಗೆ ‘ಆಯಿ, ಈಗ ಪತ್ರ ಬರೆಯಬೇಕು ಅಂದರೆ ಪೋಷ್ಟಾಪೀಸು ಹುಡುಕಿಕೊಂಡು ಹೋಗಬೇಕು. ಅಷ್ಟು ಸಮಯಾನೂ ಇರೋಧಿಲ್ಲ. ಈಗೆಲ್ಲ ಆನಲೈನ್. ದಿನಾ ಮೇಸೇಜ್ ಕಳಿಸೋಹಾಂಗೇ ಮಾಡ್ತೇನೆ’ ಎಂದವ ವಾಯರ್ ಎಳೆಸಿ, ಮನೆಯಲ್ಲಿ ಕೂತಲ್ಲೇ ಟಿ.ವಿ. ಅದರ ಜೊತೆಗೆ ಮೊಬೈಲ್‌ನಲ್ಲಿ ಮಾತನಾಡುವ ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದ. ಅಂಥ ಯಾವ ಖರ್ಚೂ ಇಲ್ಲದೇ ಸಲೀಸಾಗಿ ನೀಡಬಹುದಾಗಿದ್ದ ಪ್ರೀತಿಯನ್ನು, ಕಾಳಜಿಯನ್ನು ಮಗ ತೋರಿಸುತ್ತಿಲ್ಲವಲ್ಲ ಎನ್ನುವ ಒಳವೇದನೆಯಲ್ಲೇ ‘ಅವೆಲ್ಲ ಬೇಡ. ನಮಗೆ ಅದರ ಅವಶ್ಯಕತೆ ಇಲ್ಲ. ತ್ರಾಸಾದರೂ ತಿಂಗಳಿಗೊಮ್ಮೆ ಪತ್ರ ಬರೆ. ಅದೇ ಸಮಾಧಾನ ಕೊಡ್ತದೆ’ ಎಂದು ಅಪ್ಪ,ಅಮ್ಮ ಇಬ್ಬರೂ ನಿರಾಕರಿಸಿದ್ದರು.
‘ಮಕ್ಕಳಿಗೆ ಅಂತಲೇ ಅಲ್ಲವೇ ನಾವೆಲ್ಲ ಆಗಲೂ, ಈಗಲೂ ಒದ್ದಾಡುತ್ತಿರುವದು. ಮಗ ಸಿರಿವಂತನಾಗಲಿ ಎಂದು ಓದಿಸಿದ್ದಲ್ಲ, ಓದು ಅವನಲ್ಲಿ ಒಳ್ಳೆಯ ವ್ಯಕ್ತಿತ್ವವನ್ನ, ಗುಣವನ್ನ ತರಲಿ ಎಂದಲ್ಲವೇ?. ಸ್ವಂತ ದುಡಿಮೆ ಅವನಲ್ಲಿ ಹುಮ್ಮಸ್ಸು ತರಲಿ. ಬೇಡ ಎಂದರ‍್ಯಾರು? ಆದರೆ ತನ್ನನ್ನೇ ಅವಲಂಬಿಸಿಕೊ೦ಡ ಮುದಿ ಜೀವಗಳಿದ್ದಾವಲ್ಲ ಎನ್ನುವ ನೆನಪು ಅವನಿಗ್ಯಾಕೋ ಆಗುತ್ತಿಲ್ಲವಲ್ಲ. ಯಾಕೆ? ಎನ್ನುವದು ಬಗೆಹರಿಯದ ಪ್ರಶ್ನೆ’ ಎಂದೊಮ್ಮೆ ಭಾವುಕ ಮನಸ್ಸಿನ ಶಾಮಣ್ಣ ಇಳಿಸಂಜೆಯಲ್ಲಿ ಮನೆಯ ಕಟ್ಟೆಯ ಮೇಲೆ ಕೂತು ತನ್ನನ್ನೇ ಪ್ರಶ್ನಿಸಿಕೊಳ್ಳುವವರಂತೆ ತುಸು ಗಟ್ಟಿಯಾಗೇ ಅಂದಿದ್ದರು. ಅಲ್ಲೇ ಏನೋ ಕೆಲಸಮಾಡಿಕೊಂಡಿದ್ದ ಸಾವಿತ್ರಮ್ಮ ಆ ಮಾತುಗಳನ್ನ ಕೇಳಿಸಿಕೊಳ್ಳುತ್ತ ಪಾರ್ಶ್ವದಿಂದ ಕಾಣುತ್ತಿದ್ದ ವೇದನೆಯ ಭಾವಗಳು ಸರಿದಾಡುತ್ತಿದ್ದ ಗಂಡನ ಮುಖ ದೃಷ್ಟಿಸಿದ್ದರು. ಅವರ ಒಳ ನೋವು ಮರೆಸಲು ‘ಒಳ್ಳೇ ತಾಳಮದ್ದಳೆ ಪ್ರಸಂಗದ ಅರ್ಥ ಹೇಳಹಾಂಗೇ ಆದ್ರಲ್ಲೋ ಎಂದು ಖುಷಾಲು ಮಾಡಿದ್ದರು.
ಬದುಕಿನ ಉದ್ದೇಶವೇ ಅದು ಎನ್ನುವಂತೆ ಬೆಳೆಸಿದ್ದ ಕರುಳಕುಡಿ ಜೀವನದ ಕೊನೆಯ ದಿನಗಳಲ್ಲಿ ನಿಧಾನಕ್ಕೆ ದೂರವಾಗುತ್ತಿರುವದನ್ನ ಶಾಮಣ್ಣ ಮತ್ತು ಸಾವಿತ್ರಮ್ಮ ಮೌನವಾಗಿ ಅರಿತುಕೊಂಡಿದ್ದರು. ‘ಎಲ್ಲವೂ ನಾವು ಪಡೆದುಕೊಂಡುಬ೦ದ ಹಾಗಾಗುತ್ತದೆ. ಯಾಕೆ ತ್ರಾಸು ಮಾಡಕೋತೀರಿ’ ಎಂದು ಸಾವಿತ್ರಮ್ಮ ಗಂಡನ ಮೈದಡವಿ ಸಮಾಧಾನಿಸಿದ್ದರು. ಅವರಿಬ್ಬರಿಗೂ ಪರಸ್ಪರ ಆಸರೆ ನಾವು, ನಾವೇ ಎನ್ನುವದು ಮನದಟ್ಟಾಗಿತ್ತು. ‘ಯಾರು ಮೊದಲು ಹೋದರೂ ಉಳಿದವರ ಸ್ಥಿತಿ ಏನು?’ ಎನ್ನುವ ಯೋಚನೆ ಆ ದಂಪತಿಗಳಿಬ್ಬರಿಗೂ ಆಗಾಗ್ಗೆ ಬರುತ್ತಿತ್ತು. ಆ ಎಲ್ಲ ಸಂಕಟಗಳನ್ನೂ ಎದೆಯೊಳಗಿಟ್ಟುಕೊಂಡು ಬದುಕನ್ನು ದೂಡುತ್ತ ಬರುತ್ತಿದ್ದವರ ಎದುರು ಮತ್ತೊಂದು ವಿಷಮ ಸನ್ನಿವೇಶ ಎದುರಾಗಿತ್ತು.
ಮಗ, ಸೊಸೆ ಈ ಕಾನಮೂಲೆಗೆ ಬಂದು ವಾಸಿಸುವ ಭರವಸೆಯನ್ನು ಮಗನ ಪತ್ರ ಒರೆಸಿಹಾಕಿತ್ತು. ಹಿಂದೊಮ್ಮೆ ಬಂದಾಗ ಸೊಸೆ ಹೇಳಿದ್ದಳು. ‘ಕಾರ್ತೀಕನಿಗೆ ಅವನದ್ದೇ ಕೆಲಸದ ಒತ್ತಡ. ನೀವಿಲ್ಲಿ ಹೇಗೆ ಒದ್ದಾಡ್ತೀರೋ? ಎಂದು ಆಗಾಗ್ಗೆ ಹೇಳ್ತರ‍್ತಾನೆ. ನಂಗೂ ಹಾಗೇ ಕಾಣ್ತದೆ. ಈ ವಯಸ್ಸಲ್ಲಿ ಏನೂಂತ ಕಷ್ಟಪಡ್ತೀರಿ. ಈ ಜಮೀನು ಮಾರಿ, ನಮ್ಮ ಜೊತೆಗೆ ಬಂದು ಇರಿ’ ಎಂದಿದ್ದಳು. ಅವಳಿಗೆ ಹೇಗೆ ಗೊತ್ತಾಗಬೇಕು? ಹೊಕ್ಕುಳಬಳ್ಳಿ ಕಚ್ಚಿಕೊಂಡ ಈ ನೆಲವನ್ನು ಅಷ್ಟು ಸುಲಭಕ್ಕೆ ತೊರೆದುಹೋಗಲು ಸಾಧ್ಯವೇ? ಎಂದು ಅವರಿಬ್ಬರೂ ಹಲವು ಬಾರಿ ಮಾತನಾಡಿಕೊಂಡಿದ್ದರು.
ಆದರೆ ವಾಸ್ತವಿಕ ಸತ್ಯ ಎದುರಿಗಿತ್ತು.
ಮಗ ಎಂದೂ ಇಲ್ಲಿಗೆ ಮರಳುವದಿಲ್ಲ ಎನ್ನುವದು ನೂರಕ್ಕೆ ನೂರು ಸತ್ಯ. ತಮ್ಮ ಸಾವು ಈ ನೆಲದಲ್ಲೇ ಎನ್ನುವ ಖಚಿತ ನಿರ್ಧಾರವನ್ನು ತಳೆದ ತಾವಿಬ್ಬರೂ ಅವನಲ್ಲಿಗೆ ಹೋಗುವದು ಊಹಿಸಲೂ ಸಾಧ್ಯವೇ ಇಲ್ಲದ ಮಾತು. ಈ ಸಂದಿಗ್ಧ ಸ್ಥಿತಿಯನ್ನು ದಾಟುವದು ಹೇಗೆ? ಎನ್ನುವದು ಆ ದಂಪತಿಗಳನ್ನ ಕಾಡುತ್ತಿತ್ತು. ಮಕ್ಕಳಂತೆ ಪ್ರೀತಿಸಿದ, ವಾತ್ಸಲ್ಯದಿಂದ ಕಂಡ, ಈವರೆಗೆ ಹೊಟ್ಟೆತುಂಬ ಊಟ, ಮರ್ಯಾದೆ ಮುಚ್ಚುವ ಬಟ್ಟೆಬರೆ.. ಬದುಕಿಗೆ ಎಲ್ಲವನ್ನೂ ಕೊಟ್ಟ ಈ ನೆಲವನ್ನ ಮಾರುವದು ಅಥವಾ ಅಡವು ಇಡುವದು ಎನ್ನುವ ಕಲ್ಪನೆಯೇ ಅವರಿಬ್ಬರನ್ನೂ ಒಳಗೊಳಗೇ ಸುಡುತ್ತಿತ್ತು.
ಒತ್ತಿ ಬರುತ್ತಿದ್ದ ದು:ಖವನ್ನು ತಡೆಯುತ್ತ, ಕಣ್ಣಿರು ತುಳುಕುವ ಕಣ್ಣುಗಳನ್ನ ಒರೆಸಿಕೊಳ್ಳುತ್ತ ಒಳಮನೆಯಲ್ಲಿದ್ದ ಸಾವಿತ್ರಮ್ಮ ಗಂಡನ ನೆನಪಾಗಿ ಹೊರಬಂದರು. ಕಾಡಿನಾಚೆಯ ದೂರದ ಎತ್ತರದ ಗುಡ್ಡದ ತುದಿಯಲ್ಲಿ ಹಳದಿ ಬಣ್ಣದ ಇಳಿಸಂಜೆಯ ಬಿಸಿಲು ನಿಧಾನಕ್ಕೆ ಮಾಸುತ್ತಿರುವದನ್ನ ತಮ್ಮ ಮಸುಕಾದ ಕಣ್ಣುಗಳಲ್ಲಿ ದೃಷ್ಟಿಸುತ್ತ ಮನೆಯ ಕಟ್ಟೆಯ ಮೇಲೆ ಕುಳಿತಿದ್ದರು ಶಾಮಣ್ಣ. ನಿಧಾನಕ್ಕೆ ಅವರ ಪಕ್ಕದಲ್ಲಿ ಕುಳಿತ ಸಾವಿತ್ರಮ್ಮ ಶಾಮಣ್ಣನವರ ಬಲ ಹಸ್ತವನ್ನು ತನ್ನ ಎರಡೂ ಹಸ್ತಗಳಿಂದ ಹಿಡಿದು ಆತುಕೊಂಡರು.
0 ಪ್ರತಿಕ್ರಿಯೆಗಳು