ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಚುಚ್ಚುಮದ್ದಿನ ಸೈಡ್ ಎಫೆಕ್ಟ್

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ನರಹರಿ ಶರ್ಮ ಬೆನ್ನಿಗೆ ದಿಂಬು ಕೊಟ್ಟುಕೊಂಡು ಕೂತು ಗಂಟೆಗಳೇ ಸರಿದಿದ್ದವು. ಬೆಂಗಳೂರಿನ ೫೦-೮೦ ಅಡಿ ನಿವೇಶನದಲ್ಲಿ ಕಟ್ಟಿರೋ ಮೂರಂತಸ್ತಿನ ಮನೆಯ ಒಡೆಯನಿಗೆ ಕಳೆದ ೧೩ ದಿನದಿಂದ ಮಂಚವೇ ಪ್ರಪಂಚವಾಗಿ  ಬಿಟ್ಟಿದೆ. ಬೆನ್ನಿಗೆ ಕಲ್ಲುಕಟ್ಟಿದಂತೆ ನೋವಾಗುತ್ತಿದೆ, ಕರೆಯೋದಕ್ಕೆ ಧ್ವನಿ ಜೋರಾಗಿ ಬರೋದಿಲ್ಲ, ಮಗ, ಕೂರಿಸಿ ಹೋದವನು ಪತ್ತೆಯಿಲ್ಲ.

ಕೂತಲ್ಲೇ ಒಂದೆರಡು ಸೆಂಟಿಮೀಟರ್ ಜರುಗೋದಕ್ಕೆ ಪ್ರಯತ್ನಪಟ್ಟು ಸೋತರು. ಬುದ್ಧಿ ಬಂದಾಗ್ಲಿಂದ ಒಂದು ಕಡೆ ಕೂತವರಲ್ಲ. ಅರವತ್ತಾದರೂ ಕಂಪನಿ ಕೆಲ್ಸ ನಿಲ್ಲಿಸಿರಲಿಲ್ಲ, ಬಚ್ಚಲು ಮನೆಯಲ್ಲಿ ಜಾರಿ ಬಿದ್ದಿದ್ದು ಬದುಕಿನ ಚಲನೆಗೇ ವಿರಾಮ ಹಾಕಿತ್ತು. ಹೊರಗಡೆಯಿಂದ ಏನೋ ಶಬ್ದ ಕೇಳಿ ಕಿಟಕಿಯಿಂದ ಆಚೆ ನೋಡಿದರು, ಒಂದು ಕೆಂಪು ಕಾರು ಬಂದು ನಿಂತಿತು.

ನರಹರಿ ಕಣ್ಣು ಸಣ್ಣಗೆ ಮಾಡಿದರು ‘ಅವ್ಳೇ ಆ ಮಲಯಾಳಿ ಕ್ರಿಶ್ಚಿಯನ್ ಹುಡುಗಿ, ಎಷ್ಟು ಧೈರ್ಯ ಮನೆ ತನಕ ಬಂದಿದ್ದಾಳೆ!’. ಮಗನ ಪ್ರೀತಿಗೆ ಇವರು ಬಿಲ್ ಕುಲ್ ಒಪ್ಪದ ಕಾರಣ  ಮನೆಯಲ್ಲಿ ಜಗಳವಾಗಿತ್ತು, ‘ನನ್ ಒಂದು ನೋಟಕ್ಕೆ ಹೆದರುತ್ತಿದ್ದ ಮಗ ಈಗ ನಾನು ಒಪ್ಪದೇ ಇರೋ ಹೆಣ್ಣನ್ನ ಮನೆಗೇ ಕರೆದಿದ್ದಾನೆ. ಪರಿಸ್ಥಿತಿ ನನ್ನ ಕೈಲಾಗದವನನ್ನಾಗಿ ಮಾಡಿದೆ’. ಮಗ ಭುವನ್ ಮತ್ತು ಆ ಹುಡುಗಿ ಮಾತಾಡುವಷ್ಟೂ ಹೊತ್ತು ಅವರ ಹಾವಭಾವವನ್ನೇ ನೋಡಿದರು. ತುಂಬಾ ಸಲಿಗೆಯಿಂದ ಮಾತಾಡುತ್ತಿದ್ದಾರೆ ಅನ್ನಿಸಿತು. ಹೊರಡುವಾಗ ಇಬ್ಬರೂ ಅಪ್ಪಿಕೊಂಡು ಬೀಳ್ಕೊಟ್ಟರು.

ಭುವನ್ ‘ಅಪ್ಪಾ.. ನೀವ್ ಚೆಕ್ ಮೇಲೆ ಹಾಕಿದ್ ಸಿಗ್ನೇಚರ್ ಮ್ಯಾಚ್ ಆಗ್ದೇ ರಿಜೆಕ್ಟ್ ಆಗಿದೆ. ನಿಮ್ ಮ್ಯಾನೇಜರ್ ಗೆ ಸಿಗ್ನೇಚರ್ ಇಲ್ದೇ ಕೆಲ್ಸ ಮಾಡೋದು ಕಷ್ಟ ಆಗ್ತಿದ್ಯಂತೆ. ದಿನಾ ಫೋನ್ ಮಾಡಿ ತಲೆ ತಿಂತಿದ್ದಾನೆ. ಅದಕ್ಕೆ ನಮ್ದು ಜಾಯಿಂಟ್ ಅಕೌಂಟ್ ಮಾಡ್ಬಿಡೋಣ ಅಂತ ಅಪ್ಲಿಕೇಶನ್ ತಂದಿದ್ದೀನಿ’ ಅವಸರ ಮಾಡಿದ. ಮಗ ತನ್ನ ಒಂದೊಂದೇ ಹಕ್ಕನ್ನ ಕಿತ್ಕೋತಿದ್ದಾನೆ ಅನ್ಸಿತು. ಟೇಬಲ್ ಮೇಲಿಟ್ಟಿದ್ದ ಫ಼ಾರ್ಮ್ ಅನ್ನು ಕೈಯಿಂದ ತಳ್ಳಿಬಿಟ್ಟರು. ‘ಏನಪ್ಪ ಹೀಗ್ ಮಾಡ್ತ್ಯಾ? ನಾನೇನ್ ನಿನ್ ಆಸ್ತಿನ ಲಪ್ಟಾಯಿಸ್ತೀನಾ. ಅಷ್ಟಕ್ಕೂ ನೀನ್ ಹೋದ್ಮೇಲೆ ಇನ್ಯಾರಿಗ್ ಕೊಡ್ತ್ಯಾ ಇದೆಲ್ಲ? ಎಲ್ಲಾದಕ್ಕೂ ಆಗಲ್ಲ ಅನ್ನೋದೊಂದೇ ಉತ್ರ’ ಭುವನ್ ಕೂಗಾಡಿದ್ದಕ್ಕೆ ಅವರು ತಲೆಕೆಡಿಸಿಕೊಳ್ಳಲಿಲ್ಲ.

ನರಹರಿ ಸಿವಿಲ್ ಕಂಟ್ರಾಕ್ಟರ್ ಆಗಿ ಸರ್ಕಾರದ ಕೆಲ್ಸ ಮಾಡಿ ಒಳ್ಳೆ ಸಂಪಾದನೆ ಮಾಡಿದ್ದರೂ ಐವತ್ತು ವರ್ಷಗಳ ಹಿಂದೆ ತನ್ನಪ್ಪ ಅಮ್ಮ ಕಾಸು ಕಾಸಿಗೂ ಹಾಕುತ್ತಿದ್ದ ಲೆಕ್ಕಾಚಾರವನ್ನೇ ಅನುಸರಿಸುತ್ತಿದ್ದರು. ‘ಬಾಡಿಗೇನೇ ನಲವತ್ತು ಸಾವಿರ ದಾಟುತ್ತೆ, ತರಕಾರಿಯವನ ಹತ್ತಿರ ಐದು ರುಪಾಯಿಗೂ ಅರ್ಧ ಗಂಟೆ ಚೌಕಾಶಿ ಮಾಡ್ತ್ಯಲ್ಲಪ್ಪ’ ಅಂತ ಬುದ್ಧಿ ಹೇಳೋಕೆ ಬಂದ ಮಗನಿಗೆ ಒಂದು ರುಪಾಯಿಯ ಬೆಲೆ ನಿನಗೇನು ಗೊತ್ತು ಅಂತ ತಮ್ಮದೇ ಅರ್ಥಶಾಸ್ತ್ರ ಪಾಠ ಶುರುಮಾಡ್ತಿದ್ರು. ಹುಷಾರು ತಪ್ಪಿದಾಗ್ಲಿಂದ ಮಗಳು ಒಂದು ಸಲ ನೋಡಿಕೊಂಡು ಹೋಗಿದ್ದಳು. ಒಂದು ಕೆಜಿ ಸೇಬು, ಕಿತ್ತಳೆ ಹಣ್ಣುಗಳ ಕವರ್ ನ ತಂದು ಕೊಟ್ಟಿದ್ದಷ್ಟಕ್ಕೆ ಅವಳ ಕರ್ತವ್ಯ ಮುಗಿದಿತ್ತು. ಡಾಕ್ಟರ್ ಬೆನ್ನು ಹುರಿ ಸರಿ ಹೋಗೋದಕ್ಕೆ ಸಮಯ ಹಿಡಿಯುತ್ತೆ, ಮೂರು ತಿಂಗಳಾದ್ರೂ ಬೆಡ್ ರೆಸ್ಟ್ ಬೇಕು ಎಂದಿದ್ದರು. ಸಮಯ ದೂಡೋದು ಹೇಗೆ? ನನ್ನ ಜೀವನ ಹೀಗೇ ಅಂತ್ಯವಾಗುತ್ತಾ ಅಂತ ಯೋಚಿಸುತ್ತಿದ್ದವರಿಗೆ ನಿದ್ರೆ ಆವರಿಸಿದ್ದು ಗೊತ್ತಾಗಲಿಲ್ಲ.

ಹಕ್ಕಿಗಳು ಕಿಚಿಕಿಚಿ ಶಬ್ದ ಮಾಡುತ್ತಿತ್ತು, ಕೋಗಿಲೆಗಳೆರಡು ಜುಗಲ್ಬಂದಿ ಮಾಡುತ್ತಿರುವಂತೆ ಕೂಗುತ್ತಿದ್ದವು. ನರಹರಿ ಮೆಲ್ಲಗೆ ಕಣ್ಣು ತೆರೆದರು. ಎದರು ಮನೆಯ ಪಕ್ಕದ ಖಾಲಿ ಸೈಟಿನಲ್ಲಿದ್ದ ಹೊಂಗೆ ಮರದ ಮೇಲೆ ಹಕ್ಕಿಗಳು ಕೂತಿರುವುದು ಕಂಡಿತು. ಒಂದು ಹಕ್ಕಿಗಂತೂ ಮೈಯೆಲ್ಲಾ ಕಂದು, ಕತ್ತು ಕಪ್ಪು ಬಣ್ಣ ಮತ್ತು ಕೊಕ್ಕು ಕೆಂಪಾಗಿದ್ದವು. ಅಳಿಲುಗಳೆರಡು ಕೊಂಬೆ ಮೇಲೆ ಜೂಟಾಟ ಆಡುತ್ತಿದ್ದವು. ಅದನ್ನೇ ನೋಡುತ್ತಾ ನರಹರಿ ಮೈಮರೆತರು.

ಬದುಕಿನ ಖಾಲಿತನವನ್ನು ಹೀಯಾಳಿಸುತ್ತಿದ್ದ ಅವರ ಕೋಣೆಗಿಂತ ಆಶ್ರಯ ಪಡೆದವರೆಲ್ಲರನ್ನೂ ತನ್ನವರಂತೆ ಕಾಣುತ್ತಿದ್ದ ಆ ಮರದಲ್ಲಿ ಪೂರ್ಣತೆ ಕಂಡಿತು.

ಒಂದು ದಿನ ಕಾಗೆಯೊಂದು ಏನನ್ನೋ ಕಚ್ಚಿಕೊಂಡು ಬಂದು ಮರದ ಬುಡದಲ್ಲಿದ್ದ ಕಲ್ಲಿನ ಮೇಲೆ ಹಾಕಿ ಕೊಕ್ಕನ್ನು ಉದ್ದ ಮಾಡಿ ಉತ್ಸಾಹದಲ್ಲಿ ಕಾ ಕಾ ಅಂತ ಕೂಗಿತು. ಕೆಲವೇ ಸಮಯದಲ್ಲಿ ಮದುವೆ ಮನೆಗೆ ಊಟಕ್ಕೆ ಬಂದವರಂತೆ ಕಾಕೆಯ ಬಳಗ ಸಂಭ್ರಮದಲ್ಲಿ ಹಾಜರಾಗಿತ್ತು. ‘ನಾನು ಕಾಗೆಯ ಹಾಗೆ ಹಂಚಿ ತಿನ್ನುವ ಬುದ್ಧಿಯನ್ನು ಕಲಿತಿದ್ದೇನಾ? ದುಡಿದಿಟ್ಟ ಸಂಪಾದನೆಯಲ್ಲಿ ಯಾರಿಗೆ ಏನು ಸಹಾಯ ಮಾಡಿದೆ?’ ನೆನಪು ಮಾಡಿಕೊಳ್ಳೋಕೆ ತೊಗೊಂಡೆ ಸಮಯವೇ ಅವರ ಪ್ರಶ್ನೆಗೆ ಉತ್ತರಿಸಿತ್ತು.

ಮತ್ತೊಂದು ದಿನ ಎರಡು ಗುಬ್ಬಚ್ಚಿಗಳು ಸೇರಿ ಗೂಡು ಕಟ್ಟೋದನ್ನ ನೋಡಿದರು. ಎರಡು ಗುಬ್ಬಿ ಬಾಯಲ್ಲಿ ಸಣ್ಣ ಕಡ್ಡಿ, ಕಸ, ಪೇಪರ್ ಇತ್ಯಾದಿಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಬಂದು ಗೂಡು ಕಟ್ಟುತ್ತಿದ್ದವು. ಅವುಗಳು ಕಿಚಿಕಿಚಿ ಅಂದಿದ್ದು ಗೂಡು ಕಟ್ಟುವ ವಿಚಾರದಲ್ಲಿ ಗಂಡ ಹೆಂಡತಿ ಗುಬ್ಬಿ ವಾದ ಮಾಡಿದಂತಿತ್ತು. ‘ಒಂದು ದಿನವೂ ನಾನು ನನ್ನ ಮನೆ ಕಟ್ಟಲು ಹೆಂಡತಿಯ ಅಭಿಪ್ರಾಯ ಕೇಳಲಿಲ್ಲವಲ್ಲ. ಯಾವ ವಿಚಾರವೇ ಆಗಲಿ ನನ್ನ ಅರ್ಧಾಂಗಿಯಾದವಳನ್ನ ನಿನಗೇನು ಗೊತ್ತು ಹಳ್ಳಿಯವಳು ಅಂತ ಮೂದಲಿಸಿದ್ದೇ ಹೆಚ್ಚು’ ತಮ್ಮ ದಾಂಪತ್ಯವನ್ನು ಗುಬ್ಬಚ್ಚಿಗಳ ದಾಂಪತ್ಯಕ್ಕೆ ಹೋಲಿಕೊಂಡಿದ್ದು ಒಂದು ಕ್ಷಣ  ಅವರಿಗೇ ಸೋಜಿಗವೆನಿಸಿತು.

ಮಾತಿಗೆ ಯಾರೂ ಸಿಗದೇ ಒಂದೇ ಕೋಣೆಯಲ್ಲಿ ಬಂಧಿಯಾಗಿದ್ದವರಿಗೆ ಆ ಮರದ, ಅದರ ಸುತ್ತಮುತ್ತ ನಡೆಯುವ ಚಟುವಟಿಕೆಗಳೇ ಬದುಕಿನ ಬಗ್ಗೆ ಸಾಕ್ಷಾತ್ಕಾರ ಮೂಡಿಸುತ್ತಿದ್ದವು. ‘ಈ ಮರವೂ ಇಲ್ಲದಿದ್ದರೆ ಈ ದಿನಗಳು ಎಷ್ಟು ಬರಡಾಗಿರುತ್ತಿತ್ತು’ ಎಂದು ಯೋಚಿಸಿದರು. ಎಲ್ಲರೂ ನನ್ನನ್ನು ದೂರುತ್ತಾರೆಂದರೇ ನಾನೇ ಯಾರನ್ನೂ ಸಂಪಾದಿಸಿಕೊಂಡಿಲ್ಲವಾ? ಸತ್ತಾಗ ಎಷ್ಟು ಜನ ಅಳ್ತಾರೆ ಅನ್ನೋದರ ಮೇಲೆ ಮನುಷ್ಯ ಎಷ್ಟು ಜನರಿಗೆ ಬೇಕಾಗಿದ್ದವನಾಗಿದ್ದ ಅಂತ ಗೊತ್ತಾಗುತ್ತದೆ. ಹಾಗಾದರೆ ನಾನು ಸ್ವಾರ್ಥಿಯಾಗಿ ಬದುಕಿಬಿಟ್ಟೆನಾ? ಒಂದೆಡೆ ಜಡವಾಗಿ ಕೂತಿರೋದಕ್ಕೆ ನನಗೆ ಇಂಥ ಆಲೋಚನೆಗಳು ಬರುತ್ತಿವೆಯಾ? ಬೆನ್ನು ಸರಿಹೋದಮೇಲೆ ನನಗೆ ಎಷ್ಟು ಗುತ್ತಿಗೆ ಕೆಲ್ಸ ಸಿಗುತ್ತೆ ಅಂತ ಮತ್ತೆ ಲೆಕ್ಕ ಹಾಕುತ್ತೇನಲ್ಲವೇ? ಯೋಚಿಸುತ್ತಾ ಅಂತರ್ಮುಖಿಯಾದರು. 

ಸೂರ್ಯನ ಹೊಂಗಿರಣ ಕಿಟಕಿಯಿಂದ ನುಗ್ಗಿ ಮಂಚದ ತುದಿಯವರೆಗೂ ಮುಟ್ಟಿತ್ತು. ನರಹರಿ ಎಂದಿನಂತೆ ಎದ್ದ ತಕ್ಷಣ ಕಿಟಕಿಯ ಹೊರ ನೋಡಿದರು. ಅಂದು ಆ ಹೊಂಗೆ ಮರ ವಿದ್ಯಾರ್ಥಿಗಳು ಮಾಸ್ ಬಂಕ್ ಮಾಡಿದ ಕ್ಲಾಸ್ ರೂಮಿನ ಹಾಗೆ ಕಾಣುತ್ತಿತ್ತು. ಕೋಗಿಲೆಯ ಕೂಗು ಕೇಳಲಿಲ್ಲ, ಗೂಡಲ್ಲಿ ಗುಬ್ಬಚ್ಚಿಗಳು ಕಣ್ಮರೆಯಾಗಿದ್ದವು. ‘ಎಲ್ಲಿ ಹೋದವು? ನನ್ನಿಂದ ದೂರ ಆಗ್ಬೇಕು ಅಂತ ಅವಕ್ಕೂ ಅನ್ನಿಸಿತೇ? ಒಂದ್ ಮಾತು ತಿಳಿಸಿಹೋಗಬಹುದಿತ್ತಲ್ಲ? ಭಾವುಕರಾಗಿ ಕಾಯುತ್ತಾ ಕೂತರು. ‘ಸರ್ ಕಾಫಿ ತಂದಿದ್ದೀನಿ’ ಸತೀಶ ವಿಧೇಯತೆಯಿಂದ ಹೇಳಿದ. ಸತೀಶ ನರಹರಿಯ ಕಾರ್ ಡ್ರೈವರ್. ಸದ್ಯಕ್ಕೆ ಅವರ ಕೆಲಸಗಳು ನಿಂತಿರುವುದರಿಂದ ಮಗ ಇವನನ್ನು ಅಪ್ಪನನ್ನ ನೋಡಿಕೊಳ್ಳೋಕೆ ನೇಮಿಸಿದ್ದಾನೆ.

‘ಒಂದ್ ಹಾಡು ಹಾಡೋ ಯಾಕೋ ಬೇಸರವಾಗ್ತಿದೆ..’ ಕಾಫಿ ಹೀರುತ್ತಾ ಕೇಳಿದರು. ಕಾರಿನ ಮ್ಯೂಸಿಕ್ ಸಿಸ್ಟಮ್ ನಲ್ಲಿ ಹಾಡು ಕೇಳುತ್ತಾ ಚೆನ್ನಾಗಿ ಹಾಡೋದನ್ನು ಕಲಿತಿದ್ದ ಸತೀಶ ಹಾಡು ಶುರುಮಾಡಿದ ‘ಹುಟ್ಟುತ್ತ ಹುಲ್ಲಾದೆ, ಬೆಳೆಯುತ್ತಾ ಮರವಾದೇ, ರಂಗನಿಗೆ ಕೊಳಲಾದೆ, ಆಡೋ ಮಕ್ಕಳಿಗೆ ಓಡೋ ಕುದುರೆಯಾದೆ.. ಬಿದಿರೂ ನಾನಾರಿಗಲ್ಲಾದವಳು.. ಬಿದಿರೂ’. ಯಶವಂತ ಹಳಬಂಡಿಯವರ ಶೈಲಿಯಲ್ಲಿ ತನ್ಮಯನಾಗಿ ಹಾಡಿದ. ಅದರ ಸಾಹಿತ್ಯ ನರಹರಿಯವರನ್ನು ಕೆಣಕಿತು. ಒಂದು ಬಿದಿರು ಎಷ್ಟೆಲ್ಲಾ ಉಪಯೋಗಕ್ಕೆ ಬರುತ್ತೆ.. ನಾನ್ಯಾರಿಗಾಗಿದ್ದೀನಿ? ಮನುಷ್ಯತ್ವನ್ನಾದರೂ ಪಾಲಿಸಿದ್ದೀನಾ? ತಿಳಿಯಲಿಲ್ಲ ಮತ್ತೆ ಅದೇ ಪ್ರಶ್ನೆಗಳ ಟೇಪ್ ರೆಕಾರ್ಡರ್ ಶುರುವಾಯಿತು. ಇಡೀ ದಿನ ಪಕ್ಷಿಗಳೂ ಕಾಣದೆ ಮನಸ್ಸು ಕುಗ್ಗಿತು.

ದಿನೇ ದಿನೇ ಬಣ್ಣಬಣ್ಣದ ಆಂಟಿಬಯೋಟಿಕ್ ಮಾತ್ರೆಗಳು ನರಹರಿಯವರ ದೇಹವನ್ನು ಹಿಂಡಲು ಶುರುಮಾಡಿತ್ತು. ಅದರಿಂದ ಭೇದಿ ಶುರುವಾಗಿ ಡಿಹೈಡ್ರೇಶನ್ ಆಯ್ತು. ಮಂಚದಿಂದ ಏಳಲಾಗದ ಸ್ಥಿತಿಯಲ್ಲಿದ್ದವರಿಗೆ ಬೆಡ್ ಪಾನ್ ನಿಂದ ಎಲ್ಲಾ ಸೇವೆಯನ್ನು ಸತೀಶನೇ ಮಾಡ್ತಿದ್ದ. ಅಪ್ಪನ ಸಂಕಟ ನೋಡಿದ ಭುವನ್ ‘ಅಪ್ಪ ಏಳು ಎಳ್ನೀರು ತಂದಿದ್ದೀನಿ’ ತಂದೆಯನ್ನು ಎಬ್ಬಿಸಿ ಗುಟುಕುಗಳಲ್ಲಿ ಎಳನೀರು ಕುಡಿಸಿದ. ಕ್ರಮೇಣ ದೇಹಸ್ಥಿತಿ ಸುಧಾರಿಸ್ತಾ ಬಂತು. ಆದರೆ ಒಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಅವರಿಗೆ ಸ್ಟ್ರೋಕ್ ಹೊಡೆಯಿತು. ಡಾಕ್ಟರ್ ಬಂದು ಪರಿಶೀಲಿಸಿ, ಪುಸ್ತಕದಲ್ಲಿ ಪ್ರಿಸ್ಕ್ರಿಪ್ಶನ್ ಗೀಚಿ ಪೇಪರ್ ಹರಿದು ಮಗನ ಕೈಗಿತ್ತರು. ದಿನವೂ ಎಳನೀರನ್ನು ಕೊಟ್ಟ ಕಾರಣ ಶುಗರ್ ಜಾಸ್ತಿಯಾಗಿದೆ. ನೀವು ಏಕೆ ಹೀಗೆ ಮಾಡಿದ್ರಿ ಅಂತ ಕೇಳಿದಾಗ ಅವನು ಆಂಟಿಬಯೋಟಿಕ್ಸ್ ಮೇಲೆ ಗೂಬೆ ಕೂರಿಸಿದ. ‘ನಿಮ್ಮ ಕಾಳಜಿ ನಿಮ್ಮ ತಂದೆಗೆ ಸ್ಲೋ ಪಾಯಿಸನ್ ಕೊಟ್ಟ ಹಾಗೆ ಆಯ್ತು’  ಡಾಕ್ಟರ್ ಭುವನ್ ನನ್ನು ಬೈದರು.

‘ಅಪ್ಪ ನಿಜ್ವಾಗ್ಲೂ ನಂಗೆ ಗೊತ್ತಾಗ್ಲಿಲ್ಲ, ಎಳ್ನೀರಿಂದ ದೇಹ ತಂಪಾಗುತ್ತೆ, ಸುಸ್ತು ಕಡಿಮೆಯಾಗುತ್ತೆ ಅಂತ ಕೊಡ್ತಿದ್ದೆ ಅಷ್ಟೇ’ ಮಗ ಕಣ್ತುಂಬಿಕೊಂಡಾಗ ನರಹರಿ ಅವನ ಕಣ್ಣಲ್ಲಿ ಸತ್ಯವನ್ನು ಹುಡುಕುತಿದ್ದರು. ಮಗ ತನ್ನನ್ನು ಕಳೆದುಕೊಳ್ಳೋ ಭಯ ಪಡೋದಿಕ್ಕೆ ಕಾರಣವಾದರೂ ಇದೆಯೇ? ಅವನಿಗೆ ನನ್ನ ಮೇಲೆ ಯಾವ ಅವಲಂಬನೆಯೂ ಇಲ್ಲ. ಅವನ ಪ್ರೀತಿಗೆ ಅಡ್ಡಿಯಾಗಿದ್ದೇನೆ, ಆರೋಗ್ಯವಾಗಿದ್ದಾಗ ದಿನವೂ ಮನೆಯಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಜಗಳವಾಗುತಿತ್ತು. ಯಾವ ಕಡೆಯಿಂದ ನೋಡಿದರೂ ನಾನು ಸತ್ತರೇ ಮಗನಿಗೆ ಉಪಯೋಗ ಅನ್ನಿಸಿತು. ಹಾಗಂತ ನನ್ನನ್ನ ಕೊಲ್ಲುವ ಹಂತಕ್ಕೆ ಹೋದನೇ? ಉತ್ತರ ಸಿಗಲಿಲ್ಲ, ಸಿಕ್ಕ ಉತ್ತರವನ್ನು ನಂಬಲು ಮನಸ್ಸು ಹೆದರಿತು.

ಅಂದು ರಾತ್ರಿ ಮಲಗಿದ್ದಾಗ ನರಹರಿಯ ಮೈ ಬೆವರಿತು, ಎದೆ ನಡುಗುತಿತ್ತು, ತನ್ನ ಮಗ ತನ್ನನ್ನ ಕೊಲ್ಲೋ ಪ್ರಯತ್ನ ಮಾಡಿದ ಅನ್ನೋ ಭಯಕ್ಕಿಂತ ಬೇರೊಂದು ಭಯ ಅವರಲ್ಲಿ ಕಾಡುತ್ತಿತ್ತು. ಕಣ್ಣುಮುಚ್ಚಿದರು. ‘ಸ್ಲೋ ಪಾಯ್ಸನ್’ ತಮ್ಮ ಜೀವನದಲ್ಲಿ ಇದು ಹೊಸ ಪದವೇನಾಗಿರಲಿಲ್ಲ. ಹಿಂದೆ ಒಂದು ಸಲ ತಾವೂ ಈ ಆಯುಧವನ್ನು ಬಳಸಿದ್ದರು. ಮನುಷ್ಯನ ಮೇಲಲ್ಲ. ಮರದ ಮೇಲೆ!

ಈಗ ಇವರು ವಾಸವಾಗಿರುವ ಮೂರಂತಸ್ಥಿನ ಮನೆ ಮುಂದೆ ಹಿಂದೆ ದೊಡ್ಡದಾದ ಆಲದಮರವೊಂದಿತ್ತು, ಅದು ನರಹರಿಯ ಮನೆಯ ಅಂದಗೆಡಿಸುತ್ತಿತ್ತು, ಯಾವುದೇ ರೀತಿಯಲ್ಲಿ ಪ್ಲಾನ್ ಮಾಡಿದರೂ ಮನೆಯ ಮುಖ್ಯಭಾಗವನ್ನು ಅದು ಮುಚ್ಚಿಬಿಡುತ್ತಿತ್ತು. ಜೀವಮಾನದ ಕನಸಿನ ಮನೆಗೆ ಬೃಹದಾಕಾರದ ದೃಷ್ಟಿಬೊಟ್ಟಿರೋದು ನರಹರಿಗೆ ಇಷ್ಟವಾಗಲಿಲ್ಲ. ಆ ಮರಕ್ಕೆ ವಯಸ್ಸಾಗಿದೆ, ಹುಳಬಿದ್ದಿದೆ ಅಂತ ಏನೇನೋ ನೆಪ ಹೇಳಿ ಅದನ್ನು ಕಡಿಸೋದಕ್ಕೆ ಬಿಬಿಎಂಪಿ ಗೆ ಹಾಕಿದ ಅರ್ಜಿ ಮರದ ಆರೋಗ್ಯದ ಪರೀಕ್ಷೆಯ ನಂತರ ರಿಜೆಕ್ಟ್ ಆಯಿತು. ಇದ್ಯಾವುದೂ ಅವರ ಮರ ಕಡಿಸುವ ಯೋಚನೆಯನ್ನು ನಿಲ್ಲಿಸಲಿಲ್ಲ. ಒಂದು ದಿನ ತಾನೂ ಬೇಡದ ಮರವಾಗುತ್ತೇನೆ ಅಂತ ಅಂದು ಅವರಿಗನ್ನಿಸಲಿಲ್ಲ.

‘ಟಾರ್ಡನ್ ಕೆಮಿಕಲ್’ ಇದನ್ನ ದಿನಾ ಮರಕ್ಕೆ ಇಂಜೆಕ್ಟ್ ಮಾಡಿದ್ರೆ ಮರ ಹದಿನೈದು ದಿನದಲ್ಲಿ ಸಾಯುತ್ತೆ ಯಾರಿಗೂ ಗೊತ್ತಾಗಲ್ಲ ಲ್ಯಾಬ್ ಟೆಸ್ಟ್ ಆಗಿದೆ. ಕೆಮಿಸ್ಟ್ರಿ ಲೆಕ್ಚರರ್ ಆಗಿದ್ದ ಸ್ನೇಹಿತ ಬ್ರಹ್ಮಾಸ್ತ್ರವೊಂದನ್ನೇ ಕೊಟ್ಟಿದ್ದ. ಮರವನ್ನು ಕೊಲ್ಲುವ ಇಂಜೆಕ್ಷನ್! ಬಾಂಬ್ ಹಾಕಲು ಹೊರಟ ಟೆರರಿಸ್ಟ್ ಗಳಂತೆ ತಮ್ಮ ಸೀಕ್ರೆಟ್ ಕಾರ್ಯಾಚರಣೆಗೆ ಸುಸಜ್ಜಿತವಾಗಿ ತಯಾರಿ ಮಾಡಿಕೊಂಡರು. ಮರದ ಬುಡಕ್ಕೆ ಸೈಕಲ್ ಪಂಪಿನಷ್ಟು ದೊಡ್ಡ ಸಿರೆಂಜ್ ನಲ್ಲಿ ವಿಷ ತುಂಬಿ ಯಾರಿಗೂ ತಿಳಿಯದಂತೆ ನರಹರಿ ಮರದ ಬುಡಕ್ಕೆ ದಿನಾ ಬೆಳಗ್ಗೆ ನಾಲ್ಕು ಗಂಟೆಗೆ ಇಂಜೆಕ್ಷನ್ ಕೊಡೋಕೆ ಶುರು ಮಾಡಿದ್ದರು. ಮರಕ್ಕೆ ಎಷ್ಟು ಹಿಂಸೆಯಾಗಿತೋ, ಅದು ಹೇಳಿಕೊಳ್ಳಲಿಲ್ಲ. ಪ್ರತಿದಿನ ಮರದ ಅವನತಿಗಾಗಿ ಕಾಯುತ್ತಿದ್ದರು.

ಸಿಕ್ಕಿ ಬೀಳೋತನಕ ಕಳ್ಳ ಅಲ್ಲ ಅನ್ನೋ ಹಾಗೆ ಗಣೇಶ ಚತುರ್ಥಿಯ ದಿನ ಅವರ ರಸ್ತೆಯ ಕೊನೇ ಮನೆಯ ಮಂಗಳಮ್ಮ ಬೆಳಗ್ಗಿನ ಜಾವ ಪೂಜೆಗೆ ಗರಿಕೆ ಕೀಳೋಕೆ ಪಕ್ಕದ ಮನೆಯ ಕಾಂಪೌಂಡ್ ಗೆ ನುಗ್ಗಿದಾಗ ಕಳ್ಳಿಗೆ, ಕೊಲೆಗಾರ ಕಂಡಿದ್ದ. ಪುಲ್ ಓವರ್ ಹಾಕಿದ್ದ ಇವರನ್ನು ಕಂಡುಹಿಡಿಯೋಕಾಗದೇ ಮಂಗಳಮ್ಮ ಕೂಗೋಕೆ ಹೋದಾಗ ನರಹರಿ ಅವಳ ಮೇಲೆ ಕಲ್ಲು ತೂರಿದ್ದ. ಬೀದಿಯ ಜನ ಕಳ್ಳ ಬಂದಿದ್ದ ಅಂದುಕೊಂಡರು, ಅಜ್ಜಿ ಹಾಸಿಗೆ ಹಿಡಿದಳು, ಕೆಲವೇ ದಿನದಲ್ಲಿ ಮರ ಕೃಶವಾಗಿ ನೆಲಕ್ಕುರುಳಿತು.

‘ಇನ್ನು ಮುಂದೆ ನಿಮ್ಗೆ ಮಾತ್ರೆ ಬೇಡ ಅಂತ ಇಂಜೆಕ್ಷನ್ ಕೊಟ್ಟಿದ್ದಾರೆ, ನಾನೇ ಕೊಡ್ತೀನಿ ಬೇಗ ಹುಶಾರಾಗ್ತೀರಿ’. ಭುವನ್ ವಿಶ್ವಾಸದಿಂದ ಹೇಳಿದ. ‘ಒಂದು ಸಲ ಮಾಡಿದ ಉಪಾಯ ಫಲಿಸಲಿಲ್ಲ ಅಂತ ಇಂಜೆಕ್ಷನ್ ಕೊಡೋಕೆ ಬಂದಿದ್ದಾನೆ’ ಮಗ ತನ್ನ ಪ್ರಾಣವನ್ನು ಹೊತ್ತು ಒಯ್ಯೋಕೆ ಬಂದಿರೋ ಜವರಾಯನ ಹಾಗೆ ಕಂಡ. ಈ ಇಂಜೆಕ್ಶನ್ ಅವನ ಕೈಯಲ್ಲಿದ್ದ ಪಾಶವಾಗಿತ್ತು. ನರಹರಿ ತಾನು ಇಂಜೆಕ್ಷನ್ ತೆಗೆದುಕೊಳ್ಳೋದಿಲ್ಲ ಅಂತ ಹಟ ಮಾಡಿದರು. ‘ಇನ್ನೊಂದ್ ಸಲ ಹೆಚ್ಚುಕಮ್ಮಿ ಆದ್ರೆ ನನ್ ಜವಾಬ್ದಾರಿಯಲ್ಲ’ ಭುವನ್ ರೇಗಿ ಹೊರಟುಹೋದ.

‘ಭುವನ್ನಣ್ಣ, ಸರ್ ಜೋರಾಗಿ ಉಸಿರಾಡುತ್ತಿದ್ದಾರೆ. ಏನೋ ಆಗ್ತಿದೆ ನೋಡಿ’ ಸತೀಶ ಭಯದಿಂದ ಕೂಗಿದ. ಧಾವಿಸಿ ಬಂದ ಭುವನ್ ಅಪ್ಪ ನೀರಿನಿಂದ ಹೊರತೆಗೆದ ಮೀನಿನ ಹಾಗೆ ಉಸಿರಾಡೋದಕ್ಕೆ ಕಷ್ಟ ಪಡುತ್ತಿದ್ದನ್ನ ನೋಡಿ ಹೆದರಿದ. ತನಗೆ ಗೊತ್ತಿದ್ದ ಪ್ರಥಮ ಚಿಕಿತ್ಸೆ ಮಾಡೋಷ್ಟ್ರಲ್ಲಿ ಡಾಕ್ಟರ್ ಬಂದರು. ಹದಿನೈದು ನಿಮಿಷಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಸಿಕ್ಕಿತು. ‘ಏನೋ ಒತ್ತಡ ಮಾಡಿಕೊಂಡಿದ್ದಾರೆ, ಉಸಿರಾಟದ ತೊಂದರೆಯಾಗಿದೆ, ಆಕ್ಸಿಜನ್ ಮಾಸ್ಕ್ ಹಾಕಿದ್ದೀನಿ, ಸರಿಹೋಗುತ್ತಾರೆ’. ಡಾಕ್ಟರ್ ಧೈರ್ಯ ಹೇಳಿದರು. ಮರವನ್ನ ಕೊಂದವನ ಪ್ರಾಣ ಉಳಿಸೋದಕ್ಕೆ ಕೃತಕ ಆಮ್ಲಜನಕವೇ ಬೇಕಾಯಿತು.

ಆ ರಾತ್ರಿ ನರಹರಿಯವರು ನರಳುತ್ತಾ ಮಲಗಿದ್ದರು. ಮಧ್ಯರಾತ್ರಿ ಅಷ್ಟೊತ್ತಿಗೆ ಯಾರೋ ಕತ್ತು ಹಿಸುಕಿದಂತಾಯಿತು, ಉಸಿರಾಡೋಕೆ ಆಗುತ್ತಿಲ್ಲ, ಕಿರುಚೋಕೆ ಪ್ರಯತ್ನಪಟ್ಟರೆ ಧ್ವನಿ ಆಚೆ ಬರುತ್ತಿಲ್ಲ, ಭಯದಿಂದ ಕಣ್ಣು ಬಿಟ್ಟು ನೋಡ್ತಾರೆ, ಮನೆಯಿಂದಾಚೆ ತಾನು ಕಡಿದಿದ್ದ ಮರಕ್ಕೆ ಜೀವ ಬಂದು ಅದರ ರೆಂಬೆಗಳು ರಾಕ್ಷಸನ ಕೈಗಳಂತೆ ದೊಡ್ಡದಾಗಿ ಬೆಳೆದು ಕಿಟಿಕಿಯ ಒಳ ಹೊಕ್ಕು ಕತ್ತಿನ ಸುತ್ತ ಬಿಗಿಯಾಗಿ ಹಿಡಿದುಕೊಂಡಿದೆ. ನರಹರಿ ಬಿಡಿಸಿಕೊಳ್ಳೋದಕ್ಕೆ ಪ್ರಯತ್ನಪಟ್ಟಷ್ಟೂ ಮರದ ಕೈಗಳು ಹಿಡಿತವನ್ನು ಬಿಗಿಗೊಳಿಸುತ್ತಿದೆ. ‘ನನ್ನನ್ನ ಸಾಯಿಸಿದ್ದೀಯಾ? ನೀನು ಇವತ್ತು ಬದುಕಿರೋದು ನನ್ನ ಸಹಾಯದಿಂದಲೇ’ ಆ ಕರ್ಕಶ ಧ್ವನಿ ಅಟ್ಟಹಾಸದಿಂದ ನಕ್ಕಂತೆ ಕೇಳಿಸಿತು. ಈ ಮರವು

ತಾನು ದಿನವೂ ಕೊಡುತ್ತಿದ್ದ ಇನ್ಜೆಕ್ಶನ್ ನ ನೋವು ಎಷ್ಟು ತೀವ್ರವಾದದ್ದು ಅಂತ ತೋರಿಸಲು ಜೀವಪಡೆದು ಬಂದಂತಿದೆ, ನಾನೀಗಾ ಸತ್ತೇಹೋಗುತ್ತೇನಾ? ಭಯದಿಂದ ಜೋರಾಗಿ ಉಸಿರಾಡಿದರು. ತಕ್ಷಣ ಜೋರಾಗಿ ಗಾಳಿ ಬೀಸಿ ಮರ ಮನಸ್ಸು ಬದಲಾಯಿಸಿ ವಾಪಸ್ಸು ಹೋದಂತಾಯಿತು. ಆ ರಾತ್ರಿಯಿಂದ ನರಹರಿಯವರಿಗೆ ರಾತ್ರಿ ನಿದ್ರೆ ಹತ್ತಲಿಲ್ಲ, ನಿದ್ರೆ ಬಂದಾಗಲೆಲ್ಲಾ ಮರವು ಕತ್ತು ಹಿಸುಕಲು ಒರಟಾದ ರೆಂಬೆಗಳ ಕೈಯುಳ್ಳ ರಾಕ್ಷಸನ ರೂಪ ತಾಳಿ ಬರುತ್ತಿತ್ತು.

‘ರಾಯರೇ ನೀವು ಕನ್ಸು ಕಾಣ್ತಿದ್ದೀರ! ಮರಕ್ಕೆ ಕೈಬಂದು ನಗುತ್ತೆ, ನಿಮ್ಮ ಕತ್ತು ಹಿಸುಕುತ್ತೆ ಅಂದ್ರೆ ಯಾರಾದರೂ ನಂಬುತ್ತಾರಾ?’ ನಗುತ್ತಾ ಡಾಕ್ಟರ್ ಹೇಳಿದರು. ‘ನೀವು ಬೇರೆ ಯಾವ ಯೋಚನೆ ಮಾಡದೇ ಒಳ್ಳೇ ಪುಸ್ತಕ ಅಥವ ಸಂಗೀತ ಕೇಳಿ ಮಲಗಿ ಆಗ ಸರಿಹೋಗುತ್ತದೆ. ನಮ್ಮ ಮನಸ್ಥಿತಿಯಂತೇ ನಮ್ಮ ಕನಸುಗಳೂ ಕೂಡ’ ತಿಳಿ ಹೇಳಿದರು. ಭುವನ್ ಅಪ್ಪ ಬೇಗ ಹುಷಾರಾಗಲಿ ಅಂತ  ಬಲವಂತವಾಗಿ ನರಹರಿಯವರಿಗೆ ಔಷಧ, ಮಾತ್ರೆ ಕೊಡೋದು ಶುರುಮಾಡಿದ. ನನ್ನ ಮಗ ನನಗೆ ಇಂಜೆಕ್ಶನ್ ಕೊಟ್ಟು ಸಾಯಿಸುತ್ತಿದ್ದಾನೆ ನನ್ನ ಕಾಪಾಡಿ ಅಂತ ಬಂದವರಿಗೆಲ್ಲಾ ಹೇಳೋಕೆ ಶುರು ಮಾಡಿದರು. ಅವರು ಹೇಳೋ ಕನಸು, ಅವರ ಹಟ ಎಲ್ಲವೂ ಅವ್ರನ್ನ ಮಾನಸಿಕ ರೋಗಿಯಂತಾಗಿಸಿತ್ತು.

‘ಸರ್, ಡಾಕ್ಟರ್ ನಂಗೇ ಚುಚ್ ಮದ್ದು ಕೊಡೋಕ್ ಹೇಳಿದ್ದಾರೆ. ಜಾಸ್ತಿ ನೋವ್ ಮಾಡಲ್ಲ, ತೋಳು ಕೊಡಿ’. ಸತೀಶ ಸಿರೆಂಜ್ ಗೆ ಔಷಧಿ ತುಂಬುತ್ತಾ ಹೇಳಿದ. ‘ಆಗ್ಲಿ ನಂಗೆ ನೋವಾಗ್ಬೇಕು.. ಮೊದಲನೇ ಇಂಜೆಕ್ಶನ್ ಕೊಟ್ಟಾಗ ನೋವಾಗುತ್ತೆ.. ದಿನಾ ಕೊಟ್ಟ್ರೆ ಅಭ್ಯಾಸ ಆಗುತ್ತೆ’  ಯಾಕೋ ವಿಚಿತ್ರವಾಗಿ ಮಾತನಾಡಿದರು. ಅಲ್ಲಿಂದ ಅವರು ಇಂಜೆಕ್ಶನ್ ತೊಗೊಳ್ಳೋಕೆ ಹಟ ಮಾಡ್ಲಿಲ್ಲ ಬದಲಿಗೆ ಗೊಣಕೋಕೆ ಶುರು ಮಾಡಿದ್ರು. ‘ನಾನೂ ದಿನಾ ಇಂಜೆಕ್ಶನ್ ಕೊಡ್ತಿದ್ದೆ, ಮೊದಲನೇ ವಾರಕ್ಕೆ ಬುಡ ಒಣಗಿ ಹೋಗುತ್ತೆ, ಎರಡನೇ ವಾರಕ್ಕೆ ಎಲೆ ಉದುರೋಕೆ ಶುರು ಮಾಡುತ್ತೆ, ಮೂರನೇ  ವಾರಕ್ಕೆ ಪೂರ್ತಿ ಬೋಡಾಗಿ ಬಿದ್ದುಹೋಗುತ್ತೆ’ ಅವರ ಮಾತಿನಲ್ಲಿ ನೋವಿರಲಿಲ್ಲ, ಪಶ್ಚಾತ್ತಾಪವಿತ್ತು.

ಭುವನ್ ಅಪ್ಪನ ಮನೋವ್ಯಾಕುಲಕ್ಕೆ ಕಾರಣ ಹುಡುಕೋಕೆ ಶುರು ಮಾಡಿದ. ‘ಸಾರ್ ಇತ್ತೀಚೆಗೆ ಆ ಹೊಂಗೆ ಮರಾನಾ ಹೆಚ್ಚಾಗಿ ನೋಡ್ತಿದ್ದರು, ಅದರ ಮೇಲಿರೋ ಪಕ್ಷಿಗಳ ಬಗ್ಗೆ ನಂಗೆ ಕತೆ ಹೇಳ್ತಿದ್ರು, ಮೊನ್ನೆ ನಮ್ ರೋಡಲ್ಲಿ ಟಾರ್ ಹಾಕ್ತಿದ್ ಶಬ್ದಕ್ಕೆ ಪಾಪ ಅವು ಹಾರಿಹೋದವು. ಆಗ್ಲಿಂದ ಅವರು ತುಂಬಾ ಮೌನವಾಗೋದ್ರು’ ಸತೀಶ ವಿಷಾದದಲ್ಲಿ ಹೇಳಿದ. ಅಪ್ಪನ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದು ತಿಳಿದು ಮಕ್ಕಳು ಬಂಧುಗಳು ಭೇಟಿಯಾಗಲು ಬಂದಾಗ ‘ನಿಮ್ಮನ್ನು ನೋಯಿಸ್ಬಿಟ್ಟಿದ್ದೇನೆ, ಯಾವತ್ತೂ ನಿಮ್ಮ ಕಷ್ಟಕ್ಕೆ ಆಗ್ಲಿಲ್ಲ ಕ್ಷಮಿಸಿ’ ಕೈಹಿಡಿದು ಕಣ್ತುಂಬಿಕೊಂಡರು. ಅವರೇ ಹೇಳ್ತಿದ್ದಂತೆ ಹದಿನೈದು ದಿನಗಳಲ್ಲಿ ನರಹರಿಯವರ ಪ್ರಾಣಪಕ್ಷಿ ಹಾರಿಹೋಯಿತು.

ಡಾಕ್ಟರ್ ಪರೀಕ್ಷೆ ಮಾಡಿ ನ್ಯಾಚುರಲ್ ಡೆತ್ ಅಂದ್ರು. ಅಂತ್ಯಕ್ರಿಯೆ ಮುಗಿದ ಬಳಿಕ ಕುಟುಂಬವನ್ನು ಭೇಟಿ ಮಾಡಿದ ಲಾಯರ್, ಬ್ಯಾಂಕ್ ನಲ್ಲಿದ್ದ ಅಷ್ಟೂ ಹಣ ಪರಿಸರ ಸಂರಕ್ಷಣೆಯ ಕೆಲ್ಸಕ್ಕೆ ಹೆಸರಾಗಿರೋ ವನಶಕ್ತಿ ಸಂಸ್ಥೆಗೆ ಸಂದಾಯವಾಗುತ್ತೆ ಅಂತ ನರಹರಿಯವರು ವಿಲ್ ಬರೆಸಿದ್ದಾರೆ ಎಂದು ತಿಳಿಸಿದಾಗ ಹಾರ ಹಾಕಿದ್ದ ನರಹರಿಯವರ ಚಿತ್ರ ನೆಮ್ಮದಿಯಿಂದ ನಗುತ್ತಿತ್ತು.

‍ಲೇಖಕರು Avadhi

June 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

33 ಪ್ರತಿಕ್ರಿಯೆಗಳು

 1. ಆಶ್ರಿತ

  ನಮಸ್ತೆ ರಂಜನಿ ಅವರೇ. ಇವತ್ತಿನ ಕಥೆ ತುಂಬಾ ಚನ್ನಾಗಿದೆ. ಪರಿಸರದ ಮೇಲೆ ಹೇಳಿದ ಕತೆ ಕೇಳಿ ಬಹಳ ಖುಷಿಯಾಯಿತು. ಗೋ ಗ್ರೀನ್ ಅಂತ ಹೇಳಿ ಆಗಾಗ ಗಿಡ ನೆಡುವ ಕೆಲಸ ಮಾಡಬೇಕು. ಮುಂದೆ ಒಂದಿನ ಆ ಗಿಡಗಳೇ ನಮ್ಮನು ಕಾಪಾಡುವುದು. ಮರ ಕಡೆದರೆ ಅದರಿಂದ ಆಗುವ ನಷ್ಟ ತುಂಬಾ ದೊಡ್ಡದು. ಅದಕ್ಕೆ ಉದಾಹರಣೆ ಈಗಾಗಲೇ ಅನುಭವಿಸ್ತಾ ಇದ್ಧಿವಿ. ಆಮ್ಲಜನಕ ಸಿಗದೆ. ಒಳ್ಳೆಯ ಸಂದೇಶ ಕೊಟ್ಟಿದಿರ. ಬಹಳ ಖುಷಿಯಾಯಿತ.

  ಪ್ರತಿಕ್ರಿಯೆ
  • Pavan Joshi

   ನೀವು ಬರೆಯುವ ಲೇಖನಕ್ಕಾಗಿ ಪ್ರತಿ ಶುಕ್ರವಾರ ಕಾಯುತ್ತೇನೆ. ಎಷ್ಟೋಂದು ಸರಳ ಮತ್ತು ಅರ್ಥಪೂರ್ಣವಾದ ಬರವಣಿಗೆ ನಿಮ್ಮದು.
   (not but least) ಅಂತಾರಲ್ಲಾ ಹಾಗೇ ನನ್ನ ಕೊನೆಯಾಸೆ ನಿಮ್ಮನ್ನು ಬೇಟಿಯಾಗಬೇಕು

   ಪ್ರತಿಕ್ರಿಯೆ
   • Vijay kamble

    . Hi Ranjani ma’m khate tumba chennagide manushya tanna swarthakka gi prakriti ya atya amalya sasya sampattu halu Maadi gidmara kadidu wayu maliany uantu Maadi shudda
    gaali gagi kratuk usiratad more hogiddane

    ಪ್ರತಿಕ್ರಿಯೆ
   • Nisarga

    ನಮಸ್ತೆ ನನ್ನ ಹೆಸರು ನಿಸರ್ಗ ನಾನು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ .ನಿಮ್ಮ ಈ ಕಥೆ ಬಹಳ ಚನ್ನಾಗಿದೆ . ನೀವು ಬಳಸಿರೋ ಪದ್ಯ ನನಗೆ 9ನೇ ತರಗತಿಯಲ್ಲಿ {ಬಿದಿರು} ಎಂಬ ಪದ್ಯ ಕನ್ನಡದಲ್ಲಿ ಇತ್ತು ಶಿಶುನಾಳ ಶರೀಫರ ಸೊಗಸಾಗಿ ವರ್ಣಿಸಿದ್ದಾರೆ.
    ನನಗೆ ಪದ್ಯ ಅರ್ಥ ಆಗಿತು ಆದರೆ ಎಷ್ಟು ಸರಿ ಅರ್ಥಾಗಿರಲಿಲ್ಲ ಅದುಸಹ ಹುದಾಹರಣೆ ಯೊಂದಗೆ ಇದೆ ನಿಮ್ಮ ಮುಂದಿನ ಕಥೆ ಗೆ ಕಾಯುತಿದೇನೆ
    I am wishing you good luck for your next

    ಪ್ರತಿಕ್ರಿಯೆ
  • Vijay kamble

   Hi Ranjani me’m kathe tumba channagide manushya tanna swarthkkagi prakrutiy atya amulya
   Sasya sampattu gidmara betta gudda galannu kadidu wayu maliyanna Maadi ig Badu kagi shudda gaali
   Saluwagi aksizen wentileter avlambitraag bekagide,

   ಪ್ರತಿಕ್ರಿಯೆ
  • ಆನಂದ ಪಾಟೀಲ

   ಕಥೆ ಸುಂದರವಾಗಿ ಬರುತ್ತಿವೆ.

   ಪ್ರತಿಕ್ರಿಯೆ
  • Nisarga

   ನಮಸ್ತೆ ನನ್ನ ಹೆಸರು ನಿಸರ್ಗ ನಾನು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ .ನಿಮ್ಮ ಈ ಕಥೆ ಬಹಳ ಚನ್ನಾಗಿದೆ . ನೀವು ಬಳಸಿರೋ ಪದ್ಯ ನನಗೆ 9ನೇ ತರಗತಿಯಲ್ಲಿ {ಬಿದಿರು} ಎಂಬ ಪದ್ಯ ಕನ್ನಡದಲ್ಲಿ ಇತ್ತು ಶಿಶುನಾಳ ಶರೀಫರ ಸೊಗಸಾಗಿ ವರ್ಣಿಸಿದ್ದಾರೆ.
   ನನಗೆ ಪದ್ಯ ಅರ್ಥ ಆಗಿತು ಆದರೆ ಎಷ್ಟು ಸರಿ ಅರ್ಥಾಗಿರಲಿಲ್ಲ ಅದುಸಹ ಹುದಾಹರಣೆ ಯೊಂದಗೆ ಇದೆ ನಿಮ್ಮ ಮುಂದಿನ ಕಥೆ ಗೆ ಕಾಯುತಿದೇನೆ
   I am wishing you good luck for your next

   ಪ್ರತಿಕ್ರಿಯೆ
  • Chithra.D.M.Yadav

   WowSuch an amazing story ❤
   Keep going Ranjini Akka
   Nammelara preethi, vishwasa endendigu nimma melirutthade

   ಪ್ರತಿಕ್ರಿಯೆ
  • ಲಕ್ಷ್ಮಿ ಯದುರಾಜ್

   ನಮಸ್ತೆ ರಂಜನಿ ಅವರೇ ಕಥೆ ತುಂಬ ಚೆನ್ನಾಗಿದೆ ,ಕಥಾ ನಿರೂಪಣಾ ಶೈಲಿ ಕಥಾವಸ್ತು ,ಪಾತ್ರಗಳ ಸಂಭಾಷಣೆ ,ಎಲ್ಲವೂ ಚೆನ್ನಾಗಿ ಮೂಡಿಬಂದಿದೆ .ಮರಗಳಿಗೂ ಭಾವನೆಗಳಿವೆ ,ನೋವು ಮತ್ತು ನಲಿವುಗಳು ನಡುವೆ ಬದುಕುತ್ತವೆ ಎಂಬುದನ್ನು ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ .ಮನುಷ್ಯ ಜೀವನದಲ್ಲಿ ಏನನ್ನೂ ಸಂಪಾದನೆ ಮಾಡಬೇಕು ಎಂಬುದನ್ನು ಈ ಚಿಕ್ಕ ಕಥೆಯಲ್ಲಿ ಚೊಕ್ಕದಾಗಿ ತಿಳಿಸಿದ್ದೀರಿ .ನಿಮ್ಮ ಮುಂದಿನ ಕಥೆಗೆ ಶುಭವಾಗಲಿ …

   ಪ್ರತಿಕ್ರಿಯೆ
   • Sachidananda K N

    Ranjini mam the story narration was superb the way you described about tree and Narahari feelings really good mam keep good moving

    ಪ್ರತಿಕ್ರಿಯೆ
    • Manjula

     ಮೇಡಂ ಕತೆ ತುಂಬಾ ಚೆನ್ನಾಗಿದೆ . ನಂಗೆ ತುಂಬಾ ಇಷ್ಟ ಆಯ್ತು

     ಪ್ರತಿಕ್ರಿಯೆ
  • Meenakshi R

   ರಂಜನಿ ಅವರೇ ಮೊದಲಿಗೆ ನೀವು ಕಥೆ ಬರೀತಿರಂತ ಗೊತ್ತಿರಲಿಲ್ಲ . ಕುತೂಹಲಕ್ಕೆ ಓದಿದೆ ಸಲೀ ಸಾಗಿ ಓದಿಸಿಕೊಂಡು ಹೋಯ್ತು ತುಂಬಾ ಇಷ್ಟ ಆಯ್ತು . ಮರದ ಭಾವ ಬವಣೆಗಳನ್ನ ಅರ್ಥ ಮಾಡಿಕೊಂಡ ರೀತಿ ತುಂಬಾನೇ great ಕಣ್ರೀ. ಅದರಲ್ಲೂ ಕತೆಯ ಕೊನೆ ಇಡೀ ಪರಿಸರಕ್ಕೆ ಸಂದ ನ್ಯಾಯ

   ಪ್ರತಿಕ್ರಿಯೆ
  • Rsg

   Hi mam. Really its beautifull story and good message for all us. ಮನುಷ್ಯ ತನ್ನ ತಪ್ಪುಗಳ ಬಗ್ಗೆ ತನ್ನ ಕೊನೆಯ ಕ್ಷಣದಲ್ಲಿ ವಿಚಾರ ಮಾಡುತ್ತಾನೆ ಅನ್ನೋದು ನಿಜವಾದ ಮಾತು. ಎಲ್ಲಿಯವರೆಗೆ ಕಷ್ಟಗಳು ಅವನ ಜೀವನದಲ್ಲಿ ಬರಲ್ಲವೊ ಅಲ್ಲಿಯವರೆಗೂ ಬೇರೆ ಅವರ ಕಷ್ಟಗಳ ನೋವಿನ ಅನುಭವ ಆಗುವದಿಲ್ಲ…. ನಿಮ್ಮ ಇವತ್ತಿನ ಕಥೆ ಇತ್ತೀಚಿನ ಪರಿಸ್ಥಿತಿಗೆ ಸರಿಯಾದ ಉದಾಹರಣೆ ಆಗಿದೆ,ಒಳ್ಳೆ message ಜನರಿಗೆ ಧನ್ಯವಾದಗಳು.

   ಪ್ರತಿಕ್ರಿಯೆ
   • Vijay kamble

    ನಮಸ್ಕಾರ ರಂಜನಿ ಮೇಡಂ ಈ ವಾರದ
    ಕಥೆ ಚನ್ನಾಗಿದೆ ಮನುಷ್ಯ ಪೃಕೃತಿಯ ಕೂಡುಗೆ ಅತಅಮೂಲ್ಯವಾದ ಗಿಡ ಮರ ಬೆಟ್ಟಗಳ ಕಡಿದು ವಾಯು ಮಾಲಿನ್ಯ ಮಾಡಿ
    ಈಗ ಪರಿಸರ ಅಸಮತೂಲನಕೆ ಕಾರಣವಾಗಿ
    ಜೀವ ರಕ್ಷಕ ಶುದ್ಧಗಾಳಿಗಾಗಿ ಮನುಷ್ಯಕೃತಕ ಊಸಿರಾಟ ಆಕಸಿಜನ ವೆಂಟಿಲೆಟರ ಅವಲಂಬಿತಾರಾಗುವ ಕಾಲ ಬಂದಿದೆ

    ಪ್ರತಿಕ್ರಿಯೆ
 2. ನಂದ

  ನಿಮ್ಮ ಕಲ್ಪನೆ ತುಂಬಾ ಚೆನ್ನಾಗಿ ಇದೆ.ಅಲ್ಲ ಅಲ್ಲ ಈ ಸಂದರ್ಭ ಕ್ಕೆ ಸರಿ ಆಗಿ ಇದೆ.ಇದಕ್ಕೆಲ್ಲ ನಾವೇ ಹೊಣೆಗಾರರು.ನರಹರಿ ತಂದೆಗೆ ಪಾಪ ಪ್ರಜ್ಜ್ಞೆ ಕಾಡತ ಇದೆ. ಮಾಡಿದ್ದು ಉಣ್ಣ ಮಹಾ ರಾಯ ,ಗಾದೆ ಇದಿಯೆಲ್ಲ ಹಾಗೆ ಆಯ್ತು.ಮರಗಳು ಕಡಿದು ಅಕ್ಷಿಜನ್ ದುಡ್ಡು ಕೊಟ್ಟು ಕೊಳವ ಪರಿಸ್ಥಿಗೆ ಬಂದಿ ದೇವೇ ಅಲ್ವಾ ರಜಿನಿವರೆ.ನಿಮ್ಮ ಬರೆವಣಿಗೆ ಪದಪುಂಜ ತುಂಬಾ ಚೆನ್ನಾಗಿ ಇದೆ .ತುಂಬಾ ದನ್ಯವಾದಗಳು.

  ಪ್ರತಿಕ್ರಿಯೆ
  • ಶಿಲ್ಪ ಡಿ ಆರ್

   ತುಂಬಾನೇ ಚೆನ್ನಾಗಿದೆ ಕಥೆ … ನಿಮ್ಮ ಕಥೆ ಓದುತ್ತಾ ಇದ್ರೆ ನಮ್ ಜೀವನದಲ್ಲಿ ಆಗಿರೋ ಘಟನೆಗಳು ನೆನಪಾಗುತ್ತೆ.. ನಮ್ಮ ಅಪ್ಪ ಯಾವಾಗಲೂ ಬೇರೆಯವರ ಬಗ್ಗೆನೇ ಯೋಚ್ನೆ ಮಾಡೋರು ತಮ್ಮ ಮಕ್ಕಳಿಗಿಂತ ಅವರ ತಂಗಿಯರು,ನೆಂಟರು, ಅನ್ನೋರು ಆದರೆ ಈಗ ನನ್ನ ಅಪ್ಪ ಇಲ್ಲ ಅವರ ಬಗ್ಗೆ ಯೋಚನೆ ಮಾಡೋರು ಯಾರು ಇಲ್ಲ… ನಾವು ಸತ್ತಿದಿವ ಬದುಕಿದ್ದಿವ ಅಂಥ ಕೇಳೋರು ಇಲ್ಲ.. ಎಲ್ಲರೂ ಅಷ್ಟೇ ಅಲ್ವಾ … ನೀವು ಇದೆ ಥರ ಕಥೆ ಬರಿತಾ ಇರಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ.. ಶುಭವಾಗಲಿ…

   ಪ್ರತಿಕ್ರಿಯೆ
  • Trupti hangargi

   ನನಗೆ ನಿಮ್ಮಕಥೆ ತುಂಬಾ ಇಷ್ಟ ಆಗೇದೆ ಮಿಸ್! ರಂಜನಿ ರಾಘವನ್. ನಾನು ಮೊದಲ ಬಾರಿಗೆ ಕಥೆ ನ ಓದೋಕೆ ಶುರು ಮಾಡಿದಿನಿ ಅಂದ್ರೆ ಅಡಿ ನಿಮ್ ಕಥೆ ಮಾತ್ರ, ನಿಮ್ಮ ಧಾರಾವಾಹಿ ನೋಡ್ತಾ ನೋಡ್ತಾ ನಂಗೆ ನೀವು ತುಂಬಾ ಇಷ್ಟ ಆಗಿದಿರಿ, ಹಾಗೆ ಅದೇ ಕಾರಣ ದಿಂದ ಆಗಿ ನಿಮ್ ಕಥೆ ಓದಲು ಆಸಕ್ತಿ ಬಂದಂತಾಗೆದೆ! ಅಡಕ್ಕಷ್ಟೇ ತುಂಬಾ ಧನ್ಯವಾದಗಳು! ಮತ್ತೆ ನಾನು ನಿಮ್ಮಿಂದ ಆಗಿ ತುಂಬಾ ಚೆನ್ನಾಗಿ ಕನ್ನಡ ಮಾತಾಡುವುದನ್ನು ಕಲ್ಟಿದೆನಿ ತುಂಬಾ ಧನ್ಯವಾದಗಳು. ….ಮತ್ತೆ ಇನ್ನೊಂದ್ ವಿಷ್ಯ..ನಾನು ಯಾರಿಗೂ ಎಷ್ಟು ಉದ್ದ ಕನ್ನಡ ದಲ್ಲಿ ಟೀಕೆ ಮಾಡಿರಲಿಲ್ಲ …ಧನ್ಯವಾದಗಳು

   ಪ್ರತಿಕ್ರಿಯೆ
  • ಹರ್ಷಿಣಿ

   ತುಂಬಾ ಸರಳವಾಗಿ ಮನಸಲ್ಲಿ ನಾಟುವಂತಹ ಕಥೆ.

   ಪ್ರತಿಕ್ರಿಯೆ
 3. Ananya

  nimge bariyo kale bandu bitidde shukravarke kayo hage madidra ella kathiyalu msg eruthe est kushi aguthe andre en hel beku en hoglbeku anta gothagala……….yargu helde odoke kotre yaro kavi atva professional writer bardidare antane helodu niv,professional writer e bidi est vishya tilkondidra.

  ಪ್ರತಿಕ್ರಿಯೆ
 4. Pooja

  ಪರಿಸರದಿಂದ ನಾವು ಪರಿಸರಕ್ಕಾಗಿ ನಾವು ಎಂಬಂತೆ ನಿಮ್ಮ ಕತೆ ಅದ್ಬುತವಾಗಿತ್ತು.ನಿಮ್ಮ ಭಾಷಾಶೈಲಿ ತುಂಬಾ ಚೆನ್ನಾಗಿದೆ. ನಾವು ಏನೇ‌ ಮಾಡಿದರು ಅದು ನಮಗೆ ಇಂದಿರುಗುತ್ತದೆ ಅದೂ ಒಳ್ಳೆಯದಾಗಬಹುದು ಅಥವಾ ಕೆಟ್ಟದಾಗಬಹುದು …
  ಪರಿಸರಕ್ಕೆ ನಾವು ಕೆಟ್ಟದನ್ನೆ ಮಾಡಿದರು ಅದು ಯಾವಾಗಲು ನಮಗೆಲ್ಲ ಜೀವದಾನ ಮಾಡಿತ್ತಿದೆ ..ಇನ್ನಾದರೂ ಪರಿಸರ ಸಂರಕ್ಷಿಸೋಣ

  ಪ್ರತಿಕ್ರಿಯೆ
 5. ಸಾತ್ವಿಕ್ ವಿ ನಾಯಕ್

  ಕರ್ಮ ಎನ್ನುವುದು ನಮ್ಮನ್ನು ಬಿಡುವುದಿಲ್ಲ ಎಂಬುವುದನ್ನು ಚೆನ್ನಾಗಿ ಬಿಂಬಿಸಿದ್ದಿರಾ. ನಿಮ್ಮಮೊದಲೆರಡು ಕಥೆಗಳನ್ನು ಓದಿರಲಿಲ್ಲ .ಆದರೆ ಈ ಕಥೆಯನ್ನು ಓದಿದಾಗ ನಿಮ್ಮ ಬರವಣಿಗೆಯ ಶೈಲಿ ತುಂಬಾ ಹಿಡಿಸಿತು ನಿಮ್ಮ ಕಥೆಗಳನ್ನು ಚಾಚೂ ತಪ್ಪದೆ ಓದುವ ಮನಸ್ಸಾಗಿದೆ. ನಿಮ್ಮ ಮುಂದಿನ ಕಥೆಯ ಶುಕ್ರವಾರದ ನಿರೀಕ್ಷೆಯಲ್ಲಿ …………………

  ಇಂತಿ ನಿಮ್ಮ ಬರಹದ ಅಭಿಮಾನಿ
  ಸಾತ್ವಿಕ್ ವಿ ನಾಯಕ್

  ಪ್ರತಿಕ್ರಿಯೆ
 6. ಸಾತ್ವಿಕ್ ವಿ ನಾಯಕ್

  ಕರ್ಮ ಯಾರನ್ನೂ ಬಿಡುವುದಿಲ್ಲ ಎಂಬುದನ್ನು ಚೆನ್ನಾಗಿ ಬಿಂಬಿಸಿದ್ದೀರ. ನಿಮ್ಮ ಮೊದಲ ಎರಡು ಕಥೆಗಳನ್ನು ಓದಿರಲಿಲ್ಲ. ಆದರೆ ಈ ಕಥೆಗಳನ್ನು ಓದಿದಾಗ ನಿಮ್ಮ ಬರವಣಿಗೆಯ ಶೈಲಿ ತುಂಬಾ ಹಿಡಿಸಿತು. ಈಗಂತೂ ನಿಮ್ಮ ಕಥೆಗಳನ್ನು ಚಾಚೂತಪ್ಪದೆ ಓದುವ ಮನಸ್ಸಾಗಿದೆ. ನಿಮ್ಮ ಮುಂದಿನ ಕಥೆಯ ನಿರೀಕ್ಷೆಯಲ್ಲಿ……………

  ಇಂತಿ ನಿಮ್ಮ ಬರವಣಿಗೆಯ ಅಭಿಮಾನಿ
  ಸಾತ್ವಿಕ್ ವಿ ನಾಯಕ್

  ಪ್ರತಿಕ್ರಿಯೆ
  • Usha v

   ನಿಮ್ಮ ಕಥೆಗಳನ್ನು ಓದಬೇಕುಎನ್ನುವ ಕಾರಣಕ್ಕೆ ಪ್ರತಿ ಶುಕ್ರವಾರ ಕಾದು ಕುಳಿತಿರುವೆ ಅವದಿಯಲ್ಲಿ ಚಂದಾದರಳಗಿದ್ದೇನೆ. ಇಂದು ನನ್ನ ಪ್ರಥಮ ಲಸಿಕೆಗೆ ಸಮಯ ನಿಗದಿಯಾಗಿತ್ತು ಆದಕಾರಣ ಕಥೆ ಓದುವುದು ಸಲ್ಪ ಸಮಯವಾಯಿತು.. ಲಸಿಕೆ ಬಳಿಕ ಮನೆಗೆ ಬಂದು ಕಾಫಿ ಕುಡಿಯುತ್ತ ನಿಮ್ಮ ಕಥೆ ಅನ್ನು ಓದಲು ಶುರು ಮಾಡಿದೆ. ಬಹಳ ಅಚ್ಚುಕ್ಟಾಗಿದೆ ಕಥೆ ಪ್ರತಿ ಪದವು ಚಿತ್ರವಾಗಿ ನನ್ನ ಕಣ್ಣ ಮುಂದೆ ಬಂತು ನೀವು ೨ ದಿನದ ಹಿಂದೆ ಕೇಳಿದ ಪ್ರಶ್ಗೆ ನಾನು ಸರಿ ಉತ್ತರ ಕೊಟ್ಟಿದ್ದೇನೆ . ನಿಮ್ಮ ಬರಣಿಗೆ ಹೀಗೆ ಮುಂದುವರಿಸಿ . ಪ್ರತಿ ಕಥೆಯ ನಂತರ ನನ್ನ ಕಣ್ಣು ತುಂಬುತ್ತವೆ. ನಿಮಗೆ ಶುಭವಾಗಲಿ.

   ಇಂತಿ ನಿಮ್ಮ ಪ್ರೀತಿಯ ಅಭಿಮಾನಿ
   ಉಷಾ ವೆಂಕಟರಾಮ್.

   (ಈ ಸಂದೇಶ ನಿಮಗೆ ತಲುಪಲಿ ಎಂದು ಭಾವಿಸುತ್ತೇನೆ)

   ಪ್ರತಿಕ್ರಿಯೆ
  • Shruthi

   ಕತೆ ಸರಳ ರೀತಿಯಲ್ಲಿದೆ. ಮನುಷ್ಯನ ಸ್ವಾರ್ಥಕ್ಕೆ ಬಲಿಯಾದ ಮರ ಮನುಷ್ಯನ ಅಂತ್ಯಕಾಲದಲ್ಲಿ ಪಾಪಪ್ರಜ್ಞೆಮೂಡಿಸುವ ಪ್ರಯತ್ನದಿಂದ ಮನವರಿಕೆ ಮಾಡಿಕೊಡುತ್ತದೆ. ಪರಿಸರದ ಪ್ರತಿಯೊಂದು ಗಿಡ ಮರ ಪಾಠ ಕಲಿಸುತ್ತದೆ. ಕಲಿಸುವ ಮನಸ್ಸನ್ನು ಮನುಷ್ಯ ಮಾಡಬೇಕು

   ಪ್ರತಿಕ್ರಿಯೆ
 7. Trupti hangargi

  ನನಗೆ ನಿಮ್ಮಕಥೆ ತುಂಬಾ ಇಷ್ಟ ಆಗೇದೆ ಮಿಸ್! ರಂಜನಿ ರಾಘವನ್. ನಾನು ಮೊದಲ ಬಾರಿಗೆ ಕಥೆ ನ ಓದೋಕೆ ಶುರು ಮಾಡಿದಿನಿ ಅಂದ್ರೆ ಅಡಿ ನಿಮ್ ಕಥೆ ಮಾತ್ರ, ನಿಮ್ಮ ಧಾರಾವಾಹಿ ನೋಡ್ತಾ ನೋಡ್ತಾ ನಂಗೆ ನೀವು ತುಂಬಾ ಇಷ್ಟ ಆಗಿದಿರಿ, ಹಾಗೆ ಅದೇ ಕಾರಣ ದಿಂದ ಆಗಿ ನಿಮ್ ಕಥೆ ಓದಲು ಆಸಕ್ತಿ ಬಂದಂತಾಗೆದೆ! ಅಡಕ್ಕಷ್ಟೇ ತುಂಬಾ ಧನ್ಯವಾದಗಳು! ಮತ್ತೆ ನಾನು ನಿಮ್ಮಿಂದ ಆಗಿ ತುಂಬಾ ಚೆನ್ನಾಗಿ ಕನ್ನಡ ಮಾತಾಡುವುದನ್ನು ಕಲ್ಟಿದೆನಿ ತುಂಬಾ ಧನ್ಯವಾದಗಳು. ….ಮತ್ತೆ ಇನ್ನೊಂದ್ ವಿಷ್ಯ..ನಾನು ಯಾರಿಗೂ ಎಷ್ಟು ಉದ್ದ ಕನ್ನಡ ದಲ್ಲಿ ಟೀಕೆ ಮಾಡಿರಲಿಲ್ಲ …ಧನ್ಯವಾದಗಳು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: