ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಯಾರು?

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಹಿರೇಕರೆ ಎಂಬ ಸಣ್ಣ ಹಳ್ಳಿಯ ದೊಡ್ಡ ಮನೆಯ ಮುಂದೆ ಪೋಲಿಸ್ ಜೀಪ್ ಬಂದು ನಿಂತಿತು. ಊರಿಗೆ ಪೋಲಿಸ್ ಬಂದಿದ್ದಾರೆ ಅಂತ ಜನರೆಲ್ಲಾ ಸೇರಿದರು. ಸೌಕಾರ್ರು ಮನೇಲಿ ಕಳ್ಳತನ ಆಗಿದ್ಯಂತೆ. ಕಳ್ಳ ಏನೇನ್ ಹೊತ್ಕೊಂಡ್ ಹೋಗಿದ್ದಾನೋ ಗೊತ್ತಿಲ್ಲ ಅಂತ ಜನ ಮಾತಾಡ್ಕೊಂಡ್ರು. ‘ಸರ್ ಮನೇಲ್ ನೀವ್ ಯಾರೂ ಇರ್ಲಿಲ್ವಾ?’ ಒಡೆದ ಕಿಟಕಿ ಗಾಜುಗಳನ್ನು ನೋಡುತ್ತಾ ಇನ್ಸ್ಪೆಕ್ಟರ್ ಗಿರಿಧರ ಕೇಳಿದ.

ಊರಿನ ಏಕೈಕ ಕೋಆಪರೇಟಿವ್ ಬ್ಯಾಂಕ್ ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರೋ ನಾಗೇಂದ್ರ ಬಾಬು ಉರಿ ಉರಿ ಮುಖ ಮಾಡಿಕೊಂಡು ಹೇಳಿದ. ‘ನಾವ್ ಇದ್ದಿದ್ದ್ರೆ ಬಾಪ್ಪಾ, ಕೂತ್ಕೋ ಏನೇನ್ ಕಳ್ತನ ಮಾಡ್ಬೇಕು ಅಂತಿದ್ದೀಯಾ? ನಾವೇ ತಂದ್ಕೊಡ್ತೀವಿ, ಅಂದು ಕಿಟಕಿ ಗಾಜುಗಳ್ನ ಒಡೆಸಿ ಕಳಿಸ್ತಿದ್ವಾ?’ ಅವನ ಕೋಪದ ಮಾತುಗಳು ಕೆಲವರಿಗೆ ತಮಾಷೆ ಎನಿಸಿ ಹೆಗಲ ಮೇಲೆ ಹಾಕಿಕೊಂಡಿದ್ದ ಟವಲ್ ಅನ್ನು ಮೀಸೆಗೆ ಅಡ್ಡ ಇಟ್ಟುಕೊಂಡು ನಕ್ಕರು. 

ಪೋಲಿಸರು ಮನೆಯೊಳಗೆ ಹೋದನಂತರ ನಾಟಕ ಮುಗಿದ ನಂತರ ಪ್ರೇಕ್ಷಕರು ಹೊರಡುವಂತೆ ಎಲ್ಲಾ ಹೊರಟರು. ನಾಗೇಂದ್ರ ಬಾಬು ಮನೇಲಿ ಕಳ್ಳತನವಾದ ಜಾಗಗಳನ್ನು ತೋರಿಸಿದ. ತೆರೆದ ಬಾಗಿಲಿನ ಬೀರುವಿನ ಲಾಕರ್ ಒಡೆದು ಒಳಗೆ ಖಾಲಿಯಾಗಿತ್ತು. ‘ಸರ್ ಎರಡು ಬೆಳ್ಳಿ ತಟ್ಟೆ, ಚಿನ್ನದ ಬಳೆ, ಒಂದ್ ನೆಕ್ಲೇಸು ಕಳ್ಳತನ ಆಗಿದೆ ಸರ್’. ‘ನನ್ ಬೆಂಡ್ ಓಲೇನೂ ಕಾಣಿಸ್ತಿಲ್ಲ’ ನಾಗೇಂದ್ರನ ಮಾತಿಗೆ ಹೆಂಡತಿ ಧ್ವನಿಗೂಡಿಸಿದಳು. ‘ನಮ್ಮೂರ್ನಲ್ಲಿ ಕಳ್ಳತನ ಕಮ್ಮಿ ಸರ್. ಕದ್ರೂ ಸೈಕಲ್ ಟಯರ್ರು, ಆಡು ಕುರಿ ಅಂತ ಈಜಿ ಆಗಿ ಸಿಗೋದನ್ನ ಕದ್ದಿದ್ದಾರೆ. ಈತರ ಮನೆಯೊಳಗೆ ಕನ್ನಹಾಕಿ ಯಾರ್ ಮಾಡಿದ್ದಾರೆ ಅಂತ ಗೊತ್ತಾಗ್ತಿಲ್ಲ. ಬಟ್ ನಾವ್ ತನಿಖೆ ಮಾಡ್ತೀವಿ ಎಂದು ಇನ್ಸ್ಪೆಕ್ಟರ್ ಭರವಸೆ ನುಡಿದರು.

‘ಬೆಂಗಳೂರಲ್ಲಾದ್ರೆ ಬೀದೀಲಿ ಒಂದಾದ್ರೂ ಸಿಸಿಟಿವಿ ಇರುತ್ತೆ, ನಮ್ಮ ಹಳ್ಳಿಯಲ್ಲಿ ಅದೆಲ್ಲ ಇಲ್ವಲ್ಲ.. ಈಗ ಕಳ್ಳನನ್ನ ಹೇಗೆ ಹುಡುಕೋದು?’ ಎಸ್ ಐ ಪ್ರಶ್ನೆಗೆ ತಕ್ಷಣ ಉತ್ತರ ಕೊಡಲಾಗದೆ ಮಿಕ್ಕವರು ಸುಮ್ಮನೆ ಯೋಚಿಸುತ್ತಾ ನಿಂತರು. ಆ ಒಡವೆಗಳ ಫೋಟೋಗಳನ್ನು ಕಲಕ್ಟ್ ಮಾಡಿ. ಆ ಕಳ್ಳ ಕದ್ದವನು ಅದನ್ನು ಮಾರಲೇ ಬೇಕು. ಇಡೀ ಜಿಲ್ಲೇಲಿ ಎಲ್ಲಾ ಕಡೆ ಇದರ ಬಗ್ಗೆ ಮಾಹಿತಿ ಹಬ್ಬಿಸೋಣ. ಅನುಮಾನಸ್ಪದವಾಗಿ ಯಾರಾದ್ರೂ ಚಿನ್ನ ಬೆಳ್ಳಿ ಮಾರೋದಕ್ಕೆ ಬಂದ್ರೆ ನಮಗೆ ತಿಳಿಸೋಕೆ ಹೇಳಿ. ಎಸ್ ಐ ಮಾತಿಗೆ ಪೇದೆಗಳು ತಲೆಯಾಡಿಸಿದರು.

ನಾಗೇಂದ್ರನ ಮನೆಯಿಂದ ಕಳ್ಳತನವಾದ ಆಭರಣ ವಸ್ತುಗಳ ಫೋಟೋಗಳು ಬಂದವು. ಎಸ್ ಐ ಗಿರಿಧರ್ ಠಾಣೆಯಲ್ಲಿ ಹಿಂದೆ ಪೆಟ್ಟಿ ಕೇಸ್ ಇದ್ದ ವ್ಯಕ್ತಿಗಳ ಫ಼ೈಲ್ ತೆಗೆದು ಎಲ್ಲರನ್ನೂ ಹುಡುಕಿ ಬರುವಂತೆ ಸೂಚನೆ ಕೊಟ್ಟರು. ಅದರಂತೆ ಒಟ್ಟು ಏಳು ಜನರನ್ನು ಎಳೆದು ತರಲಾಯಿತು. ಅದರಲ್ಲಿ ಮೂರು ಜನ ಕಳ್ಳತನವಾದ ದಿನ ಊರಲ್ಲಿರಲಿಲ್ಲ ಅನ್ನೋದನ್ನ ತಮ್ಮ ಬಸ್ ಟಿಕೆಟ್ಟು, ಹೋಟೆಲ್ ಬಿಲ್ಲು ಇತರ ಸಾಕ್ಷಿಗಳನ್ನು ಕೊಟ್ಟು ಸಾಬೀತುಪಡಿಸಿದರು. ಒಬ್ಬನಂತೂ ಅಯ್ಯಪ್ಪ ಮಾಲೆ ಹಾಕಿ ನಾನ್ ಇಂಥ ಕೆಲಸ ಎಲ್ಲ ಬಿಟ್ಟಾಯ್ತು ಸ್ವಾಮಿ. ದೇವ್ರಾಣೆ ನಾನಲ್ಲ ಅಂತ ಗೋಗರೆದ. ಹಿಂದೆ ಕೋಳಿ ಕದ್ದ ಹೆಂಗಸು ಈಗ ತುಂಬು ಗರ್ಭಿಣಿಯಾಗಿದ್ದಳು. ಆಕೆ ಗಾಜು ಒಡೆದು ಕಳ್ಳತನ ಮಾಡಿರೋದಕ್ಕೆ ಸಾಧ್ಯವಿಲ್ಲ ಎಂದು ಕಳಿಸಿಬಿಟ್ಟರು. ಉಳಿದ ಇಬ್ಬರನ್ನು ತನಿಖೆಗೆ ಸ್ಟೇಶನ್ ನಲ್ಲೇ ಇರಿಸಿಕೊಂಡರು.

‘ಏಳನೇ ತಾರೀಖು, ಶನಿವಾರ ಬ್ಯಾಂಕ್ ಮ್ಯಾನೇಜರ್ ಮನೇಲಿ ಯಾರು ಇಲ್ದೇದ್ದನ್ನ ನೋಡಿ ನೀನು ಕಳ್ಳತನ ಮಾಡಿದ್ದೀಯಲ್ಲ. ಎಲ್ಲಿಟ್ಟಿದ್ದೀಯ? ವಾಪಸ್ ಕೊಡು.’ ಪೋಲಿಸ್ ಧಾಟಿಯಲ್ಲಿ ನರಪೇತಲನ ಹಾಗೆ ಇದ್ದವನನ್ನ ಪ್ರಶ್ನೆಮಾಡಲು ಶುರುವಾಯಿತು. ‘ಸರ್ ನಾನ್ ಆ ಮನೆಕಡೆ ಹೋಗೇ ಇಲ್ಲ ಸರ್’ ಪೋಲಿಸ್ ಅವನ ಮಾತುಗಳನ್ನು ನಂಬದೆ ಲಾಠಿಏಟು ಕೊಡೋಕೆ ಶುರುಮಾಡಿದರು. ‘ಸರ್ ಸರ್ ಬಿಟ್ಬಿಡಿ ಸರ್ ಅವತ್ತು ನಾನ್ ಮನೆ ಬಿಟ್ಟುಆಚೇನೇ ಹೋಗ್ಲಿಲ್ಲ’. ಕೀರಲು ಧ್ವನಿಯಲ್ಲಿ ಕಿರುಚಿದ. ‘ನೀನ್ ಆಚೆ ಹೋಗಿಲ್ಲ ಅಂದ್ರೆ ನಾನ್ ನಂಬಬೇಕಾ? ಹೋದ್ ಸಲ ಗೌಡ್ರು ಮನೇಲಿ ಸೈಕಲ್ ಕಳ್ತನ ಮಾಡೋಕ್ ಸಿಕ್ಕಾಕೊಂಡಾಗ್ಲೂ ಇದೇ ರಾಗ ಹಾಡಿದ್ದೆ’.

ಪೋಲಿಸ್ ನನ್ನು ನಂಬಿಸೋಕೆ ನರಪೇತಲ ಆರೋಪಿ ತನ್ನ ಮರ್ಯಾದೆಯನ್ನೇ ಪಣಕ್ಕಿಡಬೇಕಾಯಿತು. ಅವನ ಹೆಂಡತಿ ಸ್ಟೇಶನ್ ಗೆ ಬಂದವಳು ‘ಇವ್ನ್ ಅವತ್ ಎಲ್ಲು ಹೋಗಿಲ್ಲ ಬಿಡಿ ಸರ್. ಸಾರಾಯಿ ಕುಡಿತಾನೆ ಅಂತ ನಾನ್ ಮಂಚಕ್ಕೆ ಕಟ್ಟಿಹಾಕಿ ಇಡೀ ರಾತ್ರಿ ಕೂರಿಸಿದ್ದೆ. ಪಕ್ಕದ ಮನೆಯ ಶೇಷಮ್ಮಾನೂ ಆತ ಇಡೀ ರಾತ್ರಿ ಹೆಂಡತಿಯನ್ನು ಕೆಟ್ಟಕೆಟ್ಟ ಮಾತ್ನಿಂದ ಬೈತಿದ್ದ ಸರ್ ಕೇಳಿಸ್ತಿತ್ತು ಅಂತ ಹೇಳಿದಾಗ ಅವನನ್ನು ಬಿಟ್ಟುಕಳಿಸಲಾಯಿತು. ಒಳಿದದ್ದು ಒಬ್ಬನೇ ಆರೋಪಿ, ಮುದ್ದೇಶ. ‘ಮುದ್ದೇಶನ್ನ ಸ್ಟೇಶನ್ನಿಗೆ ಕರೆಸಿ ವಿಚಾರಿಸೋದು ಬೇಡ. ಅವನ ಮೇಲೆ ನಮ್ಮ ಕಣ್ಣಿದೆ ಅಂತ ಗೊತ್ತಾದ್ರೆ ಏನಾದ್ರೂ ಮಾಡಿ ತಪ್ಪಿಸಿಕೊಳ್ಳೋ ಉಪಾಯ ಮಾಡ್ತಾನೆ’ ಎಸ್ ಐ ಹೇಳಿದ.

ಮುದ್ದೇಶ ಹೆಸರಿಗೆ ಒಂದು ಬೀಡ ಅಂಗಡಿ ಇಟ್ಟುಕೊಂಡಿದ್ದ ಆದರೆ ಆದರ ಬಾಗಿಲಿಗೆ ಬೀಗ ಬಿದ್ದದ್ದೇ ಹೆಚ್ಚು. ಮನೆ ಕಡೆ ಅನುಕೂಲ ಇರೋ ಹುಡುಗಿಯನ್ನು ವರದಕ್ಷಿಣೆ ತಗೊಂಡು ಮದುವೆ ಮಾಡಿಕೊಂಡು ಲೈಫ಼್ ಅಲ್ಲಿ ಸೆಟಲ್ ಆಗ್ತೀನಿ ಅನ್ನುತ್ತಿದ್ದವನು ತನ್ನ ಬೀಗ ಹಾಕಿರೋ ಬೀಡ ಅಂಗಡಿಯೊಳಗೆ ಅಕ್ಕನ ಮಗಳ ಜೊತೆ ಇದ್ದಾಗ ಸಿಕ್ಕಿಹಾಕಿಕೊಂಡು ಅವಳನ್ನೇ ಮದುವೆಯಾಗಬೇಕಾಯಿತು. ಕೆಲಸಕ್ಕೆ ಬಾರದ ಭಾವ, ಕೆಲ್ಸ ಮಾಡಲಾಗದ ಅಕ್ಕ, ಮನೆಕೆಲಸವನ್ನೂ ತನಗೇ ಹೇಳುವ ಹೆಂಡತಿಯನ್ನು ಸಾಕುವ ಹೊಣೆ ಈಗ ಮುದ್ದೇಶನ ಮೇಲೆ ಬಿದ್ದಿತ್ತು. ಪಿಕ್ ಪಾಕೆಟ್ ಮಾಡಿ ಸಿಕ್ಕಿಹಾಕಿಕೊಂಡಿದ್ದಾಗ ತನ್ನ ಗೋಳಿನ ಕತೆಯನ್ನು ಎಸ್ ಐ ಗೆ ಹೇಳಿದ್ದ. ‘ನಾನು ಕದ್ರೂ ಅದು ಒಳ್ಳೇದಕ್ಕೆ ಸರ್, ಇನ್ನೊಬ್ಬರ ಹೊಟ್ಟೆ ತುಂಬಿಸೋಕೆ ಹೊಟ್ಟೆತುಂಬಿದೋರಿಂದ ಒಂದೆರಡು ಕಾಸು ತಗೊಂಡೆ ಅಷ್ಟೇ. ಅದ್ರಲ್ಲೇನ್ ತಪ್ಪಿದ್ದೆ ಸರ್’ ಅಂತ ಪೋಲೀಸರನ್ನೇ ಗೊಂದಲಕ್ಕೆ ಬೀಳಿಸಿದ್ದ. ಹಾಗಾಗಿ ಈ ಸಲ ಅವನನ್ನು ಸರಿಯಾದ ಸಾಕ್ಷಿ ಇಲ್ಲದೆ ಬಂಧಿಸೋದು ಬೇಡವೆಂಬ ನಿರ್ಧಾರಕ್ಕೆ ಬಂದಿದ್ದರು.

ಗ್ರಾಮದೇವತೆ ಮಾರಮ್ಮನ ಗುಡಿಯ ಪಕ್ಕದಲ್ಲೊಂದು ಆಲದಮರ. ಅದರ ಕೆಳಗೆ ಮಂಡಿ ತನಕ ಪಂಚೆಯುಟ್ಟಿದ್ದ ವೃದ್ಧರೊಂದಿಬ್ಬರು ಬೀಡಿ ಸೇದುತ್ತಾ ಕುಳಿತಿದ್ದರು. ಇನ್ನೊಂದಿಬ್ಬರು ಕಲ್ಲಾಟ ಆಡುತ್ತಿದ್ದರು. ಊರಿನಲ್ಲಿ ಕಳ್ಳವಾದರೂ, ಕೊಲೆಯಾದರೂ ಅವರ ದಿನಚರಿ ಬದಲಾಗುತ್ತಿರಲಿಲ್ಲ. ಗುಡಿಯ ಪಕ್ಕದಲ್ಲಿದ್ದದ್ದು ಊರಿಗೊಂದೇ ಬ್ಯಾಂಕು. ಆ ಬ್ಯಾಂಕಿನ ಮ್ಯಾನೇಜರ್ ನಾಗೇಂದ್ರ ಬಾಬು. ಏಳು ವರ್ಷದಿಂದ ಅಲ್ಲಿ ಕೆಲಸ ಮಾಡಿದ ಅನುಭವವಿದ್ದವನು. ಬೋರ್ಡ್ ಹಾಕಿರುವುದೊಂದನ್ನು ಬಿಟ್ಟರೆ, ಹೊರಗಿನಿಂದ ಬ್ಯಾಂಕು ನೋಡಲು ಹೆಂಚಿನ ಮನೆಯಂತೆ ಕಾಣುತ್ತಿತ್ತು.

ಜಗುಲಿ ಒಳಗೆ ಹೋದರೆ ಒಂದು ದೊಡ್ಡ ಹಾಲ್. ಅಲ್ಲಿ ನಾಲ್ಕೇ ಜನ ಕೆಲಸ ಮಾಡುತ್ತಿದ್ದರು. ಒಬ್ಬ ಕ್ಲರ್ಕು, ಒಬ್ಬ ಕ್ಯಾಶಿಯರ್, ಇನ್ನೊಬ್ಬ ಹೆಂಗಸು ಕ್ಲೀನರ್ ಕೆಲಸ ಬಿಟ್ಟರೆ ಬ್ಯಾಂಕ್ ಮ್ಯಾನೇಜರ್. ಮೂಲೆಯಲ್ಲಿದ್ದ ಮರದ ಕುರ್ಚಿಯ ಮೇಲೆ ಕೂತು ಬ್ಯಾಂಕ್ ಮ್ಯಾನೇಜರ್ ಎದುರಿಗಿದ್ದ ಹಳೇ ಮಾಡಲ್ ಕಂಪ್ಯೂಟರ್ ನೋಡುತ್ತಾ, ಬಂದವನ ಹತ್ತಿರ ಏನೋ ಮಾತನಾಡುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿ ಕಸ್ಟಮರ್ ಏನೂ ಅರ್ಥವಾಗದವನಂತೆ ತಲೆಕೆರೆದುಕೊಂಡು ಹೋದನಂತರ ಇನ್ಸ್ಪೆಕ್ಟರ್ ಮ್ಯಾನೇಜರ್ ಚೇಂಬರ್ ಮುಂದೆ ಹಾಕಿದ್ದ ಕಾಟನ್ ಸೀರೆಯ ಕರ್ಟನ್ನನ್ನು ಸರಿಸಿಕೊಂಡು ಒಳಬಂದರು.

‘ಓ ಬನ್ನಿ ಸರ್. ಏನಾದ್ರೂ ಗೊತ್ತಾಯ್ತಾ ಸರ್? ಎಷ್ಟೆಲ್ಲಾ ಹೋಗಿದೆ! ನನ್ ಹೆಂಡತಿಗೆ ತವರುಮನೆಯಿಂದ ತಂದಿದ್ದ ಅವಳ ಬೆಂಡೋಲೇದೇ ಚಿಂತೆ’ ಅತೀ ಬೇಸರದಲ್ಲಿ ನಾಗೇಂದ್ರ ಬಾಬು ಮಾತನಾಡಿದನು. ‘ಅದರ ಬಗ್ಗೇನೇ ಮಾತನಾಡೋಕೆ ಬಂದೆ. ನಿಮಗೆ ಇವ್ನು ಗೊತ್ತಾ?’ ಇನ್ಸ್ಪೆಕ್ಟರ್ ಮುದ್ದೇಶನ ಫೋಟೋ ತೋರಿಸಿದರು. ‘ಅಯ್ಯೋ ಇವ್ನಾ? ಮುದ್ದೇಶ! ಹೋದ್ ವಾರ ತಾನೇ ಬ್ಯಾಂಕಿಗೆ ತಂದಿದ್ದ. ಸಾಲ ಕೇಳ್ದ, ಶ್ಯೂರಿಟಿ ಇಲ್ದೆ ಕೊಡೋಕ್ ಆಗಲ್ಲ ಅಂದೆ. ಅವ್ನ್ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಇಲ್ದೇ ಇದ್ರಿಂದ ಅದೂ ಕ್ಲೋಸ್ ಆಗಿತ್ತು. ದುಡ್ಡು ಕೊಡಲ್ಲ ಅಂದಿದ್ದಕ್ಕೆ ನಿಮ್ ದುಡ್ಡನ್ನೇ ಕೊಟ್ಟಿರಿ ಬಡ್ಡಿಕೊಡ್ತೀನಿ ಅಂದ. ಬೈದು ಕಳಿಸ್ದೆ. ದೊಡ್ಡ ತಲೆಹರಟೆ ಸರ್..’ ಮುದ್ದೇಶನ ಬಗ್ಗೆ ದೊಡ್ಡ ಭಾಷಣವನ್ನೇ ಬಿಗಿದ ಬ್ಯಾಂಕ್ ಮ್ಯಾನೇಜರ್. ಅವನ ಮಾಹಿತಿಯಿಂದ ಪೋಲಿಸರ ಬುದ್ಧಿಗೆ ಏನೋ ಹೊಳೆದು, ‘ಸರಿ.  ಇನ್ನೇನಾದ್ರು ಇದ್ರೆ ಅಪ್ಡೇಡ್ ಮಾಡ್ತೀನಿ’ ಅಂದು ಹೊರೆಟರು.

‘ಸಾಲ ಕೊಡ್ಲಿಲ್ಲ ಅನ್ನೋ ಕೋಪಕ್ಕೆ ಮುದ್ದೇಶ, ಬ್ಯಾಂಕ್ ಮ್ಯಾನೇಜರ್ ಮನೇಗೇ ಕನ್ನ ಹಾಕಿದ್ದಾನೆ ಸರ್’ ಕಾನ್ಸ್ಟೇಬಲ್ ಕಾನ್ಫ಼ಿಡೆಂಟ್ ಆಗಿ ನುಡಿದ. ಇನ್ಸ್ಪೆಕ್ಟರ್ ಗಿರೀಧರ್ ಗೂ ಹಾಗೇ ಅನ್ನಿಸಿತ್ತು. ಆದರೆ ಅದನ್ನು ಸಾಬೀತು ಪಡಿಸೋದು ಹೇಗೆ ಅನ್ನೋದನ್ನು ಯೋಚಿಸುತ್ತಿದ್ದರು. ಕಳ್ಳತನವಾದ ರಾತ್ರಿ ನಾಗೇಂದ್ರ ಬಾಬು ಅವರ ಮನೆಯ ಅಕ್ಕಪಕ್ಕ ಮುದ್ದೇಶನನ್ನು ಯಾರಾದರೂ ಕಂಡಿದ್ದಾರಾ ಅಂತ ಹುಡುಕಬೇಕು ಅಂದರು.

ಮ್ಯಾನೇಜರ್ ಮನೆಯ ಹತ್ತಿರವಿದ್ದ ಇನ್ನೆರಡು ಮನೆಯವರು, ಬೀದಿಯಲ್ಲಿ ನೀರು ಹಿಡಿಯುತ್ತಿದ್ದ ಹೆಂಗಸರು, ಕುಂಟೆಬಿಲ್ಲೆ ಆಡುತ್ತಿದ್ದ ಹೆಣ್ಣು ಮಕ್ಕಳು, ಟಯರ್ ಹೊಡೆದುಕೊಂಡು ಹೋಗುತ್ತಿದ್ದ ಹುಡುಗರು ಎಲ್ಲರನ್ನೂ ಮುದ್ದೇಶನನ್ನು ಆ ರಾತ್ರಿ ಕಂಡಿರಾ ಅಂತ ಪ್ರಶ್ನೆ ಮಾಡಲಾಯಿತು. ಆದರೆ ಏನೂ ಪ್ರಯೋಜನವಾಗಲಿಲ್ಲ.

‘ಏನ್ ಸರ್ ನನ್ ಫೋಟೋ ಇಟ್ಕೊಂಡು ಊರ್ ತುಂಬಾ ಓಡಾಡ್ತಿದ್ದೀರಂತೆ? ಏನ್ ವಿಷ್ಯಾ ಅಂತ ನನ್ನನ್ನೇ ಕೇಳ್ಬೋದಿತ್ತಲ್ಲ? ನಾನೇನ್ ಹೊಸಬಾನೇ? ನನ್ ಹತ್ರ ಏನ್ ಸಂಕೋಚ ನಿಮಗೆ?’ ಮುದ್ದೇಶ ಕಾಲರ್ ಎತ್ತಿದ ಶರ್ಟ್ ಹಾಕಿಕೊಂಡು ಹಲ್ಲು ಕಿರಿಯುತ್ತಾ ಇನ್ಸ್ಪೆಕ್ಟರ್ ನೇ ಕೇಳಿಬಿಟ್ಟ. ‘ಏಯ್! ಕಳ್ಳತನ ಮಾಡಿ, ನನ ಹತ್ರಾನೇ ಏನ್ ದೌಲತ್ತಲ್ಲಿ ಮಾತಾಡ್ತಿತ್ತೀಯಾ’. ಅಹಂಗೆ ಪೆಟ್ಟು ಬಿದ್ದುದರಿಂದ ಇನ್ಸ್ಪೆಕ್ಟರ್  ಮುದ್ದೇಶನ ಕಾಲರ್ ನೇ ಕಿತ್ತುಹಾಕಿಬಿಟ್ಟರು. ನಾನ್ ದುಡ್ ಕೊಟ್ಟು ತಗೊಂಡಿದ್ ಹೊಸಾ ಶರ್ಟ್ ನ ಹರಿದ್ ಹಾಕ್ಬಿಟ್ರಲ್ಲ ಸರ್ ಅಂತ ಮುದ್ದೇಶ ಗೋಳಾಡಿದ. ‘ಹೇಳೋ ನೀನ್ ತಾನೆ ಮ್ಯಾನೇಜರ್ ಮನೇಲಿ ಕಳ್ಳತನ ಮಾಡಿದ್ದು. ಸತ್ಯ ಬೊಗಳ್ಲಿಲ್ಲ ಅಂದ್ರೆ ಹೇಗ್ ಹೊರಗ್ ತರ್ಸ್ಬೇಕು ಅಂತ ಗೊತ್ತಿದೆ’. ರಸ್ತೆಯಲ್ಲೇ ಮುದ್ದೇಶನಿಗೆ ಲಾಠಿ ಚಾರ್ಜ್ ಆಗೋದ್ರಲ್ಲಿತ್ತು ಅಷ್ಟರಲ್ಲಿ ‘ಸರ್ ನನ್ ಹೆಂಡ್ತಿ ಆಣೇಗೂ ನಾನ್ ಕಳ್ಳತನ ಮಾಡಿಲ್ಲ. ಆದ್ರೆ ಆ ಮ್ಯಾನೇಜರ್ ಗೆ ಹಾಗೇ ಆಗ್ಬೇಕು! ಬಡವರ ಹೊಟ್ಟೇಮೇಲೆ ಹೊಡಿತಾನೆ. ದೊಡ್ ಮೋಸ್ಗಾರ ಸರ್ ಅವ್ನು’ ಮುದ್ದೇಶನ ಮಾತಿಗೆ ಇನ್ಸ್ಪೆಕ್ಟರ್ ಕೋಪ ನೆತ್ತಿಗೇರಿತು ನಡಿಯೋ ಸ್ಟೇಶನ್ ಗೆ ಅಂತ ಹಿಡಿಯೋದ್ರೊಳಗೆ ಮುದ್ದೇಶ ತಪ್ಪಿಸಿಕೊಂಡು ಓಡಿದ. ಊರಿನ ಗಲ್ಲಿಗಲ್ಲಿಗಳಲ್ಲಿ ನಡೆದ ಕಳ್ಳ ಪೋಲೀಸರ ಜೂಟಾಟದಲ್ಲಿ ಕಳ್ಳನೇ ಗೆದ್ದು ಬಿಟ್ಟ. 

ಮುದ್ದೇಶನ ಶೋಧನಾ ಕಾರ್ಯಾಚರಣೆ ಮುಂದುವರಿಯಿತು. ಅವನೇ ಕಳ್ಳ ಅಂತ ಹೇಳೋಕೆ ಯಾವ ಸಾಕ್ಷಿನೂ ಇಲ್ಲ ಅದನ್ನೂ ಹುಡುಕಬೇಕು ಅಂದುಕೊಂಡು ಪೋಲಿಸರು ಅವನ ಮನೆಗೆ ಹೋಗಿ ವಿಚಾರಣೆ ಶುರುಮಾಡಿದರು. ‘ಮುದ್ದೇಶ ನೆನ್ನೆಯಿಂದ ಮನೆಗೆ ಬಂದಿಲ್ಲ ಸರ್. ಎಲ್ಲಿಗೋಗೋಗೌನೋ ಗೊತ್ತಿಲ್ಲ’. ಮುದ್ದೇಶನ ಹೆಂಡತಿ ಹೇಳಿದಳು. ಅವಳ ಮಾತನ್ನು ನಂಬದೆ ಮನೆಯೆಲ್ಲಾ ಜಾಲಾಡಿದರು. ಮುದ್ದೇಶನೂ ಸಿಗಲಿಲ್ಲ, ಕದ್ದ ಮಾಲೂ ಪತ್ತೆಯಾಗಲಿಲ್ಲ. ‘ಏನ್ ಹಂಗೇ ಹೊಂಟ್ ಬುಟ್ರೀ, ಮನೆಯೆಲ್ಲಾ ಎಳೆದು ಕಸದ್ ತೊಟ್ಟಿ ಮಾಡಿದ್ದೀರಲ್ಲಾ.. ಎಲ್ಲ ಮೊದಲಂಗೆ ಮಾಡ್ಕೊಟ್ರ‍ೇ ಸರಿ’. ಮುದ್ದೇಶನ ಹೆಂಡತಿ ಸೊಂಟಕ್ಕೆ ಸೆರಗು ಸಿಕ್ಕಿಸಿಕೊಂಡು ರೋಫ್ ಹೊಡೆದು ಕಾನ್ಸ್ಟೇಬಲ್ ಗಳ ಹತ್ತಿರ ಕೆಲ್ಸ ಮಾಡಿಸಿಯೇ ತೀರಿದಳು. ಬಂದ ದಾರಿಗೆ ಸುಂಕವಿಲ್ಲ ಅಂತ ವಾಪಸ್ ಹೊರಡುವಾಗ ಕಾನ್ಸ್ಟೇಬಲ್, ಇನ್ಸ್ಪೆಕ್ಟರಿಗೆ ‘ಆದರೂ ಮುದ್ದೇಶನ ಸ್ಥಿತಿ, ಈಗ ಅರ್ಥ ಆಗ್ತಿದೆ ಅಲ್ವಾ ಸರ್’ ಕನಿಕರದಿಂದ ಹೇಳಿದ.

‘ಕಳ್ಳ ಒಡೆದ ಗಾಜನ್ನೇ ನಾನ್ ಸರಿ ಮಾಡಿಸಿ ಮುಗೀತು. ಏನೂ ಪತ್ತೆಯಿಲ್ಲ ಅಂತ ಹೇಳ್ತೀರಲ್ರೀ. ನಿಮ್ ಕೈಲಿ ಕಳ್ಳನ್ನ ಹುಡುಕೋಕೆ ಆಗಲ್ಲ ಅಂದ್ರೆ ಹೇಳಿಬಿಡಿ. ನಾನ್ ದೊಡ್ಡೋರ್ ಹತ್ರ ಮಾತಾಡ್ಕೋತೀನಿ’ ನಾಗೇಂದ್ರ ಬಾಬು ಹೇಳಿದ ಮಾತುಗಳು ಇನ್ಸ್ಪೆಕ್ಟರ್ ಕಿವಿಯಲ್ಲಿ ಪ್ರತಿಧ್ವನಿಸಿ ಹಿಂಸೆ ಮಾಡುತ್ತಿತ್ತು. ಈ ಸಣ್ಣ ಹಳ್ಳೀಲಿ ಕಳ್ಳನ್ನ ಹಿಡೀಲಿಲ್ಲ ಅಂದ್ರೆ ತನ್ನ ಗೌರವ ಕಮ್ಮಿಯಾಗುತ್ತೆ ಅಂದುಕೊಳ್ಳುತ್ತಾ ಇನ್ಸ್ಪೆಕ್ಟರ್ ‘ಅವರ ಮನೆಯ ವಾರ್ಡೋಬ್ ಮೇಲಿದ್ದ ಫ಼ಿಂಗರ್ ಪ್ರಿಂಟ್ಸ್ ರಿಪೋರ್ಟ್ ಬಂತೇನ್ರಿ’ ಎಂದು ಅಸಹನೆಯಿಂದ ಕೇಳಿದರು. ‘ಇನ್ನೂ ಇಲ್ಲ ಸರ್ ಬೆಂಗಳೂರಲ್ಲಿ ನಡೆದ ಕೊಲೆ ಕೇಸ್ ಗಳಿಗೇ ಅಷ್ಟ್ ಟೈಮ್ ತೊಗೋತಾರೆ ಇನ್ನು ಈ ಹಳ್ಳೀಲೀ…’ ಕಾನ್ಸ್ಟೆಬಲ್ ನ ಸಬೂಬುಗಳು ಕಿರಿಕಿರಿಯುಂಟುಮಾಡಿತು. ಕೇಳಿದ್ ಪ್ರಶ್ನೆಗೆಷ್ಟೇ ಉತ್ತರ ಕೊಟ್ಟರೆ ಸಾಕು ಅಂತ ರೇಗಿದರು. ಇನ್ಸ್ಪೆಕ್ಟರ್ ಗಿರಿಧರ್ ಗೆ ಕೇಸ್ ಬಗೆಹರಿಯುವ ತನಕ ಅನಗತ್ಯ ಮಾತುಗಳ್ಯಾವುವೂ ಬೇಕಾಗಿರಲಿಲ್ಲ.

ಅಂದು ವಿಚಾರಣೆಗಾಗಿ ನಾಗೇಂದ್ರ ಬಾಬು ಅವರ ಮನೆಕೆಲಸದಾಕೆಯನ್ನ ಸ್ಟೇಶನ್ಗೆ ಕರೆಸಿದರು. ‘ನಾನು ಮೂರ್ ದಿನದಿಂದ ಕೆಲಸಕ್ಕೇ ಹೋಗಿರ್ಲಿಲ್ಲ ಸರ್ ಬೇಕಾದ್ರೆ ಅಮ್ಮೋರ್ನೆ ಕೇಳಿ. ನಮ್ ಅಣ್ಣನ್ ಊರಿನಲ್ಲಿ ಜಾತ್ರೆ ಇತ್ತು. ಕೆಂಡ ಹಾಯಕ್ಕೆ ಹೋಗಿದ್ದೆ’ ಎಂದು ಕಾಲಲ್ಲಾದ ಬೊಬ್ಬೆಗಳನ್ನು ತೋರಿಸಿದಳು. ಅವಳಿಂದ ಏನೂ ಉಪಯೋಗವಿಲ್ಲ ಎನಿಸಿ ಹೊರಡಬಹುದು ಅಂದರು. ಬಾಗಿಲ ತನಕ ಹೋದವಳು, ‘ಸರ್ ಆದ್ರೂ ನಂಗೆ ಈ ಕೆಲ್ಸ ಯಾರ್ ಮಾಡಿರೋದು ಅಂತ ಗೊತ್ತು’ ಎಂದು ಹತ್ತಿರ ಬಂದಳು. ಇನ್ಸೆಕ್ಟರ್ ಮುಖ ಅರಳಿತು. ‘ಯಾರಮ್ಮ? ಯಾಕ್ ಮೊದ್ಲೇ ಹೇಳ್ಲಿಲ್ಲ?.’ ‘ಸರ್ ನಮ್ ಊರಲ್ಲಿ ಅಷ್ಟ್ ದೊಡ್ ಮನೆ ಇರೋದು ನಮ್ ಸೌಕಾರ್ರುದು ಒಬ್ರುದೇ. ಹೋದ್ ವರ್ಷ ಅವ್ರು ಮನೆ ಪಾಯ ಹಾಕ್ಸುವಾಗ್ಲೇ ಯಾರೋ ಮೊಟ್ಟೆ ಮಂತ್ರ ಮಾಡಿ ಹಾಕ್ಸಿದ್ರು. ಈಗ್ಲು ಅವ್ರೇ ಮಾಟ ಮಾಡ್ಸಿದ್ದಾರೆ ಸರ್, ಮುಂಬಾಗ್ಲಿಗೆ ದೃಷ್ಟಿ ಕಟ್ಟಿ ಅಂತ ನಾನ್ ಹೇಳಿದ್ದೆ. ನನ್ ಮಾತೇ ಕೇಳ್ಲಿಲ್ಲ ಸರ್…’ ‘ಎಲ್ಲಿಂದ ಬರ್ತೀರ್ರಿ ನೀವೆಲ್ಲಾ.. ನಡೀರಿ’ ಇನ್ಸ್ಪೆಕ್ಟರ್ ತಾಳ್ಮೆ ಕಳೆದುಕೊಂಡು ಕೂಗಿದ್ದಕ್ಕೆ ಕೆಲ್ಸದವಳು ಬೆಚ್ಚಿಬಿದ್ದು ಅಲ್ಲಿಂದ ಕಾಲ್ಕಿತ್ತಳು.

ಕಬ್ಬಿನ ಗದ್ದೆಯ ಪಕ್ಕದಲ್ಲಿ ಜೀಪನ್ನು ನಿಲ್ಲಿಸಿ ಪೋಲಿಸರು ಟೀ ಕುಡಿಯಲು ಅಂಗಡಿಗೆ ಬಂದಿದ್ದರು. ಮುದ್ದೇಶನ ಬಗ್ಗೆ ವಿಚಾರಿಸುತ್ತಾ ಇನ್ಸ್ಪೆಕ್ಟರ್ ಫೋನಿಗಾಗಿ ಜೇಬಿಗೆ ಕೈಹಾಕಿದರು ಸಿಗಲಿಲ್ಲ. ‘ಜೀಪಲ್ಲಿ ಫೋನ್ ಬಿಟ್ಟಿದ್ದೀನಿ ತಗೊಂಡ್ ಬನ್ರೀ’ ಕಾನ್ಸ್ಟೆಬಲ್ ಗೆ ಹೇಳಿದರು. ಕಾನ್ಸ್ಟೆಬಲ್ ಜೀಪ್ ಹತ್ರ ಹುಡುಕಾಡಿ, ಅಲ್ಲಿಲ್ಲ ಅಂತ ಹೇಳಿದ. ಇನ್ಸ್ಪೆಕ್ಟರ್ ಗೆ ಹುಬ್ಬುಗಂಟುಹಾಕಿಕೊಂಡು ತಾನೇ ಹುಡುಕಲು ಹೋದಾಗ ಫೋನ್ ಕಾಣಲಿಲ್ಲ. ಸುತ್ತ ಮುತ್ತ ಹುಡುಕಾಡಿ ಮತ್ತೆ ಜೀಪಿನ ಹತ್ತಿರ ಬರುವುದರೊಳಗೆ ಫೋನ್ ಡ್ಯಾಶ್ ಬೋರ್ಡಿನ ಮೇಲೆ ಪ್ರತ್ಯಕ್ಷವಾಗಿತ್ತು. ಕಬ್ಬಿನ ಗದ್ದೆಯಿಂದ ಬರುತ್ತಿದ್ದ ಶಬ್ದ ಯಾರೋ ಈಗಷ್ಟೇ ಫೋನ್ ನನ್ನು ಇಟ್ಟು ಓಡಿದ್ದಾರೆ ಅನ್ನೋದನ್ನು ಸೂಚಿಸಿತು. ಪೋಲಿಸರು ಗದ್ದೆಯೊಳಗೆ ನುಗ್ಗಿ ಏಯ್ ಯಾರದು ಅಂತ ಕೂಗುತ್ತಾ ಹೋದರು. ‘ಸಾರ್ ನಾನೇ, ಇಲ್ಲಿದ್ದೀನಿ ನೋಡಿ’ ಮುದ್ದೇಶ ಮತ್ತೆ ಹಲ್ಲುಕಿರಿದ. ‘ನಿಂಗ್ ಇವತ್ ಬೀಳ್ತಾವೆ ಕಣೋ’ ಇನ್ಸ್ಪೆಕ್ಟರ್ ಅವನನ್ನು ಹಿಡಿದು ಬೀಳಿಸಿ ಬೂಟುಕಾಲು ಸೇವೆ ಮಾಡತೊಡಗಿದರು. ಅಯ್ಯೋ! ಅಮ್ಮಾ! ಪೋಲಿಸರಿಗೆ ಸಹಾಯ ಮಾಡೋಕ್ ಹೋಗಿ ನಾನು ಸಾಯ್ತಿದ್ದೀನಿ ಅಂತ ಮುದ್ದೇಶ ಕೂಗಾಡಿದ. ‘ಏನೋ ಹೊಸಾ ನಾಟಕ ನಿಂದು?.’ ಮುದ್ದೇಶ ಸುಧಾರಿಸಿಕೊಂಡು, ಸರ್ ಮ್ಯಾನೇಜರ್ ಮನೇಲಿ ಕಳ್ಳತನ ಆಗೇ ಇಲ್ಲ ಎಲ್ಲಾ ಸುಳ್ಳು! ಪಕ್ಕಾ ಸುಳ್ಳು! ನನ್ನ ನಂಬಿ ಎಂದು ಹೇಳಿದ.

ಇನ್ಸ್ಪೆಕ್ಟರ್ ಹೆಚ್ಚಿನ ಮಾಹಿತಿ ಪಡೆಯಲು ಮುದ್ದೇಶ ಬೇಡಿಕೆಯಿಟ್ಟ ಚಿಕನ್ ಕಬಾಬ್ ಅನ್ನು ಕೊಡಿಸಬೇಕಾಗಿಬಂತು. ಅದನ್ನು ತಿಂದು ಮುಗಿಸಿ. ‘ನೋಡಿ ಸರ್, ಕಳ್ಳತನದ ಮಾಲಿನ ಫೋಟೋ ತೆಗೆದ ಡೇಟ್ ನ ನೋಡಿ.’ ಫೋನ್ ನಲ್ಲಿ ಪಿಚರ್ ಡಿಟೇಲ್ಸ್ ನ ನೋಡಿದಾಗ ಅದು ಕಳ್ಳತನವಾದ ಮಾರನೇ ದಿನದ ದಿನಾಂಕ ಮತ್ತು ಸಮಯವಾಗಿತ್ತು. ‘ನೀವು ಏನೇನು ಕಳ್ಳತನ ಆಗಿದೆ ತೋರಿಸಿ ಅಂತ ಕೇಳಿದ ಮೇಲೆ ತೆಗೆದಿರೋ ಫೋಟೋ ಸರ್ ಇದು’ ಮುದ್ದೇಶ ಎದೆ ಉಬ್ಬಿಸಿ ಹೇಳಿದ. ‘ನೀನ್ಯಾಕೋ ನನ್ನ ಫೋನ್ ತಗೊಳ್ಳೋಕೆ ಬಂದಿದ್ದೆ ಮತ್ತೆ’ ಅಂತ ಗದರಿಸಿದಾಗ, ‘ನನ್ ಹೆಂಡತಿ ಮ್ಯಾನೇಜರ್ ಹೆಂಡತಿ ಕಿವಿಯಲ್ಲಿ ಯಾವಾಗ್ಲೊ ಬೆಂಡೋಲೆ ನೋಡ್ಬಿಟ್ಟಿದ್ದಾಳೆ ಸರ್ ಅದೇ ತರಹದ್ದು ಬೇಕು ಇಲ್ಲಾಂದ್ರೆ ಮನೆಗೆ ಬರಬೇಡ ಅಂದಿದ್ದಾಳೆ. ಆ ಡಿಸೈನ್ ಗೋಸ್ಕರ ನಿಮ್ ಫೋನ್ ತಗೊಂಡೆ’ ಮುದ್ಡೇಶ ಗೊಳೋ ಅನ್ನುತ್ತಾ ತನ್ನ ಕಷ್ಟ ತೋಡಿಕೊಂಡ!

ಕಳ್ಳತನವೇ ಆಗದೆ ಸುಮ್ಮನೆ ಯಾಕೆ ಕಂಪ್ಲೇಂಟ್ ಕೊಟ್ಟಿದ್ದಾರೆ? ನಮ್ಮನ್ನು ಮೂರ್ಖರನ್ನಾಗಿ ಮಾಡ್ಬೇಕು ಅಂತಿದ್ದರಾ? ಇನ್ಸ್ಪೆಕ್ಟರ್ ಸ್ಟೇಶನ್ನಲ್ಲಿ ಯೋಚಿಸುತ್ತಾ ಕುಳಿತಾಗ, ಹತ್ತು ವರ್ಷದ ವೇಣು ಟೀ ತಂದುಕೊಟ್ಟ. ‘ಮೊನ್ನೆ ನಿಮ್ ಅಂಗಡೀಲಿ ಟೀ ಕುಡಿದು ದುಡ್ಡು ಕೊಡದೇ ಹೋಗ್ಬಿಟ್ಟೆ ತೊಗೋ’ ಅಂತ ಇನ್ಸೆಪ್ಕ್ಟರ್ ಕೊಟ್ಟರು. ‘ಪರವಾಗಿಲ್ಲ ಬಿಡಿ ಸರ್, ಹಾಗಾಗಿದ್ರಿಂದ ನಿಮ್ಗೆ ನಾಗೇಂದ್ರ ಬಾಬು ಮನೇಲಿ ಕಳ್ಳತನ ಆಗಿಲ್ಲ ಅಂತಾದ್ರೂ ಗೊತ್ತಾಯಿತು.’ ವೇಣು ಹೇಳಿದ. ನಿನಗೆ ಹೇಗೆ ಈ ವಿಷಯ ಗೊತ್ತಾಯಿತು ಅಂತ ಕೇಳಿದಾಗ ಅವನು ತಬ್ಬಿಬ್ಬಾಗಿ, ‘ನಾನು ದೂರದಿಂದ ನಿಂತು ನೋಡ್ತಿದ್ದೆ ಸರ್’ ಎಂದ.

ಅಂದು ಇದ್ದಕ್ಕಿದ್ದಂತೆ ಪೋಲಿಸರು ನಗೇಂದ್ರ ಬಾಬು ಮನೆಯನ್ನು ಹುಡುಕಲು ಶುರುಮಾಡಿದರು. ಬ್ಯಾಂಕಿನಿಂದ ಓಡಿಬಂದ ಮ್ಯಾನೇಜರ್ ಸರ್ಚ್ ವಾರೆಂಟ್ ಇಲ್ಲದೇ ಇದೇನ್ ಮಾಡ್ತಿದ್ದೀರ ಅಂತ ತನಗೆ ಗೊತ್ತಿದ್ದ ಕಾನೂನನ್ನೆಲ್ಲಾ ಸೇರಿಸಿ ಮಾತನಾಡಿದ. ಅದ್ಯಾವುದಕ್ಕೂ ಕಿವಿಗೊಡದೆ ಮನೆಯೆಲ್ಲಾ ಹುಡುಕಾಡಿದಾಗ ಬೆಂಡೋಲೆಯನ್ನು ನಗೇಂದ್ರನ ಹೆಂಡತಿ ದೇವರಮನೆಯ ಕುಂಕುಮದ ಭರಣಿಯಲ್ಲಿ ಮುಚ್ಚಿಟ್ಟಿದ್ದು ಸಿಕ್ಕಿತು. ಮನೆಯವರೆಲ್ಲಾ ಗರಬಡಿದಂತೆ ನಿಂತಿದ್ದರು. ‘ಕಳುವಾಗಿದ್ದ ಆಭರಣಗಳನ್ನೆಲ್ಲಾ ನಮಗೆ ಸಿಗಬಾರದು ಅಂತ ಬೇರೆಲ್ಲೋ ಸಾಗಿಸಿದ್ದೀರ. ಆದ್ರೆ ನಿಮ್ಮ ಹೆಂಡತಿಯ ತವರುಮನೆಯ ಬೆಂಡೋಲೆ ನಿಮ್ಮ ಬಂಡವಾಳವನ್ನು ಬಯಲುಮಾಡ್ತು’ ಇನ್ಸ್ಪೆಕ್ಟರ್ ಸಿನಿಮಾ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದ. ನರೇಂದ್ರ ತಲೆತಗ್ಗಿಸಿದ. ಸುಮ್ ಸುಮ್ಮನೆ ಯಾಕ್ರೀ ಕಂಪ್ಲೇಂಟ್ ಕೊಟ್ರೀ? ಡಿಪಾರ್ಟ್ಮೆಂಟ್ ನ ಜೋಕ್ ಅಂದುಕೊಂಡಿದ್ದೀರಾ? ನಿಮ್ಮ ಮೇಲೆ ಕಾನೂನನ್ನು ಜರುಗಿಸಬೇಕಾಗುತ್ತದೆ ಅಂತ ಹೇಳಿದಾಗ ನರೇಂದ್ರ ‘ಹೌದು, ಒಪ್ಪಿಕೊಳ್ತೀನಿ ನಮ್ಮ ಮನೇಲಿ ಕಳ್ಳತನವಾಗಿಲ್ಲ. ಆದರೆ ನಮ್ಮ ಮನೆ ಕಿಟಕಿಗೆ ಕಲ್ಲು ತೂರಿ ಗಾಜು ಒಡೆದಿದ್ದು ಮಾತ್ರ ನಿಜ. ಅಷ್ಟಕ್ಕೇ ಕಂಪ್ಲೇಂಟ್ ಕೊಟ್ರೆ ಅಪರಾಧಿಗೆ ದೊಡ್ಡ ಶಿಕ್ಷೆ ಆಗಲ್ಲ ಅಂತ ನಾವು ಕಳ್ಳತನ ಅಂತ ಸೇರಿಸಿದ್ವಿ.’ ಇನ್ಸ್ಪೆಕ್ಟರಿಗೆ ನಂಬಿಕೆ ಬರಲಿಲ್ಲ. ‘ನನ್ನ ತಪ್ಪಿಗೆ ನಾನು ದಂಡ ಕಟ್ಟುತ್ತೀನಿ. ಆದರೆ ನಮ್ಮ ಮನೆಗೆ ಕಲ್ಲು ತೂರಿದ್ದು ಸುಳ್ಳಲ್ಲ ಸರ್. ಬೇಕಾದ್ರೆ ಆ ಕಲ್ಲಿನ ಮೇಲೆ ಬಿದ್ದಿದ್ದ ಫಿಂಗರ್ ಪ್ರಿಂಟ್ ರಿಪೋರ್ಟ್ ಬರುತ್ತಲ್ಲ ಆಗ್ಲೇ ನೋಡಿ’ ನಾಗೇಂದ್ರ ಹೇಳಿದ.

ಒಂದು ವಾರದಲ್ಲಿ ಫಿಂಗರ್ ಪ್ರಿಂಟ್ ರಿಪೋರ್ಟ್ ಬಂದಿತ್ತು. ಅದು ಮುದ್ದೇಶನದ್ದೂ ಆಗಿರಲಿಲ್ಲ, ಅನುಮಾನವಿದ್ದ ಹಳೆಯ ಕಳ್ಳರದ್ದೂ ಆಗಿರಲಿಲ್ಲ. ಮತ್ಯಾರದ್ದೂ ಅಂತ ಚಿಂತೆ ಶುರುವಾಯಿತು. ಟೀ ಕುಡಿಯೋಕೆ ಅಂತ ಹೋದಾಗ ವೇಣು ಅಂಗಡಿಯ ಹಿಂದೆ ತನ್ನ ಗೆಳೆಯರ ಗುಂಪನ್ನು ಸೇರಿಸಿಕೊಂಡು ಏನೋ ಮಾಡುತ್ತಿದ್ದ. ʻಸರ್ ಬಂದೆʻ ಬೆವರೊರೆಸಿಕೊಳ್ಳುತ್ತಾ ಟೀ ತಂದುಕೊಟ್ಟ. ಇನ್ಸ್ಪೆಕ್ಟರ್ ಕಣ್ಣಿಗೆ ಅವನ ಹಾವಭಾವ ಅನುಮಾನಸ್ಪದವಾಗಿ ಕಂಡಿತು. ಅಂಗಡಿಯ ಹಿಂದೆ ನುಗ್ಗಿ ನೋಡಿದಾಗ ನಾಗೇಂದ್ರ ಬಾಬುವಿನ ಭಾವಚಿತ್ರದ ಪೋಸ್ಟರ್ ಗಳಿಗೆ ಮಸಿ ಮೆತ್ತುತ್ತಿದ್ದರು. ಅದರ ಕೆಳಗೆ ಮೋಸಗಾರ ಅಂತ ಬರೆದಿತ್ತು. ಇನ್ಸ್ಪೆಕ್ಟರ್ ಏನಿದು? ಅಂತ ದಬಾಯಿಸಿದಾಗ ವೇಣು ಹೆದರಿ, ಇವತ್ತು ರಾತ್ರಿ ಊರು ತುಂಬಾ ಇದನ್ನು ಅಂಟಿಸಬೇಕು ಅಂತ ಪ್ಲಾನ್ ಮಾಡಿದ್ದೆ ಸರ್ ಅಂದ.

‘ಹಾಗಾದ್ರೆ ನೀನೇ ಅವರ ಮೇಲೆ ಕಲ್ಲು ಹೊಡೆದೋನು, ಈ ವಯಸ್ಸಿಗೇ ಕಿಡಿಗೇಡಿ ಕೆಲ್ಸ ಮಾಡಿದ್ದೀಯ ನಡಿ ಸ್ಟೇಶನ್ ಗೆ’ ಎಂದು ಗದರಿ ಪೋಸ್ಟರ್ ಗಳನ್ನು ವಶಪಡಿಸಿಕೊಂಡರು. ಪೇದೆಗಳು ಎಳೆದೊಯ್ಯುತ್ತಿರುವಾಗ ವೇಣು ಕಿರುಚಿದ. ‘ಬಿಡಿ ಸರ್, ಅವ್ರು ನಮ್ಗೆ ಅನ್ಯಾಯ ಮಾಡಿದ್ದಾರೆ ಗೊತ್ತಾ? ಓದ್ಬೇಕು ಅಂತಿದ್ದೋನು ಟೀ ಅಂಗಡೀಲಿ ಕೆಲ್ಸ ಮಾಡೋಕೂ ಅವ್ರೆ ಕಾರಣ. ಅದಕ್ಕೆ ಸಿಟ್ಟು ಬಂತು’. ಇನ್ಸ್ಪೆಕ್ಟರ್ ಅನ್ಯಾಯದ ಬಗ್ಗೆ ಕೇಳಿದಾಗ ವೇಣು ಆದ ವಿಚಾರ ಹೇಳಲು ಶುರುಮಾಡಿದ.

ನಾವು ಬಡವರು ಸರ್. ನಮ್ಮಪ್ಪ ಆ ಬ್ಯಾಂಕ್ ನಲ್ಲಿ ಹೊಲದ ಮೇಲೆ ಸಾಲ ತಗೊಂಡಿದ್ದ ಸರ್. ಆದರೆ ಎರಡು ವರ್ಷದಿಂದ ಮಳೆಯಿಲ್ಲದೆ ಬೆಳೆ ಸರಿಯಾಗಿಲ್ಲ. ಬಡ್ಡಿಕಟ್ಟಲು ತುಂಬಾ ಕಷ್ಟವಾಗುತ್ತಿತ್ತು. ಬಡ್ಡಿ ಕಟ್ಟೋಕಾಗ್ತಿಲ್ಲ, ಆಗಾಗ ಮನೆಗೆ ಬಂದು ಅವಮಾನ ಮಾಡ್ತಿದ್ರು, ಸಮಯ ಕೊಡಿ ಅಂತ ಬ್ಯಾಂಕ್ ಮ್ಯಾನೇಜರ್ ನ ಎಷ್ಟು ಕೇಳಿಕೊಂಡರೂ ಅವರು ನಮ್ಮ ಹೊಲವನ್ನು ಜಪ್ತಿ ಮಾಡಿಬಿಟ್ರು. ಭೂಮಿನೂ ಬೆಳೆನೂ ಇಲ್ಲ ಅಂತ ಅಪ್ಪ ಕೊರಗಿ ಕೊರಗಿ ಒಂದಿನ ಗಿಡದ್ ಔಷಧಿ ಕುಡಿದುಬಿಟ್ರು. ನಿಮ್ಗೆ ಗೊತ್ತಲ್ಲ ಸರ್, ಊರಲ್ಲೆಲ್ಲಾ ಅಪ್ಪ ಆತ್ಮಹತ್ಯೆ ಮಾಡ್ಕೊಂಡ ಅಂದುಕೊಂಡಿದ್ದಾರೆ. ಆದ್ರೆ ಅದು ಕೊಲೆ. ಅವ್ನು ನಮಗೆ ಮೋಸ ಮಾಡಿದ್ದಾನೆ ವೇಣು ಅಂತ ಒಂದೇ ಉಸಿರಿನಲ್ಲಿ ಹೇಳುವಾಗ ಅವನ ಕಣ್ಣುಗಳಲ್ಲಿ ಬೆಂಕಿ ತುಂಬಿಕೊಂಡಿತ್ತು.

ಇನ್ಸ್ಪೆಕ್ಟರ್ ಹುಡುಗನಿಗೆ, ಮ್ಯಾನೇಜರ್ ಅವರ ಕೆಲಸವಷ್ಟೇ ಮಾಡಿದ್ದಾರೆ. ಅದು ಬ್ಯಾಂಕ್ ನ ರೂಲ್ಸು ಅಂತ ಅರ್ಥಮಾಡಿಸೋಕೆ ಪ್ರಯತ್ನ ಪಟ್ಟ. ಆದರೆ ಹುಡುಗನಿಗೆ ಅಪ್ಪನ ಸಾವಿಗೆ ಕಾರಣನಾದ ಮ್ಯಾನೇಜರ್ ವೈರಿಯಂತೆ ಕಂಡ. ಹುಡುಗನ ನೋವನ್ನು ಕಂಡು ಇನ್ಸ್ಪೆಕ್ಟರಿಗೂ ಬೇಸರವಾಯಿತು. ಇಂತಹ ಅಮಾಯಕರ ಸಾವಿಗೆ ಯಾರು ಹೊಣೆ? ಯಾರನ್ನು ದೂರುವುದು? ಸಾಲ ಕೊಡುವ ಬ್ಯಾಂಕೇ? ನಿಯಮಗಳನ್ನು ಮಾಡಿರುವ ವ್ಯವಸ್ಥೆಯೇ? ಈಗ ಹುಡುಗನಿಗೆ ಶಿಕ್ಷೆ ವಿಧಿಸಬೇಕೇ? ತನ್ನ ವೃತ್ತಿಜೀವನದಲ್ಲೇ ಇಂತಹ ಧರ್ಮ ಸಂಕಟ ಎದುರಾಗಿರಲಿಲ್ಲ. ಉತ್ತರ ತಿಳಿಯದೆ ಸುಮ್ಮನಾಗಿಬಿಟ್ಟ.

ಕೆಲವು ತಿಂಗಳುಗಳ ನಂತರ ನಾಗೇಂದ್ರ ಬಾಬುವಿಗೆ ಟ್ರ‍ಾನ್ಸ್ಫ಼ರ್ ಆಯಿತು. ವೇಣು ಎಂದಿನಂತೆ ತಂದೆ ಫೋಟೋ ಮುಂದೆ ದೀಪ ಬೆಳಗಿ, ಟೀ ಅಂಗಡಿಯ ಕೆಲಸಕ್ಕೆ ಹೋದ.

‍ಲೇಖಕರು Admin

20 August, 2021

9 Comments

  1. Iampriyapriyaa

    ಈ ಕಥೆಯು ತುಂಬ ಸೊಗಸಾಗಿದೆ…. ನಿಮಗೆ ಹೃತ್ಪೂರ್ವಕವಾದ ಧನ್ಯವಾದ ಅಕ್ಕ…..♥️

    • Pallavi

      bahala uttamavaada kathaahandaradondige, saamaajika kalakali mattu niroopanaa shailiyinda konevaregoo odhisikondu hoytu

  2. ರಘುರಾಮ್

    ತುಂಬ ಚೆನ್ನಾಗಿದೆ.

  3. ಲಿಖಿತ ಟಿ ಎ

    ತುಂಬಾ ಚೆನ್ನಾಗಿದೆ ಹಾಗು ಕುತೂಹಲಕಾರಿಯಾಗಿದೆ…

  4. Arpitha

    It’s too nice sis ☺️

  5. Rashmi manju

    Amazing story

    • Your fan

      Wow! Thumba chennagide

  6. Anu

    Nice

  7. Obaiah B

    ಬಹಳ ಆಪ್ತವಾಗುವ ಸರಳ ಭಾಷೆಯ ಸೃಜನಶೀಲವಾದ ಬರವಣಿಗೆ, ಅಷ್ಟೇ ನೈಜವಾಗಿ ಸಮಾಜದ ಅಂತರಾಳದಲ್ಲಿ ದಿನ ನಿತ್ಯ ನಡೆಯುವ ಘಟನೆಗಳನ್ನು ಮನ ಮುಟ್ಟುವಂತೆ ಕಟ್ಟಿ ಕೊಟ್ಟಿದ್ದೀರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading