ವೈಶಾಲಿ ಹೆಗಡೆ
ಕಳೆದ ವರ್ಷಾಂತ್ಯದ ಹೊತ್ತಲ್ಲಿ ಉರಿದುರಿದು ಈಗ ಸಣ್ಣಗೆ ಹೊಗೆಯಾಡುತ್ತಿರುವ ದೇವಯಾನಿ ಖೋಬ್ರಗಡೆ ಎಂಬವಳ ಖಬರ್ ಏನೀಗ? ಅವಳೊಬ್ಬಳದೆ ಅಲ್ಲ, ಅವಳಂತೆ ಹಿಂದೆಯೂ ಅಮೇರಿಕಾ ಸರ್ಕಾರ ಗಡೀಪಾರು ಮಾಡಿದ ಮೂವರು ಭಾರತೀಯ ಡಿಪ್ಲೋಮ್ಯಾಟ್ ಗಳ ಸುದ್ದಿಯೂ ಎಲ್ಲಿಲ್ಲ. ಭಾರತ, ಅಮೆರಿಕೆಯಾ ನಡುವೆ ಮಾತುಕತೆ ಆರಂಭವಾಗಿ ಈ ಸಂದಿಗ್ಧ ಬಲು ಬೇಗ ಬಗೆಹರಿವುದಂತೆ. ಒಳ್ಳೆಯದು.
ಬಹುತೇಕ ಎಲ್ಲರಿಗೂ ಗೊತ್ತು ನಡೆದ ಕತೆ ಏನೆಂದು. ಆದರೂ ನೆನಪಿಸಿಬಿಡುತ್ತೇನೆ ಇನ್ನೊಮ್ಮೆ. ದೇವಯಾನಿ ಭಾರತದಿಂದ ಅಮೆರಿಕೆಗೆ ಬರುವಾಗಲೇ ತನ್ನ ಜೊತೆ ಮನೆಗೆಲಸಕ್ಕೆಂದು ಸಂಗೀತ ರಿಚರ್ಡ್ ಳನ್ನು ಕರೆ ತಂದಿದ್ದಳು. ವೀಸಾ ದಾಖಲೆ ಪತ್ರದಲ್ಲಿ ಅಮೆರಿಕೆಯ ಕನಿಷ್ಟ ವೇತನದ ಮಾಪನದಂತೆ ಸಂಬಳ ಕೊಡುತ್ತೇನೆಂದು ನಮೂದಿಸಿ ಸಹಿ ಕೂಡ ಹಾಕಿದ್ದಳು. ಆದರೆ ಅವಳಿಗೂ ಗೊತ್ತು, ಸಂಗೀತಗೂ ಗೊತ್ತು ನಿಜದ ಸಂಬಳ ಗೀಚಿದ್ದ ನಂಬರಿಗಿಂತ ಹತ್ತು ಪಟ್ಟು ಕಡಿಮೆ ಎಂದು. ಮುಂದೊಂದು ದಿನ ವೀಸಾ ದಾಖಲೆ ಪತ್ರದಲ್ಲಿ ಮೋಸ ಎಂಬ ಆರೋಪದ ಮೇಲೆ ದೇವಯಾನಿಯ ಬಂಧನವಾಗುತ್ತದೆ ನ್ಯೂಯಾರ್ಕಿನ ಬೀದಿಯೊಂದರಲ್ಲಿ. ಸುದ್ದಿಯಾಗುತ್ತದೆ ಭಾರತದ ಬೀದಿ ಬೀದಿಯಲ್ಲಿ.
ಈ ಘಟನೆಯಲ್ಲಿ ಹಲವು ಮಗ್ಗುಲುಗಳಿವೆ. ಇಷ್ಟು ದಿನಗಳಲ್ಲಿ ಇದನ್ನು ಅವಲೋಕಿಸಿದಾಗ ಇಲ್ಲಿ ಒಳಗೊಂಡಿರುವ ಮುಖ್ಯ ವ್ಯಕ್ತಿಗಳೆಲ್ಲರೂ ಭಾರತೀಯ ಸಂಜಾತರು. ದೇವಯಾನಿ, ಸಂಗೀತ, ಹಾಗೂ ಅಮೇರಿಕನ್ ಡಿಸ್ಟ್ರಿಕ್ಟ್ ಅಟಾರ್ನಿ ಪ್ರೀತ್ ಭರಾರ. ಹಾಗಾಗಿಯೇ ಇದಕ್ಕೊಂದು ಮುಸುಕಿನ ಹೋರಾಟ, ಭಾರತೀಯ ಸಮಾಜ ವ್ಯವಸ್ಥ್ಯೆಯ ವಿರುದ್ಧದ ದನಿ, ರಾಜಕೀಯ ಕಾಲೆಳೆಯುವ ಕ್ರಿಯೆ ಎಲ್ಲದರ ಬಣ್ಣ ಬರುತ್ತದೆ. ಎಲ್ಲವೂ ಪರ್ಸನಲ್ ಎನಿಸಿಬಿಡುತ್ತದೆ.

ಸತ್ಯ ಎಂದೂ ಸಂಪೂರ್ಣ ಸತ್ಯವಲ್ಲ. ಅದು ನೋಡುಗನ ಸತ್ಯ, ಕೇಳುಗನ ಸತ್ಯ. ಸತ್ಯಸ್ಯ ಸತ್ಯ ಎಂಬುದೇನಾದರೂ ಇದ್ದರೆ ಅದು ಸತ್ಯಕ್ಕೂ ಸುಳ್ಳು. ನನ್ನ ಮನಕ್ಕೆ ಕಂಡ ಸತ್ಯವಷ್ಟೇ ಈಗ ಇಲ್ಲಿರುವ ಸತ್ಯ.
ಪ್ರೀತ್ ಖಾಲಿ ಪೀಲಿ ಡಿ.ಎ. ಅಲ್ಲ. ಘಟಾನುಘಟಿಗಳ ನಿದ್ದೆಗೆಡಿಸಿದ, ನ್ಯೂಯಾರ್ಕ್ ಸ್ಟಾಕ್ ವಹಿವಾಟಿನಲ್ಲಿ ಅಪರಾ ತಪರಾ ನಡೆಸಿದ ಕಾರ್ಪೋರೆಟ್ ಕುಳಗಳನೆಲ್ಲ ಎಳೆದೆಳೆದು ಜೈಲು ತುಂಬಿಸಿ ಪ್ರಸಿದ್ಧಿಯಾದವ. ನ್ಯೂಯಾರ್ಕಿನ ಅತ್ಯಂತ ದಕ್ಷ, ಹಾಗೂ ಸೆಲೆಬ್ರಿಟಿ ಎಂದೇ ಹೆಸರಾಗಿರುವವ. ಶಾರ್ಕ್, ತಿಮಿಂಗಿಲಗಳ ಬೇಟೆಯಾಡಿ ರೂಢಿಯಿದ್ದವ ಯಾಕೆ ಎಲ್ಲ ಬಿಟ್ಟು ದೇವಯಾನಿಯೆಂಬ ಚಿಕ್ಕ ಮೀನಿಗೆ ಗಾಳ ಹಾಕಿದ ಎಂದು ಅರಗಿಸಿಕೊಳ್ಳುವುದು ಕಷ್ಟ.
ಇನ್ನು ಸಂಗೀತಾ ಹೇಳುವ ಪ್ರಕಾರ ಆಕೆಯ ನಿಗದಿತ ಸಂಬಳ ಅತೀ ಕಡಿಮೆ. ದಿನವಿಡೀ ಕೆಲಸ. ಈ ಬಗ್ಗೆ ಚಕಾರವೆತ್ತಿದರೆ ದೆಹಲಿಯಲ್ಲಿರುವ ಗಂಡ, ಮನೆಯವರನ್ನು ಶಿಕ್ಷಿಸುವುದಾಗಿ ಬೆದರಿಕೆ. ತನ್ನನ್ನು ಕೆಲಸದಿಂದ ವಜಾಗೊಳಿಸಬೇಕು, ಇಲ್ಲವೇ ಸಂಬಳ ಹೆಚ್ಚಿಸಬೇಕು ಅಥವಾ ತನ್ನ ವೀಸಾ ಸ್ಟೇಟಸ್ ಬದಲಾಯಿಸಿ ಅಮೆರಿಕೆಯಲ್ಲಿ ಇತರ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಕೇಳಿಕೊಂಡಾಗ ದೆಹಲಿ ಕೋರ್ಟ್ ಅವಳ ಮನೆಯವರ ಮೇಲೆ ಅರೆಸ್ಟ್ ವಾರಂಟ್ ಜಾರಿ ಮಾಡಿತು. ಸಂಗೀತಾಳನ್ನು ತಕ್ಷಣ ಭಾರತಕ್ಕೆ ಕಳಿಸುವಂತೆ ಕೇಳಿಕೊಂಡಿತು.
ದೇವಯಾನಿ ಇದೆ ಅವಕಾಶ ಬಳಸಿಕೊಂಡು ಸಂಗೀತಳಿಗೆ ಹೇಳಿದ ಮಾತು ಕೇಳದಿದ್ದರೆ ಡೀಪೊರ್ಟ್ ಮಾಡಿಸುತ್ತೇನೆ ಎಂದು ಧಮಕಿ ಕೊಡುತ್ತಿರಬಹುದೇ? ಈ ಬಗ್ಗೆ ಕಂಪ್ಲೇಂಟ್ ಕೊಡುವ ಧೈರ್ಯ ಬಂದಿದ್ದು ಹೇಗೆ ಎಲ್ಲ ಇನ್ನೂ ಸರಿಯಾದ ಮಾಹಿತಿ ಇಲ್ಲ.
ಆದರೆ ತಪ್ಪಿನ ಸರಿಯಾದ ಅವಕಾಶ ಬಳಸಿಕೊಂಡಿದ್ದು ಪ್ರೀತ್. ಪ್ರೀತ್ ಕಚೇರಿ ರಾಯಭಾರಿಗಳ ಆಟಾಟೋಪದ ಫ್ಯಾಕ್ಶನ್ ನಡವಳಿಕೆಯಿಂದ ರೋಸಿ ಹೋಗಿತ್ತು. ಭಾರತದಿಂದ ಬಂದು ಹೀಗೆ ಗುಲಾಮಗಿರಿಯಂತೆ ಕೆಲಸದವರನ್ನು ದುಡಿಸಿಕೊಂಡ ರಾಯಭಾರಿಗಳು ಹಿಂದೆಯೂ ಇದ್ದರು. ಭಾರತವೊಂದೆ ಅಲ್ಲ ಹಲವು ದೇಶಗಳ ರಾಯಭಾರಿಗಳ ಕೆಲಸದಾಳುಗಳ ದುರ್ಗತಿ ಇದು. ಆದರೆ ಯಾವ ಕೆಲಸದಾಳುಗಳೂ ಸಂಪೂರ್ಣ ಸಾಕ್ಷ್ಯಗಳ ಸಮೇತ ಮುಂದೆ ಬಂದಿದ್ದಿಲ್ಲ. ಸಂಗೀತಾಳ ಸಂಸಾರಕ್ಕೆ ಅಭಯ ನೀಡಿ ಇಡೀ ರಾಯಭಾರಿ ಸಮುದಾಯದ ನಡವಳಿಕೆಗೊಂದು ಶಾಸ್ತಿ ನೀಡುವ ತಂತ್ರ ಹೊಸೆಯಿತು ಪ್ರೀತ್ ತಂಡ ಎಂಬುದು ಹಲವರ ಶಂಕೆ.
ಇಲ್ಲಿ ದೇವಯಾನಿ ಬಲಿಪಶು ಎಂದುಕೊಂಡರೂ ನಿಜವಾದ ಬಲಿಪಶು ಯಾರು?
ದೇವಯಾನಿ ಒಬ್ಬ ರಾಯಭಾರಿಯಾಗಿರದೆ, ಅವಳಪ್ಪ ಒಬ್ಬ ಐ ಎ. ಎಸ್. ಅಧಿಕಾರಿಯೂ ಉಭಯ ಪಕ್ಷಗಳ ಚುನಾವಣೆಗಳಲ್ಲಿ ಅಪ್ಯಾಯಮಾನ ವ್ಯಕ್ತಿಯೂ ಆಗಿರದಿದ್ದರೆ ಇಷ್ಟೊಂದು ಸುದ್ದಿಯಾಗುತ್ತಿತ್ತೆ? ಭಾರತ ಸರ್ಕಾರ ಹೀಗೆ ಧಾವಿಸುತ್ತಿತ್ತೆ? ದೇವಯಾನಿಯ ಅರೆಸ್ಟ್ ಆದಾಗ ಅವಳು ಮಾಫೀಪಾತ್ರ ರಾಯಭಾರಿಯಾಗಿರಲಿಲ್ಲ. ಆದರೆ ಮರುದಿವಸವೇ ಅವಳಿಗೆ ಪ್ರಮೋಶನ್ ಕೊಟ್ಟು ರಾಯಭಾರತ್ವದ ಸವಲತ್ತುಗಳನ್ನು ಹೆಚ್ಚಿಸಲಾಯಿತು. ಅಮೇರಿಕನ್ ಕೋರ್ಟು ಈ ಗಿಮಿಕ್ ಗಳನೆಲ್ಲ ಒಪ್ಪಿಕೊಳ್ಳಲಿಲ್ಲ. ಹಾಗಾಗಿಯೇ ದೊಡ್ಡ ಗುಲ್ಲೆಬ್ಬಿಸಿ ದೇವಯಾನಿ ದೇಶಬಿಟ್ಟು ಹಾರಬೇಕಾಯಿತು. ಇಲ್ಲೇ ಇದ್ದಿದ್ದರೆ ಇಲ್ಲಿನ ಕೋರ್ಟು ನೀಡಿದ ಶಿಕ್ಷೆಗೊಳಪಡಬೇಕಿತ್ತು. ಇವೆಲ್ಲದರ ಅರಿವಿದ್ದೇ ಪ್ರೀತ್ ತಿಮಿಂಗಿಲವಲ್ಲದೆ ಇನ್ನೇನೂ ಮುಟ್ಟುವವನಲ್ಲ ಎಂದು ನಿರೂಪಿಸಿದನೆ? ಅವನ ಇಲ್ಲಿನ ರಾಜಕೀಯಕ್ಕೆ ಪ್ರವೇಶಿಸುವ ಪ್ರಚಾರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ಸಿಕ್ಕಿತೆ? ಆದರೆ ವಿಷಾದದ ವಿಚಾರವೆಂದರೆ, ಮಹಿಳೆಯೊಬ್ಬಳ ಮಾನ ಹರಾಜಿನ ಘಟನೆ ಎಂದು ಗಂಟಲು ಹರಿದುಕೊಂಡ ಭಾರತೀಯ ಮಾಧ್ಯಮವರ್ಗ, ಒಂದು ಕ್ಷಣಕ್ಕಾದರೂ ಸಮಾಧಾನಿಸಿ ಯೋಚಿಸಲಿಲ್ಲವೇಕೆ? ಆಕೆಯ ಇಡೀ ಸಂಸಾರವನ್ನೇ ನೆಲಸಮ ಮಾಡುವುದಾಗಿ ಬೆದರಿಸುತ್ತಿದ್ದ ಸ್ಥಿತಿವಂತರ ವಿರುದ್ಧ ದನಿ ಎತ್ತಲಿಲ್ಲವೇಕೆ? ಭಾರತೀಯ ವರ್ಗ ಅಸಮಾನತೆ, ಬಡವರ ಮೇಲೆ ಅತ್ಯಾಚಾರ ಎಂದೆಲ್ಲ ಹಲುಬುವ ಯಾರೊಬ್ಬರೂ ಒಂದು ನಿಮಿಷವೂ ಇದೇ ಘಟನೆಯಲ್ಲಿನ ಇನ್ನೊಂದು ಬಿಂದು ಇನ್ನೊಬ್ಬ “ಮಹಿಳೆ” ಸಂಗೀತಳ ದೃಷ್ಟಿಕೋನದಿಂದ ಘಟನೆಯನ್ನು ಪ್ರಸಾರ ಮಾಡಲಿಲ್ಲವೇಕೆ? ದೇವಯಾನಿ ಒಬ್ಬಳೇ ಭಾರತವನ್ನು ಪ್ರತಿನಿಧಿಸುವವಳೇ? ತನ್ನ ದೇಶದಲ್ಲಿಯೇ ಹತ್ತಿಕ್ಕಲಾದ ಬಡ ಮಹಿಳೆಯೊಬ್ಬಳ ನೆರವಿಗೆ ಬರದೆ ಭಾರತದ ಒಟ್ಟೂ ಸಮಾಜ, ಸರ್ಕಾರ ಎಲ್ಲ ಮುಖ ನೋಡಿ ಮಣೆ ಹಾಕಿ ತನ್ನೊಳಗಿನ ದ್ವಂದ್ವವನ್ನು ಜಾಗತಿಕವಾಗಿ ಬಹಿರಂಗಗೊಳಿಸಿತೆನೋ ಎಂಬುದೇ ಸಂಕಟದ ವಿಷಯ.
ನಮಗೆ ಮನೆಗೆಲಸದವರನ್ನು ಜಬರಿನಿಂದ ದುಡಿಸಿಕೊಳ್ಳುವುದು ಮೈ ಉಂಡುಬಿಟ್ಟಿದೆ ಅಲ್ಲವೇ? ದಾಖಲೆ ಕಾಗದದ ಮೇಲೊಂದು ಬರೆಸಿಕೊಂಡು ಕೊಡುವ ಸಂಬಳ ಇನ್ನೇನೋ ಎಂದರೆ ಅದು ದೊಡ್ಡ ವಿಷಯ ಅನಿಸುವುದೇ ಇಲ್ಲ. ನಮ್ಮ ಸಮಾಜ ವ್ಯವಸ್ಥೆಯಲ್ಲಿ ಇದೊಂದು ಕ್ರಿಮಿನಲ್ ಅಪರಾಧವೇ ಅಲ್ಲ. ಹಾಗೆಂದು ಹೇಳಿದರೂ ಭಾರತೀಯ ಮನದಲ್ಲಿ ರಿಜಿಸ್ಟರ್ ಆಗುವುದೇ ಇಲ್ಲ. ಹಾಗೆಲ್ಲ ಸುಲಭವಿದ್ದರೆ, ನಮ್ಮ ಭಾರತೀಯ ಬುದ್ಧಿ ಹೇಗಿದೆಯೆಂದರೆ ಇಲ್ಲಿರುವ ಪ್ರತಿಯೊಬ್ಬರೂ ಒಬ್ಬ ಕೆಲಸದವಳನ್ನು ತಂದಿಟ್ಟುಕೊಂಡುಬಿಡುತ್ತಿದ್ದರು. ಆದರೆ ಸರ್ವರಿಗೂ ಸಮನಾದ ಕಾನೂನು ಎಂಬುವುದು ಬರೀ ಸಂವಿಧಾನದ ಲೊಳಲೊಟ್ಟೆಯಲ್ಲ ಇಲ್ಲಿ. ಅದು ಅನ್ವಯವಾದಾಗ ಅಚ್ಚರಿಯಾಗುತ್ತದೆ. ರಾಯಭಾರಿ ತಪ್ಪು ಮಾಡಿದರೆ ಅರೆಸ್ಟ್ ಆಗಬಾರದು. ಅವಳನ್ನು ಇತರ ಕ್ರಿಮಿನಲ್ ಗಳ ಜೊತೆ ಕೂಡಿಡಬಾರದು! ಶಃರುಖ್ ಖಾನನನ್ನು ವಿಮಾನ ನಿಲ್ದಾಣದಲ್ಲಿ ಬಟ್ಟೆ ಬಿಚ್ಚಿಸಿ ತಪಾಸಣೆ ಮಾಡಬಾರದು. ಮಂತ್ರಿಮಹೋದಯರಿಗೆ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಸಾಗಿಸುತ್ತಿದ್ದರೆ ಬಿಡಬೇಕು. ಇವೆಲ್ಲ ಆಗಿಲ್ಲ ಎಂದರೆ ನಮ್ಮ ಅದೇ ಸಮಾಜ, ದೇಶದಲ್ಲಿ ಸರ್ವರಿಗೂ ಸಮಾನ ಹಕ್ಕು ಎಂದು ಬಡಕೊಳ್ಳುವ ಅದೇ ಪತ್ರಿಕಾವರ್ಗ “ಅಮೆರಿಕೆ ಸರ್ಕಾರದಿಂದ ಭಾರತಕ್ಕೆ ಭಾರೀ ಅವಮಾನ” ಎಂದು ಪ್ರಕಟಿಸಿಬಿಡುತ್ತದೆ. ವಿಮಾನ ನಿಲ್ದಾಣದಲ್ಲಿ ತೊಂಯ್ ಎಂದು ಮೆಟಲ್ ಡಿಟೆಕಟರ್ ಆಡಿಸುವ ಕೆಲಸದವನಿಗೆ ಶಃರುಖ್ ಆದರೇನು, ಶೀಲಾ ದೀಕ್ಷಿತ್ ಆದರೇನು? ಅವನ ಕರ್ತವ್ಯ ಪಾಲಿಸುವುದಷ್ಟೇ ಅವನಿಗೆ ಗೊತ್ತು. ಆದರೆ ಕಂಡಲ್ಲಿ ಕುಂಡೆ ಒರೆಸಲೂ ಆಳುಕಾಳುಗಳ ಕೈ ಬೇಕು ಎಂದು ಬಯಸುವ ಅಧಿಕಾರಶಾಹೀ ವರ್ಗಕ್ಕೆ ಇವೆಲ್ಲ ಅರ್ಥವೇ ಆಗುವುದಿಲ್ಲ. ಹಾಗಾಗಿ ಭಾರತೀಯ ರಾಯಭಾರಿಗಳಿಗೆ, ವೀ ಐ ಪಿ ಗಳಿಗೆ ಅವಮಾನವಾದಾಗ ಅನಿವಾಸಿ ಭಾರತೀಯರು ಹೋರಾಟ ನಡೆಸುವುದಿಲ್ಲ ಎಂದೆಲ್ಲ ಆರೋಪಿಸುವಾಗ ನಾವಿಲ್ಲಿ ಸುಮ್ಮನೆ ನಕ್ಕುಬಿಡುತ್ತೇವೆ. ಎಂದಿಗೆ ಭಾರತೀಯ ಪೇದೆಯೊಬ್ಬ ಭ್ರಷ್ಟ ಮಂತ್ರಿಯೊಬ್ಬನನ್ನು ಜೈಲಿಗೆ ತಳ್ಳಿ ಬದುಕುಳಿಯುತ್ತಾನೋ, ಅಲ್ಲಿನ ವಿಮಾನ ನಿಲ್ದಾಣಗಳಲ್ಲಿ ಘಟಾನುಘಟಿಗಳನ್ನು ಬಿಡದೆ ತಪಾಸಿಸಲಾಗುತ್ತದೋ, ಹಾಗೆ ತಪಾಸಿಸಿದವನು ಕೆಲಸ ಕಳೆದುಕೊಳ್ಳದೆ, ಅವನ ಸಂಸಾರ ಬೀದಿಪಾಲಾಗದೆ, ನಿತ್ಯ ಜೀವನವೆಂಬಂತೆ ಈ ಕ್ರಿಯೆ ಯಾಂತ್ರಿಕವಾಗಿ ಸಾಗುತ್ತದೋ, ಅಲ್ಲಿಯವರೆಗೆ ದೇವಯಾನಿ ಶೋಷಿತಳಾಗಿಯೇ ಉಳಿಯುತ್ತಾಳೆ.






ವೈಶಾಲಿ ಹೆಗಡೆ,
ನೀವು ಲೇಖನವನ್ನು ಬರೆದಿರುವ ದಾಟಿ ಮತ್ತು ಬಳಸಿರುವ ಶಬ್ದಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು ನಿಮ್ಮ ಬರಹದ ಹಿಂದಿನ ಉದ್ದೇಶ ಮತ್ತು ಮನಸ್ಥಿತಿಯ ಅರಿವಾಗುತ್ತದೆ. ಇದು ಅವದಿಯ ಓದುಗನಾಗಿ ನನ್ನ ವೈಯುಕ್ತಿಕ ಅನಿಸಿಕೆ.
” ಭಾರತೀಯ ವರ್ಗ ಅಸಮಾನತೆ, ಬಡವರ ಮೇಲೆ ಅತ್ಯಾಚಾರ ಎಂದೆಲ್ಲ ಹಲುಬುವ ಯಾರೊಬ್ಬರೂ ಒಂದು ನಿಮಿಷವೂ ಇದೇ ಘಟನೆಯಲ್ಲಿನ ಇನ್ನೊಂದು ಬಿಂದು ಇನ್ನೊಬ್ಬ “ಮಹಿಳೆ” ಸಂಗೀತಳ ದೃಷ್ಟಿಕೋನದಿಂದ ಘಟನೆಯನ್ನು ಪ್ರಸಾರ ಮಾಡಲಿಲ್ಲವೇಕೆ? ದೇವಯಾನಿ ಒಬ್ಬಳೇ ಭಾರತವನ್ನು ಪ್ರತಿನಿಧಿಸುವವಳೇ? ”
“ನಮಗೆ ಮನೆಗೆಲಸದವರನ್ನು ಜಬರಿನಿಂದ ದುಡಿಸಿಕೊಳ್ಳುವುದು ಮೈ ಉಂಡುಬಿಟ್ಟಿದೆ ಅಲ್ಲವೇ?”
lEkhana chennagide.
ವಸ್ತುನಿಷ್ಠ ಪ್ರಶ್ನೆಗಳನ್ನೆತ್ತಿದ; ವಾಸ್ತವದ ಒಳ ಅರಿವಿನ ಉಪಯುಕ್ತ ಲೇಖನ.
ಸಂಗೀತಾಳೇ ಅಮೇರಿಕಾ ಸರ್ಕಾರದೊಂದಿಗೆ ಶಾಮೀಲಾಗಿರುವ ಖಳನಾಯಕಿ ಅನ್ನುವಂತೆ ಬಿಂಬಿಸುವುದರಲ್ಲೆ ಮಾಧ್ಯಮಗಳ ಆಸಕ್ತಿ ಕೇಂದ್ರೀಕೃತವಾಗಿದ್ದಂತೆ ಕಂಡು ಬರುತ್ತಿತ್ತು.
ಅದರ ನಡುವೆ ವೈಶಾಲಿ ಹೇಳಿದ ಈ ಇನ್ನೊಂದು ಮುಖದ ಬಗ್ಗೆ ಅಲ್ಲೊಂದು ಇಲ್ಲೊಂದು ವಾಕ್ಯಗಳು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಾದರೂ ಪ್ರಕಟವಾಗುತ್ತಿದ್ದುದೇ ಒಂದು ಸಮಾಧಾನ ಅನ್ನಬೇಕೇನೋ! ಸಾಮಾನ್ಯರ ಮನಸಿನಲ್ಲಿ ಇಂತಹ ಪ್ರಶ್ನೆಗಳೆದ್ದರೂ ಅದು ಅವರವರ ಮನೆಯ ಚಾವಡಿ ಚರ್ಚೆಗೆ ಸೀಮಿತವಾಗಿತ್ತಷ್ಟೆ.
ಅನುಪಮಾ ಪ್ರಸಾದ್.
Very well written article
-Anil
Well said with more objective analysis.
ನೀವು ಪ್ರತಿಪಾದಿಸಿದ ವಿಚಾರಗಳು ಒಪ್ಪತಕ್ಕಂಥ ಸತ್ಯವೇ ,ಆದರೆ ಇದನ್ನು ಸಹಜವಾಗಿ , ಸರಳ ಸಮತೋಲನದ ಮಾತುಗಳ ಮೂಲಕ ಪ್ರತಿಪಾದಿಸಿದ್ದರೆ ಲೇಖನ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು .ಇಲ್ಲಿ ವಿಷಯಕ್ಕಿಂತ ಹೆಚ್ಚು ಆವೇಶವೇ ಎದ್ದು ಕಾಣುತ್ತಿದೆ !
well said
Very well said.
ಈ ಲೇಖನ ವಿಷಯವನ್ನುಇನ್ನಷ್ಟು ತಾಂತ್ರಿಕವಾಗಿ..ರಾಜಕೀಯವಾಗಿ ಅರ್ಥೈಸುವಲ್ಲಿ ಸಹಾಯ ಮಾಡಿದೆ.. ಬರವಣಿಗೆಯ ಶೈಲಿ ಪರಿಣಾಮಕಾರಿಯಾಗಿದೆ.
Nice review mam
ಒಂದಿಷ್ಟು ಬದಲಾದ ದೃಷ್ಟಿಕೋನ, ಘಟನೆಯ ಮೇಲೆ ಬೆಳಕು ಚೆಲ್ಲುತ್ತದೆ