ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಖಿನ್ನತೆ ಮನೋರೋಗವಲ್ಲ…' – ಉಷಾ ರೈ

ಉಷಾ ರೈ

ಖಿನ್ನತೆ ಮನೋರೋಗವಲ್ಲ. ಯಾವುದೋ ಒಂದು ಆತಂಕದ, ನಿರಾಸೆಯ, ನೋವಿನ ಪರಿಸ್ಥಿತಿಗೆ ಮನಸು ತೋರುವ ಪ್ರತಿಕ್ರಿಯೆ. ಅದನ್ನು ಎದುರಿಸಲಾಗದಾಗಿನ ಹಿಂಜರಿತ. ಅಲ್ಪಸ್ವಲ್ಪ ಕಾಲದ ಮಾನಸಿಕ ಪರಿಸ್ಥಿತಿ. ಪ್ರಪಾತಕ್ಕೆ ಬಿದ್ದಾಗಿನಂತಹ ಕರಾಳ ಅನುಭವ. ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ಸಂದರ್ಭದಲ್ಲಿ ಕಾಡುವ ಮಾನಸಿಕ ಹಿನ್ನಡೆತ.
ಈಗಂತೂ ಖಿನ್ನತೆಯಿಂದ ಬಳಲುವವರ ಸಂಖ್ಯೆ ಹೆದರಿಕೆ ಹುಟ್ಟಿಸುವಷ್ಟು ಹೆಚ್ಚಾಗಿದೆ. ಆಧುನಿಕ ಜೀವನದ ಅತಿಯಾದ ಒತ್ತಡಗಳು, ಅತಿಯಾದ ನಿರೀಕ್ಷೆಗಳು, ಕಷ್ಟವನ್ನೇ ಕಾಣದ ಬಾಲ್ಯ ಕಳೆದು ಜೀವನದ ಎಲ್ಲ ಸಿಹಿಕಹಿ ಸತ್ಯಗಳನ್ನು ಎದುರಿಸುವಾಗ ಆಗುವ ಗೊಂದಲ, ಹೆದರಿಕೆ, ನಿರಾಸೆ, ಸೋಲಿನ ಭಾವ ಇದಕ್ಕೆ ಕಾರಣವಾಗಿರಬಹುದು.
ತುಂಬಾ ಯಶಸ್ವೀ ವ್ಯಕ್ತಿಯೂ ತನ್ನೆಲ್ಲಾ ಆತ್ಮವಿಶ್ವಾಸವನ್ನು ಕಳೆದುಕೊಂಡು ಕೆಲವೊಮ್ಮೆ ಖಿನ್ನತೆಯ ಸುಳಿಯಲ್ಲಿ ಸಿಲುಕಿ ಜೀವನದಲ್ಲಿ ಆಸಕ್ತಿಯನ್ನು ಕಳಕೊಳ್ಳುವುದೂ ಇದೆ. ಎಲ್ಲವೂ ಮುಗಿದು ಹೋಯಿತು ಎಂದು ನಿರಾಸೆಯಿಂದ ಕುಸಿದು ಬೀಳುವುದೂ ಇದೆ. ದೇಶಾಂತರ ಹೋಗುವುದೂ ಇದೆ. ಆದರೆ ಇದು ತಾತ್ಕಾಲಿಕ. ಸ್ವಲ್ಪ ಪ್ರಯತ್ನದಿಂದ ಮತ್ತೆ ಮೊದಲಿನಂತಾಗುವುದು ಸಾಧ್ಯವಿದೆ ಎನ್ನುವ ಅರಿವು ಅಗತ್ಯ. ಖಿನ್ನತೆಯನ್ನು ಕಳಚಿ ಹೊರಬರುವಾಗ ಮೊದಲಿಗಿಂತಲೂ ಹೆಚ್ಚು ಆತ್ಮವಿಶ್ವಾಸಿಗಳಾಗುವುದೂ ಇದೆ. ತಾತ್ಕಾಲಿಕ ಕಂದಕದಿಂದ ಎದ್ದು ನಿಲ್ಲುವುದು, ಬಿದ್ದಲ್ಲಿಂದ ಎದ್ದು ನೆಟ್ಟಗೆ ನಿಂತು ಮುಂದಕ್ಕೋಡುವುದು ಮುಖ್ಯ.
ಯಾಕೆ ಖಿನ್ನತೆ ನಮ್ಮನ್ನು ಆವರಿಸಿಕೊಳ್ಳುತ್ತದೆ? ಅದಕ್ಕೆ ಕಾರಣಗಳೇನು?
ತುಂಬಾ ನಿರಾಸೆಯಾದಾಗ; ಅತ್ಮೀಯರಾಗಿದ್ದವರು ದೂರಸರಿದಾಗ; ಪ್ರೀತಿಯವರನ್ನು ಕಳಕೊಂಡಾಗ; ಯಾರಾದರೂ ಮೋಸಮಾಡಿದಾಗ; ಗುಣವಾಗದ ಖಾಯಿಲೆಗೆ ತುತ್ತಾದಾಗ; ಪ್ರೀತಿ ವೈಫಲ್ಯವಾದಾಗ; ಮಾರ್ಕುಗಳು ಕಡಿಮೆಯಾದಾಗ; ತುಂಬಾ ನಿರೀಕ್ಷಿಸಿದ್ದು ಕೈಗೆಟಕದಾಗ; ಗೆಲ್ಲಬೇಕಾದಲ್ಲಿ ಸೋತಾಗ ಹೀಗೆ ಹಲವಾರು ಕಾರಣಗಳು ಖಿನ್ನತೆಗೆ ಕಾರಣವಾಗಬಹುದು. ಇವತ್ತಿನ ಒತ್ತಡಮಯ ಜೀವನವೂ ಕಾರಣವಾಗಬಹುದು.
ಅತಿಯಾದ ನಿರೀಕ್ಷೆ; ತಮ್ಮ ಶಕ್ತಿಗಿಂತಲೂ ಹೆಚ್ಚಿನ ಮಟ್ಟದ ಅಪೇಕ್ಷೆ; ಜೀವನದ ಇನ್ನೊಂದು ಮುಖದ ಪರಿಚಯವಿಲ್ಲದಿರುವುದು; ನಮ್ಮ ಜೀವನದಲ್ಲಿ ಇನ್ನೊಬ್ಬರಿಗೆ ಹೆಚ್ಚು ಆಧ್ಯತೆ ಕೊಟ್ಟು ನಮಗೆ ಅಲ್ಲಿ ಸ್ವಲ್ಪವೂ ಸ್ಪೇಸ್ ಇಲ್ಲವೆನ್ನುವಂತೆ ಬದುಕುವುದು; ಅವರು ನಮ್ಮ ಜೀವನವನ್ನು ಧಿಕ್ಕರಿಸಿ ಬೇರೊಂದು ಜೀವನವನ್ನು ಆರಿಸಿದಾಗ ಆಗುವ ನಿರಾಸೆ; ಇವೆಲ್ಲವೂ ಮಾನಸಿಕ ಖಿನ್ನತೆಗೆ ಮುಖ್ಯ ಕಾರಣಗಳು.
ಮುಖ್ಯವಾಗಿ ಖಿನ್ನತೆ ಉಂಟಾಗುವುದು ‘ಅಹಂ’ಗೆ ಏಟಾದಾಗ ಎನ್ನುವುದು ಸ್ಪಷ್ಟ.
ಖಿನ್ನತೆಗೆ ಒಳಗಾದಾಗ ಏನು ಮಾಡಬೇಕು?
ಅಲ್ಪ ಕಾಲದ ಖಿನ್ನತೆಯಿಂದ ಹೊರಬರುವುದು ಅಷ್ಟು ಕಷ್ಟವಲ್ಲ. ಅವರವರೇ ಪ್ರಯತ್ನಿಸಿ ಅದರಿಂದ ಹೊರಬರಬಹುದು.
ಆದರೆ ತೀವ್ರವಾದ ಖಿನ್ನತೆಗೆ ಒಳಗಾದವರು ಅವರಾಗಿಯೇ ಏನೂ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅವರು ಮಾನಸಿಕ ಸಮತೋಲನವನ್ನು ಕಳಕೊಂಡ ಮಗುವಿನಂತಾಗಿರುತ್ತಾರೆ. ಸ್ವಂತವಾಗಿ ಆಲೋಚಿಸುವ ಶಕ್ತಿಯನ್ನೇ ಕಳಕೊಂಡಿರುತ್ತಾರೆ. ಏನು ಮಾಡಬೇಕೆಂದು ಅವರಿಗೆ ತಿಳಿಯುವುದಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿನೊಳಗೆ ಬಿಟ್ಟಂತಾಗಿನ ಮನಸ್ಥಿತಿ ಅವರದ್ದು. ಅವರನ್ನು ಆ ಖಿನ್ನತೆಯಿಂದ ಹೊರತರುವುದು ಅವರಿಗೆ ಅತೀ ಹತ್ತಿರದವರ ನೆರವಿನಿಂದ ಮಾತ್ರ ಸಾಧ್ಯ.
ಕೆಲವೊಮ್ಮೆ ಒಂದೆರಡು ಅಥವಾ ಮೂರು ನಾಲ್ಕು ದಿನಗಳಲ್ಲಿ ಖಿನ್ನತೆಯಿಂದ ಹೊರಬರಬಹುದು. ಕೆಲವೊಮ್ಮೆ ತಿಂಗಳುಗಟ್ಟಳೆ ಹಿಡಿಯಬಹುದು. ದೀರ್ಘಕಾಲದ ಖಿನ್ನತೆ ಬಹಳ ಕಷ್ಟದ ಪರಿಸ್ಥಿತಿ. ಅವರನ್ನು ಸಂಬಾಳಿಸುವುದು ಅತಿ ಸೂಕ್ಷ್ಮವಾದ ಕೆಲಸ. ಖಿನ್ನತೆಗೆ ಒಳಗಾದವರ ಮನಸು ಬಹಳ ಪೆಡಸಾಗಿರುತ್ತದೆ. ಸ್ವಲ್ಪ ಸಹನೆ ಕಳಕೊಂಡರೆ ಅವರ ಮನಸು ಒಡೆದು ಹೋಗುವಂತಿರುತ್ತದೆ. ಅವರನ್ನು ಸ್ಥಿರವಾಗಿಸಲು ಮನೋವೈದರ ಸಲಹೆ ಮತ್ತು ಔಷಧಿ ಬೇಕಾಗಬಹುದು. ಮನಸ್ಸನ್ನು ರಿಲ್ಯಾಕ್ಸ್ ಮಾಡುವಂತಹ ಔಷಧಿ ತೆಗೆದುಕೊಳ್ಳುವುದರಲ್ಲಿ ಯಾವ ಹಾನಿಯೂ ಇಲ್ಲ. ಅದಕ್ಕಾಗಿ ಕೀಳರಿಮೆ ಅನುಭವಿಸಬೇಕಾಗಿಯೂ ಇಲ್ಲ. ದೇಹಕ್ಕೆ ನೋವಾದಾಗ ಔಷಧಿ ತೆಗೆದುಕೊಳ್ಳುವಂತೆ ಇದೂ ಒಂದು ಮನಸಿಗಾದ ನೋವು ಎಂದು ತಿಳಿದುಕೊಂಡು ಅವರ ಸಲಹೆಯ ಮೇರೆಗೆ ಔಷಧಿ ತೆಗೆದುಕೊಂಡರೆ ಪರಿಹಾರ ಸುಲಭ. ಆದರೆ ಡಾಕ್ಟರನ್ನು ಆರಿಸುವಾಗ ಎಚ್ಚರಿಕೆ ಇರಬೇಕು. ಸಿಕ್ಕಾ ಪಟ್ಟೆ ಮದ್ದು ಕೊಡುವವರಿಗಿಂತ ಖಿನ್ನತೆಗೆ ಒಳಗಾದವರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ಅವರನ್ನು ಆತ್ಮೀಯತೆಯಿಂದ ಮಾತನಾಡಿಸಿ ಅವರಲ್ಲಿ ಧೈರ್ಯ ತುಂಬಿಸಿ ಎಷ್ಟು ಅಗತ್ಯವೋ ಅಷ್ಟು ಮಾತ್ರ ಮದ್ದು ಕೊಡುವಂತವರಾಗಬೇಕು.
ಖಿನ್ನತೆಗೆ ಒಳಗಾದವರು ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ಯಾರು ಏನು ಹೇಳಿದರೂ ಅದೇ ಸರಿ ಎನ್ನುವಷ್ಟು ಅಶಕ್ತವಾಗಿರುತ್ತೆ ಮನಸು. ಕೆಲವೊಮ್ಮೆ ಸುಮ್ಮಸುಮ್ಮನೇ ಅಳ್ತಾರೆ; ಶತಪಥ ತಿರುಗಾಡುತ್ತಾರೆ. ನಿಂತಲ್ಲಿ ನಿಲ್ಲೋದಿಲ್ಲ. ನಿದ್ದೆ ಬರುವುದಿಲ್ಲ. ವಿಪರೀತ ಹಸಿವು. ಆಚೆ ಈಚೆ ಹೋಗಿ ಬರುವಾಗ ಸಿಕ್ಕಿದ್ದನ್ನು ತಿನ್ನುತ್ತಾರೆ. ಮನಸು ಒಂದೇ ಕಡೆ ನಿಲ್ಲುವುದೇ ಇಲ್ಲ. ಆತ್ಮವಿಶ್ವಾಸವಂತೂ ಇಲ್ಲವೇ ಇಲ್ಲ. ಪೂರ್ತಿ  ನೆಲಕಚ್ಚಿರುತ್ತದೆ. ಸದಾ ತಾನು ಏನೋ ತಪ್ಪು ಮಾಡಿದ್ದೇನೆ ಎಂದು ಅಲವತ್ತು ಕೊಳ್ತಾರೆ. ಜೀವನವೇ ಬೇಡವೆನ್ನುವಷ್ಟು ನಿರಾಸಕ್ತಿ ಬೆಳೆಸಿಕೊಂಡಿರುತ್ತಾರೆ. ಕೆಲಸ ಮಾಡಲು ಮನಸ್ಸಿಲ್ಲ. ಡಾಕ್ಟರ ಹತ್ತಿರ ಹೋಗಲು ಕೇಳುವುದಿಲ್ಲ. ಮದ್ದು ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಕೆಲವೊಮ್ಮೆ ಅವರಿಗೆ ಆತ್ಮಹತ್ಯೆಯ ಯೋಚನೆಯೂ ಬರುತ್ತದೆ. ಯಾವುದಕ್ಕೂ ಧೈರ್ಯವೇ ಇರುವುದಿಲ್ಲ. ಮಾತೂ ತೊದಲುತ್ತದೆ. ನಗು ಮಾಯವಾಗುತ್ತದೆ. ತಾನಿನ್ನು ಯಾವುದಕ್ಕೂ ಪ್ರಯೋಜನವಿಲ್ಲ ಎನ್ನುವ ನೋವಿನಿಂದ ಅಳುತ್ತಾರೆ. ಎಲ್ಲರೂ ತನ್ನನ್ನು ನೋಡಿ ನಗುತ್ತಾರೆ ಎನ್ನುವ ಕೀಳರಿಮೆಗೆ ಒಳಗಾಗುತ್ತಾರೆ. ಸ್ನೇಹಿತರನ್ನು ನೋಡಲೂ ಹಿಂಜರಿಯುತ್ತಾರೆ. ಈ ಸಮಯದಲ್ಲಿ ಎಲ್ಲದಕ್ಕಿಂತ ಮುಖ್ಯವಾಗಿ ಬೇಕಾದದ್ದು ಮನೆಯವರ ಸಹಕಾರ ಮತ್ತು ನೆರವು. ಅವರಿಗೆ ಒತ್ತಾಸೆಯಾಗಿ ನಿಲ್ಲಬೇಕಾದವರು ಹತ್ತಿರದ ಬಂಧುಗಳು. ಕುಸಿದ ಆತ್ಮವಿಶ್ವಾಸವನ್ನು ಅವರಲ್ಲಿ ಪುನಹ ತುಂಬಿಸುವ ಆತ್ಮೀಯರು. ಖಿನ್ನತೆಗೆ ಒಳಗಾದವರ ಮಾನಸಿಕ ವ್ಯಾಕುಲತೆಯ ಆಳದ ಅರಿವು ಮುಖ್ಯ. ಅವರನ್ನು ಆ ಕಂದಕದಿಂದ ಹೊರಗೆಳೆಯುವ ಆತ್ಮವಿಶ್ವಾಸವೂ ಇರಬೇಕು. ಆದರೆ ಅವರ ನಡೆವಳಿಕೆಯಿಂದ ಎಲ್ಲರಿಗೂ ಹಿಂಸೆಯಾಗುವುದರಿಂದ ಎಲ್ಲರೂ ಅವರಿಂದ ದೂರ ಸರಿಯಲು ನೋಡುತ್ತಾರೆ.

ಖಿನ್ನತೆಗೆ ಒಳಗಾದವರನ್ನು ಹೊರಗೆ ಎಳೆಯುವುದು ಹೇಗೆ?
ಖಿನ್ನತೆಯಿಂದ ನರಳುತ್ತಿರುವವರ ಜೊತೆಗೆ ಸದಾ ಯಾರಾದರೂ ಇರಲೇಬೇಕು. ಯಾಕೆಂದರೆ ಅವರಲ್ಲಿ ಉಂಟಾಗಿರುವ ಮಾನಸಿಕ ವ್ಯಾಕುಲತೆ ಅವರಿಂದ ಏನನ್ನಾದರೂ ಮಾಡಿಸಬಹುದು. ತನ್ನನ್ನೇ ದಂಡಿಸಿಕೊಳ್ಳುವುದು ಅವರ ಮೊದಲ ಪ್ರತಿಕ್ರಿಯೆ. ಆಗ ಅವರಲ್ಲಿ ಜೀವನ ಪ್ರೀತಿ ಹುಟ್ಟಿಸಿ ಆತ್ಮವಿಶ್ವಾಸದ ಕಿಡಿ ಹಚ್ಚುವುದು ಅತೀ ಅಗತ್ಯವಾದ ಕೆಲಸ. ‘ಇದೆಲ್ಲಾ ಕ್ಷಣಿಕವಾದ ಮಾನಸಿಕ ಕುಸಿತ. ಅಲ್ಲಿಂದ ಎದ್ದು ನಿಲ್ಲುವ ಪ್ರಯತ್ನ ಮಾಡಲೇ ಬೇಕು. ಹಳೆಯದನ್ನು ಮರೆತು ಹೊಸ ವ್ಯಕ್ತಿಯಾಗಿ ಎದ್ದು ನಿಲ್ಲಬೇಕು. ಅದು ನಿನ್ನಿಂದ ಸಾಧ್ಯ’ ಎನ್ನುವುದನ್ನು ಅವರಿಗೆ ಪದೇ ಪದೇ ಹೇಳುತ್ತಲೇ ಇರಬೇಕು. ಅವರಲ್ಲಿ ಸಕಾರಾತ್ಮಕ ಯೋಚನೆಗಳನ್ನು ಹುಟ್ಟಿಸಬೇಕು. ಜೀವನದಲ್ಲಿ ಎಲ್ಲವೂ ಎಣಿಸಿದಷ್ಟು ಸುಲಭವಾಗಿರುವುದಿಲ್ಲ. ಸೋಲು ಗೆಲುವು, ಆಸೆ, ನಿರಾಸೆ, ಕಷ್ಟ ನಷ್ಟ ಇದ್ದುದೇ ಅದನ್ನು ಧೈರ್ಯದಿಂದ ಎದುರಿಸಬೇಕು ಎನ್ನುವ ಸಲಹೆಗಳನ್ನು ಕೊಡುತ್ತಿರಬೇಕು. ಆಗುವುದೆಲ್ಲ ಒಳ್ಳೆಯದಕ್ಕೇ ಎಲ್ಲಾ ಕಷ್ಟಗಳ ಹಿಂದೆ ಒಂದು ಸಂತೋಷದ ಎಳೆಯಿದೆ ಎನ್ನುವುದನ್ನು ತಿಳಿಸಿಕೊಡಬೇಕು. ಯಾವುದಾದರೂ ಹವ್ಯಾಸ ಮುಖ್ಯವಾಗಿ ದೈಹಿಕ ವ್ಯಾಯಾಮ- ಜಿಮ್, ಸ್ವಿಮ್ಮಿಂಗ್, ಟೆನ್ನಿಸ್ ಹೀಗೆ ಯಾವುದಾದರೂ ಅವರು ಆಡುತ್ತಿದ್ದ ಕ್ರೀಡೆಯಲ್ಲಿ ಅವರನ್ನು ತೊಡಗಿಸುವಂತೆ ಮಾಡಬೇಕು. ಜೀವನಪ್ರೀತಿ ತುಂಬಿಸಬೇಕು. ಅವರ ಮೇಲೆ ನಮಗಿರುವ ಪ್ರೀತಿ ಮತ್ತು ನಂಬಿಕೆಯನ್ನು ಪದೇ ಪದೇ ಹೇಳುತ್ತಿರಬೇಕು. ಅವರಿಗೆ ಇಷ್ಟವಾದ ಪೌಷ್ಟಿಕ ಆಹಾರ ಕೊಡಬೇಕು. ಹಣ್ಣು ಹಂಪಲುಗಳ ರಸ ಅಗತ್ಯ. ಖಿನ್ನತೆಗೆ ಒಳಗಾದವರನ್ನು ಸುಧಾರಿಸುವುದು ಬಹಳ ಕಷ್ಟದ ಕೆಲಸವಾದರೂ ಅವರ ಮೆದುವಾಗಿರುವ ಮನಸ್ಸನ್ನು ಗಟ್ಟಿಗೊಳಿಸುವ ಕೆಲಸ ಮಾಡಲೇ ಬೇಕು. ನಿಯಮಿತವಾಗಿ ಅದಕ್ಕೆಂದೇ ಇರುವ ಔಷಧಿ ತೆಗೆದುಕೊಳ್ಳಲೇ ಬೇಕಾಗುತ್ತದೆ. ಮನಸ್ಸನ್ನು ಶಾಂತವಾಗಿರಿಸುವ ಇಂತಹ ಮದ್ದುಗಳಿಂದ ತೊಂದರೆ ಏನೂ ಆಗದು. ಕೆಲವೊಂದು ಮದ್ದುಗಳಿಂದ ಸೈಡ್ ಎಫೆಕ್ಟ್ ಇದ್ದರೂ ಮದ್ದು ಬಿಟ್ಟ ನಂತರ ಎಲ್ಲ ಸರಿ ಹೋಗುತ್ತದೆ ಎನ್ನುವ ಧೈರ್ಯ ಅವರಲ್ಲಿ ತುಂಬಿಸುತ್ತಿರಬೇಕು. ಮುಖ್ಯವಾಗಿ ಅವರಿಗೆ ಬೇಕಾಗಿರುವುದು ಅವರ ಪ್ರೀತಿಯವರಿಂದ ದೊರೆಯುವ ಮಾನಸಿಕ ಸ್ಥೈರ್ಯ. ಇದು ಅವರನ್ನು ಆ ಮಾನಸಿಕ ಸ್ಥಿತಿಯಿಂದ ಖಂಡಿತವಾಗಿಯೂ ಹೊರ ತರುತ್ತದೆ.
ಯೋಗದಲ್ಲಿ ಆಸಕ್ತಿಯಿದ್ದರೆ ಅದೂ ಒಳ್ಳೆಯದು. ದೈಹಿಕವಾಗಿ ಹಗುರ ಮಾಡುವ ಆಸನಗಳನ್ನು ಮಾಡಬಹುದು. ಆದರೆ ಕಣ್ಣು ಮುಚ್ಚಿ ಮಲಗಿ ಮನಸ್ಸನ್ನು ಹಗುರ ಮಾಡುವ ಶವಾಸನ ಮಾನಸಿಕವಾಗಿ ದುರ್ಬಲರಾದವರಿಗೆ ಅಷ್ಟು ಒಳ್ಳೆಯದಲ್ಲ. ಮೆಡಿಟೇಶನ್ನಲ್ಲಿ ಮನಸನ್ನು ಕೇಂದ್ರೀಕರಿಸುವುದು ಕಷ್ಟವಾಗಬಹುದು. ಯಾಕೆಂದರೆ ಆಗ ಅವರ ಮನೋಪಠಲದ ಮುಂದೆ ಅವರು ಈ ಪರಿಸ್ಥಿತಿಗೆ ಹೋಗಲು ಕಾರಣವಾದ ಘಟನೆಗಳು ಪದೇ ಪದೇ ಹಾದುಹೋಗುವ ಸಾಧ್ಯತೆ ಇರುವುದರಿಂದ ನೋವಿನ ಗಾಯ ಆಳವಾಗುತ್ತಾ ಹೋಗುತ್ತದೆ. ಆ ಗಾಯ ವಾಸಿಯಾಗೋದು ಕಷ್ಟವಾಗುತ್ತದೆ. ಅವರು ಆ ಘಟನೆಯನ್ನು ಮರೆಯುವಂತೆ ಮಾಡುವುದು ಬಹಳ ಆಗತ್ಯ ಎನ್ನುವುದನ್ನು ಮರೆಯಬಾರದು. ದೀರ್ಘ ಉಸಿರಾಟದ ವ್ಯಾಯಮ ಒಳ್ಳೆಯದು. ಒಳ್ಳೆಯ ಪುಸ್ತಕಗಳನ್ನು ಓದುವುದು ಸಾಧ್ಯವಾದರೆ ಅದು ಬಹಳ ಸಹಾಯಕವಾಗುತ್ತದೆ. ಆದರೆ ಅವರಲ್ಲಿ ಏಕಾಗ್ರತೆ ಕಡಿಮೆಯಾಗಿರುವುದರಿಂದ ಓದು ಕಷ್ಟವಾಗಬಹುದು. ಆದರೂ ಓದುವ ಪ್ರಯತ್ನ ಮಾಡುವುದು ಅಗತ್ಯ. ಒಳ್ಳೆಯ ಸಂಗೀತ ಕೇಳಬಹುದು. ಪ್ರಶಾಂತ ಸ್ಥಳದಲ್ಲಿ ಮುಂಜಾನೆಯ ವಾಕಿಂಗ್ ಮನಸಿಗೆ ಮುದನೀಡುತ್ತದೆ.
ಮಾನಸಿಕವಾಗಿ ಹಗುರವಾಗುವುದು ಇಂತಹ ಪರಿಸ್ಥಿತಿಯಲ್ಲಿ ಬಹಳ ಅಗತ್ಯ ಎನ್ನುವುದನ್ನು ಮರೆಯ ಬಾರದು. ಹಾಗಾಗಿ ಅವರಿಗೆ ಇಷ್ಟವಾಗುವ ಕೆಲಸಗಳನ್ನು ಮಾಡುವುದು ಒಳ್ಳೆಯದು. ಹೊರಗಿನವರ ಕೌನ್ಸೆಲ್ಲಿಂಗ್ ಅಗತ್ಯವಾದರೂ ಅವರ ಆತ್ಮೀಯರು ಪ್ರೀತಿಯಿಂದ ಆಡುವ ಸಾಂತ್ವನದ ನುಡಿಗಳು ಹೆಚ್ಚು ಪರಿಣಾಮಕಾರಿ.
ಕಳೆದ ವರ್ಷ ನಾನೂ ಇಂತಹ ಒಂದು ಘಟನೆಗೆ ಸಾಕ್ಷಿಯಾಗಿದ್ದೆ. ಹಾಗಾಗಿಯೇ ಇದು ನನ್ನ ಅನುಭವದ ಮಾತು. ಮಾನಸಿಕ ಖಿನ್ನತೆಗೆ ಒಳಗಾದವರ ನೋವಿನ ಅನುಭವ ನನಗಿದೆ. ನನ್ನ ಮಗ ಇಂತಹ ಒಂದು ನೋವಿಗೆ ಬಲಿಯಾಗಿದ್ದ. ಅವನನ್ನು ಸರಿಮಾಡಲು ಎರಡು ಮೂರು ತಿಂಗಳು ನಾನು ಮಾಡಿದ ಪ್ರಯತ್ನ ಸರಿಯಾದ ಫಲಕೊಟ್ಟಿದೆ.
ನಾಲ್ಕು ತಿಂಗಳ ಹಿಂದೆ ಅಮೇರಿಕಾದಿಂದ ಅವನೊಂದು ಇ ಮೈಲ್ ಕಳುಹಿಸಿದ್ದ.
‘ಅಮ್ಮ, ಕಳೆದ ವರ್ಷ ಈ ಸಮಯದಲ್ಲಿ ನಾನು ಹೇಗಿದ್ದೆ? ಸಂಪೂರ್ಣ ನೆಲಕಚ್ಚಿದ್ದೆ. ಆದರೆ ಇವತ್ತು ನಾನು ಭಾರತದ ತಂಡದ ಕ್ಯಾಪ್ಟನ್ ಆಗಿ ರಾಕೆಟ್ ಬಾಲ್ ಆಡಲು ವರ್ಲ್ಡ್  ಚಾಂಪಿಯನ್ ಶಿಪ್ ಗೆ ಹೋಗುತ್ತಿದ್ದೇನೆ. ಚೆನ್ನಾಗಿ ಆಡುವ ತಾಕತ್ತು ನನಗೆ ಪುನಹ ಬಂದಿದೆ. ಮೊದಲಿಗಿಂತಲೂ ಹೆಚ್ಚಿನ ಆತ್ಮವಿಶ್ವಾಸದಿಂದ ಕೆಲಸ ಮಾಡುವಂತಾಗಿದ್ದೇನೆ. ಜೀವನದಲ್ಲಿ ದೃಢವಾಗಿ ಹೆಜ್ಜೆ ಹಾಕುವಂತಾಗಿದ್ದೇನೆ. ಇದೆಲ್ಲಾ ಸಾಧ್ಯವಾದದ್ದು ನಿಮ್ಮಿಂದ. ಎಲ್ಲರೂ ಕೈಬಿಟ್ಟಾಗ ನೀವು ಆ ದಿನಗಳಲ್ಲಿ ನನ್ನ ಜೊತೆಗಿದ್ದು ನನ್ನಲ್ಲಿ ದೈರ್ಯ ತುಂಬಿಸಿದ್ದರಿಂದ ಇದು ಸಾಧ್ಯವಾದದ್ದು. ಇಲ್ಲದಿದ್ದರೆ ನಾನು ಆ ಮಾನಸಿಕ ಕುಸಿತದಿಂದ ಮೇಲೆ ಬರುವುದು ಸಾಧ್ಯವಾಗುತ್ತಿರಲಿಲ್ಲ. ಥಾಂಕ್ಯೂ ಅಮ್ಮ. ಐ ಲವ್ ಯೂ’
ಈ ಮೈಲ್ ನೋಡಿ ನನ್ನ ಕಣ್ಣು ತುಂಬಿ ಬಂದಿತ್ತು. ಅವನು ಚಿಕ್ಕಂದಿನಿಂದಲೂ ಉತ್ತಮ ಸ್ಪೋರ್ಟ್ಸ್ ಮ್ಯಾನ್, ಸ್ವಿಮ್ಮರ್. ಬುದ್ಧಿವಂತ ಹುಡುಗ. ಶಾಲಾ ಕಾಲೇಜುಗಳಲ್ಲಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದವನು. ಕೆಲಸ ಮಾಡುವಲ್ಲೂ ಹೆಸರು ತೆಗೆದುಕೊಂಡವನು. ತುಂಬಾ ಆತ್ಮವಿಶ್ವಾಸವಿದ್ದವನು. ಎಲ್ಲರಿಗೂ ಆದರ್ಶವಾಗಿದ್ದವನು. ಆದರೆ ಅವನು ಮದುವೆಯಾಗ ಬೇಕಾಗಿದ್ದ ಹುಡುಗಿ ಕೈಕೊಟ್ಟಾಗ ಅವನ ಅಹಂಗೆ ಏಟಾಗಿತ್ತು. ತುಂಬಾ ಖಿನ್ನತೆಗೆ ಒಳಗಾಗಿದ್ದ. ಮೂರು ತಿಂಗಳು ಅವನ ಅತ್ಯಂತ ಪ್ರೀತಿಯ ಆಟ ರಾಕೆಟ್ ಬಾಲ್, ಕೆಲಸ, ಸ್ನೇಹಿತರು ಎಲ್ಲರಿಗೂ ಬೆನ್ನು ಹಾಕಿದ್ದ. ಅವನನ್ನು ಖಿನ್ನತೆಯಿಂದ ಹೊರಗೆಳೆದು ಅವನನ್ನು ಪುನಹ ಅವನ ಆಟ, ಕೆಲಸ, ಸ್ನೇಹಿತರ ಕಡೆಗೆ ಮುಖಮಾಡಿಸುವುದರಲ್ಲಿ ನನ್ನ ಸಹನೆಯ ಪರೀಕ್ಷೆಯೂ ಆಗಿತ್ತು. ಆದರೆ ನನ್ನ ಪ್ರಯತ್ನ ಸಫಲವಾಗಿತ್ತು. ಈಗ ಅವನು ಮೊದಲಿಗಿಂತಲೂ ಹೆಚ್ಚಿನ ಆತ್ಮವಿಶ್ವಾಸ ಉಳ್ಳವನಾಗಿದ್ದಾನೆ. ಜೀವನದ ಕಡೆಗಿನ ಅವನ ದೃಷ್ಟಿಯೇ ಬದಲಾಗಿದೆ. ಕೆಲಸದ ಜೊತೆಗೆ ಅಮೇರಿಕಾದ ಒಂದು ಉತ್ತಮ ವಿಶ್ವವಿದ್ಯಾಲದಲ್ಲಿ ಎಂ.ಬಿ.ಎ. ಮಾಡುತ್ತಿದ್ದಾನೆ. ಒಂದು ವರ್ಷವಾದರೂ ಮದ್ದು ತೆಗೆದುಕೊಳ್ಳಬೇಕಾಗ ಬಹುದು, ಬಿಡುವಾಗ ಕಡಿಮೆ ಕಡಿಮೆ ಮಾಡಿ ಬಿಡಬೇಕು ಒಮ್ಮೆಲೇ ಬಿಡಬಾರದು ಎಂದು ಡಾಕ್ಟರು ಹೇಳಿದ್ದರೂ ಮೂರೇ ತಿಂಗಳಲ್ಲಿ ಅವನು ಮಾತ್ರೆಗಳನ್ನು ಬಿಡುವುದು ಸಾಧ್ಯವಾಗಿದೆ. ಇದು ಅವನು ಕಳಕೊಂಡಿದ್ದ ಮಾನಸಿಕ ಶಕ್ತಿಯನ್ನು ಪುನಹ ಪಡೆದುಕೊಂಡಿರುವುದರಿಂದ ಮಾತ್ರ ಸಾಧ್ಯವಾದದ್ದು.
ಮನಸಿಗಿಂತ ಮೃದುವಾದದ್ದು, ಮನಸಿಗಿಂತ ಶಕ್ತಿಯುತವಾದದ್ದು ನಮ್ಮ ದೇಹದಲ್ಲಿ ಬೇರೆ ಯಾವ ಅಂಗವೂ ಇಲ್ಲ. ಮನಸಿಗೆ ಆಯ ಆಕಾರವಿಲ್ಲದಿರಬಹುದು ಆದರೆ ಅದರಷ್ಟು ಆಳ ಮತ್ತು ವಿಸ್ತಾರವಾಗಿರುವುದು, ಶಕ್ತಿಯುತವಾಗಿರುವುದು ಏನೂ ಇಲ್ಲ. ಅದೊಂದು ಬ್ರಹ್ಮಾಂಡದಂತೆ. ನಮ್ಮೆಲ್ಲ ಸೋಲು ಗೆಲವುಗಳ ಹರಿಕಾರ ನಮ್ಮ ಮನಸ್ಸೇ. ದೇಹವನ್ನು ದುರ್ಬಲಗೊಳಿಸುವುದು, ಶಕ್ತಿಯುತವನ್ನಾಗಿಸುವುದು ಎಲ್ಲವೂ ಮನಸೇ. ಯಾವುದೇ ಸಂದರ್ಭದಲ್ಲಿ ಮನಸ್ಸನ್ನು ಸೋಲಲು ಬಿಡಬಾರದು.
ಇದರಿಂದಾಗಿಯೇ ನಾನು ಈ ಮಾತನ್ನು ಒತ್ತಿ ಒತ್ತಿ ಹೇಳುತ್ತಿದ್ದೇನೆ. ಖಿನ್ನತೆ ಒಂದು ಮನೋರೋಗವಲ್ಲ ಅಲ್ಪಕಾಲದ ಮನಸಿನ ಗೊಂದಲ, ಅಸ್ಪಷ್ಟತೆ, ಹಿಂಜರಿತ. ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಅದರಿಂದ ಹೊರಬರುವುದು ಕಷ್ಟವಲ್ಲ. ಹಾಗೇ ಬಿಟ್ಟರೆ ಮನೋರೋಗಕ್ಕೆ ತಿರುಗಬಹುದು ಎನ್ನುವ ಅರಿವು ಅಗತ್ಯ.
ಭಾರತದಲ್ಲಿ ಮನೋವೈದ್ಯರ ಹತ್ತಿರ ಹೋಗುವುದೆಂದರೆ ಒಂದು ರೀತಿಯ ಅಳುಕು ಈಗಲೂ ಇದೆ. ಆ ಅಳುಕು ಇರಬೇಕಿಲ್ಲ. ಖಿನ್ನತೆ ಒಂದು ರೀತಿಯಲ್ಲಿ ಪಕ್ಕೆಲುಬು ಮುರಿದಂತೆ. ನೋವು ವಿಪರೀತ. ಆದರೆ ಅದಕ್ಕೆ ಪರಿಹಾರ ವಿಶ್ರಾಂತಿ ಮತ್ತು ನೋವು ನಿವಾರಕ ಔಷಧಗಳು ಮಾತ್ರ. ದಿನಕಳೆದಂತೆ ಎಲುಬುಗಳು ತನ್ನಷ್ಟಕ್ಕೆ ಕೂಡಿಕೊಳ್ಳುತ್ತವೆ. ಅಪಘಾತವಾದಾಗ ಎಲುಬುಗಳು ಮುರಿಯುತ್ತವೆ. ಕೂಡಲೇ ಅದನ್ನು ಜೋಡಿಸುವ ಕೆಲಸವೂ ನಡೆಯುತ್ತದೆ. ಸರಿಯಾದ ಆರೈಕೆಯಲ್ಲಿ ಮೂರು ನಾಲ್ಕು ತಿಂಗಳಲ್ಲಿ ಎಲುಬು ಮುರಿದಿದೆ ಎನ್ನುವ ನೆನಪನ್ನೂ ಅಳಿಸಿ ಹಾಕುವಷ್ಟು ಚೆನ್ನಾಗಿ ಕೂಡಿಕೊಳ್ಳುತ್ತದೆ. ಹಾಗೇ ಖಿನ್ನತೆ ಮನಸಿನ ಒಂದು ಪದರಕ್ಕೆ ಆಗುವ ಅಪಘಾತ. ಫ್ರ್ಯಾಕ್ಚರ್. ಅದನ್ನು ಸರಿಪಡಿಸಲು ವೈದ್ಯರ ಅಗತ್ಯವಿದ್ದರೆ ಹೋಗಲೇ ಬೇಕು. ಅವರ ಸಹಾಯದಿಂದ ಶೀಘ್ರ ಪರಿಹಾರ ಸಾಧ್ಯ.
ಇವತ್ತಿನ ಒತ್ತಡಮಯ ಜೀವನದಲ್ಲಿ ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾದಷ್ಟು ಮನೋವೈದ್ಯರೂ ಹೆಚ್ಚಾಗುತ್ತಿದ್ದಾರೆ. ಹಣ ಮಾಡುವುದೇ ಕೆಲವರ ಗುರಿಯಾಗಿರುತ್ತಿದೆ ಎನ್ನುವುದನ್ನೂ ಮರೆಯಲಾಗದು. ಒಂದು ಗಂಟೆ ಕೌನ್ಸಿಲ್ಲಿಂಗ್ ಮಾಡಿದರೆ ರೂ. ಸಾವಿರದಿಂದ ಮೂರು ಸಾವಿರದ ವರೆಗೆ ಚಾರ್ಜ್ ಮಾಡುವವರೂ ಇದ್ದಾರೆ. ಏನೂ ಹಣ ತೆಗೆದುಕೊಳ್ಳದೆ ಸೇವಾ ಮನೋಭಾವದಿಂದ ಸಮರ್ಪಕವಾಗಿ ಆಪ್ತ ಸಲಹೆ ನೀಡುವವರೂ ಇದ್ದಾರೆ. ವೈದ್ಯರ ಹತ್ತಿರ, ಕೌನ್ಸಿಲ್ಲಿಂಗ್ ಮಾಡುವವರ ಹತ್ತಿರ ಹೋಗುವಾಗ ಈ ಅರಿವು ಇರಲಿ.
ಇವತ್ತಿನ ಒತ್ತಡಮಯ ಜೀವನದಲ್ಲಿ ಯಾವುದೇ ನಿರಾಸೆ, ನೋವುಗಳು ಹೃದಯಕ್ಕೆ ತಟ್ಟಿದರೂ ಅದನ್ನು ಮನಸಿನಿಂದ ದೂರವಿಡುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಎಷ್ಟು ಅಲೆಗಳು ಬಂದು ಅಪ್ಪಳಿಸಿದರೂ ಎಲ್ಲೂ ನೀರು ನಿಲ್ಲದೆ ನೀರು ಹರಿದು ಹೋಗುವ ನಯವಾದ ಬಂಡೆಕಲ್ಲಿನಂತೆ ಮನಸನ್ನು ಇಟ್ಟು ಕೊಂಡರೆ ಮನಸಿನ ಕ್ಷೇಮವನ್ನು ಕಾಯ್ದುಕೊಳ್ಳಬಹುದು. ಇದು ಸುಲಭವಲ್ಲ ಆದರೆ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ.
 

‍ಲೇಖಕರು G

17 February, 2014

10 Comments

  1. ವಸುಧೇಂದ್ರ

    ಅತ್ಯಂತ ಉಪಯುಕ್ತ ಲೇಖನ. ಖಿನ್ನತೆಯಿಂದ ಬಳಲುವವರಿಗೆ ಸಾಕಷ್ಟು ಮಾರ್ಗದರ್ಶನವನ್ನು ನೀವು ಕೊಟ್ಟಿದ್ದೀರ. ಅದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು.

    • Anonymous

      Sir pease ur contact number

  2. Shivaram

    Thank you so much, Could you please share us some contact numbers for the consultants if you know any

  3. sunil rao

    thanku mam
    need of the hour.

  4. Usha Rai

    ಯಾರಿಗಾದರೂ ಉಪಯೋಗವಾದರೆ ಈ ಲೇಖನ ಬರೆದುದು ಸಾರ್ಥಕ. ನನಗೆ ಅನುಭವವಾದಂತೆ ಡಾ. ಸಿ. ಆರ್. ಚಂದ್ರಶೇಖರ್ ಒಬ್ಬ ಉತ್ತಮ ಸಂವೇದನಾಶೀಲ ಡಾಕ್ಟರ್. ಅವರ ಸಾಂತ್ವನ ಕೇಂದ್ರದಲ್ಲಿ ಹಣಕ್ಕೆ ಬೆಲೆ ಇಲ್ಲ. ಫ್ರಿ ಸರ್ವಿಸ್.

  5. ushakattemane

    ಉಪಯುಕ್ತ ಲೇಖನ. ’ಮನಸಿಗಿಂತ ಮೃದುವಾದದ್ದು, ಮನಸಿಗಿಂತ ಶಕ್ತಿಯುತವಾದದ್ದು ನಮ್ಮ ದೇಹದಲ್ಲಿ ಬೇರೆ ಯಾವ ಅಂಗವೂ ಇಲ್ಲ’ ನಿಜ. ನಾನು ಕೂಡಾ ಒಮ್ಮೊಮ್ಮೆ ಮಾನಸಿಕವಾಗಿ ಕುಸಿಯುವುದುಂಟು..ಹಾಗೆ ಅನ್ನಿಸಿದ ಕೂಡಲೇ ನನಗೆ ಗೊತ್ತಾಗುತ್ತದೆ; ನಾನು ಯೋಗ ,ಮೆಡಿಟೇಷನ್ ಗಳನ್ನು ನಿಯಮಿತವಾಗಿ ಮಾಡುತ್ತಿಲ್ಲವೆಂದು..ತಕ್ಷಣ ಮೌನಕ್ಕೆ ಜಾರಿಬಿಡುತ್ತೇನೆ.ಮುಂಜಾನೆಯೇ ಎದ್ದು ಒಂದು ಘಂಟೆ’ ಸರ್ವಸಾರ ಮೆಡಿಟೇಷನ್’ ಮಾಡುತ್ತೇನೆ. ಕಾಲುಘಂಟೆ ಬಿಟ್ಟು..ಹನ್ನೆರಡು ಸೂರ್ಯನಮಸ್ಕಾರ…ಎರಡೇ ದಿನಗಳಲ್ಲಿ ಮನಸ್ಸೆಲ್ಲಾ ಖುಷಿ..ಖುಷಿ..ಗಾಳಿಯಲ್ಲಿ ತೇಲಾಡುತ್ತಿರುವ ಅನುಭವ…

  6. kiran desai

    very nice article. helps a lot.

  7. Anonymous

    ನಿಜಕ್ಕೂ ಚೆನ್ನಾಗಿದೆ

  8. satish

    ಆತ್ಮೀಯರೊಬ್ಬರು ಪಕ್ಕದಲ್ಲಿ ಕುಳಿತು ಹಿತವಚನ ಹೇಳಿದಂತಿದೆ ಈ ಲೇಖನ. ಮನಸ್ಸಿಗೆ ತುಂಬಾ ಹತ್ತಿರವಾಯಿತು. ಧನ್ಯವಾದಗಳು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading