ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಖಾನೇಷುಮಾರಿ' ಬಿಡುಗಡೆಯಾಗಲಿದೆ..

ಪ್ರಶಾಂತ್ ಹುಲ್ಕೋಡ್ ಮೂಲಕ-

ಮಲೆನಾಡ ಜನ- ಜೀವನದ ಕುರಿತು ಈವರೆಗೆ ಬಂದಿರುವ ಪುಸ್ತಕಗಳ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವ ಹೊಸ ಪುಸ್ತಕವೊಂದು ಸದ್ಯದಲ್ಲಿಯೇ ನಿಮ್ಮ ಕೈಲಿರಲಿದೆ.

ಮುಂದಿನ ತಿಂಗಳ ಹೊತ್ತಿಗೆ ‘ಖಾನೇಷುಮಾರಿ’ ಬಿಡುಗಡೆಯಾಗಲಿದೆ.

ಅದಕ್ಕೂ ಮೊದಲು ಪುಸ್ತಕದ ಬೆನ್ನುಡಿ ಇಲ್ಲಿದೆ, ಓದಿ.

ಅಂದಹಾಗೆ, ಖಾನೇಷುಮಾರಿ ಅಂದರೆ ಏನರ್ಥ ಗೊತ್ತಾ…?

khaneshumari-book-karkiಮಲೆನಾಡು; ಅಂದಾಕ್ಷಣ ಕಣ್ಮುಂದೆ ಹಾದು ಹೋಗುವ ಹಲವು ಸಂಗತಿಗಳಲ್ಲಿ ಅಲ್ಲಿನ ಪರಿಸರ ಪ್ರಮುಖವಾದುದು. ಇವತ್ತಿನ ನಗರ ಜೀವನದ ಜಂಜಾಟಗಳಲ್ಲಿ ಮುಳುಗೇಳುತ್ತಿರುವವರಿಗೆ; ಮಳೆ ಸುರಿಯುತ್ತಿರುವ, ಹಸಿರು ಕಾನನಗಳ, ಸ್ವಚ್ಚ ಪರಿಸರದ ಭೂ ಭಾಗದಂತೆ ಮಲೆನಾಡು ಭಾಸವಾಗುತ್ತದೆ. ಅದಕ್ಕೆ ಹೊಸ ತಲೆಮಾರಿನ ಉದ್ಯಮದ ರೂಪಕಗಳಾದ ರೆಸಾರ್ಟ್, ಹೋಂ ಸ್ಟೇಗಳು ಕಾರಣ. ಜತೆಗೆ, ಮನುಷ್ಯನ ಅಲೆಮಾರಿತನ, ಹುಡುಕಾಟ ಮತ್ತು ಹೊಸತನಕ್ಕೆ ಈಡಾಗಬೇಕು ಎಂಬ ಹಪಾಹಪಿಗಳು ಆತನನ್ನು ಮಲೆನಾಡಿನವರೆಗೆ ಕರೆತಂದು ಬಿಟ್ಟಿವೆ. ಬೇಸರದ ಸಂಗತಿ ಏನೆಂದರೆ, ಇಂತವರ ಪಾಲಿಗೆ ಮಲೆನಾಡು ವೀಕೆಂಡಿಗೆ ಸೀಮಿತವಾಗಿರುವ ಜಾಗ, ‘ಬದುಕಿದರೆ ಇಂತಹ ಜಾಗದಲ್ಲಿ ಬದುಕಬೇಕು’ ಎಂಬ ಭಾವಗಳನ್ನು ಮೀಟುವ ಪ್ರದೇಶ, ಅಷ್ಟೆ.

ಆದರೆ, ಮಲೆನಾಡು ಇದನ್ನು ಮೀರಿದ್ದು. ಮಲೆನಾಡು ಎಂಬುದೇ ಒಂದು ಸಂಸ್ಕೃತಿ; ಜನಜೀವನ, ನಿಸರ್ಗದ ಜತೆ ನಿಸರ್ಗವೇ ಆಗಿ, ನಿಸರ್ಗದ ವಿರುದ್ಧ ಸೆಣೆಸಾಡುತ್ತಲೇ ಬದುಕು ಕಟ್ಟಿಕೊಂಡು ಬಂದ ಹಿರಿಯರು ಬಿಟ್ಟು ಹೋಗಿರುವ ಅಪರೂಪದ ಜ್ಞಾನಸಂಪತ್ತಿನ ಖಜಾನೆ. 50 ವರ್ಷಗಳ ಹಿಂದೆ, 25 ವರ್ಷಗಳ ಹಿಂದೆ, 10 ವರ್ಷಗಳ ಹಿಂದೆ ಕಾಣುತ್ತಿದ್ದ- ಕಾಲಕಾಲಕ್ಕೆ ಸ್ಥಿತ್ಯಂತರಗೊಂಡ- ಮಲೆನಾಡಿನ ಅಂತರಾಳದಲ್ಲಿ ಇವತ್ತು ಸಾಕಷ್ಟು ಬದಲಾವಣೆಗಳಾಗಿವೆ. ಅಲ್ಲಿನ ಜನ- ಜೀವನ, ಜೀವನ ಶೈಲಿಗಳು, ಬದುಕಿನ ಉದ್ದೇಶಗಳು ಬದಲಾಗಿವೆ; ಬದಲಾಗುತ್ತಿವೆ. ನಿಧಾನವಾಗಿ ಮಲೆನಾಡು ನಡೆದು ಬಂದ ‘ಹೆಜ್ಜೆ ಗುರುತು’ಗಳು ಕಣ್ಮರೆಯಾಗುತ್ತಿವೆ.

ಇಂತಹ ಸಮಯದಲ್ಲಿಯೇ, ಜಾನಪದವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ, ಮಲೆನಾಡಿನ ಹೆಜ್ಜೆ ಗುರುತುಗಳನ್ನು ಭಿನ್ನ ನೆಲೆಯಲ್ಲಿ ಗ್ರಹಿಸಿದ, ತಮ್ಮೊಳಗಿನ ಕತೆಗಾರನ ಮನಸ್ಸಿನಿಂದ ಅದನ್ನು ಕಟ್ಟಿಕೊಡುವ ಲೇಖಕ- ಬರಹಗಾರ ಶಿವಾನಂದ ಕರ್ಕಿ; ಈ ‘ಖಾನೇಷುಮಾರಿ’ಯನ್ನು ನಮ್ಮ ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣ- ಫೇಸ್ಬುಕ್ನಲ್ಲಿ ಅವರು, ಇಲ್ಲಿನ ಒಂದು ಚಿಟಿಕೆಯನ್ನಷ್ಟೇ ಹೊಸ ತಲೆಮಾರಿನ ಯುವಕ- ಯುವತಿಯ ಮುಂದಿಟ್ಟಿದ್ದರು, ಯುವಜನರ ಗಮನವನ್ನು ಮಲೆನಾಡಿನ ಅಪರೂಪದ ಆಯಾಮವೊಂದರ ಕಡೆ ಸೆಳೆದಿದ್ದರು.

ಅದರ ಮುಂದುವರಿದ ಭಾಗ ಎಂಬಂತೆ, ಜ್ಞಾನ ಸಂಪತ್ತಿನ ವಿಸ್ತೃತ ರೂಪಗಳು ಇಲ್ಲಿ ಪುಸ್ತಕದ ಆಕಾರವನ್ನು ಪಡೆದುಕೊಂಡಿವೆ. ಮಲೆನಾಡಿನಲ್ಲಿ ಬದುಕುತ್ತಿರುವವರು, ಮಲೆನಾಡಿನಲ್ಲಿ ಹುಟ್ಟಿ, ಹೊರ ಪ್ರಪಂಚಕ್ಕೆ ತೆರೆದುಕೊಂಡವರು, ಹೊರಗಿದ್ದೂ ಮಲೆನಾಡಿನ ಬಗ್ಗೆ ಆಸಕ್ತಿ ಇಟ್ಟುಕೊಂಡವರು… ಹೀಗೆ ಎಲ್ಲರೂ ಸರಾಗವಾಗಿ ಓದಬಹುದಾದ; ಓದಲೇಬೇಕಾದ ಪುಸ್ತಕ ಇದು.

‍ಲೇಖಕರು Admin

25 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading