ರೇಣುಕಾ ರಮಾನಂದ
ಚಂದ್ರು ಎಂ ಹುಣಸೂರು ಅವರ ಮೊದಲ ಕವನ ಸಂಕಲನ “ಎಂಟಾಣೆ ಪೆಪ್ಪರುಮೆಂಟು” ವನ್ನು ಹೊರ ತರುವ ತವಕದಲ್ಲಿದ್ದಾರೆ.
ಸಂಕಲನಕ್ಕೆ ಕವಯತ್ರಿ ರೇಣುಕಾ ರಮಾನಂದ ಅವರು ಬರೆದ ಮುನ್ನುಡಿ ಇಲ್ಲಿದೆ-

ಖಾಕಿ ಚಡ್ಡಿಯ ಜೇಬಿನಲ್ಲೂ…
ನೀಲಿ ಸ್ಕರ್ಟಿನ ಕಿಸೆಯಲ್ಲೂ…
ಮುಕ್ಕಾಲು ಪಾಲು ಲಕ್ಷ್ಯವನ್ನು ಭೋರೆನ್ನುವ ಗಾಳಿ ಮಳೆಯೆಡೆಗೂ..ನೆರೆಯಿಂದ ಮುಳುಗಡೆಯಾದ ಊರುಗಳು ಕೊಚ್ಚಿಹೋದ ರಸ್ತೆಗಳು, ಸೇತುವೆಗಳು ಎಂದು ಸರಿಯಾದಾವೋ ಎಂಬ ಕಡೆಗೂ ಇಟ್ಟು ಅನ್ಯಮನಸ್ಕವಾದ ಹೊತ್ತಿನಲ್ಲಿ”ಎಂಟಾಣೆ ಪೆಪ್ಪರಮೆಂಟಿನ” ಒಂದು ಕಟ್ಟು ನನ್ನೆದುರಿಗಿನ ಟೇಬಲ್ಲಿನ ಮೇಲೆ ನನ್ನನ್ನು ಸೆಳೆಯುತ್ತ ಕುಳಿತಿದೆ…ಮೇಕಪ್ಪು ಬಳಿದುಕೊಂಡು ನಿರ್ಜೀವ ಪ್ಲಾಸ್ಟಿಕ್ ಕವರ್ನೊಳಗೆ ಅಡಗಿಕೂತ ಚಾಕಲೇಟುಗಳಿಗೆ ಇಲ್ಲದ ಯಾವುದೋ ಒಂದು ಮಾಯಾಶಕ್ತಿ, ಎಷ್ಟು ಸಣ್ಣಗಾಗಿದೆ ನೋಡೇಬಿಡುವ ಎನ್ನುತ್ತ ಬೆರಳಿಗೆ ದಾಟಿಸಿ ಮತ್ತೆ ನಾಲಿಗೆಗಿಟ್ಟು ಚಪ್ಪರಿಸುವುದನ್ನು ಮುಂದುವರಿಸುವ ಅನೂಹ್ಯ ಪ್ರೀತಿ ಈ ಎಂಟಾಣೆ ಪೆಪ್ಪರಮೆಂಟಿಗಿರುವುದು ನನ್ನನ್ನೂ ಒಳಗೊಂಡು ಅದನ್ನು ಬಾಲ್ಯದಲ್ಲಿ ಚಪ್ಪರಿಸಿದ ಎಲ್ಲರಿಗೂ ಗೊತ್ತು.
ಯಾವುದೇ ಸುತ್ತುವಿಕೆಯ ಮುಲಾಜಿಲ್ಲದೇ ಖಾಕಿ ಚಡ್ಡಿ ಜೇಬಿನೊಳಗೋ… ನೀಲಿ ಸ್ಕರ್ಟಿನ ಕಿಸೆಯೊಳಗೋ… ಅಪಾರ ನೆಮ್ಮದಿಯ ಮೊತ್ತವಾಗಿ ಕೂತು ಗುಲಾಬಿಬಣ್ಣವನ್ನು ಪ್ರೀತಿಯಿಂದ ತನ್ನ ಸುತ್ತಲೂ ಸದ್ದಿಲ್ಲದೇ ಹರಡುವ ಅದರ ಮುದ್ದು ಚಿತ್ತಾರವನ್ನು ಹೊತ್ತು ತಿರುಗುವ ಯಾವ ಪುಟ್ಟ ಮಕ್ಕಳಿಗೂ ಬೇಸರವೆಂಬುದಿಲ್ಲ.. ಅವುಗಳನ್ನು ದಿನ ಬಿಟ್ಟು ದಿನ ಒಗೆಯುವ ಅವ್ವನ ಗಾಜಿನ ಬಳೆ ತುಂಬಿದ ಕೈಗಳಿಗೆ ಮಕ್ಕಳಿಗೆ ಎರಡು ಪೆಟ್ಟು ಹಾಕಬೇಕೆಂದು ಅನ್ನಿಸುವುದಿಲ್ಲ.ಬಯ್ದು ಕಿವಿತಿರುಪಿ ನಾಳೆಯಿಂದ ಪೆಪ್ಪರಮೆಂಟು ತಿನ್ನಬಾರದೆಂದು ತಾಕೀತು ಮಾಡಬೇಕೆಂದು ಎಂದೂ ಅನ್ನಿಸಿದ್ದಿಲ್ಲ.
ಕವಿತೆ ಓದುಗನಿಗೆ ಏನನ್ನು ಹೇಳುತ್ತದೆಯೆಂಬುದಕ್ಕಿಂತ ಅವನಲ್ಲಿ ಏನನ್ನು ಹೊತ್ತಿಸುತ್ತದೆ ಎಂಬುದರ ಮೂಲಕ ಅದು ಅವನದಾಗುತ್ತದೆ. ಚಂದ್ರು ಹುಣಸೂರು ಬರೆದ ಇಲ್ಲಿರುವ ಕವಿತೆಗಳಿಗೆ ಓದುಗನಲ್ಲಿ ಅವನದ್ದೇ ಆದ ಏನನ್ನೋ ಉಕ್ಕಿಸುವ ಗುಣವಿದೆ.ಪ್ರತಿಯೊಂದು ಕವಿತೆಯನ್ನು ಓದುವಾಗಲೂ ನಾನು ನನ್ನದೆಂಬ ಏನನ್ನೋ ನೆನಪಿಸಿಕೊಂಡು ಅದಕ್ಕೆ ಸಂಬಂಧಪಟ್ಟ ಚಲನಶೀಲತೆಯ ಚಿತ್ರಗಳನ್ನು ಒಟ್ಟುಮಾಡಿಕೊಂಡು ಬಿಡುಗಡೆಯ ಹಗುರನ್ನೂ ಸಜೀವ ಸ್ಪಂದನವನ್ನೂ ಇವುಗಳೊಂದಿಗೆ ಇಟ್ಟುಕೊಂಡು ಕುಳಿತದ್ದು ಸುಳ್ಳಲ್ಲ.

ಕನಸು ತಾಜಾ ಇರಬೇಕು
ನನ್ನೂರಿನ ಕೆರೆಯ ಹಬೆಯ ಹಾಗೆ
ನೋವುಗಳೆಲ್ಲ ಮಾಮೂಲು ಎಂದು
ಸೂಜಿ ಚುಚ್ಚಿದ ಜಾಗ ಉಜ್ಜಿಕೊಳದಿರಲಾಗದೀತೆ..?
ಕೊಳ್ಳಿಯಲಿ ಸುಡಲು ಹಿಡಿದ ಏಡಿಯ
ಹಿಂಬದಿಯ ಒಟ್ಟೆಯಲಿ
ಲೆಕ್ಕವಿಲ್ಲದಷ್ಟು ಮರಿಗಳ ಜಾತ್ರೆ
ಸಣ್ಣ ಸಣ್ಣ ಖಾಯಿಲೆಗಳಿಗೆಲ್ಲ
ಒಂದೇ ಮಾತ್ರೆ ನುಂಗುವವಳು(ಅವ್ವ)
ಇಂತಹ ಚಿತ್ರಗಳನ್ನು ಅಲ್ಲಲ್ಲಿ ದಂಡಿಯಾಗಿ ಕೊಡುತ್ತ ನಡೆವ ಚಂದ್ರು ನಮ್ಮನ್ನೊಂದುಕ್ಷಣ ಅಲ್ಲಿ ನಿಲ್ಲಿಸಿ ಭಾಷೆಯೆಂಬ ಮೂರ್ತ ಪರಿಧಿಯನ್ನು ಮೀರಿ ಹೃದಯದ ಮಾತಿನಲ್ಲಿ ಪ್ರಾಮಾಣಿಕವಾಗಿ ತುಡಿಯುತ್ತ ನಮ್ಮದೇ ಆದ ಏನನ್ನೋ ಹೇಳುತ್ತ ಆಪ್ತವಾಗಿ ನಿಲುಕುತ್ತ ಹೋಗುತ್ತಾರೆ.
ಚಂದ್ರು ಅವರ ಕವಿತೆಗಳನ್ನು ಒಟ್ಟಾರೆಯಾಗಿ ಓದುತ್ತ ಹೋದಂತೆ “ಕೈ ಬೆರಳಿಗಂಟಿದ ಪಾತರಗಿತ್ತಿಯ ಧೂಳು ಕವಿತೆ” ಎಂಬ ತಿರುಮಲೇಶರ ಮಾತೂ..”ಮಗುವಿನ ಬೊಗಸೆಯಲ್ಲಿ ಉಳಿದಂತೆ ತಾಯ ಸೆರಗಿನ ನೂಲು ಕವಿತೆ” ಎಂಬ ಬೇಂದ್ರೆಯವರ ಮಾತೂ ಒಟ್ಟೊಟ್ಟಿಗೆ ನೆನಪಾಗುತ್ತದೆ.ಇಲ್ಲಿರುವ ಕವಿತೆಗಳೆಲ್ಲವೂ ಹೊರಗಿನಿಂದ ಬಂದವುಗಳಲ್ಲ. ಅಂತಃಕರಣವನ್ನು ಕದಡುತ್ತ, ಸಂವೇದನೆಯನ್ನು ಅರಳಿಸುತ್ತ ಒಳಗೇ ಪಾಕಗೊಂಡ ಕಂಡ ಕೇಳಿದ ಅನುಭವಕ್ಕೆ ದೊರಕಿದ ಸಂಗತಿಗಳಿವು..ಕವಿತೆಗೆ ಒಳ್ಳೆಯ ಕವಿ ಬೇಡ ಒಳ್ಳೆಯ ಜೀವಿಯೊಂದು ಬೇಕು ಎಂದು ಹೇಳುವುದು ಇದೇ ಕಾರಣಕ್ಕೆ…
ನೆಂದು ನಡುಗಿ ನಡೆದೆವೊ ಒಂದೆ ಮಳೆಯಲಿ
ಎಷ್ಟು ದಿವಸ ಗಂಜಿಯುಂಡೊ ಒಂದೆ ಎಲೆಯಲಿ
ತೂತು ಬಿದ್ದ ಬನಿಯನ್ನಿನಲ್ಲೇ
ಚಂದ್ರಾಕೃತಿ ಮೂಡಿದ ಚಪ್ಪಲಿಯಲ್ಲೇ
ಬದುಕಿದ್ದಾನೆ
ಆದರೂ
“ಎಲ್ಲಿ ಖರ್ಚಾಯಿತು” ಎಂದು ಕೊರಗುತ್ತಾನೆ
ಬಸ್ ಟಿಕೇಟಿಗೆ
ಇನ್ನೂ ಐದು ರೂಪಾಯಿ ಸಾಲದಿದ್ದಾಗ
ಹಿಂದಿನ ಊರಲ್ಲೇ ಇಳಿದು ಬಂದವರ ಕಥೆ
ಯಾರಿಗೂ ಬೇಡ
ಹೀಗೆ ಗೊತ್ತಿರುವ ಸಂಗತಿಗಳ ಮೂಲಕವೇ ಕಾವ್ಯ ನಿರ್ಮಿತಿಯನ್ನು ಸಹಜವಾಗಿ ಉಸಿರಾಡುತ್ತಿರುವ ಕವಿಯಲ್ಲಿ ಎಲ್ಲೂ ಜಾಣ ಉತ್ಪಾದನೆಯ ತಿಣುಕಿ ಬರೆದ ಉಕ್ತಿಗಳು ಕಂಡುಬರದೇ ಅವನೊಳಗೆ ಅಡಗಿರುವ ನಿಷ್ಕಪಟ ಮಗುವಿನ ಮನವನ್ನು ಸಹಜ ಕವಿತೆಗಳ ಮೂಲಕ ನಮಗೆ ಎದುರಾಗಿಸುತ್ತ ಹೋಗುವುದು ಈ ಸಂಕಲನದ ವೈಶಿಷ್ಟ್ಯ ಎನ್ನಬಹುದು.
ವಸ್ತು,ವಿಷಯ ಮುಂತಾದವುಗಳ ಆಯ್ಕೆಯ ಕಡೆ ಹೊರಳುವುದಾದರೆ ಚಂದ್ರು ಮೊದಲ ಸಂಕಲನದಲ್ಲೇ ತುಸು ಗಂಭೀರವಾದರು ಅನ್ನಿಸುತ್ತದೆ.ಬಡ ಮಧ್ಯಮವರ್ಗದ ಸಂಕಷ್ಟ ,ಬದುಕಿನ ವೈರುಧ್ಯಗಳು ಅವರಿಗೆ ಈ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟನ್ನು ಎದುರಾಗಿಸಿದೆ..ಅವ್ವನ ಕಷ್ಟ ಮತ್ತು ಅಲ್ಲೇ ಮಿಳಿತವಾಗಿ ಬಾಳ್ಳೆಯನ್ನು ಸರಿದೂಗಿಸಿಕೊಂಡು ಹೋಗುವ ಅವಳ ಸಹಿಷ್ಣುತೆ ಇಲ್ಲಿ ಎಲ್ಲ ಸ್ರ್ರೀ ಸಂವೇದನೆಯ ಪ್ರತೀಕದಂತಿದೆ.ಕವಿ ಹೆಣ್ಣಿನ ಬಗ್ಗೆ ತುಂಬ ಗೌರವವಿಟ್ಟುಕೊಂಡು ತನ್ನೊಳಗೆ
ಸಂವಾದಿಸುತ್ತಿರುವುದು ಇಲ್ಲಿನ ಕೆಲವು ಕವಿತೆಗಳ ಮೂಲಕ ನಮಗೆ ಅರಿವಾಗುತ್ತದೆ.ಆ ಕಾರಣಕ್ಕಾಗಿಯೋ ಏನೋ ವಯೋಸಹಜ ಸಮಾನವಯಸ್ಕರೊಂದಿಗಿನ ಪ್ರೀತಿಪ್ರೇಮದ ಕವಿತೆಗಳು ಒಂದೂ ಕಂಡುಬರದೇ ಹೆಣ್ಣಿನ ಕುರಿತಾದ ಕಾಳಜಿ,ಗೌರವಗಳು ದಟ್ಟವಾಗಿ ಮೇಳೈಸುತ್ತ ಹೋಗುವ ಕವಿತೆಗಳೇ ಹಾಳೆ ತಿರುವಿದಾಗಲೆಲ್ಲ ಎದುರಾಗುತ್ತವೆ.ಕೊನೇ ಬಸ್ಸಿಗಾಗಿ ಕಾಯುತ್ತ ನಿಂತ ಒಂಟಿ ಮಹಿಳೆಯ ಗಾಬರಿ ಬಸ್ಸು ಬಂದು ಸೀಟೂ ಖಾಲಿ ಉಳಿದು ನೆಮ್ಮದಿಯ ನಗುವಾಗಿ ಬದಲಾಗುವುವ ಪ್ರಕ್ರಿಯೆಯ ಸಣ್ಣ ಸಂಗತಿಯೂ ಕವಿಯ ಸೂಕ್ಷ್ಮ ಅವಲೋಕನಕ್ಕೆ ದೊರಕಿದೆ ಎಂಬುದು ಇಲ್ಲಿ ಸಮಾಧಾನದ ಸಂಗತಿ.
ಕೊನೇ ಬಸ್ಸಿಗಾಗಿ ಕಾದು ನಿಂತವಳು
ಬೆವರಿದ್ದಾಳೆ ಒಳಗೊಳಗೆ
ತನ್ನ ಒಡವೆಗಳು ಗಿರವಿ ಅಂಗಡಿಯಲ್ಲಿ
ತಾನು ಬಿಡಿಸಿಕೊಳ್ಳುವವರೆಗೆ
ಬದುಕಿರುತ್ತವೆಂದು
ಮನೆಯ ತುಂಡು ಗೋಡೆಯ ಮೇಲಿನ
ಪುಟ್ಟ ಗಂಟಿನಲ್ಲಿ
ಅದರ ರಶೀದಿ ಇರುವ ನಂಬಿಕೆಯಲ್ಲಿ
ಬಿಗಿಮೊಲೆಗಳನ್ನು ಹಿಂಡುತ್ತ
ಒಂದು ಲೀಟರಿಗಾದರೂ ಸರಿಹೋಗಲಿ ಎಂದು
ಕೂರುತ್ತಾಳೆ ಅವಳು
ಕಾಲುಂಗುರಕ್ಕಂಟಿದ ಮಣ್ಣು
ರಂಗಿಲ್ಲದ ಬಳೆಗಳ ನಡುವೆ
ಸೆರಗಿನಲ್ಲೊಮ್ಮೆ ಬೆವರೊರೆಸು
ಸನಿಹದಲ್ಲೊಮ್ಮೆ ಕೈ ಜೋಡಿಸು
ಅಷ್ಟು ಸಾಕು
ನೀ ಇಲ್ಲದಿದ್ದಾಗ ಚಡಪಡಿಸಲು
ಬರುವಿಕೆಗಾಗಿ ಕಾದು
ಆಗಮನಕ್ಕೊಮ್ಮೆ ಕಂಪಿಸು
ಅದೇ ನಗುವ ಮುಂದುವರೆಸು

ಹೆಚ್ಚೇನು ಹೇಳಬೇಕಿದೆ
ತೀರಾ ಹಚ್ಚಿಕೊಂಡ ಮೇಲೆ
ಉಳಿದ ಒಲವಿನಲಿ…ಕಳೆವ ಕ್ಷಣಗಳನು
ಗೌಪ್ಯವಾಗಿಟ್ಟುಕೊಂಡು ಕಾಪಾಡಿ
ಅವಳ ಮುಂಗುರುಳೊಂದು
ಚಂದದ ಉಡುಗೊರೆ
ಈಗ ಬಂದೆ ಎಂದು ಹೇಳಿ ಹೋದ ಮನೆಯ ಆಧಾರ ಸ್ತಂಭ ಕಣ್ಮರೆಯೇಆಗಿಹೋದದ್ದು(ಬರುತ್ತಾರ?,ಶರೀರ),
ನೆರಕೆ ಟೀ ಅಂಗಡಿಯಲ್ಲಿ ಸದಾ ಊರವರ ಸುದ್ದಿ ತೆಗೆದು ಗೇಲಿಯಾಡುವ ಮಂದಿಯೆಡೆಗಿನ ಆಕ್ರೋಶ (ಅದೇನೋ ಸಮಾಧಾನ ನಮಗೆ),ಹುಟ್ಟುತ್ತ ಅಣ್ಣತಮ್ಮ..ಬೆಳೆಯುತ್ತ ದಾಯಾದಿ ಮನಸ್ಥಿತಿಗೆ ಮರುಗುವಿಕೆ(ಎಂಟಾಣೆ ಪೆಪ್ಪರಮೆಂಟು),ಹಾಸಿಗೆ ಇದ್ದರೂ ಕಾಲುಚಾಚಲಾಗದಷ್ಟು ದುಡಿದು ಹಣ್ಣಾಗುವ
ಜೀವಗಳೊಂದಿಗಿನ ಮರುಕ(ಗಲ್ಲಿಗಳನ್ನು ಹಾಸಿ),ಗ್ಯಾರೇಜು ಹುಡುಗನ ಮಸಿ ಬಟ್ಟೆ, ತನ್ನ ಮಕ್ಕಳಿಗೆ ಹಣ್ಣು ಕೊಳ್ಳಲಾಗದಿದ್ದರೂ ಪರಿಚಿತರ ಮನೆಗೆ ಹೋಗುವಾಗ ಇದ್ದುದರಲ್ಲೇ ಹೊಂದಿಸಿಕೊಂಡು ಹಣ್ಣುಕೊಳ್ಳುವ ಮದ್ಯಮವರ್ಗಿ…ಹೀಗೆ ಹತ್ತು ಹಲವು ತಹತಹಗಳನ್ನು ಒಳಗೊಳ್ಳುತ್ತ ಹೋಗುವ “ಎಂಟಾಣೆ ಪೆಪ್ಪರಮೆಂಟು” ಈಗಷ್ಟೇ ಕಾವ್ಯಜಗತ್ತಿಗೆ ತೆರೆದುಕೊಳ್ಳುತ್ತಿರುವ ಮನಸ್ಸಿನ ಮೊದಲ ಸಂಕಲನ ಎಂಬ ಲೆಕ್ಕದಲ್ಲಿ ನೋಡುವುದಾದರೆ ಉತ್ತಮ ಪ್ರಯತ್ನವೆಂದೇ ಹೇಳಬಹುದು..
ಸ್ಪಂದನಶೀಲ ಕವಿ ಕವಿತೆಯೆಂಬ ಸ್ವಚ್ಛವಾದ ಹುಚ್ಚನ್ನು ಹಚ್ಚಿಕೊಂಡು ತಿರುಗುತ್ತಿರುವಾಗ ಎಲ್ಲವೂ ಉತ್ಕೃಷ್ಟ ರಚನೆಗಳೇ ಹೊರಬರುತ್ತವೆಂಬುದಿಲ್ಲ..ಆತ ಇನ್ನೂ ಓದಿ ಓದಿ ಮರುಳಾಗಬೇಕು.ಕವಿತೆ ಆಗುವಿಕೆಯಲ್ಲಿ ಬರೀ ಕಲೆಹಾಕುವಿಕೆ,ಮೂಡುವಿಕೆ ಸಾಕಾಗುವುದಿಲ್ಲ.ಅವುಗಳನ್ನು ಕವಿ ಮಾಯಿಸಬೇಕು.ಕವಿತೆಯೆಂದರೆ ಬರೀ ವಿವರವೂ ಅಲ್ಲ .ವಸ್ತುವಿಟ್ಟುಕೊಂಡು ಅದರ ಬಗ್ಗೆ ಬರೆವುದೂ ಅಲ್ಲ..ಅವುಗಳ ಮೂಲಕ ಕವಿತೆ ಹಾಯಬೇಕು.ಕವಿತೆ ಜುಮ್ಮೆನ್ನಿಸುವ ಸ್ಪರ್ಶ ಹುಟ್ಟು ಹಾಕಬೇಕು.
“ಶಬ್ಧ ಲಯ ಚಿತ್ರ ರೂಪಕ ಪ್ರತಿಮೆ ಇವೆಲ್ಲವೂ ಕವಿತೆಯ ದಾರಿಗಳಷ್ಟೇ ಹೊರತು ಗುರಿ ಅಲ್ಲ.ಇವೆಲ್ಲವುಗಳ ಮೂಲಕ ಮೂಡಿಬರುವ ಅನುಭವ, ಪರಿಣಾಮವೇ ಕಾವ್ಯ” ಎಂಬ ಜಯಂತ ಕಾಯ್ಕಿಣಿಯವರ ಮಾತನ್ನು ಇಲ್ಲಿ ನೆನಪಿಸಿಕೊಳ್ಳುತ್ತ ಚಂದ್ರು ಅವರ ಮೊದಲ ಸಂಕಲನ ಬರುವ ಈ ಹೊತ್ತಿನಲ್ಲಿ ಈ ಎಲ್ಲ ಎಚ್ಚರಿಕೆಗಳನ್ನು ಅವರು ಇಟ್ಟುಕೊಂಡು ಕಾವ್ಯ ಜಗತ್ತಿನ ಮೆಟ್ಟಿಲು ಹತ್ತಲಿ.ಬಾಕಿ ಎಲ್ಲ ಕವಿತೆಗಳೂ ಈ ಪುಟ್ಟ ಕಂದನನ್ನು ತೋಳು ತೆರೆದು ಅಪ್ಪಿಕೊಂಡು ಸಿಹಿ ಮತ್ತು ಅಂಟು ಬೆರೆತ ಪೆಪ್ಪರಮೆಂಟಿನೊಂದಿಗೆ ಒಳಗುಮಾಡಿಕೊಳ್ಳಲಿ ಎಂದು ಮಮತೆಯಿಂದ ಹಾರೈಸುವೆ.





ಚಂದ ಇದೆ
ಮನೋರಮೆಯಲ್ಲಿದೆ