ಮರ್ಧನವೋ ಮಂಥನದ ಕಾಣ್ಮೆಯೋ !

ನಾ ದಿವಾಕರ
ಭದ್ರ ಕಾಳಿಯ ಭಂಗಿ
ರೌದ್ರಾವತಾರದ ಹಾವಭಾವ
ಮೆಟ್ಟಿ ಮಥಿಸಿ ನಿಂತ
ನೃತ್ಯಾಂಗನೆ
ನಿನ್ನ ಕಂಗಳೊಳಗಿರುವುದೇನು ?
ಆಕ್ರೋಶದ ಕಿಡಿಗಳೋ
ಹತಾಶೆಯ ನೆರಳೋ
ಮೆಟ್ಟಿ ನಿಲ್ಲಲೆತ್ನಿಸುವ
ಪೌರುಷೇಯವ
ಕೆಣಕುವ ಛಲವೋ ?
ಪುರುಷ ಸೂಕ್ತದ
ಕಬಂಧ ಬಾಹುಗಳು
ಕೆಕ್ಕರಿಸಿ ನೋಡುತ್ತಿವೆ
ಮಧಿಸುವ ಶಕ್ತಿಯ
ತಾಂಡವವನು ;
ವೀರ ಬಾಹುಗಳ
ಅಹಮಿಕೆಯ ಚಾಪಲ್ಯಕ್ಕೆ
ತುತ್ತಾದ ನಿನ್ನೊಡನಾಡಿಗಳಿಗೆ
ಮಥಿಸಿ ಮಧಿಸುವ
ಕಿಂಕಿಣಿಯಂತೆ
ಕಾಣುತ್ತಿರುವೆ !
ಜಾರಿ ಬೀಳ್ವವಳಲ್ಲ
ಏರಿ ನಿಂತವಳು ನೀ
ಮೆಟ್ಟಿ ನಿಲ್ವವಳು
ಶತಮಾನಗಳ
ಅಪಮಾನಗಳ ನುಂಗಿ
ದಿಗಂತದೆಡೆಗಿನ
ಬೃಹನ್ನಡಿಗೆಗೆ
ಪುರುಷಾಧಿಪತ್ಯದ
ಅಡಿಗಲ್ಲುಗಳು !
ಕಣ್ಣಾವೆಗಳ
ಕಿಡಿಗಳು ರವಿಕಿರಣಗಳ
ಮರೆಮಾಚುವಂತಿದೆಯಲ್ಲಾ ;
ಅದೋ
ಒಮ್ಮೆ ಕಣ್ಹಾಯಿಸು
ನೀ ಮಧಿಸಿದ ಅಹಮಿಕೆಗಳು
ಕಿಂಡಿಗಳಲಿ ನುಸುಳುತ್ತಿವೆ
ಮತ್ತೋರ್ವ
ನಿರ್ಭಯಳನ್ನರಸಿ !
ನೀ ನಿರ್ಭಯಳಲ್ಲ
ಪುರುಷ ಗರ್ಭವ
ಸೀಳಿ ಮಧಿಸಿರುವ
ರುದ್ರಮೌನಿ ;
ಹಾವಭಾವಗಳೇನೇ ಇರಲಿ
ನಿನ್ನೊಡಲ ನೋವು
ಮರೆಯಾಗಲಿದೆ
ಮಥಿಸು ನರ್ತಿಸು
ದಿಗ್ವಿಜಯದ ಪತಾಕೆ
ಹಿಡಿದು
ಪ್ರತಿಧ್ವನಿಸು !
ನಿನ್ನಡಿಯ
ವಿರಾಟ್ ವಿಶ್ವವ ಜಯಿಸಿ
ಅಂತ್ಯಗೊಳಿಸು
ಪುರುಷಾಧಿಪತ್ಯವನು ;
ಧಾತ್ರಿಯ ಮಡಿಲಲಿ
ನಿನ್ನಂತರಾಳದ
ಕನವರಿಕೆಗಳ
ಸಾಕ್ಷಾತ್ಕಾರಕೆ
ಭೂಮಿಕೆ
ಈ ರುದ್ರ ನರ್ತನ ;
ನರ್ತಿಸುತ್ತಲೇ ಇರು
ನಿರಂತರವಾಗಿ
ಚಿರಂತನವಾಗಿ





0 Comments