ಕ್ರಿಕೆಟ್ ನ ‘ವಿಜಯ’ ಇನ್ನಿಲ್ಲ…

ಎನ್ ಎಸ್ ಶ್ರೀಧರ ಮೂರ್ತಿ

ನನ್ನ ಬಾಲ್ಯ ಕಾಲದ ಹೀರೋ ಬಿ. ವಿಜಯಕೃಷ್ಣ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿರುವ ಸುದ್ದಿ ಬಂದಿದೆ. ಕರ್ನಾಟಕ ಕ್ರಿಕೆಟ್ ನ ಸುವರ್ಣ ಯುಗದ ಪ್ರಮುಖ ಕೊಂಡಿಯಾಗಿದ್ದ ವಿಜಯಕೃಷ್ಣ ಅವರನ್ನು ಎರಡು ಸಲ ಸಂದರ್ಶನ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಆಗ ಅವರ ಸಜ್ಜನಿಕೆ ಮತ್ತು ಕ್ರಿಕೆಟ್ ನ ಕುರಿತು ಇದ್ದ ಪ್ರೀತಿ ನನ್ನನ್ನು ಪ್ರಭಾವಿಸಿತ್ತು.

1949ರ ಅಕ್ಟೋಬರ್ 12ರಂದು ಜನಿಸಿದ ವಿಜಯಕೃಷ್ಣ ಅವರನ್ನು ಕ್ರಿಕೆಟ್ ನ ಕಡೆಗೆ ಸೆಳೆದವರು ಸಂಬಂಧಿ ಕೆ. ನಾಗಭೂಷಣ. ಟೆನ್ನಿಸ್ ಬಾಲ್ ನ ಮೂಲಕ ತಮ್ಮ ಮನೆಯ ಗ್ಯಾರೇಜಿನಲ್ಲಿ ಪ್ರಾಕ್ಟಿಸ್ ಆರಂಭಿಸಿದ ಬಹುಬೇಗ ಅವರು ಕಾಲೇಜ್ ದಿನಗಳಲ್ಲಿ ಮಿಂಚಿದರು. ಕ್ಲಬ್ ಗಳಲ್ಲಿ ಬೇಡಿಕೆ ಪಡೆದರು.

1968-69ನೇ ಸಾಲಿನಲ್ಲಿ ಹೈದರಾಬಾದ್ ವಿರುದ್ಧ ಆಡುವ ಮೂಲಕ ವಿಜಯಕೃಷ್ಣ ಕರ್ನಾಟಕದ ಪರವಾಗಿ ರಣಜಿ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ ಮೂರು ವಿಕಟ್ ಪಡೆದಿದ್ದ ಅವರು ಎರಡನೇ ಪಂದ್ಯದಲ್ಲಿಯೇ ಆಗಿನ ಮದ್ರಾಸಿನ ವಿರುದ್ದ ಆರು ವಿಕೆಟ್ ಪಡೆದು ತಂಡದ ವಿಜಯಕ್ಕೆ ಕಾರಣರಾದರು. ಎಡಗೈ ಸ್ಪಿನ್ನರ್ ಮತ್ತು ಬ್ಯಾಟ್ಸ್ ಮೆನ್ ಆಗಿದ್ದ ಅವರು ಆಲ್ರೌಂಡರ್ ಆಗಿ ತಂಡದ ಬೆನ್ನುಲುಬಾದರು. ಆಗೆಲ್ಲಾ ನಾವು ರೇಡಿಯೋ ಮೂಲಕ ಕ್ರಿಕೆಟ್ ಕಾಮೆಂಟರಿ ಕೇಳುತ್ತಿದ್ದ ಕಾಲ.

ಮೊದಲ ಮೂರು ಅಥವಾ ನಾಲ್ಕು ವಿಕೆಟ್ ಬೇಗ ಬಿದ್ದರೂ ಆರನೇ ಸ್ಥಾನದಲ್ಲಿ ವಿಜಯಕೃಷ್ಣ ಅಪದ್ಬಾಂದವರಂತೆ ವಿಜಯಕೃಷ್ಣ ಬರುತ್ತಾರೆ ಎನ್ನುವುದು ನಂಬಿಕೆ. ಬೌಲಿಂಗ್ನಲ್ಲಿ ಕೂಡ ಅವರು ಚೆಂಡನ್ನು ತಿರುಗಿಸುತ್ತಿದ್ದ ರೀತಿಯೇ ಸೊಗಸು. 1971-72ನೇ ಸಾಲಿನ ಕ್ವಾರ್ಟರ್ ಫೈನಲ್ ಪಂದ್ಯ ರಾಜಾಸ್ಥಾನದ ವಿರುದ್ದ. ನಿರ್ಣಾಯಕ ಹಂತದಲ್ಲಿ ಕರ್ನಾಟಕ ಆರು ವಿಕಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿ ಇತ್ತು. ಆಗ ಗಾಯಗೊಂಡು ಆಡಲು ಆಗದೆ ಇದ್ದ ಸ್ಥಿತಿಯಲ್ಲಿ ಇದ್ದ ವಿಜಯಕೃಷ್ಣ ಬ್ಯಾಟಿಂಗ್ಗೆ ಇಳಿದು ಔಟಾಗದೆ 71 ರನ್ ಗಳಿಸಿ ತಂಡವನ್ನು ವಿಜಯದ ಕಡೆ ಸಾಗಿಸಿದ್ದರು.

ಪಂದ್ಯ ಮುಗಿದ ಮೇಲೆ ಅವರಿಗೆ ಅಕ್ಷರಶ: ನಿಂತುಕೊಳ್ಳಲೂ ಕೂಡ ಆಗುತ್ತಿರಲಿಲ್ಲ. 1973ರ ಸಾಲಿನ ಮಹಾರಾಷ್ಟ್ರ ಮೇಲಿನ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 84 ಚೆಂಡುಗಳಲ್ಲಿ 102 ರನ್ ಗಳಿಸಿದ್ದು ಅವರ ಇನ್ನೊಂದು ಮರೆಯಲಾಗದ ಇನ್ನಿಂಗ್ಸ್. ಅವರ ಇನ್ನೊಂದು ಶತಕ ಬಂದಿದ್ದು 1978ರಲ್ಲಿ ಬಿಹಾರದ ಮೇಲೆ. 1978ರಲ್ಲಿ ಆಗ ವಿಶ್ವದ ದೈತ್ಯರು ಎನ್ನಿಸಿ ಕೊಂಡಿದ್ದ ವೆಸ್ಟ್ ಇಂಡೀಸ್ ತಂಡ ರಣಜಿ ಟ್ರೋಫಿ ವಿಜೇತ ತಂಡ ಕರ್ನಾಟಕದ ವಿರುದ್ದ ಅಭ್ಯಾಸ ಪಂದ್ಯ ಆಡಿತ್ತು. ವಿಜಯ ಕೃಷ್ಣ ತಮ್ಮ ಬೌಲಿಂಗ್ನಿಂದ ವಿಂಡೀಸಿಗರನ್ನು ಕಂಗಾಲಾಗಿಸಿದ್ದರು.

ಮೊದಲ ಇನ್ನಿಂಗ್ಸ್ನಲ್ಲಿ ಆರು ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ ಪಡೆದು ಕರ್ನಾಟಕದ ಸ್ಮರಣೀಯ ಗೆಲುವಿಗೆ ಕಾರಣರಾದರು. ಅವರು ನನ್ನ ಸಂದರ್ಶನದಲ್ಲಿ ಹೇಳಿದ್ದಂತೆ ಹೇಗೆ ಲೆಕ್ಕ ಹಾಕಿದರೂ ಅವರು ಈ ಸಾಧನೆಗಾಗಿ ಭಾರತ ತಂಡಕ್ಕೆ ಆಯ್ಕೆ ಆಗಲೇಬೇಕಿತ್ತು. ಆದರೆ ಅವರಿಗೆ ಅವಕಾಶ ಸಿಗಲೇ ಇಲ್ಲ. ಅದು ಭಾರತಿಯ ಕ್ರಿಕೆಟ್ನಲ್ಲಿ ಸ್ಪಿನ್ನಿನ ಸುವರ್ಣ ಯುಗ ನಡೆಯುತ್ತಿದ್ದ ಕಾಲ.

ಕರ್ನಾಟಕದವರೇ ಚಂದ್ರಶೇಖರ್ ಮತ್ತು ಪ್ರಸನ್ನ ಭಾರತ ತಂಡದಲ್ಲಿ ಇದ್ದರು. ಬೇಡಿ, ವೆಂಕಟರಾಘವನ್ ಅವರಂತಹ ಘಟಾನುಘಟಿಗಳು ಇದ್ದರು. ವಿಜಯಕೃಷ್ಣ ಅವರಿಗೆ ಕೊನೆಗೂ ಭಾರತೀಯ ತಂಡದಲ್ಲಿ ಆಡಲು ಅವಕಾಶ ಸಿಗಲೇ ಇಲ್ಲ. ಕರ್ನಾಟಕದ ಮೂರು ಸ್ಮರಣೀಯ ರಣಜಿ ಕಿರೀಟ ಧಾರಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ವಿಜಯ ಕೃಷ್ಣ ತಮ್ಮ ವೃತ್ತಿ ಜೀವನದ ಕೊನೆಯ ಘಟ್ಟವಾದ 1983-84ರಲ್ಲಿ ಗವಾಸ್ಕರ್, ಶ್ರೀಕಾಂತ್, ವೆಂಗಸರ್ಕಾರ್, ಅಮರನಾಥ್, ಕಪಿಲ್ ದೇವ್, ಯಶಪಾಲ್ ಶರ್ಮ ಮೊದಲಾದವರು ಇದ್ದ ರೆಸ್ಟ್ ಆಫ್ ಇಂಡಿಯಾ ವಿರುದ್ದ ಆಡಿದ ಕರ್ನಾಟಕದ ತಂಡ ಸ್ಮರಣೀಯ ಗೆಲುವು ಸಾಧಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ತಮ್ಮ ದೇಹದಲ್ಲಿ ಇನ್ನು ಕಸುವು ಇದ್ದಾಗಲೇ ಎಳೆಯರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ತಮ್ಮ 35ನೇ ವಯಸ್ಸಿನಲ್ಲಿ 1984ರಲ್ಲಿ ನಿವೃತ್ತಿ ಘೋಷಣೆ ಮಾಡಿದರು. 80 ಫಸ್ಟ್ ಕ್ಲಾಸ್ ಪಂದ್ಯಗಳನ್ನು ಆಡಿರುವ ಅವರು ಎರಡು ಶತಕದ ಸಹಿತ 2297 ರನ್ ಗಳಿಸಿ 194 ವಿಕೆಟ್ ಪಡೆದರು. ಅಂಕಿ ಸಂಕಿಗಳು ಸಾಧನೆಯನ್ನು ವಿವರಿಸುವುದಿಲ್ಲವಂತೆ. ಅವರು ಕಟ್ಟಿ ಕೊಟ್ಟ ಎಷ್ಟೋ ರೋಚಕ ಇನ್ನಿಂಗ್ಸ್ಗಳನ್ನು ಈ ಅಂಕಿಗಳು ಹೇಳಲಾರವು. ನಾವೆಲ್ಲಾ ಹಣಕ್ಕಾಗಿ ಆಡಲಿಲ್ಲ. ರಾಜ್ಯದ ಮೇಲಿನ ಅಭಿಮಾನಕ್ಕಾಗಿ ಆಡಿದೆವು. ಎಷ್ಟೋ ಸಲ ಬಸ್ಗಳಲ್ಲಿ ಪಂದ್ಯ ನಡೆಯುವ ಸ್ಥಳಗಳಿಗೆ ಹೋಗಿದ್ದೆವು ಎಂದು ವಿಜಯಕೃಷ್ಣ ನೆನಪು ಮಾಡಿಕೊಂಡಿದ್ದರು.

ಈಗ ಕ್ರಿಕೆಟ್ ಆಟವಾಗಿ ಉಳಿದಿಲ್ಲ, ಹಣಕ್ಕಾಗಿ ಆಡುವ ಜೂಜಾಗಿ ಬಿಟ್ಟಿದೆ. ಚಿಕ್ಕ ವಯಸ್ಸಿನಲ್ಲಿಯೇ ಅಹಂಕಾರ ತಲೆಗೆ ಏರಿಸಿ ಕೊಳ್ಳುವ ಆಟಗಾರರು ಆಟಕ್ಕೆ ಬೇಕಾದ ತಾಳ್ಮೆಯನ್ನು ಕಳೆದು ಕೊಂಡು ಜನಪ್ರಿಯತೆಯ ಬೆನ್ನು ಹತ್ತುತ್ತಾರೆ ಎಂದು ವಿಷಾದದಿಂದ ಹೇಳಿದ್ದರು. ಐ.ಪಿ.ಎಲ್ನ ರಂಗು ರಂಗಿನ ಈ ದಿನಗಳಲ್ಲಿ ಕಠೋರ ಸತ್ಯವಾಗಿರುವ ಈ ಮಾತಿನ ಹಿಂದಿನ ಕಾಳಜಿ ನನ್ನನ್ನು ಬಹಳವಾಗಿ ಕಾಡಿತ್ತು.

ಅವಕಾಶವಂಚಿತರಾದರೂ ವಿಷಾದವನ್ನು ವ್ಯಕ್ತ ಪಡಿಸಿದೆ ಕ್ರಿಕೆಟ್ ಅನ್ನು ತಪಸ್ಸು ಎಂದು ಭಾವಿಸಿದ್ದ ಶ್ರೇಷ್ಠ ಆಟಗಾರ ಕಣ್ಮರೆಯಾದ ಸುದ್ದಿ ನೋವನ್ನು ತಂದಿದೆ. ಈ ಸಾವಿನ ಸರಮಾಲೆಯಲ್ಲಿ ಇವರ ಸಾವು ಕೂಡ ಸೇರಿಕೊಂಡು ನೋವನ್ನು ಹೆಚ್ಚಿಸಿದೆ. ಅಂತಿಮ ನಮಸ್ಕಾರಗಳು ಸರ್. ಹೋಗಿ ಬನ್ನಿ ಈ ನಾಡು ನಿಮ್ಮ ಸೇವೆಯನ್ನು ಮರೆಯುವುದಿಲ್ಲ. ಮರೆಯ ಬಾರದೂ ಕೂಡ

‍ಲೇಖಕರು Avadhi

June 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: