
ಸೃಜನ್

ವತ್ಸಲ ಶ್ರೀ , ಪ್ರಕಾಶಕರು
ಈ ಮಧ್ಯೆ ಸೃಜನ್ ಒಂದು ದಿನ ನಿಮ್ಮ ಕೃತಿಯನ್ನು ತೆಲುಗಿಗೆ ಅನುವಾದಿಸಿದ್ದೇನೆ ಎಂದರು. ಸೃಜನ್ ಹಾಗೂ ನಾನು ಗಂಟೆಗಟ್ಟಲೆ ಕಾವ್ಯ ಪ್ರೀತಿಯನ್ನು ಹಂಚಿಕೊಂಡವರು. ಹಾಗಾಗಿ ಕ್ಯೂಬಾ ಎನ್ನುವ ಪ್ರೀತಿಯನ್ನೂ ತೆಲುಗಿಗೆ ತಂದಿದ್ದಾರೆ.
ಸೃಜನ್ ಅನುವಾದಿಸಿದ ರೀತಿಯ ಬಗ್ಗೆ ನನ್ನ ಗೆಳೆಯರು ಪ್ರೀತಿಯ ಮಾತುಗಳನ್ನಾಡಿದ್ದಾರೆ. ಸೃಜನ್ ಅನುವಾದ, ರೇಖೆ, ಅವರ ಮಾತಿನ ನವಿರುತನಕ್ಕೆ ಬೆರಗಾಗಿರುವವನು ನಾನು. ವತ್ಸಲಾ ವಿದ್ಯಾಸಾಗರ್ ಇದನ್ನು ಬೆಳಕು ಕಾಣಿಸಿದ್ದಾರೆ. ಥ್ಯಾಂಕ್ಸ್ ಸೃಜನ್ ಅನ್ನದೆ ನನಗೆ ಇನ್ನೇನು ಹೇಳಲು ಸಾಧ್ಯ?

ಕ್ಯೂಬಾ ಅಂತರಾತ್ಮ
ವೆಂಕಟ್/ ಈನಾಡು
’ಕ್ಯೂಬಾ ಎಲ್ಲಿಲ್ಲ? ನಮ್ಮೆಲ್ಲರಲ್ಲೂ ಇದೆ, ಕನಸು ಕಾಣುವವರೆಲ್ಲರಲ್ಲಿ.. ಭವಿಷ್ಯದ ಕನಸು ಕಟ್ಟುವವರೆಲ್ಲರಲ್ಲಿ.. ಒಂದು ಅದ್ಭುತವಾದ ಬದುಕನ್ನು ಹುಡುಕುವುದಕ್ಕಾಗಿ ಯುದ್ಧಸನ್ನದ್ಧರಾಗುವವರೆಲ್ಲರಲ್ಲೂ ಕ್ಯೂಬಾ ಇದೆ.
ನಮ್ಮೆಲ್ಲರನ್ನೂ ಕ್ಯೂಬಾದೊಡನೆ, ಅಲ್ಲಿನ ಪ್ರಜೆಗಳ ಜೊತೆಯಲ್ಲಿ ನಿಲ್ಲಿಸಿಬಿಟ್ಟರು ಮೋಹನ್’ ಎಂದು ಅದ್ಭುತ ಬರಹಗಾರರಾದ ಕೆ ಶಿವಾರೆಡ್ಡಿ ತಮ್ಮ ಮುನ್ನುಡಿಯಲ್ಲಿ ಬರೆದ ಸಾಲುಗಳು ಸಾಕು ಪುಸ್ತಕದ ಕರ್ತೃವಿನ ಮನಸ್ಸನ್ನು, ಪುಸ್ತಕದ ಆತ್ಮವನ್ನು, ಅಕ್ಷರಗಳ ಆರ್ದ್ರತೆಯನ್ನು ಅರ್ಥ ಮಾಡಿಕೊಳ್ಳಲು.
’ಕನಸು ಕಾಣದವರಿಂದ ಕ್ರಾಂತಿ ಸಾಧ್ಯವಿಲ್ಲ. ಆ ಕ್ರಾಂತಿಯನ್ನು ನಿಜವಾಗಿಸಿದ ಕನಸಿನ ಪ್ರಪಂಚಕ್ಕೆ ನಾನು ಹೋಗಿಬಂದೆ’ ಎನ್ನುತ್ತಾ ಕ್ಯೂಬಾದಲ್ಲಿ ಎದುರಾದ ತನ್ನ ಅನುಭವಗಳ ಮೂಲಕ, ಅಲ್ಲಿ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಮೂಲಕ, ಮಾತಿಗೆ ಸಿಕ್ಕ ಪರಿಸ್ಥಿತಿಗಳ ಮೂಲಕ ಅವರು ಆ ದೇಶದ ಆತ್ಮವನ್ನು ಹುಡುಕಿದ್ದಾರೆ.

ಕ್ಯೂಬಾ – ಒಂದು ಉದ್ವೇಗ ಗಾನ
ಲೆನಿನ್ ಧನಿಶೆಟ್ಟಿ
ಸಾಮ್ರಾಜ್ಯವಾದದ ವಿರೋಧಿಸಲು ಕ್ಯೂಬಾದಲ್ಲಿ ವಿದ್ಯಾರ್ಥಿಗಳು, ಯುವಜನರು ೧೯೯೦ರಲ್ಲಿ ಆಯೋಜಿಸಿದ ಯುವಜನ ಸಮಾವೇಶಕ್ಕೆ ಪ್ರತಿನಿಧಿಯಾಗಿ ಹೋದ ಜಿ ಎನ್ ಮೋಹನ್ ತಮ್ಮ ಯಾತ್ರೆಯುದ್ದಕ್ಕೂ ಗಳಿಸಿದ ಅನುಭವಗಳನ್ನು, ಅನುಭೂತಿಗಳನ್ನು, ಆವೇಶವನ್ನು, ನೆನಪುಗಳನ್ನೂ ಉತ್ಕಟತೆಯಿಂದ ಅಕ್ಷರಕ್ಕಿಳಿಸಿದ ಕಥನ ’ನನ್ನೊಳಗಿನ ಹಾಡು ಕ್ಯೂಬಾ’. ಅದನ್ನು ಸೃಜನ್ ’ನಾಲೋನಿ ರಾಗಂ ಕ್ಯೂಬಾ’ ಹೆಸರಿನಲ್ಲಿ ತೆಲುಗಿಗೆ ಅನುವಾದಿಸಿದ್ದಾರೆ.
ಅಮೇರಿಕಾದ ಸಾಮ್ರಾಜ್ಯವಾದದ ವಿರುದ್ಧ ಕ್ಯೂಬಾ ನಡೆಸಿದ ಸಾಮಾಜಿಕ ಕ್ರಾಂತಿಯನ್ನು ಆರ್ತತೆಯಿಂದ, ಪ್ರೀತಿಯಿಂದ, ತಳಮಳದಿಂದ ಬರಹವಾಗಿಸಿ ಆ ಹೋರಾಟದ ಸ್ಪೂರ್ತಿಯನ್ನು ಲೇಖಕ ನಮ್ಮ ಮನಸ್ಸಿನೊಳಗೆ ಆವಾಹಿಸಿಕೊಳ್ಳುವಂತೆ ಮಾಡುತ್ತಾರೆ. ಈ ರೀತಿಯಾಗಿ ಮತ, ಆಚಾರ, ಸಂಪ್ರದಾಯ, ಶಾಸ್ತ್ರ ಎಲ್ಲವನ್ನೂ ಮೀರಿ ತಾನೆ ಒಂದು ಆಯುಧವಾಗಿ ಪರಿವರ್ತನೆಗೊಂಡು ಅಮೇರಿಕಾವನ್ನು ಎದುರಿಸಿ, ಹೋರಾಡಿದ ಪರಿಯನ್ನು, ಆ ಮಹಾಕಥನವನ್ನು ಒಂದು ಧಾರ್ಮಿಕ ಕ್ರಾಂತಿಯ ಆವೇಶದಿಂದ, ಒಂದು ಪ್ರವಾಹದಂತೆ ವೀರಗಾಥೆಯಂತೆ ಲೇಖಕರು ಬರೆದಿದ್ದಾರೆ.
ಒಬ್ಬ ಕ್ಯೂಬಾ ಅಧ್ಯಕ್ಷನನ್ನು ಮಣಿಸಲು ಎಷ್ಟು ಮಂದಿ ಅಮೇರಿಕಾ ಅಧ್ಯಕ್ಷರು ಮಾಡಿದ/ಮಾಡುತ್ತಿರುವ ಒಂದು ಸುಧೀರ್ಘ ಸಾಮ್ರಾಜ್ಯವಾದ ಪ್ರಯತ್ನವನ್ನು ತಾನೇ ಕ್ಯೂಬಾದವನಾಗಿ ಪರಿವರ್ತನೆಗೊಂಡು ಲೇಖಕ ಬರೆಯುತ್ತಾರೆ. ಈ ಪುಸ್ತಕ ಯಾವುದೇ ನಾಯಕನನ್ನು ಹೊಗಳುವುದಿಲ್ಲ, ನಾಯಕರನ್ನು ಮುನ್ನಡೆಸುವ ಜನರ ಎದೆಬಲವನ್ನೂ, ಧೈರ್ಯವನ್ನೂ ಓದುಗರಿಗೆ ತಲುಪಿಸುತ್ತದೆ.
ಇತ್ತೀಚಿನ ದಿನಮಾನದಲ್ಲಿ ದಕ್ಷಿಣ ಭಾರತದಲ್ಲಿ ಇಂತಹ ಪ್ರವಾಸ ಕಥನಗಳು ಕಾಣುತ್ತಿಲ್ಲ. ಭಾನುವಾರದ ಪತ್ರಿಕೆಯಲ್ಲಿ ಕೇವಲ ಎರಡು ಕಾಲಂನ ವಿನೋದ ಬರಹವಾಗಿ ಮಾತ್ರ ಪ್ರವಾಸ ಸಾಹಿತ್ಯ ಬದುಕುಳಿದಿದೆ. ಆ ಪ್ರಕ್ರಿಯೆಯನ್ನು ಬದಲಿಸಿ ಓದುಗರಿಗೆ ಒಂದು ಅಪ್ಪಟ ಪ್ರವಾಸ ಸಾಹಿತ್ಯ ಕಥನವನ್ನು ಉಣಬಡಿಸುವ ರಚನೆ ಇದು.
ಸಾಧಾರಣ ಯಾತ್ರಿಕರು ಅಥವಾ ಎಡಪಕ್ಷಗಳ ಪೂರ್ಣಾವದಿ ಬರಹಗಾರರಿಗಿಂತ ಭಿನ್ನವಾಗಿ ಕ್ಯೂಬನ್ ಜನಸಾಮಾನ್ಯರ ಆತ್ಮವನ್ನು, ವಿವಿಧ ನೆಲೆಗಳಲ್ಲಿ ಅವರ ಹೋರಾಟದ ಸ್ವರೂಪವನ್ನೂ, ಅವರ ಸಹನೆಯನ್ನು, ಅಂತಃಶಕ್ತಿಯನ್ನು ಏಕಕಾಲದಲ್ಲಿ ನಮಗೆ ಅರ್ಥ ಮಾಡಿಸುವ ಪುಸ್ತಕ ಇದು.
ಈ ಪುಸ್ತಕ ಓದಿದ ಮೇಲೆ ನಮ್ಮ ದೇಶದಲ್ಲಿನ ಜನ ಹೋರಾಟಕ್ಕೆ ಕನ್ನಡಿ ಹಿಡಿಯಲಾಗದ ಬರಹಗಾರರ ಅಶಕ್ತತೆಯ ಮೇಲೆ ಬೇಸರ ಆಗುತ್ತದೆ. ಅತ್ಯಂತ ಸುಲಲಿತವಾಗಿ ಸಾಗಿರುವ ಸೃಜನ್ ಅವರ ಅನುವಾದವನ್ನು ನೋಡಿದರೆ ಇದು ತೆಲುಗಿನ ಸ್ವತಂತ್ರ ರಚನೆಯೇನೋ ಎನ್ನುವ ಅನುಮಾನ ಬರುತ್ತದೆ.
ಓದಿ ಮುಗಿಸಬೇಕೆನ್ನುವ ಅವಸರ ಇಲ್ಲದೆ ಓದಿಸಿಕೊಂಡು ಹೋಗುವ ಈ ಬರಹಕ್ಕೆ ಕರ್ನಾಟಕ ಸರ್ಕಾರ ಅಕಾಡಮಿ ಪುರಸ್ಕಾರ ಸಂದಿರುವುದು ಯೋಚಿಸಬೇಕಾದ ಒಂದು ಅದ್ಭುತ ವೈರುಧ್ಯ ಸಹ ಆಗಿದೆ.

ತಿಲಕ್/ Good Reads
ಕೆಲವು ಒಳ್ಳೆಯ ಪುಸ್ತಕಗಳನ್ನು ಓದಿದಾಗ ಆ ಪುಸ್ತಕದ ಪ್ರಭಾವ ನಮ್ಮ ಮನಸ್ಸಿನ ಮೇಲೆ ಬಹಳ ಕಾಲದವರೆಗೂ ಇರುತ್ತದೆ. ಇತ್ತೀಚಿಗೆ ನಾನು ಓದಿದ ಅಂತಹ ಒಂದು ಪುಸ್ತಕ ’ನಾಲೋನಿ ರಾಗಂ ಕ್ಯೂಬಾ’. ಕನ್ನಡದಲ್ಲಿ ಜಿ ಎನ್ ಮೋಹನ್ ಅವರು ಬರೆದ ಈ ಪುಸ್ತಕವನ್ನು ಸೃಜನ್ ತೆಲುಗಿಗೆ ಅನುವಾದಿಸಿದ್ದಾರೆ. ಪುಸ್ತಕ ಓದಿದ ಮೇಲೆ ಅಮೇರಿಕಾದಂತಹ ಒಂದು ಬೃಹತ್ ರಾಷ್ಟ್ರದೆದುರು ಕ್ಯೂಬಾದಂತಹ ಪುಟ್ಟ ದೇಶ ಸೆಡ್ಡು ಹೊಡೆದು ನಿಂತ ರೀತಿಗೆ ಮನಸ್ಸು ಸೋಲುತ್ತದೆ.
ಕ್ಯೂಬಾ, ಹಲವಾರು ವರ್ಷಗಳು ದಾಸ್ಯದಲ್ಲಿದ್ದು ನಂತರ ಇಡೀ ಪ್ರಪಂಚಕ್ಕೇ ಕ್ರಾಂತಿಯನ್ನು ಪರಿಚಯಿಸಿದ ದೇಶ. ಚೆಗೆವಾರ, ಕ್ಯಾಸ್ಟ್ರೋ ಅಂತಹ ಮಹನೀಯರು ಓಡಾಡಿದ ದೇಶ. ಇಡೀ ಪ್ರಪಂಚ ಚೆಗೆವಾರನನ್ನು ಏಕಿಷ್ಟು ಹುಚ್ಚರಂತೆ ಪ್ರೀತಿಸುತ್ತದೆ ಎನ್ನುವುದರ ಅರ್ಥವಾಗುತ್ತದೆ ಪುಸ್ತಕ ಓದಿದಾಗ. ’ಚೆ’ ಯ ಬದುಕು, ಹೋರಾಟ ಅರ್ಥವಾಗುತ್ತದೆ. ಮೋಹನ್ ರವರು ಕ್ಯೂಬಾ ಪ್ರವಾಸ ಮಾಡಿ ಬರೆದ ಅನುಭವ ಗಾಥೆ ಈ ಪುಸ್ತಕ. ಕಾವ್ಯವನ್ನು ಇನ್ನಿಲ್ಲದಂತೆ ಇಷ್ಟ ಪಡುವ ಮೋಹನ್ ಕ್ಯೂಬಾ ಬಗ್ಗೆ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ :
ಕ್ಯೂಬಾ
ಪುಟ್ಟಹುಡುಗಿ
ಮುಖದಲ್ಲಿ ಮುಡಿದುಕೊಂಡ
ಅದೇ ನೋವು ನಗೆ
ತುರುಬಿಗೆ ಟ್ಯೋಲಿಪ್ ಪಕಳೆ
ಎದೆಯಲ್ಲಿ ಸದಾ ಹಾಡಸಾಲು
ಬಂದೂಕುತುದಿಗೆ ನಗೆಮಲ್ಲಿಗೆ ಎಸಳು
ಊರ ತುಂಬಾ ಯುಗಾದಿ ಹಸಿರು ತೋರಣ
ಎದೆಯಾಳದೊಳಗೆ
ಅವ್ವ ಬಚ್ಚಿಟ್ಟುಕೊಂಡ ಯಾತನೆ
ಮೇಲೆ ಬೆಚ್ಚನೆಯ ಮಡಿಲ ಕಾವು
ಕಾಣುವುದು ನೆಲದ ಹಸಿರ ಎಳೆ
ಒಳಗೆ ಮಾತ್ರ ತಲ್ಲಣದ ಮಳೆ
ಕೆಂಪು ಟೋಪಿಯ ಹರಕಲು ಗಡ್ಡದ
ಸೈಕಲ್ ತುಳಿಯುವ ಪಡ್ಡೆ ’ಚೆ’
ರಾಗಿ ತೆನೆಗಳ ಹೊತ್ತು ಬೀಗಿದ
ಹೊಲದ ಮಧ್ಯೆ ಗಾಲಿ ಓಡಿಸಿದಷ್ಟೇ ಸಲೀಸಾಗಿ
ಕ್ರಾಂತಿಚಕ್ರ ಸುತ್ತಿಸಿದ್ದು
ಕೆಂಪುತುಟಿ ಬಿರಿದು ಹೂನಗೆ ಎಸೆದವರಿಗೆ
ಕಣ್ಣು ಮಿಟುಕಿಸಿ ಕೆಣಕಿದ್ದು
ಅದೇ ಹಾಡು ಜೋಕಾಲಿ ಜೀಕುತ್ತಾ
ಇದೀಗ ಅದೇ ಟೋಪಿಯ ಹರಕಲು ಗಡ್ಡದ
ಈತ ಎದೆಯೊಳಗೆ ಬೀಜಬಿತ್ತುತ್ತಾನೆ
ತೆನೆ ತೆಗೆಯುತ್ತಾನೆ, ಬಸಿರೊಳಗೆ ಮುದ್ದು
ನಗೆ ಬೆಳೆಯುತ್ತಾನೆ
ಕ್ಯೂಬಾದ ಕಣ್ಣೊಳಗೆ ಇನಿಯರ
ಕಣ್ಣ ಹೊಳಪ ತೀಡುತ್ತಾನೆ.
ಇಂತಹ ಮಹತ್ತರವಾದ ಪುಸ್ತಕ ಬರೆದ ಮೋಹನ್ ಅವರಿಗೆ, ಅನುವಾದಿಸಿದ ಸೃಜನ್ ಅವರಿಗೆ ಲಕ್ಷ ಲಕ್ಷ ವಂದನೆಗಳು.
ಸೃಜನ್ ನಿಮ್ಮ ಅನುವಾದಕ್ಕೆ ನಾನು ಫಿದಾ.




wow.. this is an honor.. Congratulations
ಕನ್ನಡನಾಡಿನ ಗಡಿ ದಾಟಿದ ಮನದ ಒಳಗಣ ಹಾಡು ಕ್ಯೂಬಾ..
ಭಾಷೆಯ ಗಡಿಗಳ ಹಂಗಿಲ್ಲದ ಲೋಕ ಅಕ್ಷರಲೋಕ ಎಂಬುದನ್ನು ಸಾಬೀತು ಪಡಿಸಿದೆ…
ಹಾರ್ದಿಕ ಅಭಿನಂದನೆಗಳು ಜಿಎನ್ನೆಮ್ ಸರ್.
ಇನ್ನೂ ಹಲವು ಭಾಷೆಗಳಿಗೆ ಸಾಗಿಹೋಗಲಿ ಈ ಕ್ರಾಂತಿ ಹಾಡು…