ಶ್ರೀದೇವಿ ಕೆರೆಮನೆ
ಎಲ್ಲೇ ಹೋಗಿದ್ದೆ? ಪತ್ತೆನೇ ಇರಲಿಲ್ಲ.. ಆತ್ಮೀಯ ಗೆಳತಿಯೊಬ್ಬಳು ಬಹುದಿನಗಳ ನಂತರ ಫೋನಾಯಿಸಿದ್ದಳು. ನನ್ನ ಮಾತು ಮುಗಿಯುವ ಮೊದಲೇ ಅವಳು ನಿಧಾನವಾಗಿ ಕೌನ್ಸಿಲಿಂಗ್ ಹೊಗಿದ್ದೆ ಅಂದಳು. ಆಗಷ್ಟೇ ವರ್ಗಾವಣೆ ಕೌನ್ಸಲಿಂಗ್ ಮುಗಿಸಿ ಬಂದಿದ್ದ ನನಗೆ ಅದೇ ಧ್ಯಾನ. ಯಾವ ಸ್ಕೂಲ್ ಸಿಕ್ತು? ನಾನು ತುಂಬಾ ಮಾಮೂಲಿಯಾಗಿ ಪ್ರಶ್ನಿಸಿದೆ. ಆ ಕಡೆಯಿಂದ ಒಂದು ವಿಷಾದದ ನಗು ತೂರಿ ಬಂತು. ಸ್ಖೂಲ್ ಅಲ್ಲಪ್ಪ. ನಾನು ಹೋಗಿದ್ದು ನನ್ನ ವೈಯಕ್ತಿಕ ಕೌನ್ಸಿಲಿಂಗ್ಗೆ. ನನ್ನ ಪ್ರಾಬ್ಲೆಂ ಗೊತ್ತಲ್ವ? ಆಕೆಯ ಧ್ವನಿಯಲ್ಲಿನ ನಿರಾಶೆ ಕಡಿಮೆ ಆಗಿರಲಿಲ್ಲ. ಹೌದು, ಆಕೆ ವಿಚಿತ್ರವಾದ ಸಮಸ್ಯೆಯೊಂದರಲ್ಲಿ ಸಿಲುಕಿಕೊಂಡಿದ್ದಳು. ಹೇಳಿಕೊಳ್ಳಲೂ ಆಗದ, ಆದರೆ ಒಬ್ಬಳೇ ಮನಸ್ಸಿನಲ್ಲಿ ಅನುಭವಿಸಲೂ ಆಗದ ಸಮಸ್ಯೆ ಆಕೆಯದ್ದು. ಮದುವೆಯಾಗಿ ಇಬ್ಬರು ಪುಟ್ಟ ಮಕ್ಕಳಿರುವ ಆಕೆ ಯಾವುದೋ ಘಳಿಗೆಯಲ್ಲಿ ಒಂದು ಕ್ರಷ್ಗೆ ಸಿಲುಕಿಕೊಂಡಿದ್ದಳು.
ಆಕೆ ಅದನ್ನು ನಿಜವಾದ ಪ್ರೀತಿ ಎಂದು ತಿಳಿದುಕೊಂಡಿದ್ದರೆ ಆತ ಅದೊಂದು ಟೈಂ ಪಾಸ ಎಂದುಕೊಂಡಿದ್ದನೋ ಗೊತ್ತಿಲ್ಲ. ಆತ ಈ ಮೊದಲೇ ಪ್ರೀತಿಸುತ್ತಿದ್ದ ವಿಷಯ ಮುಚ್ಚಿಟ್ಟಿದ್ದ. ಕೊನೆಗೂ ಒಂದು ದಿನ ಮನೆಯಲ್ಲಿ ಅಪ್ಪ-ಅಮ್ಮ ನಿಶ್ಚಯಿಸಿದ್ದು ಎಂಬರ್ಥದ ಮಾತನಾಡಿ ವಿಷಯ ತಿಳಿಸಿದ್ದ. ಆದರೂ ಆಕೆ ಆತನ ಪ್ರೀತಿಯನ್ನು ನಂಬಿಕೊಂಡೇ ಇದ್ದಳು. ಮದುವೆಯಾದ ತನ್ನನ್ನು ಇಷ್ಟೊಂದು ಪ್ರೀತಿಸುತ್ತಾನೆ ಎಂಬ ಹೆಮ್ಮೆ ಬೇರೆ. ಕೊನೆಗೆ ಆತನ ಮದುವೆ ಕೂಡ ಆಯಿತು. ಅಷ್ಟರಲ್ಲಾಗಲೇ ಆತನ ವರ್ತನೆ ನಿಧಾನವಾಗಿ ಬದಲಾಗತೊಡಗಿತ್ತು. ಮದುವೆ, ಓಡಾಟ, ಅದೂ ಇದೂ ಎನ್ನುತ್ತ ಆಕೆಯನ್ನು ಮಾತನಾಡಿಸುವುದನ್ನು ಕಡಿಮೆ ಮಾಡಿದ. ಮೊದಲು ಇಡಿ ರಾತ್ರಿ ಮೆಸೆಜ್ ಮಾಡುತ್ತಿದ್ದಾತ, ಮಧ್ಯರಾತ್ರಿ ಎಸ್.ಎಮ್.ಎಸ್. ಕಳುಹಿಸಿ ಒಮ್ಮೆ ನಿನ್ನ ಧ್ವನಿ ಕೇಳಬೇಕು ಎಂದು ಗೋಗರೆಯುತ್ತಿದ್ದಾತ ಒಂದು ಮೆಸೆಜ್ ಮಾಡಲೂ ಹಿಂದೆ ಮುಂದೆ ನೋಡುವುದನ್ನು ಗಮನಿಸುತ್ತಾ ಆಕೆ ನಿಧಾನವಾಗಿ ಡಿಪ್ರೆಸ್ ಕಡೆ ಸಾಗತೊಡಗಿದ್ದಳು.
ದಿನಕ್ಕೊಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾತ ತನ್ನನ್ನು ಅವೈಡ್ ಮಾಡೋದಕ್ಕೇ ಹಾಗೆ ಮಾಡ್ತಾ ಇದ್ದಾನೆ ಎಂಬುದನ್ನು ನಂಬಲು ಸಿದ್ಧವಿರದ ಆಕೆ ಮದುವೆಯ ಗಡಿಬಿಡಿ ಎಂದೇ ತಿಳಿದವಳು, ಮದುವೆ ಆದವನು ನಂತರ ತನ್ನನ್ನು ಮಾತನಾಡಿಸುತ್ತಾನೆ ಎಂದೇ ನಂಬಿದ್ದಳು. ಮದುವೆ ಆದ ತಿಂಗಳಾದ ಮೇಲೂ ಆತನ ಕರೆ ಇಲ್ಲದ ಆಕೆ ದಿನದಿನಕ್ಕೆ ಕುಸಿಯತೊಡಗಿದ್ದಳು. ಆದರೂ ಹೊಸದಾಗಿ ಮದುವೆ ಆದಾತ. ನಾನು ಮಧ್ಯೆ ಪ್ರವೇಶಿಸುವುದು ಬೇಡ. ಸ್ವಲ್ಪ ದಿನ ಕಳೆದ ಮೇಲೆ ಆತನೇ ಮಾತಾಡ್ತಾನೆ ಎಂದು ಕಾದವಳಿಗೆ ಆತ ತಿಂಗಳಾದರೂ ಒಂದು ಮಾತಿರಲಿ ಕೊನೆಯ ಪಕ್ಷ ಒಂದು ಮೆಸೆಜ್ ಕೂಡ ಮಾಡದಿದ್ದಾಗ ಕುಗ್ಗಿ ಹೋಗಿದ್ದಳು. ಕೊನೆಗೂ ತಾನಾಗಿಯೆ ಮಾತನಾಡಿದವಳಿಗೆ ಅವಳೇ ಮಾತನಾಡಿಸದಿದ್ದದ್ದು ತಪ್ಪು ಎನ್ನುವ ರೀತಿ ಮಾತನಾಡಿ ಆಕೆಯ ಬಾಯಿ ಮುಚ್ಚಿಸಿದ್ದ. ಕೊನೆಗೂ ನಾನು ಮೆಸೇಜ್ ಮಾಡದೇ ನೀನು ನನಗೆ ಎಸ್. ಎಮ್. ಎಸ್. ಕಳಿಸಬೇಡ ಎಂದಾಗ ಆಕೆ ತನ್ನೆಲ್ಲ ಭರವಸೆಯನ್ನು ಕಳೆದುಕೊಂಡು ಪೂತರ್ಿಯಾಗಿ ಸೋತು ಹೋಗಿದ್ದಳು. ಪದೇ ಪದೇ ಮನಸ್ಸಿನಲ್ಲಿ ಮೂಡುವ ಆತ್ಮಹತ್ಯೆಯ ಯೋಚನೆಗೆ ಏನು ಮಾಡುವುದೆಂದೇ ಗೊತ್ತಾಗದೇ ಹೀಗೇ ಬಿಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುವುದು ಖಂಡಿತಾ ಎಂಬುದು ಅರಿವಾದಾಗ ತಾನಾಗಿಯೇ ಕೌನ್ಸಿಲಿಂಗ್ಗೆ ಹಾಜರಾದಳು. ‘ಏನಾದರೂ ಪ್ರಯೋಜನ ಆಯ್ತೇನೆ?’ ನಾನು ಕೇಳಲೋ ಬೇಡವೋ ಎಂಬಂತೆ ಕೇಳಿದ್ದೆ. ‘ಹ್ಞೂಂ ಕಣೆ. ಆತ್ಮಹತ್ಯೆಯ ಆಲೋಚನೆ ಸ್ವಲ್ಪ ಕಡಿಮೆ ಆಗಿದೆ. ಆದರೂ ಅವರು ಹೇಳಿದ್ದು ಮೆದುಳಿಗೆ ಅರ್ಥ ಆಗುತ್ತೆ ಕಣೆ. ಮನಸ್ಸಿಗಲ್ಲ.’ ಒಮ್ಮೆ ನಿಟ್ಟುಸಿರಿಟ್ಟವಳು ‘ಆದರೆ ಮನಸ್ಸಂತೂ ಸ್ವಲ್ಪ ಹಗುರ ಆಗಿದೆ. ಸಧ್ಯಕ್ಕಂತೂ ಆತ್ಮಹತ್ಯೆ ಯೋಚನೆ ಬರೋಲ್ಲ. ನಕ್ಕವಳಲ್ಲಿ ನೋವಿದ್ದರೂ ನಾನು ನಿರಾಳವಾದೆ.

ಅವರಿಬ್ಬರೂ ಕೌನ್ಸಿಲರ್ ಎದುರು ಕುಳಿತಿದ್ದರು. ಇನ್ನು ಜೊತೆಯಾಗಿ ಬದುಕೋದಕ್ಕೇ ಸಾಧ್ಯವೇ ಇಲ್ಲ ಎಂಬ ಮನೋಭಾವ ಅವರದ್ದು. ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೊಗಿತ್ತೆಂದರೆ ಅವರಿಬ್ಬರು ಪರಸ್ಪರ ಮಾತನಾಡದೇ ಎರಡು ತಿಂಗಳಾಗಿತ್ತು. ಒಬ್ಬರ ಮುಖ ಒಬ್ಬರು ನೋಡದೇ ಎಷ್ಟೊ ದಿನ ಆಗಿತ್ತು. ಆದಷ್ಟು ಅವಾಯ್ಡ ಮಾಡುತ್ತಿದ್ದರು. ಮದುವೆ ಆದ ಮೂರು ತಿಂಗಳಿಗೇ ಡಿವೋರ್ಸಗೆ ಅಜರ್ಿ ಹಾಕುವ ಮೊದಲು ಕೌನ್ಸಿಲರ್ ಹತ್ತಿರ ಕಳುಹಿಸಿದ್ದರು. ಎರಡನೇ ಸಿಟ್ಟಿಂಗ್ ಹೊತ್ತಿಗೇ ಇಬ್ಬರಿಗೂ ತಾವಿಬ್ಬರೂ ಎಷ್ಟು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದೇವೆ ಎಂಬುದರ ಅರಿವಾಗಿತ್ತು. ಆದರೂ ‘ತಾನೆ ಸರಿ’ ಎಂಬ ಅಹಂ ಇಬ್ಬರಲ್ಲೂ ಇತ್ತು. ಆದರೆ ನಾಲ್ಕನೇ ಸಿಟ್ಟಿಂಗ್ಗೆ ಬರುವ ಹೊತ್ತಿಗೆ ಆಕೆ ಅಡುಗೆ ಮಾಡಿಲ್ಲ ಎಂದು ರೇಗುವುದು ಮತ್ತು ಆತ ಆಫೀಸ್ನಿಂದ ಬರುವಾಗ ಊಟದ ಪಾರ್ಸಲ್ ತಂದಿಲ್ಲ ಎಂದು ಮಾತು ಬಿಡುವುದು ಎಷ್ಟು ಸಿಲ್ಲಿ ಅನ್ನಿಸಿಬಿಟ್ಟಿತ್ತು. ಈಗವರು ಈ ಸೂರ್ಯನ ಕೆಳಗಿರುವ ಜಗತ್ತಿನಲ್ಲಿ ಅತ್ಯುತ್ತಮ ಜೋಡಿಗಳಲ್ಲೊಬ್ಬರು.
ಆಕೆ ವಿಪರೀತ ಹಟಮಾರಿ. ಒಂದೊಂದು ಮಾತಿಗೂ ರೇಗುತ್ತಿದ್ದಳು. ಪ್ರತಿ ಮಾತಿಗೂ ಎದುರುತ್ತರ. ಅಸಡ್ಡೆ. ಏಳನೇ ವಯಸ್ಸಿಗೇ ಆಕೆಯ ಈ ವರ್ತನೆ ತಂದೆ ತಾಯಿಗಳ ಪಾಲಿಗೆ ನುಮಗಲಾರದ ತುತ್ತಾಗಿತ್ತು. ಮೊದಲು ಪ್ರೀತಿಯಿಂದ ಹೇಳಿ ನೋಡಿದರು. ಮನಸ್ಸಿಗೆ ಅರ್ಥವಾಗುವಂತೆ ಬುದ್ಧಿ ಹೇಳಿದರು. ಹೇಳಿದಷ್ಟು ಹೊತ್ತು ಜಾಣೆಯಾಗಿ ಕೇಳುತ್ತಾದ್ದಾಕೆ ಮತ್ತೆ ಸ್ವಲ್ಪ ಹೊತ್ತಿನಲ್ಲಿಯೇ ತನ್ನದೇ ವರಸೆ ಪ್ರಾರಂಭಿಸುತ್ತಿದ್ದಳು. ಕೆಲವು ದಿನ ನೋಡಿದ ಪಾಲಕರು ಬೈಗುಳ ಪ್ರಾರಂಭಿಸಿದರು. ಕೊನೆಕೊನೆಗೆ ಏಟು ಹಾಕುವುದು, ಬರೆ ಹಾಕುವ ತನಕವೂ ಶಿಕ್ಷೆ ನೀಡಿಯಾಯಿತು. ಆದರೂ ಬದಲಾಗಲಿಲ್ಲ. ದೈಹಿಕ ಶಿಕ್ಷೆ ನೀಡಿದಷ್ಟೂ ಆಕೆ ಮತ್ತೂ ಹಿಂಸಾತ್ಮಕವಾಗಿ, ನೇತ್ಯತ್ಮಕವಾಗಿ ನಡೆದು ಕೊಳ್ಳತೊಡಗಿದಳು. ಕೊನೆಯಲ್ಲಿ ವೈದ್ಯರ ಬಳಿ ಕೊಂಡೊಯ್ಯಲಾಯಿತು. ಕೆಲವು ದಿನ ಔಷಧಿ ನೀಡಿದ ವೈದ್ಯರೂ ಕೈಚೆಲ್ಲಿ ಮನೋವೈದ್ಯರ ಬಳಿ ಕೊಂಡೊಯ್ಯಲು ತಿಳಿಸಿದರು. ಆಕೆಯನ್ನು ಪರೀಕ್ಷಿಸಿದ ಮನೋವೈದ್ಯರು ವರ್ತನೆಯಲ್ಲಿನ ಲೋಪ ಎಂದು ಹೇಳಿ ಕೌನ್ಸಿಲಿಂಗ್ಗೆ ಸಲಹೆ ನೀಡಿದರು. ಮೂರನೆ ಸಿಟ್ಟಿಂಗ್ ಆದರೂ ಏನೇನೂ ಬದಲಾವಣೆ ಕಾಣದಿದ್ದಾಗ ತಂದೆ ತಾಯಿ ತಲ್ಲಣಕ್ಕೊಳಗಾದರು. ಆದರೆ ನಾಲ್ಕನೇ ಸಿಟ್ಟಿಂಗ್ನಿಂದ ಆಕೆಯ ವರ್ತನೆಯಲ್ಲಿ ಬದಲಾವಣೆ ಕಾಣತೊಡಗಿತು. ಆರನೇ ಸಿಟ್ಟಿಂಗ್ ಹೊತ್ತಿಗೆ ಆಕೆಯಲ್ಲಿ ಪೂರ್ತಿಯಾದ ಬದಲಾವಣೆಯಾಯಿತು. ಈಗ ಆಕೆ ಶಾಲೆಯಲ್ಲಿರಲಿ, ಮನೆಯಲ್ಲಿ ಕೂಡ ತುಂಬಾ ವಿಧೇಯ ಹುಡುಗಿ. ತುಂಬಾ ಪ್ರೀತಿಯ ಮಗಳಾಗಿ ಬೆಳೆಯುತ್ತಿದ್ದಾಳೆ. ಒಂದು ಕಾಲದಲ್ಲಿ ಒಂದು ಅಕ್ಷರ ಬರೆಯಲೂ ಹಿಂದೇಟು ಹಾಕುತ್ತಿದ್ದ ಆಕೆ ಈಗ ಶಾಲೆಯ ಅತ್ಯುತ್ತಮ ವಿದ್ಯಾರ್ಥಿನಿ. ಮೊದಲನೇ ಸ್ಥಾನವನ್ನೂ ಯಾರಿಗೂ ಬಿಟ್ಟು ಕೊಡುತ್ತಿಲ್ಲ.
ಆತ ಒಂದು ಕಾಲದಲ್ಲಿ ಅತಿ ಬುದ್ಧಿವಂತ. ಯಾವುದೋ ವಿಷಗಳಿಗೆಯಲ್ಲಿ ಕುಡಿತದ ದಾಸನಾಗಿ ಬಿಟ್ಟಿದ್ದ. ಕುಡಿತ ಕೆಟ್ಟದ್ದು, ಅದನ್ನು ಬಿಡಬೇಕು ಎಂಬುದು ಆತನ ಒಳತುಡಿತ. ಆದರೆ ಅದು ಸಾಧ್ಯವಾಗುತ್ತಿರಲಿಲ್ಲ. ಪ್ರತಿದಿನ ಬೆಳಿಗ್ಗೆ ಏಳುವಾಗ ಇವತ್ತು ಕುಡಿಯಬಾರದು ಎಂಬ ನಿಶ್ಚಯದಲ್ಲೆ ಏಳುತ್ತಿದ್ದ. ಆದರೆ ಸಮಯ ಸರಿದಂತೆ ಕುಡಿಯಲೇ ಬೇಕೆಂದು ಉಂಟಾಗುವ ತುಡಿತವನ್ನು ತಡೆದುಕೊಳ್ಳಲಾಗುತ್ತಿರಲಿಲ್ಲ. ಮತ್ತೆ ಯಥಾ ಪ್ರಕಾರ ಆತ ಕುಡಿತಕ್ಕೆ ಶರಣಾಗುತ್ತಿದ್ದ. ಕೊನೆಗೂ ಆತನ ಹೆಂಡತಿ ಆತನನ್ನು ಕೌನ್ಸಿಲಿಂಗ್ಗೆ ಕರೆದೊಯ್ದಳು. ಈಗ ಆತ ಕುಡಿತ ಬಿಟ್ಟ ಅತ್ಯಂತ ಸಂಭಾವಿತ ವ್ಯಕ್ತಿ.
ಹೌದು, ಕೌನ್ಸಿಲಿಂಗ್ ಕೆಲವೊಮ್ಮೆ ಬದುಕನ್ನು ಹೊರಳಿಸುತ್ತದೆ. ತುಂಬಾ ಸಹಾಯದ ಅಗತ್ಯವಿರುವ ವ್ಯಕ್ತಿಗೆ ಮನಸ್ಥೈರ್ಯ ನೀಡುತ್ತದೆ. ಅವರ ಆಲೋಚನಾ ಕ್ರಮವನ್ನು ಬದಲಿಸುತ್ತದೆ. ಮತ್ತೆ ಬದುಕಿನತ್ತ ಒಂದು ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ. ಆದರೆ ಒಂದು ವಿಷಯದತ್ತ ಹೆಚ್ಚಿನ ಗಮನ ಕೊಡಲೇ ಬೇಕು. ಕೌನ್ಸಿಲಿಂಗ್ ಮಾಡುವಾತ ಒಂದು ಅತ್ಯುತ್ತಮ ಸಂವೇದನಾಕಾರನಾಗಿರ ಬೇಕು, ಸಮಸ್ಯೆಯ ಮೂಲವನ್ನು ಅರ್ಥ ಮಾಡಿಕೊಳ್ಳುವವನಾಗಿರಬೇಕು, ಸಮಸ್ಯೆಗೆ ಪರಿಹಾರ ನೀಡದಿದ್ದರೂ ಸಮಸ್ಯೆಯನ್ನು ಎದುರಿಸಲು ತನ್ನ ಕ್ಲಯಂಟ್ಗೆ ಉತ್ತಮ ನೆರವು ನೀಡುವವನಾಗಿರಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಗುಣಗಳನ್ನು ಹೊಂದಿರಬೇಕು.
ಹಾಗೆಂದು ಕೌನ್ಸಿಲಿಂಗ ಎಲ್ಲವನ್ನೂ ಬದಲಾಯಿಸಿ ಬಿಡುತ್ತದೆ, ಬದುಕನ್ನು ಬಂಗಾರವಾಗಿಸುತ್ತದೆ ಎಂಬಂತಹ ವಿಪಿರೀತಾರ್ಥದ ನಂಬಿಕೆ ಬೇಡ. ಕೌನ್ಸಿಲಿಂಗ್ ಎಂದರೆ ಎಲ್ಲವನ್ನೂ ಮಾಡಬಲ್ಲ ಮಾಯಾದಂಡ ಎಂಬ ಕಲ್ಪನೆ ಬೇಡ. ಯಾಕೆಂದರೆ ಇಷ್ಟೆಲ್ಲ ಆದ ಮೇಲೂ ಕೌನ್ಸಿಲಿಂಗ್ ಆಗಿ ಕುಡಿತ ಬಿಟ್ಟು ಒಳ್ಳೆಯವನಾದ ಎಂದು ಕಂಡ ಕಂಡ ದೇವರಿಗೆ ಹೊತ್ತ ಹರಕೆ ತೀರಿಸಿ ಮುಗಿಸುವಷ್ಟರಲ್ಲಿ ಮತ್ತೆ ಕುಡಿತಕ್ಕೆ ಹಿಂದಿರುಗಿದವರಿದ್ದಾರೆ, ಸಿಟ್ಟಿಂಗ್ ನಡೆಯುತ್ತಿರುವಾಗಲೇ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಮಕ್ಕಳನ್ನು ಕೌನ್ಸಿಲಿಂಗ್ಗೆಂದು ಕರೆದೊಯ್ದು ಕೊನೆಗೆ ಕೌನ್ಸಿಲಿಂಗ ಅಗತ್ಯ ಇರುವುದು ಮಕ್ದಳಿಗಲ್ಲ ಬದಲಾಗಿ ತಂದೆ-ತಾಯಿಗೆ ಎಂದು ಅರಿವಾಗಿ ತಾವೇ ಕೌನ್ಸಿಲಿಂಗ್ಗೆ ಹಾಜರಾದವರಿದ್ದಾರೆ. ಇಷ್ಟಾಗಿ ಕೂಡ ಕೌನ್ಸಲಿಂಗ್ ಒಂದು ಹಂತದಲ್ಲಿ ಬದುಕು ಬದಲಾಯಿಸುತ್ತದೆ ಎಂಬುದು ಸುಳ್ಳಲ್ಲ.






0 Comments