ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೋ ಚೆನ್ನಬಸಪ್ಪ ಹೀಗಂತಾರೆ..

– ಮಹಿಪಾಲ ರೆಡ್ಡಿ ಮುನ್ನೂರ್

ಬಿಜಾಪುರದಲ್ಲಿ ಜರುಗುವ ೭೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೋ ಚನ್ನಬಸಪ್ಪ ಅವರನ್ನು

ಅವಧಿಯ ಪರವಾಗಿ ಅಭಿನಂದಿಸಿ ಮಾತನಾಡಿಸಿದವರು ಮಹಿಪಾಲ ರೆಡ್ಡಿ ಮುನ್ನೂರು.

ರಾಜಾಜಿನಗರವನ್ನು ಹಿಂದೆ ಇಕ್ಕಿ, ವೆಸ್ಟ್ ಆಫ್ ಕಾರ್ಡ ರೋಡಿನಿಂದ ಆಚೆಗೆ ಸ್ವಲ್ಪ ಮುಂದೆ ಒಂದು ಸಣ್ಣ ಮನೆಯಲ್ಲಿ , ಅತ್ಯಂತ ಪ್ರಫುಲ್ಲವಾಗಿ ಕುಳಿತಿದ್ದ ಕೋ.ಚೆ., ತಮ್ಮ ಮನೆ ಮುಂದೆ ಏಳೆಂಟು ಕಾರುಗಳು ಬಂದ ಶಬ್ದ ಕೇಳಿ ಹೊರಗಡೆಯೇ ಬಂದರು. ನಸು ನಗುತ್ತ ಎರಡು ಕೈಮುಗಿಯುತ್ತ ಎಲ್ಲರನ್ನೂ ಪ್ರೀತಿಯಿಂದ ಕರೆದರು. ಅಕ್ಷರಶಃ ಬಂದಿರುವ ಎಲ್ಲರಿಗೂ ಕೈಕುಲುಕಿ ಪರಿಚಯ ಮಾಡಿಕೊಂಡ ಕೋ.ಚೆ ಅವರ ಪ್ರೀತಿಗೆ ಅಭಿಮಾನ ಉಕ್ಕಿತು.
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸ್ವಾಗತ ಸಮಿತಿ ಅಧ್ಯಕ್ಷ, ಸಚಿವ ಎಸ್.ಕೆ.ಬೆಳ್ಳುಬ್ಬಿ, ವಿಜಾಪುರದ ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ನಿಕಟಪೂರ್ವ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ, 78ನೇ ಸಮ್ಮೇಳನಾಧ್ಯಕ್ಷ ಸಿಪಿಕೆ, ಗೌರವ ಕಾರ್ಯದಶರ್ಿ ಸಂಗಮೇಶ ಬಾದವಾಡಗಿ, ವಿವಿಧ ಜಿಲ್ಲಾಧ್ಯಕ್ಷರುಗಳು ಸೇರಿದಂತೆ ಅನೇಕರು ಕೋ. ಚೆ ಅವರ ಮನೆಗೆ ಹೋಗಿ ಸನ್ಮಾನಿಸಿ, ಅಧಿಕೃತ ಆಹ್ವಾನ ನೀಡಲಾಯಿತು.
ಆಮಂತ್ರಣ ಸ್ವೀಕರಿಸಿದ ಮರುಕ್ಷಣವೇ ಹಸನ್ಮುಖಿಯಾಗಿ ಮಾತನಾಡಿದ ಕೋ.ಚೆ. `ನನ್ನ ಮೊಟ್ಟ ಮೊದಲ ಕವನ ಪ್ರಕಟವಾಗಿದ್ದು ವಿಜಾಪುರದಲ್ಲೇ’ ಎಂದು ಹೇಳುವಾಗ ಅವರಲ್ಲಿನ ದೃಢತೆ ಸ್ಪಷ್ಟವಾಗಿತ್ತು. ಅದನ್ನು ಕೇಳಿಸಿಕೊಂಡ ಅನೇಕರ ಮೊಗದಲ್ಲಿ ಮಂದಹಾಸ. `ನನ್ನ ಸಾಹಿತ್ಯ ಆರಂಭವಾಗಿದ್ದು ವಿಜಾಪುರದಿಂದಲೇ, ಅಂತಹ ಐತಿಹಾಸಿಕ ನಗರದಲ್ಲಿ ನಡೆಯುತ್ತಿರುವ ಕನ್ನಡದ ನುಡಿ ತೇರನ್ನು ಎಳೆಯಲು ನನ್ನನ್ನು ಆಯ್ಕೆ ಮಾಡಿದ್ದು ತುಂಬಾ ಖುಷಿ ತಂದಿದೆ. ಅದು ಬಸವಣ್ಣನವರ ಜನ್ಮಭೂಮಿ. ಅಲ್ಲಿನ ಸಮ್ಮೇಳನಕ್ಕೆ ಅಧ್ಯಕ್ಷನಾಗೋದು ನನ್ನ ಸೌಭಾಗ್ಯ.’
ನಾವೆಲ್ಲ ಉದರ್ು ಮತ್ತು ತೆಲುಗು ಕಲಿಯಬೇಕಾದ ಅನಿವಾರ್ಯ ಸಂದರ್ಭದಲ್ಲೂ ಕನ್ನಡದ ಬಗ್ಗೆ ಹೋರಾಟ ಮಾಡಿದ್ದೇವು.ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿ ಮುಖಂಡನಾಗಿ ಭಾಗವಹಿಸಿದ್ದಕ್ಕಾಗಿ ಜೈಲು ಸೇರಬೇಕಾಯಿತು. ನನ್ನ ಕನ್ನಡ, ನನ್ನ ಭಾಷೆ ಎಂಬ ಭಾಷೆಯ ಬಗ್ಗೆ ಅಭಿಮಾನ ಮೂಡಿದ್ದೇ ಆಗ. ಕನ್ನಡದ ಬಗ್ಗೆ ನಿಜವಾದ ಕಾಳಜಿ ಇರುವ ಅನೇಕರು ಒಂದುಗೂಡಿದೆವು. ಹೈದ್ರಾಬಾದ್ ಕರ್ನಾಟಕದ ಕೆಲ ಜಿಲ್ಲೆಗಳು ಆಗ ನಿಜಾಮನ ಒಡೆತನದಲ್ಲಿತ್ತು .. ಹಾಗಂತ ನೆನಪು ಮಾಡಿಕೊಳ್ಳುತ್ತಿದ್ದರು ಕೋ.ಚೆ.
ಆವತ್ತಿನ ಕನ್ನಡ .. ಇವತ್ತಿನ ಕನ್ನಡ ತುಂಬಾ ಬದಲಾಗಿದೆ. ಪರ ರಾಜ್ಯದವರಿಂದಾಗಿ ಕನ್ನಡ ನಲುಗಿ ಹೋಗಿದೆ. ಇವತ್ತಿನ ಸ್ಥಿತಿಯಂತೂ ಬೇರೆಯವರಲ್ಲ.. ನಮ್ಮವರೇ ಕನ್ನಡದ ನೆಲೆಯನ್ನು ಪ್ರಶ್ನಿಸುತ್ತಿದ್ದಾರೆ. ಇದು ಸರಿಯಾದುದಲ್ಲ. ಗಡಿಭಾಗದ ಹಳ್ಳಿಗಳಲಿ ಅಂದು ಹೊರಗೆ ಬೇರೆ ಭಾಷೆಯ ಫಲಕ ಹಾಕಿ ಒಳಗಡೆ ಕನ್ನಡದ ಪಾಠ ಮಾಡಲಾಗುತ್ತಿತ್ತು. ಉದಾಹರಣೆಗೆ, ಬೀದರ್ ಜಿಲ್ಲೆಯ ಭಾಲ್ಕಿ ಚೆನ್ನಬಸವ ಪಟ್ಟದ್ದೇವರು. ಇಂತಹ ಅನೇಕರು ಹೊರಗೆ ಉರ್ದು ಬೋರ್ಡು ಹಾಕಿ ಒಳಗಡೆ ಕನ್ನಡ ಕಲಿಸಿದಂತ ಪುಣ್ಯಾತ್ಮರಿದ್ದರು. ಆದರೆ ಈಗ.. ? ಅಂತ ನಿಟ್ಟುಸಿರು ಬಿಟ್ಟರು.
ಮತ್ತೆ ಮುಂದುವರಿದು, ಈಗ ಪರಿಸ್ಥಿತಿ ಬದಲಾಗಿದೆ. ಹೊರಗೆ ಕನ್ನಡದ ಬೋರ್ಡು, ಒಳಗಡೆ ಇಂಗ್ಲೀಷ ಕಲಿಕೆ. ಎಲ್ಲಿಗೆ ಬಂತು ಕನ್ನಡದ ಸ್ಥಿತಿ ಎಂದು ನೋವು ತೋಡಿಕೊಂಡರು.
ಇದೇ ರೀತಿ ಮುಂದುವರಿದರೆ ಕನ್ನಡಕ್ಕೆ ಅಧೋಗತಿ ಬರುತ್ತದೆ. ಹಾಗಾಗಬಾರದು. ಪ್ರತಿಯೊಬ್ಬ ಕನ್ನಡಿಗನಿಂದ ಕನ್ನಡವನ್ನು ಉಳಿಸುವ, ಬೆಳೆಸುವ ಕೆಲಸ ಆಗಬೇಕಿದೆ. ಕನ್ನಡ ಉಳಿದರೆ ಮಾತ್ರ ಸಾಹಿತ್ಯ ಇನ್ನಷ್ಟು ವಿಸ್ತರಿಸಿಕೊಳ್ಳುತ್ತದೆ. ಕೇವಲ ಸರಕಾರವೇ ಮಾಡಲಿ, ನಾವ್ಯಾಕೆ ಎನ್ನುವ ಧೋರಣೆಯನ್ನು ತೆಗೆದುಹಾಕಿ, ಪ್ರತಿಯೊಬ್ಬರೂ ಕನ್ನಡ ಉಳಿಸಲು ಬದ್ಧರಾಗಬೇಕು. ಆನರ ನಾಲಗೆಯ ಮೇಲೆ ಕನ್ನಡ ಕುಣಿದಾಡಬೇಕು. ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕು. ಆ ಮೂಲಕ ಕನ್ನಡದ ಏಳಿಗೆಗೆ ಕಾರಣರಾಗಬೇಕು ಎಂದು ದಿಟ್ಟವಾಗಿ ನುಡಿದರು.
 
 
 

‍ಲೇಖಕರು G

6 January, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading