ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕೋಮು ಗಲಭೆಗಳನ್ನು ಹೀಗೂ ತಡೆಗಟ್ಟಬಹುದು' ನಾ ದಿವಾಕರ್

ನಾ ದಿವಾಕರ

ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಮುಸ್ಲಿಂ ಸಮುದಾಯದ ದುಡಿಯುವ ವರ್ಗದ ಪುರುಷರು ಮತ್ತು ಮಹಿಳೆಯರ ಕೌಟುಂಬಿಕ ಇತಿಹಾಸವನ್ನು ಕೆದಕುತ್ತಾ ಹೋದರೆ ವಿವಿಧ ಕಾಲಘಟ್ಟಗಳಲ್ಲಿ ಕೋಮು ಗಲಭೆಗಳಿಂದ ಅವರು ಅನುಭವಿಸಿದ ಚಿತ್ರಹಿಂಸೆಯ ಕಥಾನಕಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ನೆರೆಯವರೇ ಹಂತಕರಾಗುವುದು, ನಿಕಟವರ್ತಿಗಳನ್ನು ಕಳೆದುಕೊಳ್ಳುವುದು, ಬಾಲಕಿಯರ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ, ಜೀವಮಾನದ ಆದಾಯದಿಂದ ಕಟ್ಟಿದ ಮನೆಗಳ ಲೂಟಿ, ಧ್ವಂಸ ಈ ಎಲ್ಲ ಘಟನೆಗಳಿಂದ ಉಂಟಾಗುವ ಸಂಕಷ್ಟಗಳು, ಕಷ್ಟ ನಿವಾರಣೆ, ಸಂಘರ್ಷ ಮತ್ತು ಭಗ್ನ ಬದುಕಿನ ಪುನರ್ನಿರ್ಮಾಣ ಇವೆಲ್ಲವೂ ಸಾಮಾನ್ಯವಾಗಿ ಕೇಳಿಬರುತ್ತವೆ. ಈ ಚಂಡಮಾರುತದ ನಡುವೆಯೇ ಅವರ ಜೀವನ ಸಾಗಿರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಮುಂದೆ ಸಂಭವಿಸಬಹುದಾದ ಗಲಭೆಗಳ ನಿರೀಕ್ಷೆಯಲ್ಲಿ ಬದುಕುವುದೂ ಉಂಟು. ಮತ್ತೊಂದು ಕೋಮುಗಲಭೆ ಉಂಟಾದರೆ ಏನಾಗಬಹುದು ಎಂಬ ಪ್ರಶ್ನೆಗೆ ಇವರ ಉತ್ತರ ಮೌನ ಮಾತ್ರ.  ಆದರೆ ಒಂದು ವೇಳೆ ಗಲಭೆ ಸಂಭವಿಸಿದಲ್ಲಿ ತಮ್ಮ ಬದುಕು ಇನ್ನೆಷ್ಟು ಮೂರಾಬಟ್ಟೆಯಾಗುತ್ತದೆ ಎಂಬ ಚಿಂತೆ ಆವರಿಸಿರುತ್ತದೆ .

ಕೋಮು ಗಲಭೆಗಳು ಪ್ರವಾಹ, ಕ್ಷಾಮ, ಭೂಕಂಪನಗಳಂತೆ ಸ್ವಾಭಾವಿಕವೇನೋ ಎನ್ನುವಂತೆ ಸಂಭವಿಸುತ್ತವೆ ಎನ್ನುವ ದೃಢ ನಂಬಿಕೆಯಿಂದ ಬಾಳುತ್ತಾರೆ . ಇದು ಹೃದಯವಿದ್ರಾವಕ ಎನ್ನಲಡ್ಡಿಯಿಲ್ಲ. ಕೆಲವೊಮ್ಮೆ ಕಾನೂನುಗಳನ್ನು ದಿಟ್ಟತನದಿಂದ, ಬುದ್ಧಿವಂತಿಕೆಯಿಂದ ಮತ್ತು ಅನುಕಂಪದಿಂದ ರೂಪಿಸಿದ್ದಲ್ಲಿ ಅದು ಜನಸಾಮಾನ್ಯರ ಭವಿಷ್ಯದ ಬದಲಾವಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇಂತಹ ಒಂದು ಅತ್ಯುತ್ತಮ ಕಾನೂನು ಕೋಮು ಗಲಭೆ ಮಸೂದೆ. ಕೆಲವು ನಿರ್ದಿಷ್ಟ ಕೋಮಿನ ಜನತೆ ಒಂದು ಧರ್ಮಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕೆ ಹಿಂಸೆಗೆ ಗುರಿಯಾಗಿಸುವ ಗಲಭೆಗಲನ್ನು ನಿಯಂತ್ರಿಸುವಲ್ಲಿ ಈ ಮಸೂದೆ ಯಶಸ್ವಿಯಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಕೇಂದ್ರ ಯುಪಿಎ ಸರ್ಕಾರ ಸಾಕಷ್ಟು ತಯಾರಿ ಇಲ್ಲದೆ ಮತ್ತು ಕಿಂಚಿತ್ತೂ ಬದ್ಧತೆ ಇಲ್ಲದೆ ಈ ಮಸೂದೆಯ ಕರಡನ್ನು ತಯಾರಿಸಿ ಲೋಕಸಭೆಯಲ್ಲಿ ಮಂಡಿಸಿರುವುದು ದುರಂತ. ಇನ್ನು ಎಡ ಪಕ್ಷಗಳಿಂದ ಹಿಡಿದು ಬಿಜೆಪಿವರೆಗೆ ಎಲ್ಲ ಪಕ್ಷಗಳೂ ರಾಜ್ಯಸಭೆಯಲ್ಲಿ ಈ ಮಸೂದೆಯ ಬಗ್ಗೆ ಚರ್ಚೆಗೂ ಆಸ್ಪದ ನೀಡದೆ ಮಂಡನೆಯನ್ನು ತಡೆಗಟ್ಟಿರುವುದು ಇನ್ನೂ ದುರಾದೃಷ್ಟಕರ. ಈ ಪ್ರಮಾದವನ್ನು ಸರಿಪಡಿಸದಿದ್ದಲ್ಲಿ ಭಾರತದ ಸೆಕ್ಯುಲರ್ ತತ್ವಗಳಿಗೆ ಮತ್ತು ಅಮಾಯಕ ಜನತೆಗೆ ದ್ರೋಹ ಬಗೆದಂತಾಗುತ್ತದೆ.

ಈ ಸಂಕೀರ್ಣ ಮತ್ತು ಸೂಕ್ಷ್ಮ ಶಾಸನವನ್ನು ಕುರಿತಂತೆ ಮತ್ತು ಶಾಸನದ ಕೆಲವು ನಿರ್ದಿಷ್ಟ ಅಂಶಗಳನ್ನು ಕುರಿತು ನ್ಯಾಯಯುತವಾದ ಚರ್ಚೆ ಅಗತ್ಯ ಎನಿಸಬಹುದು. ಆದರೆ ಕೋಮುಗಲಭೆಗಳನ್ನು ನಿಯಂತ್ರಿಸುವ ಹಾಗೂ ನೊಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವ ಶಾಸನದ ಉದ್ದೇಶಗಳ ಬಗ್ಗೆ ಯಾವುದೇ ಚರ್ಚೆ ಅಗತ್ಯವಿಲ್ಲ. ಮೊದಲ ಬಾರಿಗೆ ಈ ಶಾಸನವನ್ನು 2005ರಲ್ಲಿ ಮಂಡಿಸಲಾಗಿತ್ತು. ಆದರೆ ಸಾರ್ವಜನಿಕ ಸೆಕ್ಯುಲರ್ ಅಭಿಪ್ರಾಯವೂ ಮಸೂದೆಗೆ  ವಿರುದ್ಧವಾಗಿತ್ತು . ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಒಂದು ನೂತನ ಕರಡು ಪ್ರತಿಯನ್ನು ಸಿದ್ಧಪಡಿಸಲಾಯಿತು. ಇದನ್ನೂ ಕೆಲವು ವರ್ಗಗಳು ವಿರೋಧಿಸಿದವು. ಸಂಯುಕ್ತ ರಾಜ್ಯ ವ್ಯವಸ್ಥೆಗೆ ಧಕ್ಕೆ ಉಂಟಾಗುವುದು ಮತ್ತು ಅಲ್ಪಸಂಖ್ಯಾತರಿಗೆ ಮಾತ್ರ ರಕ್ಷಣೆ ನೀಡುವ ಅಂಶಗಳು ವಿರೋಧಕ್ಕೆ ಕಾರಣವಾಗಿದ್ದವು. ಆದರೆ ಈ ಟೀಕೆಗಳಿಗೆ ಪ್ರತಿಯಾಗಿ ಇಷ್ಟು ಮಹತ್ತರವಾದ ಶಾಸನವನ್ನು ತಿದ್ದುಪಡಿ ಮಾಡುವಲ್ಲಿ ಕೇಂದ್ರ ಸರ್ಕಾರ ಬಹಳಷ್ಟು ಸಮಯ ವ್ಯರ್ಥಮಾಡಿತ್ತು. ಬದಲಾಗಿ ಕೇಂದ್ರ ಸರ್ಕಾರ ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿ ವಿವಿಧ ರಾಜಕೀಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ತಿದ್ದುಪಡಿ ಮಾಡಬಹುದಿತ್ತು.  ಆದಾಗ್ಯೂ ತಿದ್ದುಪಡಿ ಮಾಡಲಾಗಿರುವ ಮಸೂದೆಯಲ್ಲಿ ಸಾರ್ವಜನಿಕರ ಆಕ್ಷೇಪಗಳನ್ನು ಗಮನಿಸಿ ಸರಿಪಡಿಸಲಾಗಿದೆ.

ನೂತನ ಕರಡು ಮಸೂದೆಯಲ್ಲಿ ಎಲ್ಲ ಸಮುದಾಯಗಳ ಜನರಿಗೂ ಸಮಾನ ರಕ್ಷಣೆ ಒದಗಿಸಲಾಗಿದ್ದು ರಾಜ್ಯಗಳ ಅಧಿಕಾರಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಲಾಗಿದೆ. ಆದರೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವ ಮುನ್ನ ಸರ್ಕಾರ ಕರಡು ಪ್ರತಿಯನ್ನು ಇತರ ರಾಜಕೀಯ ಪಕ್ಷಗಳೊಡನೆ ಚರ್ಚಿಸಲೂ ಇಲ್ಲ . ವಿವಿಧ ರಾಜಕೀಯ ಪಕ್ಷಗಳ ಸಲಹೆ, ಸಂವೇದನೆ ಮತ್ತು ಕಾಳಜಿಗಳನ್ನು ಕುರಿತು ಗೃಹ ಸಚಿವ ಸುಶಿಲ್ ಕುಮಾರ್ ಶಿಂಧೆಯಾಗಲೀ, ಕಾನೂನು ಸಚಿವ ಕಪಿಲ್ ಸಿಬ್ಬಲ್ ಆಗಲಿ ವಿವರಣೆ ನೀಡುವ ಗೋಜಿಗೆ ಹೋಗಲಿಲ್ಲ. ತಿದ್ದುಪಡಿ ಮಾಡಿದ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವುದರಲ್ಲೂ ವಿಫಲವಾದ ಸರ್ಕಾರದ ಕ್ರಮ ಉದ್ದೇಶಪೂರಿತ ಮತ್ತು ಸಿನಿಕ ಸ್ವಹಿತಾಸಕ್ತಿಯ ಪ್ರತೀಕ ಎನಿಸುತ್ತದೆ. ಮಸೂದೆಯನ್ನು ಮಂಡಿಸುವ ಪ್ರಯತ್ನಗಳ ಮೂಲಕ ಅಲ್ಪಸಂಖ್ಯಾತರನ್ನು ಓಲೈಸುವ ಮತ್ತು ಅವರ ಒಲವು ಗಳಿಸುವ ಏಕೈಕ ಉದ್ದೇಶ ಸರ್ಕಾರಕ್ಕಿತ್ತು ಎನಿಸುತ್ತದೆ. ಮಸೂದೆಯನ್ನು ಜಾರಿಗೊಳಿಸುವ ಮೂಲಕ ಬಹುಸಂಖ್ಯಾತರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಉದ್ದೇಶವಿರಲಿಲ್ಲ.ಈ ಶಾಸನ ರಾಜ್ಯ ಸರ್ಕಾರಗಳ ಕಾನೂನು ಸುವ್ಯವಸ್ಥೆಯ ವ್ಯಾಪ್ತಿಗೆ ಒಳಪಡುತ್ತದೆ ಹಾಗಾಗಿ ಇದು ಸಂಸತ್ತಿನ ವ್ಯಾಪ್ತಿಯಿಂದ ಹೊರತಾದದ್ದು ಎಂದು ವಿರೋಧಪಕ್ಷಗಳು ಪ್ರತಿಪಾದಿಸುತ್ತವೆ. ಆದರೆ ಇದು ಒಪ್ಪುವಂತಹುದಲ್ಲ. ಕೋಮು ಗಲಭೆಗಳು ಕೇವಲ ಕಾನೂನು ಸುವ್ಯವಸ್ಥೆಗೆ ಸೀಮಿತವಾದ ಘಟನೆಗಳಲ್ಲ.

ಕೋಮು ಗಲಭೆಗಳು ಪ್ರಜೆಗಳ ಸಮಾನ ರಕ್ಷಣೆ ಮತ್ತು ನ್ಯಾಯದ ಹಕ್ಕುಗಳಿಗೆ ಭಂಗ ತರುತ್ತವೆ. ದೇಶದ ಏಕತೆ ಮತ್ತು ಭ್ರಾತೃತ್ವಕ್ಕೆ ಧಕ್ಕೆ ಉಂಟುಮಾಡುತ್ತದೆ. ಹಾಗಾಗಿ ಧರ್ಮದ ಆಧಾರದ ಮೇಲೆ ಕೆಲವು ಜನಸಮುದಾಯಗಳು ಹಿಂಸೆಗೆ ಗುರಿಯಾಗದಂತೆ ಎಚ್ಚರ ವಹಿಸುವುದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ . ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಮಹಿಳೆಯರ ವಿರುದ್ಧ ದೌರ್ಜನ್ಯ ತಡೆಗಟ್ಟಲು ಕೇಂದ್ರ ಸರ್ಕಾರ ಹಲವು ಶಾಸನಗಳನ್ನು ಜಾರಿಗೊಳಿಸಿದೆ.  ಹಾಗಾಗಿ ಈ ಆಕ್ಷೇಪಣೆ ಮತ್ತು ಟೀಕೆಗಳು ಶಾಸನವನ್ನು ತಡೆಗಟ್ಟಲೆಂದೇ ಸೃಷ್ಟಿಸಲ್ಪಟ್ಟಿವೆ.  ಏಕೆಂದರೆ ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿಯ ಸುಷ್ಮ ಸ್ವರಾಜ್ ಅಧ್ಯಕ್ಷತೆಯ ಸ್ಥಾಯಿ ಸಮಿತಿಯನ್ನೂ ಸೇರಿದಂತೆ ಯಾವುದೇ ಮೂಲದಿಂದಲೂ ಈ ಆಕ್ಷೆಪಗಳು ಕೇಳಿಬಂದಿಲ್ಲ.ತಿದ್ದುಪಡಿ ಮಾಡಲಾಗಿರುವ ಮಸೂದೆಯನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕೆಲವು ನೂತನ ಅಧಿಕಾರಗಳನ್ನು ನೀಡುವ ಪ್ರಯತ್ನ ಕಂಡುಬರುತ್ತದೆ.  ಕೋಮುಗಲಭೆಗಳು ಸಂಭವಿಸಿದಲ್ಲಿ ರಾಜ್ಯ ಸರ್ಕಾರಗಳೇ ಕ್ರಮ ಜರುಗಿಸಬೇಕಾಗಿದ್ದು ರಾಜ್ಯದ ಆಗ್ರಹದ ಮೇರೆಗೆ ಕೇಂದ್ರ ಸರ್ಕಾರ ಸೇನೆಯನ್ನು ನಿಯೋಜಿಸಬಹುದಾಗಿದೆ.

ರಾಜಕೀಯ ಪಕ್ಷಗಳು ಆಕ್ಷೇಪಿಸಿದ್ದ ರಾಷ್ಟ್ರೀಯ ಪ್ರಾಧಿಕಾರದ ಬದಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಅಧಿಕಾರ ನೀಡಲಾಗಿದೆ. ಆಯೋಗದ ಅಧಿಕಾರ ವ್ಯಾಪ್ತಿಯನ್ನು ಶಾಸನವನ್ನು ಗಮನಿಸುವುದು, ನಿರ್ವಹಿಸುವುದು ಮತ್ತು ಅಗತ್ಯವಾದಲ್ಲಿ ಸಲಹೆ ನೀಡುವುದಕ್ಕೆ ಸೀಮಿತಗೊಳಿಸಲಾಗಿದ್ದು ಆಯೋಗ ಈಗಾಗಲೇ ಈ ಕರ್ತವ್ಯ ನಿಭಾಯಿಸುತ್ತಿದೆ. 2002ರ ಗುಜರಾತ್ ಗಲಭೆಗಳ ನಂತರ ಈ ಅಧಿಕಾರ ವ್ಯಾಪ್ತಿಯ ಮಹತ್ವವನ್ನು ನ್ಯಾ. ವರ್ಮಾ ಆಯೋಗದ ಅಧ್ಯಕ್ಷರಾಗಿ ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಒಂದು ವೇಳೆ ಅಂಗೀಕೃತವಾದಲ್ಲಿ ಈ ಶಾಸನದಡಿ ಅಧಿಕಾರಶಾಹಿಯ ಕರ್ತವ್ಯ ಭ್ರಷ್ಟತೆಯನ್ನು ಅಪರಾಧವನ್ನಾಗಿ ಪರಿಗಣಿಸಲಾಗುತ್ತದೆ.  ಯಾವುದೇ ಕ್ರಮ ಜರುಗಿಸದಿರುವುದು, ಪೂರ್ವಗ್ರಹಪೀಡಿತರಾಗಿ ಕಾನೂನಿಗೆ ವಿರುದ್ಧವಾಗಿ ತಮ್ಮ ಅಧಿಕಾರ ಚಲಾಯಿಸುವುದು ಅಥವಾ ವಿಫಲರಾಗುವುದು, ಕೋಮುಗಲಭೆಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಕರ್ತವ್ಯ ನಿರ್ವಹಣೆಯಲ್ಲಿ ತಿಳಿದೋ ತಿಳಿಯದೆಯೋ ವಿಫಲರಾಗುವುದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಅಷ್ಟೇ ಅಲ್ಲ ರಾಜ್ಯ ಸರ್ಕಾರದ ಮತ್ತು ಸರ್ಕಾರೇತರ ಉನ್ನತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತದೆ.

ಈ ನಿಯಮದ ಪ್ರಭಾವದಿಂದ ಪೊಲೀಸರು ಮತ್ತು ಮ್ಯಾಜಿಸ್ಟ್ರೇಟರು ಗಲಭೆ, ದಂಗೆ ಮತ್ತು ಹತ್ಯೆಗಳನ್ನು ನಿಯಂತ್ರಿಸದೆ ಸುಮ್ಮನಿರುವುದು ಸಾಧ್ಯವಾಗದು. ಏಕೆಂದರೆ ಅವರ ವೈಫಲ್ಯದಿಂದ ಐದು ವರ್ಷ ಜೈಲು ವಾಸ ಅನುಭವಿಸಬೇಕಾಗುತ್ತದೆ. ಗಲಭೆಯಲ್ಲಿ ನೊಂದವರು ತನಿಖೆಯ ವೇಳೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯ ರಕ್ಷಣೆ ಹೊಂದಿರುತ್ತಾರೆ. ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿಗಳಿಗೆ ರಕ್ಷಣೆ ಒದಗಿಸಲಾಗುತ್ತದೆ. ಗಲಭೆಯ ನಂತರ ರಾಜ್ಯ ಅಧಿಕಾರಿಗಳಿಗೆ ಪರಿಹಾರ ಮತ್ತು ಪುನರ್ವಸತಿಯ ವಿಚಾರದಲ್ಲಿ ಕೆಲವು ಕಡ್ಡಾಯವಾದ ಕರ್ತವ್ಯಗಳಿರುತ್ತವೆ. ಒಂದು ವೇಳೆ ಈ ಶಾಸನ ಜಾರಿಯಾಗಿದ್ದಲ್ಲಿ 1984ರ ದೆಹಲಿ ಗಲಭೆಗಳು, 2002ರ ಗುಜರಾತ್ ಗಲಭೆಗಳಲ್ಲಾದಂತೆ ಮತ್ತು ಇತ್ತೀಚಿನ ಮುಝಫರ್ಪುರ ಕೋಮು ಗಲಭೆಗಳಲ್ಲಿ ಆದಂತೆ ರಾಜ್ಯ ಸರ್ಕಾರದ ಕೈವಾಡ ಅಥವಾ ನಿರ್ಲಕ್ಷ್ಯ ಕಂಡುಬರುತ್ತಿರಲಿಲ್ಲ. ಹಾಗಾಗಿ ಹಾಲಿ ಚಳಿಗಾಲದ ಲೋಕಸಭಾ ಅಧಿವೇಶನದಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ರಾಜಕೀಯವನ್ನು ಬದಿಗಿಟ್ಟು ಕೋಮು ಗಲಭೆಗಳನ್ನು ಇತಿಹಾಸದ ಕಸದ ಬುಟ್ಟಿಗೆ ಸೇರಿಸುವಂತಹ ಶಾಸನವನ್ನು ಜಾರಿಗೊಳಿಸಲು ನೆರವಾಗುವುದು ಅತ್ಯಗತ್ಯ. ಇದರಿಂದ ಕೆಲವು ನಿರ್ದಿಷ್ಟ ಜನಸಮುದಾಯಗಳು ಜೀವನ ಪರ್ಯಂತ ಗಲಭೆಗಳ ಛಾಯೆಯಲ್ಲೇ ಬದುಕುವುದನ್ನು ತಪ್ಪಿಸಬಹುದು.

** ಹರ್ಷ ಮಂದರ್ ಅವರ ಲೇಖನದ ಅನುವಾದ

‍ಲೇಖಕರು avadhi

28 February, 2014

3 Comments

  1. Kiran

    The material author chooses to translate reflects his reservations. The article is biased right from sentence 1. As long as we decide to identify people based on religion and caste, the problem persists and keeps growing. When there is communal violence, everyone suffers. People of every caste creed and religion of our country have suffered due to this. Still, our identity has been the same caste creed and religion, because that is what fetches fodder in the game of politics. No single act is spontaneous; there is always pent up frustrations which manifest in the form of extreme violence. The chief cause of pent up frustrations are the cunning plots to divide and rule along with the extremely myopic policies which cater fodder for such problems. Humanity comes much much before law. When our rulers are creating rifts against humanity, who can protect the docile fabric of our country?

  2. M.A.Sriranga

    ಈ ಶಾಸನ ಒಂದು ಕೋಮು ಗಲಭೆಗೆ ಬಹುಸಂಖ್ಯಾತರನ್ನು ಹೊಣೆಮಾಡಿ ಅಲ್ಪ ಸಂಖ್ಯಾತರನ್ನು ಓಲೈಸುವ ತಂತ್ರವಾಗಿತ್ತು. ಜತೆಗೆ ನಮ್ಮ federal ಮಾದರಿಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವ್ಯವಸ್ಥೆಗೆ ವಿರುದ್ಧವಾದುದಲ್ಲವೇ?

  3. Anantharamesh

    ಭಾರತದಲ್ಲಿ ಶೇ.೩೦ ಇರುವ ಜನ ಅಲ್ಪ ಸಂಖ್ಯಾತರೆ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading